ಸುದ್ದಿಸೂಳೆಯ ಬೆನ್ನತ್ತಿ ಹೊರಟಿರುವ ಮಾಧ್ಯಮಗಳು!(ಭಾಗ 2)
ಮಾಧ್ಯಮಗಳು ಈ ರೀತಿ ವರ್ತಿಸಿದ ಪ್ರಕರಣ ಇದೇ ಮೊದಲೇನಲ್ಲ. ಈ ಹಿಂದೆ ಬಹುಚರ್ಚಿತ ನಿತಾರಿ ಪ್ರಕರಣ, ಜೆಸ್ಸಿಕಾ ಲಾಲ್ ಪ್ರಕರಣದಲ್ಲೂ ಇದೇ ರೀತಿಯಾಗಿಯೇ ನಡೆದುಕೊಂಡಿದ್ದವು ಎಂದು ಹೇಳುತ್ತ ಅವುಗಳ “ಸಚ್ಚಾರಿತ್ರ್ಯ ಚರಿತ್ರೆ”ಯನ್ನು ನೆನಪಿಸಿಕೊಳ್ಳುವ “ಪುಣ್ಯ” ಕಾರ್ಯವನ್ನು ಮಾಡಬಹುದು.
ನಿಜ ಹೇಳಬೇಕೆಂದರೆ, ಸಿಬಿಐ ತಲ್ವಾರ್ ದಂಪತಿಗಳನ್ನು ದೋಷಮುಕ್ತರಾಗಿಸಿದ್ದರಿಂದ ಹೆಚ್ಚಿನ ನಷ್ಟವಾದದ್ದು ಮಾಧ್ಯಮಗಳಿಗೇ. ಹೇಗೆಂದರೆ, ಅಲ್ಲಿಯವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನಾ ತಿರುವುಗಳನ್ನು ವಿಶೇಷ ವರದಿಗಳ ಮೂಲಕ “ಮೊತ್ತ ಮೊದಲ ಬಾರಿಗೆ” ಪ್ರಕಟಿಸುವುದರ ಮೂಲಕ ಹದಿಮೂರು ವರ್ಷದ ಆರುಷಿ ತನ್ನ ತಂದೆ ರಾಜೇಶ್ ತಲ್ವಾರ್ ಹೊಂದಿದ್ದ ಅನೈತಿಕ ಸಂಬಂಧಕ್ಕೆ ಸಾಕ್ಷಿಯಾಗಿದ್ದರಿಂದಾಗಿ ತನ್ನ ತಂದೆಯಿಂದಲೇ ಕೊಲ್ಲಲ್ಪಟ್ಟಳು ಎಂಬ “ವಸ್ತುನಿಷ್ಟ, ಸತ್ಯಸ್ಪಷ್ಟ ವರದಿ”ಯನ್ನು ಒಂದು ಕಡೆ ನೀಡಿದ್ದಲ್ಲದೆ, ಮತ್ತೆ ಕೆಲವು ವಾಹಿನಿಗಳು, ಪತ್ರಿಕೆಗಳು ಆರುಷಿ ನಡತೆಗೆಟ್ಟವಳು, ಆಕೆಗೆ ತನ್ನ ಮನೆಯ ಜವಾನನೊಂದಿಗಿದ್ದ ಅನೈತಿಕ ಸಂಬಂಧವೇ ಈ ಕೊಲೆಗೆ ಮುಖ್ಯ ಕಾರಣ ಎಂಬ “ತನಿಖಾ ವರದಿ”ಗಳನ್ನು ಸಹ ನೀಡಿದ್ದವು. ಇದಕ್ಕೆ ಪೂರಕವಾಗಿ ಪೊಲೀಸ್ ತನಿಖೆ ನಿಂತದ್ದು “ಬೇಲಿಯೇ ಎದ್ದು ಹೊಲ ಮೇದಂತೆ” ಎನ್ನುವ ಗಾದೆಯನ್ನು ಸತ್ಯವಾಗಿಸಿದ್ದರ ಪರಮಾವಧಿಯ ನಿದರ್ಶನವಾಗಿ ನಿಂತಿತ್ತು.
ಕಾನೂನು, ಸಮಾಜ ಹಾಗೂ ಮಾಧ್ಯಮಗಳ ನಡುವಿನ ಸಂಬಂಧವನ್ನು ವಿವರಿಸುವುದು ವಿವರಿಸಲು ಸಾಧ್ಯವಾಗದಷ್ಟು ಸಂಕೀರ್ಣವಾದುದು. ಇಂದಿನ ಕಾಲಘಟ್ಟದಲ್ಲಿ ಒಂದರ ಪ್ರಭಾವ ಮತ್ತೊಂದರ ಮೇಲೆ ಗಾಢವಾದ ಪರಿಣಾಮವನ್ನೇ ಬೀರುವ ಮಟ್ಟಕ್ಕೆ ಬೆಳೆದು ನಿಂತಿದೆ. ಒಂದೆಡೆ ಮುಕ್ತವಿಚಾರಣೆಗಳ ಅವಶ್ಯಕತೆ ಮಾಧ್ಯಮಗಳಿಗೆ ಅನಿರ್ಬಂಧಿತ ಪ್ರವೇಶವನ್ನು ನೀಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಕಾರಣ, ನ್ಯಾಯ ದೊರಕಬೇಕೆನ್ನುವುದು ನ್ಯಾಯಾಂಗ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿರುವಂತೆಯೇ ಹಾಗೆ ನ್ಯಾಯ ಹೇಗೆ ದೊರಕುತ್ತಿದೆ ಎನ್ನುವುದು ಕೂಡ ಈಗ ಜನಸಾಮಾನ್ಯರ ಕಣ್ಣಿಗೆ ಕಾಣಿಸಿಕೊಳ್ಳಬೇಕಿದೆ. ಅದಕ್ಕಾಗಿಯೇ ನಮ್ಮ ಪ್ರಜಾಪ್ರತಿನಿಧಿಗಳು ಹೇಗೆ ನಮ್ಮನ್ನು ಪ್ರತಿನಿಧಿಸುತ್ತಿದ್ದಾರೆಂಬುದು ದೂರದರ್ಶನದ ಮೂಲಕ ಬಿತ್ತರಗೊಳ್ಳುತ್ತಿರುವಂತೆಯೇ ನಮ್ಮ ನ್ಯಾಯಾಂಗ ವ್ಯವಸ್ಥೆ ಎಷ್ಟು ಪಾರದರ್ಶಕವಾಗಿ ತನ್ನ ಕರ್ತವ್ಯ ನಿರ್ವಹಿಸುತ್ತಿದೆ ಎಂಬುದನ್ನು ಕೂಡ ನಾವು ಕಾಣುವಂತಹ ಕಾಲ ಸನ್ನಿಹಿತವಾಗಿದೆ ಎಂದು ನಾವು ಭಾವಿಸಬಹುದು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರವನ್ನು ದೂರದೃಷ್ಟಿಯಲ್ಲಿಟ್ಟುಕೊಂಡೇ ನಮ್ಮ ಸಂವಿಧಾನ ರಚನಾಕಾರರು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ನ್ಯಾಯಿಕ ಕಾರ್ಯಕಲಾಪಗಳನ್ನು ವರದಿಗೊಳಿಸುವುದಕ್ಕೆ ಮಾನ್ಯ ಮಾಡಿವೆ. ಈ ಒಂದು ನಿಯಮ ಎಷ್ಟು ಸೂಕ್ಷ್ಮ ಹಾಗೂ ಸಂಕೀರ್ಣವಾದುದೆಂದರೆ, ಸ್ವಲ್ಪ ಆಯತಪ್ಪಿದರೂ ಬಹುದೊಡ್ಡ ಪ್ರಮಾದವೇ ಸಂಭವಿಸುವ ಸಾಧ್ಯತೆಗಳು ಹೆಚ್ಚು. ಮಾಧ್ಯಮ ವಿಚಾರಣೆಯನ್ನು ಎದುರಿಸುತ್ತಿರುವ ಜೀವನ ಮರಣಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಯಾವುದೇ ತೀರ್ಪನ್ನು ನೀಡುವ ಹಕ್ಕನ್ನು ಹೊಂದಿರುವುದಿಲ್ಲ. ಆ ಕಾರಣಕ್ಕಾಗಿಯೇ, ಯಾವುದೇ ನ್ಯಾಯಾಂಗ ಪ್ರಕರಣ ನಡೆಯುತ್ತಿರುವ ಸಂದರ್ಭದಲ್ಲಿ ಆ ಪ್ರಕರಣದ ವರದಿಯನ್ನು ಮಾಡುವ ಹಕ್ಕು ಮಾತ್ರ ಮಾಧ್ಯಮದ್ದಾಗಿರುತ್ತದೇ ಹೊರತು ತಾನು ಯಾವುದೇ ಟೀಕೆಯನ್ನಾಗಲಿ, ಹೇಳಿಕೆಗಳನ್ನಾಗಲಿ ನೀಡುವಂತಿರುವುದಿಲ್ಲ. ಯಾಕೆಂದರೆ, ಅಂತಹ ಪ್ರಕ್ರಿಯೆಯಲ್ಲಿ ವಿಚಾರಣೆಗೊಳಪಡುವ ವ್ಯಕ್ತಿಯ ಚಾರಿತ್ರ್ಯವಧೆಯಾಗುವಂತಹ ಸಾಧ್ಯತೆಗಳು ಹೆಚ್ಚಾಗಿದ್ದು, ಇದು ನ್ಯಾಯಾಂಗ ವ್ಯವಸ್ಥೆಗೆ ಕಳಂಕ ತರುವಂತಹ ನಡೆಯಾಗುತ್ತದೆ. ಆದ್ದರಿಂದಲೇ ಮಾಧ್ಯಮಗಳು ವರದಿಗಾರಿಕೆಯ ಪರಿಧಿಯನ್ನು ದಾಟಿ ಅಪರಾಧದ ಕತೆಯನ್ನು ಹೆಣೆಯುವ ಗೋಜಿಗೆ ಹೋಗದೆ ಇದ್ದಲ್ಲಿ ಔಚಿತ್ಯಪೂರ್ಣವಾಗಿರುತ್ತದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತ ವಿಚಾರಣೆ ಎಷ್ಟು ಮುಖ್ಯವಾದುದೆಂದರೆ, ಅಮೆರಿಕಾದಂತಹ ದೇಶಗಳಲ್ಲಿ ವಿಚಾರಣೆ ನಡೆಯುವಂತಹ ಸಂದರ್ಭಗಳಲ್ಲಿ ಮಾಧ್ಯಮಗಳಿಗೆ ಯಾವುದೇ ಹೇಳಿಕೆಯನ್ನು ನೀಡುವುದಿರಲಿ, ಪ್ರಕರಣ ಇತ್ಯರ್ಥವಾಗುವವರೆಗೆ ಜ್ಯೂರಿಯ ಸದಸ್ಯರು ಹೊರಹೋಗುವುದನ್ನು ಕೂಡ ನಿಷೇಧಿಸಲಾಗಿದೆ.
ನಮ್ಮ ದೇಶ ಮೂಲಭೂತ ಹಕ್ಕುಗಳ ಮಾದರಿಯನ್ನು ಅಮೆರಿಕಾ ಸಂವಿಧಾನದಿಂದ ಎರವಲು ಪಡೆದಿದೆಯಾದರೂ, ಅಲ್ಲಿಯಂತೆ ಇಲ್ಲಿ ಜ್ಯೂರಿ ವಿಚಾರಣಾ ವ್ಯವಸ್ಥೆಯಿಲ್ಲ. ಆದರೂ, ಮಾಧ್ಯಮಗಳು ತಮ್ಮ ವರದಿಗಾರಿಕೆಯ ಮಿತಿಯನ್ನು ದಾಟಿರುವಂತಹ ಉಳಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಧೀಶರು ಮಾಧ್ಯಮಗಳ ವ್ಯಾಪ್ತಿಗೆ ಪ್ರತಿದಿನವೂ ತೆರೆದುಕೊಂಡೇ ಇದ್ದಾರೆ. ನಮ್ಮ ನ್ಯಾಯಾಧೀಶರು ತಾವುಗಳು ಮಾಧ್ಯಮದಿಂದ ಯಾವ ರೀತಿಯ ಪ್ರಭಾವಕ್ಕೂ ಒಳಗಾಗುವುದಿಲ್ಲ ಎಂದು ಹೇಳಬಹುದಾದರೂ, ಮಾಧ್ಯಮಗಳ ವರದಿಗಳು ನಕಾರಾತ್ಮಕವಾಗಿ ಸಾರ್ವಜನಿಕ ಅಭಿಪ್ರಾಯವನ್ನು ಬೆಳೆಸಿ ಕಡೆಗೆ ಪ್ರಕರಣದ ಫಲಿತಾಂಶದ ಮೇಲೇ ಪ್ರಭಾವ ಬೀರುವಷ್ಟು ಮಟ್ಟಿಗೆ ಹೋಗಿಬಿಡುತ್ತವೆ. Power corrupts abosoultely ಎನ್ನುವ ಹಾಗೆ.
ಈ ಹಿಂದೆ ಇದೇ ಸಂಪದದಲ್ಲಿ ಪಲ್ಲವಿಯವರು ಮಾಧ್ಯಮಗಳು ನಮ್ಮ ಖಾಸಗಿತನವನ್ನು ಬಹಿರಂಗಪಡಿಸುವುದರ ವಿರುದ್ಧ, ಮಾಧ್ಯಮಗಳು ಸ್ವಯಂ ನಿಯಂತ್ರಣ ಹೊಂದಬೇಕಾದ ಅಗತ್ಯದ ಕುರಿತು ಲೇಖನ ಬರೆದಿದ್ದನ್ನು ಇಲ್ಲಿ ಹೇಳಲೇಬೇಕಾಗುತ್ತದೆ. ಈಗ ಅದೇ ವಿಷಯವನ್ನು ಮುಂದುವರಿಸುವುದಾದಲ್ಲಿ, ಕಾನೂನು ವ್ಯವಸ್ಥೆಗೆ ಹೊಣೆಗಾರಿಕೆಯ ಸಾಧನವಾಗಿ ಮಾಧ್ಯಮವನ್ನು ಪರಿಗಣಿಸಿರುವ ಸಮಾಜದಲ್ಲಿ ಕಾನೂನನ್ನು ಎದುರಿಸುತ್ತಿರುವ ವ್ಯಕ್ತಿಗಳ ಖಾಸಗಿತನ, ಘನತೆ, ಮರ್ಯಾದೆ ಕಾಪಾಡುವಂತಹ ಸಾರ್ವಜನಿಕ ಹಿತಾಸಕ್ತಿಯ ಹೊಣೆಗಾರಿಕೆ ಕೂಡ ಮಾಧ್ಯಮದ ಮೇಲಿರುತ್ತದೆ. ಆದ್ದರಿಂದಲೇ, ಈ ಕುರಿತು ಒಂದು ಚಿಕ್ಕ ವಿಷಯವನ್ನು ಪ್ರಕಟಿಸಬೇಕಿದ್ದರೂ ಹತ್ತಾರು ಸಲ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಯಾಕೆಂದರೆ, “ಅಡಿಕೆಗೆ ಹೋದ ಮಾನ ಆಣೆ ಕೊಟ್ಟರೂ ಬರುವುದಿಲ್ಲ”, What is done can not be undone. ಈ ಕಾರಣಕ್ಕಾಗಿಯೇ ಮಾಧ್ಯಮಗಳು ಸ್ವಯಂ ನಿಯಂತ್ರಣವನ್ನು ಅನುಸರಿಸಬೇಕಾಗುತ್ತದೆ. ಇಲ್ಲವಾದಲ್ಲಿ, ಆರುಷಿ ಕೊಲೆ ಪ್ರಕರಣದಲ್ಲಿ ಆದಂತಹ ಅವಘಡಗಳು ಸಂಭವಿಸುವ, ಮರುಕಳಿಸುವ ಸಾಧ್ಯತೆಗಳು ಹೆಚ್ಚು.
24X7 ಸೆನ್ಸೇಶನಲ್ ಸುದ್ದಿಗಳನ್ನು ಬಿತ್ತರಿಸಬೇಕೆಂಬ ಏಕೈಕ ಉದ್ದೇಶದಿಂದ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಈ ಖಾಸಗಿ ಸುದ್ದಿವಾಹಿನಿಗಳು, ಇತ್ತೀಚೆಗೆ ಅವುಗಳೊಂದಿಗೆ ಪೈಪೋಟಿಗಿಳಿದಂತೆ ವರ್ತಿಸುತ್ತಿರುವ ನಮ್ಮ ದಿನಪತ್ರಿಕೆಗಳು ಅಂತಹ ಸುದ್ದಿಗಳಿಗಾಗಿಯೇ ಹೊಂಚು ಹಾಕುತ್ತ, ನಾ ಮುಂದು ತಾ ಮುಂದು ಎಂದು ಮುಗಿಬೀಳುತ್ತ, ಸತ್ಯಾಸತ್ಯತೆಗಳ ಪರಿವೆಯೇ ಇಲ್ಲದೆ, ಪೂರ್ವಾಪರ ಆಲೋಚನೆಯಿಲ್ಲದೆ ತನ್ನ ಪ್ರತಿಸ್ಪರ್ಧಿ ಚಾನೆಲ್ಲುಗಳಿಗಿಂತ ಮೊದಲು ಆ ಸುದ್ದಿಯನ್ನು ಬಿತ್ತರಿಸುವ ಮೂಲಕ ಟಿಆರ್ ಪಿ ರೇಟಿಂಗ್ ನಲ್ಲಿ, ಪ್ರಸಾರ ಸಂಖ್ಯೆಯಲ್ಲಿ ಅಗ್ರ ಶ್ರೇಯಾಂಕವನ್ನು ಕಂಡುಕೊಂಡಲ್ಲಿ “ಜನ್ಮ ಸಾರ್ಥಕ” ಎನ್ನುವಷ್ಟು ಹಪಹಪಿಯನ್ನು ಹೊಂದಿವೆ. ಅದರಿಂದಾಗಿಯೇ, 24X7 ಸುದ್ದಿವಾಹಿನಿಗಳಾಗಿದ್ದರೂ, ಸ್ಟಾರ್ ನ್ಯೂಸ್, ಆಜ್ ತಕ್, ಹೆಡ್ ಲೈನ್ಸ್, ನಮ್ಮ ಕನ್ನಡ ಸುದ್ದಿವಾಹಿನಿ ಟಿವಿ 9ನಂತಹ “ಪ್ರಮುಖ ಸುದ್ದಿವಾಹಿನಿಗಳು” ವಸ್ತುನಿಷ್ಟ ವರದಿಗಳಿಗಿಂತ ಹೆಚ್ಚಾಗಿ ಮನರಂಜನಾ ಗಾಸಿಪ್ ಗಳು, ಪೇಜ್ 3 ವಿಷಯಗಳ ನಡುವೆ ಹೆಸರಿಗೆ ಸುದ್ದಿಯನ್ನು ಪ್ರಕಟಿಸುತ್ತಾ “ಜನಪ್ರಿಯತೆ”ಯ ಮಾನದಂಡವನ್ನು ಕಾಪಾಡಿಕೊಳ್ಳುತ್ತ, “ಸಮಾಜದ ಏಳಿಗೆಗಾಗಿ” ಎನ್ನುವ ಸೋಗಿನಲ್ಲಿ ಅತಿ ಹೆಚ್ಚು ಪ್ರೇಕ್ಷಕವರ್ಗವನ್ನು ಸೃಷ್ಟಿಸಿಕೊಳ್ಳುತ್ತ ಮುನ್ನಡೆಯಲು ಸಾಧ್ಯವಾಗಿರುವುದು. ಎಷ್ಟೇ ಆಗಲಿ ನೋಡುಗನ ಅಭಿರುಚಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ಹೆಣೆಯುವುದು ಚಾನೆಲ್ಲುಗಳ ಕರ್ತವ್ಯವಲ್ಲವೇ? ನಮ್ಮ “ನೋಡುಗ ಮಹಾಶಯ”ರ ಅಭಿರುಚಿ ಇಷ್ಟು ಉತ್ಕೃಷ್ಟಗೊಳ್ಳುತ್ತ ನಡೆದಿರುವುದು ಸಂತೋಷಪಡಬೇಕಾದ ವಿಚಾರವೇ! ಒಂದು ಕಾಲದಲ್ಲಿದ್ದ ಕಾರ್ಯಕ್ರಮಗಳ ನಡುವೆ ಜಾಹೀರಾತಿನ ಬದಲು ಜಾಹೀರಾತಿನ ನಡುವೆ ಕಾರ್ಯಕ್ರಮಗಳು ನುಸುಳುವ ಕಾಲ ಕಾಲಿಟ್ಟ ಹಾಗೆಯೇ, ಇಂದು 24X7 ಸುದ್ದಿವಾಹಿನಿಗಳಲ್ಲಿ “ಇಂತಹ” ಪ್ರಮುಖ “ಮನರಂಜನಾ” ಕಾರ್ಯಕ್ರಮಗಳ ನಡುವೆ ಆಗೊಮ್ಮೆ ಈಗೊಮ್ಮೆ ಸುದ್ದಿಗಳು ಬಿತ್ತರಗೊಳ್ಳುತ್ತಲಿವೆ.
ಇದಕ್ಕೆ ಉದಾಹರಣೆ ನೀಡುವುದಾದರೆ, ಆಧುನಿಕತೆ, ತಂತ್ರಜ್ಞಾನ ಬೆಳೆದಂತೆ ಮಾಧ್ಯಮಗಳು ಜನಾಭಿಪ್ರಾಯ ಸಂಗ್ರಹ ಮಾಡುವ ಸಾಧನಗಳು ಕೂಡ ಬದಲಾಗುತ್ತ ಹೋಗುತ್ತವೆ. ಅಂತೆಯೇ, ಇಂದಿನ ಟ್ರೆಂಡ್ SMS. ನೀವು ಯಾರು ಪ್ರಧಾನಿಯಾಗಬೇಕು ಎಂದು ಬಯಸುತ್ತೀರಿ? ಭಾರತ-ಅಮೆರಿಕ ಅಣು ಒಪ್ಪಂದಕ್ಕೆ ಎಡಪಕ್ಷಗಳು ಬೆಂಬಲಿಸಬೇಕೇ ಬೇಡವೇ? ಕತ್ರೀನಾ ಕೈಫ್ ಸಲ್ಮಾನ್ ಖಾನ್ ನನ್ನು ಮದುವೆಯಾಗೇ ಬೇಡವೇ? ಕರೀನಾ ಕಪೂರ್ ಶಾಹಿದ್ ಕಪೂರ್ ನನ್ನು ಬಿಟ್ಟು ಸೈಫ್ ಖಾನ್ ನನ್ನು ಪ್ರೇಮಿಸುತ್ತಿರುವುದು ಸರಿಯೇ? ಹೀಗೇ ಸಮಂಜಸವಾದುದಕ್ಕಿಂತ ಅಸಮಂಜಸವಾದ, ತೀರಾ absurd ಎನಿಸುವಂತಹ ಪ್ರಶ್ನೆಗಳಿಗೆ ನಮ್ಮ ಜನತಾಜನಾರ್ಧನರು ತಾವು ಯಾಕೆ ಹಾಗೆ ಹೇಳಬಯಸುತ್ತೇವೆ ಎಂದೂ ಹೇಳಲಾಗದೆ ಒಂದೇ ಸಾಲಿನಲ್ಲಿಯೂ ಅಲ್ಲ ಕೇವಲ ಹೌದು ಅಥವಾ ಇಲ್ಲ ಎಂದು ಉತ್ತರಿಸುವ ಮೂಲಕ ತಿಳಿಸಬೇಕು. ಅತೀ ಹೆಚ್ಚು ಯಾವುದು ಬರುತ್ತದೋ ಅದೇ ಇಡೀ ಭಾರತದ ಜನಸಂಖ್ಯೆಯ ಅಭಿಪ್ರಾಯ, ಅಭಿಮತ. ಈ ಹಿಂದೆ ಭೈರಪ್ಪನವರ ಬಹುಚರ್ಚಿತ “ಆವರಣ”ದ ವಿವಾದದ ಸಂದರ್ಭದಲ್ಲಿ ನಮ್ಮ ನಾಡಿನ ಪತ್ರಿಕೆಯೊಂದು ಈ ಎಸ್ಎಂಎಸ್ ಮತಸಂಗ್ರಹದ ಮೂಲಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಚಿಂತಕ ಡಾ.ಯು.ಆರ್.ಅನಂತಮೂರ್ತಿಯವರ ತೇಜೋವಧೆ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದರ ಕುರಿತು ಸ್ವತಃ ಅನಂತಮೂರ್ತಿಯವರೇ ತಮ್ಮ ಇತ್ತೀಚಿನ ಪುಸ್ತಕ “ಮಾತು ಸೋತ ಭಾರತ”ದಲ್ಲಿ ವಿಷಾದ ವ್ಯಕ್ತಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಮತ್ತೆ ಮೇಲಿನ ವಿಷಯಕ್ಕೆ ಬರುವುದಾದರೆ, “ಪಾರ್ಲಿಮೆಂಟ್ ದಾಳಿ” ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ಜಲ್ ಗುರುವಿಗೆ ಜೀವಾವಧಿ ಶಿಕ್ಷೆ ನೀಡಬೇಕೋ, ಮರಣ ದಂಡನೆ ಶಿಕ್ಷೆ ವಿಧಿಸಬೇಕೋ ಎಂದು ಹೆಚ್ಚುಕಮ್ಮಿ ಎಲ್ಲಾ ವಾಹಿನಿಗಳು ಮುಗಿಬಿದ್ದು ಇದೇ ಎಸ್ಎಂಎಸ್ ಮತಸಂಗ್ರಹದ ಮೂಲಕ ಬಹುಜನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದವು. ಬಹುಶಃ, ಭಾರತದ ಕಾನೂನು ಇತಿಹಾಸದಲ್ಲಿ ಈ ರೀತಿಯ ಮತ ಸಂಗ್ರಹ ಇದೇ ಮೊದಲನೆಯದು ಎಂದೆನಿಸುತ್ತೆ. ಹೇಗೆ ಇಂತಹ ಜನಾಭಿಮತ ಕಾನೂನು ತೀರ್ಪಿನ ಮೇಲೆ ಪರಿಣಾಮ ಬೀರಬಹುದು ಎನ್ನುವುದಕ್ಕೆ ಸಾಕ್ಷಿಯೆಂಬಂತೆ, ಈ ಪ್ರಕರಣ ನಡೆಸಿದ ನ್ಯಾಯಾಧೀಶರುಗಳು ಸಂಸತ್ತಿನ ಮೇಲೆ ನಡೆದ ದಾಳಿ ಪ್ರಕರಣದ ವಿರುದ್ಧ “ಸಮಾಜದ ಸಮಷ್ಟಿ ಪ್ರಜ್ಞೆ”ಯೇ ಕೆರಳಿದೆ ಎಂದು ಹೇಳುವಂತಾಯಿತು!
ನಾಗರಿಕರ ಮೂಲಭೂತ ಹಕ್ಕುಗಳಿಗೆ ಚ್ಯುತಿ ತರುವುದರ ಜತೆಗೇ ಮಾಧ್ಯಮ ಪತ್ರಿಕೋದ್ಯಮ ನೀತಿನಿಯಮಗಳನ್ನು ಕೂಡ ಗಾಳಿಗೆ ತೂರಿದ್ದು ಆತಂಕಕಾರಿ, ಅವಹೇಳನಕಾರಿ ವಿಚಾರ.
“ಪ್ರೆಸ್ ಕೌನ್ಸಿಲ್ ಆಫ್ ಇಂಡಿಯ” ತನ್ನ ನಡಾವಳಿಯಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಪ್ರಸ್ತುತವೆನಿಸದಿದ್ದಲ್ಲಿ ಯಾವುದೇ ವ್ಯಕ್ತಿ/ಗಳ ಖಾಸಗಿ ವಿಚಾರಗಳನ್ನು ಪ್ರಕಟಿಸಬಾರದೆಂದು ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದೆ. ಇದು ಮಹಿಳೆಯೊಬ್ಬಳ ಶೀಲ ಹಾಗೂ ಖಾಸಗಿತನದ ಕುರಿತು ಶಂಕೆ ಮೂಡಿಸುವಂತಹ ವಿವರಗಳನ್ನು ಬಹಿರಂಗಗೊಳಿಸಬಾರದೆಂಬ ನಿಯಮವನ್ನೂ ಒಳಗೊಂಡಿದೆಯಾದರೂ, ಆರುಷಿ ಕೊಲೆ ಪ್ರಕರಣದಲ್ಲಿ ಇದರ ಉಲ್ಲಂಘನೆಯಾದದ್ದಂತೂ ಸತ್ಯ!
ಮತ್ತೊಂದು, ಮಹಿಳೆಯನ್ನು ಅಗೌರವವಾಗಿ ಪ್ರತಿನಿಧಿಸುವುದಕ್ಕೆ ಸಂಬಂಧಿಸಿದ ಕಾಯ್ದೆ. ಈ ಕಾಯ್ದೆಯಡಿಯಲ್ಲಿ ಪ್ರಕರಣಕ್ಕೊಳಪಟ್ಟಿರುವ ಮಹಿಳೆಯ ಘನತೆಗೆ ಚ್ಯುತಿ ಬಾರದಂತೆ ಜವಾಬ್ದಾರಿಯುತವಾಗಿ ವರದಿಗೊಳಿಸಬೇಕು ಎಂದು ಮಾಧ್ಯಮಗಳಿಗೆ ಸೂಚನೆ ನೀಡುತ್ತದೆ. ಆದರೆ, ಈ ಕಾಯ್ದೆಯು ಕೂಡ ಪ್ರಸ್ತುತ ಪ್ರಕರಣದಲ್ಲಿ ಉಲ್ಲಂಘನೆಯಾಯಿತು. ಎಲ್ಲಾ ಕಾಯ್ದೆಗಳು ಉಲ್ಲಂಘನೆಯಾದಲ್ಲಿ, ಅನುಸರಿಸಲಾದ ಕಾಯ್ದೆಗಳು ಯಾವುವು? ಕಾಯ್ದೆಗಳು ಇರುವುದು ಕೇವರ ಹೆಸರಿಗೆ ಮಾತ್ರವೇ? ಎನ್ನುವ ಪ್ರಶ್ನೆಗಳು ಕಾಡುತ್ತವೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇನ್ನು ಮೇಲಾದರೂ ಕಣ್ತೆರೆದು ಇಂತಹ ಕಾಯ್ದೆಗಳ ಉಲ್ಲಂಘನೆಯನ್ನು ಮಾಡುವ ಮಾಧ್ಯಮಗಳನ್ನು ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತವಾಗಿ ವಿಚಾರಣೆಗೊಳಪಡಿಸಿ, ತಪ್ಪಿತಸ್ಥರಾದಲ್ಲಿ ತೀವ್ರ ದಂಡನೆಗೆ ಗುರಿಪಡಿಸುವ ಮೂಲಕ ಮುಂದಾದರೂ ಇಂತಹ ಪ್ರಮಾದಗಳು ಜರುಗದಂತೆ ತಡೆಗಟ್ಟಬೇಕು.
- Login or register to post comments
- 597 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ನಿಮ್ಮ ಲೇಖನದ ಎರಡೂ ಕಂತುಗಳನ್ನು ಓದಿದೆ. ವಸ್ತುನಿಷ್ಠವಾಗಿ ಬರೆದಿದ್ದೀರಿ.
ಮಾಧ್ಯಮ ನಮ್ಮೆಲ್ಲರ ಬದುಕುಗಳನ್ನು ಪ್ರಭಾವಗೊಳಿಸಬಲ್ಲ ಕ್ಷೇತ್ರವಾಗಿರುವುದರಿಂದ ಇದು ಹಾದಿ ತಪ್ಪದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಅಂತಹ ಬೆಳವಣಿಗೆಗಳು ನಡೆಯುತ್ತಿರುವುದರಿಂದ, ಕೊಂಚ ಮಟ್ಟಿಗಿನ ಹಿಡಿತವಾದರೂ ಬೇಕೇ ಬೇಕು.
ವೈಯಕ್ತಿಕ ಜೀವನವೆನ್ನುವುದು ಪ್ರತಿಯೊಬ್ಬರ ಹಕ್ಕು. ಅದರಲ್ಲಿ ತಲೆ ತೂರಿಸುವ ಹಕ್ಕು ಬೇರೆ ಯಾರಿಗೂ ಇಲ್ಲ. ಅಂತಹ ಕೆಲಸ ಮಾಡಿದ ಕಮ್ಯುನಿಸ್ಟ್ ದೇಶಗಳು ಮಣ್ಣು ಮುಕ್ಕಿದವು. ಧರ್ಮಾಂಧ ದೇಶಗಳು ಸಹ ಮಣ್ಣುಮುಕ್ಕಿವೆ. ಉದಾಹರಣೆಗೆ, ಅಫ್ಘಾನಿಸ್ತಾನ. ಅಂತಹ ಇತರ ದೇಶಗಳು ಸಾಕಷ್ಟು ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿವೆ. ವ್ಯಕ್ತಿಯ ಸಹಜ ಅಭಿವ್ಯಕ್ತಿಗೆ ಧಕ್ಕೆ ತರುವ ಯಾವ ಪ್ರಯತ್ನಗಳೂ ಫಲ ಕೊಡುವುದಿಲ್ಲ. ಇವತ್ತು ಮುಸ್ಲಿಂ ಧರ್ಮ ಸಾಕಷ್ಟು ಸಮಸ್ಯೆಗಳಿಗೆ ಈಡಾಗಿರುವುದು ಅವರು ಮಹಿಳೆಯರ ಸಹಜ ಹಕ್ಕುಗಳನ್ನು ದಮನ ಮಾಡಿದ್ದೇ ಕಾರಣ. ಅದೇ ರೀತಿ, ಇತರ ಧರ್ಮಗಳ ವಿಷಯದಲ್ಲಿ ಹಸ್ತಕ್ಷೇಪ ಮಾಡಿದ್ದೂ ಕಾರಣ.
ಈ ಎಲ್ಲ ಹಿನ್ನೆಲೆಯಲ್ಲಿ ಮಾಧ್ಯಮ ಯೋಚಿಸಿ ಹೆಜ್ಜೆ ಇಡಬೇಕಾಗಿದೆ. ಪೊಲೀಸರು, ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ತಮ್ಮವೇ ಆದ ಕಾರಣಗಳಿಗಾಗಿ ಮಾಧ್ಯಮದವರನ್ನು ಓಲೈಸುತ್ತಾರೆ ಎಂಬ ಅಂಶ ಬಹುತೇಕ ಮಾಧ್ಯಮ ಮಿತ್ರರ ಯೋಚನೆಗಳನ್ನು ಲಂಗುಲಗಾಮಿಲ್ಲದಂತೆ ಮಾಡಿದೆ. ಆದರೆ ಕಾನೂನೆಂಬುದು ಇದೆ. ಅದನ್ನು ಸ್ವಲ್ಪ ಬಳಸಿದರೂ ಸಾಕು, ಮಾಧ್ಯಮಕ್ಕೆ ವಿವೇಚನೆ ಕಲಿಸಬಹುದು.
ಅಂಥದೊಂದು ಪ್ರಯತ್ನ ಪ್ರಾರಂಭವಾಗಲಿ. ನಿಮ್ಮ ಲೇಖನ ಹಾಗೂ ಅಂತಹ ವಿಚಾರಧಾರೆ ಹೊಂದಿದ ಎಲ್ಲರ ಬರವಣಿಗೆ ಹಾಗೂ ಚಿಂತನೆಗಳು ಇಂಥದೊಂದು ಪ್ರಯತ್ನಕ್ಕೆ ಪುಟ ನೀಡಲಿ ಎಂದು ಹಾರೈಸುತ್ತೇನೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಪ್ರಿಯ ಪಲ್ಲವಿ,
ನಮಸ್ಕಾರ. ಪ್ರತಿಕ್ರಿಯೆಗೆ ಧನ್ಯವಾದ. ಹೇಗಿದೆ ನಿಮ್ಮ ಖಿನ್ನತೆಯೊಡಗಿನ ಹೋರಾಟ. ನೀವು ಬಿಡಿ ತುಂಬಾ ಗಟ್ಟಿಗರು. ಎಲ್ಲವನ್ನೂ ಸಮರ್ಥವಾಗಿ ಎದುರಿಸುವ ಶಕ್ತಿ ನಿಮ್ಮಲ್ಲಿದೆ.
ಇನ್ನು ನನ್ನ ಲೇಖನಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ನೀವು, ಸುಪ್ರೀತ್ ಹಾಗೂ ಚಾಮರಾಜರಂತಹ ಸೂಕ್ಷ್ಮ ಮನಸ್ಸಿನವರು ಮಾಧ್ಯಮಗಳ ಕುರಿತು ಬರೆದ ಲೇಖನಗಳು ಒಂದು ರೀತಿಯಲ್ಲಿ ಈ ಲೇಖನಕ್ಕೆ ಸ್ಫೂರ್ತಿ ಎನ್ನಬಹುದಾದರೂ, ನಾನು ಯಾಹೂ!ಕನ್ನಡದ ಸಂಪಾದಕನಾಗಿ ಕೆಲಕಾಲ ಕೆಲಸ ಮಾಡಿದ್ದರಿಂದಾಗಿ ಅಂದಿನಿಂದಲೇ ಮಾಧ್ಯಮದ ಆಗುಹೋಗುಗಳನ್ನು ಬಹುಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೆ. ನಾನು ಕೆಲಸ ಮಾಡುತ್ತಿದ್ದ ಕಂಪೆನಿ ಹಾಗೂ ನನ್ನ ನಡುವೆ ಇಂತಹದೇ ತಾತ್ವಿಕ ಕಾರಣಗಳಿಗಾಗಿ ಉಂಟಾದ ಭಿನ್ನಾಭಿಪ್ರಾಯಗಳಿಂದಾಗಿಯೇ ಅಲ್ಲಿಂದ ಹೊರಬಂದದ್ದೂ ಆಯ್ತು. ಆದರೂ, ಈಗಲೂ ಮಾಧ್ಯಮದೆಡೆಗಿನ ನನ್ನ ಸೆಳೆತ ದೂರವಾಗಿಲ್ಲ.
ಇನ್ನು ಧರ್ಮ, ಮಹಿಳೆ, ಭಯೋತ್ಪಾದನೆಗಳಂತಹ ವಿಷಯಗಳ ಕುರಿತೂ ಬರೆಯುವ ಆಲೋಚನೆಯಿದೆ. ನೀವು ಕೂಡ ಆ ಕುರಿತು ಬರೆಯಿರಿ. ನಮ್ಮಂತಹ ಯುವಕರು ಮಾತ್ರ ಆರೋಗ್ಯವಂತ ಸಮಾಜ ಹಾಗೂ ವಿಶ್ವವನ್ನು ಸೃಷ್ಟಿಮಾಡಬಲ್ಲರು ಎಂಬುದು ನನ್ನ ಬಲವಾದ ನಂಬಿಕೆ. ನಾವು ಇಂದೆಂದಿಗಿಂತಲೂ ಹೆಚ್ಚು ಒತ್ತಡದ ಬದುಕನ್ನು ಬದುಕುತ್ತಿದ್ದೇವೆ. ಆ ಒತ್ತಡ ಕೇವಲ ದೈಹಿಕ ಹಾಗೂ ಮಾನಸಿಕ ಒತ್ತಡಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲೆಡೆಯೂ ಹರಡಿಕೊಂಡಿದೆ. ಈ ನಮ್ಮ ಸಮಾಜಕ್ಕೆ ಖಂಡಿತವಾಗಿಯೂ ಒಂದು "ವಚನ ಕ್ರಾಂತಿ"ಯಂತಹ ಕ್ರಾಂತಿಯ ಅಗತ್ಯವಿದೆ. ಆದರೆ, ಈ ಸಲ ನಾವು ಬಸವೇಶ್ವರರ ಕ್ರಾಂತಿ ವಿಫಲವಾದ ಹಾಗೆ ಆಗದಂತೆ ಜಾಗೃತರಾಗಿ ಹೋರಾಡಿ ಹೊಸ ಬದುಕು, ಹೊಸ ವಿಶ್ವದ ಸೃಷ್ಟಿಗೆ ಕಾರಣರಾಗಲೇಬೇಕಾಗಿದೆ.
ಸಿರಿಗನ್ನಡಂ ಗೆಲ್ಗೆ
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಬಹಳ ಹೊಗಳಿದ್ದೀರಿ ಶಶಿಕುಮಾರ್ ಅವರೇ, ಅದಕ್ಕೆ ನಾನು ಖಂಡಿತ ಅರ್ಹಳಲ್ಲ.
ಮಾಧ್ಯಮದೆಡೆಗೆ ಏಕೆ ಆಸಕ್ತಿ ಎಂದರೆ, ಅದು ನಮ್ಮೆಲ್ಲರ ನಿತ್ಯದ ಬದುಕನ್ನು ನಿರಂತರವಾಗಿ ಪ್ರಭಾವಗೊಳಿಸುವಂಥದ್ದು. ಅದು ಎಡವಿದರೆ, ನಮ್ಮೆಲ್ಲರ ಬದುಕುಗಳೂ ಎಡವುತ್ತವೆ. ಹೀಗಾಗಿ, ಅದು ದಾರಿ ತಪ್ಪದಂತೆ ನೋಡಿಕೊಳ್ಳುವ ಅನಿವಾರ್ಯ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಯುವ ಜನಾಂಗವೇ ಪ್ರೇರಕ ಶಕ್ತಿ ಎಂಬುದು ನಿಜ. ಆದರೆ, ನಮಗೆ ದಾರಿ ಸರಿಯಾಗಿ ಗೊತ್ತಿರುವುದಿಲ್ಲ. ಹಿರಿಯರ ಮಾರ್ಗದರ್ಶನ ಖಂಡಿತ ಬೇಕಾಗುತ್ತದೆ. ಇಲ್ಲದಿದ್ದರೆ ಈ ಪ್ರೇರಕ ಶಕ್ತಿ ತನಗೆ ಸರಿ ಎಂದು ಅನಿಸಿದ ಕಡೆ ಮುನ್ನುಗ್ಗತೊಡಗುತ್ತದೆ. ಇದೂ ಒಂದು ರೀತಿಯಲ್ಲಿ ಅಪಾಯಕರವೇ.
ಯಾವ ಸಂಸ್ಥೆಯೇ ಇರಲಿ, ಅದರದೇ ಆದ ಮಿತಿಗಳಿರುತ್ತವೆ ಎಂಬುದು ನನ್ನ ಚಿಕ್ಕ ಅನುಭವಕ್ಕೆ ನಿಲುಕಿದ ಸತ್ಯ. ನನ್ನ ಬಹಳಷ್ಟು ಗೆಳತಿಯರು ಇಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಹೇಳುವ ಮಾತುಗಳನ್ನು ಕೇಳಿದರೆ, ಮಿತಿ ಎಲ್ಲ ಕಡೆ ಇದೆ ಎಂದು ಅನಿಸುತ್ತದೆ. ಅದನ್ನು ಮೀರುವ ಪ್ರಯತ್ನವೂ ಜಾರಿಯಲ್ಲಿರಬೇಕು ಎಂದು ಹೇಳಬಲ್ಲೆ.
ಉಳಿದಂತೆ, ಚಿಂತನೆಗೆ ತೊಡಗಿಸುವ, ಕ್ರಿಯೆಯಲ್ಲಿ ತೊಡಗಿಸುವಂತಹ ಬರವಣಿಗೆಗಳ ಅವಶ್ಯಕತೆ ಇದ್ದೇ ಇದೆ. ದಯವಿಟ್ಟು ಬರೆಯಿರಿ. ಆದರೆ, ಉತ್ತಮ ಅಥವಾ ಸಮೃದ್ಧ ಪ್ರತಿಕ್ರಿಯೆಗಳನ್ನು ನಿರೀಕ್ಷಿಸಬೇಡಿ. ತುಂಬ ಜನರಿಗೆ, ಇಂತಹ ಬರವಣಿಗೆಗಳಲ್ಲಿ ಆಸಕ್ತಿ ಇರುವುದಿಲ್ಲ. ಹಾಗಂತ ಅದನ್ನು ಹೊರಹಾಕುವುದಕ್ಕೆ ಬೇಸರ ಮಾಡಿಕೊಳ್ಳಬಾರದು. ನೀವು ತೇಲಿ ಬಿಡುವ ಎಳೆಗಳು ಯಾವತ್ತಾದರೂ ಎಲ್ಲಿಗೂ ತಾಕುತ್ತವೆ. ಅದು ಖಂಡಿತ.
ಬದಲಾವಣೆಯನ್ನು ಹೊರಗೆ ನಿರೀಕ್ಷಿಸುವ ಮುನ್ನ, ಅದು ನಮ್ಮೊಳಗೇ ಆಗಬೇಕು ಎಂಬುದು ನಾನು ಚಿಕ್ಕವಳಿದ್ದಾಗ ಕಲಿತ ಸತ್ಯ. ಅದು ಇವತ್ತಿಗೂ ಸತ್ಯವೇ.
ನಿಮಗೆ, ನಿಮ್ಮ ಪ್ರಯತ್ನಗಳಿಗೆ ಒಳ್ಳೆಯದಾಗಲಿ. ನನ್ನ ಮಿತಿಯಲ್ಲಿ, ಬರೆಯಲು ನಾನೂ ಯತ್ನಿಸುತ್ತೇನೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ನಮಸ್ಕಾರ. ಹೌದು ಹೆಚ್ಚಿನ ಜನರಿಗೆ ಇಂತಹ ಗಂಭೀರ ಬರವಣಿಗೆಗಳಲ್ಲಿ ಆಸಕ್ತಿಯಿರುವುದಿಲ್ಲ. ಬರಹಗಳು ನಿಮ್ಮಂತಹ ಕೆಲವೇ ಕೆಲವು ಸಹೃದಯ ಓದುಗರನ್ನು ತಲುಪಿದರೂ ನನ್ನ ಪ್ರಯತ್ನ ಸಾರ್ಥಕ. ಇಂತಹ ಸಂದರ್ಭಗಳಲ್ಲಿಯೇ ನನಗೆ ನನ್ನ ಅಚ್ಚುಮೆಚ್ಚಿನ ಅಡಿಗರ ಪದ್ಯವಾದ "ಯಾವ ಮೋಹನ ಮುರಳಿ ಕರೆಯಿತು" ನೆನಪಾಗುತ್ತದೆ. ಅದರಲ್ಲಿನ ಒಂದು ಸಾಲಿನಂತೆ ಕಾಡಿನಲ್ಲಿ ಮರಗಳಿಗೆ ಏನು ತಾಗುತ್ತದೋ ಕಾಡ್ಗಿಚ್ಚು ಹೊತ್ತಿ ಉರಿಯಲು. ಹಾಗೆಯೇ, ಯಾರಿಗೆ ಏನು ತಾಗಿ ಏನು ಹೊತ್ತಿಕೊಳ್ಳುತ್ತದೆಯೋ ಹೇಳಲು ಬಾರದು. ಶ್ರೀರಾಮಕೃಷ್ಣರನ್ನು ಯಾರೋ, ನೀವು ಈ ರೀತಿ ಪ್ರವಚನ ನೀಡುವುದರಿಂದ ಏನು ಲಾಭ ಎಂದು ಕೇಳಿದರಂತೆ. ಅದಕ್ಕೆ ಅವರು ನಾನು ಬೆಂಕಿ ಹೊತ್ತಿಸುತ್ತೇನಷ್ಟೆ. ಯಾರಿಗೆ ಚಳಿ ಆಗುತ್ತದೆಯೋ ಅವರು ಬಂದು ಬೆಂಕಿ ಕಾಯಿಸಿಕೊಳ್ಳುತ್ತಾರೆ ಬಿಡು ಎಂದರಂತೆ. ಹಾಗೆಯೇ, ಬರಹಕ್ಕೆ, ಮಾತಿಗೆ ಅಂತಹ ಸಾಮರ್ಥ್ಯವಿದೆ. ಅದಕ್ಕೇ ಅನಂತಮೂರ್ತಿಯವರು ತಮ್ಮ ಇತ್ತೀಚಿನ ಕೃತಿಗೆ ಮಾತನ್ನೇ ಮೂಲವಾಗಿರಿಸಿಕೊಂಡು ಭಾರತ ಯಾಕೆ ಹೇಗೆ ಮಾತು ಸೋತಿತು ಎನ್ನುವುದರ ಕುರಿತು ಅರ್ಥಪೂರ್ಣವಾಗಿ ಬರೆದಿದ್ದಾರೆ. ನೀವು ಆ ಕೃತಿ ಓದಿರದಿದ್ದಲ್ಲಿ ತಪ್ಪದೆ ಓದಿ. ಆ ಕುರಿತು ಒಂದು ವರ್ಷದಿಂದಲೂ ಬರೆಯಬೇಕು ಅಂದುಕೊಂಡಿದ್ದೇನೆ. ಆದರೆ, ಇನ್ನೂ ಸಾಧ್ಯವಾಗಿಲ್ಲ.
ಇನ್ನು ಮಾಧ್ಯಮದ ಬಗ್ಗೆ ಹೇಳುವುದಾದರೆ ಬರೆಹಗಳು, ಪತ್ರಿಕೆಗಳು ನನ್ನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ವಹಿಸಿದ ಪಾತ್ರ ತುಂಬಾ ದೊಡ್ಡದು. ಆ ಕಾರಣಕ್ಕಾಗಿಯೇ, ಮಾಧ್ಯಮಗಳು ಎಡವಿದಾಗ ತುಂಬಾ ನೋವಾಗುತ್ತದೆ. ಯಾಕೆಂದರೆ, ಬಹುಜನರ ಅಭಿಪ್ರಾಯವನ್ನು ರೂಪಿಸುವುದು ಅವುಗಳೇ. ಎಲ್ಲಿ ಗುರುತರವಾದ ಜವಾಬ್ದಾರಿಯಿರುತ್ತದೋ ಅಲ್ಲಿ ಹೆಚ್ಚಿನ ಅರಿವು, ಕಾಳಜಿ, ಪ್ರಜ್ಞೆ, ಎಚ್ಚರ ಅತ್ಯಗತ್ಯ ಅಲ್ಲವೇ?
ಸಿರಿಗನ್ನಡಂ ಗೆಲ್ಗೆ
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಮಾಧ್ಯಮದವರಿಗೆ ಯಾವುದನ್ನು flash news ಹಾಕಬೇಕು ಅಂತನು ಗೊತ್ತಾಗೋಲ್ಲ , ಸಾನಿಯ ಮಿರ್ಜಗೆ ಹೈಪ್ ಕೊಡೋದನ್ನು ನೋಡಬೇಕು , "Breaking news , Sania crashes out " ಅವರು ಹೇಗೆ ಪ್ರೊಜೆಕ್ಟ್ ಮಾಡುತ್ತಾರೆ ಅಂದ್ರೆ ಯಾವಾಗ್ಲು ಸಾನಿಯ ಒಳ್ಳೆ ಆಟ ಪ್ರದರ್ಶಿಸಿ ಈ ಬಾರಿ ಮಾತ್ರ ಸೋತ್ರು ಎನ್ನುವಂತೆ ಭಾಸವಾಗುತ್ತೆ. ಇಷ್ಟರಲ್ಲೆ ಶುರುವಾಗುತ್ತೆ ಯಾವ ಯಾವ ಸೀನಿಯರ್ ಕ್ರಿಕೆಟ್ ಆಟಗಾರರು ರಿಟೇರ್ಡ್ಮೆಂಟ್ ತೆಗೆದುಕೊಳ್ಳಬೇಕು ಅಂತ. ಇಂತ ಅನಗತ್ಯ ವಿಷಯಗಳಿಗೆ ಇವರು ಒತ್ತು ಕೊಟ್ಟು ಏನೊ ಸಾಧಿಸಿದ್ದೇವೆ ಅಂತ ಭಾವಿಸಿಕೊಳ್ಳುತ್ತಾರೆ. ಅದರ ಬದ್ಲು ಪ್ರತಿ ದಿನ ದೇಶಗಳಲ್ಲಿರುವ ಸಮಸ್ಯೆಗಳನ್ನು ಎತ್ತಿ ಹಿಡಿದು ಎಲ್ಲರ ಗಮನಕ್ಕೆ ತರೋದು , ಒಬ್ಬ ಸಾಧಕನ ಬಗ್ಗೆ ದಿನಕ್ಕೊಂದು ಕಾರ್ಯಕ್ರಮವನ್ನು ಹಾಕೋದು , ಅಗತ್ಯವಿರುವ ವಿಷಯಗಳಿಗೆ ಹೆಚ್ಚಿನ ಮಹತ್ವ ಕೊಡಬೇಕು.
ರಾಜೇಶ್ವರಿಯವರೇ, ಸರಿಯಾಗಿ ಗಮನಿಸಿ ಏಟು ನೀಡಿದ್ದೀರಿ. ಒಲಿಂಪಿಕ್ಸ್‌ನಿಂದ ಸಾನಿಯಾ ಹೊರಬಿದ್ದ ಸುದ್ದಿ ಕೇಳಿ ಮಾಧ್ಯಮಕ್ಕೆ, ಅವರ ಪೋಷಕರಾದ ಜಾಹೀರಾತು ಕಂಪನಿಗಳಿಗೆ ಸಾಕಷ್ಟು ನಿರಾಶೆಯಾಗಿತ್ತು. ಒಬ್ಬ ಅಭಿನವ್ ಬಿಂದ್ರಾ ಚಿನ್ನ ತಾರದಿದ್ದರೆ, ಸಾನಿಯಾ ಹೊರಬಿದ್ದಿದ್ದೇ ದೊಡ್ಡ ಸುದ್ದಿಯಾಗಿಬಿಡುತ್ತಿತ್ತು. ಇದಕ್ಕಿಂತ ಅಧಃಪತನ ಇನ್ನೊಂದಿಲ್ಲ.
ಎಲ್ಲಕ್ಕಿಂತ ದುರಂತ ಎಂದರೆ, ಶೂಟಿಂಗ್‌ನಲ್ಲಿ ಬಿಂದ್ರಾ ಚಿನ್ನ ತಂದಿದ್ದರೂ, ಅದರ ವಿಶ್ಲೇಷಣೆಗೆ ನಮ್ಮ ಚಾನೆಲ್‌ಗಳು ಕರೆಸಿದ್ದು ಕ್ರಿಕೆಟ್ ಕಾಮೆಂಟಿಗರನ್ನು. ಇಂತಹ ಅವಿವೇಕತನ ಇದ್ದಾಗ, ಮಾಧ್ಯಮದಿಂದ ಗುಣಮಟ್ಟದ ಫಲಿತಾಂಶ ನಿರೀಕ್ಷಿಸುವುದು ಹೇಗೆ? ವರ್ಷಗಟ್ಟಲೇ ಚಿಲ್ಲರೆ ವಿಷಯಗಳನ್ನು ಚರ್ಚಿಸುವ, ಬರೆಯುವ, ಪ್ರಸಾರ ಮಾಡುವ ಜನರ ಮಧ್ಯೆ ನಮ್ಮಂಥ ಲಕ್ಷಾಂತರ ಜನ ಅದೇ ಕೆಲಸವನ್ನು ಬ್ಲಾಗ್ ಮೂಲಕ ಮಾಡುತ್ತ ಸಮಯ, ಶಕ್ತಿ- ಎರಡನ್ನೂ ವ್ಯರ್ಥ ಮಾಡಿಕೊಳ್ಳುತ್ತಿದ್ದೇವೆ ಅನ್ನಿಸತೊಡಗಿದೆ. ಶಶಿಕುಮಾರ್ ಅವರ ಇಂತಹ ವಿಚಾರ ಪ್ರಚೋದಕ ಲೇಖನಗಳನ್ನೂ ಗಮನಿಸುವಷ್ಟು ವ್ಯವಧಾನ ನಮಗಿಲ್ಲ ಎಂಬುದು ಈ ಪರಿಸ್ಥಿತಿಗೆ ಒಂದು ಸಣ್ಣ ಉದಾಹರಣೆಯಷ್ಟೇ.
ಇನ್ನಾದರೂ ಒಂದಿಷ್ಟು ಉಪಯುಕ್ತ ಕೆಲಸಗಳನ್ನು ಮಾಡುವ ಪ್ರಯತ್ನಗಳು ಪ್ರಾರಂಭವಾದಾವೆ?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಶಶಿ ಸರ್,
ಸ್ವಲ್ಪ ತಡವಾಗಿ ಪ್ರತಿಕ್ರಿಯಿಸುತ್ತಿರುವೆ. ಕಾಲೇಜು ಶುರುವಾಗಿದೆ. ನಿಮ್ಮ ಲೇಖನ ಓದಲು ಇವತ್ತು ಸಮಯವಾಯಿತು.
ನಾವು ಓದುವ ಪೇಪರು, ನಾವು ನೋಡುವ ಧಾರಾವಾಹಿ, ನಾವು ನೋಡುವ ನ್ಯೂಸ್ ಚಾನೆಲ್ ಅಷ್ಟೇ ಏಕೆ? ನಾವು ಬಳಸುವ ಪಬ್ಲಿಕ್ ಟಾಯ್ಲೆಟ್ ಸಹ ಹೀಗೀಗೆ ಇರಬೇಕು ಎಂದು ನಾವು ಬಯಸುತ್ತೇವೆ. ಬಾಂಬ್ ಸ್ಪೋಟವಾದ ಸುದ್ದಿಯನ್ನು ವರದಿ ಮಾಡುವಾಗ ಇನ್ನೂ ಯಾವ ಅಧಿಕೃತ ಮೂಲಗಳೂ ಸ್ಪಷ್ಟಪಡಿಸದಿರುವಾಗಲೇ ಮುಸ್ಲಿಂ ಭಯೋತ್ಪಾದಕ ಫೋಟೊ ಒಂದನ್ನು ಹಾಕಿದಾಗ ಉಂಟಾಗುವ ಕಿರಿಕಿರಿಗೂ ಫುಟಪಾತಿನ ಮೇಲೆ ಓಡಾಡಲು ಜಾಗ ಬಿಡದ ಹಾಗೆ ಸಂತೆ ಹರವಿಕೊಂಡವರು ಕಾಲು ಕಾಲಿಗೆ ತೊಡರುವುದನ್ನು ಕಂಡಾಗ ಆಗುವ ಕಿರಿಕಿರಿಗೂ ಅಂಥಾ ವ್ಯತ್ಯಾಸವೇನಿಲ್ಲ ಅನ್ನಿಸುತ್ತೆ.
ಬದಲಾವಣೆ, ಕ್ರಾಂತಿಗಳ ಬಗೆಗೆ ನನಗೆ ಅಂಥಾ ಒಲವೇನೂ ಇಲ್ಲ. ಎಲ್ಲವೂ ರೂಪಾಂತರಗೊಳ್ಳುತ್ತಾ ಹೋಗುತ್ತದೆ ಎಂದು ನಂಬಿದವನು ನಾನು. ನಾನು ಒಂದು ಕಾಲದಲ್ಲಿ ಅತಿರಂಜಿತ ವರದಿಗಳನ್ನು ಅತ್ಯಾಸಕ್ತಿಯಿಂದ ನೋಡುತ್ತಿದ್ದೆ. ಈಗ ನನ್ನ ಪ್ರಜ್ಞೆ ರೂಪಾಂತರವಾಗಿದೆ. ನನಗೆ ಆ ಬಗೆಯ ಅತಿರಂಜಿತ ಹಾಗೂ ಬಯಾಸ್ಡ್ ವರದಿಗಳ ಪರಿಣಾಮ ಕಾಣುತ್ತದೆ ನಾನು ಅವುಗಳನ್ನು ಎಂಜಾಯ್ ಮಾಡುವುದಿಲ್ಲ. ಆದರೆ ನನ್ನ ಹಿಂದಿನ ಸ್ಥಿತಿಯಲ್ಲಿರುವವರು ಇದ್ದೇ ಇರುತ್ತಾರೆ ಅಲ್ಲವೇ?
ಹೀಗೆ ಚರ್ಚೆಯಿಂದ, ಓದುವಿಕೆಯಿಂದ, ನಾಲ್ಕು ಮಂದಿ ಮಾತನಾಡುವುದರಿಂದ ನಮ್ಮ ಪ್ರಜ್ಞೆ ರೂಪುಗೊಳ್ಳುತ್ತಾ ಹೋಗುತ್ತದೆ. ಹೀಗಾಗಿ ಆವಶ್ಯಕವಾಗಿ ನಿಮ್ಮ ಪ್ರಯತ್ನಗಳು ಸಹಕಾರಿಯಾಗುತ್ತವೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...
ಗೆಳೆಯ ಸುಪ್ರೀತ್,
ನಮಸ್ಕಾರ. ಸರ್ ಎಂದು ಕರೆದು ದಯವಿಟ್ಟು ನನಗೆ ಮುಜುಗರ ಮಾಡಬೇಡ ಕಣೋ! ನನಗೆ ಸರ್ ಅಂತ ಕರೆಸಿಕೊಳ್ಳುವಷ್ಟು ಯೋಗ್ಯತೆ ಇದಿಯೋ ಇಲ್ಲವೋ!
ನಿನಗೆ ನನ್ನಲ್ಲಿ ಒಬ್ಬ ಅಣ್ಣನನ್ನು ಕಾಣಲು ಸಾಧ್ಯವಾದರೆ "ಅಣ್ಣ" ಎಂದು ಕರೆ ಅಥವಾ ಒಬ್ಬ ಗೆಳೆಯನನ್ನು ಕಾಣಲು ಸಾಧ್ಯವಾದರೆ ನನ್ನ ಹೆಸರಿಡಿದು ಕರೆ. ಇನ್ನು ಮುಂದೆ ಹಾಗೆ ಕರೀತೀಯಲ್ವ?
ಇನ್ನು ನೀನು ಹೇಳುವುದು ಒಂದು ರೀತಿ ಸರಿಯೇ. ಬದಲಾವಣೆ, ಕ್ರಾಂತಿಗಳು ಹೇರಿಕೊಂಡು ಮಾಡುವಂತಹ ಕೆಲಸಗಳಲ್ಲ. ಹಾಗೆ ಮಾಡಲು ಹೊರಟ ಕಮ್ಯುನಿಸ್ಟ್ ರಾಷ್ಟ್ರಗಳು ಹೇಗೆ ಸೋಲನ್ನುಂಡವು ಎಂಬುದು ನಮಗೆ ಉದಾಹರಣೆಯಾಗಿಯೇ ನಿಂತಿದೆ ಆದರೆ, ನಮ್ಮ ನಾಡಿನ ಅಲ್ಲಲ್ಲ, ವಿಶ್ವದಲ್ಲಿಯೇ ವಿಶಿಷ್ಟ, ಮೊತ್ತ ಮೊದಲು, ಅರ್ಥಪೂರ್ಣ ಎನ್ನುವಂತಹ "ವಚನ ಕ್ರಾಂತಿ"ಯಂತಹ ಕ್ರಾಂತಿಯ ಬಗ್ಗೆ ನನಗೆ ನಂಬಿಕೆ, ಭರವಸೆಗಳಿವೆ. ಅದನ್ನು ನೆನಸಿಕೊಂಡಾಗಲೆಲ್ಲ ನನ್ನ ಮೈಜುಮ್ಮೆನ್ನುತ್ತದೆ. ನಿಜವಾಗಿಯೂ ಅಂತಹದೊಂದು ಕ್ರಾಂತಿ ನಮ್ಮ ನಾಡಿನಲ್ಲಿ ನಡೆದಿದೆಯಾ ಎಂದು. ಅದರ ಬಗ್ಗೆ ಮುಂದೊಮ್ಮೆ ಯಾವಾಗಲಾದರೂ ಬರೆಯುತ್ತೇನೆ.
12ನೇ ಶತಮಾನದ "ವಚನ ಕ್ರಾಂತಿ" ಕೂಡ ಸೋಲು ಕಂಡಿರಬಹುದು. ಆದರೆ, ಅದನ್ನು ಇಂದು ಗೆಲುವಾಗಿಸಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಸವಣ್ಣರಾದಿಯಾಗಿ ಎಲ್ಲಾ ವಚನಶ್ರೇಷ್ಟರು ಹಚ್ಚಿದ ಆ ಕಿಡಿ ಇಂದು ಮನೆಮನೆಯನ್ನೂ ಬೆಳಗುವ ಹಣತೆಯಾಗಬೇಕು. ನಿನ್ನಂತಹ ಹದಿಹರೆಯದ ಎಲ್ಲಾ ಹುಡುಗರ ಪ್ರಜ್ಞೆಯು ಹೀಗೆ ಜಾಗೃತವಾಗಿ ರೂಪಾಂತರಗೊಂಡಲ್ಲಿ ಅದು ಖಂಡಿತ ಅಸಾಧ್ಯದ ಮಾತಲ್ಲ. ನಿನ್ನ ಬಗ್ಗೆ ನನಗೆ ಯಾಕೆ ಹೆಮ್ಮೆ ಎಂದರೆ, ನಿನ್ನ ವಯಸ್ಸಿನಲ್ಲಿ ಆ ರೀತಿ ಯೋಚಿಸುವುದಿರಲಿ, ಈ ಪ್ರಜ್ಞೆ, ರೂಪಾಂತರ ಎನ್ನುವ ಪದಗಳು ಕೂಡ ನನಗೆ ಗೊತ್ತಿತ್ತೋ ಗೊತ್ತಿರಲಿಲ್ಲವೋ! ಅಂತಹದರಲ್ಲಿ ನೀನು ಅಂತಹ ರೂಪಾಂತರ ಹೊಂದುತ್ತಿರುವುದನ್ನು ನಿನ್ನ ಪ್ರತಿ ಬರೆಹದಲ್ಲೂ ನಾನು ಕಾಣುವಾಗ ನನಗೆ ಹೆಮ್ಮೆಯೆನಿಸುತ್ತದೆ ಕಣೋ. Keep it up my boy!
ನನಗೇನಾದ್ರೂ Time Travel ಮಾಡೋ ಅವಕಾಶವೇನಾದ್ರೂ ಸಿಕ್ಕಿದ್ರೆ ನಾನು ಮತ್ತೆ ನಿನ್ನ ವಯಸ್ಸಿಗೆ ತೆರಳಿ ಈಗ ನನಗಿರೋ ಸೂಕ್ಷ್ಮತೆಯನ್ನು ಹೊಂದಲು ಬಯಸುತ್ತೇನೆ. ನಿನ್ನಂತಹವರನ್ನು ನೋಡಿದ್ರೆ ನಾನು 8-10 ವರುಷ ವ್ಯರ್ಥವಾಗಿ ಕಳೆದುಬಿಟ್ಟೆನಲ್ಲಾ ಅನ್ನೋ guilt ಕಾಡುತ್ತೆ ಕಣೋ!
ಸಿರಿಗನ್ನಡಂ ಗೆಲ್ಗೆ
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಪ್ರಿಯ ಶಶಿ ಅವರೇ,
ಲೇಖನದ ಎರಡನೇ ಭಾಗ ಮತ್ತು ಪ್ರತಿಕ್ರಿಯೆಗಳನ್ನು ಓದಿದೆ. ಸಂಪದದ ಬೇರುಗಳಲ್ಲಿ, ಆಳ ಬೇರುಗಳೂ ಇವೆ ಎಂಬುದು ಮತ್ತೆ ಮನದಟ್ಟಾಯಿತು.
ಮಾಧ್ಯಮದ ಅತಿರೇಕ ಹಾಗೂ ಅವಿವೇಕತನದ ಬಗ್ಗೆ ಕೊನೆ ಮೊದಲಿಲ್ಲದಂತೆ ಉದಾಹರಣೆಗಳನ್ನು ನೀಡುತ್ತ ಹೋಗಬಹುದು. ಈಗ ಕೆಲಸ ಮಾಡುತ್ತಿರುವ ಚಾನೆಲ್‌ನಲ್ಲೇ ಇಂತಹ ಹಲವಾರು ಘಟನೆಗಳನ್ನು ನಿತ್ಯ ನೋಡುತ್ತೇನೆ. ಅನಿವಾರ್ಯ ಕರ್ಮ. ಹೀಗಾಗಿ ಬಹಿರಂಗವಾಗಿ ಟೀಕಿಸಲಾರೆ. ಆದರೆ, ಇತರ ಕನ್ನಡ ಚಾನೆಲ್‌ಗಳ ಅವಿವೇಕತನವನ್ನೂ ಬಹಿರಂಗವಾಗಿ ಟೀಕಿಸದಿರುವ ಸಂದಿಗ್ಧ ನನ್ನದು. ಏಕೆಂದರೆ, ನಾನು ಕೆಲಸ ಮಾಡುವ ಚಾನೆಲ್‌ನ ದೋಷ ಹೇಳದೇ ಇತರರನ್ನು ಟೀಕಿಸುವುದು ಸರಿಯಲ್ಲ ಎಂಬ ವಿವೇಕದಿಂದ.
ಹೀಗಾಗಿ, ಸಾಮಾನ್ಯ (ಜನರಲ್) ಹೇಳಿಕೆಗಳ ಮಟ್ಟಕ್ಕೆ ನಾನು ಸೀಮಿತವಾಗಿರುವ ಅನಿವಾರ್ಯತೆಯನ್ನು ನೀವು ಅರ್ಥ ಮಾಡಿಕೊಳ್ಳಬಲ್ಲಿರಿ. ಕಾಗುಣಿತ ದೋಷಗಳಿಲ್ಲದಂತೆ ಬರೆಯುವ ಶೇ.೧೦ರಷ್ಟೂ ಜನ ಕನ್ನಡ ಚಾನೆಲ್‌ಗಳಲ್ಲಿ ಇಲ್ಲ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ, ಅವರ ಜಂಬ ಎಷ್ಟಿದೆ ಎಂದರೆ, ತಾವಿಲ್ಲದೇ ಚಾನೆಲ್ ನಡೆಯದು ಎಂದು ನಂಬಿದ್ದಾರೆ.
ಒಂದೇ ಒಂದು ಅಕ್ಷರ ಬರೆಯದ ಪತ್ರಕರ್ತರಂತೂ ಧಂಡಿಯಾಗಿದ್ದಾರೆ. ಓದದ ಪತ್ರಕರ್ತರಂತೂ ಎಲ್ಲ ಕಡೆ ಸಾಮಾನ್ಯ ಬಿಡಿ.
ಇಂಥ ಜನರೇ ಸೇರಿಕೊಂಡು ಚಾನೆಲ್‌ಗಳನ್ನು, ಗುಣಮಟ್ಟವನ್ನು, ಸಾರ್ವಜನಿಕ ಅಭಿಪ್ರಾಯಗಳನ್ನು ಹದಗೆಡಿಸುತ್ತ ಹೋಗುತ್ತಾರೆ. ’ಪ್ರೆಸ್’ ಎಂಬ ಪೊಗರು ಬೇರೆ ಸೇರಿಕೊಂಡು ಪರಿಸ್ಥಿತಿ ಅಧ್ವಾನವೆದ್ದು ಹೋಗಿದೆ.
ನಾನೂ ಅವರಂತಾಗದಿರುವುದು ಹಾಗೂ ಆಗಾಗ, ಒಂದಿಷ್ಟು ಲೇಖನಗಳನ್ನು ಬರೆಯುವ ಮೂಲಕ ಈ ಬೇಸರ ನೀಗಿಸಿಕೊಳ್ಳುವುದೊಂದೇ ಸದ್ಯಕ್ಕಿರುವ ದಾರಿ.
- ಚಾಮರಾಜ ಸವಡಿ