ಹುಳಿಮಾವು ಮತ್ತು ನಾನು

ಹುಳಿಮಾವು ಮತ್ತು ನಾನು

ಪುಸ್ತಕದ ಲೇಖಕ/ಕವಿಯ ಹೆಸರು
ಇಂದಿರಾ ಲಂಕೇಶ್‍
ಪ್ರಕಾಶಕರು
ಲಂಕೇಶ್‍ ಪ್ರಕಾಶನ
ಪುಸ್ತಕದ ಬೆಲೆ
150

ಬೇಸಿಗೆಯ ಧಗೆ.. ಹುಳಿಮಾವಿನ ಸಂಗ..

‘ನನ್ನ ಹೆಸರು ಇಂದಿರಾ.’     

ಲಂಕೇಶರ ಮಡದಿ ಇಂದಿರಾ ಲಂಕೇಶರು ಬರೆದಿರುವ “ಹುಳಿಮಾವು ಮತ್ತು ನಾನು” ಪುಸ್ತಕದ ಮೊದಲ ಸಾಲಿದು. ಮೊದಲಿಗೆ ಲಂಕೇಶ್ ಪತ್ರಿಕೆಯಲ್ಲಿ ಅಂಕಣವಾಗಿ ಪ್ರಕಟಗೊಂಡಿದ್ದು ಈ ವರ್ಷದ ಲಂಕೇಶರ ಹುಟ್ಟುಹಬ್ಬದ ಸಂದರ್ಭದಲ್ಲಿ ಪುಸ್ತಕ ರೂಪದಲ್ಲಿ ಓದುಗರ ಕೈ ಸೇರಿತು.

ಲಂಕೇಶ್ ಎಂಬ ದೈತ್ಯನೊಂದಿಗೆ ಒಡನಾಡಿದ, ಅವರ ಸಂಗಾತಿಯಾಗಿ ಕಂಡುಂಡ ಬದುಕಿನ ಏಳುಬೀಳುಗಳನ್ನು ಇಂದಿರಾ ಅವರು ತಣ್ಣನೆಯ ಧ್ವನಿಯಲ್ಲಿ ನಿರೂಪಿಸುತ್ತಾರೆ. ಲಂಕೇಶರಂತಹ ಅಸಾಧಾರಣ ಪ್ರತಿಭಾವಂತ, ವಿಕ್ಷಿಪ್ತ ಮನಸ್ಥಿತಿಯ ಕಲೆಗಾರನೊಂದಿಗೆ ಬದುಕಿನ 40 ಮಳೆಗಾಲಗಳನ್ನು ಕಳೆದ ಬಗೆಯನ್ನು ಅವರು ತೆರೆದಿಡುವ ಬಗೆ ಮನಮುಟ್ಟುವಂತಿದೆ.

ಪುಸ್ತಕವನ್ನು ಓದುತ್ತಾ ಹೋದ ಹಾಗೆ ಲಂಕೇಶರ ವ್ಯಕ್ತಿತ್ವದ ಸಂಕೀರ್ಣತೆಯೊಂದಿಗೆ ಅಂತಹ ಪ್ರತಿಭಾವಂತರ ಸಂಗಾತಿಯಾಗಿ ತಮ್ಮತನವನ್ನು ಉಳಿಸಿಕೊಳ್ಳುವ ಹೋರಾಟದ ಸ್ವರೂಪ ಯಾವ ಬಗೆಯದಿರುತ್ತದೆ ಎಂದು ಅರಿವಾಗುತ್ತದೆ. ಬದುಕು, ವ್ಯಕ್ತಿ, ದಾಂಪತ್ಯ , ಸಂಬಂಧಗಳು.. ಇವು ಯಾವುದೂ ಸಿದ್ಧಮಾದರಿಗಳಲ್ಲ ಕ್ಷಣ ಕ್ಷಣವೂ ರೂಪುಗೊಳ್ಳುತ್ತಿರುವ ಸತ್ಯಗಳು ಎಂಬುದು ಅರಿವಾಗುತ್ತದೆ.

ತಮ್ಮ ಮತ್ತು ಲಂಕೇಶರ ದಾಂಪತ್ಯವನ್ನು 3 ಘಟಕಗಳಾಗಿ ವಿವರಿಸುತ್ತಾರೆ. ಇಂದಿರಾ ಲಂಕೇಶರನ್ನು ಮದುವೆಯಾದಾಗ ಪಿಯುಸಿ ಓದುತ್ತಿದ್ದ 17ರ ಹರೆಯದ ಹುಡುಗಿ. ಮದುವೆಯ ಬಗ್ಗೆ ವಯೋಮಾನಕ್ಕೆ ತಕ್ಕಂತೆ ರೊಮ್ಯಾಂಟಿಕ್‍ ಕಲ್ಪನೆಗಳನ್ನು ಇಟ್ಟುಕೊಂಡಿದ್ದ ಹುಡುಗಿ. ಮದುವೆಯ ಆರಂಭದ 10 ವರ್ಷಗಳು ತುಂಬಾ ಸಂತೊಷದ ದಿನಗಳೆಂದು ನೆನಪಿಸಿಕೊಳ್ಳುತ್ತಾರೆ. ಆ ನಂತರದ ಹತ್ತು ವರ್ಷಗಳು ಅವರ ಬದುಕಿನ ತಿರುವಿನ ಘಟ್ಟವಾಗುತ್ತದೆ. ಮದುವೆಗೆ ಮುನ್ನ ತಾವಿಬ್ಬರು ಹಾಗಿರಬೇಕು ಹೀಗಿರಬೇಕು ಎಂದು ಬರೆದಿದ್ದ ಲಂಕೇಶರೇ ಹೆಂಡತಿ ಮಕ್ಕಳನ್ನು ತೊರೆದು ಮತ್ತೊಬ್ಬರ ಹಿಂದೆ ಹೋಗಲು ಸಿದ್ಧವಿರುವುದಾಗಿ ಬರೆದು ಹರಿದುಹಾಕಿದ್ದ ಪತ್ರವೊಂದು ಆಕಸ್ಮಿಕವಾಗಿ ಇಂದಿರಾ ಅವರ ಕೈಗೆ ಸಿಗುತ್ತದೆ. ‘ ಲಂಕೇಶರು ಬರೆದಿದ್ದ ಪತ್ರವನ್ನು ಓದಿದ ನಂತರ ನನ್ನ ಬದುಕು, ಆಶಯ, ಲೋಕ.. ಎಲ್ಲವೂ ಛಿದ್ರಗೊಂಡಿದ್ದವು.... ಬದುಕಿನ ಬಗ್ಗೆ ಎಲ್ಲಾ ಆಸಕ್ತಿಯನ್ನು ನಾನು ಕಳೆದುಕೊಂಡಿದ್ದ ಅವಧಿ ಅದು. ಅಂತಹ ಎಲ್ಲ ಚಿಂತೆಗಳ ನಡುವೆಯೂ ನಾನು ನನ್ನದೇ ಆದ ಬದುಕನ್ನು ರೂಪಿಸಿಕೊಳ್ಳಬೇಕೆಂದು, ಸ್ವತಂತ್ರವಾಗಬೇಕೆಂದು ಹಂಬಲಿಸಿ ಆ ದಿಕ್ಕಿನಲ್ಲಿ ನಾನು ಹೆಜ್ಜೆ ಇಟ್ಟ ಸಮಯವೂ ಅದೇ.” ಹೀಗೆ ತಮ್ಮದೇ ಆದ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಹೊರಟ ಆಕೆ ನಿಧಾನವಾಗಿ ಆರ್ಥಿಕ ಸ್ವಾಲಂಬನೆ ಗಳಿಸಿಕೊಳ್ಳುವುದರೊಂದಿಗೆ ತನ್ನದೊಂದು ಲೋಕ ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಮೂರನೆಯ ಘಟ್ಟ ದಾಂಪತ್ಯ ಜೀವನದ ಕೊನೆಯ ವರ್ಷಗಳು “ಈ ಅವಧಿಯಲ್ಲಿ ಲಂಕೇಶರು ಮತ್ತು ನಾನು ಪರಸ್ಪರ ಗೌರವ, ಕಾಳಜಿ ಮತ್ತು ಅಭಿಮಾನದಿಂದ ಬದುಕಿದೆವು” ಎನ್ನುತ್ತಾರೆ.

ಬೈಗುಳಗಳಿಗೆ ಸೀಮಿತವಾಗಿದ್ದ ಜಗಳಗಳು ಮಿತಿಮೀರಿದಾಗ ಮೂರು ಬಾರಿ ಲಂಕೇಶರು ತಮ್ಮನ್ನು ಹೊಡೆದ ಪ್ರಸಂಗಗಳನ್ನು ನೆನಪಿಸಿಕೊಳ್ಳುತ್ತಾರೆ. ಮೊದಲನೆಯದು ನಿದ್ದೆಯಲ್ಲಿದ್ದ ಲಂಕೇಶರನ್ನು ಎಬ್ಬಿಸಿದಾಗೊಮ್ಮೆ, ಮತ್ತೊಮ್ಮೆ ಉಗುರು ಕತ್ತರಿಸುವಾಗ ಗಾಯವಾಗಿದ್ದಕ್ಕೆ. ಎರಡನೆಯ ಬಾರಿ ಹೊಡೆದ ಸಂದರ್ಭವನ್ನು ಇಂದಿರಾ ಎಷ್ಟುಮಾರ್ಮಿಕವಾಗಿ ಹೇಳುತ್ತಾರೆಂದರೆ ‘ಅದು ನಿದ್ದೆಯಲ್ಲಿ ಆದದ್ದಲ್ಲ’ ಎನ್ನುತ್ತಾರೆ. ಮೂರನೆಯ ಬಾರಿ ಮಗ ಬಿದ್ದು ಪೆಟ್ಟು ಮಾಡಿಕೊಂಡಾಗ.. ಎಂದು ನಿರುದ್ವೇಗದಿಂದ ವಿವರಿಸುತ್ತಾರೆ. ಅದೇ ರೀತಿ ಪಲ್ಲವಿ ಚಿತ್ರಕ್ಕೆ ಪ್ರಶಸ್ತಿ ಬಂದಾಗಿನ ಸಂದರ್ಭದಲ್ಲಿ ಲಂಕೇಶರ ವರ್ತನೆಯ ಬಗ್ಗೆ ಹೇಳುತ್ತಲೇ “ ಆದರೂ ನಾನು ಕುದ್ದು ಹೋದೆ. ಲಂಕೇಶರ ಜೊತೆ ಜಗಳವಾಡಿ ಯಾವ ಪ್ರಯೋಜನವೂ ಇರಲಿಲ್ಲ. ಹೀಗೆ ನಾವಿಬ್ಬರೂ ಸ್ವಲ್ಪಸ್ವಲ್ಪ ದೂರವಾಗುತ್ತಾ ಹೋದೆವು’ ಎಂದು ಬರೆಯುತ್ತಾರೆ.

ಈ ಘಟನೆಗಳನ್ನು ಓದಿ ಇವರದು ಕೇವಲ ವಿಷಮ ದಾಂಪತ್ಯವೇ ಎಂದೆನಿಸಿದರೆ ಅದು ಪೂರಾ ನಿಜವಲ್ಲ. ಪರಸ್ಪರರ ಹುಟ್ಟುಹಬ್ಬಕ್ಕೆ ಉಡುಗೊರೆಗಳನ್ನು ಕೊಟ್ಟುಕೊಳ್ಳುತ್ತಾರೆ. ಲಂಕೇಶರಿಗೆ ಪ್ರಿಯವಾದ ಹೋಳಿಗೆಯನ್ನು ಬಡಿಸುವುದರಲ್ಲಿನ ಖುಷಿ ಮತ್ತು ಅವರ ಆರೋಗ್ಯದ ಕಾಳಜಿ ಎರಡನ್ನು ಇಂದಿರಾ ಹೇಳಿಕೊಳ್ಳುತ್ತಾರೆ. ಅದೇ ರೀತಿ ಇಂದಿರಾ ಅವರಿಗೆ ಅಪಘಾತವಾದಾಗ, ಅನಾರೋಗ್ಯದಿಂದ ಮಲಗಿದಾಗ ಲಂಕೇಶ್‍ ಸಂಕಟ ಪಡುತ್ತಾರೆ. ಪರಸ್ಪರರ ನೋವು, ಕಷ್ಟಗಳಿಗೆ ಹೆಗಲೆಣೆಯಾಗಿ ನಿಲ್ಲುತ್ತಾರೆ. ಕಾಲೇಜಿಗೆ ರಾಜಿನಾಮೆ ನೀಡಿದ ಸಂದರ್ಭದಲ್ಲಿ ಇಡೀ ಸಂಸಾರವನ್ನು ಇಂದಿರಾ ತೂಗಿಸಿಕೊಂಡು ಹೋಗುತ್ತಾರೆ. ಲಂಕೇಶರು ಕೂಡ ಹೆಂಡತಿಯ ಹಂಗಿನಲ್ಲಿ ತಾನಿದ್ದೇನೆ ಎಂತಲೋ ಅಥವ ತಾನು ಗಂಡ ಅವಳು ತನ್ನ ಸೇವೆ ಮಾಡಬೇಕಾದ್ದು ಅವಳ ಕರ್ತವ್ಯ ಎಂತಲೋ ಭಾವಿಸುವುದಿಲ್ಲ. ಬದಲಿಗೆ ‘ನಾವು ತಿನ್ನುತ್ತಿರುವ ಅನ್ನ ನನ್ನ ಹೆಂಡತಿ ದುಡಿದು ತಂದದ್ದು’ಎಂದು ಸ್ನೇಹಿತರಿಗೆ ಅಭಿಮಾನದಿಂದಲೇ ಹೇಳುತ್ತಾರೆ. ತಮ್ಮ ಮಡದಿ ಧೈರ್ಯವಂತೆ ಎಂಬ ಮೆಚ್ಚುಗೆ ಅವರಲ್ಲಿತ್ತು. ಇಂದಿರಾ ಮನೆ ಕಟ್ಟಿದಾಗ, ತೋಟ ಮಾಡಿದಾಗ ಲಂಕೇಶ ತಮಗೆ ತಿಳಿಯದೆ ಇಷ್ಟು ಮಾಡಿದಳಲ್ಲ ಎಂದು ಕೋಪಿಸಿಕೊಳ್ಳುವುದಿಲ್ಲ, ಬೇಸರಿಸಿಕೊಳ್ಳುವುದಿಲ್ಲ ಬದಲಿಗೆ ಸಂತೋಷ ಪಡುತ್ತಾರೆ. ಗಂಡನ ಈ ಸ್ವಭಾವದ ಬಗ್ಗೆ ಹೇಳುತ್ತಾ “ಹಲವೊಮ್ಮೆ ಯೋಚಿಸುತ್ತೇನೆ, ನನ್ನಂತೆ ಇತರೆ ಸಾಹಿತಿಗಳ ಹೆಂಡತಿಯರೂ ತಮ್ಮದೇ ಆದ ಪ್ರತ್ಯೇಕ ಬದುಕನ್ನು ರೂಪಿಸಲು ಪ್ರಯತ್ನಿಸಿದ್ದರೆ ಅವರ ಗಂಡಂದಿರು ಸುಮ್ಮನಿರುತ್ತದ್ದರೆ ಎಂದು. ಈ ಪ್ರಶ್ನೆ ಏಕೆಂದರೆ ಲಂಕೇಶರು ಎಂದೂ ನನ್ನನ್ನು ಪ್ರಶ್ನಿಸಲಿಲ್ಲ, ನನ್ನನ್ನು ತಡೆಯಲು ಯತ್ನಿಸಲಿಲ್ಲ. ಬದಲಾಗಿ ಸ್ತ್ರೀವಾದಿಯಾಗಿದ್ದ ಲಂಕೇಶರು ನಾನು ನನ್ನತನವನ್ನು ಕಂಡುಕೊಳ್ಳಲು ನನ್ನನ್ನು ಬಿಟ್ಟರು. ಅವರು ನನಗೆ ಎಲ್ಲ ರೀತಿಯ ಸ್ವಾತಂತ್ರ್ಯವನ್ನು ಕೊಟ್ಟರು. ಅದರ ಬಗ್ಗೆ ನನಗೆ ತುಂಬಾ ಮೆಚ್ಚುಗೆ ಇದೆ” ಎನ್ನುತ್ತಾರೆ.

ಲಂಕೇಶರೇನು ರಾಮನಂತಹ ಗಂಡನೂ ಅಲ್ಲ, ಆದರ್ಶ ಪತಿಯೂ ಅಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಅವರ ಪ್ರೇಮ ಪ್ರಕರಣಗಳ ಅರಿವಿದ್ದರೂ ಅದರಿಂದ ನೋವಾದರೂ ತಮ್ಮನ್ನು ತಾವು ಆತ್ಮಮರುಕದಲ್ಲಿ ಅದ್ದಿಕೊಳ್ಳುವುದಿಲ್ಲ. ಆ ಪ್ರೇಯಸಿಯರು ಬುದ್ದಿವಂತರು ಆಗಿರಲಿಲ್ಲ, ರೂಪಸಿಯರು ಅಲ್ಲ “ಆಕೆಯಲ್ಲಿ ಅದೇನನ್ನು ನೋಡಿ ಲಂಕೇಶರು ಆಕೆಯನ್ನು ಮೆಚ್ಚಿಕೊಂಡಿದ್ದಾರೆ? ಎಂದು ಅನ್ನಿಸುತ್ತಿತ್ತು. ಹಾಗೊಮ್ಮೆ ಅವರೇನಾದರೂ ಸುಂದರಿಯರಾಗಿದ್ದು ತುಂಬಾ ಬುದ್ದಿವಂತರಾಗಿದ್ದರೆ ನನಗೆ ನನ್ನ ಬಗ್ಗೆ ಕೀಳರಿಮೆ ಉಂಟಾಗುತ್ತಿತ್ತೇನೋ. ಆದರೆ ನನಗೆ ಹಾಗೆಂದೂ ಅನ್ನಸಲಿಲ್ಲ. ಬದಲಾಗಿ ನನ್ನ ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ನಾನು ಸಾಧಿಸಿದ್ದರ ಬಗ್ಗೆ ನನಗೆ ಹೆಮ್ಮೆಯಾಗುತ್ತಿತ್ತು” ಎಂದು ಹೇಳುತ್ತಾರೆ. ಈ ವಿಶ್ವಾಸದ ನಡುವೆಯೂ “ ನೀಲು ಕವನಗಳಂತೂ ಹೆಣ್ಣಿನ ಮನಸ್ಸು ಏನೆಲ್ಲಾ ಯೋಚಿಸುತ್ತದೆ, ಅನುಭವಿಸುತ್ತದೆ ಎಂಬುದನ್ನು ಸ್ಪಷ್ಟವಾಗಿ ಬಿಂಬಿಸುತ್ತಿದ್ದವು. ಮಹಿಳೆಯರ ಮನಸ್ಸನ್ನು ಇಷ್ಟು ಚೆನ್ನಾಗಿ ತಿಳಿದಿದ್ದ ಲಂಕೇಶರು ನನ್ನ ಮನಸ್ಸನ್ನು ಯಾಕೆ ಅರ್ಥಮಾಡಿಕೊಳ್ಳಲಿಲ್ಲ ಎಂದು ನನಗೆ ಅನ್ನಿಸುತ್ತಿತ್ತು” ಎಂದು ಬಹಳ ಸೂಕ್ಷ್ಮವಾಗಿ ತಮ್ಮ ನೋವನ್ನು ಹೇಳಿಕೊಳ್ಳುತ್ತಾರೆ.

ಮಕ್ಕಳ ವಿಷಯದಲ್ಲಿ ಕೂಡ ಲಂಕೇಶರ ವರ್ತನೆ ಸಂಕೀರ್ಣವಾದದ್ದೆ. ಮಗುವಾಗಿದ್ದಾಗ ಕವಿತಾ ಅನಾರೋಗ್ಯದಿಂದ ಬಳಲುತ್ತಿದ್ದ ಸಮಯದಲ್ಲಿ ರಾತ್ರಿಯೆಲ್ಲ ಅಳುತ್ತಿದ್ದುದ್ದನ್ನು ಸಹಿಸದೆ ಬೇರೆ ರೂಮಿನಲ್ಲಿ ಮಲಗು ಎಂದು ಇಂದಿರಾಗೆ ಹೇಳುತ್ತಾರೆ. ಅದೇ ಕವಿತಾ ‘ದೇವೀರಿ’ ಸಿನಿಮಾ ಮಾಡುವಾಗ ಒಮ್ಮೆ ಆಕಸ್ಮಿಕವಾಗಿ ಫೋನ್‍ನಲ್ಲಿ ಮಾತಾಡುವಾಗ ಫೋನ್ ಕಟ್ಟಾಗಿ ಆಕೆ ಮತ್ತೆ ಫೋನ್‍ ಮಾಡದಿದ್ದನ್ನು ನೋಡಿ ಆಕೆಗೆ ಏನು ಬೇಕಿತ್ತೋ ಎನೋ ಎಂದು ತಮ್ಮ ಕಣ್ಣಿನ ಸಮಸ್ಯೆಯನ್ನು ಲೆಕ್ಕಸದೆ ತಾವೇ ಕಾರ್‍ ಡ್ರೈವ್‍ ಮಾಡಿಕೊಂಡು ಶೂಂಟಿಂಗ್‍ ಜಾಗಕ್ಕೆ ಬರುತ್ತಾರೆ. ಮಕ್ಕಳ ಓದು, ಶಾಲೆಯ ಸಂಪೂರ್ಣ ಜವಾಬ್ದಾರಿ ಇಂದಿರಾ ಹೊತ್ತಂತೆ ಲಂಕೇಶರು ಹೊರುವುದಿಲ್ಲ. ಆದರೆ ಮಗನಿಗೆ ಏಟಾದರೆ, ಅವನ ಆರೋಗ್ಯ ಕೆಟ್ಟರೆ ಇಂದಿರಾರನ್ನೇ ದೂಷಿಸುತ್ತಾರೆ. ಅವರ ವರ್ತನೆಯನ್ನು ಮಕ್ಕಳು ಖಂಡಿಸಿದಾಗ ತಮ್ಮ ತಪ್ಪನ್ನು ಒಪ್ಪಿಕೊಂಡು ಸುಮ್ಮನಾಗುತ್ತಾರೆ. ಒಮ್ಮೆ ಅಜಿತನಿಗೆ ಹೀಗೆ ಆರೋಗ್ಯ ಕೆಟ್ಟಾಗ ಲಂಕೇಶ ಇಂದಿರಾರನ್ನು ದೂಷಿಸಿದಾಗ ಗೌರಿ ಪ್ರತಿಭಟಿಸುತ್ತಾ “ಇನ್ನು ಮುಂದೆ ನೀನು ಅಮ್ಮನಿಗೆ ಹಾಗೆಲ್ಲ ಬೈಯಕೂಡದು. ನೀನು ಮತ್ತೊಮ್ಮೆ ಅಮ್ಮನನ್ನು ಬೈದರೆ ನಾನೇ ಅಮ್ಮನನ್ನು ಲಾಯರ್‍ ಹತ್ತಿರ ಕರೆದುಕೊಂಡು ಹೋಗಿ ನಿನಗೆ ಡೈವೋರ್ಸ್‍ ಕೊಡಿಸುತ್ತೇನೆ” ಎನ್ನುತ್ತಾಳೆ. ಅದನ್ನು ಕೇಳಿ ಶಾಕ್‍ ಆದ ಲಂಕೇಶ್‍ ಎರಡು ದಿನ ಏನೂ ಮಾತನಾಡದೆ ಆಮೇಲೆ ತಾವೇ ಬಂದು ಮಗಳಿಗೆ ‘ಸಾರಿ’ ಹೇಳುತ್ತಾರೆ ಮತ್ತೆಂದೂ ಹೆಂಡತಿಯೊಂದಿಗೆ ಹಾಗೆ ನಡೆದುಕೊಳ್ಳುವುದಿಲ್ಲ. ಅದೇ ರೀತಿ ತಾವು ಮಾತ್ರ ಪರ್ಫೆಕ್ಟ್‍ ಡ್ರೈವರ್‍ ಎಂದು ತಿಳಿದಿದ್ದ ಲಂಕೇಶ ಎಲ್ಲರ ಡ್ರೈವಿಂಗ್‍ ಬಗ್ಗೆಯೂ ಕಾಮೆಂಟ್‍ ಮಾಡುತ್ತಿರುತ್ತಾರೆ. ಕವಿತಾ ಒಮ್ಮೆ ತಮ್ಮ ತಂದೆಯನ್ನು ಕರೆದೊಯ್ಯುವಾಗ ಅವರು ಹೀಗೆ ಡ್ರೈವಿಂಗ್‍ ಬಗ್ಗೆ ಕಾಮೆಂಟ್‍ ಮಾಡಲು ಶುರುಮಾಡಿದಾಗ ಆಕೆ ತಾಳ್ಮೆಗೆಟ್ಟು “ನಾನು ಡ್ರೈವ್‍ ಮಾಡುವಾಗ ಸುಮ್ಮನಿರು. ಸುಮ್ಮನಿರಕ್ಕೆ ಆಗಲ್ಲ ಅಂದರೆ ಕಾರ್‍ನಿಂದ ಇಳಿದು ಆಟೋ ತಗೊಂಡು ಹೋಗು” ಎನ್ನುತ್ತಾಳೆ. “ಆನಂತರ ಲಂಕೇಶ್‍ ನಮ್ಮ ಡ್ರೈವಿಂಗ್ ಬಗ್ಗೆ ಕಾಮೆಂಟ್‍ ಮಾಡುವುದನ್ನು ನಿಲ್ಲಿಸಿದರು” ಎಂದು ಇಂದಿರಾ ನೆನಪಿಸಿಕೊಳ್ಳುತ್ತಾರೆ. ಆದರೂ ಮಕ್ಕಳ ಕಡೆಗಿನ ತಮ್ಮ ಪ್ರೀತಿ, ಅಭಿಮಾನವನ್ನು ಅವರು ತೋರಿಸಿಕೊಳ್ಳುವ ಪರಿ ಅಪರೂಪದ್ದೇ.

ಮುಗ್ಧ ಹುಡುಗಿಯಾಗಿ ದಾಂಪತ್ಯಕ್ಕೆ ಕಾಲಿಟ್ಟ ಹೆಣ್ಣೊಬ್ಬಳು ಬದುಕಿನ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಪ್ರಬುದ್ಧೆಯಾದ ಕಥನ ‘ಹುಳಿಮಾವು ಮತ್ತು ನಾನು’. ತಮ್ಮ ತಂದೆಯ ವಿರೋಧವಿದ್ದರೂ ಲಂಕೇಶರನ್ನು ಮದುವೆಯಾದ ಇಂದಿರಾ ತಂದೆ ಹೇಳಿದ್ದಂತೆ ಅತ್ಯಂತ ಕಷ್ಟದ ಗಳಿಗೆಗಳಲ್ಲಿ ಕೂಡ ಅವರ ಬಳಿ ಸಹಾಯ ಕೇಳುವುದಿಲ್ಲ. ತಮ್ಮ ಸ್ವಸಾಮರ್ಥ್ಯದ ಆಧಾರದಿಂದಲೇ ಆರ್ಥಿಕ ಸ್ವಾಲಂಬನೆ ಗಳಿಸಿ ಸಂಸಾರವನ್ನು ಪೋಷಿಸುತ್ತಾರೆ. ಹಲವು ಘರ್ಷಣೆಗಳ ನಡುವೆಯು ದಾಂಪತ್ಯವನ್ನು ಉಳಿಸಿಕೊಳ್ಳುತ್ತಾರೆ. ಲಂಕೇಶ ಚಿತ್ರ ನಿರ್ದೇಶಕರಾಗಿ, ಪತ್ರಕರ್ತರಾಗಿ ಹೆಸರುಗಳಿಸಿದ ಮೇಲೆ ಇಂದಿರಾ ತಂದೆ ಅಳಿಯನ ಬಗ್ಗೆ ಬಹಳ ಹೆಮ್ಮೆ ಪಡುತ್ತಾರೆ. ಯಾರಿಗಾದರೂ ತಮ್ಮ ಮಗಳನ್ನು ಪರಿಚಯಿಸುವಾಗ ‘ಲಂಕೇಶ್‍ ಹೆಂಡತಿ’ ಎಂದು ಪರಿಚಯಿಸಿದ ತಂದೆಯನ್ನು ಇಂದಿರಾ ಕೇಳುತ್ತಾರೆ “ ಲಂಕೇಶರಿಗೆ ಹೆಂಡತಿ ಆಗುವುದಕ್ಕೂ ಮೊದಲು ನಾನು ನಿಮ್ಮ ಮಗಳಾಗಿದ್ದವಳು. ಆದ್ದರಿಂದ ‘ನನ್ನ ಮಗಳು ಇಂದಿರಾ’ ಅಂತ ಯಾಕೆ ನೀನು ಪರಿಚಯ ಮಾಡಿಸುವುದಿಲ್ಲ?”. ಇದು ಬರೀ ಆಕೆಗೆ ತಂದೆಯ ಮೇಲಿನ ಪ್ರೀತಿ ಮಾತ್ರ ತೋರುವುದಿಲ್ಲ. ಬದಲಿಗೆ ತನ್ನ ಅಸ್ತಿತ್ವ ಕೇವಲ ಮತ್ತೊಂದರ ನೆರಳು ಮಾತ್ರವಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ತಾನು ಕೆ.ಎಸ್‍,ಇಂದಿರಾ ಲಂಕೇಶ್‍ ಎಂದೇ ಪರಿಚಯಿಸಿಕೊಳ್ಳುವ ಈಕೆ ಆ ಮೂಲಕವೇ ತನ್ನತನದ ಛಾಪನ್ನು ಒತ್ತುತ್ತಾರೆ.

ಸೀರೆ ವ್ಯಾಪಾರ ಮಾಡುವ ಮೂಲಕ ತಮ್ಮ ಸ್ವಾಲಂಬನೆಯ ಬದುಕಿಗೊಂದು ದಾರಿ ಕಂಡುಕೊಂಡು ಯಶಸ್ವಿಯಾಗುತ್ತಾರೆ. ಅದರ ಏಳುಬೀಳುಗಳನ್ನು ಒಬ್ಬರೇ ನಿಭಾಯಿಸುತ್ತಾರೆ. ತಮ್ಮ ಈ ಸಾಧನೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರದು ಒಣಜಂಭವಲ್ಲ ಅಥವ ತೋರಿಕೆಯ ಹುಸಿಮಾತುಗಳಲ್ಲ. ತಾವು ನಡೆದು ಬಂದ ಹಾದಿಯನ್ನು ವಿವರಿಸುವಾಗ ಎಲ್ಲೂ ಆತ್ಮಪ್ರಶಂಸೆ, ಸ್ವಮರುಕ ನುಸುಳುವುದಿಲ್ಲ. ತಮ್ಮ ಕೆಲಸಗಳ ಬಗ್ಗೆ ಆತ್ಮತೃಪ್ತಿಯಿಂದ, ಖುಷಿಯಿಂದ ನೆನೆಯುತ್ತಾರೆ. ತಾವೇ ಆಗಿನ ಕಾಲಕ್ಕೆ ಬೆಂಗಳೂರಿನಲ್ಲಿ ಮೊಟ್ಟಮೊದಲಿಗೆ ಸ್ಕೂಟರ್‍ ಓಡಿಸಿದ ಮಹಿಳೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ. ತಾವು ಸ್ಕೂಟರ್‍ ಓಡಿಸುವುದನ್ನು ನೋಡಿ ತಮ್ಮ ಮಗಳು ಗೌರಿಯ ಸ್ನೇಹಿತನೊಬ್ಬ “ದಾರಕ್ಕೆ ಭಾರ ಇರುವ ಹೆಂಗಸು ಸ್ಕೂಟರ್‍ ಓಡಿಸುತ್ತಿರುವುದನ್ನು ನಾನು ಇದೇ ಫಸ್ಟ್‍ ಟೈಮ್‍ ನೋಡುತ್ತಿರುವುದು” ಎಂದು ಹೇಳಿದ್ದನ್ನು ನೆನೆಯುತ್ತಾರೆ. ಹಾಗೆ ಕಾರಿನೊಂದಿಗಿನ ತಮ್ಮ ನೆನಪುಗಳನ್ನು ಬಿಚ್ಚಿಡುತ್ತಾರೆ. ಲಂಕೇಶರು ತಮ್ಮ ಲೋಕದಲ್ಲಿ ಮುಳುಗಿದಂತೆ ಇಂದಿರಾ ತಮ್ಮದೊಂದು ಲೋಕವನ್ನು ಕಟ್ಟಿಕೊಳ್ಳುತ್ತಾ ಮಕ್ಕಳ ಭವಿಷ್ಯವನ್ನು ರೂಪಿಸುತ್ತಾ ಅದರೊಂದಿಗೆ ತಮ್ಮ ಬದುಕಿನ ಸಣ್ಣ ಸಣ್ಣ ಸಂತೋಷಗಳನ್ನು ಅನುಭವಿಸುವುದನ್ನು ಕಲಿಯುತ್ತಾ ಮಾಗುತ್ತಾರೆ. ದುರಂತದ ಹಾದಿ ಹಿಡಿಯಬಹುದಿದ್ದ ದಾಂಪತ್ಯ ಮತ್ತು ಬದುಕನ್ನು ಉಳಿಸಿಕೊಳ್ಳುತ್ತಾರೆ. ಸ್ವಾಭಿಮಾನಿ ಹೆಣ್ಣುಮಗಳೊಬ್ಬಳ ಕಥನವಿದು  ಎಂಬುದನ್ನು ಪುಸ್ತಕದ ಮೊದಲ ಸಾಲಿನ ಪರಿಚಯವೇ ಮಾಡಿಕೊಡುತ್ತದೆ. ಸಾಗರದಂತಹ ದೈತ್ಯನೊಂದಿಗಿದ್ದು ತನ್ನತನವನ್ನು ಅದರಲ್ಲಿ ಕರಗಿಸದೆ ಬೇರೆಯಾಗಿಯೇ ತನ್ನ ಅಸ್ಮಿತೆಯನ್ನು ರೂಪಿಸಿಕೊಂಡ ಈ ಕಥೆ ನಿಜಕ್ಕೂ ಅಪರೂಪದ್ದೇ... ಹಾಗೆಯೇ ಪ್ರತಿಭಾವಂತ ವ್ಯಕ್ತಿಯೊಬ್ಬನ ಶಕ್ತಿ-ದೌರ್ಬಲ್ಯಗಳನ್ನು ಒಪ್ಪಿಕೊಂಡು ಪ್ರೀತಿಸುವುದು ಎಷ್ಟು ಕಷ್ಟ ಎಂಬುದನ್ನು ನಿರೂಪಿಸುವ ಕಥೆ..