ಮಲೆನಾಡಿನಲ್ಲೀಗ "ನೆಲ್ಲಿ ಬರ"

ಮಲೆನಾಡಿನಲ್ಲೀಗ "ನೆಲ್ಲಿ ಬರ"

 
 
"ಮಲೆನಾಡಿನಲ್ಲಿ ಕಳೆದ ಮೂರು ವರ್ಷಗಳಿಂದ ಬೆಟ್ಟದ ನೆಲ್ಲಿ ಫಲವಿಲ್ಲದೇ ಮುನಿಸಿ ಕೂಡ್ರುತ್ತಿದೆ! ಯಾರಿಗೆ ಗೊತ್ತು? ನಿಲ್ಲಿ! ನೆಲ್ಲಿ ಏನೋ ಹೇಳುತ್ತಿದೆ...”
 
"ನೆಲ್ಲಿ ಕಟ್ಟಿಗೆ ನೀರಿಗೆ ಗಟ್ಟಿ" ಸಸ್ಯಶಾಸ್ತ್ರ ಗ್ರಂಥ ಹೇಳುತ್ತದೆ. ಅಬ್ಬಬ್ಬಾ! ಎಂದರೆ ಮಧ್ಯಮ ಗಾತ್ರ ಬೆಳೆಯುವ ಮರ, ಇದನ್ನು ಸೀಳಿ ನೀರಿಗಿಳಿಯುವ ದೋಣಿ ಮಾಡಲಂತೂ ಸಾಧ್ಯವಿಲ್ಲ. ನೆಲ್ಲಿ ಬೀನೆಯಿಂದ ನೀರಿಗೆ ಅಂಜದ ಇನ್ನೆಂತಹ ಪಿಠೋಪಕರಣ ತಯಾರಿಸಬಹುದು? ಯೋಚನೆ ಏಕೆ, ಮಲೆನಾಡಿನ ಹಳೆ ಮನೆಯ ಹಳೆಯ ಬಾವಿ ಇಣುಕಿದರೆ ಅಲ್ಲಿ ನೆಲ್ಲಿ ಕಟ್ಟಿಗೆ ಪತ್ತೆ ಮಾಡಬಹುದು!
 
ನೀರು ಕೆಡಬಾರದೆಂದು ಬಾವಿಯ ತಳಕ್ಕೆ ನೆಲ್ಲಿ ಹಲಗೆ ಬಳಸುವ ಜಲ ಚಿಕಿತ್ಸೆ ಪದ್ಧತಿ ಇಲ್ಲಿದೆ. ಹಸಿಯ ನೆಲ್ಲಿ ಕಟ್ಟಿಗೆ ಮುಳುಗಿಸಿದಾಗ ಒಸರುವ ತೊಗರಿನಿಂದ ಸವುಳು ನೀರು ಸಿಹಿಯಾಗುತ್ತದೆ, ನೀರಿಗೆ ಅಂಟಿರಬಹುದಾದ ವಾಸನೆ ಬದಲಾಗುತ್ತದೆಂಬುದು ಬಳಸಿ ಬಲ್ಲವರ ಅನುಭವ. ಈಗಲೂ ಹೊಸ ಬಾವಿ ತೆಗೆಸಿದವರು ಬೆಟ್ಟದ ನೆಲ್ಲಿ ಮರದ ದಿಮ್ಮಿ ಬಾವಿಗೆ ಹಾಕುತ್ತಿರುವುದು ಬಳಕೆ ಪ್ರೀತಿಗೆ ನಿದರ್ಶನ. ನೀರಿಗೆ ಕಟ್ಟಿಗೆ ಬಾಳಿಕೆ ಬರುತ್ತದೆಂದೆಷ್ಟೇ ಗ್ರಂಥ ಹೇಳಿತ್ತು, ಆದರೆ ಎಷ್ಟು ಕಾಲ ಬಾಳಿಕೆ ಬರುತ್ತದೆಂದು ಮುಳುಗಿಸಿ ಕಟ್ಟಿಗೆ ಶತಮಾನವಾದರೂ ಹಾಳಾಗದೇ ಉಳಿದು ನೀರಿನ ಗುಣ ಉಳಿಸಿದ ಉದಾಹರಣೆಗಳಿವೆ!
 
ಹೊಸ ಬಾವಿ ತೆಗೆಯಲು ಜಾಗ ತೋರಿಸುವ ಜಲಶೋಧಕರು ಅಂತರ್ಜಲ ಹುಡುಕಲು ನೆಲ್ಲಿ ಟೊಂಗೆ ಬಳಸುತ್ತಾರೆ. ಕವಲೊಡೆದ ನೆಲ್ಲಿ ಡೊಂಗೆ ಮುರಿದು ತುದಿಯನ್ನು ಎರಡೂ ಕೈಗಳಿಂದ ಹಿಡಿದು ಜಮೀನಿನಲ್ಲಿ ಸುಡುತ್ತಾರೆ! ಬಾವಿ ಜಾಗ ಸೂಚಿಸಲು ನೆರವಾದ ನೆಲ್ಲಿ ಕೊನೆಗೆ ನೀರು ಶುದ್ಧವಾಗಿಡುವ ಕಾರಣಕ್ಕೆ ಬಾವಿಗೆ ಬೀಳುತ್ತದೆ! ಇಷ್ಟೇ ಅಲ್ಲ, ಮರದಲ್ಲಿ ಬಿಟ್ಟ ನೆಲ್ಲಿಕಾಯಿ ಪ್ರಮಾಣ ಮಳೆ ಭವಿಷ್ಯ ಹೇಳಲು ನೆರವಾಗುತ್ತದೆ. ಟಿಸಿಲಿನ ಬುಡದಿಂದ ತುದಿಯವರೆಗೆ ಪೂರ್ತಿ ಗೊಂಚಲು ಫಲವಿದ್ದರೆ ಮುಂದಿನ ಮಳೆಗಾಲ ಚೆನ್ನಾಗಿ ಸುರಿಯುತ್ತದೆ, ಬುಡದಲ್ಲಿ ಮಾತ್ರ ಫಲವಿದ್ದರೆ ಆರಂಭದಲ್ಲಿ ಮಾತ್ರ, ತುದಿಯಲ್ಲಿ ಫಲವಿದ್ದರೆ ಮಳೆಗಾಲದ ಕೊನೆಯಲ್ಲಿ ಚೆನ್ನಾಗಿ ಮಳೆ ಬೀಳುತ್ತದೆಂಬ ನಂಬಿಕೆಯಿದೆ. ಕೃಷಿಕರು ತಮ್ಮ ಕೃಷಿ ಫಸಲು ನೋಡುವುದು ಬಿಟ್ಟು ಬೆಟ್ಟದ ನೆಲ್ಲಿ ಮರ ನೋಡುತ್ತ ಕಾಲಗತಿ ಅರಿಯಬೇಕೆ? ಪ್ರಶ್ನೆ ಸಹಜ.
 
ಧಾರ್ಮಿಕ ಬಳಕೆಗಳು ಮರದ ಜತೆ ಬೆಸೆದಿವೆ. ಗಣೇಶ ಚೌತಿ ಹಬ್ಬದಲ್ಲಿ ಕಾಡುಫಲಗಳನ್ನು ಸಂಗ್ರಹಿಸಿ ಫಲಾವಳಿ ಕಟ್ಟುವ ಪರಂಪರೆಯಿದೆ. ಇವನ್ನು ಸಂಗ್ರಹಿಸಲು ಮಲೆನಾಡಿನ ಜನ ಕಾಡು ಗುಡ್ಡ ಅಲೆಯುತ್ತಾರೆ. 'ಈ ವರ್ಷ ಹಬ್ಬಕ್ಕೆ ಒಂದೂ ಮರದಲ್ಲಿ ನೆಲ್ಲಿಕಾಯಿ ಸಿಗಲಿಲ್ಲ ಅಥವಾ ಎಲ್ಲೆಡೆ ನೆಲ್ಲಿ ಫಲ ಚೆನ್ನಾಗಿದೆ' ಎಂಬ ಮರದ ಮಾತುಗಳು ಹಳ್ಳಿಗಳಲ್ಲಿ ಹರಿದಾಡುತ್ತದೆ. ಕಾರ್ತಿಕ ಶುದ್ಧ ದ್ವಾದಶಿಯಂದು ಆಚರಿಸುವ ತುಳಸಿ ಹಬ್ಬ ಆಚರಣೆಗೆ ನೆಲ್ಲಿ ಫಲ ತುಂಬಿದ ಟೊಂಗೆ ಬೇಕು.
 
ಹಳ್ಳಿ ಹಬ್ಬದಲ್ಲಿ ಕಾಡು ಫಲದ ಆಡಿಟ್ ಕೆಲಸ ಸರಾಗ ನಡೆಯುವಂತೆ ಹಿರಿಯರು ಸೋಜಿಗದ ನಂಬಿಕೆ ಪೋಣಿಸಿದ್ದಾರೆ!
ನೆಲ್ಲಿ ಸಂತಾನ ಫಲ ಹೇಳುವ ಸ್ವಾರಸ್ಯವೂ ಇದೆ. ನೆಲ್ಲಿಯ ಟಿಸಿಲುಗಳಲ್ಲಿ ಸಾಮಾನ್ಯವಾಗಿ ಗಂಟುಗಳಿರುತ್ತವೆ. ನೆಲ್ಲಿಯ ಎಳೆ ಚಿಗುರುಗಳ ಮೇಲೆ ಕೀಟವೊಂದು ತತ್ತಿ ಇಡುತ್ತದೆ. ಎಳೆಯ ಚಿಗುರುದಂಟಾಗಿ ಬೆಳೆಯುತ್ತಿದ್ದಂತೆ ದಂಟಿನ ತಿರುಳು ತಿನ್ನುತ್ತ ಹುಳು ದಂಟೆನೊಳಗೆ ಬೆಳೆಯುತ್ತದೆ, ಆಗ ದಂಟು ಪುಟ್ಟ ಅಡಿಕೆ ಗಾತ್ರದ ಗಂಟಾಗುತ್ತದೆ. ಇದು ಭ್ರೂಣಲಿಂಗ ಪತ್ತೆಯ ಸಾಧನ!ದಂಟಿನ ಗಂಟು ಒಡೆದು ಅದರೊಳಗಿನ ಹುಳುವಿನ ಬಣ್ಣ ನೋಡಿ ಹುಳು ಕಪ್ಪಾಗಿದ್ದರೆ ಹೆಣ್ಣೆಂದೂ, ಬಳಿಯಾಗಿದ್ದರೆ ಗಂಡು ಮಗು ಜನಿಸುತ್ತದೆಂದೂ ಜನಪದರು ಅರ್ಥೈಸುತ್ತಾರೆ! ಗಂಟಿನ ಹುಳು ಗರ್ಭ ರಹಸ್ಯ ಹೇಳುವುದು ಎಷ್ಟು ನಿಜವೆಂದು ಚರ್ಚೆಗೆ ನಿಲ್ಲಬೇಡಿ, ನಮ್ಮ ಹಳ್ಳಿಗರು ತವರಿಗೆ ಹೆರಿಗೆಗೆ ಬಂದ ಮಗಳೆದುರು ಹೊತ್ತು ಕಳೆಯಲು ನಡೆಯುವ ತಮಾಷೆ ಚಟುವಟಿಕೆಯೂ ಇದಾಗಿರಬಹುದು. ಜನನ ಪೂರ್ವದಲ್ಲಿ ಮಗುವಿನ ಲಿಂಗ ಅರಿಯುವ ಕುತೂಹಲ ನೆಲ್ಲಿ ದಂಟಿನ ಕೀಟ ನೋಡಲು ಕಲಿಸಿದೆ!
 
ನೆಲ್ಲಿಕಾಯಿ ಮಲಬದ್ಧತೆ, ಮೂಲವ್ಯಾಧಿ, ಅಜೀರ್ಣ, ನೆಗಡಿ, ಕೆಮ್ಮು, ನಿಶ್ಯಕ್ತಿ ನಿವಾರಣೆಗೆ ಉಪಯುಕ್ತವೆಂದು ವೈದ್ಯರು ಸಾರಿದ್ದಾರೆ. ಕೂದಲಿನ ಬಣ್ಣ, ಹೊಳಪಿಗೆಲ್ಲ ನೆಲ್ಲಿ ನೆರವಿದೆ. 'ಸಿ' ಜೀವಸತ್ವ ತುಂಬಿದ ಬೆಟ್ಟದ ಫಲ ಉಪ್ಪಿನಕಾಯಿ ಸರಕು. ಒಂದು ಕಿಲೋ ನೆಲ್ಲಿ ಬೀಜದಲ್ಲಿ ೬೮೦೦೦ - ೮೯೦೦೦ ಬೀಜಗಳಿರುತ್ತವಂತೆ! ಬೀಜೋಪಚಾರವಿಲ್ಲದೆ ಇದರ ಬೀಜ ಸಸಿ ಆಗುವುದಿಲ್ಲ. ಬೆಟ್ಟದ ನೆಲ್ಲಿ ಬೆಳೆಯಲು ಕಾಡು ಜಿಂಕೆಯ ನೆರವಿದೆ. ಅವು ನೆಲ್ಲಿಕಾಯಿ ತಿನ್ನುತ್ತವೆ, ಬಳಿಕ ಹಿಕ್ಕೆಯಲ್ಲಿ ಬೀಜ ಹೊರಬೀಳತ್ತವೆ. ಇವು ಸುಲಭದಲ್ಲಿ ಮೊಳಕೆಯೊಡೆಯುತ್ತವೆ. ನಮ್ಮ ಕೂದಲಿನ ಆರೋಗ್ಯಕ್ಕೆ ಶಾಂಪು ಬೇಕು, ಶಾಓಪುವಿಗೆ ನೆಲ್ಲಿಕಾಯಿ ಬೇಕು. ಅಂದರೆ ನಮ್ಮ ಕೂದಲಿನ ಸೌಂದರ್ಯಕ್ಕೆ ಕಾಡಿನ ಜಿಂಕೆ ನೆಲ್ಲಿ ಸಸಿ ಬೆಳೆಸಬೇಕು! ನಿಸರ್ಗದ ಜೀವ ಸರಪಳಿಯ ಸಂಬಂಧ ಅರಿಯುತ್ತ ಹೊರಟರೆ ನಮ್ಮ ಆರೋಗ್ಯ ಕಾಪಾಡಲು ಕಾಡಿನ ಆರೋಗ್ಯ ಸಂರಕ್ಷಿಸುವುದು ಎಷ್ಟು ಮುಖ್ಯವೆಂದು ತಿಳಿಯುತ್ತದೆ.
 
ಅಡಿಕೆ ಏಲಕ್ಕಿ ಸಸಿ ಮಡಿಗಳ ಮುಚ್ಚಿಗೆಗೆ ನೆಲ್ಲಿ ಸೊಪ್ಪು ಬಳಸುತ್ತಾರೆ. ಏಲಕ್ಕಿ ನಾಟಿ ಮಾಡುವಾಗ ಹಿಂಡಿನ ಸಿತ್ತ ನೆಲ್ಲಿ ಸುತ್ತನೆಲ್ಲಿ ಸೊಪ್ಪಿನ ಮುಚ್ಚಿಗೆ ಮಾಡೆತ್ತಾರೆ. ಇದರ ಚಿಕ್ಕ ಚಿಕ್ಕ ಎಲೆಗಳು ಗೊಬ್ಬರ, ತೇವಾಂಶ ರಕ್ಷಕ, ಕಳೆ ನಿಯಂತ್ರಕವಾಗಿ ನೆರವಾಗುತ್ತವೆ. ಇದಕ್ಕೂ ಮುಖ್ಯವಾಗಿ ಸಸ್ಯದ ಒಗರು (ತೊಗರು) ಗುಣ ಮಣ್ಣಿನ ಜಂತು ನಿವಾರಕ, ಫಂಗಸ್‌ ತಡೆಯಾಗಿ ಉಪಯುಕ್ತ ಎನ್ನುತ್ತದೆ ಕೃಷಿ ವಿಜ್ಞಾನ. ಕೃಷಿಕರು ನೆಲ್ಲಿ ಸೊಪ್ಪನ್ನು ಶತಮಾನಗಳ ಹಿಂದಿನಿಂದ ಬಳಸುತ್ತಿದ್ದ ಬಗೆಯನ್ನು ವಿದೇಶಿ ಪ್ರವಾಸಿ ಡಾ.ಫ್ರಾನ್ನಿಸ್‌ ಬುಕಾನನ್‌ ದಾಖಲಿಸಿದ್ದಾರೆ. ಈಗ ನಾವು ಏಲಕ್ಕಿ ಬೀಜದಿಂದ ಸಸಿ ಬೆಳೆಸುತ್ತೇವೆ. 200ವರ್ಷಗಳ ಹಿಂದೆ ಏಲಕ್ಕಿ ಹಿಂಡುಗಳ ಬೇರಿನ ತುಂಡುಗಳನ್ನು ನಾಟಿ ಮಾಡಿದ ಬಳಿಕ ಕಾಡಿನ ನೆಲ್ಲಿ ಸೊಪ್ಪು ಮುಚ್ಚುತ್ತಾರೆಂದು ಕ್ರಿ.ಶ ೧೮೦೧ರ ಮಾರ್ಚ್ ೧೩ರಂದು ಶಿರಸಿಯ ಸೋಂದಾ ಪ್ರದೇಶಕ್ಕೆ ಭೇಟಿ ನೀಡಿದಾಗ ಬುಕಾನನ್ ಬರಿದಿದ್ದಾರೆ! ಈಗಲೂ ಅಡಿಕೆ, ಏಲಕ್ಕಿ ಸಸಿ ಮಡಿಗೆ ನೆಲ್ಲಿ ಸೊಪ್ಪು ಬಳಸಲಾಗುತ್ತಿದೆ.
 
'ಕರತಲಾಮಲಕ' ಸಂಸ್ಕೃತ ಪದ ನಮಗೆ ಚಿರಪರಿಚಿತ, ಅಂಗೈಯಲ್ಲಿನ ನೆಲ್ಲಿಕಾಯಿ ಉಪಮೆ ಹೇಳುವ ಶಬ್ದವನ್ನು ನಾವು ಸುಲಭ ಕಾರ್ಯದ ಸಾಧ್ಯತೆ ಹೇಳಲು ಲಾಗಾಯ್ತಿನಿಂದ ಬಳಸಿದ್ದೇವೆ. ಬೇಸಿಗೆಯ ಉರಿನಲ್ಲಿ ಬಾಯಾರಿ ನೆಲ್ಲಿಕಾಯಿ ತಿಂದು ಬಳಿಕ ನೀರು ಕುಡಿದವರಿಗೆ ಸವಿ ಸವಿ ನೆನಪಿರಬಹುದು. ಬಣ್ಣ, ಗಾತ್ರ, ರುಚಿಯಲ್ಲಿ ಗಮನ ಸೆಳೆದ ವಿಶೇಷಗಳು ವನವಾಸಿಗರಿಗೆ ಗೊತ್ತು. ಬೆಟ್ಟ ಇಳಿದ ಬಹು ಬಳಿಕೆಗೆ ಬಂದ ನೆಲ್ಲಿ ಏಕೋ ಕೈಜಾರು ತ್ತಿದೆ. ಕಾಡು ಮರಗಳ ತುಂಬ ಫಲ ತುಂಬಿರುತ್ತಿದ್ದ ನೆಲೆಯಲ್ಲಿ ಒಂದು ನೆಲ್ಲಿಕಾಯಿ ದೊರೆಯುವುದೂ ಕಷ್ಟವಿದೆ! ಈಗ ಮಲೆನಾಡಿನ ಕಾಡಿಗೆ 'ನೆಲ್ಲಿ ಬರ' ಬಂದಂತೆ ಕಾಣುತ್ತದೆ. ಮರಗಳಿವೆ ಫಲಗಳಿಲ್ಲ!' ಕಳೆದ ಮೂರು ವರ್ಷಗಳ ಸ್ಥಿತಿ ಇದು. ಹೂವರಳುವ ಪ್ರಮಾಣ ಕಡಿಮೆಯಾಗಿದೆ, ಮರ ಖಾಲಿಯಾಗಿದೆ ಎಂದಷ್ಟೇ ನಮ್ಮ ಅರಿವಿಗೆ ಬಂದಿದೆ. ಆದರೆ ನಿಲ್ಲಿ! ನೆಲ್ಲಿ ಮತ್ತೆ ಏನೋ ಹೇಳುತ್ತಿದೆ, ಪರಿವರ್ತನೆಯ ಸೂಕ್ಷ್ಮತೆಗಳನ್ನು ಮಾನವರಿಗಿಂತ ಮುಂಚಿತವಾಗಿ ಗ್ರಹಿಸಿ ನುಡಿಯುತ್ತಿದೆ. ಆದರೆ ಫಲವಿಲ್ಲದೇಮುನಿಸಿ ಕೂತು ಬಹುಶಃ ನಮ್ಮ ವನ ವಕ್ತಾರನಂತೆ ನೆಲ್ಲಿ ನಿಸರ್ಗದ ನಾಳಿನ ನೋಟ ಹೇಳುತ್ತಿರಬಹುದು!
 
 
(ಚಿತ್ರ ಕೃಪೆ: ಗೂಗಲ್)