ಈಗಿನಂತೆ 2 ಸದಸ್ಯರು ಮತ್ತು 74 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೧--ಕಾಲದ ಯು-ಟರ್ನ್
anilkumar's picture
ಎಚ್.ಎ. ಅನಿಲ್ ಕುಮಾರ್
26
Aug
2011
ಲೇಖನ

 ...

ಪ್ರತಿಕ್ರಿಯೆಗಳು: 1
ಹಿಟ್ಸ್ : 138
ಅಜಮಿಳ ಮತ್ತು ಹುಲಿಮಂದೆ
modmani's picture
ಮೊದ್ಮಣಿ
31
Jan
2011
ಬ್ಲಾಗ್ ಬರಹ

ಹುಲಿರಾಜನ ಮುಂದೆ,
 ಬಂತು ಹುಲಿ ಮಂದೆ
ತಂದಿತೊಂದು ದೂರು
"ಹದಿನೈದು ದಿನ ಕಳೆದು
ಹದಿನಾರನೇ ರಾತ್ರಿ  ಇದು.
ತಿಂದಿಲ್ಲ ತುಂಡನೊಂದೂ...

ಪ್ರತಿಕ್ರಿಯೆಗಳು: 9
ಹಿಟ್ಸ್ : 725
ದ್ಯಾಡೇಬ್ರಶ್ Vs ಬೇವಿನಕಡ್ಡಿ
ಗಣೇಶ's picture
ಗಣೇಶ
09
Feb
2010
ಬ್ಲಾಗ್ ಬರಹ

ಚಳಿ ಕಮ್ಮಿಯಾಗುತ್ತಾ ಬಂತು..

ಈಗ ಯಾವ ಸೀಸನ್?

..

..ಮದುವೆ ಸೀಸನ್!

ಇನ್ನು ೩-೪ ತಿಂಗಳು ನಾನು busy...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,021
ಮೊಪಾಸಾ: ಹೆಂಡತಿ ಹೇಳಿದ ಕತೆ
olnswamy's picture
ಓ. ಎಲ್. ನಾಗಭೂಷಣ ಸ್ವಾಮಿ
11
Oct
2005
ಪುಟ
ಈಗ ನೀವು ಓದುತ್ತಿರುವ ಕತೆ ಹತ್ತೊಂಬತ್ತನೆಯ ಶತಮಾನದ್ದು. ಒಬ್ಬ ಹೆಂಗಸು ತನ್ನ ಗೆಳೆಯನಿಗೆ ಬರೆದ ಪತ್ರದ ರೂಪದಲ್ಲಿದೆ. ವಿವರಗಳನ್ನು ಆಮೇಲೆ ಹೇಳುತ್ತೇನೆ. ಗೆಳೆಯಾ, ನನ್ನ ಬದುಕಿನ...
ಪ್ರತಿಕ್ರಿಯೆಗಳು: 0
ಹಿಟ್ಸ್ : 2,786
ದೃಷ್ಟಿ/ಕಣ್ಣು ಆಸರೆ ಅಂದ್ರೇನು?
savithasr's picture
ಸವಿತ ಎಸ.ಆರ್.
30
Jan
2011
ಲೇಖನ

ನಮ್ಮನೆಗೆ ನಮ್ಮ ಪುಟಾಣಿ ಮಗಳನ್ನ ನೋಡಲು ಯಾರಾದ್ರು ನೆಂಟರು, ಸ್ನೇಹಿತರು ಬಂದು ಹೋದರೆ ಸಾಕು ಸಂಜೆ ಹೊತ್ತಿಗೆ ಮಗಳು ಒಂದೇ ಸಮ ಅಳಲು ಶುರುಮಾಡಿದರೆ ನಿಲ್ಲಿಸಲಾಗದು. ಆಕೆಗೆ "...

ಪ್ರತಿಕ್ರಿಯೆಗಳು: 6
ಹಿಟ್ಸ್ : 720
ಆ ಸ್ನಿಗ್ದ ನಗೆಯ... ಮುದ್ದು ಮುಖದ ಹುಡುಗಿ..
manjunath s reddy's picture
ಮಂಸೋರೆ
24
Nov
2009
ಪುಟ

ಮೈಸೂರಿನ ರೈಲು ನಿಲ್ದಾಣ...

ಪ್ರತಿಕ್ರಿಯೆಗಳು: 20
ಹಿಟ್ಸ್ : 1,807
ಆಧ್ಯಾತ್ಮ ಸಾಧಕ ಶ್ರೀ ಮುಕುಂದೂರು ಸ್ವಾಮಿಗಳು
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
21
Sep
2011
ಲೇಖನ

(ಇದು ಪುಸ್ತಕ ಪರಿಚಯದ ರೂಪದಲ್ಲಿರುವ ಲೇಖನ.

ಮೂಲ ಪುಸ್ತಕದ ಹೆಸರು : ಯೇಗ್ದಾಗೆಲ್ಲಾ ಐತೆ. ಲೇಖಕರು : ಶ್ರೀ...

ಪ್ರತಿಕ್ರಿಯೆಗಳು: 15
ಹಿಟ್ಸ್ : 231
ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್.
nagarathnavinayakajoshi's picture
nagarathna vinayaka joshi
22
Jan
2011
ಲೇಖನ

ಮೇರಿಕಾದ ಸಾಹಿತ್ಯ ಪ್ರಪಂಚದಲ್ಲಿ ಹೊಸ ಮೈಲಿಗಲ್ಲಾಗಿದ್ದ ಎಕೈಕ ಕವಯಿತ್ರಿ ಎಮಿಲಿ ಡಿಕಿನ್ಸನ್ ರವರ ಬಗ್ಗೆ ಸಂಪದದಲ್ಲಿ ಬರೆಯಲು ಹೆಮ್ಮೆಯೆನಿಸುತ್ತದೆ.....

ಪ್ರತಿಕ್ರಿಯೆಗಳು: 14
ಹಿಟ್ಸ್ : 777
ಸಿಲೋಟೆಂಬ ಮಾನಿಟರ್ ಒಂದೇ ನಮ್ಮ ’ಬುದ್ಧಿಯ ಸುದ್ಧಿಯ’ ಸಂಗ್ರಹಿಸುವ ಅತ್ಯುತ್ತಮ ಪರಿಕರ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೮
anilkumar's picture
ಎಚ್.ಎ. ಅನಿಲ್ ಕುಮಾರ್
12
Aug
2010
ಬ್ಲಾಗ್ ಬರಹ

(೧೪೬) ನಿಮ್ಮ ಬುದ್ಧಿಮತ್ತೆಯನ್ನು ಅಂಗವಿಹೀನವೆಂದು ಪರಿಗಣಿಸದ ಒಂದೇ ಮಾನಿಟರ್ ಎಂದರೆ ಬಳಪದ ಸಿಲೋಟು!

(೧೪೭) ದೆವ್ವದ ಬಗ್ಗೆ ಭಯ ಏಕೆಂದರೆ ನಮಗೆ ಹಣೆಯಬರಹದ ಬಗ್ಗೆ...

ಪ್ರತಿಕ್ರಿಯೆಗಳು: 6
ಹಿಟ್ಸ್ : 705
S = 1/2 gt2 : ವೈಜ್ಞಾನಿಕ ವಿಡಂಬನಾ ಲೇಖನ
makara's picture
ಶ್ರೀಧರ್ ಬಂಡ್ರಿ
27
Oct
2011
ಲೇಖನ

     ...

ಪ್ರತಿಕ್ರಿಯೆಗಳು: 25
ಹಿಟ್ಸ್ : 290

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಮುಕೇಶ್, ಹಿಂದೀ ಚಲನಚಿತ್ರರಂಗದ ಹಿನ್ನೆಲೆ ಗಾಯಕ - ಒಂದು ಕಿರುಪರಿಚಯ

ಮುಕೇಶ್, ಹಿಂದೀ ಚಲನಚಿತ್ರರಂಗದ ಹಿನ್ನೆಲೆ ಗಾಯಕ - ಒಂದು ಕಿರುಪರಿಚಯ

ಇಂದಿಗೆ ಹಿಂದೀ ಚಲನಚಿತ್ರ ಜಗತ್ತಿನ ಹಿನ್ನೆಲೆ ಗಾಯಕಶ್ರೇಷ್ಠರಲ್ಲೊಬ್ಬರಾದ, ವಿಶೇಷವಾಗಿ ಭಾವಪೂರ್ಣವಾಗಿ ಶೋಕ ಗೀತೆಗಳನ್ನು ಹಾಡುವದರಲ್ಲಿ ಹೆಸರುವಾಸಿಯಾದ ಮುಕೇಶ್ ನಿಧನರಾಗಿ ೩೫ ವರ್ಷಗಳಾದವು. ಭಾರತದ ಹಿಂದೀ ಚಲನಚಿತ್ರರಂಗದ ಇತಿಹಾಸದ ಸಂಗೀತ ಕ್ಷೇತ್ರದಲ್ಲಿ ಸುವರ್ಣಯುಗವೆಂದು ಪರಿಗಣಿಸಲಾಗುವ ಇಪ್ಪತ್ತನೇ ಶತಮಾನದ ೫೦ರ ದಶಕದ ಆರಂಭದಿಂದ ತೊಡಗಿ ೭೦ರ ದಶಕದ ಅಂತ್ಯದವರೆಗಿನ ಕಾಲಘಟ್ಟದಲ್ಲಿ ಅತ್ಯಂತ ಜನಪ್ರಿಯ ಹಿನ್ನೆಲೆ ಗಾಯಕರಾಗಿದ್ದ ಮನ್ನಾ ಡೇ, ಮಹಮ್ಮದ್ ರಫಿ, ತಲತ್ ಮೆಹಮೂದ್, ಮತ್ತಿತರ ಕೆಲವರಲ್ಲಿ ಮುಕೇಶ್ ಅಗ್ರಗಣ್ಯರಾಗಿದ್ದರು. ಇವರು ಅಂದಾಜು ೨೦೦ರಕ್ಕೂ ಹೆಚ್ಚು ಚಿತ್ರಗಳಿಗೆ ಹಿನ್ನೆಲೆ ಗಾಯನವನ್ನು ನೀಡಿರುವರಲ್ಲದೆ ಅನೇಕ ಹಿಂದೀ ಭಾವಗೀತೆ, ಶೇರ್, ಮುಂತಾದವುಗಳ ಜತೆಗೆ ಭಕ್ತಿಗೀತೆಗಳನ್ನೂ ಹಾಡಿದ್ದಾರೆ. ಹಿಂದಿಯ ಮಹಾಕವಿ ತುಲಸೀದಾಸರ ರಾಮಾಯಣವನ್ನೂ ಹಾಡಿ ಜನಪ್ರಿಯರಾಗಿದ್ದಾರೆ. 

ಜನನ ಮತ್ತು ವೈಯಕ್ತಿಕ ಜೀವನ

೧೯೨೩ರ ಜುಲೈ ೨೨ರಂದು ಮುಕೇಶ್ ಪಂಜಾಬಿನ ಒಂದು ಮಧ್ಯಮ ವರ್ಗದ ಸಣ್ಣ ಕುಟುಂಬದಲ್ಲಿ ಜನಿಸಿದರು. ದಿಲ್ಲಿಯ ಎಂಜಿನೀಯರಿಂಗ್ ಇಲಾಖೆಯಲ್ಲಿ ಎಂಜಿನಿಯರ್ ಆಗಿದ್ದ ಲಾಲಾ ಜೊರಾವರ್ ಚಂದ್ ಮಾಥುರ್ ಮತ್ತು ಚಾಂದ್ ರಾಣಿಯವರ ಹತ್ತು ಮಕ್ಕಳಲ್ಲಿ ಆರನೇಯವರಾಗಿ ಹುಟ್ಟಿದ ಇವರ ಪೂರ್ಣ ಹೆಸರು ಮುಕೇಶ್ ಚಂದ್ರ ಮಾಥುರ್. ದಿಲ್ಲಿಯಲ್ಲಿ ಹತ್ತನೇ ತರಗತಿಯವರೆಗೆ ಓದಿದ ಮುಕೇಶ್ ಅಲ್ಲಿಯ ಸಾರ್ವಜನಿಕ ಕಾಮಗಾರಿ ಇಲಾಖೆಯಲ್ಲಿ (Delhi Department of Public Works - PWD) ಸಹಾಯಕ ಸರ್ವೇಕ್ಷಕರಾಗಿ (ಅಸಿಸ್ಟೆಂಟ್ ಸರ್ವೇಯರ್) ಏಳು ತಿಂಗಳ ಕಾಲ ದುಡಿದರು. 

 ಮುಕೇಶ್ ೧೯೪೬ರಲ್ಲಿ ಸರಳಾ ತ್ರಿವೇದಿಯವರನ್ನು ಪ್ರೇಮ ವಿವಾಹವಾದರು. ಆಗರ್ಭ ಶ್ರೀಮಂತ ಗುಜರಾತೀ ಬ್ರಾಹ್ಮಣರೊಬ್ಬರ ಮಗಳನ್ನು ಮದುವೆಯಾಗಬೇಕೆಂದು ನಿರ್ಧರಿಸುವಾಗ ಮುಕೇಶ್‌ರವರಿಗೆ ತಮ್ಮದೇ ಆದ ಮನೆಯಿರಲಿಲ್ಲ. ನಿಶ್ಚಿತ ವರಮಾನವಿರಲಿಲ್ಲ. ಚಲನಚಿತ್ರರಂಗವನ್ನು ಆಗಿನ ಕಾಲದಲ್ಲಿ ನೀತಿಯಿಲ್ಲದವರ ಉದ್ಯೋಗವೆಂದು ಪರಿಗಣಿಸಲಾಗುತಿತ್ತು. ಇಂಥ ಹಿನ್ನೆಲೆಯಲ್ಲಿ ಈ ಪ್ರೇಮಿಗಳು ತಮ್ಮ-ತಮ್ಮ ಕುಟುಂಬಗಳಿಂದ ದೂರವಾಗಿ ಮುಂಬೈಯ ಕಾಂದಿವಲಿಯ ದೇವಸ್ಥಾನವೊಂದರಲ್ಲಿ ಮದುವೆಯಾದಾಗ, ಎಲ್ಲ ವಿಧದ ಆಸರೆ ನೀಡಿದವರು ಆರ್ ಡಿ ಮಾಥುರ್ ಎಂಬವರು. ಅವರ ಬಂಧು-ಬಳಗವೆಲ್ಲಾ ಈ ದಾಂಪತ್ಯ ಅತಿ ಶೀಘ್ರದಲ್ಲೇ ಸಾಮರಸ್ಯ ತಪ್ಪಿ ವಿಚ್ಛೇದನದಲ್ಲಿ ಮುಕ್ತಾಯಗೊಳ್ಳುವದೆಂದು ಭವಿಷ್ಯ ನುಡಿದಿದ್ದರು. ಆದರೆ ತಮ್ಮ ಎಲ್ಲಾ ರೀತಿಯ ಕಷ್ಟ-ಕಾರ್ಪಣ್ಯಗಳನ್ನು ಒಂದಾಗಿ ಅನುಭವಿಸಿ, ಜಯಶೀಲರಾಗಿ ೧೯೭೬ರ ಜುಲೈ ೨೨ರಂದು ವಿವಾಹದ ಮೂವತ್ತನೇ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು. ಐದು ದಿನಗಳ ಬಳಿಕ ೨೭ನೇ ಜುಲೈ ೧೯೭೬ರಂದು ಹಿಂದೀ ಚಲನಚಿತ್ರದ ಸಂಗೀತ ಸಾಮ್ರಾಜ್ಯದ ಚಕ್ರವರ್ತಿನಿ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಜತೆ ಅಮೆರಿಕ ಸಂಯುಕ್ತ ರಾಜ್ಯಗಳು ಅಮೆರಿಕ ಸಂಯುಕ್ತ ರಾಜ್ಯಗಳಿಗೆ ಹೊರಟರು.   

ಸಂಗೀತ ಜೀವನ

ಪ್ರಥಮ ಪಾಠಗಳು

ಸಂಗೀತ ಶಿಕ್ಷಕರೊಬ್ಬರು ಮುಕೇಶರ ಮನೆಗೆ ಬಂದು ಅವರ ಸೋದರಿ ಸುಂದರ್ ಪ್ಯಾರೀಗೆ ಸಂಗೀತ ಕಲಿಸುತ್ತಿದ್ದಾಗ ಮುಕೇಶ್ ಪಕ್ಕದ ಕೋಣೆಯಲ್ಲಿ ಆ ಪಾಠಗಳನ್ನು ಆಲಿಸಿಕೊಂಡು, ನಂತರ ಅಭ್ಯಾಸ ಮಾಡಿಕೊಂಡು ಹಾಡುತ್ತಿದ್ದರು. ಇದನ್ನು ಗಮನಿಸಿದ ಆ ಶಿಕ್ಷಕರು ಅವರಲ್ಲಿರುವ ಗಾಯಕನನ್ನು ಗಮನಿಸಿ, ತಮ್ಮ ಸೋದರ ಪರಮೇಶ್ವರೀದಾಸನಿಂದ ಸಂಗೀತದ ಆರಂಭಿಕ ಪಾಠಗಳನ್ನು ಹೇಳಿಸಿಕೊಟ್ಟರು. ಬಳಿಕ ದಿಲ್ಲಿಯಲ್ಲಿ ಉದ್ಯೋಗದಲ್ಲಿದ್ದಾಗ ಮುಕೇಶ್ ೧೯೪೦ರಲ್ಲಿ ಗುಟ್ಟಾಗಿ ಕೆಲವು ಚಲನಚಿತ್ರೇತರ ಹಾಡುಗಳನ್ನು ಧ್ವನಿಮುದ್ರಿಸುವ ಪ್ರಯೋಗಗಳನ್ನು ನಡೆಸಿದರು. ಆ ಕಾಲದಲ್ಲೇ ಮುಂಬೈಗೆ ಹೋಗಿ ಚಲನಚಿತ್ರ ನಟನಾಗುವ ಕನಸನ್ನೂ ಕಾಣುತ್ತಿದ್ದರು. ಮುಕೇಶರು ತಮ್ಮ ಸೋದರಿಯ ಮದುವೆಯಲ್ಲಿ ಹಾಡುತ್ತಿದ್ದದನ್ನು ಅಲ್ಲಿಗೆ ಆಗಮಿಸಿದ್ದ ಅವರ ದೂರದ ಬಂಧು ಮೋತೀಲಾಲರು ಗಮನಿಸಿ, ಅವರನ್ನು ತಮ್ಮ ಜತೆ ಮುಂಬೈಗೆ ಕರೆದೊಯ್ದರು. ಮುಕೇಶರನ್ನು ತಮ್ಮಲ್ಲಿಯೇ ಉಳಿಸಿಕೊಂಡ ಮೋತೀಲಾಲರು ಅವರಿಗೆ ಸಂಗೀತಪಾಠಗಳನ್ನು ಏರ್ಪಡಿಸಿದರು.  

ಸೈಗಲರ ಪರಿಚಯ

ಈ ಸಮಯದಲ್ಲಿ ಹೀಗೊಂದು ಘಟನೆ ನಡೆಯಿತೆನ್ನುತ್ತಾರೆ. ಒಮ್ಮೆ ಆ ಕಾಲದ ಪ್ರಸಿದ್ಧ ಗಾಯಕ-ನಟರಾಗಿದ್ದ ಕುಂದನ್ ಲಾಲ್ ಸೈಗಲ್ ಮೋತೀಲಾಲರ ಮನೆಯೆದುರು ಹೋಗುತ್ತಿದ್ದಾಗ ಆ ಮನೆಯೊಳಗಿಂದ ಬರುತಿದ್ದ ಸುಶ್ರಾವ್ಯ ಹಾಡಿನಿಂದ ಆಕರ್ಷಿತರಾಗಿ ಮನೆಯೊಳಹೊಕ್ಕರು. ಮೊದಲ ಮಹಡಿಯಲ್ಲಿ ಕುಳಿತು ಮುಕೇಶರ ಹಾಡನ್ನು ಕೇಳುತ್ತಿದ್ದ ಮೋತೀಲಾಲರು ಸೈಗಲರಿಗೆ ಮುಕೇಶರನ್ನು ದಿಲ್ಲಿಯಿಂದ ಚಲನಚಿತ್ರರಂಗದಲ್ಲಿ ಕೆಲಸ ಹುಡುಕುತ್ತಾ ಬಂದವರೆಂದು ಪರಿಚಯ ಮಾಡಿಕೊಟ್ಟರು. ಸೈಗಲರು, ‘ಇವನಿಗೆ ಚಲನಚಿತ್ರಗಳಲ್ಲಿ ಹಿನ್ನೆಲೆಗಾಯಕನ ಕೆಲಸ ಕೊಡಿಸಿರಿ. ಒಂದು ದಿನ ಇವನು ನನ್ನ ಸ್ಥಾನಕ್ಕೇರುತ್ತಾನೆಎಂದು ಭವಿಷ್ಯ ನುಡಿದರಂತೆ.  

ಪ್ರಥಮ ಪದಾರ್ಪಣೆ

೧೯೪೧ರಲ್ಲಿ ಸೈಗಲರ ಗೆಳೆಯರಲ್ಲೊಬ್ಬರಾದ ತಾರಾಹರೀಶರು ನ್ಯಾಶನಲ್ ಸ್ಟೂಡಿಯೊ ನಿರ್ಮಿಸುತ್ತಿದ್ದ ಹಿಂದೀ ಚಲನಚಿತ್ರ ನಿರ್ದೋಷ್‌ ಗೆ ಸಿದ್ಧತೆಗಳನ್ನು ನಡೆಸುತಿದ್ದರು. ತಾರಾಹರೀಶರು ವಹಿಸಬೇಕೆಂದುಕೊಂಡಿದ್ದ ಗಾಯಕ-ನಟನ ನಾಯಕ ಪಾತ್ರವನ್ನು ಸೈಗಲರು ಶಿಫಾರಿಸ್ ಮೇರೆಗೆ ಮುಕೇಶರಿಗೆ ಕೊಟ್ಟರು. ‘ಸಿಂಡರೆಲ್ಲಾಕತೆಯಂತೆ ತನ್ನ ಮಲತಾಯಿ ಮತ್ತು ಇಬ್ಬರು ಮಲಸೋದರಿಯರಿಂದ ಹಿಂಸೆಗೊಳಗಾಗಿದ್ದ ನಾಯಕಿಗೆ ಹೊಸಜೀವನವನ್ನು ಕೊಡಿಸುವ ಶ್ರೀಮಂತ ಯುವಕನ ಪಾತ್ರವಿರುವ ನಳಿನಿ ಜಯವಂತ್ ನಾಯಕಿಯಾಗಿದ್ದ ಈ ಚಿತ್ರ ಬಹಳ ಜನಪ್ರಿಯವಾಯಿತು. ಮುಕೇಶರ ಮೊದಲ ಹಾಡು, ದಿಲ್ ಹೀ ಬುಝಾ ಹುಆ ಹೋ ತೋ...’ ಜನರ ನಾಲಿಗೆಯಲ್ಲಿ ಅನುರಣನಗೊಂಡಿತು. ಅವರಿಗೆ ರಣಜೀತ್ ಮೂವಿಟೋನ್ ಕಂಪೆನಿಯಲ್ಲಿ ಕೆಲಸ ಮಾಡಲು ಮೂರು ವರ್ಷಗಳ ಕಾಂಟ್ರಾಕ್ಟ್ ದೊರೆಯಿತು 

ಕಾಂಟ್ರಾಕ್ಟಿನ ಮೂರು ವರ್ಷಗಳಲ್ಲಿ ಮುಕೇಶ್ ಅನೇಕ ಚಿತ್ರಗಳಲ್ಲಿ ನಟಿಸಿದರೂ ಕೆಲವು ಮಾತ್ರ ತೆರೆ ಕಂಡವು. ಅವೂ ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವಂಥ ಜಯ ಗಳಿಸಲಿಲ್ಲ. ಆಗಿನ ಪ್ರಸಿದ್ಧ ಗಾಯಕಿ-ನಟಿ ಸಿತಾರಾದೇವಿಯ ಜತೆ ಖಳ-ಪ್ರೇಮಿಯ ಪಾತ್ರದಲ್ಲಿ ನಟಿಸಿದ ಸುಖ್-ದುಃಖ್ ಚಿತ್ರ ಹಾಗೂ ಕರಣ್ ದೀವಾನ್ ಮತ್ತು ನಳಿನಿ ಜಯವಂತ್ ನಾಯಕ-ನಾಯಕಿಯರಾಗಿದ್ದು, ಮುಕೇಶ್ ಪೋಷಕ ಪಾತ್ರದಲ್ಲಿರುವಆದಾಬ್ ಅರ್ಜ್ ಚಿತ್ರ ಈ ಸಮಯದ ಗಮನಾರ್ಹ ಚಿತ್ರಗಳು. 

ಮೂರು ವರ್ಷಗಳ ಕಾಂಟ್ರಾಕ್ಟ್ ಮುಗಿದ ಮೇಲೆ ಮುಕೇಶ್ ಹಿನ್ನೆಲೆ ಗಾಯನಕ್ಕೆ ಹೆಚ್ಚಿನ ಗಮನವೀಯಲಾರಂಭಿಸಿದರು. ೧೯೪೩ ಮತ್ತು ೧೯೪೪ರಲ್ಲಿ ಮೂರ್ತಿ, ಉಸ್ ಪಾರ್, ಮೊದಲಾದ ಚಿತ್ರಗಳಿಗೆ ಯುಗಲ ಗೀತೆಗಳನ್ನು ಹಾಡಿದ ಬಳಿಕ ೧೯೪೫ರಲ್ಲಿ ಪಹಲೀ ನಜರ್ ಚಿತ್ರದಲ್ಲಿ ಮೊದಲ ಬಾರಿಗೆ ದಿಲ್ ಜಲ್‌ತಾ ಹೈ ತೋ ಜಲ್‌ನೇ ದೇಹಾಡನ್ನು ಹಾಡಿದರು. ಅನಿಲ್ ಬಿಸ್ವಾಸರ ಸಂಗೀತ ನಿರ್ದೇಶನದಲ್ಲಿ ದರ್ಬಾರೀ ರಾಗವನ್ನಾಧರಿಸಿ ರಚಿಸಿದ ಈ ಹಾಡನ್ನು ಮುಕೇಶರ ಚಿತ್ರರಂಗ ಪ್ರವೇಶಕ್ಕೆ ಕಾರಣರಾದ ಮೋತೀಲಾಲರ ಮೇಲೆ ಧರ್ಮ-ಕರ್ಮ ಸಂಯೋಗವೆಂಬಂತೆ ಚಿತ್ರೀಕರಿಸಲಾಯಿತು. ಹಾಡೂ ಚಿತ್ರವೂ ಜನಪ್ರಿಯವಾಯಿತು.   

ತನ್ನದೇ ಆದ ಶೈಲಿ

೧೯೪೮ರ ಚಿತ್ರ ಮೇಲಾ ಹಾಗೂ ೧೯೪೯ರ ಅಂದಾಜ್ ಚಿತ್ರದಲ್ಲಿ ನೌಶಾದರ ಸಂಗೀತ ನಿರ್ದೇಶನದಲ್ಲಿ ಮುಕೇಶ್ ತನ್ನದೇ ಆದ ಶೈಲಿಯನ್ನು ರೂಪಿಸಿಕೊಂಡರು. ಅದರಲ್ಲೂ ಅಂದಾಜ್ ನಲ್ಲಿ ಹಾಡಿದ ತೂ ಕಹೇ ಅಗರ್...’,‘ಝೂಮ್ ಝೂಮ್ ಕೇ ನಾಚೇ ಆಜ್...’ ‘ಹಮ್ ಆಜ್ ಕಹೀಂ ದಿಲ್ ಖೋ ಬೈಠೇ...’ ಮತ್ತುಟೂಟೇ ನ ದಿಲ್ ಟೂಟೇ ನ...’ ಹಾಡುಗಳಲ್ಲಿ ಮುಕೇಶರ ಸ್ವಂತಿಕೆ ಎದ್ದು ತೋರುತ್ತವೆ. ದಿಲೀಪ್ ಕುಮಾರ್, ರಾಜ್ ಕಪೂರ್ ಮತ್ತು ನರ್ಗಿಸ್ ಇರುವ ಈ ಚಿತ್ರದ ವಿಶೇಷವೆಂದರೆ ಈ ಮೇಲೆ ಹೇಳಿದ ಹಾಡುಗಳನ್ನು ದಿಲೀಪ್ ಕುಮಾರ್ ಮೇಲೆ ಚಿತ್ರೀಕರಿಸಿದ್ದರೆ, ರಾಜ್ ಕಪೂರ್‌ಗೆ ಮಹಮ್ಮದ್ ರಫಿ ಹಾಡಿದ್ದಾರೆ!

ರಾಜ್ ಕಪೂರನ ಗಾಯನ ಸ್ವರ ಮುಕೇಶ್ಎಂದು ಪ್ರಸಿದ್ಧವಾದ ಮಾತು ೧೯೪೮ರಲ್ಲಿ ರಾಜ್ ಕಪೂರ್ ನಿರ್ಮಿಸಿ ನಟಿಸಿದ ಆಗ್ ಚಿತ್ರದಿಂದ ಆರಂಭವಾಯಿತು. ಮರು ವರ್ಷ ಶಂಕರ್ ಮತ್ತು ಜೈಕಿಶನರನ್ನು ತನ್ನ ಬಳಗಕ್ಕೆ ರಾಜ್ ಕಪೂರ್ ಸೇರಿಸಿಕೊಂಡು ಮುಂದೆ ಬಹಳ ಕಾಲ ಹಿಂದೀ ಚಿತ್ರರಂಗದಲ್ಲಿ ಸಂಗೀತದ ಹೊಸ ಯುಗವನ್ನು ರಚಿಸಿದರು. ರಾಜ್ ಕಪೂರರ ಮುಂದಿನ ಚಿತ್ರ ಆವಾರಾ ಮತ್ತು ಶ್ರೀ ೪೨೦ ರ ಹಾಡುಗಳಲ್ಲಿ (ಮುಖ್ಯವಾಗಿ ಮುಕೇಶರವು) ಭಾರತದಲ್ಲಿ ಮಾತ್ರವಲ್ಲದೆ ರಶಿಯಾದಲ್ಲೂ ಚೀನಾದಲ್ಲೂ ಜನ ಮೆಚ್ಚುಗೆಯನ್ನು ಪಡೆದವು. 

ಅಭಿನಯರಂಗದಲ್ಲಿ

ಆವಾರಾ ದ ಬಳಿಕ ಮುಕೇಶ್ ಅಭಿನಯದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಿದರು. ಭೈರವಿ ಎಂಬ ಚಿತ್ರದಲ್ಲಿ ನಟಿಸಿದರು; ಆದರೆ ಅದು ಪೂರ್ಣಗೊಳ್ಳಲಿಲ್ಲ. ಸುರೈಯಾ ಜತೆಯಲ್ಲಿ ಅವರು ನಟಿಸಿದ ಮಾಶುಕಾ ೧೯೫೩ರಲ್ಲಿ ತೆರೆ ಕಂಡಿತು. ರೋಶನ್ ಸಂಗೀತ ನೀಡಿದ ಈ ಚಿತ್ರ ಜಯಪ್ರದವಾಗಲಿಲ್ಲ. ೧೯೫೬ರಲ್ಲಿ ಮುಕೇಶ್ ಫಿಲ್ಮ್‌ಸ್ ಎಂಬ ಲಾಂಛನದಡಿಯಲ್ಲಿ ತಾನು ಅಭಿನಯಿಸಿ, ಉಷಾ ಕಿರಣ್ ಮತ್ತು ಮೃದುಲಾ ನಾಯಕಿಯರಾಗಿರುವಅನುರಾಗ್ ಚಿತ್ರವನ್ನು ನಿರ್ಮಿಸಿದರು. ಈ ಚಿತ್ರದ ಸಂಗೀತವನ್ನು ತಾವೇ ನಿರ್ದೇಶಿಸಿದಲ್ಲದೆ, ಮೂರು ಗೀತೆಗಳನ್ನೂ ಬರೆದು ಹಾಡಿದರು. ದುರದೃಷ್ಟವಶಾತ್ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಸೋತು, ಮುಕೇಶರಿಗೆ ಅಪಾರ ನಷ್ಟವಾಯಿತು. ಝೂಟೇ ಬಂಧನ್ ಎಂಬ ಚಿತ್ರ ನಿರ್ಮಿಸುವದಾಗಿ ಪ್ರಕಟಿಸಿದರೂ ಅದಾಗಲಿಲ್ಲ. ೧೯೫೩ರಲ್ಲೇ ಬಿಡುಗಡೆಯಾದ ರಾಜ್ ಕಪೂರರ ಆಹ್ ನಲ್ಲಿ ಛೋಟಿಸೀ ಯಹ್ ಜಿಂದ್‌ಗಾನೀರೇ...’ ಎಂಬ ಹಾಡನ್ನು ಟಾಂಗೇವಾಲನಾಗಿ ಹಾಡಿ ಅಭಿನಯಿಸಿದ ನಂತರ ಮುಕೇಶ್ ಅಭಿನಯಕ್ಕೆ ವಿದಾಯ ಹೇಳಿ ಗಾಯನಕ್ಕೇ ಮುಡಿಪಿಟ್ಟರು

ಮತ್ತೆ ಹಿನ್ನೆಲೆಗೆ

ಆದರೆ ಈ ಸಮಯಕ್ಕೆ ಮುಕೇಶ್ ಹಿನ್ನೆಲೆ ಗಾಯನ ಕ್ಷೇತ್ರದಲ್ಲಿ ತಮ್ಮ ಸ್ಥಾನವನ್ನು ಮತ್ತೆ ನಿರ್ಮಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದುಬಿಟ್ಟಿತ್ತು. ಸುಮಾರು ಐದು ವರ್ಷಗಳವರೆಗೆ ಅವರಿಗೆ ಹೆಚ್ಚಿನ ಅವಕಾಶಗಳು ದೊರೆಯದೆ ಆರ್ಥಿಕಸ್ಥಿತಿ ತುಂಬಾ ಹದಗೆಟ್ಟಿತ್ತು. ೧೯೫೮ರಲ್ಲಿ ದಿಲೀಪ್ ಕುಮಾರ್ ಅಭಿನಯದ ಯಹೂದಿ ಚಿತ್ರದ ಯೆಹ್ ಮೇರಾ ದೀವಾನಾಪನ್ ಹೈ...’  ಹಾಡು ಬಿಡುಗಡೆಯಾದಾಗ ಮುಕೇಶ್ ಮತ್ತೆ ಚಲನಚಿತ್ರಾಕಾಶದಲ್ಲಿ ಹೊಳೆಯುವ ತಾರೆಯಾದರು. ದಿಲೀಪ್ ಕುಮಾರನ ಆ ವರ್ಷದ ಇನ್ನೊಂದು ಚಿತ್ರ ಬಿಮಲ್ ರಾಯ್ ನಿರ್ದೇಶನದ ಮಧುಮತಿ ಚಿತ್ರದಲ್ಲಿ ಸಲಿಲ್ ಚೌಧುರಿ ಸಂಗೀತ ನಿರ್ದೇಶನದಲ್ಲಿ ಹಾಡಿದ ಎಲ್ಲವೂ ಜನಪ್ರಿಯವಾದವು. ಅಲ್ಲದೆ ಪರ್ವರಿಶ್ ಹಾಗೂ ಮರುವರ್ಷದ ಫಿರ್ ಸುಬಾಹ್ ಹೋಗೀ ಚಿತ್ರಗಳ ಹಾಡುಗಳ ಜತೆಗೆ ೧೯೬೦ರಿಂದ ೧೯೭೬ರ ವರೆಗಿನ ಸಮಯದಲ್ಲಿ ಅತ್ಯಂತ ಹೃದಯಂಗಮ ಹಾಡುಗಳಿಂದ ಮುಕೇಶ್ ರಸಿಕರನ್ನು ರಂಜಿಸಿದರು. ನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಮತ್ತು ಒಮ್ಮೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಶ್ರೇಷ್ಠ ಹಿನ್ನೆಲೆ ಗಾಯನಕ್ಕಾಗಿ ಪಡೆದರು. 

ರಾಜ್ ಕಪೂರರ ಸಂಗೀತಸ್ವರವೆಂದು ಗುರುತಿಸಲ್ಪಟ್ಟ ಮುಕೇಶ್ ಮನೋಜ್ ಕುಮಾರನಿಗೇ ಹೆಚ್ಚು ಹಾಡಿದರಲ್ಲದೆ, ಶಂಕರ್-ಜೈಕಿಶನರ ಸಂಗೀತ ನಿರ್ದೇಶನಕ್ಕಿಂತ ಅಧಿಕವಾಗಿ ಕಲ್ಯಾಣ್‌ಜೀ-ಆನಂದ್‌ಜೀಯವರ ನಿರ್ದೇಶನದಲ್ಲಿ ಹಾಡಿದರು. ರಾಜ್ ಕಪೂರರ ಸತ್ಯಮ್ ಶಿವಮ್ ಸುಂದರಮ್ ಚಿತ್ರದಲ್ಲಿ ಲಕ್ಷ್ಮೀಕಾಂತ್-ಪ್ಯಾರೇಲಾಲರ ಸಂಗೀತ ನಿರ್ದೇಶನದಲ್ಲಿ ಧ್ವನಿಮುದ್ರಿಸಲ್ಪಟ್ಟ ಚಂಚಲ್, ಶೀತಲ್, ನಿರ್ಮಲ್, ಕೋಮಲ್ ಸಂಗೀತ್ ಕೀ ದೇವೀ ಸ್ವರ್ ಸಜ್‌ನೀ’  ಹಾಡು ಕೊನೆಯದಾಯಿತು. ನಂತರ ಅವರು ಲತಾ ಜತೆಗೂಡಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಸಂಗೀತ ಪರ್ಯಟನೆಗೆ ಹೋದರು.   

ಗಾಯನ ವೈಖರಿ ಮತ್ತು ವೈವಿಧ್ಯ

ಎದೆ ತುಂಬುವ ಹಾಡುಗಳು

ಮುಕೇಶರಿಗೆ ಹಾಡಿನ ಸನ್ನಿವೇಶವನ್ನು ವಿವರಿಸಿದಂತೆಯೇ ತಾನು ಹಿನ್ನೆಲೆ ಗಾಯನವನ್ನು ನೀಡುವ ಪಾತ್ರದ ಒಳಹೊಕ್ಕು ಅದರ ಸಂವೇದನೆಯನ್ನು ಅನುಭವಿಸಿ, ತಕ್ಕಂತೆ ಹಾಡುವ ಸಾಮರ್ಥ್ಯವಿತ್ತು. ಉದಾಹರಣೆಗೆ ಈ ಮುಂದಿನ ಹಾಡುಗಳನ್ನು ಗಮನಿಸಬಹುದು.  ಅಫ್‌ಸಾನಾ(೧೯೫೧) ಚಿತ್ರದ ಕಿಸ್‌ಮತ್ ಬಿಗ್‌ಡೀ, ದುನಿಯಾ ಬದ್‌ಲೀ 

ಯಹೂದೀ ಚಿತ್ರದ ಯೆಹ್ ಮೇರಾ ದೀವಾನಾಪನ್ ಹೈ 

ದೇವರ್ ಚಿತ್ರದ ಬಹಾರೋಂ ನೆ ಮೇರಾ ಚಮನ್ ಲೂಟ್ ಕರ್, ಇತ್ಯಾದಿ. 

ಅಲ್ಲದೆ, ಆನಂದ್ ಚಿತ್ರದ ಕಹಿಂ ದೂರ್ ಜಬ್ ದಿನ್ ಡಲ್ ಜಾಏ...’  ಹಾಡಿನಲ್ಲಿ ಮಾಧುರ್ಯದ ಜತೆ ದುಃಖದ ಒಳತೋಟಿಯೊಂದು ಹರಿಯುವದನ್ನು ಅನುಭವಿಸಬಹುದು. ಆ ಚಿತ್ರದ ಪಾತ್ರ ಆನಂದ್ ಹೇಳುವಂತೆ ದುಃಖದಲ್ಲೂ ಸೌಂದರ್ಯವನ್ನು ಕಾಣಬಹುದು.  

ವೈವಿಧ್ಯ

ಆದರೆ ಶೋಕಭರಿತ ಹಾಡುಗಳಷ್ಟೇ ಅಲ್ಲ; ಛೇಡಿಸುವ ಪ್ರೇಮನಿವೇದನೆಯ ಹಾಡುಗಳೂ ಬಹಳಷ್ಟಿವೆ. ಮನ್‌ಚಲೀ ಚಿತ್ರದ ತನ್ ಮನ್ ಧನ್ ಸಬ್ ಹೈ ತೇರಾ..’ ದೇವರ ಭಜನೆಯಂತೆ ತೋರುವ ತುಂಟತನದ ಹಾಡು. ಅಂತೆಯೇ ಶಾರದಾ ಚಿತ್ರದ ಜಪ್ ಜಪ್ ಜಪ್ ರೇ ಮನ್‌ವಾ ಜಪ್ ರೇ ಪ್ರೀತ್ ಕೀ ಮಾಲಾ...’ ಎಂಬ ಹಾಡೂ ಕೂಡಾ. ಹೆಚ್ಚಾಗಿ ಕೇಳಿರಲಾರದ ಹಾಡುಗಳು, ಸಸುರಾಲ್ ಚಿತ್ರದ ಅಪ್ನೆ ಉಲ್ಫತ್ ಪೆ ಜಮಾನೇ ಕಾ ಪೆಹ್‌ರಾ ಹೋತಾ...’; ಮುಹಬ್ಬತ್ ಇಸ್ಕೋ ಕಹತೇ ಹೈಂ ಚಿತ್ರದ ಇತ್ನಾ ಹುಸ್ನ್ ಪೆ ಹುಜೂರ್ ನ ಗುರೂರ್ ಕೀಜಿಎ...’; ಎಕ್ ಬಾರ್ ಮುಸ್ಕುರಾ ದೋ ಚಿತ್ರದ ಚೆಹೆರೇ ಪೆ ಜರಾ ಆಂಚಲ್..’ ಇತ್ಯಾದಿ. ೧೯೫೯ರ ಫಿರ್ ಸುಬ್‌ಹಾ ಹೋಗೀ ಚಿತ್ರದ ಚೀನೋ ಅರಬ್ ಹಮಾರ, ಹಿಂದೂಸ್ತಾನ್ ಹಮಾರಾ, ರಹನೇ ಕೋ ಘರ್ ನಹೀಂ ಹೈ, ಸಾರಾ ಜಹಾಂ ಹಮಾರಾ..’ ಎಂಬ ಸಾಮಾಜಿಕ ವಿಡಂಬನೆಯ ಹಾಡನ್ನು ಕಳಕಳಿಯ ನೋವಿನಿಂದ ಕೂಡಿದ ದನಿಯಲ್ಲಿ ಹಾಡಿದ ವೈಶಿಷ್ಟ್ಯ ಮುಕೇಶರದು!  

ನಿಧನ

೫೩ನೇ ಹುಟ್ಟುಹಬ್ಬವನ್ನು ಮತ್ತು ವಿವಾಹದ ಮೂವತ್ತನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ೨೭ನೇ ಜುಲೈ ೧೯೭೬ರಂದು ಲತಾ ಮಂಗೇಶ್ಕರರೊಡನೆ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಹೋದ ಮುಕೇಶ್ ಸರೀ ಒಂದು ತಿಂಗಳವರೆಗೆ ಆ ದೇಶದ ಹಲವೆಡೆ ತಮ್ಮ ಸ್ವರ ಮಾಧುರ್ಯದಿಂದ ರಸಿಕರನ್ನು ರಂಜಿಸಿ ಮಿಶಿಗನ್ ಸಂಸ್ಥಾನದ ಡೆಟ್ರಾಯಿಟ್‌ನಲ್ಲಿದ್ದರು. ರಂಗದ ಮೇಲೆ ಬರುತ್ತಿದ್ದಂತೆಯೇ ಹೃದಯಸ್ತಂಭನದಿಂದ ಅನಿರೀಕ್ಷಿತವಾಗಿ ನಿಧನಿಸಿದರು. ಬಳಿಕ ಅವರ ಪಾರ್ಥಿವ ಶರೀರವನ್ನು ಮುಂಬೈಗೆ ತಂದು ಅಂತಿಮ ಕ್ರಿಯೆಗಳನ್ನು ನಡೆಸಲಾಯಿತು. 

ಅದರ ಮುಂದಿನ ವರ್ಷ ಮುಕೇಶರ ಹಾಡುಗಳಿರುವ ಧರಮ್ ವೀರ್, ಅಮರ್ ಅಕ್ಬರ್ ಆಂಟನಿ, ಖೇಲ್ ಖಿಲಾಡೀಕಾ, ದರಿಂದಾ, ಚಾಂದೀ ಸೋನಾ, ಮೊದಲಾದ  ಅನೇಕ ಚಿತ್ರಗಳು ಬಿಡುಗಡೆಯಾದವು. ೧೯೭೮ರಲ್ಲಿ ಆಹುತಿ, ತುಮ್ಹಾರೀ ಕಸಮ್ ಮತ್ತು ಸತ್ಯಮ್ ಶಿವಮ್ ಸುಂದರಮ್ ಬಿಡುಗಡೆಯಾದವು. ನಂತರವೂ ವರ್ಷಕ್ಕೆ ಒಂದೆರಡು ಚಿತ್ರಗಳಂತೆ ೧೯೯೭ರವರೆಗೂ ಅವರ ಹಿನ್ನೆಲೆ ಗಾಯನವಿರುವ ಚಿತ್ರಗಳು ಬಿಡುಗಡೆಯಾದವು. ಹೀಗೆ ತೆರೆ ಕಂಡ ಕೊನೆಯ ಚಿತ್ರ ಚಾಂದ್ ಗ್ರಹಣ್.  

ಜೀವನದ ಮುಖ್ಯ ಘಟ್ಟಗಳು

೧೯೨೩ - ಜನನ

೧೯೪೦ - ಪ್ರಪ್ರಥಮ ಧ್ವನಿ ಮುದ್ರಣ: ದಿಲ್ಲಿಯ ಎಚ್ ಎಮ್ ವಿ ಕಂಪನಿಯಲ್ಲಿ. 

೧೯೪೧ - ಅಭಿನಯಿಸಿದ ಮೊದಲ ಚಿತ್ರ ನಿರ್ದೋಷ್ 

೧೯೪೫ - ಮೊದಲ ಹಿನ್ನೆಲೆ ಗಾಯನ: ಪೆಹೆಲೀ ನಜರ್ ಚಿತ್ರಕ್ಕೆ, ದಿಲ್ ಜಲ್‌ತಾ ಹೈ ತೋ ಜಲ್‌ನೇ ದೇ 

೧೯೪೬ - ಸರಳಾ ತ್ರಿವೇದಿಯವರೊಡನೆ ವಿವಾಹ. 

೧೯೪೮ - ರಾಜ್ ಕಪೂರರ ನಿರ್ಮಾಣದ ಮೊದಲ ಚಿತ್ರ ಆಗ್ ಗೆ ಗಾಯನ. 

೧೯೫೩ - ಅಭಿನಯಿಸಿದ ಕೊನೆಯ ಚಿತ್ರ, ರಾಜ್ ಕಪೂರರ ಆಹ್.ಹಾಡು ಛೋಟೀಸೀ ಯೆಹ್ ಜಿಂದಗಾನೀ ರೇ..’ 

೧೯೫೯ - ಮೊದಲ ಫಿಲ್ಮ್ ಫೇರ್ ಪ್ರಶಸ್ತಿ: ರಾಜ್ ಕಪೂರರ ಅನಾಡಿ ಚಿತ್ರದ ಹಾಡಿಗೆ. 

೧೯೬೨ - ಲಂಡನ್, ಇಂಗ್ಲೆಂಡಲ್ಲಿ ಸಂಗೀತ ಮೇಳ. ಬಿ ಬಿ ಸಿ ಯಲ್ಲಿ ಸಂದರ್ಶನ. 

೧೯೭೪ - ರಾಷ್ಟ್ರೀಯ ಪ್ರಶಸ್ತಿ - ರಜನೀಗಂಧ ಚಿತ್ರದ ಕಈ ಬಾರ್ ಯೊಂಹಿ ದೇಖಾ ಹೈ...’ಹಾಡಿಗೆ. 

೧೯೭೬ - ನಿಧನ.   

ಪ್ರಶಸ್ತಿಗಳು

ರಾಷ್ಟ್ರೀಯ ಪ್ರಶಸ್ತಿಗಳು

೧೯೭೪ - ರಜನೀಗಂಧ ಚಿತ್ರದ ಕಈ ಬಾರ್ ಯೊಂಹಿ ದೇಖಾ ಹೈ...’ಹಾಡಿಗೆ.  

ಫಿಲ್ಮ್ ಫೇರ್ ಪ್ರಶಸ್ತಿಗಳು

೧೯೫೯ - ಅನಾಡಿ ಚಿತ್ರದ ಸಬ್ ಕುಛ್ ಸೀಖಾ ಹಮ್ನೇ..’ ಹಾಡಿಗೆ. 

೧೯೭೦ - ಪಹಚಾನ್ ಚಿತ್ರದ ಸಬ್ ಸೆ ಬಡಾ ನಾದಾನ್..’ ಹಾಡಿಗೆ. 

೧೯೭೨ - ಬೇಈಮಾನ್ ಚಿತ್ರದ ಜೈ ಬೋಲೋ ಬೆಈಮಾನ್ ಕೀ ಹಾಡಿಗೆ. 

೧೯೭೬ - ಕಭೀ-ಕಭೀ ಚಿತ್ರದ ಕಭೀ ಕಭೀ ಮೇರೇ ದಿಲ್ ಮೇಂ...’ ಹಾಡಿಗೆ.  

 ಚಿತ್ರ: Spundun

 

Average: 5 (7 votes)
264 ಹಿಟ್ಸ್

ಪ್ರತಿಕ್ರಿಯೆಗಳು

gopinatha's picture
27
Aug
2011
6:43

ಪ್ರಭು ಅವರೇ
ನಾನೂ ಮುಖೇಶರ ಆರಾಧಕ
ಸುಂದರ ವಿವರಣೆಯುಳ್ಳ ಉಪಯುಕ್ತ ಲೇಖನ
ತುಂಬಾ ತುಂಬಾ ಧನ್ಯವಾದಗಳು

Iynanda Prabhukumar's picture
29
Aug
2011
9:30

ಮಿತ್ರ ಗೋಪೀನಾಥ್,

ಮುಕೇಶರ ಇಪ್ಪತ್ತೈದನೇ ಪುಣ್ಯ ತಿಥಿಯಲ್ಲಿ ‘ಕಸ್ತೂರಿ’ಯಲ್ಲಿ ಪ್ರಕಟಣೆಗೆ ಕಳುಹಿಸಲೆಂದು ಹತ್ತು-ಹನ್ನೆರಡು ವರ್ಷಗಳ ಹಿಂದೆ ವಿಷಯ ಸಂಗ್ರಹಿಸಲಾರಂಭಿಸಿದೆ. ಕರಡು ಪ್ರತಿಯನ್ನೂ ತಯಾರಿಸಿದೆ. ಅಷ್ಟೇ. ಆಮೇಲಿನ ನನ್ನ ಕೆಲಸಗಳ ಒತ್ತಡದಿಂದ ಮತ್ತು ಸೋಮಾರಿತನದಿಂದ ಅದನ್ನಲಿಗೇ ಬಿಟ್ಟು, ಕೆಲವು ಪತ್ರಮಿತ್ರರಿಗೆ ಪತ್ರಗಳನ್ನು ಬರೆಯುವದರಲ್ಲಿಯೇ ಬರೆಯುವ ತೃಪ್ತಿಯನ್ನು ಪಡೆದೆ! ಆ ಬರೆಹ ಎಲ್ಲಿಯೋ ಸಂಗ್ರಹಯೋಗ್ಯ ಪತ್ರಿಕೆಗಳೊಳಗೆ ನನ್ನ ಔದಾಸೀನ್ಯವನ್ನು ತಾಳಲಾರದೆ ಅಡಗಿ ಕುಳಿತಿದೆ.

ಮೊನ್ನೆ ಇಪ್ಪತ್ತೇಳರಂದು ಆಡಿಯೊ ಸಿ ಡಿ ಯಲ್ಲಿ ಮುಕೇಶ್ ಹಾಡುಗಳ ನನ್ನ ಸಂಗ್ರಹವನ್ನು ಕೇಳಿದೆ. ಬಳಿಕ ರೇಡಿಯೊದಲ್ಲಿ... ಇದ್ದಕ್ಕಿದ್ದ ಹಾಗೇ ಪಿ ಸಿ ಯಲ್ಲಿ ಬರೆದಿರಿಸಿದ್ದ ಈ ಲೇಖನದ ನೆನಪಾಯಿತು. ತುಸು ಬದಲಾಯಿಸಿ ‘ಸಂಪದ’ದಲ್ಲಿ ಅಪ್ ಲೋಡ್ ಮಾಡಿಯೇ ಬಿಟ್ಟೆ!

ಬೆನ್ನುತಟ್ಟಿ ನೀವು ಬರೆದ ಪ್ರತಿಕ್ರಿಯೆ ನೋಡಿ ತುಂಬಾ ಸಂತೋಷವಾಯಿತು. ಧನ್ಯವಾದಗಳು, ಗೋಪೀನಾಥ್!

santhosh_87's picture
27
Aug
2011
7:26

ಹಳೆಯೆ ಧ್ವನಿಗಳು(ಲತಾ,ಮುಕೇಶ್,ರಫಿ,ಕಿಶೋರ್, ಮನ್ನಾಡೇ, ಮಹೇಂದ್ರ), ಬಿಸಿ ಬಿಸಿ ಕಾಫಿ ಮತ್ತು ಮಳೆ ಅದ್ಭುತ ಅನುಭವ :).. ಮುಕೇಶ್ ಬಗ್ಗೆ ಬರೆದದಕ್ಕಾಗಿ ಧನ್ಯವಾದಗಳು್

Iynanda Prabhukumar's picture
29
Aug
2011
10:01

ಗೆಳೆಯ ಸಂತೋಷ್!
ನನ್ನ ಮನಸ್ಸಿನ ಮಾತುಗಳನ್ನು ಬರೆದಿರುವಿರಿ.
ಒಂದೇ ಸಮನೆ ಬೀಳುತ್ತಿರುವ ಮಳೆ; ಬಿಸಿ-ಬಿಸಿ ಕಾಫಿಯ ಎತ್ತರದ ಲೋಟವನ್ನು ಅಂಗೈಗಳಿಂದ ಆವರಿಸಿ ಹಿಡಿದು, ಗುಟುಕು-ಗುಟುಕು ಹೀರುತ್ತಾ,
ಲತಾಳ ಸ್ವರ ಮಾಧುರ್ಯದ, ಮುಕೇಶ ಭಾವಪೂರ್ಣತೆಯ, ರಫಿಯ ಜೀವನೋತ್ಸಾಹದ, ಕಿಶೋರನ ತುಂಬುದನಿಯ, ಮನ್ನಾಡೆಯ ಸಂಗೀತ ಸೌರಭದ, ಮಹೇಂದ್ರನ ರೇಶ್ಮೆಯ ನವಿರಿನ ಹಾಡುಗಳನ್ನು ಕೇಳುತ್ತಿದ್ದರೆ, "ಲೋ, ಇಂದ್ರ! ನಿನ್ನ ಸ್ವರ್ಗಕ್ಕೆ ಹಚ್ಕೋ, ತೊಗೋ," ಅಂತ ಬೆಂಕಿ ಪೆಟ್ಟಿಗೆ ಕೊಡೋಣಾಂತನ್ನಿಸುತ್ತೆ... ಏನಂತೀರಿ?
ಮಹೇಂದ್ರ ಕಪೂರನ ಹಾಡುಗಳೆಂದರೆ ಎಲ್ಲರೂ ಮನೋಜನ ಮೆರಿ ದೇಶ್ ಕಿ ಧರ್ತೀ ಯನ್ನೇ ನೆನಪಿಸಿಕೊಂಡಾರು. ಆದರೆ, ‘ಚಲೋ ಎಕ್ ಬಾರ್ ಫಿರ್ ಸೇ..’(ಗುಮ್ ರಾಹ್), ‘ಭೂಲ್ ಸಕ್‍ತಾ ಹೈ ಭಲಾ ಕೌನ್...(ಧರ್ಮ ಪುತ್ರ), ‘ದಿಲ್ ಲಗಾ ಕರ್ ಹಮ್ ಯಹ್ ಸಮ್‍ಝೇ..’ (ಜಿಂದಗೀ ಔರ್ ಮೌತ್), ಇತ್ಯಾದಿ ಹಾಡುಗಳು ಅವರ ರೇಶ್ಮೀ ಸ್ವರದ ಹಾಡುಗಳು!
ಹಳೆಯ ಹಾಡುಗಳನ್ನು ಮೆಚ್ಚುವ ನೀವು ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು!

ಗಣೇಶ's picture
30
Aug
2011
12:01

ಐನಂಡ ಪ್ರಭುಕುಮಾರ್,
ಮುಕೇಶ್ ಅಭಿಮಾನಿಗಳಲ್ಲಿ ನಾನೂ ಒಬ್ಬ. ಅವರ ಹಾಡೇ ನನಗೆ ಕಾಫಿ, ಟೀ, ಮಳೆ ಎಲ್ಲಾ..ಪ್ಯಾರ್ ಹುವಾ ಇಕ್‌ರಾರ್ ಹುವಾ ..
ವಿವರಗಳಿಗೆ ತುಂಬಾ ತುಂಬಾ ಧನ್ಯವಾದಗಳು.
ಅಂದ ಹಾಗೇ ಆಸು ಹೆಗ್ಡೆಯವರೆ,
"ಮೆಹಬೂಬ್ ಮೆರೇ..
ಮೆಹಬೂಬ್ ಮೆರೇ..
ತೂ ಹೆ ತೊ ದುನಿಯಾಂ ಕಿತ್ನೀ ಹಸೀಂ..." ಹಾಡಿನ ಭಾವಾನುವಾದ ಮಾಡಿದ್ದೀರಾ.?
-ಗಣೇಶ.

asuhegde's picture
30
Aug
2011
10:26

ಗಣೇಶ,
ಮಾಡಿಲ್ಲ ...
ಮಾಡೋಣ ಬಿಡಿ... ಕೋರಿಕೆಯ ಮೇರೆಗೆ!
:)
-ಆಸು

asuhegde's picture
31
Aug
2011
5:40

ಮೆಹಬೂಬ್ ಮೆರೇ... ಮೆಹಬೂಬ್ ಮೆರೇ (ಭಾವಾನುವಾದ)

http://sampada.net/b...

ಓದಿ, ತಮ್ಮ ಅನಿಸಿಕೆ ತಿಳಿಸಿ!

VeerendraC's picture
28
Aug
2011
12:23

ನಮಗೆಲ್ಲ ಮುಕೇಶ್ ರ ಪರಿಚಯ ಇಷ್ಟು ಚೆನ್ನಾಗಿ ಮಾಡಿಸಿದಕ್ಕೆ ತುಂಬಾ ಧನ್ಯವಾದಗಳು. ರಾಜ್ ಕಪೂರ್ ಚಿತ್ರದಲ್ಲಿ "ಜೀನಾ ಯಹಾ ಮರನ ಯಹಾ, ಇಸಕೇ ಸಿವ ಜಾನಾ ಕಹಾ .. ಮತ್ತಿತ್ತರ ಗೀತೆಗಳು ಮುಕೇಶರ ಕಂಠದಲ್ಲಿಅಮರವಾದವು

Iynanda Prabhukumar's picture
29
Aug
2011
10:02

ಮಿತ್ರ ವೀರೇಂದ್ರ,
‘ಜೀನಾ ಯಹಾಂ, ಮರ‍್ನಾ ಯಹಾಂ..’ ರಾಜ್ ಕಪೂರನ ಬ್ರ್ಯಾಂಡ್ ಹಾಡಿನಂತೆ. ಅವನ ಹಳೆಯ ಚಿತ್ರಗಳಲ್ಲೂ (ನನ್ನ ನೆನಪಿನಲ್ಲಿ ‘ಆಹ್’ ನಲ್ಲಿ) ಈ ಹಾಡಿನ ಧುನ್ ಅಲ್ಲಲ್ಲಿ ಒಳತೋಟಿಯಾಗಿ ಹರಿಯುತ್ತದೆ. ನನ್ನ ವೈಯಕ್ತಿಕ ಅನ್ನಿಸಿಕೆಯಂತೆ ಮುಕೇಶನ ಹಾಡುಗಳನ್ನು ಅನುಭವಿಸುವವರ psycheಯೇ ವಿಶಿಷ್ಟವಾದುದು! ಪ್ರತಿಕ್ರಿಯೆಗೆ ಧನ್ಯವಾದಗಳು.

asuhegde's picture
30
Aug
2011
10:22

<<ಮುಕೇಶನ ಹಾಡುಗಳನ್ನು ಅನುಭವಿಸುವವರ psycheಯೇ ವಿಶಿಷ್ಟವಾದುದು! >>

ಹೂಂ...
ವಿರಹ ವೇದನೆಯಲ್ಲಿರುವ ಯಾವನೇ ಆದರೂ, ಮುಕೇಶ್ ಹಾಡಿರುವ ವಿರಹ ಗೀತೆಗಳನ್ನು ಆಲಿಸುತ್ತಾ ಜೊತೆಗೆ ಒಂದರ್ಧ ಬಾಟಲಿ ವಿಸ್ಕಿ ಕುಡಿಯುತ್ತಾ ಅರ್ಧ ಒಂದು ಘಂಟೆ ಕಳೆದನೆಂದಾದರೆ, ಆತ ಖಂಡಿತಕ್ಕೂ ಕಿಂಚಿತ್ತೂ ಅಳುಕಿಲ್ಲದೇ, ಸಂತೋಷದಿಂದ ಆತ್ಮಹತ್ಯೆ ಮಾಡಿಕೊಂಡಾನು!

:)

Iynanda Prabhukumar's picture
30
Aug
2011
4:27

ಆಗ, ‘ಜಾನೇ ಚಲೇ ಜಾತೇ ಹೈಂ ಕಹಾಂ..?’ ಎಂದು ಹಾಡಿ, ಉತ್ತರ ಸಿಗದಿದ್ದಾಗ,
‘ಜಾನೇವಾಲೇ ಹೋ ಸಕೇ ತೊ ಲೌಟ್ ಕೆ ಆನಾ..’ ಎಂದು ಹಾಡಿ, ಹಿಂದಿರುಗದಿದ್ದಾಗ,
‘ಚಲ್ ಅಕೇಲಾ, ಚಲ್ ಅಕೇಲಾ, ತೇರ ಮೇಲಾ ಪೀಛೆ ಚೂಟಾ..’
ಎಂದು ಹಾಡೋಣ! :-)

asuhegde's picture
30
Aug
2011
10:19

ಕಲ್ ಔರ್ ಆಯೇಂಗೇ ನಗ್ಮೋಂ ಕೀ ಖಿಲ್ ತೀ ಖಲಿಯಾ ಚುನ್ ನೇ ವಾಲೇ
ಹಮ್ ಸೇ ಬೆಹ್ ತರ್ ಗಾನೇವಾಲೇ ತುಮ್ ಸೇ ಬೆಹ್ ತರ್ ಸುನ್ ನೇ ವಾಲೇ
ಕಲ್ ಕೋಯೀ ಮುಝ್ ಕೋ ಯಾದ್ ಕರೇ ಕ್ಯೋಂ ಕೋಯೀ ಮುಝ್ ಕೋ ಯಾದ್ ಕರೇ
ಮಸ್ರೂಫ್ ಜಮಾನಾ ಮೇರೇ ಲಿಯೇ ಕ್ಯೋಂ ವಖ್ತ್ ಅಪ್ನಾ ಬರ್ ಬಾದ್ ಕರೇ!

ನಗುವ ಗೀತಪುಷ್ಪಗಳನ್ನು ಆರಿಸಿಕೊಳ್ಳುವವರು ಇನ್ನೂ ಬಂದಾರು
ನನ್ನಿಂದ ಉತ್ತಮವಾಗಿ ಹಾಡುವವರು ಹಾಗೂ ತಮಗಿಂತಲೂ ಉತ್ತಮವಾಗಿ ಆಲಿಸುವವರೂ ಬಂದಾರು
ನನ್ನನ್ನು ಯಾರು ನೆನೆಸಿಯಾರು... ನನ್ನನ್ನು ಯಾಕಾದರೂ ನೆನೆಸಿಯಾರು
ಸದಾ ವ್ಯಸ್ತವಾಗಿರುವ ಈ ಜನರು ನನಗಾಗಿ ಯಾಕೆ ತಮ್ಮ ಸಮಯ ಪೋಲು ಮಾಡಿಯಾರು!

ಹೀಗಂದು ಹೋದ ಆ ಮಹಾನ್ ಗಾಯಕನನ್ನು ಯಾರೂ ಮರೆಯಲಾಗದು ಅನ್ನುವುದು ವಾಸ್ತವ!

ಕೆ.ಎಲ್.ಸೈಗಲ್, ಮಹಮ್ಮದ್ ರಫಿ, ಮನ್ನಾ ಡೇ, ಮುಕೇಶ್, ಮಹೇಂದ್ರ ಕಪೂರ್ ಹಾಗೂ ಕಿಶೋರ್ ಕುಮಾರರ ಹಾಡುಗಳನ್ನು ಗುನುಗುನಿಸುತ್ತಾ ಬೆಳೆದ ನನ್ನಂಥವರಿಗೆ, ಅವರನ್ನೆಲ್ಲಾ ಮರೆಯಲು ಎಂದಿಗೂ ಸಾಧ್ಯವೇ ಇಲ್ಲ.

ಉತ್ತಮ ಲೇಖನಕ್ಕಾಗಿ ಧನ್ಯವಾದಗಳು!
-ಆಸು ಹೆಗ್ಡೆ

Iynanda Prabhukumar's picture
30
Aug
2011
4:30

ಪ್ರಿಯ ಸುರೇಶ್,

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು!

manju787's picture
30
Aug
2011
11:06

ಸು೦ದರ ಪರಿಚಯಾತ್ಮಕ ಲೇಖನ ಪ್ರಭುಕುಮಾರ್, ಮುಖೇಶರ ಗೀತೆಗಳನ್ನು ಕೇಳಿ ಆನ೦ದಿಸದ ಭಾರತೀಯನೇ ಇಲ್ಲವೇನೋ! ೫೩ ಸಾಯುವ ವಯಸ್ಸಲ್ಲ, ಅವರ ಧಿಡೀರ್ ಅಸ್ತಮಾನ ನಿಜಕ್ಕೂ ಭಾರತೀಯ ಚಿತ್ರರ೦ಗಕ್ಕೆ ತು೦ಬಲಾಗದ ನಷ್ಟ.

Iynanda Prabhukumar's picture
30
Aug
2011
4:45

ಹಾಗೆನ್ನಲಾಗದು, ಮಂಜುನಾಥ್! ಒ ಪಿ ನಯ್ಯರ್, ‘ಮುಕೇಶ್ ಮೂಗಿನಲ್ಲೆ ಹಾಡುವಾತ’ ಎಂದು ಜರೆದಿದ್ದರಂತೆ. ಮುಕೇಶರನ್ನು ಹಾಗೆ ಗುರುತಿಸುವವರೂ ಇಲ್ಲದಿಲ್ಲ. ಅದಕ್ಕೇ ನಾನು ಬರೆದದು, ಅವರ ಹಾಡುಗಳನ್ನು ಮೆಚ್ಚುವವರ ಮನೋಧರ್ಮ ವಿಶಿಷ್ಟವಾದದು, ಎಂದು!

Iynanda Prabhukumar's picture
30
Aug
2011
4:21

ಆಗ, ‘ಜಾನೇ ಚಲೇ ಜಾತೇ ಹೈಂ ಕಹಾಂ..?’ ಎಂದು ಹಾಡಿ, ಉತ್ತರ ಸಿಗದಿದ್ದಾಗ,
‘ಜಾನೇವಾಲೇ ಹೋ ಸಕೇ ತೊ ಲೌಟ್ ಕೆ ಆನಾ..’ ಎಂದು ಹಾಡಿ, ಹಿಂದಿರುಗದಿದ್ದಾಗ,
‘ಚಲ್ ಅಕೇಲಾ, ಚಲ್ ಅಕೇಲಾ, ತೇರ ಮೇಲಾ ಪೀಛೆ ಚೂಟಾ..’
ಎಂದು ಹಾಡೋಣ! :-)

Iynanda Prabhukumar's picture
30
Aug
2011
4:49

ಈ ನನ್ನ ಪ್ರತಿಕ್ರಿಯೆ ಅಸು ಹೆಗ್ಡೆಯವರ ಹಾಸ್ಯಕ್ಕೆ ಪ್ರತಿಹಾಸ್ಯ. ಸಂಪದಿಗರು ದಯೆಯಿಟ್ಟು ಗಮನಿಸಬೇಕು.