ಮಾತೃಭಾಷೆ

ಮಾತೃಭಾಷೆ

ಮಾತೃಭಾಷೆ

ವ್ಯಕ್ತಿಗೆ ಅರ್ಥವಾಗುವ ಭಾಷೆಯಲ್ಲಿ ನೀವು ಮಾತನಾಡಿದರೆ ವಿಷಯ ಆತನ ತಲೆಗೆ ಹೋಗುತ್ತದೆ . ಆತನ ಮಾತೃಭಾಷೆಯಲ್ಲಿ ಹೇಳಿದರೆ ಅದು ಆತನ ಹೃದಯ ತಲುಪುತ್ತದೆ. " ಇದು ದಕ್ಷಿಣ ಆಫ್ರಿಕಾದ ಗಾಂಧಿ ಎಂದು ಗುರುತಿಸಲ್ಪುಡುವ ನೆಲ್ಸನ್ ಮಂಡೇಲಾ ರವರ ಉಕ್ತಿ .

ನಿಜ ಮಾತೃಭಾಷೆ. ಯಾ 'ತಾಯಿನುಡಿ' ಎಂದರೆ ನಾವು ಬಾಲ್ಯದಲ್ಲಿ ಪ್ರಥಮವಾಗಿ ಕಲಿತ ಭಾಷೆ. ಅದು ನಮ್ಮ ಜೀವನಾಡಿ.ನಮ್ಮ ಭಾವನೆ ಹಾಗು ವಿಚಾರ ಗಳನ್ನು ಮನದಟ್ಟಗುವಂತೆ ಪರಸ್ಪರ ವಿನಿಮಯಗೊಳಿಸುವ ಪ್ರಭಲ ಸಂವಹನ ಮಾಧ್ಯಮ. ಮಾತೃಭಾಷೆ. ಮೂಲಕ ಕಲಿತರೆ ಯಾವುದೇ ವಿಚಾರ ಬೇಗ ಹೃದ್ಯವಾಗುತ್ತದೆ. ನಮ್ಮ ರಾಜ್ಯ ಬಿಟ್ಟು ಹೊರಗೆ ಹೋದಾಗ ಮಾತೃಭಾಷೆಯ ಮಹತ್ವ ಏನು ಎಂಬುದು ನಮಗೆ ಗೊತ್ತಾಗುತ್ತದೆ.
ನಾನು 1985 ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾಲಯದ ಸ್ನಾತಕೊತ್ತರ ಡಿಪ್ಲೋಮಾ ಪರೀಕ್ಷೆ ನಿಮಿತ್ ಚೆನ್ನೈ ಹೋಗಿದ್ದೆ. ನನ್ನ ಜೊತೆ ನನ್ನ ಸ್ನೇಹಿತ ಇದ್ದ. ಅಲ್ಲಿ ಒಂದು ವಾರ ತಂಗಿದ್ದೆವು. ಒಂದು ದಿನ ಮಹಾಬಲಿಪುರಂ ಹೋಗಲು ಚೆನ್ನೈ ಬಸ್ ನಿಲ್ದಾಣದಲ್ಲಿ ಬಸ್ ಗೆ ಕಾಯುತ್ತಿದ್ದೆವು. ಬಸ್ ಗೆ ತಗಲು ಹಾಕಿದ ಬಹುತೇಕ ನಾಮ ಫಲಕಗಳು ತಮಿಳು ನಲ್ಲಿ ಬರೆದಿದ್ದೆವು .ನಮಗೆ ತಮಿಳು ಓದಲಿಕ್ಕೆ ಬರುತ್ತಿರಲಿಲ್ಲ.ನನ್ನ ಸ್ನೇಹಿತ ಸಾಧಾರಣ ಮಟ್ಟಿಗೆ ತಮಿಳು ಮಾತಾಡುತ್ತಿದ್ದರು .ನನ್ನ ಸ್ನೇಹಿತ ಪಕ್ಕಕ್ಕೆ ನಿಂತ ವ್ಯಕ್ತಿ ಹತ್ತರ ಮಹಾಬಲಿಪುರಂ ಬಸ್ ಗಾಗಿ ವಿಚಾರಿಸಿದ. ಆ ವ್ಯಕ್ತಿ ಕೊಟ್ಟ ಉತ್ತರ ಕೇಳಿ ನಾವು ಒಂದು ಕ್ಷಣ ದಂಗಾದೆವು. ಆತ " ತಮಿಳು ಮಾತಾಡುತ್ತಿರ.ಬಸ್ ಬೋರ್ಡ್ ಓದಿ ಹೋಗಿ " ಎಂದು ಹೇಳಿದ್ದ. ತಮಿಳು ಮಾತಾಡಲಿಕ್ಕೆ , ಓದಲಿಕ್ಕೆ ಬಾರದೆ ಇದ್ದವರಿಗೆ ಚೆನ್ನೈ ನಲ್ಲಿ ಬಾಳಲಿಕ್ಕೆ ಆಗುವದಿಲ್ಲಎಂಬ ಅರಿವು ಆ ಒಂದು ವಾರದಲ್ಲಿ ಆಯಿತು .
ನಾನು 1986 ರಿಂದ 1994 ರ ವರೆಗೇ ಅಂದರೆ ಸುಮಾರು 13 ವರುಷ ನಮ್ಮ ದೇಶದರಾಜಧಾನಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದೆ. ಅಂದು ,ದೆಹಲಿಯಲ್ಲಿ ಕನ್ನಡಿಗರು ಭೇಟಿಯಾದಾಗ, ಅವರೊಂದಿಗೆ ಕನ್ನಡದಲ್ಲಿ ಮಾತಾಡಿದಾಗ ಸಿಗುವ ಆನಂದ ಮಹಾದಾನಂದ.ಆಕಾಶಕ್ಕೆ ಮೂರೆ ಗೇಣು ! ಕನ್ನಡ ಅಕ್ಷರಗಳು ಕಂಡರೆ ಒಮ್ಮೆಲೇ ಖುಷಿ ಹಾಗೂ ಹೆಮ್ಮೆ. ದೆಹಲಿಯಲ್ಲಿ ಅಂಗಡಿಗಳನ್ನು ಹುಡುಕಿ ಕನ್ನಡ ಪತ್ರಿಕೆಗಳನ್ನು ಕೊಂಡು ಓದಿದಾಗ ಆಗುವ ಖುಷಿ ಹೇಳಲಾಗದು. ಕನ್ನಡ ಪದಗಳು ಕಿವಿಗೆ ವಿಶೇಷ ಇಂಪು ನೀಡುತ್ತಿತ್ತು.
. ಆ ಕಾಲದಲ್ಲಿ ಬುಧವಾರ ರಾತ್ರಿ 8 ಘಂಟೆಗೆ ಡಿ . ಡಿ . ನ್ಯಾಷನಲ್ ಟಿ . ವಿ ಚಾನೆಲ್ ನಲ್ಲಿ ಪ್ರಸಾರವಾಗುವ ಒಂದೇಒಂದು ಕನ್ನಡ ಗೀತೆಗಾಗಿ ವಾರಾಇಡೀ ಕಾಯುತ್ತಿದ್ದೆವು. ತಿಂಗಳಿಗೊಮ್ಮೆಯೋ ಎರಡು ತಿಂಗಳಿ ಗೊಮ್ಮೆಯೋ, ಭಾನುವಾರ ದೂರದರ್ಶನ ದಲ್ಲಿ ಪ್ರಸಾರ ವಾಗುವ ಕನ್ನಡ ಚಲನ ಚಿತ್ರ ವಿಕ್ಷಿಸಲು ಕಾತರದಿಂದ ಎದುರು ನೋಡುತ್ತಿದ್ದೆವು
ದೆಹಲಿಯಲ್ಲಿ ಸಾವಿರಾರು ಕನ್ನಡ ಕುಟುಂಬಗಳು ವಾಸ ವಾಗಿವೆ. ಇವರೆಲ್ಲರೂ ಉದ್ಯೋಗಕ್ಕಾಗಿ, ರಾಜಕಾರಣಕ್ಕಾಗಿ, ವ್ಯಾಪಾರಕ್ಕಾಗಿ, ಓದಿಗಾಗಿ ಇನ್ನಿತರ ಕಾರಣಗಳಿಂದ ದೆಹಲಿ ಗೆ ಬಂದವರು ಇಲ್ಲೇ ವಾಸ್ತವ್ಯ ಹೂಡಿದರು .ದೆಹಲಿಯಲ್ಲಿ ಚದುರಿ ಹೋಗಿದ್ದ ಬೆರಳಎಣಿಕೆಯ ಕನ್ನಡಿಗರೆಲ್ಲ ಸೇರಿ 1948 ರಲ್ಲಿ" ದೆಹಲಿ ಕರ್ನಾಟಕ ಸಂಘ " ಎಂಬ ಹೆಸರಿನ ಪುಟ್ಟ ಸಂಘವೊಂದು ಕಟ್ಟಿದರು. ದೆಹಲಿ ರಾಮಕೃಷ್ಣ ಪುರಂ ನಲ್ಲಿರುವ ಕರ್ನಾಟಕ ಸಂಘ ಇದೀಗ ನಾಡು, ಹೊರನಾಡು ಹಾಗೂ ವಿದೇಶಗಳಲ್ಲಿ ಸಾವಿರಾರು ಮಂದಿ ಆಜೀವ ಸದಸ್ಯರನ್ನು ಹೊಂದಿ ಹೆಮ್ಮರ ವಾಗಿ ಬೆಳೆದಿದೆ. . ದೆಹಲಿಯಲ್ಲಿ ಕನ್ನಡ ಸಾಹಿತ್ಯ , ಸಂಸ್ಕೃತಿ ಮತ್ತು ಕಲೆ ಇವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿದೆ . ದೆಹಲಿಯಲ್ಲಿನ ಕನ್ನಡಿಗರು ಒಂದೆಡೆ ಪರಸ್ಪರ ಬೆರೆತು ನಲಿದು ಇಲ್ಲಿ ಕನ್ನಡದ ಕಂಪು ಪಸರಿಸಲು ಅನುವು ಮಾಡಿಕೊಟ್ಟ ಕನ್ನಡ ಸಂಗಮ ಇದು .
.
ನಾವೂ ಈ ಸಂಘದ ಆಜೀವ ಸದಸ್ಯರು .ದೆಹಲಿಗೆ ಹೋದ ಹೊಸತರಲ್ಲಿ ನಾನು ನನ್ನ ಮಡದಿ ಮತ್ತು ಇಬ್ಬರು ಹುಡುಗರನ್ನು ಕರೆದುಕೊಂಡು ಸಂಘದ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೋಗಿದ್ದೆ. ಸಂಘದ ಒಳಗೆ ಪ್ರವೇಶಿಸುತ್ತಿದಂತೆ ಏನೋ ಒಂದು ಥರಾ ಮುಜುಗರ ಅನಿಸಿತು . ಕನ್ನಡಿಗರ ಸಂಘನೋ , ಅನ್ಯಭಾಷಿಕರ ಸಂಘನೋ ಎಂಬ ಅನುಮಾನ ಬಂತು. ಕಾರಣ ಕಾರ್ಯಕ್ರಮಕ್ಕೆ ಆಗಮಿಸಿದವರಲ್ಲಿ ಕನ್ನಡ ಕ್ಕಿಂತ ಹೆಚ್ಹಾಗಿ ಹಿಂದಿ ಮತ್ತು ಇಂಗ್ಲಿಷ್ ಮಾತಾಡುತ್ತಿದ್ದರು.
ಮಕ್ಕಳಿಗಾಗಿ ಏರ್ಪಡಿಸಿದ ಪಂದ್ಯಾವಳಿ ವೀಕ್ಷಿಸಲು ಆಟದ ಮೈದಾನಕ್ಕೆ ಹೋದೆವು.ಓಟದಸ್ಪರ್ದೆ ಯಲ್ಲಿ ಭಾಗವಹಿಸಿದ ತಮ್ಮ ಮಕ್ಕಳನ್ನು ಪಾಲಕರು " ಬೇಟೇ , ತೇಜ ಭಾಗ , ತೇಜ ಭಾಗ (ಮಗಾ , ಅತಿ ವೇಗದಲ್ಲಿ ಓಡು , ವೇಗ ಓಡು ) ಎಂದು ಕೆಲವರು ಹಿಂದಿಯಲ್ಲಿ ಹುರಿದುಂಬಿಸಿದರೆ ಇನ್ನೂ ಕೆಲವರು ಇಂಗ್ಲಿಷ್ ನಲ್ಲಿ ಪ್ರೋತ್ಸಾಹಿಸುತ್ತಿದ್ದರು .

ಪಂದ್ಯಾವಳಿ ಮುಕ್ತಾಯ ಆದಮೇಲೆ ಆಶುಭಾಷಣ , ರಸಪ್ರಶ್ನೆ ಸ್ಪರ್ದೆಗಳು ನಡೆದವು. ನಾನು ಆಶುಭಾಷಣ ಸ್ಪರ್ದೆಯಲ್ಲಿ ಭಾಗವಹಿಸಿದ್ದೆ . ನನಗೆ " ದೆಹಲಿ ಕನ್ನಡಿಗ" ಎಂಬ ವಿಷಯದ ಮೇಲೆ ಮಾತಾಡುವ ಅವಕಾಶ ಸಿಕ್ಕಿತು. ಕಾರ್ಯಕ್ರಮಕ್ಕೆ ಬಂದ ಕ್ಷಣದಿಂದ ಇಲ್ಲಿವರೆಗೆ ಕಂಡ ಕನ್ನಡಿಗರ ಕನ್ನಡಾಭಿಮಾನ, ದೆಹಲಿಯಲ್ಲಿ ನನ್ನ ವೈಯಕ್ತಿಕ ಅನುಭವ ವನ್ನು ಭಾಷಣ ಉದ್ದಕ್ಕೂ ಬಣ್ಣಿಸಿದೆ. ಪ್ರಥಮ ಪುರಸ್ಕಾರ ಪಡೆದೆ.
ದೆಹಲಿಯಲ್ಲಿ ದಕ್ಷಿಣ ಭಾರತದ ವರಿಗೆ ಅಂದರೆ ತಮಿಳು, ಮಲಯಾಳಂ, ತೆಲಗು, ಕನ್ನಡ ದವರಿಗೆಲ್ಲ " ಮದರಾಸಿ" ಎಂದು ಕರೆಯುತ್ತಾರೆ. ಕಾಲೇಜು ಗಳಲ್ಲಿ ಭೂಗೋಳ ವಿಷಯ ಬೋಧನೆ ಮಾಡುವ ಉಪನ್ಯಾಸಕ ರೂ ಸಹ ಕರ್ನಾಟಕ , ಕೇರಳ , ಆಂಧ್ರ ಪ್ರದೇಶ್ , ತಮಿಳ್ ನಾಡು ರವರಿಗೆ" ಮದರಾಸಿ" ಎಂದು ಗುರುತಿಸುತ್ತಾರೆ .
ಆದ ಕಾರಣ ಅನ್ಯಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಚೇರಿ ಯಲ್ಲಿ ಅಕ್ಕ ಪಕ್ಕ ಕುಳಿತು ಕೆಲಸ ಮಾಡುವ ಸಹದ್ಯೋಗಿ ಕನ್ನಡಿಗರು ಪರಸ್ಪರ ಕನ್ನಡ ದಲ್ಲಿ ಮಾತಾಡಲು ಸಂಕೋಚ ಪಡುತ್ತಾರೆ . ಆದರೆ ತಮಿಳರು, ಮಲಯಾಳಿಗಳು, ಅವರ ನಾಡಿನ ಜನರ ಜೊತೆ ಯಾವುದೇ ಮುಜುಗರ ಇಲ್ಲದೆ ತಮ್ಮ ಮಾತೃಭಾಷೆಯಲ್ಲಿ ಮಾತನಾಡುತ್ತಾರೆ. .
ಒಂದು ದಿನ ದೆಹಲಿ – ನೆಹರೂ ಪ್ಲೇಸ್ ನಲ್ಲಿ ನಮ್ಮ ರಾಜ್ಯದಲ್ಲಿ ಪ್ರಧಾನ ಕಚೇರಿ ಇರುವ ಬ್ಯಾಂಕ್ ಶಾಖೆಗೆ ಹೋಗಿದ್ದೆ. ಕೌಂಟರ ನಲ್ಲಿ ನಮ್ಮ ರಾಜ್ಯದವರಾದ ಬ್ಯಾಂಕ್ ಸಿಬ್ಬಂದಿ ಗೆ ದಯಮಾಡಿ ಪಾಸ್ ಬುಕ್ ಎಂಟ್ರಿ ಮಾಡಿ ಕೊಡಲು ಕನ್ನಡದಲ್ಲಿ ವಿನಂತಿ ಮಾಡಿದೆ. ಅವರು "ಕಲ್ ತೀನ್ ಬಜೇ ಆಕರ ಲೇ ಜಾನಾ ( ನಾಳೆ ಮೂರು ಘಂಟೆಗೆ ಬಂದು ತಕ್ಕೊಂಡು ಹೋಗು ) ಅಂತಾ ಹಿಂದಿಯಲ್ಲಿ ಹೇಳಿ ಪಾಸ್ ಬುಕ್ ಇಸಕೊಂಡರು.ಕನ್ನಡ ದಲ್ಲಿ ಮಾತಾಡಲು ಮುಜುಗರ ಆಗಿರಬೇಕು ಅತವ ಅನ್ಯಭಾಷಿಕೆಯರ್ ಜೊತೆ ಮಾತಾಡುತ್ತ ಆದ ಅಭ್ಯಾಸ ಬಲ ಇರಬೇಕು.ಕನ್ನಡ ಮಾತಾನಾಡಿದರೆ ಎಲ್ಲಿ ತಮ್ಮ ಗೌರವ ಕಡಿಮೆಯಾಗುತ್ತದೆಂಬ ತಪ್ಪು ಕಲ್ಪನೆಯಿಂದಲೂ ಇರಬಹುದು.
ನಮ್ಮ ನಾಡಿಗೆ ಬಂದ ಕನ್ನಡೇತರ ಭಾಷಿಕರಿಗೆ ಕನ್ನಡ ದಲ್ಲಿ ಮಾತಾಡಿ ಎಂದು ನಾವು ಒತ್ತಾಯ ಮಾಡುವದಿಲ್ಲ . "ಕನ್ನಡ ಗೋತಿಲ್ಲ" ಎಂದು ಹೇಳಿದ ತಕ್ಷಣ ನಾವು ಅವರ ಭಾಷೆ ಯಲ್ಲಿ ಸಂಭಾಷಣೆ ಶುರು ಮಾಡುತ್ತೇವೆ . ಅಷ್ಟೇಯಲ್ಲ "ನಾವ್ಯಾಕೆ ಅವರ ಜೊತೆ ಕಾಲ ಹರಣ ಮಾಡೋಣ. ಅಲ್ಪ ಸ್ವಲ್ಪ ಅವರ ಭಾಷೆಯಲ್ಲಿ ಮಾತಾಡಿ ನಮ್ಮ ಕೆಲಸ ಸಾಗಿಸಿಕೊಳ್ಳಬೇಕು. ಕನ್ನಡದಲ್ಲಿ ಮಾತಾಡಿ ಅಂತ ಒತ್ತಾಯ ಮಾಡಿದರೆ ನಮ್ಮ ಹೊಟ್ಟೆಕೇಳಬೇಕಲ್ಲ ." ಎಂದು ಅವರು ಕೊಡುವ ಸ್ಪಷ್ಟನೆ .
ಓದಿಗಾಗಿ ದೆಹಲಿ ಯಿಂದ ನಮ್ಮ ಬೆಂಗಳೂರು ಮಹಾನಗರಕ್ಕೆ ಬಂದ ಸಾವಿರಾರು ವಿದ್ಯಾರ್ಥಿಗಳು ಪ್ರತಿದಿನ ಬಿ.ಎಂ.ಟಿ.ಸಿ ಬಸ್ ನಲ್ಲಿ ತಮ್ಮ ಮಾತೃಭಾಷೆ ಯಲ್ಲಿ ಯಾ ಇಂಗ್ಲಿಷ್ ನಲ್ಲಿ ಕೇಳಿ ಬಸ್ಸಿನ ಕಂಡಕ್ಟರ ರಿಂದ ಟೀಕೆಟ್ ಪಡೆದು ಪ್ರಯಾಣ ಮಾಡುತ್ತಾರೆ .ಕೆಲವೊಮ್ಮೆ ಅವರು ತಮ್ಮ ಭಾಷೆಯಲ್ಲಿ ಹೇಳಿದ ಸ್ಟಾಪ್ ಗೊತ್ತಾಗದಿದ್ದರೆ ಅಕ್ಕಪಕ್ಜ ಗಿದ್ದ ಪ್ರಯಾಣಿಕರಿಗೆ ಕೇಳಿ ಖಾತ್ರಿ ಮಾಡಿ ಕಂಡಕ್ಟರ ಟೀಕೆಟ್ ಕೊಡುತ್ತಾರೆ. ನಮ್ಮ ಬಿ.ಎಂ.ಟಿ.ಸಿ ಬಸ್ಸಿನ ಕಂಡಕ್ಟರ ರ ತಾಳ್ಮೆ ನಿಜವಾಗಲೂ ಮೆಚ್ಚಬೇಕು .
ಆದರೆ ಅದೇ ದೆಹಲಿ ಸಾರಿಗೆ ಸಂಸ್ಥೆಯ ಕಂಡಕ್ಟರ ರ ನಡವಳಿಕೆ ತದ್ವಿರುದ್ದ. ನೀವು ಹಿಂದಿ ಬದಲು ಇಂಗ್ಲಿಷ್ ನಲ್ಲಿ ಟೀಕೆಟ್ ಕೇಳಿದರೆ ನಿಮ್ಮ ಗೇಲಿ ಮಾಡುತ್ತಾರೆ . " ಅಂಗ್ರೇಜ ಕೇ ಔಲಾದ್ . ಹಿಂದಿ ಮೇ ಬೋಲ .ಅಂಗ್ರೇಜ ತೋ ಉನ್ನಿಸ ಸೌವ್ ಸೈನ್ತಾಲಿಸ ಮೆ ಹಿಂದುಸ್ತಾನ ಛೊಡ ಗಯೇ. ಔಲಾದ್ .ರಹ ಗಯೇ. ( ಇಂಗ್ಲಿಷ್ ರ ಮಕ್ಕಳರಾ , ಹಿಂದಿಯಲ್ಲಿ ಹೇಳು . ಇಂಗ್ಲಿಷರು ಹತ್ತಂಬತ್ತು ನೂರಾ ನಲವತ್ತೇಳು ರಲ್ಲಿ ಹಿಂದುಸ್ತಾನ್ ಬಿಟ್ಟು ಹೊದರು . ಮಕ್ಕಳು ಇಲ್ಲೇ ಉಳಿದರು .") ಎಂದು ಲೇವಡಿ ಮಾಡುತ್ತಾರೆ. ಆ ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಗರಿಗೆಲ್ಲ ಉಚಿತ ನಗೆಹಬ್ಬ.
ಒಂದೆರಡು ವರ್ಷ ನಾನು ನಮ್ಮ ಪಕ್ಕದ ಚಿಕ್ಕ ರಾಜ್ಯ ಗೋವಾ ದಲ್ಲಿ ಕೆಲಸ ಮಾಡಿದ್ದೇನೆ . 1961ರ ಡಿಸೆಂಬರ್ ಗೆ ಪೋರ್ಚುಗೀಸ್ ಆಳಿಕೆಯಿಂದ ಗೋವಾ ವಿಮೋಚನೆಗೊಂಡು ಭಾರತದಲ್ಲಿ ವಿಲೀನವಾಯಿತು. ಪೋರ್ಚುಗೀಸ್ ಆಡಳಿತದಿಂದ ಗೋವಾ ವಿಮೋಚನೆಯಾಗುವವರೆಗೂ ಅದರ ಸಾಕ್ಷರತೆ ಕೈಗಾರಿಕಾಭಿವೃದ್ಧಿಗೆ ಹೆಚ್ಚಿನ ಗಮನ ಸಂದಿರಲಿಲ್ಲ. ಗೋವಾ ವಿಮೋಚನೆಗೊಂಡು ಭಾರತದಲ್ಲಿ ವಿಲೀನವಾದ ನಂತರ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳು ಸೃಷ್ಟಿಗೊಂಡವು. ಇದರ ಲಾಭವನ್ನು ಗೋವಾ ಅಕ್ಕಪಕ್ಕದ ರಾಜ್ಯದ ಜನರು ಸಾಕಷ್ಟು ಉಪಯೋಗಿಸಿಕೊಂಡರು. ಗೋವಾ ದ ವಿವಿಧ ಸರಕಾರಿ ಖಾತೆಗಳಲ್ಲಿ ಅನೇಕ ಕನ್ನಡಿಗರು ನೇಮಕಗೊಂಡರು.
ಗೋವಾ ದಲ್ಲಿ ಬಹುತೇಕ ಬಸ್ ನಿಲ್ದಾಣ , ಮಾರುಕಟ್ಟೆ ಯಲ್ಲಿ ಹೂವು , ಹಣ್ಣು , ತರಕಾರಿ ಮಾರುವರೆಲ್ಲ ಕನ್ನಡಿಗರು. ನಮ್ಮ ರಾಜ್ಯದ ಧಾರವಾಡ , ಬೆಳಗಾವಿ , ವಿಜಯಪುರ, ಕಲಬುರಗಿ , ಉತ್ತರ ಕನ್ನಡ , ದಕ್ಷಿಣ ಕನ್ನಡ ಇತ್ಯಾದಿ ಜಿಲ್ಲೆಯವರು. ವಿಪರ್ಯಾಸ ಏನಂದರೆ ನಾವು ಕನ್ನಡ ದಲ್ಲಿ ಕೇಳಿದರೆ ಅವರು ಮಾತ್ರ ಕೊಂಕಣಿ ಭಾಷೆಯಲ್ಲಿ ಉತ್ತರಿಸುತ್ತಾರೆ. ಕೊಂಕಣಿ ಅವರ ಸಂಪರ್ಕ ಭಾಷೆಯಾಗಿದೆ.
ಒಮ್ಮೆ ಪಣಜಿ ಬಸ್ ನಿಲ್ದಾಣ ದಲ್ಲಿ ಗೋವಾ ದ ಸರಕಾರೀ ಪ್ರಾಥಮಿಕ ಶಾಲೆ ಯೊಂದರಲ್ಲಿ ಶಿಕ್ಷಕ ನಾಗಿದ್ದ ನಮ್ಮೊರ ಹಳೆಸ್ನೇಹಿತ ಭೇಟಿ ಆದಾಗ ನಾನು ಕನ್ನಡ ದಲ್ಲಿ ಅವನ ಯೋಗಕ್ಷೇಮ ಕೇಳಿದರೆ ಆತ ಕೊಂಕಣಿಯಲ್ಲಿ ತಿಳಿಸಿದ . " ಗೋವಾ ದಲ್ಲಿ ಕೆಲಸ ಮಾಡುವ ಕನ್ನಡಿಗರು ಕನ್ನಡ ಮಾತಾಡಲು ಸಂಕೋಚ ಪಡುವ ಕಾರಣ ಅವನಿಂದ ತಿಳಿದುಕೊಂಡೆ.
ಗೋವಾ ಮೂಲವಾಸಿ ಗಳು ಕನ್ನಡ ಮಾತಾಡುವವರಿಗೆ "ಘಾಟಿ" ಎಂದು ಅಣಕಿಸುತ್ತಾರೆ .ಕನ್ನಡದ "ಘಟ್ಟ" ಶಬ್ದ ಕ್ಕೆ ಕೊಂಕಣಿ ಭಾಷೆ ಯಲ್ಲಿ" ಘಾಟ " ಅಂತಾ ಸಮಾನ ಅರ್ಥ ಇದೆ . ಅನಮೋಡ ಘಟ್ಟದ (ಘಾಟ) ಮೇಲಿನ ಊರಿನ ಜನರು "ಘಾಟಿ " ಎಂದ ಅರ್ಥ . ಅನಮೋಡ ಘಟ್ಟದ ಮೇಲಿನ ಊರಾದ ಹುಬ್ಬಳ್ಳಿ - ಧಾರವಾಡ, ಬೆಳಗಾವಿ , ಉತ್ತರ ಕನ್ನಡ ಇತ್ಯಾದಿ ಉತ್ತರ ಕರ್ನಾಟಕದ ಕನ್ನಡ ಮಾತಾಡುವ ಜನರೆಲ್ಲಾ ಅವರಿಗೆ " ಘಾಟಿ" ಗಳು .
ಗೋವಾ ದಲ್ಲಿ ವಾಸ್ಕೋದ ಜುವಾರಿ ನಗರ ಹಾಗು ಬೈನಾ, ಪಣಜಿಯ ಪರವರಿಯಂ ಮುಂತಾದೆಡೆ ಹಲವು ಕನ್ನಡ ಕುಟುಂಬಗಳು ಕಳೆದ ನಾಲೈದು ದಶಕಗಳಿಂದಲೂ ವಾಸ ಮಾಡುತ್ತವೆ . ಉತ್ತರ ಕರ್ನಾಟಕ ಭಾಗದವರಾದ ಇವರು ಹೊಟ್ಟೆಪಾಡಿಗಾಗಿ ಕೂಲಿ , ಗಾರೆ ಕೆಲಸ ಅರಸಿ ಗೋವಾಕ್ಕೆ ವಲಸೆ ಬಂದ ಬಡ ಕುಟುಂಬಗಳು . . ಈ ಬಡ ಕುಟುಂಬರವರ ಮಕ್ಕಳು ಮಾತೃಭಾಷಾ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಮಹತ್ವಕಾಂಕ್ಷೆ ಯಿಂದ ಕಾಳಿದಾಸ ಶಿಕ್ಷಣ ಸಂಸ್ಥೆ 1994-95ರಲ್ಲಿ ಗೋವಾ ದಲ್ಲಿ ವಾಸ್ಕೋದ ಜುವಾರಿ ನಗರ, ಹಾಗೂ ಬೈನಾ ಎಂಬಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನುಆರಂಭಿಸಿತು. 1ರಿಂದ 10ನೇ ತರಗತಿವರೆಗೆ ಕರ್ನಾಟಕ ರಾಜ್ಯದ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಾರೆ .
ಈ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಗೋವಾ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅನುಮತಿ ನೀಡಿಲ್ಲ . ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಗೋವಾದಿಂದ ಸುಮಾರು 100 ಕಿಲೊಮೀಟರ ದೂರವಿರುವ ಕರ್ನಾಟಕ ರಾಜ್ಯದ ಕಾರವಾರ ತಾಲೂಕಿಗೆ ಬಂದು ಒಂದು ವಾರದ ಮಟ್ಟ ವಾಸ್ತವ್ಯ ಹೂಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಮಾತೃಭಾಷೆಯ ಪ್ರೀತಿಯಿಂದ , ತಾಯಿನಾಡು ಮತ್ತು ತಾಯ್ನುಡಿಯ ಮೇಲಿನ ಅಭಿಮಾನ ದಿಂದ ತಮ್ಮ ಮಕ್ಕಳನ್ನು ಗೋವಾದಲ್ಲಿನ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿಸುತ್ತಿರುವ ಬಡ ಪಾಲಕರಿಗೆ ಒಂದು ದೊಡ್ಡ ಹೊರೆಯಾಗಿದೆ .ಗೋವಾದಲ್ಲೇ ಪರೀಕ್ಷಾ ಕೇಂದ್ರ ಆರಂಭಿಸಲು ಕರ್ನಾಟಕ ಸರ್ಕಾರ ಕ್ರಮಕೈಗೊಳ್ಳಬೇಕು.ಗೋವಾದಲ್ಲಿ ಕನ್ನಡ ಉಳಿಸಬೇಕು . ಕನ್ನಡ ಬೆಳೆಸಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ, ಬೆಳೆಸಬೇಕು

ಕನ್ನಡಿಗರಿಗೆ ತಮ್ಮ ಮಾತೃಭಾಷೆ ಗಿಂತ ಪರಭಾಷೆ ಮಾತಾಡುವ ಅಭ್ಯಾಸ ಬಲ ಹೆಚ್ಚಾಗಿದೆ . ಕನ್ನಡದಲ್ಲಿ ಮಾತಾಡುವಾಗಲೂ ಕನ್ನಡಕ್ಕಿಂತ ಹೆಚ್ಚು ಪರಭಾಷೆ ಶಬ್ದಗಳನ್ನು ಬಳಸುತ್ತಾರೆ.ನಮ್ಮ ಮಾತೃಭಾಷೆ ಕಲಬರಕೆ ಮಾಡಲಾಗುತ್ತದೆ .
ಮಾತೃಭಾಷೆಯ ಬಗ್ಗೆ ಅಭಿಮಾನ ಮನ ದಲ್ಲಿ ಇದ್ದರೆ ಸಾಲದು , ಅದು ಮನೆಯಲ್ಲಿ ಬೆಳೆಯಬೇಕು. ಮಕ್ಕಳು ಅಪ್ಪ,ಅಮ್ಮ ,ಅಕ್ಕ,ಅಣ್ಣ,ತಮ್ಮ , ತಂಗಿ , ಅಜ್ಜ , ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ,ಮಾವ , ಅತ್ತೆ, ಅತ್ತಿಗೆ,ನಾದಿನಿ ಮುಂತಾದ ಕುಟುಂಬದ ಸದಸ್ಯರ ಸಂಬಂಧವನ್ನು ಗುರುತಿಸುವ ಅಪ್ಪಟ ಕನ್ನಡ ಶಬ್ದಗಳನ್ನು ಬಳಸಬೇಕು . ಮನೆಯಲ್ಲಿ ಮಕ್ಕಳು ಪ್ರಾರಂಭ ದಿಂದಲೇ ಅ ಆ ಇ ಈ ಕನ್ನಡದ ಅಕ್ಷರ ಮಾಲೆಯನ್ನು ಕಲಿಯಬೇಕು." ಮಕ್ಕಳಿಗೆ ಕನ್ನಡ ಮಾದ್ಯಮ ಶಾಲೆಯಲ್ಲಿ ಓದಿಸ ಬೇಕು ಹಾಗು ಕನ್ನಡ ಶಾಲೆಗಳನ್ನು ಉಳಿಸಬೇಕು , ಬೆಳೆಸಬೇಕು . ಮನೆಯಲ್ಲಿ," ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ,ನಾಗರಹಾವೇ ಹಾವೋಳು ಹೂವೆ, ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ , ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ,ಗಂಟೆಯ ನೆಂಟನೆ ಓ ಗಡಿಯಾರ ..... " ಮುಂತಾದ ಕವಿತೆಗಳನ್ನು ಮಕ್ಕಳು ಹಾಡುತ್ತಿರಬೇಕು. ಮನೆಯಲ್ಲಿ ಕನ್ನಡ ದಿನ ಪತ್ರಿಕೆ , ವಾರ ಪತ್ರಿಕೆ ,ಮಾಸಪತ್ರಿಕೆ ಹಾಗೂ ಕನ್ನಡ ಪುಸ್ರಕಗಳನ್ನೇ ತರಿಸಿರಿ ಹಾಗು ನಿಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿರಿ ಹಾಗು ಕನ್ನಡ ಸಾಹಿತ್ಯದ ರುಚಿ ತೋರಿಸಿರಿ.ಮಕ್ಕಳ ಜೊತೆ ಕನ್ನಡ ದಲ್ಲಿ ಮಾತಾಡಿರಿ . ಶುಭಾಶಯ , ಸಂದೇಶಗಳನ್ನು ಕನ್ನಡದಲ್ಲಿ ವಿನಿಮಯ ಮಾಡಿರಿ .

.ನವೆಂಬರ್ ೧, ಕನ್ನಡ ರಾಜ್ಯೋತ್ಸವ ದ ದಿನವಷ್ಟೇ ನಮ್ಮಲ್ಲಿ ಕನ್ನಡದ ಬಗ್ಗೆ ಅಭಿಮಾನ , ತಾಯನುಡಿಯ ಪ್ರೀತಿ ಹಾಗು ಮಾತೃಭಾಷೆ ಬಗ್ಗೆ ಪ್ರೇಮ ಹುಟ್ಟಿಕೊಳ್ಳುತ್ತದೆ .ಕನ್ನಡದ ಕಂಪು ಕರ್ನಾಟಕ ದೆಲ್ಲೆಡೆ ಹರಡುತ್ತದೆ .
ಮುಂದಿನ ಕನ್ನಡ ರಾಜ್ಯೋತ್ಸವ ಬರುವಷ್ಟರಲ್ಲಿ ಅದು ಮಾಯವಾಗಿರುತ್ತದೆ . ಕನ್ನಡ ನಾಡು- ನುಡಿ ಬಗ್ಗೆ ಅಭಿಮಾನ ನವೆಂಬರ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ. ವರ್ಷ ಪೂರ್ತಿ ಕನ್ನಡ ನಾಡು - ನುಡಿ - ಸಂಸ್ಕೃತಿ ಉಳಿಸುವ , ಬೆಳೆಸುವ ಕಾರ್ಯ ನಡೆಯುತ್ತಿರಲಿ. .
"ಎಲ್ಲಾದರೂ ಇರು ..ಎಂತಾದರು ಇರು.. ಎಂದೆದಿಗೂ ನೀ ಕನ್ನಡವಾಗಿರು " .ಎಂದು ರಾಷ್ಟ್ರಕವಿ ಕುವೆಂಪು ಅವರು ಹೇಳಿದ ಹಾಗೆ ಪ್ರಪಂಚದ ಯಾವ ಮೂಲೆಯಲ್ಲಿದ್ದರು ನಾವು ಕನ್ನಡಿಗರು, ಕನ್ನಡವೇ ನಮ್ಮ ಮಾತೃಭಾಷೆ ಎಂಬ ಸತ್ಯ ನಾವು ಮರೆಯಬಾರದು . ನಮ್ಮ ಮಾತೃಭಾಷೆ ಬಗ್ಗೆ ಅಪಾರ ಪ್ರೀತಿ,ಗೌರವ ತೋರಿಸೋಣ .ನಮ್ಮ ಮಾತೃಭಾಷೆ ಬಗ್ಗೆ ಹೆಮ್ಮೆ ಪಡೋಣ .ನಮ್ಮ ಮಾತೃಭಾಷೆ ಉಳಿಸೋಣ ಮತ್ತು ಬೆಳೆಸೋಣ !
. ......ಶುಭಂ .......