ಸುಮ್ಮನೆ ಬರುವುದಿಲ್ಲ ಇಲ್ಲಿ ಸಂಜೆ..!
January 4, 2009 - 2:57pm
ಸಂಜೆಯಾಯಿತು.
ಬೆಂಗಳೂರಿನಲ್ಲಿ ಸಂಜೆ ಎನ್ನುವುದು ಸುಮ್ಮನೇ ಬರುವುದಿಲ್ಲ. ಸೂರ್ಯ ಇದಕ್ಕಿದ್ದಂತೆ ತನ್ನ ಉರಿ ಕಳೆದುಕೊಂಡು, ಅನಗತ್ಯವಾಗಿ ಕೆಂಪೇರಿ, ಏನೋ ಅರ್ಜೆಂಟ್ ಕೆಲಸವಿದ್ದವನಂತೆ ದುಂಡಗಾಗಿ ಪಶ್ಚಿಮದೆಡೆಗೆ ಹೊರಡುವಾಗ, ಸಂಜೆಯಾಗುತ್ತದೆ.
ಮೆಜೆಸ್ಟಿಕ್ ಬಸ್ ನಿಲ್ದಾಣದ ಸುತ್ತಮುತ್ತಲ ಪ್ರದೇಶಗಳಲ್ಲಿ ಇನ್ನೂ ಉಳಿದಿರುವ ಮರಗಳಲ್ಲಿ ಸಾವಿರಾರು ಹಕ್ಕಿಗಳ ಸಂಜೆ ಸಂಭ್ರಮದ ಗೀತೆ ವಾಹನಗಳ ಕರ್ಕಶ ಸದ್ದಿನಲ್ಲಿ ಅಡಗಿ ಹೋಗುತ್ತಿರುವಾಗ, ಸಂಜೆಯಾಗುತ್ತದೆ.
ಅದೇ ಮೆಜೆಸ್ಟಿಕ್‌ನ ಸಿಟಿ ಬಸ್ ನಿಲ್ದಾಣದಲ್ಲಿ, ತಮ್ಮ ಕಾಂಕ್ರೀಟ್ ಗೂಡು ಸೇರುವ ಕಾತರದಲ್ಲಿ ನಿಂತ ಲಕ್ಷಾಂತರ ಜನ, ‘ಈ ಹಾಳಾದ ಬಸ್ ಇನ್ನೂ ಬರಲಿಲ್ಲವಲ್ಲ’ ಎಂದು ಮನಸ್ಸಿನೊಳಗೇ ಶಪಿಸುತ್ತಿರುವಾಗ, ಸಂಜೆಯಾಗುತ್ತದೆ. ಮುಖ್ಯ ರಸ್ತೆಗಳಲ್ಲಿ, ಜನರಿಗೆ ನಡೆದಾಡಲೂ ಜಾಗವಿಲ್ಲದಂತೆ ತುಂಬಿಕೊಂಡ ವಾಹನಗಳು, ಮುಂದಕ್ಕೆ ಹೋಗಲಾಗದೇ ಹೊಗೆಯುಗುಳುತ್ತ ಅಸಹನೆಯಿಂದ ಕಿರಿಚಿಕೊಳ್ಳುವಾಗ, ಸಂಜೆಯಾಗುತ್ತದೆ. ಒಳ ಭಾಗದಲ್ಲಿರುವ ಸಣ್ಣ ರಸ್ತೆಗಳನ್ನೇ ತಾತ್ಕಾಲಿಕ ಆಟದ ಮೈದಾನವನ್ನಾಗಿ ಮಾಡಿಕೊಂಡ ಮಕ್ಕಳು ಆಟ ಆಡುತ್ತ ಕೇಕೆ ಹಾಕುತ್ತಿರುವಾಗ, ಸಂಜೆಯಾಗುತ್ತದೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:




