ಮತ್ತೆ ಬಂಧಿಯಾಗಲು ಅಣಿಯಾಗುತ್ತಿದೆ..

ಮತ್ತೆ ಬಂಧಿಯಾಗಲು ಅಣಿಯಾಗುತ್ತಿದೆ..

ಕವನ

 ಅಂದು ರೆಕ್ಕೆ ಮುರಿದಿತ್ತು

ಹಾರಲಾಗದೆ,
ಮುಂದೆ ಹೋಗಲಾಗದೆ
ನಿಂತ ನೀರ ಸೆಲೆಯ
ದಡದ ದೂರದಲ್ಲೇ
ಬಿದ್ದಿತ್ತು ನನ್ನ
ಹಾರಲಾಗದ ಈ ದೇಹ.

ಹಾರಲು ಮನಸ್ಸಿಲ್ಲ
ಗುಡ್ಡಗಾಡುಗಳನ್ನು
ದಾಟಿ
ಸಾಗಬೇಕೆಂಬ ತುಡಿತವಿಲ್ಲ,
ಗರಿಯ ಮೀಟಿ
ಗಡಿಯ ದಾಟಿ
ಬಾನ ಏರಿ
ನಿನ್ನ ಸೇರಬೇಕೆಂಬ ಹಂಬಲ
ನನಗಿಲ್ಲ.

ನವ ಜೀವನದ ಆದಿಯಾಗಿ
ಮುರಿದ ಕನಸಿಗೆ
ಬೆಚ್ಚನೆಯ ಬಯಕೆಯಾಗಿ
ಗಾಡಾಂಧಕಾರದ
ಗತಿಯರಿಯದ ಪಯಣಕೆ
ಮುಂಜಾನೆಯ ಹೊಂಗಿರಣವಾಗಿ
ಅಳಿಯಲಿರುವ ಕನಸಿಗೆ
ಸಂಜೀವಿನಿಯಾಗಿ
ನೀನಲ್ಲಿರುವೆಯೆಂಬ
ಸಣ್ಣ ಆಸೆಯೊಂದು ಮನದಲಿ
ಮೂಡಿತ್ತು ಅಂದು.

ಆದರೆ
ತಿರಸ್ಕಾರದ ನೋಟವೆಸೆದಿತ್ತು
ಆ ನಿನ್ನೆರೆಡು ಕಂಗೊಳಿಸುತ್ತಿದ್ದ
ಕಂಗಳು...
ಮನದ ಮೌನ ಮಾತಾಗಿ
ಮತ್ತೆ ಮಂಕಾಗಿದೆ
ತಿಳಿಯದರಿವಿನ
ಆಳೆತ್ತರದ ತಡೆಗೋಡೆಯೊಳಗೆ
ಮತ್ತೆ ಬಂಧಿಯಾಗಲು ಅಣಿಯಾಗುತ್ತಿದೆ
ನನ್ನ ಮನ ಇಂದು.

Comments