ವಾಟ್ಸಪ್ ಕೃಷಿ ಪತ್ರಿಕೋದ್ಯಮ

ವಾಟ್ಸಪ್ ಕೃಷಿ ಪತ್ರಿಕೋದ್ಯಮ

ಅಂಗೈಯಲ್ಲಿ ಪ್ರಪಂಚವನ್ನೇ ಕಾಣಬಹುದಾದ ತಂತ್ರಜ್ಞಾನವನ್ನು ಒಪ್ಪಿದ್ದೇವೆ. ಕಣ್ಣಿನ ರೆಪ್ಪೆಯು ಮುಚ್ಚಿ ಬಿಡುವುದರೊಳಗೆ ದೂರದ ಅಮೇರಿಕಾಗೆ ಸಂದೇಶವೊಂದು ತಲುಪಿರುತ್ತದೆ. ಅಲ್ಲಿಂದ ಅಪ್‍ಲೋಡ್ (ಏರಿಸಿದ) ಮಾಡಿದ ಚಿತ್ರವು ಕ್ಷಣಾರ್ಧದಲ್ಲಿ ನಮ್ಮ ವಾಟ್ಸಪ್ಪಿನೊಳಗೆ ನುಗ್ಗಿರುತ್ತದೆ. ಸ್ಮಾರ್ಟ್‍ಫೋನ್ ಇಲ್ಲವೆಂದಾರೆ ನಾವಿನ್ನೂ ದಶಕದ ಹಿಂದೆ ಇದ್ದೇವೆ ಎಂದರ್ಥ.
   ಹತ್ತು ಸಾವಿರದಿಂದ ಎಪ್ಪತ್ತು, ಎಂಭತ್ತು.. ಅಲ್ಲ, ಅದಕ್ಕಿಂತಲೂ ಹೆಚ್ಚು ಮೌಲ್ಯದ ಸ್ಮಾರ್ಟ್‍ಫೋನ್‍ಗಳಿವೆ. ಬಹುತೇಕ ಫೇಸ್‍ಬುಕ್, ವಾಟ್ಸಪ್ ಮತ್ತು ಕ್ಯಾಮರಾ ಚಿತ್ರಗಳನ್ನು ತೆಗೆಯಲು ಸೀಮಿತವಾಗಿವೆ. ಇದರ ಹೊರತಾದ  ನೂರಾರು ತಂತ್ರಾಂಶಗಳು ಇದ್ದರೂ ಬಳಕೆ ಗೊತ್ತಿಲ್ಲದೆ ನಿರುಪಯುಕ್ತವಾಗಿವೆ. ವಾಟ್ಸಪ್ ತಂತ್ರಜ್ಞಾನವು ಕ್ಷಿಪ್ರವಾಗಿ ಬೆಳೆದ, ಬೆಳೆಯುತ್ತಿರುವ ತಂತ್ರಜ್ಞಾನ. ವೈಯಕ್ತಿಕವಾಗಿ, ಸಂಸ್ಥೆಗಳು, ಸೀಮಿತ ಉದ್ದೇಶದ ವಾಟ್ಸಪ್ ಗುಂಪುಗಳು ಅಗಣಿತ.
   ಈ ಹಿನ್ನೆಲೆಯಲ್ಲಿ ವಾಟ್ಸಪ್ ತಂತ್ರಜ್ಞಾನವನ್ನು ಕೃಷಿ ಸ್ನೇಹಿ ಮತ್ತು ಕೃಷಿ ಪತ್ರಿಕೋದ್ಯಮಕ್ಕೆ ಹೇಗೆ ಪೂರಕವಾಗಿ ಪೋಣಿಸಬಹುದು? ಈ ಯೋಚನೆಯು ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರ ಮೆದುಳ ಮರಿ. ಎರಡು ದಶಕದ ಹಿಂದಿನ ‘ಕೃಷಿಕರ ಕೈಗೆ ಲೇಖನಿ’ ಆಂದೋಳನದ ಹೂರಣದ ಅಡಿಗಟ್ಟಿನಲ್ಲಿ ‘ವಾಟ್ಸಪ್ ಕೃಷಿ ಪತ್ರಿಕೋದ್ಯಮ’ಕ್ಕೆ ಬೀಜಾಂಕುರ. ಅದಕ್ಕಾಗಿಯೇ ಪ್ರತ್ಯೇಕ ವಾಟ್ಸಪ್ ಗುಂಪು ರೂಪೀಕರಣ. ‘ಮಾಡಿ-ಬೇಡಿ’ಗಳ ಮಾಹಿತಿ. ಉದ್ದೇಶ ಅರ್ಥ ಮಾಡಿಕೊಂಡವರೇ ಅಧಿಕ. ಏನೂ ಅರ್ಥವಾಗದವರು ಹೊರಗುಳಿದರು. ಕುತೂಹಲದಿಂದ ಕೊನೆಯ ವರೆಗೆ ಉಳಿದವರು ಇಪ್ಪತ್ತೈದು ಮಂದಿ. ಇವರಿಗೆ ಪುತ್ತೂರಿನಲ್ಲಿ ನವೆಂಬರ್ 20ರಂದು ಒಂದು ದಿವಸದ ‘ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರ’ ಜರುಗಿತು. ಬಹುಶಃ ದೇಶಮಟ್ಟದಲ್ಲೇ ಇದು ಪ್ರಥಮವೇನೋ.
   ಕೈಯಲ್ಲಿರುವ ಸ್ಮಾರ್ಟ್‍ಫೋನಿನಿಂದ ಚಿತ್ರ ತೆಗೆದು, ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಿ, ವಾಟ್ಸಪ್ - ಪತ್ರಿಕೆಗಳಲ್ಲಿ ಹೇಗೆ ಪ್ರಕಟಿಸಬಹುದು ಎನ್ನುವ ಪ್ರಾಥಮಿಕ ಜ್ಞಾನದ ಸುತ್ತ ಶಿಬಿರದ ವ್ಯಾಪ್ತಿ. ಕ್ಲಿಕ್ಕಿಸಿದ ಒಂದು ಚಿತ್ರವನ್ನು ವಾಟ್ಸಪ್ಪಿಗೆ ಏರಿಸಿದರೆ ಅದು ಅಪೂರ್ಣ.  ಆ ಚಿತ್ರ ಸಾರುವ ಉದ್ದೇಶವನ್ನು ಏಳೆಂಟು ವಾಕ್ಯಗಳಲ್ಲಿ ಪರಿಣಾಮಕಾರಿಯಾಗಿ ಪೋಣಿಸಿದರೆ ಅದು ಸುಪುಷ್ಟವಾಗಿರುತ್ತದೆ. ಓದುಗರಿಗೆ ಪ್ರಯೋಜನಕಾರಿ. ಯಾವ ಮಾಹಿತಿಯೂ ಇಲ್ಲದ ಚಿತ್ರವನ್ನು ಡೌನ್‍ಲೋಡ್ ಮಾಡದಿರುವವರೇ ಹೆಚ್ಚು.
ಹೊರ ದೇಶಗಳಲ್ಲಿ ವಾಟ್ಸಪ್ ಪತ್ರಿಕೋದ್ಯಮ ಜನಪ್ರಿಯವಾಗುತ್ತಿದೆ. ಇದು ತುಂಬಾ ಎಚ್ಚರದಿಂದ ಸಾಗಬೇಕಾದ ಸಾಧನ. ಕಾಲಕ್ಕೆ ತಕ್ಕಂತೆ  ಬದಲಾಗಬೇಕು. ತಂತ್ರಜ್ಞಾನದ ನೆರೆಯಲ್ಲಿ ಸೇರಿಕೊಳ್ಳುವುದು ಅನಿವಾರ್ಯ. ಸುಳಿವುಗಳ ಮಹಾಪೂರದಲ್ಲಿ ಈಜುವುದೇ ಸಾಹಸವಾಗಿದೆ. ತುಂಬಾ ಎಚ್ಚರ ಬೇಕು. ಅವಸರ ಬೇಡ. ಅದು ಎರಡಲಗಿನ ಕತ್ತಿ. ನಮ್ಮನ್ನು ವೇಗವಾಗಿ ಒಯ್ಯುತ್ತದೆ – ಎನ್ನುವ ಕಿವಿಮಾತು ಶ್ರೀ ಪಡ್ರೆಯವರದು.
   ವಾಟ್ಸಪ್ಪಿನಲ್ಲಿ ಹರಿದು ಬಂದ ಒಂದು ಚಿತ್ರವು ಪತ್ರಕರ್ತನಿಗೆ ದೊಡ್ಡ ಲೇಖನಕ್ಕೆ ಸುಳಿವು ಆಗಲು ಸಾಧ್ಯ. ಕಣ್ಣು-ಮನಸ್ಸು ತೆರೆದಿದ್ದರೆ ಆ ಚಿತ್ರ, ಅದನ್ನು ಅಪ್‍ಲೋಡ್ ಮಾಡಿದ ವ್ಯಕ್ತಿಯೊಡನೆ ಸಂಪರ್ಕ ಸಾಧಿಸಿ, ಸಂಬಂಧಪಟ್ಟವರೊಡನೆ ವ್ಯವಹರಿಸಿ ನುಡಿಚಿತ್ರವನ್ನು ತಯಾರಿಸಬಲ್ಲ. ಕಳೆದ ಎರಡು ತಿಂಗಳಿನಿಂದ ಇಂತಹ ಸುಳಿವನ್ನು ಹೆಕ್ಕಿ, ಪುಟ್ಟ ಬರೆಹಗಳನ್ನು ಅಡಿಕೆ ಪತ್ರಿಕೆ ಪ್ರಕಟಿಸಿತ್ತು. ಸುಳಿವಿನ ಬೆನ್ನೇರಿ ಮಾಹಿತಿಯನ್ನು ಹೆಕ್ಕುವ ಜಾಣ್ಮೆಯ ಸೂಕ್ಷ್ಮ ನೋಟವನ್ನು ಶಿಬಿರದಲ್ಲಿ ತಿಳಿಸಲಾಗಿತ್ತು.
   ಚಿತ್ರವನ್ನು, ಮಾಹಿತಿಯನ್ನು ವಾಟ್ಸಪ್ಪಿನಲ್ಲಿ ಪ್ರಕಟಿಸುವುದು ಒಂದು, ಅಲ್ಲಿ ಪ್ರಕಟವಾದ ಸುಳಿವನ್ನು ಹೆಕ್ಕಿ ಲೇಖನವನ್ನಾಗಿಸಿ ಪತ್ರಿಕೆಗಳಲ್ಲಿ ಪ್ರಕಟಿಸುವುದು ಇನ್ನೊಂದು. ಈ ಎರಡೂ ಪ್ರಕಾರಗಳು ಅವಸರವನ್ನು ಸಹಿಸುವುದಿಲ್ಲ. ಅವಸರದಿಂದ ಅಪಘಾತ ಹೆಚ್ಚು. ನಾವು ಬರೆಯುವ ಸಣ್ಣ ತಪ್ಪು ಎಷ್ಟೋ ಮಂದಿ ಕೃಷಿಕರ ಹಾದಿ ತಪ್ಪಿಸುವ ಸಾಧ್ಯತೆಯಿದೆ. ಕೈಗೆ ಸಿಕ್ಕಿದ ಮಾಹಿತಿಯನ್ನು ತಕ್ಷಣ ಪ್ರಕಟಿಸುವ ಚಾಳಿ ಅಪಾಯ.  ವಿಜ್ಞಾನಿ ಮೋಹನ ತಲಕಾಲುಕೊಪ್ಪ ಹೇಳುತ್ತಾರೆ, “ವಾಟ್ಸಪ್ ತಂತ್ರಜ್ಞಾನದ ವೇಗ ಜಾಸ್ತಿಯಿದೆ. ಫಾರ್ವರ್ಡ್ ಮಾಡುವ ವಿಚಾರಗಳನ್ನು ಕೂಲಂಕಷವಾಗಿ ಪರಿಶೀಲಿಸದಿದ್ದರೆ ಎಷ್ಟೋ ಮಂದಿಗೆ ತಪ್ಪು ಮಾಹಿತಿಯನ್ನು ರವಾನಿಸಿದಂತಾಗುತ್ತದೆ. ಕೈಗೆ ಸಿಕ್ಕ ಮಾಹಿತಿಯ ಮೂಲ ಸರಿಯಾಗಿದೆಯೇ ಎಂದು ಪರೀಕ್ಷಿಸಬೇಕಾದುದು ಅತ್ಯಗತ್ಯ. ಅವಸರದ ಪತ್ರಿಕೊದ್ಯಮ ಮಾಡಬೇಡಿ. ಎಡವಿ ಹೋಗುತ್ತೀರಿ.” ಎಂದರು.
ವಾಟ್ಸಪ್ ಪತ್ರಿಕೋದ್ಯಮಕ್ಕೆ ಇತಿಮಿತಿಗಳಿವೆ. ಸ್ಮಾರ್ಟ್‍ಫೋನಿನಲ್ಲಿರುವ ಕ್ಯಾಮೆರಾಕ್ಕೂ ಮಿತಿಯಿದೆ. ವಿಷಯದ ಆಯ್ಕೆ ಮತ್ತು ಪ್ರಕಟಣೆಯಲ್ಲಿ ಜವಾಬ್ದಾರಿ ಇದೆ. ಕೆಲವು ಮಾಹಿತಿಯನ್ನು ಪ್ರಕಟಿಸಬಹುದು, ಇನ್ನೂ ಕೆಲವಕ್ಕೆ ಸ್ಥಳಭೇಟಿಯ ಅಗತ್ಯವಿದೆ. ಇಂತಹ ಸಂದರ್ಭಗಳಲ್ಲಿ ಸ್ವ-ನಿಯಂತ್ರಣ ಮತ್ತು ಪರಾಮರ್ಶನ ಮುಖ್ಯವಾಗುತ್ತದೆ. ಚಿತ್ರಗಳತ್ತ ಹೊರಳಿದಾಗ ಸ್ಮಾರ್ಟ್‍ಫೋನಿನ ಕ್ಯಾಮೆರಾ ತಂತ್ರಜ್ಞಾನವನ್ನು ಅರಿಯದೆ ಚಿತ್ರವನ್ನು ಕ್ಲಿಕ್ಕಿಸಿದರೆ ಪರಿಣಾಮ ನಿರೀಕ್ಷಿಸಿದಷ್ಟು ಬಾರದು.
ಚಿತ್ರ ತೆಗೆಯುವ ಜಾಣ್ಮೆಯನ್ನು ಮಾಧ್ಯಮ ಸ್ನೇಹಿಯನ್ನಾಗಿ ಮಾಡಬೇಕು. ವಿಷಯಾಧಾರಿತವಾಗಿ ಕ್ಲಿಕ್ಕಿಸಿ ಅದನ್ನು ಅಪ್‍ಲೋಡ್ ಮಾಡಿದರೆ ಅಥವಾ ಲೇಖನಕ್ಕೆ ಬಳಸಿದರೆ ಕ್ಷಿಪ್ರವಾಗಿ ವಿಷಯದ ಗ್ರಹಿಕೆ ಸಾಧ್ಯವಾಗುತ್ತದೆ. ಕ್ಲಿಕ್ ಮಾಡಿದ ಚಿತ್ರಗಳನ್ನೆಲ್ಲಾ ವಾಟ್ಸಪ್ಪಿಗೆ ಏರಿಸಬೇಕು ಎನ್ನುವ ಹಠ ಬೇಡ. ರಾಶಿ ರಾಶಿ ಚಿತ್ರಗಳನ್ನು ಯಾರೂ ನೋಡುವುದಿಲ್ಲ, ವ್ಯವಧಾನವೂ ಇರುವುದಿಲ್ಲ. ನೀವು ಯಾವ ಉದ್ದೇಶಕ್ಕಾಗಿ ಏರಿಸಬೇಕು ಎಂದುಕೊಂಡಿದ್ದೀರೋ ಅದಕ್ಕೆ ಪೂರಕವಾದ ಒಂದೆರಡು ಚಿತ್ರಗಳನ್ನು ಆರಿಸಿಕೊಳ್ಳಿ,” ಎನ್ನುವ ಸಲಹೆ ಪತ್ರಕರ್ತ ಮಹೇಶ ಪುಚ್ಚಪ್ಪಾಡಿಯವರದು.
ಹೀಗೆ ದಿನಪೂರ್ತಿ ಜರುಗಿದ ವಾಟ್ಸಪ್ ಮಾತುಕತೆಯು ಪತ್ರಿಕೋದ್ಯಮದಲ್ಲಿ ಹೊಸ ಹಾದಿಯ ಸಾಧ್ಯತೆಯನ್ನು ಮೂಡಿಸಿತು. “ಅಲ್ಪ ಸಮಯದಲ್ಲಿ ಅತ್ಯುತ್ತಮ ಮಾಹಿತಿ ಸಿಕ್ಕಿತು. ಇದಕ್ಕಿಂತಲೂ ಹೆಚ್ಚಿನ ಮಾಹಿತಿಯನ್ನು ಒಂದು ದಿವಸದಲ್ಲಿ ಕೊಡಲು ಅಸಾಧ್ಯ. ತಾಂತ್ರಿಕ ವಿಚಾರಗಳತ್ತ ಇನ್ನೂ ಹೆಚ್ಚು ಒತ್ತು ನೀಡಬೇಕಾಗಿತ್ತು,” ತೀರ್ಥಹಳ್ಳಿಯ ಕೃಷಿಕ ಸುಬ್ರಹ್ಮಣ್ಯ ಮಜ್ಜಿಗೆಸರ ಅವರ ಆಭಿಪ್ರಾಯ. ವಾಟ್ಸಪ್ ವ್ಯವಸ್ಥೆಯನ್ನು ಪತ್ರಿಕೋದ್ಯಮದ ವ್ಯಾಪ್ತಿಗೆ ತಂದ ‘ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್, ಅಡಿಕೆ ಪತ್ರಿಕೆ ಮತ್ತು ಬೆಂಗಳೂರಿನ ಕೃಷಿ ಮಾಧ್ಯಮ ಕೇಂದ್ರ’ದ ದೂರಗಾಮಿ ಚಿಂತನೆಗಳು ಕನ್ನಾಡಿನ ಪತ್ರಿಕೋದ್ಯಮ ಕ್ಷೇತ್ರದುದ್ದಕ್ಕೂ ಹಬ್ಬುವ ಕಾಲ ಸನ್ನಿಹಿತವಾಗಿದೆ. ಬಹುತೇಕ ಎಲ್ಲಾ ಪತ್ರಿಕೆಗಳು ಇಂದು ವಾಟ್ಸಪ್ ಮೂಲಕ ಲೇಖನ, ವರದಿ, ಚಿತ್ರಗಳನ್ನು ಆಹ್ವಾನಿಸುತ್ತಿದೆ. ಇಂತಹ ಹೊತ್ತಲ್ಲಿ ಕಳುಹಿಸುವ ವ್ಯಕ್ತಿಗೆ ಪತ್ರಿಕೋದ್ಯಮದ ಸಣ್ಣ ತಿಳಿವಳಿಕೆ ಇದ್ದುಬಿಟ್ಟರೆ ಉದ್ದೇಶ ಈಡೇರಿದಂತೆ.  “ಇದೊಂದು ಸಣ್ಣ ಹೆಜ್ಜೆ. ಶಿಬಿರಕ್ಕೆ ಬಳಸಿದ ಶಿಕ್ಷಣವು ಹೂರಣ ದಿನೇ ದಿನೇ ಪಕ್ವಗೊಳ್ಳುತ್ತಿದೆ. ನಮಗೂ ಹೊಸ ಕ್ಷೇತ್ರ. ನಿತ್ಯ ಕಲಿಕೆಯನ್ನು ಬೇಡುವ ತಂತ್ರಜ್ಞಾನಕ್ಕೆ ನಾವೂ ಅಪ್‍ಡೇಟ್ ಆಗಬೇಕಾದ ಅನಿವಾರ್ಯತೆಯಿದೆ. ಸ್ಮಾರ್ಟ್‍ಫೋನಿನ  ಸಮರ್ಥ ಬಳಕೆ ಮತ್ತು ವಾಟ್ಸಪಿನ ಸಾಧ್ಯತೆಗಳನ್ನು ತೆರೆದಿಡಲು ಶಿಬಿರಗಳು ಸಹಕಾರಿಯಾಗಬಲ್ಲವು ಎಂದು ಮನದಟ್ಟಾಯಿತು,” ಶಿಬಿರ ನಿರ್ದೇಶಕ ಶ್ರೀ ಪಡ್ರೆಯವರ ಮನದ ಮಾತು.
   ದೇಶಮಟ್ಟದ ಖ್ಯಾತ ಪತ್ರಿಕೆಗಳ ಕದವನ್ನು ತಟ್ಟಿದ ಪುತ್ತೂರಿನ ಪುಟ್ಟ ಶಿಬಿರವು ಇನ್ನಷ್ಟು ಶಿಬಿರಗಳ ಆಯೋಜನೆಯನ್ನು ಬೇಡುತ್ತದೆ. ಬಾಗಿಲು ತೆರೆಯುವವರು ಬೇಕಾಗಿದ್ದಾರೆ. ವಾಟ್ಸಪ್ ಬಳಕೆಯಲ್ಲಿ ಸ್ವ-ನಿಯಂತ್ರಣ ಮತ್ತು ಜವಾಬ್ದಾರಿಗಳಿಗೆ ಒತ್ತು ಕೊಡುವ ‘ವಾಟ್ಸಪ್ ಪತ್ರಿಕೋದ್ಯಮ ಶಿಬಿರ’ವು ವರ್ತಮಾನಕ್ಕೊಂದು ಟೂಲ್.