ಮಾವೋನ ಕೊನೆಯ ನರ್ತಕ

ಮಾವೋನ ಕೊನೆಯ ನರ್ತಕ

ಪುಸ್ತಕದ ಲೇಖಕ/ಕವಿಯ ಹೆಸರು
ಕನ್ನಡಕ್ಕೆ ಅನುವಾದ: ಜಯಶ್ರೀ ಭಟ್
ಪ್ರಕಾಶಕರು
ಚಂದ ಪುಸ್ತಕ, ಮೊದಲ ಮುದ್ರಣ, 2012
ಪುಸ್ತಕದ ಬೆಲೆ
220/-

ಕನ್ನಡ ಸಾಹಿತ್ಯದ ಮಟ್ಟಿಗೆ ಗಮನಾರ್ಹವಾದ ವಿಶೇಷ ಕೆಲಸವೊಂದನ್ನು ಈ ಪುಸ್ತಕದ ಮೂಲಕ ಸಾಧಿಸಿದ್ದಾರೆ ಶ್ರೀಮತಿ ಜಯಶ್ರೀ ಭಟ್ - ನಮಗೆ ಸಾಕಷ್ಟು ಅಪರಿಚಿತವಾದ, ಒಂದು ರೀತಿಯಲ್ಲಿ ಊಹಪೋಹದ ಮಟ್ಟದಲ್ಲಿ ಮಾತ್ರ ಅರಿವಿರುವ ಚೀಣಿ ಸಂಸ್ಖೃತಿಯ ಬೇರುಗಳನ್ನು ಅದರದೆ ಆದ ಸಸಿಗಳ ಬಾಯಿಂದ ಪರಿಚಯಿಸುವ ಮೂಲಕ. ಚೀಣಿ ಜೀವನದ ಕುರಿತು ನಮಗಿರುವ ಸೀಮಿತ ಅರಿವು, ಪರಿಜ್ಞಾನ, ಮತ್ತು ಗುರುತೆ ಸಿಗದಂತೆ ಬದಲಾಗಿ ಹೋದ ಈಗಿನ ಚೀನದ ಆರ್ಥಿಕ, ಸಾರ್ವಜನಿಕ, ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ಕಣ್ಮರೆಯಾಗಿ, ಮುಚ್ಚಿದ ಬಾಗಿಲ ನೀತಿಯಿಂದ ಕಳೆದು / ಬದಲಾಗಿ ಹೋದ ಆಚಾರ, ವಿಚಾರ, ಸಂಪ್ರದಾಯಗಳ ತುಣುಕುಗಳು ಹೇರಳವಾಗಿ ಸಿಗುವ ಈ ಕಥಾನಕ ಆ ಮಟ್ಟಿಗೆ ಕನ್ನಡಕ್ಕೆ ವಿಶಿಷ್ಟ ಕೊಡುಗೆಯೆಂದೆ ಹೇಳಬೇಕು.
ಇಡಿ ಕಥಾನಕದ ವೈಶಿಷ್ಟ್ಯವೆಂದರೆ ಆತ್ಮಕಥನದ ಹುರುಪಿನಲ್ಲಿ ತನ್ನಂತಾನೆ ಬಿಚ್ಚಿಕೊಳ್ಳುತ್ತ ಹೋಗುವ 'ಲೀ' ಎಂಬ ಈ ಶ್ರೇಷ್ಟ ಬ್ಯಾಲೆ ಡ್ಯಾನ್ಸರೊಬ್ಬನ ಜೀವನ ಕಥನ; ಆತನ ಬಡ ಹಾಗೂ ದೊಡ್ಡ ಕುಟುಂಬದ ಹಿನ್ನಲೆ, ಹಳ್ಳಿಗಾಡಿನ ಮೂಲೆಯಲೆಲ್ಲೊ ಕುಗ್ರಾಮದಿಂದ ಬೆಳಕಿಗೆ ಬಂದ ಪ್ರತಿಭೆ. ನಮ್ಮ ಊರು ಹಳ್ಳಿಗಳಲ್ಲಿನ ಜನ ಜೀವನದ ರೀತಿ ನೀತಿಗಳ ಜತೆಗೆ ಹಳೆ ಚೀನಿ ಜೀವನ ಶೈಲಿಯ ಜತೆಗಿರುವ ಸಾಮ್ಯತೆ, ಎರಡು ಮಹಾನ್ ಸಂಸ್ಕೃತಿಯ ಸಂಪ್ರದಾಯ - ಪದ್ದತಿಗಳಲ್ಲಿರುವ ಅಸಾಮಾನ್ಯ ಹಾಗೂ ಅಚ್ಚರಿಯ ಹೋಲಿಕೆ, ಬಾಲ್ಯ ಜೀವನದ ನಡೆ, ನುಡಿ, ನಡುವಳಿಕೆ ಚಿಂತನೆಗಳಲ್ಲಿರುವ ಸಾಮ್ಯತೆ - ಹೀಗೆ ಎಲ್ಲವು ದಂಗು ಬಡಿಸುತ್ತವೆ. ಒಂದೆಡೆ ಕಟ್ಟುನಿಟ್ಟು ಕಟ್ಟುಪಾಡಿನ, ಹಳತಿನ ವಿಚಾರಧಾರೆಗಳನ್ನೆಲ್ಲ ತುಳಿದು ಹೊಸತಿನ ಮಾವೊ ವಿಚಾರಧಾರೆಗೆ ಬಲವಂತಿಕೆಯಿಂದ ಆದರೆ ಅಷ್ಟೆ ಶಿಸ್ತುಬದ್ಧ ಕ್ರಮದಲ್ಲಿ ಒಗ್ಗಿಸುವ ಹುನ್ನಾರದ ಪರಿಚಯವಾದರೆ, ಮತ್ತೊಂದೆಡೆ ಆ ವೈಚಾರಿಕ ನೆಲೆಗಟ್ಟಿನ ಹಿನ್ನಲೆ ಮತ್ತು ಕಾರ್ಯಸೂಚಿಗಳು, ಎಲೆ ಮರೆಯ ಕಾಯಾಗಿ ಎಲ್ಲೊ ಮರೆತು ಹೂತು ಹೋಗಬಹುದಾದಂತಿದ್ದ 'ಲೀ' ನಂತಹ ಪ್ರತಿಭೆಗಳನ್ನು ಹೊರ ತರುವುದು ವಿಪರ್ಯಾಸವೆನಿಸುತ್ತದೆ. ಹಾಗೆಯೆ, ಅದನ್ನು ನನಸಾಗಿಸುವ ಭರದಲ್ಲಿ ಅನುಸರಿಸುವ ಶಿಕ್ಷಣ ಕ್ರಮ, ನಿರೀಕ್ಷೆ, ಪಟ್ಟುಗಳು ಮತ್ತು ಅದರ ಸಾಧನೆಗಾಗಿ ಬಲವಂತದಿಂದಲಾದರೂ ಮಾಡಿಸುವ ವ್ಯಕ್ತಿಗತ ತ್ಯಾಗಗಳು ಈ ತರದ ಅನೇಕ ವಿಪರ್ಯಾಸದ ತುಣುಕುಗಳನ್ನು ಪುಸ್ತಕದುದ್ದಕ್ಕೂ ಪರಿಚಯಿಸುತ್ತಾ ಸಾಗುತ್ತದೆ. ಹೀಗೆ ಬದುಕು ಬವಣೆಯೊಂದಿಗೆ ಆರಂಭವಾಗುತ್ತ ಸಾಗುವ ಚಿತ್ರಣ ನಿಧಾನವಾಗಿ ಕಲೆಯ ಪೋಷಾಕಿನೊಳಗೆ ಹುದುಗುತ್ತ ಸಾಗಿದರೂ, ಪ್ರತಿ ಹೆಜ್ಜೆಯಲ್ಲು ಚೀನಿ ಜಗತ್ತಿನ ಆ ದಿನಗಳ ಪರಿಚಯ ಮಾಡಿಕೊಡುತ್ತ ಸಾಗುವುದು ಮತ್ತೊಂದು ವಿಶೇಷ. ಇದು 'ಲೀ'ಯ ಬರಿಯ ಚೀನದಲ್ಲಿರುವತನಕದ ಜೀವನಕ್ಕೆ ಮಾತ್ರ ಸೀಮಿತವಾಗದೆ, ಅವನು ಅಮೇರಿಕದಂತಹ ವಿದೇಶಿ ನೆಲ ತುಳಿದ ಮೇಲು ಮುಂದುವರೆಯುತ್ತ ಸಾಗುವುದು, ಬರಿಯ ಪೇಲವವಾಗಬಹುದಾಗಿದ್ದ ಆತ್ಮಕಥನವೊಂದನ್ನು ಉನ್ನತ್ತ ಮಟ್ಟಕ್ಕೇರಿಸಿದ ಸಾಮಾಜಿಕ ದಾಖಲೆಯಾಗಿಸಿಬಿಡುತ್ತದೆ. ಆ ದೃಷ್ಟಿಯಿಂದ ಇದೊಂದು ಕನ್ನಡಿಗರು ಓದಲೇಬೇಕಾದ ಪುಸ್ತಕವೆನ್ನಬಹುದು. ಓದುತ್ತಿದ್ದ ಹಾಗೆಯೆ, 'ಅರೆರೆ..ಇದೊಂದು ನಮ್ಮ ಊರಿನಲ್ಲೊ, ಪಕ್ಕದ ಹಳ್ಳಿಯಲ್ಲೊ ನಡೆದ ಘಟನೆ, ವಿವರದಂತೆ ಇದೆಯಲ್ಲಾ, ನಮ್ಮ ಪದ್ದತಿಯ ಹಾಗೆ ಕಾಣಿಸುವುದಲ್ಲ..' ಅನಿಸಿದರೆ ಅಲ್ಲಿ ಕಾಕತಾಳಿಯತೆಗಿಂತ ಹೆಚ್ಚು ಏಶಿಯಾದ ಎರಡು ದೊಡ್ಡ ಸಂಸ್ಕೃತಿಗಳಲ್ಲಿರಬಹುದಾದ ಸಮಾನತೆ, ಸಾಮೀಪ್ಯತೆ ಕಾರಣವೆನ್ನಬಹುದು.
ಇನ್ನು ಜಯಶ್ರೀಯವರ ಅನುವಾದದ ಕುರಿತು ಹೇಳುವುದಾದರೆ, ಸೊಗಸಾಗಿ ಓದಿಸಿಕೊಂಡು ಹೋಗುವ ಅನುವಾದ. ಸರಳ ಶೈಲಿಯಲ್ಲಿ ಯಾವುದೆ ಆಡಂಬರಕ್ಕಿಳಿಯದೆ, ಮೂಲ ಸರಕನ್ನು ಇದ್ದ ಹಾಗೆ ಹೇಳುತ್ತ ಹೋಗುವುದರ ಜತೆಗೆ, ಕನ್ನಡದ ಭಾಷಾಂತರ - ಭಾವಾಂತರದ ಗೊಂದಲದ ನಡುವೆ ಮೂಲ ವಸ್ತುವಿನ ಸಮಗ್ರತೆ, ಓಟಕ್ಕೆ ಧಕ್ಕೆ ಬರದಂತೆ, ಕಥೆಯ ಮೂಲೋದ್ದೇಶಕ್ಕೆ ಲೋಪ ಬರದಂತೆ ಭಾಷಾಂತರಿಸಿದ್ದಾರೆ. ವೈಭವಿಕರಣಕ್ಕಿಳಿಯದೆ ಮೂಲಕ್ಕೆ ಅನ್ಯಾಯವಾಗದ ಹಾಗೆ ಅನುವಾದಿಸಿದ್ದರಿಂದಲೊ ಏನೊ, ಪುಸ್ತಕವನ್ನು ಕನ್ನಡದಲ್ಲಿ ಓದಿದರೂ 'ಚೀನಿ ಕಲೆಗಾರನೊಬ್ಬನ' ಆತ್ಮಕಥನವನ್ನು 'ಚೀನಿ ಕಲೆಗಾರನೊಬ್ಬನ' ಬಾಯಿಂದಲೊ ಬರಹದಿಂದಲೊ ಓದಿ, ಕೇಳಿದ ಅನುಭವವಾಗುವುದು ಮಾತ್ರವಲ್ಲದೆ, ಎಲ್ಲೂ ವಿದೇಶಿಯೊಬ್ಬ ಬರೆದ ಕಥಾನಕದಂತೆ ಅನಿಸುವುದಿಲ್ಲ. ಅಷ್ಟರ ಮಟ್ಟಿಗೆ ಜಯಶ್ರೀ ಭಟ್ ರವರ ಅನುವಾದ ಸತ್ವಪೂರ್ಣ ಮತ್ತು ಪರಿಣಾಮಕಾರಿ.
ಇಂಗ್ಲೀಷಿನ ಮೂಲದಿಂದ ಅನುವಾದಿಸಿದ ಕಾರಣಕ್ಕೊ, ಅಥವಾ ಚೀಣಿ ಉಚ್ಚಾರಣೆಯ ಗಮನ ಕನ್ನಡ ಅವತರಣಿಕೆಯಲ್ಲಿ ಪ್ರಾಮುಖ್ಯವಲ್ಲದ್ದು ಎಂದೊ, ಕೆಲವು ಉಚ್ಚಾರಣಾ ದೋಷಗಳು ನುಸುಳಿಕೊಂಡಿವೆ. ಕಾರಣಗಳೇನೆ ಇರಲಿ ಇದೊಂದು ಚೀನಿ ಕಥೆಯಾದ ಕಾರಣ ಹೆಸರುಗಳಲ್ಲಿ ಮತ್ತು ತುಂಬಾ ಹೆಚ್ಚು ಬಳಕೆಯಾಗುವ ಪದಗಳ ಉಚ್ಚಾರಣೆಯಲ್ಲಿ ಚೀನಿ ಸ್ವಂತಿಕೆಯನ್ನು ಉಳಿಸಿಕೊಂಡಿದ್ದರೆ ಚೆನ್ನಾಗಿತ್ತು ಅನಿಸುತ್ತದೆ. ಉದಾಹರಣೆಗೆ ಅನುವಾದದಲ್ಲಿ ಅಕ್ಷರಶಃ 'ನೀ ಹಾವೊ' ಆಗುವ ಚೀನಿ ನಮಸ್ಕಾರ, ಉಚ್ಚಾರಣೆಯಲ್ಲಿ 'ನೀ ಹಾವ್' ಆಗುತ್ತದೆ; ಚೀನಿ ಭಾಷೆಯಲ್ಲಿ ಇಂಗ್ಲಿಷ್ ಅಕ್ಷರ 'ಕ್ಯು' ಅನ್ನು 'ಚ್' ಅನ್ನುವ ಉಚ್ಚಾರಣೆಯಾಗಿ ಬಳಸುವುದರಿಂದ ಊರಿನ ಹೆಸರು 'ಕಿಂಗ್ ದಾವ್' ಆಗದೆ 'ಚಿಂಗ್ ದಾವ್' ಆಗುತ್ತದೆ; ಹಾಗೆಯೆ ಅಸಾಧಾರಣ ನರ್ತಕ 'ಲೀ'ಯ ಪೂರ್ತಿ ಹೆಸರು ಮೂಲ ಚೀನಿ ಉಚ್ಚಾರಣೆಯಲ್ಲಿ 'ಲೀ ಶ್ವಿನ್ ಸಿನ್ಗ್' ಆಗುತ್ತದೆ (ಹೆಚ್ಚಿನ ಮಾಹಿತಿಗೆ ಲೀಯವರ ಅಧಿಕೃತ ವೆಬ್ ಸೈಟ್ ಗಮನಿಸಿ : http://www.licunxin.com); ಹಾಗೆಯೆ ಚೀನಿಯಲ್ಲಿ 'ಚಿಯರ್ಸ್'ಗೆ ಬಳಸುವ 'ಗ್ಯಾನ್ ಬೀ' ಉಚ್ಚಾರಣೆಯಲ್ಲಿ ' ಗನ್ಬೇ' ಆಗುತ್ತದೆ.
ಆದರೆ ಈ ಉಚ್ಚಾರಣ ಕಂದಕಗಳು ಕೇವಲ ಚೀನಿ ಭಾಷೆಯನ್ನು ಬಲ್ಲ, ಮಾತಡಲರಿತವರಿಗೆ ಮಾತ್ರ ಗಮನಕ್ಕೆ ಬರುವುದರಿಂದ ಆ ಭಾಷೆ ಬರದ ಕನ್ನಡ ಓದುಗರಿಗೆ ಯಾವ ವ್ಯತ್ಯಾಸವೂ ಕಾಣುವುದಿಲ್ಲ ಮತ್ತು ಓದುವ ಓಟಕ್ಕೆ ಯಾವ ಧಕ್ಕೆಯು ಉಂಟಾಗುವುದಿಲ್ಲ. ಚೀನಿ ಭಾಷೆ ಕಲಿಯಲು ಸಾಕಷ್ಟು ಕಷ್ಟಕರ ಭಾಷೆಯೂ ಆದ ಕಾರಣ, ಭಾವಾನುವಾದದ ನಕ್ಷೆಯಲ್ಲಿ ಬರಿಯ ಪುಸ್ತಕ ಓದುವ ಸೀಮಿತ ಪರಿಸರದಲ್ಲಿ ಉಚ್ಚಾರಣೆಯ ಪಾತ್ರ ಗೌಣ ಮತ್ತು ಪ್ರಮುಖವಲ್ಲದ್ದಾಗಿರುವುದರಿಂದ ಪುಸ್ತಕವನ್ನು ಸೊಗಸಾಗಿ ಅಸ್ವಾದಿಸಬಹುದು.  
ಒಟ್ಟಾರೆಯಾಗಿ ವಿದೇಶಿ ಸಾಹಿತ್ಯದ ಪರಿಚಯದ ದೃಷ್ಟಿಯಿಂದ ಇದೊಂದು ಅಪರೂಪದ ಮತ್ತು ಗಮನಾರ್ಹ ಪ್ರಯತ್ನ. ಅದರಲ್ಲು ಇದು ಜಯಶ್ರೀ ಭಟ್ ರವರ ಮೊದಲ ಪುಸ್ತಕವೆಂಬ ಅವಗಾಹನೆಯಲ್ಲಿ ಪರಿಗಣಿಸಿದರೆ, ನಮ್ಮ ನೆಲಕ್ಕಪರಿಚಿತವಾದ ಸಾಹಿತ್ಯವನ್ನು ಕನ್ನಡಿಕರಿಸುವ ಅವರ ಈ ಪ್ರಯತ್ನ ಸ್ತ್ಯುತಾರ್ಹ ಹಾಗೂ ಅಭಿನಂಧನಾರ್ಹ. ಅಷ್ಟು ಮಾತ್ರವಲ್ಲ - ಈ ಕಥಾನಕದ ನಾಯಕನಾಗಿ 'ಲೀ' ತೋರುವ ಸರಳತೆ, ಛಲ, ಹಂಬಲ, ಕಷ್ಟ-ನೋವುಗಳ ನಡುವೆಯು ಗೆದ್ದೆ ಗೆಲ್ಲುವ ಹುಮ್ಮಸ್ಸು, ಬಲಿದಾನ, ತ್ಯಾಗಗಳು ನಮ್ಮ ಎಷ್ಟೊ ಬಾಲಕರಿಗೆ, ಯುವಪೀಳಿಗೆಗೆ ಮಾದರಿಯಾಗಬಲ್ಲವು. ಆ ದೃಷ್ಟಿಯಿಂದ ಬರಿ ವಿದೇಶಿ ರಾಜಕೀಯ, ಸಾಮಾಜಿಕ, ಸಾಂಸ್ಖೃತಿಕತೆಗಳನ್ನು ಪಸರಿಸುವ ಕಥಾನಕ ಮಾತ್ರವಲ್ಲದೆ ಬಾಲ-ಯುವ ಪೀಳಿಗೆಯ ಮೇಲೆ ಪರಿಣಾಮ ಬೀರಬಲ್ಲ ಸಾಧನೆಯ ಸ್ತರವನ್ನು ಒಳಗೊಂಡಿರುವುದರಿಂದಾಗಿ ಈ ಪುಸ್ತಕದ ಮಹತ್ವ ಮತ್ತಷ್ಟು ಹೆಚ್ಚುತ್ತದೆ. ಆ ದೃಷ್ಟಿಯಿಂದಲು ಓದುಗರು ತಪ್ಪದೆ ಓದಬೇಕಾದ ಪುಸ್ತಕವಿದು.
ಮೂಲ ಲೇಖಕ : 'ಲೀ ಶ್ವಿನ್ ಸಿನ್ಗ್'ರ ಆತ್ಮಕಥೆ 'ಮಾವೋ'ಸ್ ಲಾಸ್ಟ್ ಡಾನ್ಸರ'ನ ಕನ್ನಡ ಅನುವಾದ (ಪುಟಗಳು: 278)
ವಿಮರ್ಶೆ: ನಾಗೇಶ ಮೈಸೂರು, ಸಿಂಗಪುರ (nageshamysore.wordpress.com)