ಮ0ಗಳಕೆ ಹೋಗೋಣ‌..

ಮ0ಗಳಕೆ ಹೋಗೋಣ‌..

ಕವನ

ಮೊನ್ನೆ ಮ೦ಗಳವಾರವಿರೆ ಮನ

ದನ್ನೆಯಡಿಗೆಯ ಬಿಟ್ಟು ತಾ ಕ

ಣ್ಸನ್ನೆ ಮಾಡುತ ಸನಿಹ ಬ೦ದಳು ಥಳುಕುಬಳುಕಿನಲಿ |

ಬಿನ್ನಣದ ನಗೆಚೆಲ್ಲುತುಲಿದಳು

ಬೆನ್ನ ಸವರುತ ರಮಣ ನೀನೀ

ಗೆನ್ನ ಕರೆದೊಯ್ಯುವೆಯ ಬೇಗನೆ ಮ೦ಗಳಗ್ರಹಕೆ ||

 

ಸುಟ್ಟಿತೊಮ್ಮೆಲೆ ನಾಲಗೆಗೆ ಬಿಸಿ

ತಟ್ಟುತೇಳುತ ಬೆವತು ಕನಲಿದೆ

ಕೆಟ್ಟ ಯೋಚನೆಯೇತಕೀ ಕೋಮಲೆಗೆ ಬ೦ತೆ೦ದು |

ನೆಟ್ಟನೋಟದೊಳುತ್ತರಿಸಿದೆನು

ಗುಟ್ಟ ಪೇಳುವೆ ಚದುರೆ ನಿನಗೀ

ಬೆಟ್ಟವೇರುವ ಕಲ್ಪನೆಯು ಬ೦ತೆ೦ತು ಪೇಳೆನಗೆ ||

 

ನೋಡದೋ ನಭದತ್ತ ಚಿಮ್ಮುತ

ಮೋಡದೆಡೆ ಮರೆಯಾಯ್ತು ದೇಶಕೆ

ಕೋಡು ಮೂಡಿಸುವ೦ತ ವಿಸ್ಮಯಕಾರಿ ವಾಹನವು |

ನಾಡ ವಿಜ್ಞಾನಿಗಳ ಯತ್ನದ

ಜಾಡನರಿತವಳಲ್ಲ ನನಗಿ

ನ್ನೋಡಬೇಕನ್ನಿಸಿದೆ ಮ೦ಗಳದತ್ತ ಮೊಗಮಾಡಿ ||

 

ಈ ಜನರ ಜ೦ಗುಳಿಯ ಮಧ್ಯದೊ

ಳೀಜಿ ಸುಸ್ತಾಯ್ತೆನಗೆ ಗೋಜಿನ

ಗಾಜಿನಾ ಮನೆಯೊಳಗೆ ಕಲ್ಲೆಸೆದೇನು ಫಲ ದೊರೆಯೇ ||

ಆ ಜಗದಲೆ೦ತಿಹುದೊ ಜೀವನ

ಸೋಜಿಗದಿ ಯೋಚಿಸುತ ಕುಳಿತಿಹೆ

ಯೋಜಿಸಿನ್ನೆನ್ನೊಡೆಯ ರಜೆಯಲಿ ವಿಹರಿಸಿಯೆ ಬಿಡುವ ||

 

ಸಖಿಯ ಗಲ್ಲವನೆತ್ತಿ ನುಡಿದೆನು

ಸುಖವ ಹುಡುಕುತ ದೂರ ಬೆಟ್ಟದ

ಮುಖವ ನೋಡುತ ಹಸಿರ ಹೊಗಳಲುಬೇಡ ಬಾ ಗೆಳತಿ |

ನಖದ ತೆರ ಮುಳ್ಳುಗಳು ತರಚುತ

ಜಖಮುಗೊಳಿಸಲುಬಹುದು ನೀ ತಿಳಿ

ಮಖವೆ ಜನಿಸಿದ ನೆಲದ ಮೇಲ್ಗಡೆ ನಕ್ಕು ನಲಿಯುವುದು||

 

( ಮಖ‌ = ಯಾಗ‌ )