18
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ವ್ಯರ್ಥ

August 19, 2012 - 4:00pm
santhu_lm

 

 
(ಚಿತ್ರಕೃಪೆ: google)
ಕುಡಿಯಲೋದ ಕರುವನೆಳೆದು,
ಕಂಬದಲ್ಲಿ ಕಟ್ಟಿಹಾಕಿ,
ತಾಯಮೊಲೆಯ ಹಿಂಡಿ ಕರೆದು,
ಹಾಲು ತಂದು ಮೊಸರ ಮಾಡಿ,
ಮೊಸರ ಗಡಿಗೆ ಕೆಳಗೆ ಬೀಳೆ,
ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ?

ನೆರೆಯ ಹೊರೆಯ ಹೊಟ್ಟೆಯುರಿಸಿ,
ಒಡವೆ ಕಾಸು ಗೂಡಲಿರಿಸಿ
ಪರರ ವ್ಯಥೆಗೆ ಕುರುಡನಾಗಿ,
ತನಗೆ ತಾನೇ ಮಿತ್ರನಾಗಿ,
ಕೊನೆಗೆ ಎದೆಗೆ ತೂತು ಬೀಳೆ,
ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ?

ಪೈಸೆ ದುಡಿದು ಗಂಜಿ ಕುಡಿದು,
ಒಡೆದ ಮನಗಳೆಲ್ಲ ಬೆಸೆದು,
ಕಷ್ಟಸುಖದಿ ಭಾಗಿಯಾಗಿ,
ಎಲ್ಲ ಜನಗಳಣ್ಣನಾಗಿ,
ದೇಹವಳಿದು ಹೆಸರು ಉಳಿಯೇ,
ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.4 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by veena wadki on
ಸಂತೋಷ್ ರವರೆ, ನಿಮ್ಮ ಕವನ ವ್ಯರ್ಥ, ಸಮರ್ಥವಾಗಿ ಮೂಡಿ ಬಂದಿದೆ. ನನ್ನ ಪ್ರತಿಕ್ರಿಯೆ ತಿಳಿಸದಿದ್ದರೆ ಓದಿದ್ದು ವ್ಯರ್ಥವಾಗುತ್ತದೆ. ಅಭಿನಂದನೆಗಳು.

Submitted by santhu_lm on
ಧನ್ಯವಾದಗಳು ವೀಣಾ ರವರೆ, ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರೆಯಲಿ.

Submitted by venkatb83 on
"ಪೈಸೆ ದುಡಿದು ಗಂಜಿ ಕುಡಿದು, ಒಡೆದ ಮನಗಳೆಲ್ಲ ಬೆಸೆದು, ಕಷ್ಟಸುಖದಿ ಭಾಗಿಯಾಗಿ, ಎಲ್ಲ ಜನಗಳಣ್ಣನಾಗಿ, ದೇಹವಳಿದು ಹೆಸರು ಉಳಿಯೇ, ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ?" ಸಖತ್ ..... ಸರಳ ಪದಗಳಲ್ಲಿ ಅರ್ಥ-ವ್ಯರ್ಥ ಅಂಶಗಳ ಬಗ್ಗೆ ಆಲೋಚನ ಧಾಟಿ ಬಗ್ಗೆ ಬರೆದ ನಿಮ್ಮ ಬರಹ ಸೂಪರ್... ಶುಭವಾಗಲಿ.. \|/

Submitted by santhu_lm on
ಸಪ್ತಗಿರಿವಾಸಿ ಯವರೇ, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರೆಯಲಿ.

Submitted by nanjunda on
ಅರ್ಥಗರ್ಭಿತ ಕವನ. 100 ಕ್ಕೆ 99 ಅಂಕಗಳು. ಕುಡಿಯಲು ಹೋದ ಎನ್ನುವುದನ್ನು ಕುಡಿಯಲೋದ ಎಂದು ತಪ್ಪಾಗಿ ಸಂಧಿ ಮಾಡಿ ಬಳಸಿದ ಕಾರಣ 1 ಅಂಕವನ್ನು ಕಳೆಯಲಾಗಿದೆ.

Submitted by santhu_lm on
ನಂಜುಂಡರವರೇ, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನನಗೆ ಈ "ಕುಡಿಯಲೋದ" ಎಂಬ ಪದವನ್ನು ಬರೆಯುವ ಮುನ್ನ ಬಹಳ ಯೋಚಿಸಿದ್ದೆ. ಕೊನೆಗೆ ನಮ್ಮ ಆಡುಮಾತಿನಲ್ಲಿ "ಕುಡೀಲಿಕ್ಕೆ" ಅಂತಾನೂ ಉಪಯೋಗಿಸುತ್ತೇವೆ. ಜೊತೆಗೆ ನಾನು "ಕುಡಿಯಲು ಹೋದ" ಅಂದು ಉಪಯೋಗಿಸಿದರೆ ಒಂದು ಮಾತ್ರೆ ಹೆಚ್ಚಾಗುತ್ತದೆ. ಆದುದರಿಂದಲೇ ನಾನು ಕುಡಿಯಲೋದ ಎಂಬ ಪದವನ್ನು ಉಪಯೋಗಿಸಿದ್ದು. ಆದರೂ ಮುಂದೆ ಈ ತಪ್ಪನ್ನು ಸರಿಪಡಿಸಿಕೊಳ್ಳುತ್ತೇನೆ. ತಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ.

Submitted by ksraghavendranavada on
ಡಿ.ನ೦ಜು೦ಡರವರ ಅಭಿಪ್ರಾಯಕ್ಕೆ ನಾನೂ ಸಹಮತವನ್ನು ವ್ಯಕ್ತಪಡಿಸುತ್ತಿದ್ದೇನೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

Submitted by santhu_lm on
ನಾವಡರವರೇ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ತಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ.

Submitted by gurudutt_r on
ಅಬ್ಭಾ..ಅರ್ಥಗರ್ಭಿತ ಕವನ. ನಿಜಕ್ಕೂ ಗೂಢಾರ್ಥದ ಹರಿತ ಜೋರಾಗಿಯೇ ಇದೆ ನಿಮ್ಮ ಕವನದಲ್ಲಿ. ಮನುಷ್ಯನ ಅಂಧ ಲೆಕ್ಕಾಚಾರವನ್ನು ದಿಟ್ಟವಾಗಿ ಬರೆದಿದ್ದಕ್ಕಾಗಿ ಅಭಿನಂದನೆಗಳು.

Submitted by mmshaik on
ಸಂತೋಷ್ ಅವರೆ ನಮಸ್ಕಾರ‌ ಮಾನವಕಾಳಜಿಯುಳ್ಳ ಅತ್ಯಂತ ಮಾರ್ಮಿಕ ಕವನ ನೀಡಿದ್ದಕ್ಕೆ ಅಭಿನಂದನೆಗಳು...ಶುಭವಾಗಲಿ.ರಂಜಾನ್ ಹಬ್ಬದ ಶುಭಾಶಯಗಳು.

Submitted by santhu_lm on
ಧನ್ಯವಾದಗಳು ರವರೇ, ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ. ನಿಮಗೂ ರಂಜಾನ್ ಹಬ್ಬದ ಶುಭಾಶಯಗಳು:)

Submitted by makara on
ಸಂತೋಷ್ ಅವರೆ, ನಿಮ್ಮ ಕವನ ಪ್ರಾಸಬದ್ಧವಷ್ಟೇ ಅಲ್ಲ, ಅರ್ಥಬದ್ಧವಾಗಿಯೂ ಇದೆ. ಅಭಿನಂದನೆಗಳು.

Submitted by santhu_lm on
ಧನ್ಯವಾದಗಳು ಶ್ರೀಧರ್. ನಿಮ್ಮ ಅಭಿನಂದನೆಗಳು, ನನಗೆ ಮತ್ತಷ್ಟು ಹುರುಪು ತುಂಬುತ್ತವೆ:)

Submitted by raghumuliya on
ಬಹಳ ಸು೦ದರ ಕವನ, ಸ೦ತೋಷ ಕುಮಾರರೆ, "ಕುಡಿಯಲೋದ " ವನ್ನು ಕೆಚ್ಚಲು೦ಬ ( ಕೆಚ್ಚಲ +ಉ೦ಬ) ಎ೦ದು ಬದಲಾಯಿಸಿದರೆ ನ೦ಜು೦ಡರು ಕಳೆದ ಒಂದು ಅ೦ಕವೂ ನಿಮ್ಮದೇ.

Submitted by santhu_lm on
ರಘುರವರೆ ಸೂಪರ್ ಸಲಹೆ, ನಿಮ್ಮ ಕೆಚ್ಚಲುಂಬ ಎಂಬ ಪದ ಸೇರಿಸಿದರೆ ಅಲ್ಲಿ ಮಾತ್ರೆಯ ಲೋಪವೂ ಆಗುವುದಿಲ್ಲ. ಜೊತೆಗೆ "ಕ"ಕಾರದ ಆದಿಪ್ರಾಸವೂ ಬರುತ್ತದೆ. ನಿಮ್ಮ ಸಲಹೆಗೆ ಜೊತೆಗೆ ಅತ್ಯಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ.

Submitted by santhu_lm on
ಧನ್ಯವಾದಗಳು ಪ್ರೇಮರವರೇ, ನಿಮ್ಮ ಪ್ರೋತ್ಸಾಹ ನಿರಂತರವಾಗಿರಲಿ., ನನ್ನ ಹೊಸ ಬರಹ "ಹಸಿವಿನ ಅಂತರಾಳದಲ್ಲಿ" ಓದಿ, ಪ್ರತಿಕ್ರಿಯಿಸಿ.