ಒಮ್ಮೊಮ್ಮೆ ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ: ನಾವೆಲ್ಲ ಎಂತೆಂಥ ಅನಾಹುತಕಾರಿ ಘಟ್ಟಗಳನ್ನು ದಾಟಿ ಬಂದಿರುತ್ತೇವಲ್ವೆ?
ಬಾಲ್ಯದಲ್ಲಿ ಚಿತ್ರವಿಚಿತ್ರ ಆಸೆಗಳಿರುತ್ತವೆ. ಅವತ್ತಿನ ಮಟ್ಟಿಗೆ ಅವೇ ದೊಡ್ಡವು. ಬಲು ಪಸಂದಾಗಿರುವಂಥವು. ಚಿಕ್ಕವನಿದ್ದಾಗ, ನಮ್ಮೂರಿನ ಹಿಟ್ಟಿನ ಗಿರಣಿಗೆ ನಿಯಮಿತವಾಗಿ ಹೋಗುತ್ತಿದ್ದೆ, ಜೋಳ ಬೀಸಿಕೊಂಡು ಬರಲು. ಅದೇ ಮುಖ್ಯ ಆಹಾರ ನಮಗೆ. ತೀರಾ ಕುಳ್ಳನಾಗಿದ್ದ ನನಗೆ, ಎತ್ತರದಲ್ಲಿದ್ದ ಹಿಟ್ಟು ಬೀಸುವ ಯಂತ್ರದ ಬಾಯಿಗೆ ಜೋಳದ ಬುಟ್ಟಿ ಎತ್ತಿ ಸುರುವಲು ಆಗುತ್ತಿರಲಿಲ್ಲ. ಗಿರಣಿಯ ಕೆಲಸಗಾರ, ನನ್ನ ತಲೆ ಮೇಲಿನ ಬುಟ್ಟಿ ಎತ್ತಿ, ಜೋಳ ಸುರುವಿ ಬುಟ್ಟಿಯನ್ನು ವಾಪಸ್ ಕೊಡುತ್ತಿದ್ದ. ಆಗ ಕೆಲ ಗಾಲಿಗಳನ್ನು ತಿರುವಿದ ಕೂಡಲೇ ಯಂತ್ರದ ಸದ್ದು ಬದಲಾಗಿ, ಇದ್ದಕ್ಕಿದ್ದಂತೆ ಹಿಟ್ಟು ಬುಟ್ಟಿಯಲ್ಲಿ ಬೀಳಲು ಶುರುವಾಗುತ್ತಿತ್ತು.
ನನಗೆ ಅದು ಬಹಳ ಕೌತುಕದ ಸಂಗತಿಯಾಗಿತ್ತು. ಯಂತ್ರದ ಬಾಯಿಂದ ಜೋಳ ಅದರ ಹೊಟ್ಟೆಗೆ ಹೇಗೆ ಹೋಗುತ್ತದೆ ಎಂಬುದನ್ನು ನೋಡುವ ಆಸೆ ನನ್ನದು. ಆದರೆ, ಗಿರಣಿಯವ ನನ್ನನ್ನು ಬಿಡುತ್ತಿರಲಿಲ್ಲ. ಅಲ್ಲದೇ, ಜೋಳ ಮುಗಿಯುತ್ತ ಬಂತು ಎಂಬುದು ಅವನಿಗೆ ಹೇಗೆ ಗೊತ್ತಾಗುತ್ತದೆ ಎಂಬುದನ್ನು ತಿಳಿಯುವ ಕುತೂಹಲವೂ ಸಾಕಷ್ಟಿತ್ತು. ಎಷ್ಟೇ ಪ್ರಯತ್ನಿಸಿದರೂ, ಆತ ಹೇಳುತ್ತಿರಲಿಲ್ಲ. ’ಅದಕ್ಕೆಲ್ಲ ತಲೆ ಬೇಕಾಗುತ್ತದೆ’ ಎಂದು ತನ್ನ ತಲೆ ಮುಟ್ಟಿ ನಗುತ್ತಿದ್ದ.
ಆಗ ನನ್ನ ದೊಡ್ಡ ಕನಸೆಂದರೆ, ಗಿರಣಿಯಲ್ಲಿ ಹಿಟ್ಟು ಬೀಸುವ ಕೆಲಸ ಮಾಡಬೇಕೆಂಬುದು. ದೊಡ್ಡವನಾದಾಗ, ಹಿಟ್ಟು ಬೀಸುವ ಕೆಲಸ ಮಾಡಬೇಕು. ಆಗ, ನನ್ನಂಥ ಚಿಕ್ಕಮಕ್ಕಳಿಗೆ ಗಿರಣಿ ಕೆಲಸ ಮಾಡುವುದನ್ನು ತೋರಿಸಿ ಅವರ ಅಚ್ಚರಿ ಗಮನಿಸಬೇಕೆಂಬ ವಿಚಿತ್ರ ಆಸೆ ಹುಟ್ಟಿತ್ತು. ನಾನು ಹೈಸ್ಕೂಲು ಮುಗಿಸುವವರೆಗೂ ಈ ಆಸೆ ಇತ್ತೆಂಬುದನ್ನು ಇವತ್ತು ನೆನೆದರೆ ನಗು ಬರುತ್ತದೆ. ಮುಂದೆ ಓದಿ »