ಹೀಗೊಂದು ಆಲೋಚನೆ ??

ಹೀಗೊಂದು ಆಲೋಚನೆ ??

ಕವನ

ದೂರದ ಬೆಟ್ಟದಲ್ಲಿತ್ತೊಂದು ಪುರಾತನ ಮರ..
ಯಾವುದೇ ಬಿರುಗಾಳಿಗೆ, ಮಳೆ, ಸಿಡಿಲಿಗೆ..
ಅಂಜದೆ ಅಳುಕದೆ, ಬೆಳೆದು ನಿಂತಿದ್ದ ಆ ಮರಕ್ಕೆ..
ಇದ್ದನೊಬ್ಬ ಗೆಳೆಯ, ವಯಸ್ಸಾದ ಮುದುಕ..

ದಿನವೂ ಸಂಜೆ ವೇಳೆಯಲಿ ಬರುತ್ತಿದ್ದ ಆತ,
ಮರದ ಬುಡದಲಿ ಕುಳಿತು ಕಾಲ ಕಳೆಯುತ..
ಇವನನ್ನು ದಿನವೂ ನೋಡುತ್ತಿತ್ತು ಆ ಮರ..
ಹೇಳಿಕೊಳ್ಳಲಾಗದ ಆಸೆಯ ಕಣ್ಣುಗಳಿಂದ..

ಮುದುಕನ ಮನಸ್ಸಿನಲ್ಲಿ ಬಂದಿತೊಂದು ದ್ವಂದ್ವ,
"ಈ ಮರವು ಎಷ್ಟು ಪುಣ್ಯ ಮಾಡಿದೆಯೋ ?"
"ಈ ಆಜಾನುಬಾಹು ಮರಕ್ಕೆ ಅಂಜಿಕೆಯಿಲ್ಲ..
ನಿಂತಿದೆ ಎಷ್ಟೋ ವರ್ಷಗಳಿಂದ, ತಲೆಮಾರುಗಳ
ನೋಡುತ್ತಾ, ಬಂದವರಿಗೆ ನೆರಳು ನೀಡುತ್ತಾ..
ಇದರ ಜನ್ಮವೇ ಶ್ರೇಷ್ಠ"

"ನಾನೂ ಒಬ್ಬ ಇದ್ದೀನಿ, ಅನಾಮಿಕ..
ನನ್ನವರು ಎಂದರೆ ಯಾರು, ಸತ್ತರೆ, ಕೂಡಲೇ..
ನನ್ನ ಹೆಸರು ನಿರ್ನಾಮ, ಬದಲಾಗುತ್ತದೆ 
ಈ ನನ್ನ ಹೆಸರು, ಪಡೆದು ಹೆಣವೆಂಬ ಶೀರ್ಷಿಕೆ"

ಆ ಮರದ ಮನಸಿನಲ್ಲೂ ಈ ರೀತಿ ಆಲೋಚನೆ!
"ಎಷ್ಟು ಪುಣ್ಯವಂತ ಈ ಮುದುಕ
ಅವನಿಗಿದೆ ಕೈ ಕಾಲುಗಳು, ಎಲ್ಲಿ ಬೇಕಾದರೂ ಹೋಗಬಹುದು, 
ಅವನ ಮೆದುಳಿಂದ ಏನಾದರೂ ಮಾಡಬಹುದು
ಇವನ ಜನ್ಮವೇ ಶ್ರೇಷ್ಠ"

"ನಾನು ಇದ್ದೀನಿ ಒಂದು ಜಡ ಮರವಾಗಿ..
ಮಳೆ ಬಂದರೂ, ಉರಿ ಬಿಸಿಲಾದರೂ..
ಎಲ್ಲಿಯೂ ಕದಲಲು ಆಗೋಲ್ಲ, ಛೆ..
ನಾನಾದರೂ ಆ ಮುದುಕನ ಹಾಗೆ ಆಗಿದ್ದರೆ...?"

ಒಂದು ದಿವಸ ಬಂದಿತೊಂದು ಜೋರು 
ಬಿರುಗಾಳಿ ಸಹಿತ, ರಣ ಮಳೆ..
ಆ ಮುದುಕನಿಗೆ ಆತಂಕ, ಎಲ್ಲಿ ಈ ಮಳೆಗೆ
ನೆನೆದು, ಜ್ವರ ಬಂದು ಸಾಯುತ್ತೇನೋ ಎಂದು..?
ಆ ಕ್ಷಣವೇ ಓಡಿದ ಮುದುಕ..
ತನ್ನ ಮನೆ ಸೇರಿ ಬಾಗಿಲು ಎಳೆದು ಯೋಚಿಸಿದ..
"ಈ ಮರದ ಹಾಗೆ ನಾನು ಆಗಿದ್ದರೆ,
ಈ ಪ್ರಚಂಡ ಮಳೆಯಲ್ಲೂ ನಿಂತಲ್ಲೇ ನಿಂತರಬೇಕಿತ್ತು..
ನನ್ನ ಜನ್ಮವೇ ಶ್ರೇಷ್ಠ..!!"

ಇವನನ್ನೇ ನೋಡುತ್ತಿದ್ದ ಮರ, ಸುಮ್ಮನೆ ನಕ್ಕು..
"ಹಾ..!!, ಈ ಮುದುಕನಿಗೆ ಈ ಮಳೆ, ಗಾಳಿ ತಡೆಯುವ
ಶಕ್ತಿ ಇಲ್ಲ, ಹೆದರಿ ಓಡಿ ಹೋದ.."
ನಾನೇ ಅವನಿಗಿಂತ ಶಕ್ತಿವಂತ, ಈ ಜೋರು ಮಳೆ,
ಗಾಳಿಯನ್ನು ತಡೆದು ನಿಂತಿರುವೆ.. 
"ನನ್ನ ಜನ್ಮವೇ ಶ್ರೇಷ್ಠ..!!"