ಬಂತು ಮತ್ತೊಮ್ಮೆ ವ್ರತಾಚರಣೆಯ ಮಾಸ

ರಮದಾನ್, ಇಸ್ಲಾಮೀ ಪಂಚಾಂಗದ ಒಂಭತ್ತನೆ ತಿಂಗಳು ಮತ್ತು ಇಸ್ಲಾಮಿನ ಐದು ಸ್ಥಂಭಗಳಲ್ಲಿ ಮೂರನೆಯ ಸ್ಥಂಭವಾದ ರಮದಾನ್ ತಿಂಗಳಿನಲ್ಲಿ ಜಗತ್ತಿನ ಮುಸ್ಲಿಮರು ದಿನವಿಡೀ ಉಪವಾಸವಿದ್ದು ವಿಶೇಷ ಆರಾಧನೆಯಲ್ಲೂ, ಪವಿತ್ರ ಕುರಾನ್ ಪಾರಾಯಣದಲ್ಲೂ ತಮ್ಮ ಸಮಯ ಕಳೆಯುತ್ತಾರೆ. ಈ ಕಾರಣಕ್ಕಾಗಿ ಈ ಮಾಸವನ್ನು ದಾನದ, ಧ್ಯಾನದ ಮತ್ತು ಚಿಂತನೆಯ ಮಾಸವೆಂದು ಕರೆಯುತ್ತಾರೆ (month of charity, contemplation, and reflection). ಚಂದ್ರ ದರ್ಶನದೊಂದಿಗೆ ಆರಂಭವಾಗುವ ೩೦ ದಿನಗಳ ಈ ಉಪವಾಸ ವ್ರತ ಮುಸ್ಲಿಮ್ ಜಗತ್ತಿಗೆ ಹೊಸ ಚೈತನ್ಯವನ್ನೂ, ಧಾರ್ಮಿಕತೆಯನ್ನೂ ತುಂಬುತ್ತದೆ.
ನಮ್ಮನ್ನು ಸೃಷ್ಟಿಸಿದ ದೇವರಿಗೆ ಆರಾಧನೆ ಸಲ್ಲಿಸುವುದಕ್ಕೆ, ಪ್ರಾಮುಖ್ಯತೆ ಹೆಚ್ಚು. ಯಾವುದೇ ಪರಿಸ್ಥಿತಿಯಲ್ಲೂ ಐದು ಹೊತ್ತಿನ ನಮಾಜನ್ನು ನಿರ್ವಹಿಸಲೇಬೇಕು. ನಮಾಜ್ ಜೊತೆಗೆ ಕುರಾನ್ ಸೂಕ್ತಗಳನ್ನು ಪಠಿಸುವುದು, ಹಜ್ ಯಾತ್ರೆ, ಇವೂ ಸಹ ಆರಾಧನೆಯಲ್ಲೇ ಒಳಗೊಳ್ಳುತ್ತದೆ. ಆದರೆ ನಮಾಜ್, ಕುರಾನ್ ಪಠಣ, ಹಜ್ ಇತ್ಯಾದಿಗಳು ತೋರಿಕೆಯ ಆರಾಧನೆಯಾಗಿಯೂ ಮಾರ್ಪಡಬಹುದು. ನಾನು ಧರ್ಮಿಷ್ಠ ಎಂದು ತೋರಿಸಲು ಎಲ್ಲರಿಗೂ ಕಾಣುವಂತೆ ಮಸ್ಜಿದ್ ಗೆ ಹೋಗುವುದು, ಹಜ್ ಯಾತ್ರೆ ಮಾಡುವುದು ಹೀಗೆ. ಆದರೆ ವ್ರತಾಚಾರಣೆ ಹಾಗಲ್ಲ. ಇದೊಂದು ರಹಸ್ಯ ಆರಾಧನೆ. ಉಪವಾಸವಿರುವವನ ಮತ್ತು ಅವನ ಪ್ರಭುವಿಗೆ ಮಾತ್ರ ತಿಳಿಯುವ ಆರಾಧನೆ. ಮೂರನೆಯ ವ್ಯಕ್ತಿಗೆ ಇದರ ಅರಿವಿರುವುದಿಲ್ಲ; ಹಾಗಾಗಿ ವ್ರತಾಚರಣೆಗೆ ಹೆಚ್ಚು ಮಹತ್ವ.




