ವಾಟ್ಸ್‍ಅಪ್ / ಫೇಸ್‍ಬುಕ್ ಅವಾಂತರಗಳು

ವಾಟ್ಸ್‍ಅಪ್ / ಫೇಸ್‍ಬುಕ್ ಅವಾಂತರಗಳು

ಕಾರ್ಟೂನ್ ಚಿತ್ರಗಳನ್ನು ನೋಡುವ ಮಕ್ಕಳು ನಿಮ್ಮ ಮನೆಯಲ್ಲಿದ್ದಲ್ಲಿ, ನಿಮಗೆ `ಡೋರೆಮಾನ್’ ಎನ್ನುವ ಕಾರ್ಟೂನ್ ತಿಳಿದಿರುತ್ತದೆ.  ಅದರಲ್ಲಿ ಬರುವ ನೋಬಿತಾ ಎನ್ನುವ ಪಾತ್ರ, ಡೋರೆಮಾನ್ ಕೊಡುವ ಅಮೂಲ್ಯ  ಗ್ಯಾಜೆಟ್‍ಗಳನ್ನು  ಸರಿಯಾಗಿ ಉಪಯೋಗಿಸಲಾರದೇ ಅವಾಂತರಗಳಿಗೀಡಾಗುತ್ತಿರುತ್ತಾನೆ. ಈಗಿನ ದಿನಗಳಲ್ಲಿ ಹೀಗೆಯೇ ನಾವೂ ಕೂಡ ಆಧುನಿಕ ಗ್ಯಾಜೆಟ್‍ಗಳಿಂದ, ವಾಟ್ಸ್‍ಅಪ್, ಫೇಸ್‍ಬುಕ್, ಇತ್ಯಾದಿಗಳಿಂದ ಅವಾಂತರಗಳನ್ನು ಅನುಭವಿಸುತ್ತಲೇ ಇದ್ದೇವೆ.  ಇವುಗಳಿಂದಾಗುವ ಅವಾಂತರಗಳು ಒಂದೇ ಎರಡೇ?  ನನ್ನ ಅನುಭವದಲ್ಲಿ, ಇವುಗಳಿಂದ ತಲೆಚಿಟ್ಟು ಹಿಡಿದಿದ್ದೇ  ಜಾಸ್ತಿ.  ಇಲ್ಲವೆನ್ನುವವರಲ್ಲಿ ನನ್ನ ಅನುಭವದ ಎರಡು ಮಾತುಗಳು –
    ನಿಮಗೆ ಫೇಸ್‍ಬುಕ್ ಗೊತ್ತಿದೆಯೇ ಎಂದು ನಾನು ಕೇಳಿದಲ್ಲಿ, ಅದು ನನ್ನ ಮೌಢ್ಯದ ಪರಮಾವಧಿಯಾದೀತು! (ಅದೂ ನಮ್ಮ ಕರ್ನಾಟಕದಲ್ಲಿ ಮೌಢ್ಯವಿರೋಧೀ ಮಸೂದೆ ಮಂಡನೆಯಾಗುತ್ತಿರುವ ಸಂದರ್ಭದಲ್ಲಿ!)  ಫೇಸ್‍ಬುಕ್, ಟ್ವಿಟರ್, ವಾಟ್ಸ್‍ಅಪ್ ಇತ್ಯಾದಿಗಳನ್ನು ತಿಳಿಯದವರು ಮಾನವ ಜನಾಂಗಕ್ಕೇ ಸೇರದವರು ಅಂತ ಪರಿಭಾವಿಸುವ ಕಾಲ ಇದು. ಇಂಥವುಗಳ ಬಗ್ಗೆ ವಯೋಸಹಜವಾಗಿ ಅನಭಿಜ್ಞರಾದ ಜನರನ್ನು ಇಂದಿನ ಯುವ ಜನಾಂಗ ತಮ್ಮ ವರ್ತುಲದಿಂದಲೇ ದೂರೀಕರಿಸಿಬಿಟ್ಟಿದ್ದಾರೆ.  ಆದರೆ ಈ ಫೇಸ್‍ಬುಕ್ ಅನ್ನು “ಫೇಕ್‍ಬುಕ್” ಅನ್ನುವಾತ ನಾನು. ತಡೆಯಿರಿ, ನನ್ನ ಮೇಲೆ ಕೈ ಮಾಡುವ ಮುನ್ನ ನನ್ನ ಮಾತುಗಳನ್ನು ಕೇಳಿ! ಈ ಫೇಸ್‍ಬುಕ್‍ಗಳಲ್ಲಿ ಜನರು ತಮ್ಮ Profile ಹಾಕಿರುವುದು, ನನ್ನ ಪ್ರಕಾರ 80% ಸುಳ್ಳು, ಉತ್ಪ್ರೇಕ್ಷಿತ, ಯಾ ತಾವು ಏನಾಗಬೇಕೆಂದು ಬಯಸಿದ್ದರೋ ಅದು, ಹೊರತು ನಿಜವಾದ Profile ಅಲ್ಲ! ಈ Profileಗಳು ನಿಜವಾಗಿದ್ದಿದ್ದರೆ, ಈ ಧ‌ರೆಯೇ ಸ್ವರ್ಗವಾಗಿರುತ್ತಿತ್ತು! ಆದರೆ, ದುರದೃಷ್ಟವಶಾತ್ ಹಾಗಾಗಿಲ್ಲ!
    ಫೇಸ್‍ಬುಕ್ ನಂಬಿ ಮೋಸ ಹೋದವರೆಷ್ಟು ಮಂದಿ ಬೇಕು ಹೇಳಿ ನಿಮಗೆ? ಯಾರದ್ದೋ `ಫೇಸ್’ಅನ್ನು ತಮ್ಮದೆಂದು ಫೋಟೋ ಹಾಕಿ, ಜನರನ್ನು `ಬುಕ್’ ಮಾಡಿ ಯಾ ಬಲೆ ಬೀಳಿಸಿ, ಯಾಮಾರಿಸಿದವರೆಷ್ಟೋ.  Profile ನೋಡಿ ಸ್ನೇಹಹಸ್ತ ಚಾಚಿ ಕೈ ಸುಟ್ಟುಕೊಂಡವರಿದ್ದಾರೆ.  Photo ನೋಡಿ ಯಾಮಾರಿ ಶೀಲ ಕಳೆದುಕೊಂಡವರಿದ್ದಾರೆ. ನನ್ನ ಸ್ನೇಹಿತೆಯೋರ್ವಳು, ಹೀಗೆಯೇ ತನ್ನ ಫೇಸ್‍ಬುಕ್ ನಲ್ಲನೊಡನೆ ಲಲ್ಲೆಗೆರೆದು ಮದುವೆಯಾದಳು – ಈಗ ಆತ ಅವಳಿಗೆ ಸಾಕ್ಷಾತ್ ನರಕದರ್ಶನ ಮಾಡಿಸುತ್ತಿದ್ದಾನೆ! ಇಂಥ ಯಾಮಾರಿಸುವಿಕೆಯಲ್ಲಿ ಪುರುಷರು ಮಾತ್ರ ಇದ್ದಾರೆ ಎಂದುಕೊಳ್ಳಬೇಡಿ – ಇದು ಸ್ತ್ರೀ ಸಮಾನತೆಯ ಕಾಲ ಸ್ವಾಮೀ -  ಪುರುಷರಿಗೆ ತಾವೇನು ಕಮ್ಮಿ ಎನ್ನುವಂತೆ ಸ್ತ್ರೀಯರದ್ದೂ ಎತ್ತಿದ ಕೈ ಇದರಲ್ಲಿ.
     ಹೀಗೆಯೇ, ಅಪ್ಪ-ಅಮ್ಮ ನೋಡಿದವಳನ್ನು ಮದುವೆಯಾಗುವ `ಕಂದಾಚಾರ’(!) ಕ್ಕೆ ಬಲಿಯಾಗದೇ ನಮ್ಮ ಆಕಾಂಕ್ಷೆಗಳಿಗೆ ಸರಿಹೊಂದುವವಳನ್ನು ಫೇಸ್‍ಬುಕ್‍ನಲ್ಲಿಯೇ ಹುಡುಕುತ್ತೇನೆಂದ ಶಂಕರ. ಹೇಳಿದಂತೆಯೇ ಹುಡುಕಿಯೂ ಬಿಟ್ಟ. Profile, Photo,  ತಮ್ಮ ನಡುವೆ wave length ಎಲ್ಲಾ ಹೊಂದಾಣಿಕೆಯಾಗಿದೆಯೆಂದು, ಬಹಳ ದಿನಗಳ ನಂತರ ಖಾತ್ರಿಯಾದ ಮೇಲೆ ಶಂಕರ ಆಕೆಯ ಭೇಟಿಗಾಗಿ “ರಂಗಶಂಕರ”ಕ್ಕೆ ಕರೆದ.  ಶಂಕರನನ್ನು ಭೇಟಿಯಾದಾಕೆಯ ರೂಪ ಅರಿ ಭಯಂಕರ! ಆಕೆ ಇದ್ದುದಕ್ಕೂ ಫೇಸ್‍ಬುಕ್‍ನ Profile photo ಗೂ ಒಂದಿನಿತೂ ಸಾಮ್ಯತೆಯಿಲ್ಲ! ಶಂಕರ Dating ಒತ್ತಟ್ಟಿಗಿರಲಿ, ಹೆಣ್ಣುಕುಲದ Hatingಗೇ ದಾಂಗುಡಿಯಿಟ್ಟ! ಇದು ಫೇಸ್‍ಬುಕ್ ಅವಾಂತರ!
    ನನ್ನ ಸ್ನೇಹಿತ ರಾಜೀವನಿಗೆ ಒಬ್ಬಾಕೆ ಫೇಸ್‍ಬುಕ್‍ನಲ್ಲಿ `ಆಪ್ತ’ಳಾದಳು.  Profile photo ಗೇ ಮಾರುಹೋದ ರಾಜೀವ, ಫೇಸ್‍ಬುಕ್, ವಾಟ್ಸ್‍ಅಪ್‍ಗಳಿಂದ ಮತ್ತಷ್ಟು  ಹತ್ತಿರನಾದ. ಒಳಕುದಿ ತಾಳಲಾರದೇ ಈ ರಾಜೀವ ಒಮ್ಮೆ ಅವಳ ಹತ್ತಿರ ಮುಖತಃ ಭೇಟಿಯಾಗುವ ಆಸೆ ವ್ಯಕ್ತಪಡಿಸಿದ.  ಅದಕ್ಕೆ ಒಪ್ಪಿದ ಆಕೆ, ಹೋಟೆಲ್ ಸ್ವಾತಿಗೆ ಬರಹೇಳಿದಳು.  ಚೆನ್ನಾಗಿ ಸಿಂಗರಿಸಿಕೊಂಡು ಹೋದ ರಾಜೀವನಿಗೆ ಹೋಟೆಲ್ ರೂಮಿನಲ್ಲಿ ಸಿಕ್ಕಿದ್ದು ಆಕೆಯಲ್ಲ, ಆತ! ಫೇಸ್‍ಬುಕ್ಕಿನ ನಿಜವಾದ ಖಾತೆದಾರ!! ಜೀವನದಲ್ಲಿ `ಮರೆಯಲಾಗದ ಅನುಭವ’ ಪಡೆಯುವ ದಿಸೆಯಲ್ಲಿದ್ದ ರಾಜೀವನಿಗೆ ದಕ್ಕಿದ್ದು `ಮರೆಯಲಾಗದ ಪಾಠ!’. ಆತ ರಾಜೀವನಿಗೆ ಚೆನ್ನಾಗಿ ತದುಕಿ, ಅವನ ಹತ್ತಿರವಿದ್ದ ದುಡ್ಡು, ಆಭರಣ ದೋಚಿ ಕಳಿಸಿದ! ಈ ಅವಾಂತರವನ್ನು ರಾಜೀವ ಯಾರ ಬಳಿಯಲ್ಲಿಯೂ ಹೇಳಿಕೊಳ್ಳಲಾರ! ಇದು ಫೇಸ್‍ಬುಕ್ ಮಹಾತ್ಮೆ!
    ಒಂದು ಸರ್ತಿ ಅಪ್ಪ ಬಹಳ ನೀಟಾಗಿ ಡ್ರೆಸ್ ಮಾಡಿಕೊಂಡು ಹೊರಹೊರಡಲು  ಅನುವಾಗುತ್ತಿದ್ದ. ಮಗ ಕೇಳಿದ -`ಅಪ್ಪಾ, ಹೊರಟಿರುವುದು ರೋಟಿಘರ್‍ಗಾ?’. ತಾನೀಗ ತನ್ನ ಫೇಸ್‍ಬುಕ್ ಗೆಳತಿ, ಎದುರು ಮನೆಯ ಶೀಲಾಳನ್ನು ರೋಟಿಘರ್‍ನಲ್ಲಿ ಭೇಟಿಯಾಗಲು ಹೊರಟಿರುವುದು, ಇವನಿಗೆ ತಿಳಿಯಿತೇ ಅಂತ ಅಪ್ಪನಿಗೆ ಒಂದು ನಿಮಿಷ ಅವಾಕ್ಕಾದರೂ, ಸಾವರಿಸಿಕೊಂಡು `ಹ್ಞೂ’ ಅಂದ.  ಆಗ ಮಗನೆಂದ `ನಿಮಗೆ ಶೀಲಾ ಆಂಟಿ ಸಿಗುವುದಿಲ್ಲ ಅಲ್ಲಿ’. ಆಶ್ಚರ್ಯದಿಂದ ಅಪ್ಪ ಕೇಳಿದ - `ನಿನಗೆ ಹೇಗೆ ಗೊತ್ತು?’. ನಿರುದ್ವಿಗ್ನನಾಗಿ ಮಗ ಹೇಳಿದ - `ಇದುವರೆಗೂ ಶೀಲಾ ಆಂಟಿ ಎಂದುಕೊಂಡು ನೀನು ಫೇಸ್‍ಬುಕ್ ಸಂಭಾಷಣೆಯಲ್ಲಿದ್ದುದು ನನ್ನ ಜೊತೆ! ನನ್ನ ಹತ್ತು ಫೇಸ್‍ಬುಕ್ ಖಾತೆಗಳಲ್ಲಿ ಅದು ಒಂದು!’. ಅಪ್ಪ ಮೂರ್ಛೆ ಹೋದ!
ವಾಟ್ಸ್‍ಅಪ್‍ದೂ ಅವಾಂತರಗಳು ಇಂಥವೇ. ಇದರಲ್ಲಂತೂ ನಮ್ಮನ್ನು, ಯಾವ ಯಾವುದೋ ಗ್ರೂಪ್‍ನಲ್ಲಿ ನಮಗರಿವಿಲ್ಲದಂತೆಯೇ  ಸೇರಿಸಿ ಬಿಟ್ಟಿರುತ್ತಾರೆ! ಈ ವಾಟ್ಸ್‍ಅಪ್ ಜಗದೊಳಗೆ ಬಾರದಿದ್ದರೆ ಸೈ, ಬಂದಿದ್ದೇ ಆದಲ್ಲಿ ಜಾಗ್ರತೆಯಾಗಿರುವುದು ಒಳಿತು.  ನಾನು ಬ್ಯಾಂಕಿನಲ್ಲಿ ಕೆಲಸ ಮಾಡುವುದರಿಂದ, ನಾನು ಯಾವುದೇ ರಾಜಕೀಯ ಪಕ್ಷಗಳಿಂದ ದೂರವಿರಬೇಕು – ದೂರವಿದ್ದೇನೆ ಕೂಡಾ.  ಆದರೆ, ಒಮ್ಮೆ ಒಬ್ಬ ಗ್ರಾಹಕ ನನ್ನ ಮೇಲೆ ಪಕ್ಷಪಾತದ ಆರೋಪ ಮಾಡಿದ. `ಆನಂದ ಜೆ.ಡಿ.ಎಸ್. ಪಕ್ಷದವನಾದ್ದರಿಂದ ಅವನಿಗೆ ಸಾಲ ಕೊಟ್ಟು, ನಾನು ಬಿ.ಜೆ.ಪಿ. ಪಕ್ಷದವನಾದ್ದರಿಂದ ನನಗೆ ಕೊಡುತ್ತಿಲ್ಲ’ ಅಂತ.  ನನಗೆ ರೇಗಿ ಹೋಯ್ತು! ನಾನೆಂದೆ -`ಯಾರು ಹೇಳಿದರು ನಿನಗೆ, ನಾನು ಆ ಪಕ್ಷದ ಪರ ಅಂತ’. ಅವ ಹೇಳಿದ - `ಸ್ವಾಮೀ, ನೀವು ವಾಟ್ಸ್‍ಅಪ್‍ನಲ್ಲಿ  `ಜೆಡಿಎಸ್ ಕಾರ್ಯಕರ್ತರ ಗುಂಪು’ ವಿನ ಮೆಂಬರ್ ಇದ್ದೀರಿ.  ಇನ್ನೇನು ಸಾಕ್ಷಿ ಬೇಕು?’. ನನಗೆ, ನಾನು ಅಂಥ ಒಂದು ಗ್ರೂಪಿನ ಮೆಂಬರ್ ಎಂಬುದೇ ತಿಳಿದಿತ್ತಿಲ್ಲ! ಅದೂ ಹೋಗಿ ಹೋಗಿ ಕೌಟುಂಬಿಕ ಪಕ್ಷಕ್ಕೆ ನನ್ನ ಒತ್ತೆ ಇಡುವುದೇ?! ಯಾವ ಪುಣ್ಯಾತ್ಮ (!)ನಿಂದಲೋ ನನ್ನ ನಂಬರ್ ಈ ಗ್ರೂಪಿಗೆ ಸೇರಿ, ವಾಟ್ಸ್‍ಅಪ್‍ನಿಂದ ದೂರವೇ ಇರುವ ನನಗೆ, ಇದು ತಿಳಿಯದೇ, ಆಭಾಸಕ್ಕೊಳಪಡಬೇಕಾಯ್ತು! ಬೇಕಿತ್ತಾ ಈ ಅವಾಂತರ!
ವಾಟ್ಸ್‍ಅಪ್‍ನಲ್ಲಿ ಮೆಸೇಜುಗಳನ್ನು Forward ಮಾಡುವಲ್ಲಿ ನಾವು ಜಾಗೃತರಾಗಿರಬೇಕು.  ಈ ನಿಟ್ಟಿನಲ್ಲಿ ಪೋಲೀಸ‌ರೂ ಆಗಾಗ್ಗೆ ಎಚ್ಚರಿಕೆ ನೀಡುತ್ತಿರುತ್ತಾರೆ.  ಹೀಗೇ ನನ್ನ ತಮ್ಮ ಒಮ್ಮೆ ತನಗೆ ಬಂದ ಮೆಸೇಜ್ ಒಂದನ್ನು ಹಾಸ್ಯಕ್ಕಾಗಿ ತನ್ನ ಸ್ನೇಹಿತನಿಗೆ Forward ಮಾಡಿದ.  ಅವನ ದುರದೃಷ್ಟಕ್ಕೆ ಅವನ ಸ್ನೇಹಿತನ ಅಪ್ಪ S.P. ಈ ಮೆಸೇಜ್ ತಂದೆಯ ಕಣ್ಣಿಗೆ ಬಿದ್ದು,  ಪೋಲೀಸ‌ರು ನಮ್ಮ ಮನೆಗೆ ಬಂದಿದ್ದರು.  ನಿಜಸ್ಥಿತಿ ಅವರಿಗೆ ವಿವರಿಸಿ ನಮ್ಮ ನಿರ್ದೋಷಿತ್ವವನ್ನು ಸಾಬೀತುಪಡಿಸುವಲ್ಲಿ ನಮ್ಮ ಮನೆಯವರೆಲ್ಲ ಹೈರಾಣಾದೆವು.  ಬಯಸದೇ  ಬಯ್ಯಿಸಿದ ಕೆಟ್ಟ ಅವಾಂತರವಿದು. ಇನ್ನು ಮುಂದೆ ವಾಟ್ಸ್‍ಅಪ್ ಸಹವಾಸಕ್ಕೇ ಹೋಗಬಾರದೆಂದು ತಮ್ಮನಿಗೆ ತಾಕೀತು ಮಾಡಿದೆವು – ಅವನೂ ಒಪ್ಪಿದ.  ನಾಲ್ಕು ದಿನದ ಬಳಿಕ ತಮ್ಮ ಮತ್ತೆ ವಾಟ್ಸ್‍ಅಪ್ ದಾಸನಾದ! ಏನೇ ಹೇಳಿ, ನಾಯಿಬಾಲ ಡೊಂಕೇ!
ವಾಟ್ಸ್‍ಅಪ್‍ನಲ್ಲಿ ಉಚಿತ ವೈದ್ಯಕೀಯ ಸಲಹೆಗಳು ಧಂಡಿಯಾಗಿ ಬೀಳ್ತಿರ್ತವೆ. ಅವುಗಳಲ್ಲಿ ಯಾವುದನ್ನು ನಂಬಬೇಕು, ಯಾವುದನ್ನು ನಂಬಬಾರದು ಅನ್ನುವುದೇ ತಿಳಿಯುವುದಿಲ್ಲ. ನನ್ನ ಸ್ನೇಹಿತ ಮೃತ್ಯುಂಜಯ ಜಿಪುಣಾಗ್ರೇಸರ. ಒಮ್ಮೆ ಮಗನಿಗೆ ಭೇದಿಯಾದಾಗ, ವೈದ್ಯರಿಗೆ ಯಾಕೆ ದುಡ್ಡು ದಂಡವೆಂದೆಣಿಸಿ, ಮನೆವೈದ್ಯವನ್ನೂ ಮಾಡದೇ, ಈ `ವಾಟ್ಸ್‍ಅಪ್ ವೈದ್ಯ’ ವನ್ನು ಮಗನ ಮೇಲೆ ಪ್ರಯೋಗಿಸಿದ.  ಭೇದಿ ವಾಸಿಯಾಗುವುದಿರಲಿ, ನವರಂಧ್ರ‌ಗಳಲ್ಲೂ ತೂಬು ಕಿತ್ತು ಹೋಗಿ, ವಾಂತಿ-ಭೇದಿಯಾಗಿ ನಿತ್ರಾಣನಾದ, ಮಗ! ಆಗ ಅವನನ್ನುಳಿಸಿಕೊಳ್ಳಲು ದೊಡ್ಡಾಸ್ಪತ್ರೆಗೆ ಎಡತಾಕಿ, `ಅದೇ’ ರಭಸದಲ್ಲಿ ದುಡ್ಡೂ ಅವನಿಂದ ಕಿತ್ತು ಹೋಯ್ತು! ಬೇಕಿತ್ತೇ ಇದು?
ಹಿಂದೆ, ನಮ್ಮ ಕಾಲದಲ್ಲಿ, ಕರಪತ್ರಿಕೆಗಳ ಹಾವಳಿ. ಕೆಲವರು ಕರಪತ್ರಿಕೆಗಳಲ್ಲಿ - `ಈ ಕರಪತ್ರಿಕೆಯನ್ನು 1000 ಪ್ರತಿಗಳಲ್ಲಿ ಮುದ್ರಿಸಿ ಹಂಚದಿದ್ದಲ್ಲಿ ಎರಡೇ ದಿನಗಳಲ್ಲಿ ಅಪಘಾತದಲ್ಲಿ ಸಾಯುವಿರಿ’ ಅಂತೆಲ್ಲ ಮುದ್ರಿಸಿರೋವ್ರು. ಭಯಬೀಳೋ ಮಂದಿ, ಪ್ರಿಂಟಿಂಗ್ ಪ್ರೆಸ್‍ನವರ ಆಸ್ತಿ ವೃದ್ಧಿಯಲ್ಲಿ ತಮ್ಮ ದೇಣಿಗೆ ನೀಡುತ್ತಿದ್ದರು. ಈ ಧ‌ಮ್ಕೀ ಕೀ ಕಮಾಲ್, ಈಗ ವಾಟ್ಸ್‍ಅಪ್ ರೂಪದಲ್ಲಿಯೂ ಬಂದಿದೆ! `ಜೈ ಆಂಜನೇಯ- ಈ ಮೆಸೇಜನ್ನು 200 ಜನರಿಗೆ ಕಳಿಸಿದಲ್ಲಿ ಶುಭವಾರ್ತೆ. ಇದನ್ನು ಆಲಕ್ಷಿಸಿದಲ್ಲಿ ನಿಮಗೆ ಘೋರಮರಣ ತಪ್ಪಿದ್ದಲ್ಲ!’ ಪಾಪಭೀರುಗಳು ಇಂಥ ಸೂಚನೆಗಳನ್ನು ಭಯಭಕ್ತಿಯಿಂದ ಚಾಚೂ ತಪ್ಪದೇ ಪಾಲಿಸುತ್ತಾರೆ. ನಾನೋ, ಮೊದಲೇ ನಾಸ್ತಿಕ, ಇಂಥ ಮೆಸೇಜುಗಳನ್ನು ಅಲಕ್ಷಿಸುವಾತ.  ಆದರೆ, ನನ್ನ ಮಗಳು, ನನಗರಿವಿಲ್ಲದೇ ಇಂಥ ಮೆಸೇಜೊಂದನ್ನು ನನ್ನ ಸ್ನೇಹಿತರಿಗೆಲ್ಲಾ forward ಮಾಡಿಬಿಟ್ಟಳು.  ಎಲ್ಲರೂ ಬಂದು ನನಗೆ ಉಗಿದು ಉಪ್ಪಿನಕಾಯಿ ಹಾಕಿದಾಗಲೇ ನನಗೆ ನನ್ನ ಮಗಳ ಕೃತ್ಯ ಗೊತ್ತಾದದ್ದು.  ಆದರೆ, ಅವರು, ನಾನು ಏನು ಹೇಳಿದರೂ ಕೇಳುವ ಸ್ಥಿತಿಯಲ್ಲಿತ್ತಿಲ್ಲ.  ಕೆಟ್ಟ ಮುಖ ಹೊತ್ತು ನಿಂತಿದ್ದ ನನ್ನ ಅವಾಂತರವನ್ನು ನೆನೆದೇ ಕ್ರುದ್ಧನಾಗುತ್ತೇನೆ (ಹೇಗೂ ವೃದ್ಧನಾಗಿದ್ದೀನಲ್ಲಾ!)
ಈ ವಾಟ್ಸ್‍ಅಪ್‍ನಲ್ಲಿ ಅಮೂಲ್ಯ ಜ್ಞಾನ ಭಂಡಾರದ ಪ್ರಸಾರವೂ ನಿತ್ಯನೂತನವಾಗಿ ಚಾಲ್ತಿಯಲ್ಲಿರುತ್ತದೆ.  ಮೋದಿ ಪ್ರಧಾನಿಯಾದ ಹೊಸತರಲ್ಲಿ, ನನ್ನ ವಾಟ್ಸ್‍ಅಪ್‍ಗೆ ಒಂದು ಮೆಸೇಜ್ ಬಂತು - `ನಮ್ಮ ರಾಷ್ಟ್ರಗೀತೆಯನ್ನು ಯುನೆಸ್ಕೋ ಅತ್ಯುತ್ತಮ ರಾಷ್ಟ್ರಗೀತೆಯೆಂದು ಘೋಷಿಸಿದೆ – ಐದು ನಿಮಿಷದ ಹಿಂದೆ, Be the first to share’. ಒಂದು ಸೆಕೆಂಡು ಕೂಡ ತಡ ಮಾಡದೇ ನಾನು  ನನ್ನ ವಾಟ್ಸ್‍ಅಪ್  contact list ನಲ್ಲಿದ್ದ ಎಲ್ಲರಿಗೂ ಇದನ್ನು  forward ಮಾಡಿದೆ.  ಎಲ್ಲರಿಂದ ಪ್ರಶಂಸೆಯ ನಿರೀಕ್ಷೆಯಲ್ಲಿದ್ದೆ ನಾನು, ಆದರೆ, ಆದದ್ದೇ ಬೇರೆ! ಈ ಅವಾಂತರದಿಂದ ಪಾಠ ಕಲಿತ ನಾನು ಈಗ ವಾಟ್ಸ್‍ಅಪ್‍ನಲ್ಲಿ ಯಾವುದೇ `ಜ್ಞಾನ’ವನ್ನು ಹಂಚಿಕೊಳ್ಳಬಯಸುವುದಿಲ್ಲ.  ನನ್ನ ಗಾಯಕ್ಕೆ ಉಪ್ಪೆರೆಯುವಂತೆ, ಇದೇ ಮೆಸೇಜ್ ನನಗೆ ಏನಿಲ್ಲವೆಂದರೂ ಬೇರೆ ಬೇರೆ ಗ್ರೂಪ್‍ಗಳಿಂದ ವಾರಕ್ಕೆರಡು ಬಾರಿ ಬರುತ್ತೆ! -‘Just now received’ ಅಂತ!!
ಈ ವಾಟ್ಸ್‍ಅಪ್, ಫೇಸ್‍ಬುಕ್‍ಗಳಿಂದ ಮನುಷ್ಯರ ನಡುವಿನ ಅಂತರ ಹಿಗ್ಗುತ್ತಾ ಸಾಗಿದೆ - ನಿರಂತರವಾಗಿ ಕಣ್ಣೆದುರಿರುವ  ಜನಗಳನ್ನು ಬಿಟ್ಟು, ನಾವು ಕಾಣದ ಜನಗಳೊಂದಿಗೆ  connect ಆಗಿರುತ್ತೇವೆ. ಅಮ್ಮ ಮಗಳನ್ನು ಊಟಕ್ಕೆ ಕರೆಯಲು ವಾಟ್ಸ್‍ಅಪ್, ಟ್ವಿಟರ್ ಅಥವಾ ಫೇಸ್‍ಬುಕ್ ಬಳಸಬೇಕಾದಂಥ ಪರಿಸ್ಥಿತಿ ಬಂದಿದೆ.  ಇವುಗಳಿಂದಾಗುವ ಅವಾಂತರಗಳನ್ನು, ಇವುಗಳಲ್ಲಿಯೇ, ಅಂದರೆ ವಾಟ್ಸ್‍ಅಪ್, ಫೇಸ್‍ಬುಕ್‍ಗಳಲ್ಲಿಯೇ ನೋಡಿದರೂ, ಸ್ಮಶಾನ ವೈರಾಗ್ಯದ ನಂತರದಂತೆ, ಮತ್ತದೇ `ಮಾಯಾಲೋಕ’ಕ್ಕೆ ತೆರಳುತ್ತೇವೆ.  ಇದಕ್ಕೆಲ್ಲಾ ನಾವೇ ತಾನೇ ಕಾರಣ? ಅಥವಾ ಕಾಲಕ್ಕೆ  ತಕ್ಕಂತೆ ಬದಲಾಗದವರ ಹಳವಂಡವಿದು ಎನ್ನುತ್ತೀರೋ?!
-----