ಕಾರಂತರ ಜೀವಂತ ಪಾತ್ರಗಳು ೮ (೧)
ಮನುಷ್ಯ ಜೀವಿ ನಿರ್ಜೀವ ವಸ್ತುವಲ್ಲ ; ಅವನು ಜೀವಂತ ಪ್ರಾಣಿ . ಹಾಗೆಂದು ಅವನು ಬರಿಯ ಪ್ರಾಣಿಯೂ ಅಲ್ಲ . ಆಲೋಚಿಸುವ ಮನಸ್ಸುಳ್ಳ ಮನೋಜೀವಿ .ಅವನ ಮನಸ್ಸು ಇರುವ ಬಗ್ಗೆ ಅವನಿಗೆ ಅರಿವಿದೆ . ಆದರೆ ಅವನಲ್ಲೇ ಇರುವ ಮನಸ್ಸಿನ ಸರಿಯಾದ ಪರಿಚಯ ಅವನಿಗಿಲ್ಲ . ಹಾಗೆಯೇ ಅವನು ಸಮಾಜ ಜೀವಿ ,ಅವನಿರುವ ಸಮಾಜದೊಡನೆ ಅವನು ನಿಕಟವಾಗಿಯೇ ಬದುಕಬೇಕು .ಆ ಸಮಾಜದ ಋಣವೆಂಬುದು ಅವನ ಮೇಲೆ ಇದ್ದೇ ಇದೆ . ಹಾಗೆಯೇ ಬಾಲ್ಯದಿಂದಲೂ ಅವನನ್ನು ಪ್ರೀತಿಸಿ ಪೋಷಿಸಿದ ಕುಟುಂಬ , ಬಂಧುಗಳೂ ಸಹ ಇದ್ದೇ ಇದ್ದಾರೆ . ಅವರ ಋಣವೂ ಸಹ ಸಾಮಾನ್ಯವಾದುದಲ್ಲ .ಹೀಗೆ ಋಣದಲ್ಲಿ ಬಾಳುತ್ತಿರುವ ಮನುಷ್ಯ , ಆಋಣವನ್ನು ತೀರಿಸಲು ಯಾವ ರೀತಿಯ ಪ್ರಯತ್ನವನ್ನು ಮಾಡಬಹುದು ? ಇವೆಲ್ಲುವುಗಳಿಗಿಂತ ತಾನು ಪಡೆದುದಕ್ಕಿಂತ ಹೆಚ್ಚು ಋಣ ಸಂದಾಯ ಮಾಡಲು ಪ್ರಯತ್ನಿಸುವವನು ; ಅವನ ಜೀವನವೇ ಉತ್ತಮವಾದುದು ,ಎನ್ನುವ ತಾತ್ವಿಕ ತಳಹದಿಯ ಮೇಲೆ ಕಾರಂತರ ’ಅಳಿದಮೇಲೆ’ ಕಾದಂಬರಿ ರಚಿತವಾಗಿದೆ .
ಭೌತ ರಸಾಯನಿಕ ದೇಹ ಜೀವಿಯಾದ ಮನುಷ್ಯನನ್ನು ನಿಯಂತ್ರಿಸುವ ಶಕ್ತಿಗಳು ಹಲವಾರು .ಈ ವಿಶ್ವದಲ್ಲಿ ಜನ್ಮ ತಳೆದಿರುವ ಮನುಷ್ಯನ ಜೀವನವನ್ನು ರೂಪಿಸುವಲ್ಲಿ ವಿಶ್ವ ಶಕ್ತಿಗಳ ಕೈವಾಡವಂತೂ ಇದ್ದೇ ಇದೆ .ಅನುಭವಕ್ಕೆ ಬರುವ ಗಾಳಿ, ನೀರು , ಬೆಂಕಿ ,ಘನ ಪದಾರ್ಥಗಳು ಮತ್ತು ಪಸರಿಸಲು ಅವಕಾಶಗಳಲ್ಲದೆ ,ಅನುಭವಾತೀತವಾದ ಅನೇಕ ಸೂಕ್ಷ್ಮ ಶಕ್ತಿಗಳು ಮನುಷ್ಯನ ಬದುಕನ್ನು ನಿಯಂತ್ರಿಸುತ್ತವೆ .ಅವನಲ್ಲೇ ರಚನೆಗೊಂಡಿರುವ ಕೌತುಕಮಯವಾದ ಅನೇಕ ರಸ ವಿಶೇಷಗಳು ,ಜೀವಕಣಗಳು , ರಕ್ತನಾಳಗಳು ,ನರ ಸಮೂಹಗಳು ಇವೆಲ್ಲವುಗಳ ಪ್ರಭಾವ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಭಾವಶಾಲಿ ಪಾತ್ರಗಳನ್ನು ನಿರ್ವಹಿಸುತ್ತವೆ .ಅದರಲ್ಲೂ ಗಂಡು ಹೆಣ್ಣುಗಳ ಸಂಕೀರ್ಣ ವ್ಯವಸ್ಥೆಯನ್ನು ಅಳವಡಿಸಿರುವ ಈ ಮಹಾನ್ ಪ್ರಕೃತಿಯು , ಅಪ್ರತಿಮ ಕಲಾವಿದನ ರೀತಿಯಲ್ಲಿ , ಮಾನವ ಜೀವನ ಕ್ರಮವನ್ನು ಚಿತ್ತಾರಗೊಳಿಸಿದೆ . ಮನುಷ್ಯನ ಬದುಕಿನ ಮುಖ್ಯ ಸಂಗತಿಗಳಾದ ಪ್ರೇಮ , ಕಾಮಗಳು , ವಿವಾಹ , ವಿವಾಹೇತರ ಸಮಸ್ಯೆಗಳು ಬದುಕಿನ ಸುತ್ತ ಹೆಣೆದುಕೊಳ್ಳುವ ಕುಟುಂಬ , ಬಂಧುಗಳು , ಸಮಾಜ ಇವೆಲ್ಲವುಗಳ ಬಗ್ಗೆ ಮನುಷ್ಯನಾದವನಿಗೆ ಇರಬೇಕಾದ ಜವಾಬ್ದಾರಿಗಳು , ಕರ್ತವ್ಯಗಳು . ಅವನಿಂದ ಇತರರು , ಇತರರಿಂದ ಅವನು ನಿರೀಕ್ಷಿಸಬಹುದಾದ ಸಹಜವಾದ ಆಸರೆ ,ನೆಮ್ಮದಿ ಇವೆಲ್ಲವುಗಳ ಸಮಗ್ರ ವಿಶ್ಲೇಷಣೆಯ ದೃಷ್ಟ್ಯಿಂದಲೂ ’ಅಳಿದ ಮೇಲೆ’ ಒಂದುಯಶಸ್ವೀ ಪ್ರಯೋಗ .
ಜಗತ್ತಿನಲ್ಲಿ ಹೆಣ್ಣು ಗಂಡುಗಳು ಜೊತೆಗೂಡಿ ಬಾಳುವಿಕೆ ಎಂಬುದು ವಿಚಿತ್ರವಾದ ಕಲಸುಮೇಲೋಗರವಾದರೂ , ಅನಿವಾರ್ಯವಾದ ಬೆಂಬಿಡದ ಬಂಧನವೂ ಹೌದು . ಹೆಣ್ಣಿಗೆ ಹೆಚ್ಚು ಸ್ವಾತಂತ್ರ್ಯ ಬೇಕೆ ? ಅಥವಾ ಗಂಡಿಗೆ ಅದು ಇರಬೇಕೇ? ಎನ್ನುವ ವಾದ ವಿವಾದಗಳೇನೇ ಇರಲಿ , ಅವುಗಳು ಕೂಡಿ ಬಾಳಬೇಕಾದ ವಿಧಿಯಿಂದ ಮುಕ್ತವಾಗುವುದಂತೂ ಸಾಧ್ಯವಿಲ್ಲ .ಕೂಡಿ ಬಾಳುವ ವಿಭಿನ್ನ ಮನಃಸ್ಥಿತಿಯ , ವಿಭಿನ್ನ ಜೈವಿಕ ಪರಿಸ್ಥಿತಿಯ , ಎರಡು ದೇಹಗಳು ಭಾವನಾತ್ಮಕ ಜಗತ್ತಿನ ಸುಳಿಯಲ್ಲಿ ಸಿಲುಕಿ ಹೇಗೆ ಬಾಳುತ್ತವೆ ? ಎಂಬುದು ಅವುಗಳ ಬಾಳಿನ ಸಫಲತೆ ವಿಫಲತೆಗಳಿಗೆ ಹಿಡಿದ ಕನ್ನಡಿಯಾಗುತ್ತವೆ .
ಸಮಾಜದ ಕಟ್ಟಳೆಗ ಪರಿಧಿಯಲ್ಲಿ ,ಸಮಾಜದ ಇಷ್ಟದಂತೆ ಬಾಳುವ ಮಹಿಳೆಯರಿಗೆ ಸಿಗುವ ಸ್ಥಾನಮಾನಗಳು, ಕಟ್ಟಳೆಗಳ ಹೊರ ಪರಿಧಿಯಲ್ಲಿ ಬಾಳಬೇಕಾದ ಅನಿವಾರ್ಯತೆ ಬಂದವರ ಪಾಲಿಗೆ ಸಿಕ್ಕುವುದಿಲ್ಲ . ಒಬ್ಬ ವ್ಯಕ್ತಿಗೆ ಸಮಾಜದ ದೃಷ್ಟಿಯಲ್ಲಿ ಕೈಹಿಡಿದವಳು ಪ್ರತಿಕೂಲೆಯಾಗಿದ್ದರೂ , ಅವಳ ಹಕ್ಕುಗಳನ್ನು ಮನ್ನಿಸುವ ಸಮಾಜ , ಅದೇ ವ್ಯಕ್ತಿಗೆ ಅನುಕೂಲೆಯೂ , ಸ್ಪಂದನ ಶೀಲೆಯೂ ಆಗಿದ್ದರೂ , ವಿವಾಹ ಬಾಹಿರೆಯ ಅಂತಸ್ತು ಯಾವ ಕಾರಣಕ್ಕೂ ವಿವಾಹಿತಳ ಜೊತೆ ತೂಗಲಾರದು .ಇದು ಸಾಮಾಜಿಕ ಸುವ್ಯವಸ್ಥೆಯ ದೃಷ್ಟಿಯಿಂದ ಸರಿಯಾದ ಕ್ರಮವಾಗಿರಬಹುದು , ಆದರೆ ವ್ಯಕ್ತಿಗತ ಜೀವನದ ಸನ್ನಿವೇಶಗಳಲ್ಲಿಪ್ರತಿ ವ್ಯಕ್ತಿಯ ಅನುಭವ ಬೇರೊಂದೇ ಆಗಿರುವುದು ಸಹ ಅಸಹಜವಲ್ಲ .
ಎರಡು ಜೀವಗಳನ್ನು ಭೌತಿಕವಾಗಿ ಬೆಸೆಯುವ ವಿವಾಹದಂತಹ ಸಂಸ್ಥೆಯು , ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ಎಷ್ಟೇ ಅನಿವಾರ್ಯವಾದರೂ , ಎರಡು ಜೀವಗಳು ಮಾನಸಿಕವಾಗಿ ಒಂದುಗೂಡುವ ಭಾವನಾತ್ಮಕ ಪ್ರಕ್ರಿಯೆಯೆಂಬುದು ತೀರಾ ವೈಯುಕ್ತಿಕವಾದ ವಿಚಾರ . ವಿಭಿನ್ನ ಪರಿಸ್ಥಿತಿಗಳಲ್ಲಿ ಭಿನ್ನ ಸಂಸ್ಕಾರಗಳನ್ನು ರೂಢಿಗತ ಮಾಡಿಕೊಂಡಿರುವ ಪ್ರತ್ಯೇಕ ಜೀವಗಳು ಕೇವಲ ಜೈವಿಕ ಒತ್ತಡಗಳ ಕಾರಣವಾಗಿ , ಒಂದುಗೂಡಿ ಬಾಳಬೇಕಾದ ಅನಿವಾರ್ಯತೆಗಳಿಗೆ ಸಿಲುಕಿದರೂ , ಎರಡೂ ಸಂಸ್ಕಾರಗಳನ್ನು ಬೆಸೆದು , ಒಂದೇ ಜೀವವಾಗಿ ಬಾಳುವ ಕಲೆಯೇ ಮಾನವನ ಕೌಟುಂಬಿಕ ಜೀವನದ ತಳಹದಿಯಾಗಿ ಬೆಳೆದು ಬಂದಿರುವ ಕೌಶಲ . ಈ ಕುಶಲತೆ ಗಂಡಿಗಿಂತಲೂ ಹೆಣ್ಣಿಗೆ ಹೆಚ್ಚು ಸಹಜ ಮತ್ತು ಸ್ವಾಭಾವಿಕ . ಆದುದರಿಂದಲೇ ಅವಳ ಭಾವ ಜೀವನದ ಹರಹು ವಿಸ್ತಾರವಾದುದು .ದುರದೃಷ್ಟವಶಾತ್ ಈ ರೀತಿಯ ಕುಶಲತೆ ಯಾವುದೇ ಹೆಣ್ಣಿನಲ್ಲೇ ಆಗಲಿ ಸಂಕುಚಿತವಾಗಿದ್ದರೆ , ಅಂಥಲ್ಲಿ ಗಂಡಿನ ಪಾಡು ( ಸೂಕ್ಷ್ಮಜೀವಿಯಾಗಿದ್ದರಂತೂ ) ಯಾವ ರೀತಿಯ ಬದುಕಾಗಿ ಪರಿವರ್ತಿತವಾಗುತ್ತದೆ ಎಂಬುದೇ , ಕಾರಂತರು ಚಿತ್ರಿಸಿರುವ ’ಅಳಿದಮೇಲೆ’ ಕಾದಂಬರಿಯ ಯಶವಂತರ ಪಾತ್ರದ ಚಿತ್ರಣ .
ಹೆಣ್ಣು ಸೂಕ್ಷ್ಮಳೂ , ಭಾವ ಜೀವಿಯೂ ಆಗದಿದ್ದರೆ , ಪಕ್ವ ಮನಸ್ಸಿನ ಗಂಡು ಪಡಬೇಕಾದ ಪರಿಪಾಟಲುಗಳಬಗ್ಗೆ ’ಅಳಿದ ಮೇಲೆ’ ಕಾದಂಬರಿಯಲ್ಲಿ ಕಾರಂತರು ಯಶಸ್ವಿಯಾಗಿ ದಾಖಲಿಸುತ್ತಾ ಹೋಗುತ್ತಾರೆ . ಯಶವಂತರ ಮಡದಿ ಕಮಲಮ್ಮ ಯಶವಂತರ ಮನಸ್ಸನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲಳಾಗುತ್ತಾಳೆ ; ಹೋಗಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡಲು ತೊಡಗುವುದಿಲ್ಲ . ಯಶವಂತರಂತಹ ಸೂಕ್ಷ್ಮವಾದ ವಿಚಾರಶೀಲ ಮನಸ್ಸಿಗೆ , ತೀರಾ ವಿರುದ್ದವಾದ ಅಸೂಕ್ಷ್ಮ ಮತ್ತು ಭಾವರಹಿತ ತೋರಿಕೆಯ ಬದುಕಿನ ಶೈಲಿ ಆಕೆಯದು . ಯಶವಂತರ ಕಲಾವಿದನ ಮನಃಸ್ಥಿತಿಯ ನವಿರಾದ ಚಿತ್ತಾರದ ಮನಸ್ಸನ್ನು ಸಂತವಿಸುವಲ್ಲಿ ಅವಳು ತುಂಬಾ ಎಡವಿ ಬೀಳುತ್ತಾಳೆ .ಅಥವಾ ಅಂತಹ ಮನಸ್ಸಿನ ವಿರುದ್ದವೇ ತಿರುಗಿ ಬೀಳುತ್ತಾಳೆ . ಇಲ್ಲಿ ಚದುರಿದ ಚಿತ್ತದ ಸಾಂತ್ವನಕ್ಕೆ ಒಬ್ಬ ಸರಸಿಯೇ ಬೇಕಾಗುತ್ತಾಳೆ .

- Login or register to post comments
- 107 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS: