ಸ್ವರಗಳಿರದ ಗೀತೆಗೆ..

ಸ್ವರಗಳಿರದ ಗೀತೆಗೆ..

ಕವನ

ಉಸಿರ ಕ್ರಮವೆ ಜೀವ ಶೃತಿಯು
ಮನದ ಮೌನ ಅವಳ ಸ್ತುತಿಯು
ಹೃದಯ ಅರಿತು ಬಡಿಯೆ ಕ್ರಮದಿ
ತಾಳವದುವು ಬದುಕಿಗೆ.
ಸ್ವರಗಳಿರದ ಗೀತೆಗೆ..

ಜಿಹ್ವೆ ಲಜ್ಜೆಯಿಂದ ಒಣಗೆ
ಶಬ್ದ ತುಟಿಯ ಮರೆಯೊಳಡಗೆ
ಮೂಕ ಮನವು ಒಳಗೆ ಗುನುಗೆ
ಗೀತೆ ಹೊಮ್ಮಲರಿಯೆ ಹೊರಗೆ
ಮೌನ ನೀಡಲೊಪ್ಪಿಗೆ
ಗೀತಕಾರ ಸಪ್ಪಗೆ,

ನೆರೆಯ ವಾದ್ಯವೃಂದ ಮುಳಿಯೆ
ಮೌನವದರ ಅರ್ಥವರಿಯೆ
ಶಾಂತಭಾವವಲ್ಲಿ ನೆರೆಯೆ
ಮಂದಹಾಸ ಚಿಮ್ಮಿ ಮೆರೆಯೆ
ಓಡಿತೆನಲು ಕತ್ತಲು
ದೈವಭಾವ ಸುತ್ತಲೂ

ಮನವ ಕವಿದ ವೈರಿ ಬೀಳೆ
ಅನಾಹತವು ಮೆಲ್ಲ ಕೇಳೆ
ಆಕೆಯಿರುವಳೆಂದು ಹೇಳೆ
ಸತ್ಯ ವಿಶ್ವರೂಪ ತಾಳೆ
ನಿತ್ಯ ಸತ್ಯ ಬೋದೆಯು
ಮಿಥ್ಯ ಬದುಕಿನಾಚೆಯು.

ತನುವ ನರವೆ ತಂತುವಾಗೆ
ತಲೆ ಕಾಲ್ಗಳೆ ವೀಣೆಯಾಗೆ
ಮಿಡಿವ ಭಾವ ಕರಗಳಾಗೆ
ಬುದ್ಧಿ ವೀಣಕಾರನಾಗೆ
ಶ್ರೋತೃ ಆತ್ಮನಾಥನು
ಜೀವ ಭಕ್ತನಾದನು..

ಉಸಿರ ಕ್ರಮವೆ ಜೀವ ಶೃತಿಯು
ಮನದ ಮೌನ ಅವಳ ಸ್ತುತಿಯು
ಹೃದಯ ಅರಿತು ಬಡಿಯೆ ಕ್ರಮದಿ
ತಾಳವದುವು ಬದುಕಿಗೆ.
ಸ್ವರಗಳಿರದ ಗೀತೆಗೆ..

- ವಿಶ್ವಪ್ರಿಯಂ (ಜುಲೈ ೧೬, ೨೦೧೪)
(http://bhaavanouke.blogspot.co.uk/)