ಮಕ್ಕಳಿಲ್ಲದೆ ಪರಿತಪಿಸುವ
ಕುಟುಂಬಗಳೆಷ್ಟೋ ನಮ್ಮೆಡೆ
ಒಂದೆಡೆ, ಬಂಧು ಬಳಗವಿಲ್ಲದೆ
ಅಲೆಯುತ್ತಿವೆ ಅದೆಷ್ಟೊ ಕಂದಮ್ಮಗಳು
ಪುಟ್ಟ ಕೈಗಳಲ್ಲಿ ಭಿಕ್ಷಾ ಪಾತ್ರೆ
ಹರಿದ ಅಂಗಿ, ತುಂಡು ಲಂಗ
ಯಾರೋ ಉಂಡು ಮಿಕ್ಕಿದ್ದೇ
ಇವರಿಗೆ ಮೃಷ್ಟಾನ್ನ
ಯಾರು ಹೆತ್ತರೋ ಇವರನ್ನು
ಅವರಿಗೇ ತಿಳಿದಲ್ಲ...ಆದರೂ
ಬದುಕುತ್ತವೆ ಈ ಎಳೆ ಜೀವಗಳು
ಏನೋ ನಿರೀಕ್ಷೆಯಲ್ಲಿ...
ಯಾವನೋ ತನ್ನ ಮೈ ಸುಖದ ತವಕದಲಿ
ಹುಟ್ಟಿದ ಎಳೆ ಕಂದಮ್ಮಗಳನು
ಲೋಕ ಕಾಣುವ ಮುನ್ನ
ಚಿವುಟಿ ಬಿಡುವರು ಕೆಲವರು
ಈ ಲೋಕದಲಿ ಹುಟ್ಟಿದ್ದೇನೋ
'ಪಾಪ' ಎಂಬಂತೆ ಇನ್ನೂ ಕೆಲವರು
ಎಸೆಯುತ್ತಾರೆ ಮುಗ್ದ ಮಗುವನ್ನು
ಕಸದ ತೊಟ್ಟಿಗಳಲ್ಲಿ...
ತಮ್ಮ ಸುಂದರ ನಾಳೆಗಳಿಗಾಗಿ
ಈ ಮುಗ್ದ ಜೀವಗಳನ್ನು
ಚಿವುಟಿದವರೆಷ್ಟೋ?
ಆದರೂ
ನಾಳಿನ ಭವಿಷ್ಯ ರೂಪಿಸುವ
ಈ ಮಕ್ಕಳು ನಾಳೆ ಏನೆಂದು
ತಿಳಿಯದೆಯೆ ಬದುಕುತ್ತವೆ