ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ
ಈತನ ಹೆಸರು ಬಸಪ್ಪ ಫಕೀರಪ್ಪ ಮುಳಗುಂದ. ವಯಸ್ಸು ೭೫ ವರ್ಷ.
ಧಾರವಾಡದ ವಿರಕ್ತಮಠ ಓಣಿಯ ಮೂವತ್ತಡಿಯ ಪುಟ್ಟ ರಸ್ತೆಯ ಒಂದು ಪಕ್ಕದಲ್ಲಿ ಕಳೆದ ಮೂವತ್ತೆರಡು ವರ್ಷಗಳಿಂದ ಈತ ಠಿಕಾಣಿ ಹೂಡ್ಡಿದ್ದಾನೆ. ಯಾರನ್ನೂ ಏನೂ ಕೇಳುವುದಿಲ್ಲ. ಯಾರಾದರೂ ಹಣ ಅಥವಾ ಆಹಾರ ಕೊಡಲು ಬಂದರೆ ಸ್ವೀಕರಿಸುವುದಿಲ್ಲ. ರಸ್ತೆ ಪಕ್ಕ, ಚರಂಡಿ ಮೇಲೆ ದಿನಕ್ಕೆ ಎರಡು ಹೊತ್ತು ಅಡುಗೆ ಮಾಡುತ್ತಾನೆ. ಉಳಿದಂತೆ ಅವರಿವರಿಗೆ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಾನೆ. ರಾತ್ರಿಯಾಗುತ್ತಲೇ ಅಲ್ಲೇ ರಸ್ತೆ ಪಕ್ಕ ಮಲಗಿ ಬಿಡುತ್ತಾನೆ.
ಕಳೆದ ಮೂವತ್ತೆರಡು ವರ್ಷಗಳಿಂದ ಒಂದು ದಿನವೂ ವ್ಯತ್ಯಾಸವಾಗದಂತೆ ಈತ ಇಂತಹ ಬದುಕನ್ನು ನಡೆಸುತ್ತ ಬಂದಿದ್ದಾನೆ. ಒಂದು ವೇಳೆ ಈತ ಯಾರಿಂದಾದರೂ ಏನನ್ನಾದರೂ ಕೇಳ್ದಿದರೆ ಅದು ‘ವೇಳೆ ಎಷ್ಟು?’ ಎಂದು ಮಾತ್ರ.
ಏಕೆಂದರೆ ಈತ ಅಡುಗೆ ಮಾಡುವುದೇ ಎರಡು ಹೊತ್ತು. ಬೆಳಿಗ್ಗೆ ೧೦ಕ್ಕೆ ಹಾಗೂ ಸಂಜೆ ೫ಕ್ಕೆ. ಅದಕ್ಕಾಗಿ ಮಾತ್ರ ಸಮಯ ವಿಚಾರಿಸುವುದು. ಅದು ಬಿಟ್ಟರೆ ಆತನಿಗೆ ಈ ಜಗತ್ತಿನಿಂದ ಆಗಬೇಕಾಗಿರುವುದು ಏನೂ ಇಲ್ಲ.
ಸಿನಿಮಾ ಚಟ
ಬಸಪ್ಪ ಮುಳಗುಂದ ಮೊದಲು ಹೀಗಿದ್ದಿಲ್ಲ. ಅಂದರೆ ರಸ್ತೆ ಬದಿ ವಾಸವಾಗಲು ಬರುವುದಕ್ಕೆ ಮುಂಚೆ ಮಂಗಳವಾರಪೇಟೆಯ್ಲಲಿ, ವಕೀಲರೊಬ್ಬರ ಮನೆಯ ಪಕ್ಕ ಸ್ವಂತ ಮನೆ ಹೊಂದಿದ್ದ. ಮದುವೆಯಾಗಿದ್ದಿಲ್ಲ. ಪರಿಚಯದವರ ಬಟ್ಟೆ ಬರೆಗಳನ್ನು ಒಂದಾಣೆಗೆ ಎರಡರಂತೆ ಒಗೆದು, ಇಸ್ತ್ರೀ ಮಾಡುವ ಕೆಲಸ ಮಾಡುತ್ತಿದ್ದ. ಬಂದ ಹಣದಲ್ಲಿ ಊಟದ ಖರ್ಚು ತೆಗೆದರೆ ಮಿಕ್ಕಿದ್ದೆಲ್ಲ ಸಿನಿಮಾ ನೋಡಲು ಖರ್ಚಾಗುತ್ತಿತ್ತು.
ಕ್ರಮೇಣ ಸಿನಿಮಾ ವೀಕ್ಷಣೆ ಹುಚ್ಚಿನ ರೂಪಕ್ಕೆ ತಿರುಗಿತು. ಊಟದ ಪರಿವೆಯೂ ಇಲ್ಲದೇ ಸಿನಿಮಾ ನೋಡುವುದು ರೂಢಿಯಾಯಿತು. ಒಂಟಿಯಾಗ್ಗಿದ್ದ ಬಸಪ್ಪ ಸಿನಿಮಾ ವೀಕ್ಷಣೆಯಲ್ಲಿ ಮುಳುಗಿಹೋದ. ಇತ್ತ ಆತನ ಏಕೈಕ ಆಸ್ತಿಯಾಗಿದ್ದ ಮನೆ ಪಕ್ಕದಲ್ಲೇ ಇದ್ದ ವಕೀಲರ ಪಾಲಾಯಿತು.
ಬೀದಿಗೆ ಬಂದ ಬದುಕು
ಬಸಪ್ಪ ಬೀದಿಗೆ ಬಂದಿದ್ದು ಹಾಗೆ. ಮನೆ ಹೋಗಿದ್ದಕ್ಕೆ ಆತನಿಗೆ ವ್ಯಥೆ ಇರಲಿಲ್ಲ. ಆಸ್ತಿಯ ಬಗ್ಗೆ ಮೋಹವೂ ಇರಲಿಲ್ಲ. ಅದ್ಹೇಗೋ ಸಿನಿಮಾ ಚಟ ಬಿಟ್ಟು ಹೋಯಿತು. ಮೊದಲೇ ಮಾತು ಕಡಿಮೆ ಇದ್ದ ಬಸಪ್ಪ ಈಗ ಪೂರ್ತಿ ಮೌನಿಯಾದ. ತನ್ನ ಪಾಡಿಗೆ ತಾನು ರಸ್ತೆ ಬದಿ ಅಡುಗೆ ಮಾಡಿಕೊಂಡು, ಅಲ್ಲೇ ಬದುಕು ಪ್ರಾರಂಭಿಸಿದ. ಅವತ್ತಿನಿಂದ ವಿರಕ್ತಮಠದ ಪುಟ್ಟ ರಸ್ತೆ ಬದಿಯೇ ಆತನಿಗೆ ಮನೆಯಾಗಿದೆ.
ಬೆಳಿಗ್ಗೆ ಊಟವಾದ ನಂತರ ಸುತ್ತಲಿನ ಮನೆಗಳಿಗೆ ಹೋಗಿ ಕರೆಂಟ್-ನೀರಿನ ಬಿಲ್ ಕಟ್ಟುವುದು, ನೀರು ತುಂಬಿಕೊಡುವುದು ಮುಂತಾದ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಾನೆ. ಪರಿಚಯದವರ ಹಿಟ್ಟಿನ ಗಿರಣಿಗೆ ಹೋಗಿ, ಕೆಳಗೆ ಬಿದ್ದ ಹಿಟ್ಟನ್ನು ತಂದು ತನ್ನ ಅಡುಗೆ ಮಾಡಿಕೊಳ್ಳುತ್ತಾನೆ. ಅದು ಬಿಟ್ಟರೆ ತನ್ನ ಸೇವೆಗೆ ಆತ ಯಾರಿಂದಲೂ ಒಂದು ಪೈಸೆಯನ್ನೂ ಪಡೆಯುವುದಿಲ್ಲ. ಹಬ್ಬ ಇರಲಿ, ದುರ್ದಿನಗಳು ಬರಲಿ, ತನ್ನ ಮುದ್ದೆಯಂತಹ ಹಿಟ್ಟಿನ ರೊಟ್ಟಿ ಬಿಟ್ಟರೆ ಆತ ಬೇರೆ ಏನನ್ನೂ ತಿನ್ನುವುದಿಲ್ಲ.
ಇದೊಂಥರಾ ಮಾನಸಿಕ ವ್ಯಕಲತೆ. ಆದರೆ, ಬಸಪ್ಪನ ದುರಾದೃಷ್ಟಕ್ಕೆ ಯಾರೂ ಚಿಕಿತ್ಸೆ ಮಾಡಿಸಿಲ್ಲ. ಕಳೆದ ಮೂರು ದಶಕಗಳಲ್ಲಿ ಧಾರವಾಡ ಸಾಕಷ್ಟು ಬದಲಾಗಿದೆ. ಬೇಕಾದಷ್ಟು ಬೆಳೆದಿದೆ. ಇಡೀ ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧಿ ಪಡೆದ ಮಾನಸಿಕ ಆರೋಗ್ಯ ಆಸ್ಪತ್ರೆ ಧಾರವಾಡದಲ್ಲಿದ್ದರೂ ಬಸಪ್ಪನಿಗೆ ಆ ಸೇವೆ ದಕ್ಕಿಲ್ಲ. ಎಲ್ಲರ ನಿರ್ಲಕ್ಷ್ಯಕ್ಕೆ ಒಳಗಾಗಿ, ಹೀಗೇ, ರಸ್ತೆಯ ಮೇಲೆ ಉಳಿದುಕೊಂಡೇ ಆತ ತನ್ನ ಯೌವನ ಕಳೆದುಬಿಟ್ಟ.
ಎಲ್ಲದಕ್ಕೂ ಸರ್ಕಾರವನ್ನು ಬೇಡುವ ದೂರುವ ಜನರ ನಡುವೆ ಏನನ್ನೂ ಕೇಳದ, ಏನಾದರೂ ಕೊಡಲು ಬಂದರೂ ನಿರಾಕರಿಸುವ, ಸುತ್ತಲಿನವರ ನೆಮ್ಮದಿ ಹೆಚ್ಚಿಸುತ್ತಲೇ ರಸ್ತೆ ಬದಿ ತನ್ನ ನೆಮ್ಮದಿ ಕಂಡುಕೊಂಡಿರುವ ಬಸಪ್ಪ ಮುಳಗುಂದ ನಿಜಕ್ಕೂ ವಿಕ್ಷಿಪ್ತ, ಆದರೆ ಅಪರೂಪದ ವ್ಯಕ್ತಿ.
- ಚಾಮರಾಜ ಸವಡಿ

- Login or register to post comments
- 233 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ
ಚಾಮರಾಜ್ ಸರ್,
ಬಸಪ್ಪನಿಗೆ ಈಗ ಎರಡೂ ಕಣ್ಣು ಕಾಣುವುದಿಲ್ಲ. ದೇಹ ಶಕ್ತಿ ತೀರ ಕುಂದಿದೆ. ಬಹುಶ: ಬದುಕುವುದೇ ಆತನಿಗೆ ದುಸ್ತರವಾಗಿದೆ. ಇತ್ತೀಚೆಗೆ ವಿಸ್ಮೃತಿ ಬೇರೆ ಆತನಿಗೆ ಕಾಡುತ್ತಿದೆ. ೮೦ರ ಆಸುಪಾಸಿನ ವಯಸ್ಸು ಆತನದ್ದು. ಮತ್ತೊಮ್ಮೆ ಸಂಪದದಲ್ಲಿ ಬರೆಯುವ ಮೂಲಕ ಹಳೆಯ ಓದು, ಅನುಭವ ಎರಡನ್ನೂ ನನಪಿಸಿದ್ದೀರಿ. ಧಾರವಾಡದ ಬಗ್ಗೆ ನೀವು ಇಟ್ಟುಕೊಂಡಿರುವ ಈ ಪ್ರೀತಿ ಅನುಕರಣೀಯ.
ಧನ್ಯವಾದಗಳು,
ಹರ್ಷವರ್ಧನ ಶೀಲವಂತ,
ಧಾರವಾಡ
ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ
ನಿಜ ಹರ್ಷ. ನಾನು ನೋಡಿದಾಗಲೇ ಆತನಿಗೆ ಸಾಕಷ್ಟು ವಯಸ್ಸಾಗಿತ್ತು. ಸಮಾಜ ಆತನನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಅಸಮಾಧಾನ ಮತ್ತೆ ಕಾಡಿದಾಗ ಸಂಪದದಲ್ಲಿ ಬರೆದೆ.
- ಚಾಮರಾಜ ಸವಡಿ
ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ
"ಇದೊಂತರಾ ಮಾನಸಿಕ ವಿಕಲತೆ’ - ಅನ್ನುವುದು ನನಗೆ ಸರಿ ಕಾಣುವುದಿಲ್ಲ. ಯಾವುದೇ ಚಿಂತೆ ಇಲ್ಲದೆ ಬೇರೆ ರೀತಿ ಬದುಕುವವರನ್ನು ಮಾನಸಿಕ ವಿಕಲರು, ಹುಚ್ಚರು ಎಂದೆಲ್ಲಾ ಕರೆಯುವುದು ಒಂದು ಅಭ್ಯಾಸ ಅಷ್ಟೆ. ನಮಗಿಂತ ಬೇರೆಯಾಗಿದ್ದಾರೆ ಎನ್ನುವುದೇ ನಮಗೆ ಚಿಂತೆ. ಅವರು ನೆಮ್ಮದಿಯಾಗಿರಲಿ.
ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ
ನಮಗಿಂತ ಬೇರೆಯಾಗಿದ್ದಾರೆ ಎಂಬುದಕ್ಕೆ ಅದು ಒಂದು ಹೆಸರು ಮಾತ್ರವೇ ಹೊರತು, ಆ ಹೆಸರಿನಿಂದ ಅವರನ್ನು ಅವಹೇಳನ ಮಾಡಿಲ್ಲ. ವೈಯಕ್ತಿಕವಾಗಿ ನಾನು ಆ ಶಬ್ದವನ್ನು ಬಳಸಲು ಇಚ್ಧಿಸುವುದೂ ಇಲ್ಲ. ಕರೆಯುವುದೇ ಆದರೆ ಅವರನ್ನು ವಿಶಿಷ್ಠ ಚೇತನರು (ವಿಕಲ ಚೇತನರು ಎಂಬ ಬಳಕೆಯೂ ತಪ್ಪು ಎಂಬುದು ನನ್ನ ಅಭಿಪ್ರಾಯ) ಎಂದು ಕರೆಯಲು ಇಚ್ಛಿಸುತ್ತೇನೆ.
- ಚಾಮರಾಜ ಸವಡಿ
ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ
ಈತ ಬಹಳ ವಿಶೇಷ ವ್ಯಕ್ತಿತ್ವವುಳ್ಳ ಮನುಷ್ಯ ಎಂದರೆ ತಪ್ಪಾಗಲಾಗದು.
ಬಹುಶಃ ಇವರಿಗೆ ವಿದ್ಯೆ ಅನ್ನುವುದು ಇದ್ದಿದ್ದರೆ, ಇವರು ದೊಡ್ಡ ಹುದ್ದೆಯಲ್ಲಿ ಶಿಸ್ತಿನಿಂದ ಸೇವೆ ಸಲ್ಲಿಸುತ್ತಿದ್ದರು ಎಂಬುದು ಸುಳ್ಳಲ್ಲ.
-ಯುವಪ್ರೇಮಿ
ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ
ವಿಶೇಷ ವ್ಯಕ್ತಿತ್ವ ಅನ್ನುವುದಕ್ಕಿಂತ ವಿಕ್ಷಿಪ್ತ ವ್ಯಕ್ತಿತ್ವ ಅನ್ನುವುದು ಸೂಕ್ತವಾಗುತ್ತದೇನೋ. ಇಡೀ ಸಮಾಜ ಸೇರಿಕೊಂಡು ಇಂಥವರನ್ನು ನಿರ್ಲಕ್ಷ್ಯಿಸುತ್ತ ಬರುತ್ತಿದೆ. ಇದು ನಮ್ಮೆಲ್ಲರ ಜವಾಬ್ದಾರಿ.
- ಚಾಮರಾಜ ಸವಡಿ
ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ
ಜಪಾನ್ ದೇಶದ ಜನ ನಿಬಿಡ ಮುಖ್ಯ ದ್ವೀಪಗಳನ್ನು ಬಿಟ್ಟು ಇತರೆ ದ್ವೀಪವೊಂದರಲ್ಲಿ ಒಬ್ಬಾತ ಹೀಗೇ ವಾಸ ಮಾಡಿಕೊಂದಿದ್ದಾನೆ. ಅವನ ಕುರಿತ ಒಂದು ಸಾಕ್ಷ್ಯ ಚಿತ್ರದಲ್ಲಿ ಅವನನ್ನು ಸಂದರ್ಶಿಸಿದಾತ (ಒಂದೆರಡು ದಿನ ಆತನೊಡನೆ ಜೀವಿಸಿದ ನಂತರ) ಆತನಿಗೆ ವಿದಾಯ ಹೇಳುವ ಸಮಯ ಬಂದಾಗ "ಬರುತ್ತೇನೆ, ನಿಮ್ಮನ್ನು ತಿಳಿದು ಸಂತೋಷವಾಯಿತು, ಹಲವು ಜ್ಞಾನೋದಯವಾಯಿತು" ಎನ್ನುತ್ತಾ ಬಿಕ್ಕಿ ಕಣ್ಣೀರಿಡುತ್ತಾನೆ. ನನ್ನ ಕಣ್ಣುಗಳೂ ಹನಿಗೂಡಿತು.
ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ
ಇಂತಹ ವಿಕ್ಷಿಪ್ತತೆಗೆ ಸಮಾಜ ನೇರ ಹೊಣೆ ಹೊರಬೇಕು. ನಮ್ಮ ಸುತ್ತಮುತ್ತ ಇರುವವರ ಬದುಕನ್ನು ಚೆಂದಗೊಳಿಸುವ ಸಣ್ಣ ಕಾಳಜಿಯೇ ಮನುಷ್ಯನನ್ನು ಸಂಘಜೀವಿಯನ್ನಾಗಿ ಮಾಡಿದ್ದು. ಅದನ್ನು ಮತ್ತೆ ಮತ್ತೆ ಅನುಸರಿಸಬೇಕಿದೆ.
- ಚಾಮರಾಜ ಸವಡಿ