ಭಾರ್ಗವನ ಮನಸ್ಸಿನ ಭಾವ

ಭಾರ್ಗವನ ಮನಸ್ಸಿನ ಭಾವ

ಭಾರ್ಗವ ಇಪ್ಪತ್ತರ ವಯಸ್ಕ, ಅಭ್ಯಾಸ ಮುಗಿದಿದೆ, ಕೆಲಸ-ಸಂಬಳದ ಜಾಲಕ್ಕೆ ಬಿದ್ದಿದ್ದಾನೆ, ಜವಾಬ್ದಾರಿ ಹೊತ್ತಿದ್ದಾನೆ. ಕೆಲವೊಮ್ಮೆ ಕೆಲಸದ ಒತ್ತಡ ಜಾಸ್ತಿಯಾಗಿ ತಲೆ ಕೆಟ್ಟಾಗ, ಕೆಲಸ ಬದಲಿಸುವ ಯೋಚನೆ ಸಹ ಅವನಿಗೆ ಬರುತ್ತಿತ್ತು. ಮೂಲತಃ ಅವನಿಗೆ ಈ ಕೆಲಸದಲ್ಲೇನು ಅಪಾರ ಆಸಕ್ತಿ ಇರಲಿಲ್ಲ ಆದರೆ ಬೇರೆ ಕೆಲಸವೂ ಸಹ ಇಲ್ಲವಲ್ಲ. ಬಂದ ಸಂಬಳದಲ್ಲಿ ಒಳ್ಳೆಯ ಜೀವನ ನೆಡೆಸುತ್ತಿದ್ದನೀತ. ಬೇಕಾದ್ದು ತಿನ್ನುತ್ತ, ರಜೆ ಹಾಕಿ ಪ್ರವಾಸ ಮಾಡುತ್ತ, ಸ್ನೇಹಿತರೊಂದಿಗೆ ಸಮಯ ಕಳೆಯುತ್ತ ಸಂತೋಷದ ಜೀವನ ನಡೆಸುತ್ತಿದ್ದ.
 
ಸ್ವಭಾವತಃ ಬಹಳ ಸರಳವಾಗಿದ್ದ ಭಾರ್ಗವ. ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಂಡಿದ್ದ. ಇವನ ಲೋಕದಲ್ಲಿ ಸ್ನೇಹಿತರ ಸಂಪರ್ಕ ಮತ್ತು ಇವನ ಜೀವನದ ಮೇಲೆ ಅವರ ಪರಿಣಾಮ ಅಪಾರ. ಎಲ್ಲರೊಟ್ಟಿಗೆ ನಗುತ್ತಾ, ನಗಿಸುತ್ತ, ರೇಗಿಸುತ್ತ, ರೇಗಿಸಿಕೊಳ್ಳುತ್ತ ಹರ್ಷಿಸುತ್ತಿದ್ದ. ಇವನನ್ನು ತಮಾಷೆ ಮಾಡಿದಾಗ ಎಂದೂ ಸಹ ಬೇಸರಿಸಿಕೊಂಡವನಲ್ಲ ಈತ. ಬದಲಿಗೆ, ತಾನೂ ಅವರೊಂದಿಗೆ ಹಾಸ್ಯ ಮಾಡಿ ನಕ್ಕುಬಿಡುವುದು ಇವನ ದೊಡ್ಡತನವಾಗಿತ್ತು. ಹಲವರನ್ನು ಬಹಳ ಹಚ್ಚಿಕೊಂಡಿದ್ದ ಭಾರ್ಗವ. ಅವರ ಬಗ್ಗೆ ಅತಿಯಾದ ನಂಬಿಕೆ, ಪ್ರೀತಿ. ಅವರೂ ಸಹ ಅದಕ್ಕೆ ಅರ್ಹರೇ ಆಗಿದ್ದರು.
 
ಅದೊಂದು ದಿನ ಭಾರ್ಗವನ ಮನಸ್ಸಿನಲ್ಲೇನೋ ತಳಮಳ. ಮುಂಜಾನೆಯಿಂದಲೆ ಕಸಿವಿಸಿ. ಯಾವುದೊ ವಿಚಾರಕ್ಕೆ ಬೇಸರವಾಗಿತ್ತು. ದಿನದಲ್ಲಿ ಆಸಕ್ತಿ, ದಿನ ದೂಡುವ ಆ ಶಕ್ತಿ ಎರಡನ್ನು ಕಳೆದುಕೊಂಡಂತಿತ್ತು. ಅಂದು ಆ ಘಟನೆ ನಡೆದಿತ್ತು. ಸ್ನೇಹಿತರೆಲ್ಲ ಎಂದಿನಂತೆ ಮಾತನಾಡುತ್ತಿದ್ದರು, ಎಂದಿನಂತೆ ಹರಟೆಯಲ್ಲಿ ಮಗ್ನರಾಗಿದ್ದರು. ಆದರೆ ಅವರ ಮಾತುಗಳ ಕೇಳಿ ಇವನಿಗೆ ಅದೇನೊ ಕಿರಿಕಿರಿ. ಒಂದು ಹಂತ ತಲುಪಿದಾಗ ಕೆರಳಿತು ಅವನ ಕೋಪ, ಪಿತ್ತ ನೆತ್ತಿಗೇರಿತು. ಎಲ್ಲರು ಇವನ ಅಸಹಾಯಕತೆಯ ಹಾಸ್ಯ ಮಾಡುತ್ತಿದ್ದಾರೆ ಎಂದನಿಸತೊಡಗಿತು. ಕಿರುಚಿಬಿಟ್ಟ ಭಾರ್ಗವ. ಎಲ್ಲರ ಮೇಲು ಕಿರುಚಿಬಿಟ್ಟಿದ್ದ. ಸ್ನೇಹಿತರೆಲ್ಲರೂ ಆಶ್ಚರ್ಯಚಕಿತರು. ಮೊದಲ ಬಾರಿಗೆ ಭಾರ್ಗವನ ಈ ರೂಪ ಕಂಡಿದ್ದರವರು. ಭಾರ್ಗವ ಕಿರುಚಿದ್ದ. ಕಿರುಚಿ ಮನೆಯ ಕಡೆ ತಿರುಗಿದ್ದ.
 
ಕಿರುಚಿದ್ದ ಧ್ವನಿ ಅವನ ಕಿವಿಯಲ್ಲಿ ಮೊಳಗುತ್ತಿತ್ತು. ಅವರ ನಗು ಇವನನ್ನು ಕಾಡುತ್ತಿತ್ತು. ಮನೆಗೆ ತೆರಳಿ ಮಾತನಾಡದೆ ಕೋಣೆ ಸೇರಿಬಿಟ್ಟ. ದಢಾರನೆ ಬಾಗಿಲು ಹಾಕಿ ಹಾಸಿಗೆಗೆ ಧುಮುಕಿದ. ದುಃಖ ತಲೆಯನ್ನು ಸೀಳಿದಂತಿತ್ತು. ಮಲಗಿದಲ್ಲೆ ಯೋಚಿಸತೊಡಗಿದ ಭಾರ್ಗವ. ಯಾಕೊ ಅವನ ತುಂಬಿದ ಜಗತ್ತು ಇಂದು ಖಾಲಿ ಕಾಣತೊಡಗಿತ್ತು. ದೊಡ್ಡ ಮೈದಾನದಲ್ಲಿ ಒಬ್ಬನೆ ಇದ್ದ ಭಾವ, ಖಾಲಿ ಆಕಾಶದಲ್ಲಿ ಚಂದ್ರನಿಲ್ಲದ ಆಗಸದಲ್ಲಿ ಒಂಟಿ ಮೋಡವಾಗಿ ಇದ್ದ ಭಾವ ಭಾರ್ಗವನದ್ದು. ಸಮುದ್ರದ ವಿರುದ್ಧ ಒಬ್ಬನೆ ಈಜುತ್ತಿದ್ದಾನೆ ಎಂದನಿಸಿದ್ದು ಹೌದು. ತನ್ನವರು ತನ್ನವರಲ್ಲ, ತಾನು ತನ್ನವರಿಗಲ್ಲ ಎಂಬ ಭಾವ ತಲೆದೋರಿತ್ತು. ಗಡಿಯಾರದ ಟಿಕ್ ಟಿಕ್ ಶಬ್ದವೂ ಸಹ ಇವನನ್ನು ತನ್ನ ಮುಳ್ಳಿನಿಂದ ಇರಿದು ಕೇಕೆ ಹಾಕುತ್ತಿದೆ ಎಂದನಿಸಿತು.
 
ದಿಂಬನ್ನು ತಲೆಯ ಮೇಲಿಟ್ಟ, ಹಾಸಿಗೆಗೆ ಮುಖವೊತ್ತಿ ಅಳತೊಡಗಿದ. ಮನಸ್ಸಿನ ಭಾವವೆಲ್ಲ ಕಣ್ಣೀರಾಗಿ ಹೊರಹೊಮ್ಮಿತು. ಅವನ ನೋವು ಹಾಸಿಗೆಯನ್ನು ತಣ್ಣಗಾಗಿಸಿತು. ನೋವು ಕಮ್ಮಿಯಾದಂತೆ ತೋರಿತು. ಆಗ ಅವನಿಗೆ ಅವನ ಈ ಕೃತ್ಯದ ಬಗ್ಗೆ ಬೇಸರವಾಯಿತು. ಅದು ತಪ್ಪು ಎಂದೆನಿಸತೊಡಗಿತು. ಸ್ನೇಹಿತರಿಗೆ ನೋವನ್ನು ತಂದೆ ಎನಿಸಿತು. ತನ್ನ ಬಗ್ಗೆ ತನಗೆ ಛೀ ಎನಿಸಿತು ಭಾರ್ಗವನಿಗೆ. ಅವರದ್ದು ತಪ್ಪಲ್ಲ, ಅವರು ನಗುತ್ತಿದ್ದರು, ಪೂರ್ಣ ತಪ್ಪು ನನ್ನದು ಕೂಡ ಅಲ್ಲ, ನಾನು ದುಃಖಿತನಾಗಿದ್ದೆ ಎನಿಸಿತು ಅವನಿಗೆ. ಕ್ಷಮೆ ಕೇಳೋಣ ಎನಿಸಿತು, ಸಮಯ ರಾತ್ರಿ ಹನ್ನೆರಡು. ಹೀಗೆ ಯೋಚಿಸುತ್ತ, ಕಣ್ಣಿರಲ್ಲಿ ಮಲಗಿದ್ದ. ನಿದ್ರಾದೇವತೆಯ ಕೃಪೆ ಇವನಿಗೆ ಬೇಕಿತ್ತು. ನಿದ್ರೆ ಎಂಬ ಮದ್ದು ಎಲ್ಲವನ್ನು ಮರೆಸುವ ಶಕ್ತಿ ಉಳ್ಳದ್ದು. ಇದು ಕಾಲದ ಆಟವಾಗಿತ್ತು, ನೋವಿನ ಮಾಟವಾಗಿತ್ತು, ಅಂತೂ ಭಾರ್ಗವ ಜೀವನದಲ್ಲಿ ಇನ್ನೊಂದು ಪಾಠ ಕಲಿತು ಮತ್ತೊಂದು ಮೆಟ್ಟಿಲೇರಿದ್ದು ನಿಜ.