ಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಈಗಿನ ಬೆಲೆ ಏರಿಕೆಯಲ್ಲಿ ಹಣ್ಣು ಕೊಳ್ಳುವುದು ಮಾತ್ರ ಸಾಧ್ಯವಾಗುತ್ತಿಲ್ಲ. ಬಾಲ್ಯದಲ್ಲಿ ಯಥೇಚ್ಛವಾಗಿ ತಿನ್ನುತ್ತಿದ್ದ ಕೆಲವು ಹಣ್ಣುಗಳು ಪುಕ್ಕಟೆ ಲಭ್ಯ. ಹೆಚ್ಚು ವಿಟಮಿನ್ ಆಗರ. ಅವುಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
೧) ಉಲಿಗೆ ಹಣ್ಣು= ತೊಂಡೆಕಾಯಿಯ ಆಕಾರ. ಹಣ್ಣಾದಾಗ ಹಣ್ಣುತೊಂಡೆಕಾಯಿಯ ಆಕಾರ. ಸ್ವಲ್ಪ ಬೂದಿಮಿಶ್ರಿತ ಹೊರಲೇಪ. ಕಾಯಿ ತಿನ್ನಲು ಬರುವುದಿಲ್ಲ. ಹಣ್ಣು ಹುಳಿಮಿಶ್ರಿತ ಸಿಹಿ. ಸಿಹಿ ಅಂಶ ಕಡಿಮೆ. ಹುಳಿಯ ಅಂಶವೇ ಅಧಿಕ. ಮುಳ್ಳು ಇದ್ದರೂ ಗಿಡದಿಂದ ಕೀಳುವುದು ಸುಲಭ.
೨) ಕಲ್ಲುಸಂಪಿಗೆ ಹಣ್ಣು= ಇದು ಚೆರ್ರಿ ಹಣ್ಣಿನ ಆಕಾರದಲ್ಲಿರುತ್ತದೆ.ಕೆಂಪು ಬಣ್ಣ.
ಬೀಜ ಇರುತ್ತದೆ. ಸಿಹಿಮಿಶ್ರಿತ ಹುಳಿ. ಮಾಗಿದ ಹಣ್ಣು ತುಂಬಾ ಸಿಹಿ. ಮರದ ತುಂಬಾ ದೊಡ್ಡ ದೊಡ್ಡ ಮುಳ್ಳು. ಪಕ್ಕದಲ್ಲೊಂದು ಸಣ್ಣ ಮರವಿದ್ದರೆ ಅದನ್ನು ಹತ್ತಿ ಈ ಹಣ್ಣನ್ನು ಕೊಯ್ಯುವುದು ಸೂಕ್ತ. ಮರ ಹೆಚ್ಚು ಎತ್ತರ ಹೋಗುವುದಿಲ್ಲವಾದ್ದರಿಂದ ದೋಟಿಯಿಂದ ಕೊಯ್ಯಬಹುದು.
೩) ಕಬಳಿಹಣ್ಣು= ಉಪ್ಪಿನಕಾಯಿ ಹಾಕುವ ಕಬಳೆ ಅಲ್ಲ. ಇದು ಗಟ್ಟಿಯಾದ ಮುಳ್ಳುಸಹಿತ ಬಳ್ಳಿಯಂತೆ ಇರುವ ಗಿಡದಲ್ಲಿ ಬಿಡುತ್ತದೆ. ಕಾಫಿ ಬಣ್ಣ. ಕಾಳುಮೆಣಸಿನಂತೆ ಅಥವಾ ಅದಕ್ಕಿಂತ ಸ್ವಲ್ಪ ದೊಡ್ಡದಾಗಿರುತ್ತದೆ. ಕಾಳುಮೆಣಸಿನಲ್ಲಿ ನೆರಿಗೆಗಳಿದ್ದರೆ ಇದರಲ್ಲಿ ಇರುವುದಿಲ್ಲ. ಇದರ ಸಿಪ್ಪೆಯನ್ನು ಮಾತ್ರ ತಿನ್ನಬಹುದು. ಬೀಜ ದೊಡ್ಡದಾಗಿರುತ್ತದೆ. ಹಣ್ಣು ಸಿಹಿಯಾಗಿರುತ್ತದೆ.
೪) ಮುಳ್ಳು ಹಣ್ಣು (ಬ್ರಹ್ಮರಲೆ ಹಣ್ಣು)= ಗಿಡದ ತುಂಬಾ ಮುಳ್ಳು. ಕಡಲೆಕಾಳಿನ ಗಾತ್ರದಲ್ಲಿ ಗೊಂಚಲು ಗೊಂಚಲಾಗಿ ಬಿಡುತ್ತದೆ. ಹಳದಿ ಬಣ್ಣ. ತುಂಬಾ ಸಿಹಿ ಮತ್ತು ಪರಿಮಳ. ತಿನ್ನುವಾಗ ಹಿಟ್ಟುಹಿಟ್ಟಾಗಿ ಹಲ್ಲಿಗೆ ಸಿಗುತ್ತದೆ.
೫) ಕಾಕಿ ಹಣ್ಣು= ಇದು ತೋಟದಲ್ಲಿ ಅಥವಾ ಮನೆಯ ಹಿತ್ತಲಿನಲ್ಲಿ ಬೆಳೆಯುವ ಗಿಡ. ಇದರ ಸೊಪ್ಪು ತಂಬುಳಿ ಮಾಡಲು ಬರುತ್ತದೆ. ತಂಬುಳಿ ಗಾಢ ಹಸಿರು ಬಣ್ಣವಾಗುತ್ತದೆ. ಹಣ್ಣು ದೊಡ್ಡಕಾಳುಮೆಣಸಿನ ಗಾತ್ರದ್ದಾಗಿದ್ದು ತುಂಬಾ ಮೃದು. ಕಪ್ಪು ಬಣ್ಣ. ಇಡಿಯಾಗಿ ತಿನ್ನಬಹುದು. ಇದನ್ನು ನಗರಗಳ ಮನೆಯ ಕಾಪೌಂಡ್ ಒಳಗೆ ಕೂಡ ಬೆಳೆಯಬಹುದು.
೬) ನೇರಲೆ ಹಣ್ಣು= ನೇರಳೆ ಹಣ್ಣು. ಇದಕ್ಕೆ ಹೆಚ್ಚಿನ ವಿವರಣೆ ಅಗತ್ಯವಿಲ್ಲ. ನಗರಗಳಲ್ಲಿ ಮಾರುವುದಕ್ಕೆ ಸಿಗುವ ಹಣ್ಣು ತುಂಬಾ ದೊಡ್ಡದಿರುತ್ತದೆ. ಇದಕ್ಕಿಂತಲೂ ಚಿಕ್ಕ ಗಾತ್ರದ ಹಣ್ಣು ಕಾಡಿನಲ್ಲಿ ದೊರೆಯುತ್ತದೆ. ತಿನ್ನಲು ತುಂಬಾ ರುಚಿ. (ನೇರಲೆ ವನದಲ್ಲಿ ಮಂಗಗಳಂತೆ ಮರ ಏರಿ ಎಂಟು ಹತ್ತು ಸ್ನೇಹಿತರು ಒಟ್ಟಾಗಿ ತಿಂದು ಬೀಜವನ್ನು ಕೆಳಗೆ ಉಗುಳಿ ಮನೆಗೆ ಬಂದು ನಾಲಿಗೆಯಲ್ಲಾದ ಬಣ್ಣವನ್ನು ತೋರಿಸುತ್ತಿದ್ದೆವು)
ಮಲೆನಾಡಿನ ಶ್ರೀಮಂತ ಹಣ್ಣುಗಳು
August 4, 2012 - 8:35pm
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಮಲೆನಾಡಿನ ಶ್ರೀಮಂತ ಹಣ್ಣುಗಳು
ನಂಜುಂಡ ಅವ್ರೆ
ಬಹು ದಿನಗಳ ನಂತರ ಒಂದು ಉಪಯುಕ್ತ ಮಾಹಿತಿಯ ಬರಹದೊಂದಿಗೆ ಮರಳಿರುವಿರಿ...
ಮೊದಲಿಗೆ ನಾ ಅವಸರದಲ್ಲಿ ಶೀರ್ಶಿಕೆ ಓದಿದ್ದೆ ಹಾಗಾಗಿ ಅದು ನನಗೆ
'ಮಲೆನಾಡಿನ ಶ್ರೀಮಂತ ಹೆಣ್ಣುಗಳು ' ಆಗಿ....:()))))
ನೀವ್ ಹೇಳಿದ ಹಣ್ನುಗಳಲ್ಲಿ ನೇರಳೆ ಹಣ್ಣು ಮಾತ್ರ ಎಲ್ಲೆಡೆ ಸಿಗುವದು ಅನ್ಸುತ್ತೆ... ಬಾಕಿ ಎಲ್ಲ ತಿನ್ನಲು ರುಚಿ ನೋಡಲು ಮಲೆ ನಾಡಿಗೆ ಬರಬೆಕು...
ಬರುವ...
\|/
ಉ: ಮಲೆನಾಡಿನ ಶ್ರೀಮಂತ ಹಣ್ಣುಗಳು
>>ಮೊದಲಿಗೆ ನಾ ಅವಸರದಲ್ಲಿ ಶೀರ್ಶಿಕೆ ಓದಿದ್ದೆ ಹಾಗಾಗಿ ಅದು ನನಗೆ
'ಮಲೆನಾಡಿನ ಶ್ರೀಮಂತ ಹೆಣ್ಣುಗಳು ' ಆಗಿ....:()))))<<<
ಪಾಪ, ಸಪ್ತಗಿರಿಯವರಿಗೆ ನಿರಾಶೆ ಮಾಡಿದಿರಿ, ನಂಜುಂಡ ಅವರೆ. ಇದರೊಂದಿಗೆ ಹಣ್ಣಿನ ಫೋಟೋಗಳನ್ನೂ ಕೂಡಾ ಹಾಕಿದ್ದರೆ ಸಪ್ತಗಿರಿಯವರಿಗೆ ಪರಪಾಟು ಆಗುತ್ತಿರಲಿಲ್ಲ ಮತ್ತು ಅದರೊಂದಿಗೆ ನಮ್ಮಂತಹ ಬಯಲು ಸೀಮೆಯವರಿಗೆ ಆ ಹಣ್ಣುಗಳ ಪರಿಚಯವಾಗುತ್ತಿತ್ತು. ಮಲೆನಾಡಿನ ಹಣ್ಣುಗಳ ಬಗೆಗಿನ ಸ್ವಾರಸ್ಯಕರ ಲೇಖನಕ್ಕೆ ಧನ್ಯವಾದಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ಮಲೆನಾಡಿನ ಶ್ರೀಮಂತ ಹಣ್ಣುಗಳು
ಶ್ರೀಧರ್ ಅವರೇ, ಸಪ್ತಗಿರಿಯವರಿಗಾಗಿಯೇ ಮತ್ತೊಂದು ಲೇಖನ ಬರೆಯಹುದೇನೋ... ಫೋಟೋ ಸಮೇತ ಲೇಖನ ಬರೆಯುವುದು ಮಾತ್ರ ಸಾಧ್ಯವಿಲ್ಲ !
ಉ: ಮಲೆನಾಡಿನ ಶ್ರೀಮಂತ ಹಣ್ಣುಗಳು
<ಇದರೊಂದಿಗೆ ಹಣ್ಣಿನ ಫೋಟೋಗಳನ್ನೂ ಕೂಡಾ ಹಾಕಿದ್ದರೆ ಸಪ್ತಗಿರಿಯವರಿಗೆ ಪರಪಾಟು ಆಗುತ್ತಿರಲಿಲ್ಲ> :) :) :)
ಸಗಿಯವ್ರಿಗೆ ಆ ರೀತಿ ಕಂಡಿದ್ದು ಸಹಜವೇ!
ನಂಜುಂಡವ್ರೆ, ಕೆಲವು ಗೊತ್ತಿಲ್ಲದ ಹಣ್ಣುಗಳ ಬಗ್ಗೆ ತಿಳಿಸಿದ್ದೀರಿ. ಧನ್ಯವಾದ
ಉ: ಮಲೆನಾಡಿನ ಶ್ರೀಮಂತ ಹಣ್ಣುಗಳು
ಈ ಪಟ್ಟಿಗೆ ಸೇರಿಸಬಹುದಾದ ಇನ್ನೊಂದಿಷ್ಟು ಹಣ್ಣುಗಳೆಂದರೆ:
* ಕರ್ಜಿ ಹಣ್ಣು: ಗಾಢ ಕೆಂಪು ಅಥವ ಕಂದು ಬಣ್ಣದ ಈ ಹಣ್ಣು ಮಳೆಗಾಲದಲ್ಲಿ ಸಿಗುತ್ತದೆ.
* ಪೆಪ್ಪರ್ಮಿಂಟ್ ಹಣ್ಣು: ಕೆಂಪುಬಣ್ಣದ ಈ ಹಣ್ಣು ಹೊರಗೆ ಗಟ್ಟಿ ಕವಚವನ್ನು ಹೊಂದಿದ್ದು ಒಳಗೆ ಸಿಹಿಯಾದ ಲೋಳೆಯಿಂದ ಆವೃತವಾದ ಬೀಜವನ್ನು ಹೊಂದಿರುತ್ತದೆ.
* ಪನ್ನೇರಳೆ ಹಣ್ಣು: ಬಿಳಿಯ ಬಣ್ಣದ ಹಣ್ಣು. ಬಹುಷಃ ಇದನ್ನು ಬೆಂಗಳೂರಿನಲ್ಲಿಯೂ ಇದು ಆಗ್ಗಾಗ್ಗೆ ಕಾಣಸಿಗಬಹುದು.
ಉ: ಮಲೆನಾಡಿನ ಶ್ರೀಮಂತ ಹಣ್ಣುಗಳು
ಧನ್ಯವಾದಗಳು ಶಂಕರ್ ಪ್ರಸಾದ್ ರವರೇ,
ಕರ್ಜಿ ಹಣ್ಣು ತುಂಬಾ ಚೆನ್ನಾಗಿರುತ್ತದೆ. ಇದು ಕೈಗೆ ಸಿಗುವಂತೆ ಬೆಳೆಯುತ್ತದೆ ಮತ್ತು ಗಿಡದಲ್ಲಿ ಮುಳ್ಳಿನ ಇರುವುದಿಲ್ಲವಾದುದರಿಂದ ನನಗೆ ತಿನ್ನಲು ಸಿಕ್ಕಿದ್ದು ಕಡಿಮೆ. ಹಾಗಾಗಿ ಮರೆತೆ. ಪೆಪ್ಪರ್ ಮೆಂಟ್ ಹಣ್ಣು ನನ್ನ ಗಮನಕ್ಕೆ ಬಂದಿಲ್ಲ. ಮಾಹಿತಿಗಾಗಿ ಧನ್ಯವಾದಗಳು. ಇನ್ನೊಂದು ಮುಖ್ಯವಾದ ಹಣ್ಣು ಮರೆತಿದ್ದೆ. ರಂಜದ ಹಣ್ಣು. ದೊಡ್ಡದಾದ ಮರದಲ್ಲಿ ಬಿಡುತ್ತದೆ. ಪರಿಮಳಯುಕ್ತ ಹೂವು ಕೆಳಗೆ ಬಿದ್ದಿರುತ್ತದೆ. ಆ ಹೂವನ್ನು ನೋಡಿದರೆ ಒಂದಾದರೂ ಮುಡಿಯಲೇಬೇಕೆಂಬುದು ನಮ್ಮ ಹಳ್ಳಿಗರ ನಂಬಿಕೆ. ಹಣ್ಣು ಹಳದಿ ಬಣ್ಣದಲ್ಲಿರುತ್ತದೆ. ನನಗನಿಸುತ್ತದೆ..... ಈ ಎಲ್ಲಾ ಹಣ್ಣುಗಳನ್ನು ತಿಂದು ಪುಕ್ಕಟೆಯಾಗಿ ಪೋಷಕಾಂಶವನ್ನು ಪಡೆಯುವುದು ಹಳ್ಳಿಯವರಿಗೆ ಸುಲಭ. ಆದರೂ ಅಸಡ್ಡೆ ಮಾಡುತ್ತಿದ್ದಾರೆ.
ಉ: ಮಲೆನಾಡಿನ ಶ್ರೀಮಂತ ಹಣ್ಣುಗಳು
ಬಾಲ್ಯದ ದಿನಗಳು ನೆನಪಾದವು :) ಈಗಲೂ ನಾನು ಊರಿಗೆ ಹೋದಾಗ ಈ ಹಣ್ಣುಗಳನ್ನು ಹುಡುಕುತ್ತೇನೆ.
ಗುಡ್ಡದ ದಾಸವಾಳ- ಕಡಲೆಕಾಳಿನ ಗಾತ್ರದಲ್ಲಿ ಗೊಂಚಲು ಗೊಂಚಲಾಗಿ ಬಿಡುತ್ತದೆ. ಕೆಂಪು ಬಣ್ಣ. ಇದರ ಸಿಪ್ಪೆಯನ್ನು ಮಾತ್ರ ತಿನ್ನಬಹುದು. ಬೀಜ ದೊಡ್ಡದಾಗಿರುತ್ತದೆ.
ಉ: ಮಲೆನಾಡಿನ ಶ್ರೀಮಂತ ಹಣ್ಣುಗಳು
ಸಂತೋಷ್ ಶೆಟ್ಟಿಯವರೇ, ನೀವು ಹೇಳಿದ್ದು ನಿಜ. ಗುಡ್ಡದ ದಾಸವಾಳ ಅತ್ಯುತ್ತಮ ಹಣ್ಣು. ಅದರ ಹೂವಿನ ತಂಬುಳಿಯನ್ನು ನಾವು ಮಾಡುತ್ತೇವೆ. ಇದು ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೀಗೆ ಗುಡ್ಡ ಕಾಡುಗಳನ್ನು ಹೊಕ್ಕರೆ ತರಕಾರಿ ಹಣ್ಣುಗಳನ್ನು ಕೊಳ್ಳುವುದೇ ಬೇಡ. ಹಣ ಹಾಗೂ ಆರೋಗ್ಯ ಎರಡೂ ಉಳಿಯುತ್ತದೆ. ಧನ್ಯವಾದಗಳು.
ಉ: ಮಲೆನಾಡಿನ ಶ್ರೀಮಂತ ಹಣ್ಣುಗಳು
:()) (ಜೀ ಅವರ ಪ್ರತಿಕ್ರಿಯೆ...!1)
\|/
ಉ: ಮಲೆನಾಡಿನ ಶ್ರೀಮಂತ ಹಣ್ಣುಗಳು
ಕರಾವಳಿಯಲ್ಲೂ ಸುಮಾರು ಹಣ್ಣುಗಳು ಸಿಗುತ್ತವೆ. ಕೇಪಳ, ಕರಂಡೆ, ಜಂಬೂ ನೇರಳೆ ಹೀಗೆ. ಕೆಲವು ಹೆಸರುಗಳು ತುಳುವಿನಲ್ಲಿದೆ. ಕನ್ನಡ ಪದ ತಿಳಿದಿಲ್ಲ. ಶಾಲೆಗೆ ಹೋಗುವ ದಾರಿಯಲ್ಲಿ ಸುಮಾರು ಸಿಗುತ್ತಿದ್ದವು. ತಿನ್ನುತ್ತಿದ್ದೆವು ಕೂಡ. ಕೆಲವು ಕಾಯಿಗಳ ಉಪ್ಪಿನಕಾಯಿ ಕೂಡ ಮಾಡುತ್ತಾರೆ.
ಉ: ಮಲೆನಾಡಿನ ಶ್ರೀಮಂತ ಹಣ್ಣುಗಳು
ಪರಿಚಯಾತ್ಮಕ ಲೇಖನಕ್ಕೆ ಧನ್ಯವಾದ, ನಂಜುಂಡರೇ. ಮಲೆನಾಡಿನದೇ ವಿಶೇಷ ತರಕಾರಿಗಳೂ ಇವೆ. ಅವನ್ನೂ ಪರಿಚಯಿಸಬಹುದು.