ಆಗಲೇ ಹಬ್ಬದ ಅರ್ಧದಷ್ಟು ದಿನಗಳು ಕಳೆದಾಗಿದೆ. ಸಂಗೀತದ ವಿಷಯ ಮಾತಾಡುತ್ತ ಹೋದರೆ, ನನಗೆ ನಿಲ್ಲಿಸುವುದಕ್ಕೇ ತಿಳಿಯುವುದಿಲ್ಲ ಅನ್ನಿಸುತ್ತೆ! ಯಾವಾಗಲೂ ಯಾವುದರ ಬಗ್ಗೆ ಬರೆಯಬೇಕೆಂದೇ ತಿಳಿಯದೇ ಹೋಗುತ್ತೆ. ಏಕಂದರೆ ಹೇಳಿದಷ್ಟೂ ಮುಗಿಯುವಂತಿಲ್ಲವಲ್ಲ ಸಂಗೀತ ಸಾಗರ?
ಚಲಿಸದ ಸಾಗರ ಅಂತೊಂದು ಸಿನೆಮಾ ಬಂದಿತ್ತು - ನಾನು ನೋಡಿರಲಿಲ್ಲ. ಬಹುಶಃ ನದಿಗಳು ಹರಿಯುತ್ತವೆ, ಸಮುದ್ರ ಇದ್ದಲ್ಲೇ ಇರುತ್ತೆ ಎನ್ನುವುದು ಅದರ ಒಳಗಿನ ಭಾವ ಇರಬಹುದು. ಆದರೆ, ಈ ಸಂಗೀತ ಸಾಗರ ನಿಜವಾಗಿ ಬದಲಾಗುತ್ತ ಹೋಗುತ್ತಿರುತ್ತದೆ. ಹಾಗಾಗಿ ನಮ್ಮ ಸಂಗೀತದ ಕೆಲವು ಅಂಶಗಳು ಸಾವಿರಾರು ವರ್ಷಗಳಿಂದ ಹಾಗೇ ಉಳಿದಿವೆಯಾದರೂ, ಮತ್ತೆ ಕೆಲವು ವಿಷಯಗಳು ಬದಲಾಗುತ್ತ ಹೋಗಿವೆ ಅನ್ನುವುದು ಬಲ್ಲವರ ಮಾತು.
ಸಂಗೀತದಲ್ಲಿ ಒಂದು ರಾಗ ಕೇಳಲು ಹಿತವಾಗಿರಬೇಕಾದರೆ, ಐದು ಸ್ವರಗಳಾದರೂ ಇರಬೇಕು - ಇಲ್ಲದಿದ್ದರೆ ಅದು ಸೊಗಸುವುದಿಲ್ಲ ಅನ್ನುವ ನಂಬಿಕೆ ಇತ್ತು. ಅದನ್ನು ಬುಡಮೇಲು ಮಾಡಿದವರು ೨೦ ನೇ ಶತಮಾನದ ಒಬ್ಬ ಮಹಾನ್ ಕಲಾವಿದರಾದ ಡಾ.ಬಾಲಮುರಳಿಕೃಷ್ಣ ಅವರು. ಒಮ್ಮೆ ಯಾವುದೋ ಲಹರಿಯಲ್ಲಿ ಹಾಡಿಕೊಳ್ಳುತ್ತಿದ್ದರಂತೆ - ಆಮೇಲೆ ಗಮನಿಸಿ ನೋಡಲು ಅದರಲ್ಲಿ ನಾಕೇ ಸ್ವರಗಳಿದ್ದುದ್ದನ್ನು ಕಂಡು, ಆ ರಾಗಕ್ಕೆ ಲವಂಗಿ ಎನ್ನುವ ಹೆಸರಿಟ್ಟು, ಒಂದು ಕೃತಿಯನ್ನು ರಚಿಸಿದರು. ಆನಂತರ, ಇದೇ ದಾರಿಯಲ್ಲಿ ಹೆಚ್ಚು ಪ್ರಯೋಗಗಳನ್ನು ಮಾಡಿ, ಇನ್ನೂ ಕೆಲವು ಅದೇ ಬಗೆಯ ರಾಗಗಳನ್ನೂ, ಅವುಗಳಲ್ಲಿ ರಚನೆಯನ್ನೂ ಮಾಡಿದ್ದಾರೆ. ಮುಂದೆ ಓದಿ »