ಮರೆತ‌ ಮಾಧುರ್ಯ‌...

ಮರೆತ‌ ಮಾಧುರ್ಯ‌...

ಕವನ

ಮಾಧುರ್ಯ‌ ಕ್ಷೀಣವಾಗಿ ಕಣಿವೆಗಳ ಮೇಲಿಂದ‌  ತೇಲಿದೆ ಬಲಹೀನ‌...

ಒಂಟಿ ಶ್ರುತಿಗಳು, ಹೊತ್ತು ತಂದ‌ ಗಾಳಿಯ ಮೇಲೆ ನಡೆಸಿವೆ, ಸುಂದರ‌ ಸಮ್ಮಿಲನ‌...

 

ಏರುತ‌ ಮರದ‌ ತುದಿಗಳ, ಜಾರುತ‌ ಎಲೆಗಳ‌ ನಡುವೆ, ಮೆಲ್ಲ‌ ಕ್ಷೀಣಿಸುತ‌...

ಕಿರಣಗಳ‌ ಜೊತೆ ಚಕ್ಕಂದ‌, ಗುಪ್ತ‌ ಅನುಭವಗಳ‌ ನಿಬಂಧ‌, ಬಾಣದಂತೆ ಅವನರಸುತ್ತ‌...

 

ಗೋಡೆಯನು ಸೀಳಿ, ಬೇಲಿಗಳನ್ನು ಹಾರಿ, ಕರ್ಣದಿ ನುಗ್ಗಿ, ಮಾಯವಾಗುವ‌ ಕ್ಷಣ‌ ಉತ್ಸವ‌...

ಸ್ವಸ್ತಾನವು ಗುಟ್ಟು, ಸಾಗಿದ‌ ಪಥವು ಅದ್ರಿಶ್ಯ‌, ಕ್ಷೀಣಿಸುವ‌ ಮಾಧುರ್ಯಕ್ಕೆ ಉಜ್ವಲ‌ ಪ್ರೀತಿ ಉದ್ಭವ‌...

 

ಉತ್ಸಾಹದ‌ ಹಾವಳಿಯಲ್ಲಿ, ಆರದಾಸಕ್ತಿಯ‌ ನೆರವಿನಲ್ಲಿ, ಎದ್ದು ನಿಂತನು ಆವರಿಸಿದ‌ ಪಂಜರದಲ್ಲಿ...

ಗಟ್ಟಿ ಗೋಡೆ, ಗೂಡು ಪಂಜರ‌, ಸುತ್ತ‌ ನೂರು ದ್ವಾರ‌, ಒಂದು, ಎರಡು, ಮೂರು, ನಿರತನದರ‌ ಎಣಿಕೆಯಲ್ಲಿ...

 

ಐದು, ಆರು, ಏಳು, ಹೊರ‌ ಧಾವಿಸಿದ‌, ತೆರೆದು ಒಂಬತ್ತನೇ ಬಾಗಿಲಿನಲ್ಲಿ...

ಗುಡ್ಡ‌ ದಿಬ್ಬಗಳು ಸಮ್ಮೋಹಕ‌, ಹೆಜ್ಜೆ ಕಾಣದ‌ ದಾರಿಯ‌ ಸ್ವಾಗತ‌, ಹೊರಟ‌ ಮರೆತ‌ ಮಾಧುರ್ಯದ‌ ಗುಂಗಿನಲ್ಲಿ...

 

ಒರಟು ಮರಗಳು, ರೋಮದಂತೆ ಅದನಾವರಿಸಿದ‌ ಎಲೆಗಳು, ಪಿಸುಗುಡುತ‌ ವಾರ್ತೆಯನಾಗಿಸಿತು ನನ್ನ‌ ಪ್ರಯಾಣ‌...

ಸವಾಲಾದನು ಬೆಳಕು, ಕರಗುತ‌ ಶೂನ್ಯದಲ್ಲಿ, ಇದ್ದಿಲಾಕಾಶವು ಅವನ‌ ನೋಡಿತು ತೆರೆದು ನೂರೆಂಟು ನಯನ‌...

 

ಒಮ್ಮೆ ಶ್ರುತಿ ಹೊತ್ತ‌ ಗಾಳಿಯಲ್ಲಿ, ಈಗ‌ ಬೊಗಸೆ ಬೆಳಕ‌ ಮಿಂಚುಹುಳಗಳು ತೇಲಿ, ಮಾಡಿದೆ ಅದ್ರುಶ್ಯ‌ ಪಥವ‌ ಜೀವಂತ‌...

ಕರಿ ನೀರಿನ‌ ಆಗಸದಲ್ಲಿ, ದೂರ‌ ಮಾಧುರ್ಯದ‌ ಪ್ರತಿಬಿಂಬ‌ ಚಂದ್ರನಾಗಿ ಮೆರೆಯಲು, ಅಲ್ಪಕಾಲಿಕ‌ ಅನಂತ‌...

 

ಕರಿ ನೀರಲ್ಲಿ ತೋಯ್ದ‌, ಸುಟ್ಟ‌ ಮೂಳೆಗಳಂತ‌, ಮರಗಳ ಬುಡದಲ್ಲಿ, ಗುಟ್ಟಿಲ್ಲದೆ ಬಾಡಿದ‌ ಎಲೆಗಳ‌ ಗೊಂಚಲು...

ಹೆಜ್ಜೆ ಹೆಜ್ಜೆಗೂ ಚೀರುತ‌, ಮುರಿವ‌ ಕೊಂಬೆಗಳ ನಡುವೆ ನರಳುತ‌, ಹಬ್ಬಲು ನೆಲದಲ್ಲಿ ಬೂದಿಯಾಗಿ ಸಾಯಲು...

 

ಪತಂಗವದು ಒಂದು ಬಂದು ಹೀನ‌ ಸುಳ್ಳು ಕಿವಿಯಲ್ಲಿ ಉಸುರಲು, ಹೇಳಲು ತೇಲಿದ‌ ಮಾಧುರ್ಯವದು ಬರಿಯ‌ ಮಾಯೆ...

ಬೆಳಕ್ಕಿಲ್ಲದ‌ ಬಸುರಲ್ಲಿ, ಹುಟ್ಟದು ಹುಳವು, ಗುರಿಯಿರದ‌ ಪ್ರಯಾಣವಿದು, ತೇಲಿದ‌ ಶ್ರುತಿಗಳೆಲ್ಲ‌ ಹುಚ್ಚು ಮನದ‌ ಚೆಲುವೇ...?

 

ಬೆಂಬಿಡದ‌ ಭೂತ‌, ನೂರು ಪತಂಗ‌, ಕ್ರೀಮಿ ಕೀಟ‌, ಹಟಮಾರಿ ಕೆದಕ್ಕುತ್ತ‌ ಅನುಮಾನದ‌ ಹುಳ...

ಮೌನ‌ ಕಾನನ‌ದ‌ ಭಯವಿಲ್ಲ‌, ಅನುಮಾನಕ್ಕೆ ಕೊನೆಯಿಲ್ಲ‌, ಕೇಳಿದ‌ ಮಾಧುರ್ಯವ‌ ನೋಡುವ‌ ಆಸೆ ಬಹಳ‌...

 

ಕಪ್ಪು ಹೊಗೆಯಂತೆ ಹಬ್ಬಿದೆ, ಬೆಳದಿಂಗಳ‌ ಹಿಂದಟ್ಟಿದೆ, ಹೆಜ್ಜೆ ಹೆಜ್ಜೆಯನು ಹಿಂಬಾಲಿಸಲು, ಅವ ದ್ರುಷ್ಟಿಹೀನ‌...

ನಿದಿರೆ ಬೆನ್ನೇರಿದೆ, ಆದರೂ ಕಣ್ಣೆವೆಗಳು ಕೂಡದೆ, ಸೋಲದು ಅವಳ ಕಾಣದೆ ಮುಚ್ಚದು ನಯನ‌...

 

ಸುತ್ತ‌ ಬಣ್ಣವೆಲ್ಲಾ ಮೂಕಾಗಿರಲು, ದೂರದಲ್ಲಿ ಬಣ್ಣವೆಲ್ಲಾ ತಂದಾಗಿಸಿ ಮೆರೆದಿದೆ ಬೆಂಕಿಯೊಂದು...

ಅಡವಿಯ‌ ರಕ್ತಸ್ರಾವ‌ ಹ್ರುದಯದಂತೆ...

ತಂಪು ಗಾಳಿಗೆ ಬಿಸಿಯೇರಿಸಿ, ಬರಡು ಕೊಂಬೆ, ಎಲೆಗಳನ್ನೆಲ್ಲಾ ಆವಾಹಿಸಿ ಜ್ವಲಿಸಿದೆ...

ಢವಢವಿಸುತ್ತ‌ ಅಡವಿಯ‌ ಹ್ರುದಯದಂತೆ...

 

ಕಾಲುದಾರಿಗೆ ದೀಪ‌, ಈ ಅಡವಿಯ‌ ಭಕ್ಷಿಸುವ‌ ಪ್ರಕೋಪ‌, ಬೆಳಕಿನ‌ ಬಸುರದು ಭಯಾನಕ‌...

ತನ್ನ‌ ತಾನೇ ಕಬಳಿಸುವ‌ ಕಾನ‌ನದ‌ ಭಕ್ಷಣಕ್ಕೆ ಸಾಕ್ಷಿಯಗದೆ, ಹೊರಟ‌ ಸೌಂದರ್ಯ‌ ಅರಸುತ‌ ಅಮಾಯಕ‌...

 

ಒಂದ‌ ನಂತರ‌ ಒಂದರಂತೆ, ಕಾಡಿನ‌ ಮೋಡಿ ಚಕ್ರವ್ಯೂಹದಿ ನುಸುಳಿ, ಮುಂದುವರಿದ‌ ಕಾಲುದಾರಿಯಲ್ಲಿ...

ಮೆಲ್ಲ‌ ಮೌನವ‌ ಸೀಳಿ, ಕಿಣಿ ಕಿಣಿಸುವ‌ ಸಂಗೀತದಂತೆ ತೇಲಿಬಂತು, ಹರಿವ‌ ನದಿಯ‌ ಸುವ್ವಾಲಿ...

 

ಗಾಢ‌ ಕತ್ತಲ‌ ಹೀರಿ, ತನ್ನೆದೆಯಲ್ಲಿ ಕರಗಿಸಿ, ಹರಿದ‌ ನೀರಿನ‌ ಬಣ್ಣವದು ಕಪ್ಪು...

ಆಳದಾಗಾಧತೆಯ‌ ಗುಟ್ಟಾಗಿಸಿ, ತನಗೆ ತಾನೇ ಸಂಕಲ್ಪವಾಗಿ, ಹರಿದಿದೆ ನದಿಯ‌ ಹುರುಪು...

 

ಕುರುಡು ಕಣ್ಣಿಗೆ ಜೀವವಾಗಿ, ಗಾಳಿಯ‌ ಉಯ್ಯಾಲೆಯಲ್ಲಿ ತೇಲಿ ಬಂದಳು ಅವಳು...

ಕತ್ತಲಿಗೆ ಅಭಿಮುಖವಾಗಿ, ಮಾಟದ‌ ಶ್ವೇತಧಾರಿ, ತನ್ನ‌ ನಡಿಗೆಯನ್ನೇ ನಾಟ್ಯವಾಗಿಸಿದವಳು...

 

ಒಂದೆಡೆ ಕಾಲಾಗಿ, ಮತ್ತೊಂದೆಡೆ ಕಣ್ಣಾಗಿ, ಇನ್ನೊಂದೆಡೆ ಕೈಯಾಗಿ, ಮೆಲ್ಲ‌ ತನ್ನ‌ ರೂಪವ‌ ಧರಿಸಿದಳು...

ಭಾಗ‌ ಭಾಗವಾಗಿ ಎದುರಾಗಿ, ಬೆಳದಿಂಗಳ‌ ಬೊಗಸೆ ಬೊಗಸೆಯಾಗಿ ಕಸಿಯುತ‌ ಮೆಲ್ಲ‌ ಸಂಪೂರ್ಣವಾದಳು...

 

ತನ್ನ‌ ಏಕಾಂತದಲಿ, ನನ್ನ‌ ಎಕಾಂತವ‌ ಬೆರೆಸಿ, ಸ್ಪರ್ಶ‌ ಸಂಗಮವಿಲ್ಲದೆ ಒಂದಾದರು...

ಬರಿಯ‌ ಕಾಲ್ಬೆರಳಲ್ಲೇ ನದಿಯಲ್ಲಿ ನಿಂದು, ಅಂಧಕಾರದಲ್ಲಿ ಬಣ್ಣವಾಗಿ, ಮೈ ಮರೆತರು...

 

ತನ್ನ‌ ಇಂದ್ರಜಾಲದಲ್ಲಿ ದೋಣಿ ತಂದಳು, ತಂಪು ನಶೆಯೇರಿದಂತೆ ಜೋಡಿ ದೋಣಿಯೇರಲು ಹೊರಟಿತು ಪಯಣ‌...

ಸುತ್ತ‌ ದೀಪಗಳು, ಅವರ‌ ಬೆಳಗಲು, ಸದ್ದಿಲದ‌ ಮೌನದಲ್ಲಿ, ಮನೆಯಂತಹ‌ ದೋಣಿಯಲ್ಲಿ ಮಾಡಿದಳು ಅವನ‌ ಜೋಪಾನ‌...

 

ಪದಗಳಿಲ್ಲದೆ ಮಾತಾದಳು, ತುಟಿಯಗಲಿಸದೆ ಹೇಳಿದಳು ನೂರಾರು ಸುಂದರ‌ ಕಥೆಗಳ‌...

ದೂರದೂರಿನ‌ ರಾಣಿ, ಮುರಿದ‌ ಹ್ರುದಯಗಳ‌ ಸಮ್ಮೋಹಿಣಿ, ಉಸುರಿದಳು ಅವಳ‌ ಕನಸಿನ‌ ಸಂಭ್ರಮಗಳ‌...

 

ಬೆಳಕಾಗಲು ಹಕ್ಕಿಯಾದಳು, ಸಂಗೀತದ‌ ಸದ್ದಾದಳು, ರಾತ್ರಿಯಾಗಲು ಬಂದಳು, ನೂರು ರೂಪಗಳ‌ ಧರಿಸಿ...

ಕನಸಿನಲ್ಲಿನ‌ ಕನಸ‌ ಬಣ್ಣಿಸಿದಳು, ಬಿಂಬವಿಲ್ಲದಿರೆಯೂ ವಾಸ್ತವವಾದಳು, ನಶಿಸುವ‌ ನನ್ನ‌ ವರಿಸಿ...

 

ನೂರು ರಾತ್ರಿ, ನೂರು ಹಗಲು ಕಳೆಯಲು, ಸವಿ ಶೂನ್ಯದಿ ದೋಣಿ ತೇಲಿತು, ದಿನ‌ ಕಥೆಗಳ ಕೇಳಿ...

ಮೋಡ‌ ಮುರಿಯಿತು, ಹನಿಗಳ ಕಳಿಸಿತು, ಪ್ರತಿ ಹನಿಯದು ನನ್ನ‌ ನಿದಿರೆಯ‌ ಸೀಳಿ...

 

ಪ್ರತಿ ಹನಿಯದು ಗುಂಡಾಯಿತು, ಜೋರು ಸಿಡಿಲಿಗೆ ದೋಣಿ ಹೋಳಾಗಲು, ದೂರವಾದಳು ಯಕ್ಷಿಣಿ...

ಸುಳ್ಳಾಗಲು ರಾಣಿಯ‌ ವೈಭೋಗ‌, ಭಾಗ‌ ಭಾಗವಾಗಿ ಮರೆಯಾದಳು, ನೂರು ರೂಪಗಳ ಮೋಹಿನಿ...

 

ಪರಿಶುದ್ದನಾಗಲು, ಪ್ರತಿ ಮೋಡಿಯ‌ ತೊಳೆಯಲು ಹನಿನೀರ‌ ಹೊಯ್ದಳು ಮೋಡ‌ ನನಗಾಗಿ ಒಂದು ನೂರು ದಿನ‌...

ಇಂಚಿಂಚಾಗಿ ತೊಳೆದಳು ಹನಿನೀರಲ್ಲಿ, ಸಿಡಿಲಲ್ಲಿ ಬೆಚ್ಚಗಾಗಿಸುತ್ತ‌, ಶುಧ್ಧ‌ ಮಾಡಲು ಪ್ರತಿ ಕ್ಷಣ‌, ನನ್ನ‌ ತನು ಮನ‌...

 

ಮಗುದೊಂದು ನೂರು ದಿನ‌, ನನ್ನ‌ ಮುಳುಗಿಸಿದಳು ನದಿಯಲ್ಲಿ, ಭಾವನೆಯಿಲ್ಲದ‌ ಮೀನ‌ ಕಂಗಳಲ್ಲಿ ನನ್ನ‌ ನಾ ಹುಡುಕಲು...

ಕುಡಿಸಿದಳು ನದಿ ನೀರು ಇನ್ನೊಂದು ನೂರು ದಿನ‌, ನದಿಯಲ್ಲಿ ನಾ ಹರಿದು ನೂರು ಚೂರಾಗಲು...

 

ನನ್ನ‌ ಚೂರುಗಳ‌, ನಾ ನೋಡಿದೆ, ಕಣ್ಣೀರಿನಲ್ಲಿ ಮತ್ತೆ ಜೋಡಿಸಿದೆ...

ಮತ್ತೆ ನೂರು ಚೂರಾದೆ, ಗಂಟೆಗೊಮ್ಮೆ ಮೋಹಿನಿಯ‌ ನೆನಪಾಗಲು...

ಪ್ರಲಿ ಸಲವೂ ತೊಯ್ದೆ, ಸುರಿಮಳೆಯಲ್ಲಿ ನೆನೆದೆ, ನದಿಯಲ್ಲಿ ಮುಳುಗಿದೆ...

ನೂರು ಸಾವಿರವಾಗಲು, ಸಾವಿರ‌ ಕೋಟಿಯಾಗಲು...

 

ಸದ್ದಿಲದೆ ಮರಳಿದೆ, ಪಂಜರವ‌ ಗೂಡು ಮಾಡಿದೆ, ಹತ್ತು, ಹನ್ನೊಂದು, ಹನ್ನೆರಡು...

ಒಳ‌ ಹೋಗಲು ಎಣಿಸಿದೆ, ಬಂದ‌ ದಾರಿಯಲ್ಲಿ ಮರಳಿದೆ, ಹದಿಮೂರು, ಹನ್ನೊಂದು, ಹದಿನಾಲ್ಕನೇ ಬಾಗಿಲು ತೆರೆಯಲು...

 

ಒಂಟಿಯಾಗಿ ಹೊರಟ‌, ಒಂಟಿಯಾಗಿ ಮರಳಿದ‌, ಮತ್ತೆ ದೂರದಿಂದ‌ ರೇಗಿಸಲು ಕ್ಷೀಣ‌ ಮಾಧುರ್ಯ‌...

ಅನುಭವಗಳಿಂದ‌ ಕಲಿತ‌, ಹುಡುಕಲಾರನು ಇನ್ನೆಂದೂ, ಮೂಲಸ್ಥಳವಿಲ್ಲದ‌ ಸರ್ವವ್ಯಾಪಿ ಸೌಂದರ್ಯ‌...