ಶಂಕ್ರಣ್ಣ_ನಾನು_ಬರ್ತೀನಿ_ಶಂಕ್ರಣ್ಣ....

ಶಂಕ್ರಣ್ಣ_ನಾನು_ಬರ್ತೀನಿ_ಶಂಕ್ರಣ್ಣ....

 
 

ಶಂಕ್ರಣ್ಣ ನಾನು ಬರ್ತೀನಿ ಶಂಕ್ರಣ್ಣ....
೮೦ ರ ದಶಕದ ಮಕ್ಕಳೇ....ಸ್ವಲ್ಪ ಇಲ್ಲಿ ಕೇಳಿ... 
ಈ ಮನ ಮಿಡಿಯುವ ಎಳೆದನಿಯಲ್ಲಿದ್ದ ವಾಕ್ಯ ಯಾವುದೋ ಸಿನಿಮಾದಲ್ಲಿ ಕೇಳಿದಂತಿದೆ ಅನ್ನಿಸ್ತಿದ್ಯಲ್ವಾ ...?? ನಿಮ್ಮ ಅನಿಸಿಕೆ ನಿಜ. ಇದು 'ದಂಗೆ ಎದ್ದ ಮಕ್ಕಳು' ಮಕ್ಕಳ ಸಿನೆಮಾದ 'ಪಾರು' ಪಾತ್ರಧಾರಿ ಪುಟ್ಟ ಹುಡುಗಿ, ಅಣ್ಣ ಶಂಕರನಿಗೆ ಹೇಳುವ ಮಾತು..ಊರು ಬಿಟ್ಟು ಹೋಗುತ್ತಿರುವ ಅವನಿಗೆ ತನ್ನನ್ನೂ ಕರೆದೊಯ್ಯಿ ಎಂದು ಬೇಡಿಕೊಳ್ಳುವ ದೃಶ್ಯದ ವಾಕ್ಯ. 
೧೯೮೦ ನ ಆಸು ಪಾಸು, ಮಕ್ಕಳ ಸಿನೆಮಾಗಳ 'ಸಮೃದ್ಧ' ಕಾಲ. ನಗರವಾಸಿ ಮಕ್ಕಳೇ ಕೇಂದ್ರ ಬಿಂದುವಾದ ದೊಂಬರ ಕೃಷ್ಣ, ಪುಟಾಣಿ ಏಜೆಂಟ್ ೧೨೩ , ಪ್ರಚಂಡ ಪುಟಾಣಿಗಳು, ಮಕ್ಕಳ ಸೈನ್ಯ, ನಾಗರ ಹೊಳೆ, ಮಂಕು ತಿಮ್ಮ.. ಹೀಗೇ ಮಕ್ಕಳ ಚಿತ್ರಗಳ ಭರಾಟೆ !!... ಒಂದಕ್ಕಿಂತ ಒಂದು ಆಕರ್ಷಕವಾಗಿದ್ದು ತುಂಬಾ ಹಣ, ಹೆಸರು ಮಾಡಿದವು. ಈ ಸುಮಾರು ಚಿತ್ರಗಳ ಸಾಲಿನಲ್ಲಿ ವಿಭಿನ್ನವಾಗಿ ನಿಲ್ಲುವ ದೃಶ್ಯ ಕಾವ್ಯ 'ದಂಗೆ ಎದ್ದ ಮಕ್ಕಳು' ನನ್ನ ಮನಸಿಗೆ ಬಹಳ ಹತ್ತಿರವಾಗಿತ್ತು. ಶುದ್ಧ ಮನರಂಜನೆಯ ಯಾವುದೇ ವರ್ಣರಂಜಿತ ದೃಶ್ಯಗಳಿಲ್ಲದ, ವೈಭವೋಪೇತ ಹಾಡುಗಳಿಲ್ಲದ ಹಳ್ಳಿ ಸೊಗಡಿನ ಕಥೆ,(ಈಗಿನ ಹಳ್ಳಿ ಕಥೆಯಲ್ಲ) ಪೂರಕವಾಗಿದ್ದ ಸಾಹಿತ್ಯ, ಸಂಗೀತ. ಪೂರ್ಣ ಪ್ರಮಾಣದ ಮಕ್ಕಳ ಚಿತ್ರವನ್ನಾಗಿಸುವಲ್ಲಿ ಪ್ರತಿ ಫ್ರೇಮಿನಲ್ಲೂ ಎದ್ದು ಕಾಣುವ ಶ್ರಮ ನಮ್ಮ ಸದಭಿರುಚಿಯ ನಿರ್ದೇಶಕ, ನಿರ್ಮಾಪಕ ವಾದಿರಾಜ್ ಅವರದ್ದು. 

ಹಳ್ಳಿಯ ಅನಾಥಾಶ್ರಮವೊಂದರ ಮಕ್ಕಳ ಕತೆಯಿದು. ಅಲ್ಲಿನ ವಾರ್ಡನ್ ಮಾಡುತ್ತಿದ್ದ ಮೋಸ, ಊಟ ತಿಂಡಿಯ ವಿತರಣೆಯಲ್ಲಾಗುತ್ತಿದ್ದ ಅನ್ಯಾಯಗಳ ವಿರುದ್ಧ ಸೆಟೆದು ನಿಲ್ಲುತ್ತಾರೆ. ಅದನ್ನೆಲ್ಲಾ ಅನಾಥಾಶ್ರಮ ನಡೆಸುತ್ತಿದ್ದ ಮಾಲೀಕರ ಗಮನಕ್ಕೆ ತರಲು ಹಳ್ಳಿಯಿಂದ ಬೆಂಗಳೂರಿಗೆ ಬರುವ ಮಕ್ಕಳು ಎಷ್ಟೆಲ್ಲಾ ಕಷ್ಟ ಅನುಭವಿಸುತ್ತಾರೆ.ಆದರೂ ಛಲ ಬಿಡದ ತ್ರಿವಿಕ್ರಮನಂತೆ ಹಿಡಿದ ಕಾರ್ಯ ಪೂರ್ಣಗೊಳಿಸಿ ನ್ಯಾಯ ದೊರಕಿಸಿಕೊಳ್ಳುತ್ತಾರೆ ಎಂಬುದು ಕಥಾ ಹೂರಣ.
ಹಳ್ಳಿಮಕ್ಕಳ ಮುಗ್ಧತೆ, ಸ್ವಾಭಿಮಾನ, ಅತಿ ಜಾಣತನ ಪ್ರದರ್ಶಿಸದ ಸಂಭಾಷಣೆಯೇ ಎಲ್ಲರ ಮನಸು ಗೆದ್ದಿದ್ದು. ಚೇತೋಹಾರಿಯಾದ ಮಕ್ಕಳ ಅಭಿನಯ ಎಲ್ಲಿಯೂ ಎಡವದೆ ಆ ವಯಸ್ಸಿನಲ್ಲಿ ಬರುವ ಕುತೂಹಲ, ಸಾಹಸ ಪ್ರವೃತ್ತಿಯನ್ನು ಸರಳವಾದ ಆಡು ಭಾಷೆಯ ಮಾತುಗಳ ಮೂಲಕ ನಿರ್ದೇಶಕರು ಕಟ್ಟಿಕೊಡುತ್ತಾರೆ. ಯಾವುದೇ ಕಮರ್ಷಿಯಲ್ ತಂತ್ರಗಳೂ ಇಲ್ಲದೆ ಪ್ರತಿ ಅಂಶವೂ ಚಿತ್ರದ ಸರಳತೆಗೆ ಪೂರಕವಾಗಿದ್ದರಿಂದ ನೋಡುಗರ ಮನಸು ಮುಟ್ಟಿದ್ದರಲ್ಲಿ ಯಾವ ಸಂಶಯವೂ ಇಲ್ಲ. ನನಗೇನೋ 'ದಂಗೆ ಎದ್ದ ಮಕ್ಕಳು' ತುಂಬಾ ಹಿಡಿಸಿದ್ದ ಚಿತ್ರ. 
ಅಂತಹ ಮಕ್ಕಳ ಚಿತ್ರಗಳು ಮತ್ತೆ ಬಂದಾವೇ??...
 
ಮ.ಮಾ. - ನಮ್ಮನೆಯಲ್ಲಿ ನಾವೆಲ್ಲಾ ಮಕ್ಕಳು ಈ ಚಿತ್ರ ನೋಡಲೇಬೇಕೆಂದು 'ದಂಗೆ' ಎದ್ದ ಮೇಲೆ, ಅಳೆದು ತೂಗಿ ಇದು ಮಕ್ಕಳ ಚಿತ್ರವೇ ಎಂದು ಖಚಿತಪಡಿಸಿಕೊಂಡು ನಮ್ಮಪ್ಪ ಈ ಸಿನೆಮಾಗೆ ಕರೆದುಕೊಂಡು ಹೋದದ್ದು ಚೆನ್ನಾಗಿಯೇ ನೆನಪಿದೆ!!.. :D 

PC : Google