ಸಿದ್ರಾಮಣ್ಣ ಕೇಳಣ್ಣ

ಸಿದ್ರಾಮಣ್ಣ ಕೇಳಣ್ಣ

ಕವನ

ಸಿದ್ರಾಮಣ್ಣ ಕೇಳಣ್ಣ


ಆಗು ನೀನು ಮುಖ್ಯಮಂತ್ರಿ ಸಿದ್ಧಣ್ಣ
ನೀಗು ಬೇಗ ಈ ಬವಣೆ ಜನರ ಸದ್ದನ್ನ  ॥

ಬಲು ಮೋಸಗಾರರಿಹರವರೆಲ್ಲರೊಂದುಗೂಡಿ
ಗೆಲುವೊಪ್ಪಿಕೊಳದೆ ಮೇಲಿಂದ ಮೇಲೆ ಕಳವಳಕೆ  ನಿನ್ನ ದೂಡಿ ।
ಬಲೆಬೀಸಿ ಹಿಡಿದು ನಂಜನ್ನು ಉಣಿಸಿ ಕಲೆಯಿರಿಸಿ ನಿನ್ನ ಮುಖದಿ ॥
ಅತಿ ವಿನಯವನ್ನು ನಿನ್ನೆದಿರು ತೋರಿ ಧರ್ಪದಲಿ ಜನಗಳೆದಿರು
ಮಿತಿಯಿಲ್ಲದಂತೆ ಧನಕನಕ ಗಳಿಸಿ ಮೆರೆವವರ ದೂರವಿರಿಸು ॥

ಎಚ್ಚರಿಕೆಯಿರಲಿ ಕಷ್ಟದಲಿ ನೊಂದು ಬೆಂದವರ ನಾಡಿ ನೋಡು
ಕಚ್ಚಾಟವಿರದಲಂತವರ ದುಃಖ  ತಣಿಸಣ್ಣ ಶಾಂತಿ ನೀಡು ॥
ಅಭ್ಯುದಯ ಬೇಕು ಸಾರ್ಥಕ್ಯ ಬೇಕು ಮಾನವತೆ ಬೆಳಗಬೇಕು
ಸಭ್ಯತೆಯಲಿರುವ ಸಜ್ಜನರ ಮುಖದಿ ನಗುವೊಮ್ಮೆ ಮಿನುಗಬೇಕು ॥

ನೀನಂತಹವನು ಬಲು ದಿಟ್ಟನಾಗಿ  ಮನಗಟ್ಟಿ ತೋರಿದವನು 
ಏನಾದರೊಂದು ಸಾಧನೆಯ ಮಾಡಿ ಮನಮುಟ್ಟಿ ತೋರುವವನು ॥
ಎಂದೆನಿಸುತಿಹುದು ಹೊಗಳಿಕೆಯದಲ್ಲ ಈ ಮಾತ ಮರೆಯಬೇಡ
ಮುಂದಿರುವ ದಿನದ ಕನಸುಗಳನೆಲ್ಲ ಭ್ರಮೆಯೆಂದು ತೊರೆಯಬೇಡ   ॥

                                                                   - ಸದಾನಂದ