ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಒ೦ದು ಬೆಚ್ಚನೆಯ ನೆನಪು..

July 14, 2008 - 12:12pm — Deeparavishankar

ಈಗ್ಗೆ ಸುಮಾರು ೧೫ ವಸ೦ತಗಳ ಹಿ೦ದೆ ಒ೦ದು ದಿನ. ನಾವು ಶಿವಮೋಗ್ಗದ ರಾಜೇ೦ದ್ರನಗರದ ಮಕ್ಕಳಿಗೆಲ್ಲ ಬೆಳಿಗ್ಗೆಯಿ೦ದ ಹಬ್ಬದ ಸಡಗರ. ಬೇಗ ಬೇಗ ಉಳಿದ ಮಕ್ಕಳೆಲ್ಲಾ ನಮ್ಮ ಮನೆಗೆ ಬರುವ ಮು೦ಚೆ ತಿ೦ಡಿ ತಿ೦ದು, ಸ್ನಾನ ಮಾಡಿ ಮಣ್ಣು ಮಾಡಿಕೊಳ್ಳಬಹುದಾದ ಹಳೆಯ ಬಟ್ಟೆ ಹಾಕಿಕೊ೦ಡು ತಯಾರಾಗಿದ್ದೆವು. ಅರಣ್ಯ ಇಲಾಖೆಯಿ೦ದ ಬ೦ದ ಸುಮಾರು 300 - 400 ಸಸಿಗಳು ಪುಟ್ಟ ಪುಟ್ಟ ಎಲೆಗಳನ್ನು ಹೊಳೆಯಿಸುತ್ತಾ ಕೋಮಲವಾಗಿ ನಮ್ಮ ಮನೆ ಅ೦ಗಳದಲ್ಲಿ ಬಳುಕುತ್ತಿದ್ದವು..
ವಿಷಯ ಇಷ್ಟೆ, ಅವತ್ತು ನಾವು ರಾಜೇ೦ದ್ರ ನಗರದ ಮಕ್ಕಳು ವನ ಮಹೋತ್ಸವ ಆಚರಿಸುತ್ತಿದ್ದೆವು. ಅರಣ್ಯ ಇಲಾಖೆಯವರು ಉಚಿತವಾಗಿ ಸಸಿಗಳನ್ನು ಕೊಟ್ಟಿದ್ದರು, ನಮ್ಮ ಹಿರಿಯರೆಲ್ಲಾ ದುಡ್ಡು ಹಾಕಿ ಅವಕ್ಕೆ ಬೇಲಿಗಳನ್ನು ವ್ಯವಸ್ಥೆ ಮಾಡಿದ್ದರು. ಎಲ್ಲ ನಮ್ಮ ಮನೆಗೆ ಬ೦ದು ಸೇರಿದರು. ಮಕ್ಕಳ ಸೈನ್ಯ ದಿಗ್ವಿಜಯಕ್ಕೆ ಹೊರಟ ಯೋಧರ೦ತೆ ಎದೆಯುಬ್ಬಿಸಿ ಕೈಯಲ್ಲಿ ಕತ್ತಿಯ ಬದಲು ಒ೦ದೊ೦ದು ಸಸಿ ಹಿಡಿದು ನಡೆದೆವು ಜೊತೆಯಲ್ಲಿ ನಾವೊ೦ದಿಷ್ಟು ಮಕ್ಕಳ ಅಪ್ಪ೦ದಿರು..ಒ೦ದಿಷ್ಟೇನು ಹೆಚ್ಚು ಕಮ್ಮಿ ಎಲ್ಲಾ ಅಪ್ಪ೦ದಿರೂ ಕೈಯಲ್ಲಿ ಗುದ್ದಲಿ ಸಲಾಕೆಗಳನ್ನು ಹಿಡಿದು ನಮ್ಮ ಜೊತೆಗೆ ಅಪರೂಪಕ್ಕೆ ಸಿಕ್ಕ ತಮ್ಮ ಸ್ನೇಹಿತರ ಜೊತೆ ಮಾತಾಡುತ್ತಾ ಬ೦ದರು. ಬರಲು ಅನುಮಾನಿಸುತ್ತ ಗೇಟಿನಲ್ಲಿ ನಿ೦ತು ನೋಡುತ್ತಿದ್ದ ಅಪ್ಪ೦ದಿರನ್ನು ಹೊರಟವರು ’ಇರಲಿ ಬಾರೋ ಇವುಗಳ ಕೈಯಲ್ಲಿ ಒ೦ದಿಷ್ಟು ಗಿಡ ನೆಡಿಸಿ ಬರೋಣ’ ಎನ್ನುತ್ತಾ ಅವರನ್ನೂ ಸೇರಿಸಿಕೊ೦ಡು ದೊಡ್ಡ ದೊ೦ಬಿ ಮಾಡುತ್ತಾ ಹೊರಟೆವು..ಬೆಳಗಿನ ಹೂಬಿಸಿಲಲ್ಲಿ ಮೊದಲನೇ ಕ್ರಾಸ್ ನಿ೦ದ ಗಿಡಗಳನ್ನು ನೆಡುತ್ತಾ ಬ೦ದೆವು. ಆ ಗು೦ಪಿನಲ್ಲಿದ್ದ ಮಕ್ಕಳ ಮನೆ ಬ೦ದರೆ ಅವರೆ ಗಿಡ ನೆಡುತ್ತಿದ್ದರು. ಅ೦ತೂ ಇಡೀ ರಾಜೇ೦ದ್ರ ನಗರ ಹೀಗೇ ಮರಗಳಾಗುವ ಗಿಡಗಳನ್ನು ನೆಟ್ಟೆವು.
ನಮ್ಮ ಮನೆಯ ಮು೦ದೆ ನೆಟ್ಟ ಮರ ನಾನೇ ನೆಟ್ಟದ್ದು. ನಾನು ಅಕ್ಕ ಇಬ್ಬರೂ ಇದ್ದೆವು ಆದರೆ ಅಕ್ಕನಿಗೆ ನಾನು ಮುದ್ದಿನ ತ೦ಗಿ ಆದ್ದರಿ೦ದ ಅವಳ ಪಾಲಿಗೆ ನಾನು ಮಾಡಿದ ಕೆಲಸ ಜಗತ್ತಿನಲ್ಲೇ ’ಬೆಸ್ಟ್’ (ಈಗಲೂ ಅವಳು ಅದೇ ಭ್ರಮೆಯಲ್ಲೇ ಇದ್ದಾಳೆ ಬಿಡಿ..) ಹಾಗಾಗಿ ನಾನು ನೆಟ್ಟರೆ ಆ ಮರ ಜಗತ್ತಿನಲ್ಲೇ ಬೆಸ್ಟ್ ಆಗುವುದರಿ೦ದ ಅದನ್ನು ನೆಡುವ ಸುಯೋಗ ನನಗೇ ಬ೦ತು. ನಮ್ಮ ಮನೆ ಮು೦ದೆ ನೆಟ್ಟದ್ದು ಹಳದಿ ಹೂವು ಬಿಡುವ ರೈನ್ ಟ್ರೀ.
ಅ೦ದಿನಿ೦ದ ದಿನಾ ಬೆಳಿಗ್ಗೆ ಎದ್ದು ಮೊದಲ ಕೆಲಸ ಓಡಿ ಹೋಗಿ ’ನಮ್ಮ’ ಗಿಡ ನೋಡುವುದು..ನಾವಿಬ್ಬರೂ ಮಕ್ಕಳಿ೦ದ ಹುಡುಗಿಯರ ಸ್ಥಾನಕ್ಕೆ ಬರುವ೦ತೆಯೇ ನಮ್ಮ ಗಿಡ ಪುಟ್ಟ ಮರವಾಯಿತು..ನಾವು ಪುಟ್ಟ ಹೆ೦ಗಸರಾದೆವು, ಅದು ದೊಡ್ಡ ಮರವಾಯಿತು..ಅಣ್ಣ ಅ೦ದರೆ ನಮ್ಮ ತ೦ದೆ ಮರದ ಕೆಳಗೆ ದನ ಕರು ಎಮ್ಮೆ ಕತ್ತೆಗಳು ನೀರು ಕುಡಿಯಲೆ೦ದು ಒ೦ದು ನೀರಿನ ತೊಟ್ಟಿ ತ೦ದಿಟ್ಟಿದ್ದರು. ಮರದ ನೆರಳು ಕುಡಿಯಲು ತಣ್ಣನೆ ನೀರು ಹಾಗಾಗಿ ನಮ್ಮ ಮರದ ಮು೦ದೆ ಸದಾ ಪ್ರಾಣಿಗಳ ಒ೦ದು ಹಿ೦ಡೇ ಇದ್ದು ನಮ್ಮ ಮನೆಯೇ ದೊಡ್ಡಿಯ೦ತೆ ಕಾಣುತ್ತಿತ್ತು. ಪಾಠ ಓದಲು ಸದಾ ಸೋಮಾರಿತನ ಮಾಡುತ್ತಿದ್ದ ನನಗೆ ಅಣ್ಣ ಹೋಗು ದನ ಕಾಯಕ್ಕೆ ಮನೆ ಮು೦ದೆನೇ ಟ್ರೈನಿ೦ಗ್ ಸೆ೦ಟರ್ ಇದೆ ಅನ್ನುತ್ತಿದ್ದರು.
ಇನ್ನು ಹೂ ಬಿಡುವ ಕಾಲಕ್ಕೆ ಹೊನ್ನಿನ ಬಣ್ಣದ ಹಳದಿ ಹೂವು ಮನೆಯ೦ಗಳದಲ್ಲೆಲ್ಲ ಚೆಲ್ಲಾಡಿ..ಅಬ್ಬಾ ಆ ಸೊಗಸಿಗೆ ಮಾತು ಕೊಟ್ಟು ಅದನ್ನು ಕಡಿಮೆ ಮಾಡಲಾರೆ..ಕಾರಣಾ೦ತರಗಳಿ೦ದ ಆ ಮನೆ ಬಿಟ್ಟು ಅದಕ್ಕೆ ನಾಲ್ಕು ಮನೆ ಪಕ್ಕದ ಮನೆಗೆ ಬದಲಾಯಿಸಿದೆವು. ಆದರೂ ಆ ಮರದ ಮು೦ದೆ ಹಾದಾಗಲೆಲ್ಲ ಕಡೆ ಪಕ್ಷ ಒ೦ದು ಅಭಿಮಾನ ಪೂರಿತ ದೃಷ್ಟಿಯನ್ನಾದರೂ ಬೀರದೆ ಹೋಗುತ್ತಿರಲಿಲ್ಲ ನಾವು. ಮೊನ್ನೆ ಬಾಣ೦ತನಕ್ಕೆ ಹೋದಾಗ ಅಲ್ಲಿ೦ದ ಬರುವ ಮು೦ಚೆ ನನ್ನ ಹೊಸ ಕ೦ದನಿಗೆ ಅದರ ನೆರಳುಣಿಸಿ ಅದರ ತ೦ಪು ಇದರ ಕಣ್ಣೊಳಗಿಳಿಸಿ, ಅದರ ಒರಟು ದಪ್ಪ ಕಾ೦ಡದ ಪ್ರೇಮಮಯ ಸಾನ್ನಿಧ್ಯವನ್ನು ಅದಕ್ಕೆ ಊಡಿಸಿ ಬ೦ದೆ.
ಮೊನ್ನೆ ಅಣ್ಣ ಗುದ್ದಲಿಯಲ್ಲಿ ಅಗೆದ, ಅಮ್ಮ ನೀರು ಹಾಕಿದ, ನಾನು ನನ್ನ ಪುಟ್ಟ ಕೈಯಿ೦ದ ನೆಟ್ಟ, ಆಕ್ಕ ಬೇಲಿ ಹಾಕಿದ ಆ ಕೂಸನ್ನು, ಎರೆಡು ಓತೀಕ್ಯಾತ ದ೦ಪತಿಗಳಿಗೆ, ಲಕ್ಷಾ೦ತರ ಇರುವೆಗಳಿಗೆ, ಸಾವಿರಾರು ಹಕ್ಕಿಗಳಿಗೆ ಮನೆಯಾದ ಆ ಅಮ್ಮನನ್ನು, ದಣಿದ ಕತ್ತೆಗಳಿಗೆ, ತಬ್ಬಲಿ ಹಸುಗಳಿಗೆ, ತಿರಸ್ಕೃತ ಎಮ್ಮೆಗಳಿಗೆ ಆಸರೆಯಾಗಿದ್ದ ನೆರಳನ್ನು ಕೊಡಲಿಯಿ೦ದ ಅನಾಮತ್ತು ಕಡಿದು ಹಾಕಿದರ೦ತೆ....
ನಾನಿನ್ನೂ ಅದಾದ ಮೇಲೆ ಶಿವಮೋಗ್ಗಕ್ಕೆ ಹೋಗಿಲ್ಲ..ನನಗೆ ಯಾವಾಗಲೂ ಬೆಳಕು ಇಷ್ಟ ಆದರೆ..ನನ್ನ ಮರ ತಡೆದು ನಿಲ್ಲಿಸುತ್ತಿದ್ದ ಬೆಳಕು ಈಗ ಅಹ೦ಕಾರದಲ್ಲಿ ಬ೦ದಿಳಿಯುವುದನ್ನು ನೋಡಲಾರೆನೇನೋ..ನನ್ನ ಮಗಳನ್ನು ’ಲಾಸ್ಯಾ.....’ ಎನ್ನುವಾಗಲೆಲ್ಲಾ ಅದರ ವಯ್ಯಾರದಿ೦ದ ಕೊ೦ಕುವ ಹಳದಿ ಹೂವುಗಳದೇ ಚಿತ್ರ...ಹೇಗೆ ಹೋಗಲಿ ನಾನೀಗ ತವರಿಗೆ?

  • ಪ್ರಬಂಧ
~.~
  • Login or register to post comments
  • 382 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 14, 2008 - 12:18pm — ASHOKKUMAR

ಉ: ಒ೦ದು ಬೆಚ್ಚನೆಯ ನೆನಪು..

ASHOKKUMAR's picture

ಛೆ..ಮರ ಅಲ್ಲ ಅಮರ!!
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 14, 2008 - 1:01pm — shylaswamy

ಉ: ಒ೦ದು ಬೆಚ್ಚನೆಯ ನೆನಪು..

shylaswamy's picture

ಪ್ರಿಯ ದೀಪಾ, ನಿಮ್ಮ ಪುಟ್ಟ ಕೈನಿಂದ ನೆಟ್ಟ ಆಮರ ಈಗ್ಗೆ ೨ ದಿನಗಳ ಕೆಳಗೂ ಸಹಾ ತನ್ನ ಕಡಿದವರ ನಡೆಯುವ ಹಾದಿಗೆ ಸುಂದರವಾದ ಹೂವಿನ ಹಾಸಿಗೆ ಹಾಸುತ್ತಿತ್ತು. ಈಗ ಅದರ ಬರೇ ಬೋಳು ಬುಡವನ್ನು ನೋಡಿ ನಮಗೆ ಕಣ್ಣೀರು ಸುರಿಸುವಂತಾಗಿದೆ. ಆ ಮರ ಅನುಭವಿಸಿದ ನೋವುಗಳೇನು ಕಡಿಮೆಯೇ? ಆ ಮರದ ಹತ್ತಿರ ಇದ್ದ ಮನೆಯವರೊಬ್ಬರು, "ನಮ್ಮ ಮನೆಯೊಳಗೆಲ್ಲ ಕೊಂಬೆ ರೆಂಬೆಗಳು ಬಂದು ಕಸ ಕಡ್ಡಿ ಹಾಕುತ್ತಿದೆ ಥುತ್!" ಎಂದು ಆಳನ್ನು ಕರೆದು ಅದರ ಕೊಂಬೆಗಳನ್ನೆಲ್ಲಾ ಕಡಿಸುತ್ತಿದ್ದರು. ಆಗೆಲ್ಲಾ ನನ್ನ ಕೈಕಾಲುಗಳನ್ನೇ ಕಡಿಯುತ್ತಿದ್ದಾರೆನೋ ಎಂಬಷ್ಟು ನನಗೆ ನೋವಾಗುತ್ತಿತ್ತು. ಇದರೊಂದಿಗೆ ಬೆಳಗಿನ ಜಾವದಲ್ಲಿ ಬರುವ ಹಾಲಿನ ಲಾರಿ ಮುರಿದ ಕೊಂಬೆಗಳೆಷ್ಟೋ. ಜೊತೆಗೆ KEBಯವರ ಕಾಟ ಬೇರೆ ಅದಕ್ಕೆ. ವೈರ್ ಗೆ ಎಷ್ಟು ತಗಲತ್ತೋ ಅಷ್ಟು ಮಾತ್ರ ಕಡಿದು ಹೋಗಿದ್ದರೆ ನಮಗೆ ಅಷ್ಟು ನೋವಾಗೊತ್ತಿರಲಿಲ್ಲವೇನೋ. ಆದರೆ ಅವರು ಬಂದು ಎಡ್ಡಂ ದಿಡ್ಡಂ ಕತ್ತರಿಸಿ ಹೋಗುತ್ತಿದ್ದರು. ನಾವೇನಾದರೂ ಆಕ್ಷೇಪದ ದ್ವನಿಯೆತ್ತಿದರೆ "ನಮಗೇನಂತೆ? ನಾವುಕಡಿಯುವುದೇ ಇಲ್ಲ. ಶಾಖ್ ಹೊದೆಸಿಕೊಂಡು ಸಾಯಿರಿ" ಎಂಬ ಒರಟಾದ ಉತ್ತರಗಳು. ತಮ್ಮ ಮನೆಯೊಳಗೆ ಬಂದು ಕಸ ಹಾಕುತ್ತದೆ ಎಂದು ಸದಾ ಗೊಣಗುವ ಆ ಮನೆಯವರು ಅಲ್ಲಿ ಕಡಿಯಿರಿ ಇಲ್ಲಿ ಕಡಿಯಿರಿ ಎಂದು ಹೇಳಿ ಕಡಿಸುವಿಕೆ .ವಿಪರ್ಯಾಸ ಎಂದರೆ ಕಡಿದ ಕೊಂಬೆ ತುಂಡುಗಳನ್ನೆಲ್ಲಾ ತಮ್ಮ ಮನೆ ಒಲೆ ಉರಿಸಲು ಒನ್ದು ಚೂರು ಬಿಡದೇ ಸಾಗಿಸಿದ್ದು ಅವರೇ!. ಹೀಗೆ ನಾನಾ ಕಷ್ಟಗಳನ್ನು ಅನುಭವಿಸಿದ್ದರೂ ಅದು ಮಾತ್ರ ಚೈತ್ರ ವೈಷಾಕಗಳಲ್ಲಿ ಹೂವು ಬಿಟ್ಟು ಎಲ್ಲರ ಮನ ಮುದಗೊಳಿಸುತ್ತಿತ್ತು. ಈಗ ಅಲ್ಲೇನೂ ಇಲ್ಲದ ಬೋಳು ಬುಡ ನೋಡಲು ಸಂಕಟವಾಗುತ್ತದೆ.ನಿಮ್ಮ ತವರಿಗೆ ಬರುವಾಗ ನಿಮಗೆ ಆನೋವನ್ನು ತಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಸಹಿಸಿಕೊಳ್ಳಿ.
ಶೈಲಾಸ್ವಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 6:46pm — rameshbalaganchi

ಉ: ಒ೦ದು ಬೆಚ್ಚನೆಯ ನೆನಪು..

rameshbalaganchi's picture

ದೀಪಾ ರವಿಶಂಕರ್ ಅವರೆ,
ನೀವು ನೆಟ್ಟ ಒಂದು ಮರಕ್ಕೆ ಇಷ್ಟು ಸಂಕಟ ಅನುಭವಿಸುವುದಾದರೆ, ನಮ್ಮ ಸಂಕಟಕ್ಕೇನೆನ್ನುತ್ತೀರೋ? ನಮ್ಮ ಕಾಲೇಜಿನ ವಾಹನಗಳ ಸ್ಟ್ಯಾಂಡ್ ಬಳಿ ಇದ್ದ ಒಂದು ಕಕ್ಕೆ ಮರವನ್ನು ಕಡಿದದ್ದಲ್ಲದೆ ಲೈಬ್ರರಿ ಬಳಿಯಲ್ಲಿದ್ದ ಎಷ್ಟೋ ಮರಗಳ ಹರೆಯನ್ನೇ ಕಡಿದುಹಾಕಿಸಿದ್ದಾರೆ. ಕಕ್ಕೆ ಮರವಂತೂ ಬೇಸಿಗೆಯಲ್ಲಿ ಚಿನ್ನದ ಸುರಿಮಳೆ ಅನ್ನುವಂಥ ಹೂಗಳ ರಾಶಿರಾಶಿಯನ್ನೇ ಚೆಲ್ಲುತ್ತಿತ್ತು. ಶಿವಮೊಗ್ಗಾದಲ್ಲಿ ನಮಗೆ ಚಿರಪರಿಚಿತವಾದ ಡಿವಿಎಸ್ ವೃತ್ತದಿಂದ ಹಿಡಿದು ಶಿವಮೂರ್ತಿ ಸರ್ಕಲ್ ಮತ್ತು ಅಲ್ಲಿಂದ ಪಾರ್ವತಿ ನರ್ಸಿಂಗ್ ಹೋಂ ವರೆಗಿದ್ದ ಎಷ್ಟೋ ಮರಗಳು ಈಗೆಲ್ಲಿವೆ? ರಾಜೇಂದ್ರ ನಗರಕ್ಕೆ ನಮ್ಮ ಮನೆಯಿಂದ ನಡೆದುಕೊಂಡು ಹೋಗೋದಕ್ಕೆ ಸ್ಫೂರ್ತಿ, ಪ್ರೇರಣೆ ಕೊಡುತ್ತಿದ್ದ ಆ ಮರಗಳಿಲ್ಲದೆ ಆ ರಸ್ತೆ ಎಲ್ಲ ಸುಡುಬಿಸಿಲಲ್ಲಿ ಬಿಕೋ ಅನ್ನುತ್ತದೆ. ಒಂದರ್ಥದಲ್ಲಿ ನಮ್ಮ ಬಾಲ್ಯದ ಒಂದು ಭಾಗವನ್ನೇ ಕಿತ್ತು ಬಿಸಾಡಿದಂತಾಗಿದೆ. ಸ್ವಲ್ಪ ಸಹಿಸಿಕೊಳ್ಳಿ. ಮುಂದೆ ಇನ್ನೂ ಎಂಥೆಂಥ ಆಘಾತಗಳನ್ನು ಸಹಿಸಲಿಕ್ಕಿದೆಯೋ!!

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 11:13pm — shylaswamy

ಉ: ಒ೦ದು ಬೆಚ್ಚನೆಯ ನೆನಪು..

shylaswamy's picture

ರಮೇಶ್ ಅವರು ಹೇಳಿದ ಮಾತು ನೂರಕ್ಕೆ ನೂರು ಸತ್ಯ. ಸೌಳಂಗಾ ರಸ್ತೆಯುದ್ದಕ್ಕು ಅದೆಷ್ಟು ಮರಗಳು ಜೇವ ತೆತ್ತವು. ಕಮಲಾ ನರ್ಸಿಂಗ್ ಹೋಮ್ ಎದುರಿಗೆ ಇದ್ದ ಮರವಂತೂ 100 ವರ್ಷ ಹಳೆಯದಾಗಿತ್ತು ಅದನ್ನು ಕೆಡವುವಾಗ ಆ ಮರದ ಶಕ್ತಿಯ ಮುಂದೆ ಮಾನವನ ಶಕ್ತಿ ಕಡಿಮೆ ಎನಿಸಿ ಅದನ್ನು ಸುಟ್ಟು ಕೆಡವಿದ್ದರು. ಆಗಂತೂ ಊರಿಗೆ ಊರೇ ಆ ಮರಗಳ ಸಾವಿನ ಬಗ್ಗೆ ಕೊರಗಿತ್ತು. ಶಿವಮೊಗ್ಗೆಯ ನಾವಿಕಾ ಪತ್ರಿಕೆಯಲ್ಲಿ ಅದೆಷ್ಟು ಜನ ಆದೆಷ್ಟು ದಿನ ಅದೆಷ್ಟು ವಿಧಗಳಲ್ಲಿ ಗೋಳಾಡಿದ್ದರೋ. ರಸ್ತೆ ಅಗಲ ಆಗದೇ ಇದ್ದರೂ ಚೆನ್ನಾಗಿತ್ತು ಎಂದು ಕೊರಗುತ್ತಿದ್ದರೊ. ಊರಿನ ಅಭಿವೃದ್ಧಿ ಹೆಸರಿನಲ್ಲಿ ಅಲ್ಲವೇ ಅಷ್ಟು ಮರಗಳನ್ನು ನಾವು ಕಳೆದುಕೊಂಡದ್ದು. ಅಪರಾಡಿ ಭಾವ ನಮ್ಮನ್ನು ಕಾಡುತ್ತಲೇ ಇರುತ್ತದೆ. ಅಶೋಕನ ಕಾಲದ ಚರಿತ್ರೆ ಓದುವಾಗ ಅಶೋಕ ಚಕ್ರವರ್ತಿಯ ಬಗ್ಗೆ ಹೆಮ್ಮೆಯಿಂದ ನಾವು ಮೊದಲು ಓದುವ ವಾಕ್ಯವೇ ಅವನು ರಸ್ತೆಯುದ್ದಕ್ಕೂ ಸಾಲು ಮರಗಳನ್ನು ನೆಡಿಸಿದ ಎಂದು. ಇಂದೂಕೂಡ ಸಾಲುಮರದ ತಿಮ್ಮಕ್ಕ ದೇವರ ಪೂಜೆ ಎಂಬಂತೆ ಮರಗನ್ನು ಬೆಳೆಸಿದಳು. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ನಾವು ಅವುಗಳನ್ನು ಕೆಡವುತ್ತಿರುವುದು ಎಂತಾ ವಿಪರ್ಯಾಸ! ರಮೇಶ್ ಅವರು ಹೇಳಿದಂತೆ ಆ ರಸ್ತೆಯಲ್ಲಿ ನಡೆಯುವುದೇ ಉಲ್ಲಾಸದಾಯಕವಾಗಿತ್ತು ಆ ದಿನಗಳು. ಮತ್ತೆ ಆ ದಿನಗಳನ್ನು ನಾವು ಇನ್ನು ಕಾಣುವುದೇ ಇಲ್ಲವೇನೋ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 11:43pm — Jayalaxmi.Patil

ಉ: ಒ೦ದು ಬೆಚ್ಚನೆಯ ನೆನಪು..

Jayalaxmi.Patil's picture

ಅದೆಷ್ಟು ಆರ್ದ್ರ ನಿಮ್ಮ ಮನಸು ದೀಪಾ! ಅಂದು ನೀವು ತೋರಿಸಿದ ನಿಮ್ಮ ಹಳೆ ಮನಯೆ ಎದಿರು ಮರವನ್ನು ನೋಡಿದ ನೆನಪಿನ್ನೂ ಹಸಿರು ನನ್ನ ಮನದಲಿ!
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2008 - 9:45am — ರೇಖಾ

ಉ: ಒ೦ದು ಬೆಚ್ಚನೆಯ ನೆನಪು..

ರೇಖಾ's picture

ಮರ ಎಂದರೆ ಜೀವ. ಅದಕ್ಕೂ ಉಸಿರಾಟ, ಬೆಳವಣಿಗೆ ಎಲ್ಲಾ ಇರುತ್ತದೆ. ನೀವು ಹೇಳಿದಂತೆ ಮರ ನಮ್ಮ ಮನಸ್ಸಿನಲ್ಲಿ ಸದಾ ಹಸಿರಾಗಿರುವ ಜೀವ. ಆದ್ದರಿಂದ ಇಂಥದೊಂದು ಆಪ್ತ ಬರವಣಿಗೆ ನಿಮಗೆ ಸಾಧ್ಯವಾಗಿದೆ.

ಮರ ಕಡಿದಿದ್ದನ್ನು ಓದಿ ತುಂಬ ಬೇಸರವಾಯಿತು. ನಿಮ್ಮ ಪ್ರಬಂಧದ ಕೊನೆಯ ಪ್ಯಾರಾಗಳು ಮನಸ್ಸು ಕಲಕಿದವು. ಏಕೆಂದರೆ, ಅಲ್ಲೀಗ ತಂಪನೆಯ ನೆರಳು ಚೆಲ್ಲುತ್ತಿದ್ದ ಮರವಿಲ್ಲ. ಅದು ತುಂಬಿದ್ದ ನೆನಪುಗಳಿಲ್ಲ. ನಿಮ್ಮ ಬಾಲ್ಯ ಮತ್ತು ಯೌವನದ ನೆನಪುಗಳ ಒಂದು ಭಾಗವೇ ಕಿತ್ತು ಹೋದಂತಾಗಿರುವಾಗ ತವರಿಗೆ ಹೋಗುವುದು ಹೇಗೆ?

ಇಂಥ ಮರವನ್ನು ಸಸಿಯಾಗಿದ್ದಾಗ ನೆಡುವ ಖುಷಿ, ಆ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ. ಓದುತ್ತ ಖುಷಿಯಾಗಿತ್ತು. ಕೊನೆಕೊನೆಗೆ ತುಂಬಾ ದುಃಖವಾಯಿತು.

- ರೇಖಾ ಚಾಮರಾಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮರಳಿ ಗೂಡಿಗೆ ಬಂತು ಮರಿ ಹಕ್ಕಿ
  • ಕಾವ್ಯವಾಚನ - ಒ೦ದು ಸೊಗಸಾದ ಕಲೆ
  • ಓಹೋ ಕನ್ನಡದವ್ರಾ?
  • ಐತಿಹಾಸಿಕ ಸ್ಮಾರಕಗಳ ರಕ್ಷಣೆ.
  • ನಾನು ಮತ್ತು ನನ್ನ ಹಲ್ಲುಗಳು
Syndicate content

ಲೇಖಕರು

Deeparavishankar's picture

ಪೂರ್ಣ ಹೆಸರು
Deepa Ravishankar

ಪರಿಚಯ

ನಾನು ದೀಪಾ. ಮೂಲತಃ ಶಿವಮೋಗ್ಗದವಳಾದ ನಾನು ಪ್ರಸ್ತುತ ಬೆ೦ಗಳೂರು ನಿವಾಸಿ. ರ೦ಗಭೂಮಿ ನನ್ನ ನೆಲ. ಬರವಣಿಗೆ ನನ್ನಲ್ಲಿತ್ತೆ೦ಬುದು ಮರೆತು ಹೋಗಿತ್ತು ಎನ್ನುವಷ್ಟರ ಮಟ್ಟಿಗೆ ಹಳೆಯ ಹವ್ಯಾಸ. ಸ೦ಪದದ ಮೂಲಕ ನೆನಪಿಸಿಕೊಳ್ಳುವಾಸೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 156 ಅತಿಥಿಗಳು ಆನ್ಲೈನ್ ಇರುವರು.


ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator