'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
ನನ್ನ 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ' ಲೇಖನಕ್ಕೆ ಬಂದಿರುವ ಪ್ರತಿಕ್ರಿಯೆಗಳನ್ನು ಗಮನಿಸಿರುವೆ. ಆಸಕ್ತಿಯಿಂದ ಓದಿ ವಿವಿಧ ರೀತಿ ಹಾಗೂ ಭಾವಗಳೊಂದಿಗೆ ಪ್ರತಿಕ್ರಿಯಿಸಿರುವ ಎಲ್ಲರಿಗೂ ಧನ್ಯವಾದಗಳು. ಒಬ್ಬ ಓದುಗರು ಆಕ್ಷೇಪಿಸಿರುವಂತೆ, ನಾನು ನನ್ನ ಲೇಖನಗಳಿಗೆ ಬರುವ ಪ್ರತಿಕ್ರಿಯೆಗಳಿಗೆ ಸಾಮಾನ್ಯವಾಗಿ ಉತ್ತರಿಸುವುದಿಲ್ಲ ಎಂಬುದು ನಿಜ. ಇದಕ್ಕೆ ಎರಡು ಕಾರಣಗಳು. ಒಂದು, ಇನ್ನೋರ್ವ ಓದುಗರು ಈಗಾಗಲೇ ಸೂಚಿಸಿರುವಂತೆ ನನಗೆ ಬ್ಲಾಗ್ ತಂತ್ರಜ್ಞಾನ ತಿಳಿದಿಲ್ಲ. ಹಾಗೆ ನೋಡಿದರೆ, ಮೂಲತಃ ನಾನು ಈ 'ಬ್ಲಾಗ್'ಗಾಗಿಯೇ ಲೇಖನಗಳನ್ನು ಬರೆಯುತ್ತಿಲ್ಲ. 'ವಿಕ್ರಾಂತ ಕರ್ನಾಟಕ' ಸಾಪ್ತಾಹಿಕಕ್ಕಾಗಿ ಬರೆಯುತ್ತಿರುವ ಲೇಖನಗಳು ನನ್ನ ಸ್ನೇಹಿತರಾದ ಶ್ರೀನಿವಾಸ ಮೂರ್ತಿಯವರ ಪ್ರೇರೇಪಣೆ ಮತ್ತು ಸಹಾಯದಿಂದ 'ನಾಗಸಂಪದ' ಬ್ಲಾಗ್ನಲ್ಲಿ ಬರುತ್ತಿವೆಯಷ್ಟೆ. ಮತ್ತೋರ್ವ ಓದುಗರು ಕೇಳಿರುವ, ಪ್ರತಿಕ್ರಿಯೆಗೆ ಉತ್ತರಿಸದ ಲೇಖನಗಳಿಗೆ 'ಸಂಪದ'ದಲ್ಲಿ ಅವಕಾಶವೇಕೆ ('ಇದೇನು ಕಸದ ಬುಟ್ಟಿಯೆ?') ಎಂಬ ಪ್ರಶ್ನೆಗೆ ನಾನು ಉತ್ತರಿಸಲಾರೆ. ಸಂಬಂಧಪಟ್ಟವರು ಅವಕಾಶವಿಲ್ಲವೆಂದರೆ, ಈಗಲಿಂದೀಗಲೇ ನಿಲ್ಲಿಸಬಹುದು. ನನಗೇನೂ ಬೇಸರವಿಲ್ಲ.
ಎರಡನೇ ಕಾರಣ: ನಾನು ಗಮನಿಸಿರುವಂತೆ, ಅಂತರ್ಜಾಲದಲ್ಲಿ ನಡೆಯುವ ಬಹುತೇಕ ಚರ್ಚೆ ವೈಯುಕ್ತಿಕ ಮಟ್ಟದಲ್ಲಿರುತ್ತದೆ. ವಿಚಾರ ಪ್ರಚೋದಕವಾಗಿರುವುದಕ್ಕಿಂತ ಹೆಚ್ಚಾಗಿ, ವಾದದಲ್ಲಿ ಗೆಲ್ಲುವ ಹವಣಿಕೆಯೇ ಉದ್ದೇಶವಾಗಿರುವ 'ಚರ್ಚಾಕೂಟ'ದ ಶೈಲಿಯಲ್ಲಿರುತ್ತದೆ. ಅಥವಾ ವ್ಯಂಗ್ಯ - ವಿಡಂಬನೆ - ದುರುದ್ದೇಶಪೂರ್ವಕ ಟೀಕೆಗಳಿಂದ ತುಂಬಿದ ವಾಗ್ಯುದ್ಧದ ರೂಪದಲ್ಲಿರುತ್ತದೆ. ಇದರಿಂದ ನನಗೇನೂ ಪ್ರಯೋಜನವಾಗದಿರುವುದರಿಂದ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ನನ್ನ ಲೇಖನ ಮತ್ತು ಅದಕ್ಕೆ ಬರುವ ಪ್ರತಿಕ್ರಿಯೆಗಳು ಈ ಎರಡನ್ನೂ ಓದಿದ ಜನ ಒಂದು ತೀರ್ಮಾನಕ್ಕೆ ಬರಬಹುದೆಂದು ಸುಮ್ಮನಾಗುತ್ತೇನೆ. ಆದರೆ ನನ್ನ ಲೇಖನದ ಬಗ್ಗೆ ಪ್ರಾಮಾಣಿಕ ಅನುಮಾನಗಳನ್ನು ವ್ಯಕ್ತಪಡಿಸಿದಾಗ ಅಥವಾ ನನ್ನ ನಿಲುವುಗಳನ್ನು ಬದಲಿಸಿಕೊಳ್ಳಲು ಸಹಾಯಕವಾಗುವಂತಹ ಮಾಹಿತಿ ನೀಡಿ ವಿಮರ್ಶಿಸಿದಾಗ ನಾನು ಪ್ರತಿಕ್ರಿಯಿಸಿರುವೆ. ಇತ್ತೀಚಿನ ಉದಾಹರಣೆ: 'ಕಲ್ಯಾಣ ಕ್ರಾಂತಿ' ಕುರಿತ ನನ್ನ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ನೀಡಿದ ಉತ್ತರ.
ಇನ್ನು 'ಕಾಶ್ಮೀರದ ಬೆಂಕಿ' ಲೇಖನ ಕುರಿತ ಪ್ರತಿಕ್ರಿಯೆಗಳ ಕಡೆ ಈ 'ಬ್ಲಾಗ್'ಗೆ ಕಾರಣರಾಗಿರುವ ಶ್ರೀನಿವಾಸ ಮೂರ್ತಿಯವರು ನನ್ನ ಗಮನ ಸೆಳೆದಿರುವುದರಿಂದ ಮತ್ತು ಕೆಲವು ಓದುಗರು ತಮ್ಮ ಪ್ರಾಮಾಣಿಕ ಅನುಮಾನಗಳನ್ನು - ಕೆಲವರ ಭಾಷೆ ಅವರ ನಿಲುವಿಗನುಸರವಾಗಿ ಖಾರವಾಗಿದೆಯಾದರೂ - ವ್ಯಕ್ತಪಡಿಸಿರುವದರಿಂದ ಇವಕ್ಕೆ (ಮತ್ತೆ ಶ್ರೀನಿವಾಸ ಮೂರ್ತಿಯವರ ನೆರವಿನಿಂದಲೇ) ಉತ್ತರಿಸುವುದು ನನ್ನ ಕರ್ತವ್ಯವೆಂದು ಭಾವಿಸಿ ಬರೆಯಲು ಹೊರಟಾಗ ಚಾಮರಾಜ ಸವಡಿ ಎಂಬುವವರ ಎರಡನೇ ಪ್ರತಿಕ್ರಿಯೆ ಬಂದಿದೆ. ಇದರ ಶೈಲಿ ಮತ್ತು ಭಾವ ನನ್ನ ಉತ್ಸಾಹಕ್ಕೆ ತಣ್ಣೀರೆರಚಿದೆ ಎಂದೇ ಹೇಳಬೇಕು. ಇವರೀಗಾಗಲೇ ನನ್ನ ಬಗ್ಗೆ ತೀರ್ಮಾನಗಳಿಗೆ ಬಂದಿರುವುದರಿಂದ (ಹಾಗೆ ಬರಲು ನನ್ನ ಲೇಖನ ಅವರಲ್ಲಿ ಹುಟ್ಟಿಸಿರುವ ಆತಂಕಗಳೇ ಕಾರಣವಿರಬೇಕು), ಮುಖ್ಯವಾಗಿ ಅವರ ಮೊದಲ ಪ್ರತಿಕ್ರಿಯೆಗೇ ವಿವರವಾಗಿ - ಕಾಶ್ಮೀರ ಭಾರತಕ್ಕೆ ಸೇರಿದ ಪ್ರಕ್ರಿಯೆ ಮತ್ತು ಆನಂತರದ ಬೆಳವಣಿಗೆಗಳನ್ನು ಕುರಿತಂತೆ - ಪ್ರತಿಕ್ರಿಯಿಸಬೇಕೆಂದಿದ್ದ ನಾನು, ಅದರಿಂದ ಪ್ರಯೋಜನವಿಲ್ಲವೆಂದು ಇಲ್ಲಿ ಸಂಕ್ಷಿಪ್ತವಾಗಿ ಮಾತ್ರ ಪ್ರತಿಕ್ರಿಯಿಸುತ್ತಿರುವೆ.
ಬಹಳಷ್ಟು ಓದುಗರು - ಚಾಮರಾಜ ಸವಡಿಯವರೂ ಸೇರಿದಂತೆ - ಕಾಶ್ಮೀರದ ರಾಜಕೀಯ ಪ್ರಶ್ನೆಯನ್ನು ಅದರ ಕೋಮು ಆಯಾಮದಲ್ಲಿ ಮಾತ್ರ ಗ್ರಹಿಸಿ ಪ್ರತಿಕ್ರಿಯಿಸಿದಂತಿದೆ. ಉದಾಹರಣೆಗೆ, ಓರ್ವ ಓದುಗರು ದ.ಕ.ದಲ್ಲೆಲ್ಲೋ ನಡೆದಿದೆಯೆಂದು ಹೇಳಲಾದ ಪುಂಡಾಟಿಕೆಯ ಪ್ರಕರಣವನ್ನು ಕಾಶ್ಮೀರದ ಪ್ರಶ್ನೆಗೆ ಜೋಡಿಸಿ ಪ್ರಶ್ನೆಗಳನ್ನೆತ್ತಿರುವುದು. ಇವನ್ನು ಮುಸ್ಲಿಂ ಪುಂಡಾಟಿಕೆ ಎನ್ನುವುದಾದರೆ, ಇದೇ ಭಾವನೆಯಲ್ಲಿ ಹಿಂದೂ ಪುಂಡಾಟಿಕೆಯೆಂದು ಕರೆಯಬಹದಾದ ಎಷ್ಟು ಪ್ರಕರಣಗಳು ವರದಿಯಾಗಿಲ್ಲ? ಇವನ್ನೇನಿದ್ದರೂ ಕಾನೂನು ಮತ್ತು ಶಿಸ್ತಿನ ಪ್ರಕರಣಗಳಾಗಿ ಮಾತ್ರ ನೋಡುವುದು ಸಾಮಾಜಿಕ ಶಾಂತಿಯ ದೃಷ್ಟಿಯಿಂದ ಒಳ್ಳೆಯದು. ಇಲ್ಲದೇ ಹೋದರೆ, ಅದು ಮುಗಿಯದ (ಮಾನಸಿಕ ಮತ್ತು ಸಾಮಾಜಿಕ) ಅಶಾಂತಿಗೆ ಕಾರಣವಾದೀತು!
ಕಾಶ್ಮೀರ ವಿವಾದದ ಬಗ್ಗೆ ನಾವು ಸಾಹಿತ್ಯ ಕೃತಿಯೊಂದಕ್ಕೆ ಅಥವಾ ವೈಚಾರಿಕ ಪ್ರಮೇಯವೊಂದಕ್ಕೆ ಸ್ಪಂದಿಸಿದಂತೆ ಭಾವನಾತ್ಮಕ ನೆಲೆಯಲ್ಲಿ ಸ್ಪಂದಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಏಕೆಂದರೆ, ಅದೊಂದು ಲಕ್ಷಾಂತರ ಜನರ ಸುಖ - ದುಃಖಗಳನ್ನು ಮತ್ತು ಸಾವು - ಬದುಕುಗಳನ್ನು ನಿರ್ಧರಿಸುವ ಜೀವಂತ ವಾಸ್ತವದ ಪ್ರಶ್ನೆ. ಹಾಗಾಗಿ, ಅದನ್ನು ಮಾನವೀಯವಾಗಿ ಹೇಗೆ ಪರಿಹರಿಸಿ ಹೆಚ್ಚು ಜನರ ಸುಖ - ನೆಮ್ಮದಿಗಳಿಗೆ ಹೇಗೆ ಕಾರಣವಾಗಬಹುದು ಎಂಬ ಕಡೆಗೆ ನಮ್ಮ ಗಮನವಿರಬೇಕೇ ಹೊರತು, ರಾಷ್ಟ್ರೀಯತೆಯ ಭಾವಾವೇಶದೊಂದಿಗೋ ಅಥವಾ ನಾವು ಸೇರಿದ ಕೋಮಿನ ಬಗೆಗಿನ ಅಭಿಮಾನದಿಂದಲೋ ವಾದ ಮಾಡುವುದರಿಂದ ನಂನಮ್ಮ ಅಹಂಕಾರಗಳನ್ನು ತಣಿಸಿಕೊಳ್ಳುವುದರ ಹೊರತಾಗಿ ಮತ್ತಾವ ಪ್ರಯೋಜನವೂ ಆಗದು. ಹೆಚ್ಚೆಂದರೆ, ಅಲ್ಲಿನ ಹಿಂಸಾಚಾರದಲ್ಲಿ - ಭಯೋತ್ಪಾದನೆಯಲ್ಲ್ಲ್ಲಿ ಕೊನೆಗೂ ಯಾರು ಗೆಲ್ಲುವರೋ ಅವರದೇ (ಅರಣ್ಯ) ನ್ಯಾಯ ಎಂಬಂತಹ ಸಾಮಾಜಿಕ ಪರಿಸ್ಥಿತಿಗೆ ನಮ್ಮದೂ ಸಣ್ಣ ಕೊಡುಗೆಯನ್ನು ಸಲ್ಲಿಸಿದಂತಾಗುತ್ತದಷ್ಟೆ!
ಮೊದಲಾಗಿ, ನಾವು ಕಾಶ್ಮೀರದ ಬಗ್ಗೆ ಮಾತನಾಡತೊಡಗುವ ಮುನ್ನ ಅರಿಯಬೇಕಾದುದೇನೆಂದರೆ, ಆ ರಾಜ್ಯ ಮಿಕ್ಕೆಲ್ಲ ರಾಜ್ಯಗಳಂತೆ ನಮ್ಮ ರಾಷ್ಟ್ರೀಯತೆಯ ಸಹಜ ಕೂಸಲ್ಲ. ಅದಕ್ಕೆ ತನ್ನದೇ ಆದ ಸಂವಿಧಾನವಿದೆ ಹಾಗೂ ಅದರಡಿ ತನ್ನದೇ ಆದ ಸಂಸದೀಯ ಪ್ರಜಾಪ್ರಭುತ್ವದ ಸಂಸ್ಥೆಗಳು ಮತ್ತು ಕಾನೂನುಗಳಿವೆ. ಭಾರತದ ಸಂವಿಧಾನದಡಿ ಆ ರಾಜ್ಯಕ್ಕೆ 370ನೇ ಕಲಮಿನ ಪ್ರಕಾರ ವಿಶೇಷ ಸ್ಥಾನಮಾನ ನೀಡಿ ಈ ಸ್ವಾಯತ್ತತೆ ಕಲ್ಪಿಸಲಾಗಿದೆ. ಈ ರಾಜ್ಯ ರಾಷ್ಟ್ರ ವಿಭಜನೆಗೆ ಆಧಾರವಾಗಿದ್ದ ಧಾರ್ಮಿಕ ಬಹುಸಂಖ್ಯಾತತೆಯ ಆಧಾರದ ಮೇಲೆ ಸಹಜವಾಗಿಯೇ ಪಾಕಿಸ್ತಾನಕ್ಕೆ ಸೇರಬೇಕಿತ್ತು ಅಥವಾ ಸ್ವತಂತ್ರ ರಾಷ್ಟ್ರವಾಗುಳಿಯಲು (ಇದಕ್ಕೆ ಗಣನೀಯ ಸಂಖ್ಯೆಯ ಹಿಂದೂಗಳ ಬೆಂಬಲವಿತ್ತು ಎಂಬುದೂ ಗಮನಾರ್ಹ) ಪ್ರಯತ್ನಿಸಬಹುದಿತ್ತು ಎಂಬುದನ್ನೂ ನಾವು ನೆನಪಿಡಬೇಕು. ಆದರೂ, ಚರಿತ್ರೆಯ ಆಕಸ್ಮಿಕದಿಂದಾಗಿ - ಅದರ ಹಿಂದೂ ದೊರೆಯ ನಿರ್ಧಾರ ಮತ್ತು ಅವರಡಿ ಪ್ರಧಾನಿಯಾಗಿದ್ದ ಜಾತ್ಯತೀತ ಮುಸ್ಲಿಂ ನಾಯಕ ಷೇಕ್ ಅಬ್ದುಲ್ಲಾರ ಮುತ್ಸದ್ದಿತನದಿಂದಾಗಿ - ಅದು ಭಾರತದ ಒಕ್ಕೂಟಕ್ಕೆ ಸೇರಿತೆಂದರೆ, ಹಾಗೆ ಸೇರಲು ಮಾಡಿಕೊಂಡ ಒಪ್ಪಂದವನ್ನು ನಾವು ಗೌರವಿಸುವ ನಾಗರಿಕ ಪ್ರಜೆಗಳಾಗಿ; ನಂತರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅದರ ವಿವರಗಳ ಈಗಿನ ಸಾಧುತ್ವದ ಅಥವಾ ಅಗತ್ಯ ಬದಲಾವಣೆಗಳ ಬಗ್ಗೆ ಮಾತನಾಡಬೇಕು. ಬದಲಿಗೆ ಕಾಶ್ಮೀರವೊಂದು ನಮ್ಮ ವಸಾಹತು ಎಂಬಂತೆ ಏಕಪಕ್ಷೀಯವಾಗಿ, 'ಅರವತ್ತು ವರ್ಷಗಳ ನಂತರವೂ ಅದನ್ನು ಸ್ವಾಯತ್ತವಾಗಿ ಇರಿಸುವ ಅಪಾಯ'ದ ಬಗ್ಗೆ (ಸವಡಿಯವರಂತೆ)ಮಾತನಾಡತೊಡಗಿರುವವರ ಕಾರ್ಯಕ್ರಮವಾದರೂ ಏನು? ಇಂತಹ ರಾಷ್ಟ್ರೀಯತೆಯ ಸ್ವಯಂಘೋಷಿತ "ಕಾವಲುಗಾರ"ರೇ ರಾಷ್ಟ್ರಕ್ಕೆ ಹೆಚ್ಚು ಅಪಾಯಕಾರಿ ಎಂದು ನಾನು ಭಾವಿಸಿದ್ದೇನೆ. ಕಳೆದ ಅರವತ್ತು ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ಇಂತಹ ಘಾತುಕ ರಾಷ್ಟ್ರೀಯತೆಯೇ, ಕಾಶ್ಮೀರವನ್ನು ಅದರ ತುಂಬಾ ಮಿಲಿಟರಿ ಇಟ್ಟುಕೊಂಡೇ ನಿರ್ವಹಿಸುವಂತಹ ಅಂತಾರಾಷ್ಟ್ರೀಯ ಮುಜುಗರದ ಪರಿಸ್ಥಿತಿಯನ್ನು ಉಂಟುಮಾಡಿರುವುದು! ಇದರಿಂದಾಗಿ ಅಲ್ಲಿ ಪ್ರತ್ಯೇಕತಾವಾದಿಗಳ ಮತ್ತು ಉಗ್ರರ ಅಬ್ಬರ ಹೆಚ್ಚುತ್ತಾ ಹೋಗಿ, ಇಂದು ಕಾಶ್ಮೀರ ನಮ್ಮ ಕೈಬಿಟ್ಟು ಹೋಗುವುದೇನೋ ಎಂಬ ಆತಂಕ ಹುಟ್ಟಿಸಿರುವುದು... ಇಂತಹವರು ನಮ್ಮನ್ನು ಹುಸಿ ಜಾತ್ಯತೀತವಾದಿಗಳಂದೋ ಕೋಮುವಾದಿ ಕನ್ನಡಕ ಹಾಕಿಕೊಂಡಿರುವವರೆಂದೋ ಕರೆಯುವುದು ಎಂತಹ ವಿಪರ್ಯಾಸ!
ಮಿಕ್ಕಂತೆ ಸವಡಿಯವರು ಅಮರನಾಥ ದೇವಸ್ಥಾನ ಮಂಡಳಿಯ ಬಗ್ಗೆ ಕೊಟ್ಟಿರುವ ಮಾಹಿತಿ - ಸಂಬಂಧಪಟ್ಟ ಮೂಲ ಕಾಯಿದೆಯ ವಿವರಗಳು ಮತ್ತು ನ್ಯಾಯಾಲಯದ ತೀರ್ಪಿನ ವಿವರಗಳು - ಅವರ ವಾದಕ್ಕೇ ವಿರುದ್ಧವಾಗಿರುವುದನ್ನು ಓದುಗರು ಗಮನಿಸಬಹುದು. ಇವರು ಫರೂಕ್ ಅಬ್ದುಲ್ಲಾರ ಮುಖ್ಯಮಂತ್ರಿತ್ವ ಕಾಲದಲ್ಲಿ ಅನುಮೋದಿತವಾದ 2000ರ ಅಮರನಾಥ ದೇಗುಲ ಕಾಯ್ದೆಯ ವಿವರಗಳನ್ನು ನೀಡಿ ಇದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಸರಿಯಾಗಿಯೇ ಇದೆ. ಅದರೆ ಅದನ್ನು ಇತ್ತೀಚೆಗೆ ತಿದ್ದಿ, ದೇವಸ್ಥಾನ ಮಂಡಳಿಯನ್ನು ಕೋಮುವಾರು ಆಧಾರದ ಮೇಲೆ ಪುನಾರಚಿಸಿ (ಹಜ್ ಯಾತ್ರೆ ವಿದೇಶಾಂಗ ಖಾತೆಯಡಿ ನಡೆಯುತ್ತಿದ್ದು, ಸಂಬಂಧಪಟ್ಟ ಖಾತೆ ಅಥವಾ ಇಲಾಖೆಯ ಮುಖ್ಯಸ್ಥರು ಮುಸ್ಲಿಮರೇ ಆಗಿರಬೇಕೇಂಬ ನಿಯಮವೇನೂ ಇಲ್ಲ!) ಮೂಲ ಕಾಯ್ದೆಯಲ್ಲಿ ತಾತ್ಕಾಲಿಕ ವ್ಯವಸ್ಥೆಗಾಗಿ ಎಂದಿದ್ದ ಭೂಮಿಯನ್ನು ಶಾಶ್ವತ ವ್ಯವಸ್ಥೆಗಾಗಿ ಮಂಜೂರು ಮಾಡುವಂತೆ ಆಜ್ಞೆ ಹೊರಡಿಸಿದ್ದು ಮಾತ್ರ ತಪ್ಪಾಗಿದೆ! ಅಲ್ಲದೆ ಇದು, ಇವರು ತಮ್ಮ ವಾದ
ಸಮರ್ಥನೆಗಾಗಿ ಉಲ್ಲೇಖಿಸಿರುವ ನ್ಯಾಯಾಯಲಯದ ತೀರ್ಪಿಗೂ ವಿರುದ್ಧವಾಗಿದೆ ಎಂಬುದನ್ನೂ ಗಮನಿಸಬಹುದು!
ದೇವಸ್ಥಾನ ಮಂಡಳಿಗೆ ಭೂಮಿಯ ಶಾಶ್ವತ ವರ್ಗಾವಣೆಯಾಗದಿರುವುದರಿಂದ ಅಮರನಾಥ ಯಾತ್ರೆಗೆ ಯಾವುದೇ ತೊಂದರೆಯಾಗಿತ್ತೆ? ಈ ಬಗ್ಗೆ ಅಧಿಕೃತ ದೂರುಗಳಿದ್ದವೆ? ಇಲ್ಲವಲ್ಲ! ಬದಲಿಗೆ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಯಾತ್ರೆಯನ್ನು - ಅಲ್ಲಿ ಶಾಶ್ವತ ವಸತಿ ಅಥವಾ ಕಛೇರಿಗಳನ್ನು ನಿರ್ಮಿಸಲು ಅವಕಾಶ ಕೊಡದೆ - ಕಾಲ ಮತ್ತು ಸಂಖ್ಯೆಯ ನೆಲೆಯಲ್ಲಿ ಸೀಮಿತಗೊಳಿಸಬೇಕೆಂದು ಸರ್ಕಾರವೇ ರಚಿಸಿದ್ದ ಸಮಿತಿ ಶಿಫಾರಸ್ ಮಾಡಿತ್ತಲ್ಲ? ಆದರೂ ಭೂಮಿ ವರ್ಗಾವಣೆಯ ದಿಢೀರ್ ನಿರ್ಧಾರವೇಕೆ? ಇದರ ಉದ್ದೇಶವಾದರೂ ಏನು? ಈ ಬಗೆಗಿನ ಅನುಮಾನಗಳೇ ಇಂದು ಕಾಶ್ಮೀರಕ್ಕೆ ಮತ್ತು ನಂತರ ಜಮ್ಮುವಿಗೆ ಬೆಂಕಿ ಹಚ್ಚಿರುವುದು. ನಿಜ, ಕಾಶ್ಮೀರದ ನಿರ್ವಹಣೆಯ ಕಷ್ಟದಿಂದಾಗಿ ಜಮ್ಮುವಿಗೆ ಅಭಿವೃದ್ಧಿಯ ನೆಲೆಯಲ್ಲಿ ಅನ್ಯಾಯವಾಗಿದೆ. ಆದರೆ ಅದನ್ನು ಪ್ರತಿಭಟಿಸಲು ಅಮರನಾಥ ಭೂಮಿ ವರ್ಗಾವಣೆ ಸಮಸ್ಯೆಯನ್ನು ಎತ್ತಿಕೊಂಡು ಅದನ್ನು ಜಟಿಲಗೊಳಿಸುವ, ಮತೀಯಗೊಳಿಸುವ ಹಾಗೂ ಜಮ್ಮು ಮತ್ತು ಕಾಶ್ಮೀರಗಳ ನಡುವೆ ಈಗಾಗಲೇ ಹದಗೆಟ್ಟಿರುವ ಭಾವನಾತ್ಮಕ ಸಂಬಂಧವನ್ನು ಇನ್ನಷ್ಟು ಹದಗೆಡಿಸುವ ಯತ್ನ ಮಾಡುವುದು ರಾಷ್ಟ್ರಘಾತುಕ ಕೃತ್ಯವೇ ಆಗುತ್ತದೆ. ಇದನ್ನೇ ನಾನು ನನ್ನ ಮೂಲ ಲೇಖನದಲ್ಲಿ ಹೇಳಿದ್ದುದು.
ಈಗ ರಾಷ್ಟ್ರೀಯರ ಮುಂದಿರುವ ಪ್ರಶ್ನೆ ಒಂದೇ: ಭೌಗೋಳಿಕ ಮತ್ತು ಸಾಂವಿಧಾನಿಕ ಭಾರತದ ಕಿರೀಟದಂತಿರುವ ಕಾಶ್ಮೀರವನ್ನು ಉಳಿಸಿಕೊಳ್ಳುವುದು ಹೇಗೆ? ಕಳೆದ ಐವ್ವತ್ತೈದು ವರ್ಷಗಳಲ್ಲಿ (ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟಕ್ಕೆ 'ಅಧಿಕೃತ'ವಾಗಿ ಸೇರಿದ್ದು 1952ರಲ್ಲಿ - ಸ್ವಾತಂತ್ರ್ಯ ಘೋಷಣೆಯ ಐದು ವರ್ಷಗಳ ಮತ್ತು ನಮ್ಮ ಸಂವಿಧಾನ ಜಾರಿಗೆ ಬಂದ ಎರಡು ವರ್ಷಗಳ ನಂತರ) ಪ್ರತ್ಯೇಕತಾವಾದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುವಂತೆ ಮಾಡಿ, ಬಹು ಹಿಂದೆಯೇ ವಿಶ್ವಸಂಸ್ಥೆಯಡಿಯಲ್ಲಿ ಅದನ್ನೊಂದು ಜನಮತಗಣನೆಯ ಮೂಲಕ ಇತ್ಯರ್ಥವಾಗಬೇಕಾದ ಅಂತಾರಾಷ್ಟ್ರೀಯ ವಿವಾದಿತ ಪ್ರದೇಶವನ್ನಾಗಿ ಪರಿವರ್ತಿಸಿಕೊಂಡಿರುವ ಈವರೆಗಿನ ಅಪ್ರಬುದ್ಧ ಪಿತೂರಿ ರಾಜಕಾರಣದ ಮತ್ತು ಬಲಪ್ರಯೋಗದ ಕಾಶ್ಮೀರ ನೀತಿಯನ್ನು ಮುಂದುವರಿಸಿಕೊಂಡು ಹೋಗಬೇಕೆ? ಅಥವಾ ನಮ್ಮನ್ನು ಸೇರಿಕೊಳ್ಳುವ ಮುನ್ನ ಆ ಜನಕ್ಕೆ ಕೊಟ್ಟ ವಚನದಂತೆ ಅವರ ಸ್ವಾಯತ್ತತೆಗೆ ಭಂಗ ಬರದ ರೀತಿಯಲ್ಲಿ ನಡೆದುಕೊಳ್ಳುತ್ತಾ, ಆ ವಿಶ್ವಾಸದ ವಾತಾವರಣದಲ್ಲಿ ಮಾತುಕತೆ ನಡೆಸುವ ಮೂಲಕವೇ ಆ ರಾಜ್ಯವನ್ನು ನಮ್ಮ ಒಕ್ಕೂಟದ ಸಾಮಾನ್ಯ ರಾಜ್ಯವನ್ನಾಗಿ ಪರಿವರ್ತಿಸಿಕೊಳ್ಳುವ ಪ್ರಜಾಸತ್ತಾತ್ಮಕ ಮುತ್ಸದ್ದಿತನದ ನೀತಿಯನ್ನು ಅನುಸರಿಸಬೇಕೆ? ಇದನ್ನು ಆದಷ್ಟು ಬೇಗ ತೀರ್ಮಾನಿಸುವ ಕಾಲವೀಗ ಬಂದಿದೆ.
'ಕಾಶ್ಮೀರ ನಮ್ಮದು! ನಾವು ಅದನ್ನು ಬಿಡೆವು!!' ಅಥವಾ 'ಪಾಕಿಸ್ತಾನಕ್ಕೆ ಹೋಗಬಯಸುವವರನ್ನು ಇಲ್ಲಿಂದ ಒದ್ದೋಡಿಸಿ!' ಎಂದು ಎದೆ ಬಡಿದುಕೊಳ್ಳುತ್ತಾ ಇಲ್ಲಿ ಅದೆಷ್ಟೇ ಕೂಗಿಕೊಂಡರೂ, ಅಲ್ಲಿನ ವಾಸ್ತವವೇನೂ ಬದಲಾಗದು. ಇಂತಹ ಕೂಗುಮಾರಿಗಳ ಒತ್ತಡದಿಂದಾಗಿಯೇ ಅವರು ಪಾಕಿಸ್ತಾನಕ್ಕೆ ಹೋಗುವ ಅಥವಾ ಸ್ವತಂತ್ರ ರಾಷ್ಟ್ರ ರಚಿಸಿಕೊಳ್ಳುವ ಅವಕಾಶ ಉಂಟಾದರೆ, ನೂರಾರು ವರ್ಷಗಳಿಂದ ವಾಸಿಸುತ್ತಾ ಬಂದಿರುವ ತಮ್ಮ ನೆಲದೊಂದಿಗೇ ಹೋಗಲು ಬದ್ಧರಾದವರು ಅವರು ಎಂಬುದು ಕಳೆದ ಐವ್ವತ್ತು ವರ್ಷಗಳಿಂದ ಅಲ್ಲಿ ನಿರಂತರವಾಗಿ ನಡೆದಿರುವ ಪ್ರತಿಭಟನೆ ಸಾಬೀತು ಮಾಡಿದೆ. ಇದನ್ನು ಶ್ರೀನಗರದಲ್ಲಿ ವಿಶ್ವಸಂಸ್ಥೆಯ ಮಿಲಿಟರಿ ಕಛೇರಿ ಇರುವಂತಹ ಪರಿಸ್ಥಿತಿ ನಿರ್ಮಿಸಿಕೊಂಡಿರುವ ನಾವು, ಬಲಪ್ರಯೋಗದ ಮೂಲಕ ಹತ್ತಿಕ್ಕಲೂ ಸಾಧ್ಯವಿಲ್ಲ ಎಂಬುದು ನೆನಪಿರಲಿ. ಹಾಗೇನಾದರೂ ಸಾಧ್ಯವಿದ್ದಲ್ಲಿ 1948ರಲ್ಲೇ ಪಾಕಿಸ್ತಾನದ ಬುಡಕಟ್ಟು ಜನ ಆಕ್ರಮಿಸಿಕೊಂಡು; ಪಾಕಿಸ್ತಾನದ ಸಹಕಾರದಿಂದ ಅದರಲ್ಲಿ ಚೀನಾಕ್ಕೂ ಒಂದಿಷ್ಟು ನೆಲ ಬಿಟ್ಟುಕೊಟ್ಟು ಸ್ಥಾಪಿತವಾಗಿರುವ - ಮೂಲ ಕಾಶ್ಮೀರದ ಮೂರನೇ ಒಂದು ಭಾಗದಷ್ಟಿರುವ-'ಆಝಾದ್ ಕಾಶ್ಮೀರ'ವನ್ನು ನಾವು ಮರುವಶಪಡಿಸಿಕೊಳ್ಳಬಹುದಿತ್ತಲ್ಲ? ಇದನ್ನು ನಾವು 'ಪಾಕ್ ಆಕ್ರಮಿತ
ಕಾಶ್ಮೀರ'ವೆಂದು ಕರೆಯುತ್ತಲೇ ಅದರ ರಾಜಧಾನಿ ಮುಝಫರಾಬಾದ್‌ಗೆ ಸಂಬಂಧ ಸುಧಾರಣೆಗಳ ಹೆಸರಿನಲ್ಲಿ ಬಸ್ ಸಂಪರ್ಕ ಕಲ್ಪಿಸಿಕೊಂಡು, ಅದಕ್ಕೆ ಅರ್ಧ ಮಾನ್ಯತೆಯನ್ನೂ ನೀಡಿದ್ದೇವಲ್ಲ?
ಹಾಗಾಗಿ, ನೀತಿ ಸ್ಥಿತ್ಯಂತರ ಅನಿವಾರ್ಯವಾಗಿರುವ ಇಂತಹ ಸಂದರ್ಭದಲ್ಲಿ ನಾವು ಯಾವುದೇ ನಿಲುವು ರೂಪಿಸಿಕೊಳ್ಳುವ ಮುನ್ನ ಅದು ಅನುಷ್ಠಾನ ಸಾಧ್ಯವೇ; ಸಾಧ್ಯವೇ ಆಗುವುದಾದರೆ, ಅದರ ಆತ್ಯಂತಿಕ ಪರಿಣಾಮಗಳೇನು ಎಂಬುದನ್ನು ಯೋಚಿಸಬೇಕು.
ಇಷ್ಟು ಹೇಳಿದ ನಂತರವೂ ನಾನು ಧಿಕ್ಕಾರಕ್ಕೆ ಅರ್ಹನಾಗಿದ್ದರೆ, ಅದನ್ನು ಹೆಮ್ಮೆ - ಸಂತೋಷಗಳಿಂದಲೇ ಸ್ವೀಕರಿಸುವೆ.
- Login or register to post comments
- 758 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಲೇಖಕರಲ್ಲಿ ನನ್ನದೊಂದು ಪ್ರಶ್ನೆ... ಹಿಂದುಗಳ ಅತಿ ಮುಖ್ಯ ಪವಿತ್ರ ಕ್ಷೇತ್ರಗಳಿರುವ,ಹಿಂದು ರಾಜ ರಾಜನಾಗಿದ್ದ ಹಿಮಾಲಯದ ತಪ್ಪಲು... ಭಾರತದ ವಿಭಜನೆಯ ಕಲ್ಪನೆಯೇ ಇಲ್ಲದ ಸಮಯದಲ್ಲಿ,ವಲಸೆಯ ಕಾರಣವಿಲ್ಲದಿರುವ ಸ್ವಾತಂತ್ರ್ಯದ ಪೂರ್ವದಲ್ಲಿ ಮುಸ್ಲಿಮ್ಮರು ಬಹುಸಂಖ್ಯಾತರಾಗಿದ್ದುದು ಯಾವಾಗ. ಮತ್ತು ಅಖಂಡ ರಾಷ್ಟ್ರದ ಕಲ್ಪನೆಗೆ ಈಗಿರುವ ಎಲ್ಲಾ ರಾಜ್ಯಗಳ ಆಗಿನ ರಾಜರ ಒಪ್ಪಿಗೆ ಇತ್ತೆ ...? ಸ್ವತಂತ್ರ ರಾಷ್ಟ್ರದ ಆಸೆ ಕಾಶ್ಮೀರಿಗಳಿಗೆ ಮಾತ್ರ ಇತ್ತೆ...?ದೇಶದ ಇತರೆ ರಾಜ್ಯದವರಿಗೆ ಇರಲಿಲ್ಲವೆ...?ಆರೀತಿ ಅಲ್ಲಿನ ಭಯೋತ್ಪಾದಕರಿಗೆ ಬೆದರಿ ಅವ್ರ ಕೈಗೆ ಕಾಶ್ಮೀರವನ್ನು ಒಪ್ಪಿಸುವುದಾದರೆ ನಾಗಲ್ಯಾಂಡನ್ನು ನಾಗ ಬಂಡುಕೋರರಿಗೆ, ತೆಲಂಗಾಣವನ್ನು ಅಲ್ಲಿನ ನಕ್ಸಲೈಟ್ಸ್ ಗಳಿಗೆ ಒಪ್ಪಿಸಬೆಕೆ.... ಯಾಕೆಂದರೆ ಅವ್ರೆಲ್ಲರು ಅಲ್ಲಿನ ಮೂಲವಾಸಿಗಳೆ........ ಕಾಶ್ಮೀರದ ಭಯೋದ್ಪಾದಕರಂತೆ ವಲಸೆ ಬಂದವರಲ್ಲ...
ಮಾನ್ಯ ನಾಗಭೂಷಣರೆ,
ಈ ಬರಹ ಓದುತ್ತ ಹೋದಂತೆ ನನಗಾದದ್ದು ಒಂದಷ್ಟು ಆಶ್ಚರ್ಯ, ಒಂದಷ್ಟು ಬೇಸರ, ಒಂದಷ್ಟು ಸಂತಸ, ಒಂದಷ್ಟು ಗಾಬರಿ. ಏಕೆಂದು ವಿವರವಾಗಿ ಬರೆಯುವೆ. ಆದರೆ ಎಲ್ಲದಕ್ಕಿಂತ ಮೊದಲು:
ಸಂಪದವನ್ನು ಬ್ಲಾಗು ಅಥವ ಬ್ಲಾಗುಗಳ ಸಮೂಹ ಎಂದು ಕರೆದಾಗ ಬಹಳ ಬೇಸರಪಟ್ಟುಕೊಳ್ಳುವವರಲ್ಲಿ ನಾನು ಮೊದಲಿಗ. ಏಕೆಂದರೆ ಸಂಪದ "ಕಮ್ಯೂನಿಟಿ ಬ್ಲಾಗ್ಸ್ ಉಳ್ಳ" ಸಮುದಾಯ ಎಂಬಂತೆ ನೋಡುತ್ತ, ಹಾಗಿರಬೇಕೆಂದುಕೊಂಡು ನಡೆಸುತ್ತ ಬಂದಿದ್ದೇವೆ. ಸಮುದಾಯದಲ್ಲಿ ಒಂದಷ್ಟು ಮಟ್ಟಿಗೆ ಮುಕ್ತ ಮಾತುಕತೆಗೆ ಅವಕಾಶ ನೀಡಿ ಎಲ್ಲರೂ ತಮ್ಮ ಅಭಿಪ್ರಾಯ ಕಲೆ ಹಾಕುವಂತೆ ಮಾಡಲಾಗಿದೆ. ಇಲ್ಲಿ ಬರುವ ಪ್ರತಿಕ್ರಿಯೆಗಳು ಪ್ರತಿಕ್ರಿಯೆಗಳೇ ಅಲ್ಲ, ಬದಲಿಗೆ ಸಮುದಾಯದಲ್ಲಿನ *ಮಾತುಕತೆಗಳು*. ನಾಲ್ಕಾರು ಜನ ಒಟ್ಟಾಗಿ ಮಾತಾನಾಡಿಕೊಳ್ಳುತ್ತಿರುವಂತೆ ಇದು, ಆದರೆ virtual ಜಗತ್ತಾದ ಸೈಬರ್ ಸ್ಪೇಸ್ ನಲ್ಲಿ ಇವು ನಡೆಯುತ್ತಿದೆ ಅಷ್ಟೆ.
ಹಲವರು ಒಂದೆಡೆ ಕುಳಿತು ಮಾತನಾಡುತ್ತಿರುವಾಗ ನಮಗಿಷ್ಟವಿಲ್ಲದ ಸಂಗತಿ ಚರ್ಚೆಗೆ ಬಂದರೆ ನಾವು ಏನು ಮಾಡುತ್ತೇವೆ? ಆ ಗುಂಪಿನಲ್ಲೇ ನಮ್ಮ ಮಾತಿನ ಕಡೆ ಗಮನ ಕೊಡುತ್ತಿರುವವರೆಡೆ ತಿರುಗಿ ಮತ್ತೊಂದು ಮಾತು ಪ್ರಾರಂಭಿಸುತ್ತೇವೆ ಅಲ್ಲವೆ? ನಮಗೆ ಒಪ್ಪಾಗದ ಮಾತು ಯಾರಾದರೂ ಹೇಳಿದರೆ ಅವರನ್ನ ignore ಮಾಡುತ್ತೇವೆ ಅಲ್ಲವೆ? ಚರ್ಚೆಗಿಳಿದರೆ ಪಾಸಿಟಿವ್ ಆಗಿ ತೆಗೆದುಕೊಳ್ಳುವರು ಎಂದೆನಿಸಿದರೆ ಅವರ ಮಾತನ್ನ counter ಮಾಡುತ್ತೇವಲ್ಲವೆ? ಅಥವ ಸ್ನೇಹದಿಂದ ಏನೋ ಹಾಸ್ಯವೆಂಬಂತೆ ಆಡಿದ ಮಾತನ್ನು ಕೇಳಿ ನಕ್ಕು ಸುಮ್ಮನಾಗುತ್ತೇವೆ - ಹೀಗೆ ಬೇರೆ ಬೇರೆ ರೀತಿಯ notionsಏ ಪ್ರತಿಕ್ರಿಯೆಗಳಾಗಿಬಿಡುತ್ತವೆ.
ಆದರೂ ಮಾತುಗಳಂತಿರುವ ಬರೆದ ಪ್ರತಿಕ್ರಿಯೆಗಳು ಸೈಬರ್ ಜಗತ್ತಿನ ತನ್ನ ರೂಪಕ್ಕೆ ಇನ್ನೂ ಎಲ್ಲರನ್ನೂ ಹೊಂದಿಸಿಕೊಂಡಿಲ್ಲದಿರುವ ಈಗಿನ ಸಮಯದಲ್ಲಿ ಸುಮಾರು challenging ಆಗಿಬಿಡಬಹುದು, ಪ್ರತಿಕ್ರಿಯೆಗಳು ಸ್ವಲ್ಪ over critical ಅನಿಸಿಬಿಡಬಹುದು ಕೆಲವೊಮ್ಮೆ ತೀರ inappropriate ಅನಿಸಿಬಿಡಬಹುದು. inappropriate ಇದ್ದದ್ದನ್ನು ಇಗ್ನೋರ್ ಮಾಡುವುದು, over critical ಅನಿಸಿದ್ದನ್ನು ಒಂದೊಮ್ಮೆ ಮನಸಿಗೆ ಹಾಕಿಕೊಂಡು ಸರಿ ಎನಿಸಿದರೆ ತೆಗೆದುಕೊಳ್ಳೋದು ಇಲ್ಲವಾದರೆ ಬಿಟ್ಟುಬಿಡುವುದು - ಹೀಗೆ ಸೈಬರ್ ಜಗತ್ತಿನಲ್ಲಿ ಭಾಗವಹಿಸುತ್ತಿರುವವರಿಗೆ ಸಮಯ ಕಳೆದಂತೆ ಕಲಿಕೆಯೆಂಬಂತೆಯೇ ಆಗಿಬಿಡುತ್ತದೆ. ಅಂತರ್ಜಾಲದಲ್ಲಿ ಎಲೆಲ್ಲೂ ಮಾತುಕತೆ ಈಗ ನಿತ್ಯ ಜೀವನ ಶೈಲಿಯಂತಾಗಿರುವುದರಿಂದ ನಿಧಾನವಾದರೂ ನಾವೆಲ್ಲರೂ ಒಂದಲ್ಲ ಒಂದು ದಿನ ಅದಕ್ಕೆ ಒಗ್ಗಿಕೊಳ್ಳಲೇಬೇಕಾದ ಸ್ಥಿತಿ ಬರುವುದು.
ಇವೆಲ್ಲದರ ನಡುವೆ ಚರ್ಚೆ ತೀರ ವೈಯಕ್ತಿಕವೆಂಬಂತೆ ತಿರುಗಿದರೆ ನನಗೆ ತಿಳಿಸಿ ಹೌದೆನಿಸಿದರೆ ಸೂಕ್ತ ಕ್ರಮ ಕೈಗೊಳ್ಳುವೆ.
ಉಳಿದಂತೆ ಸಂಪದ ಒಂದು ಮುಕ್ತ ಸಮುದಾಯ. ಇಲ್ಲಿ ಎಲ್ಲರಿಗೂ ಬರೆಯುವ ಅವಕಾಶವಿದೆ. ಯಾರೂ ಯಾರಿಗೂ (ಹೆಚ್ಚು) ಬೇಸರವಾಗದಂತೆ ನಡೆದುಕೊಂಡು ಕನ್ನಡವನ್ನ ಹೀಗೇ mainstream ಆಗಿ ಬಳಕೆಗೆ ತಂದರೆ ಈ ಸಮುದಾಯ ನಡೆಸಿಕೊಂಡು ಹೋಗಲು ನಡೆದಿರುವ ಕಸರತ್ತು ಸಾರ್ಥಕವಾದಂತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಮಾನ್ಯ ಎಚ್‌ಪಿಎನ್ ಅವರೇ,
ಸಂಪದ ಕುರಿತ ನಿಮ್ಮ ನಿಲುವನ್ನು ಪ್ರಜ್ಞಾವಂತರು ಎಂದು ಕರೆಸಿಕೊಳ್ಳಲು ಇಷ್ಟಪಡುವ ಡಿಎಸ್ ನಾಗಭೂಷಣ ಅವರಂಥರಿಗೆ ಮತ್ತೆ ಸ್ಪಷ್ಟಪಡಿಸುವ ಅನಿವಾರ್ಯತೆ ಉಂಟಾಗಿದ್ದು ನಿಜಕ್ಕೂ ವಿಷಾದನೀಯ. ಸಂಪದ ನೋಡುತ್ತ, ಓದುತ್ತಲೇ ಅದರ ನಿಲುವು ಏನೆಂಬುದು ನಾಗಭೂಷಣ ಅವರಂಥವರಿಗೆ ಗೊತ್ತಾಗಬೇಕಿತ್ತು. ಅದಕ್ಕೆ ಪ್ರತಿಕ್ರಿಯೆ ಬರೆಯುವ ಮೂಲಕ, ಅದರಲ್ಲಿ ಸಂಪದದ ನಿಲುವು ಸ್ಪಷ್ಟಪಡಿಸಲು ಹೋಗಿ ನಮ್ಮಂಥ ಓದುಗರಿಗೆ ನೋವುಂಟು ಮಾಡಿದ್ದೀರಿ.
ಮುಕ್ತ ಚರ್ಚೆ, ಆನ್‌ಲೈನ್ ಚರ್ಚಾಕೂಟದಂಥ ಲಕ್ಷಣಗಳು ಸಂಪದದ ವಿಶೇಷತೆ. ಆ ಕಾರಣದಿಂದಲೇ ಎಂದೂ ಬರೆಯದ ನಮ್ಮಂಥವರು ಸಂಪದ ಒಂದರಲ್ಲೇ ಸಕ್ರಿಯರಾಗಿದ್ದೇವೆ. ಏಕೆಂದರೆ, ಇಂತಹ ಮುಕ್ತತೆ ಇತರ ತಾಣಗಳಲ್ಲಿ ಅಷ್ಟಾಗಿಲ್ಲ. ಹೀಗಿರುವಾಗ, ಆ ಲಕ್ಷಣಗಳನ್ನು ನಾಗಭೂಷಣರಂಥ ವ್ಯಕ್ತಿಗಳಿಗೆ ಮತ್ತೆ ಮನದಟ್ಟು ಮಾಡುವುದು ಬೇಕಿತ್ತೆ?
ಇಲ್ಲಿ ನಡೆದ ಚರ್ಚೆಗಳು ವೈಯಕ್ತಿಕ ಆಗುವುದಾದರೂ ಹೇಗೆ? ಹಾಗೆ ನೋಡಿದರೆ ಪ್ರತಿಯೊಂದು ಬರಹ ಅಥವಾ ಪ್ರತಿಕ್ರಿಯೆಯೂ ವೈಯಕ್ತಿಕವಾಗಿಯೇ ಇರುತ್ತದೆ. ಅವು ಬರೆದವರ ಮನಃಸ್ಥಿತಿ ಹಾಗೂ ಧೋರಣೆಯನ್ನೇ ಪ್ರತಿಪಾದಿಸುತ್ತವೆ. ಏಕೆಂದರೆ ಬರಹ ಹಾಗೂ ಪ್ರತಿಕ್ರಿಯೆ ಹುಟ್ಟುವುದು ಅಂತಹ ಧೋರಣೆಯಿಂದಾಗಿಯೇ. ನೀವು ಅದಕ್ಕೆ ಮಿತಿ ಹಾಕಲು ಮುಂದಾದರೆ, (ತೀರ ಬೈಗುಳ ಅಥವಾ ಕೆಟ್ಟ ವಾದದ ಅತಿರೇಕ ಹೊರತುಪಡಿಸಿ) ಸಂಪದದ ಮೂಲ ತತ್ವಕ್ಕೆ ವಿರುದ್ಧವಾದಂತೆ. ಅದು ಖಂಡಿತ ಬೇಕಿಲ್ಲ.
ಅಕ್ಷರ ಪ್ರಪಂಚದಲ್ಲಿ ಬಹಳಷ್ಟು ನೀಚತನವಿದೆ. ಕೆಟ್ಟ ಧೋರಣೆಗಳಿವೆ. ಇದು ಹೀಗೇ ಇರಬೇಕು ಎಂಬ ಮೊಂಡು ಸಿದ್ಧಾಂತವಿದೆ. ಕೆಲವರನ್ನು ಎತ್ತಿ ಹೊಗಳುವ, ಇನ್ನು ಕೆಲವರನ್ನು ಉದ್ದೇಶಪೂರ್ವಕವಾಗಿ ತೆಗಳುವ ಕೆಟ್ಟತನವಿದೆ. ಅವರವರದೇ ಗುಂಪು ಮಾಡಿಕೊಂಡ ಸೀಮಿತತನವಿದೆ. ಅದೇನೂ ಇಲ್ಲ ಎಂಬ ಕಾರಣಕ್ಕೆ ಸಂಪದ ಸಮೃದ್ಧಿಯಾಗಿದೆ. ನಮ್ಮಂಥ ಹೊಸಬರ ಸಾಕಷ್ಟು ಲೇಖನಗಳಿಗೆ ಇಲ್ಲಿ ಅವಕಾಶ ದೊರೆತಿದ್ದು, ನಾವು ಅಂತಹ ಗುಂಪುಗಾರಿಕೆ ತಾಣಗಳತ್ತ ಬೇಸರ ಹೊಂದಿದ್ದರಿಂದ ಎಂಬುದೂ ನಿಮಗೆ ನೆನಪಿರಲಿ. ಯಾರದೋ ಮಾತು ಕೇಳಿ ಸಂಪದಕ್ಕೂ ಸೆನ್ಸಾರ್‌ಶಿಪ್ ಬುರ್ಖಾ ಹಾಕಬೇಡಿ.
ಬ್ಲಾಗ್, ಅಂತರ್ಜಾಲ ತಾಣಗಳೆಲ್ಲ ಇಂತಹ ಮಿತಿಯನ್ನು ದಾಟಲೆಂದೇ ಹುಟ್ಟಿಕೊಂಡಂಥವು. ಅವು ಹಾಗಿದ್ದರೇ ಉತ್ತಮ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಪಲ್ಲವಿಯವರೇ, ನೀವು ನಾಗಭೂಷಣರ "ನನಗೆ ಬ್ಲಾಗ್ ತಂತ್ರಜ್ಞಾನ ತಿಳಿದಿಲ್ಲ" ಎಂಬ ಹೇಳಿಕೆಯನ್ನು ಗಮನಿಸಲಿಲ್ಲವೇ. ಬಹುಶ: ಅವರು ಸಂಪದ ಓದುತ್ತಿಲ್ಲ.
hpn ಮಾಡಿದ್ದರಲ್ಲಿ ನೋವುಂಟು ಮಾಡುವಂತದ್ದೇನಿಲ್ಲ. ಮುಕ್ತ ಸಂವಾದಕ್ಕೇ ಸಂಪದ ತೆರೆದಿದೆ ಎನ್ನುವಾಗ ಇಂತಹ ವಿವರಣೆ ಅಗತ್ಯವಾಗುತ್ತದೆ.
*ಅಶೋಕ್
ಒಂದು ಸಂಶಯ.. ಪ್ರತಿಕ್ರಿಯೆಗೆ ಬಂದ ಪ್ರತಿಕ್ರಿಯೆಗಳನ್ನು ನಾಗಭೂಷಣರು ಗಮನಿಸುತ್ತಾರೋ? :)
*ಅಶೋಕ್
ವಸ್ತುಸ್ಥಿತಿ ಏನೆಂಬುದನ್ನು ಬರೆಯಲು ಹೊರಟ ವ್ಯಕ್ತಿಗೆ ತಂತ್ರಜ್ಞಾನ ಮುಖ್ಯವಲ್ಲ ಅಶೋಕ್. ವಿವೇಚನೆ ಮುಖ್ಯ ಅದು ಇರುವ ಬಗ್ಗೆ ಅನುಮಾನ ಹುಟ್ಟುವಂತೆ ಬರೆಯುತ್ತಿರುವ ವ್ಯಕ್ತಿಗೆ ಸಂಪದದ ಆಶಯ ವ್ಯಕ್ತಪಡಿಸುವ ಅನಿವಾರ್ಯತೆ ಎಚ್.ಪಿ.ಎನ್. ಅವರಿಗೆ ಖಂಡಿತ ಇರಲಿಲ್ಲ.
ಹೀಗಾಗಿ ನೋವಾಯಿತು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಪಲ್ಲವಿ ಅವರೆ ಸರಿಯಾಗಿ ಹೇಳಿದ್ದೀರ !
ಪಲ್ಲವಿ
ವಯಸ್ಸಿಗೆ ಮೀರಿದ ಚಿಂತನೆಗಳಿಗೆ ಅಭಿನಂದನೆಗಳು ತಾಯಿ , ಯಾವ ಚರ್ಚೆ ಏಕಪಕ್ಷೀಯವಾಗುತ್ತದೋ , ಅದು ಚರ್ಚೆಯೇ ಅಲ್ಲ . ಯಾರೇ ಬರೆದರೂ ಇನ್ನೊಬ್ಬರ ಅನಿಸಿಕೆಗಳ್ನ್ನು ನಗುತ್ತಲೇ ಸ್ವೀಕರಿಸುವುದೇ ಅಲ್ಲವೇ ತೆರೆದ ಮನಸ್ಸು ಎಂಬುದು . ಯಾವಾಗ ದೊಡ್ಡಸ್ತಿಕೆ ಭೂತ ಬೆನ್ನು ಹತ್ತುತ್ತದೋ ಆಗಲೇ ಮನುಷ್ಯ ಇತರರ ಅಭಿಪ್ರಾಯಗಳನ್ನು ತೃಣವಾಗಿ ಕಾಣತೊಡಗುತ್ತಾನೆ , ಅಲ್ಲಿಂದಲೇ ಸರ್ವಾಧಿಕಾರದ ಉಗಮ . ವ್ಯಕ್ತಿಯ ತನ್ನ ಅಭಿಪ್ರಾಯ ಸರಿ ಎನಿಸಿದಾಗಲೂ ಭಿನ್ನ ಧ್ವನಿಯನ್ನು ಗೌರವಿಸುವುದೇ ಆರೋಗ್ಯಕರ ಮನಸ್ಸಿನ ಲಕ್ಷಣ . ಪಲ್ಲವಿಯ ಚಿಂತನೆಗಳು ಹೀಗೆಯೇ ಮುಂದುವರಿಯಲಿ ಎಂಬ ಸದಾಶಯದೊಂದಿಗೆ
ಕಳೆದ ಕೆಲವು ದಿನಗಳಿಂದ ಕಾಶ್ಮೀರ, ಜಮ್ಮು, ಅಮರನಾಥ ಯಾತ್ರೆ ವಿವಾದ ಕುರಿತ ವಾದ-ವಿವಾದಗಳನ್ನು ಆಸಕ್ತಿಯಿಂದ ಗಮನಿಸುತ್ತ ಬಂದಿದ್ದೇನೆ. ಈ ವಿಷಯ ಇತಿಹಾಸದ ಒಂದು ಭಾಗವಾಗಿರುವುದರ ಜೊತೆಜೊತೆಗೆ ಪ್ರಚಲಿತ ಸಮಸ್ಯೆಯೂ ಆಗಿರುವ ಹಿನ್ನೆಲೆಯಲ್ಲಿ, ಸಾಕಷ್ಟು ವಿಷಯಜ್ಞಾನ ಇಲ್ಲದ್ದರಿಂದ ಪ್ರತಿಕ್ರಿಯೆ ನೀಡಲು ಅಳುಕಾಗಿತ್ತು.
ಈಗ ಡಿ.ಎಸ್. ನಾಗಭೂಷಣ ಅವರ ಪ್ರತಿಕ್ರಿಯೆಯೂ ಬಂದಿರುವುದನ್ನು ನೋಡಿ ಒಂದು ಸಕಾಲಿಕ ಬದಲಾವಣೆಯತ್ತ ವಿಷಯ ಹೊರಟಿರುವುದು ಖುಷಿಯ ಸಂಗತಿ.
ವೈಯಕ್ತಿಕವಾಗಿ ಡಿಎಸ್ ನಾಗಭೂಷಣ ಅವರ ಪ್ರತಿಕ್ರಿಯೆ ಒಪ್ಪುವುದಿಲ್ಲ. ಅವರ ಮೊದಲ ಲೇಖನದಲ್ಲಿ ತೋರಿದ ಬರವಣಿಗೆ ಕಾಳಜಿಗೂ, ಪ್ರತಿಕ್ರಿಯೆಯಾಗಿ ಬರೆದ ಲೇಖನದ ಸಮರ್ಥನೀಯ ಕಾಳಜಿಗೂ ಸಂಬಂಧವೇ ಇಲ್ಲ. ಸಂವಿಧಾನ ಹಾಗೂ ಅಮರನಾಥ ಮಂಡಳಿ ಕುರಿತ ಉಲ್ಲೇಖಗಳು ಸವಡಿಯವರ ಲೇಖನಕ್ಕೆ ಪೂರಕವಾಗಿ ಇವೆಯೇ ಹೊರತು, ಡಿಎಸ್ ನಾಗಭೂಷಣ ಅವರು ಹೇಳಿದಂತೆ ವಿರೋಧವಾಗಿದ್ದು ಹೇಗೆಂಬುದು ಗೊತ್ತಾಗುತ್ತಿಲ್ಲ. ಲೇಖಕರು ತಮ್ಮ ಅಂಶವನ್ನು ಸಮರ್ಥವಾಗಿ ಪ್ರತಿಪಾದಿಸಲು ವಿಫಲರಾಗಿದ್ದಾರೆ ಎಂದೇ ಅನಿಸುತ್ತದೆ.
ಕಾಶ್ಮೀರಿ ಮುಸ್ಲಿಮರು ದೇಶದ ಮುಖ್ಯವಾಹಿನಿಯೊಂದಿಗೆ ಗುರುತಿಸಿಕೊಂಡೇ ಇಲ್ಲ. ಅವರು ಪ್ರತ್ಯೇಕವಾಗಿಯೇ ನಿಂತಿದ್ದಾರೆ. ಅಷ್ಟೇ ಅಲ್ಲ, ದೇಶದ ಮುಖ್ಯವಾಹಿನಿಗೆ ವಿರುದ್ಧವಾಗಿ ಕೆಲಸ ಮಾಡುತ್ತ, ಅಂತಹ ಕೆಲಸ ಮಾಡುವವರನ್ನು ಸಮರ್ಥಿಸಿಕೊಳ್ಳುತ್ತ, ವೈರಿ ದೇಶ ಪಾಕಿಸ್ತಾನದೊಂದಿಗೆ ಗುರುತಿಸಿಕೊಳ್ಳುತ್ತ ಬಂದಿದ್ದಾರೆ. ಅವರ ಬಗ್ಗೆ ನಾಗಭೂಷಣ ಅವರು ತೋರುತ್ತಿರುವ ಪ್ರೀತಿಗೆ ಕಾರಣಗಳೇ ಇಲ್ಲ. ಮುಸ್ಲಿಂ ಪುಂಡಾಟಿಕೆ ಖಂಡಿಸದ ಲೇಖಕರಿಗೆ ’ಹಿಂದು ಪುಂಡಾಟಿಕೆ’ ಮುಸ್ಲಿಮರ ಕ್ರಿಯೆಗೆ ತೋರುತ್ತಿರುವ ಪ್ರತಿಕ್ರಿಯೆ ಎಂಬುದನ್ನು ಗುರುತಿಸುವ ಮನಸ್ಸಿಲ್ಲ. ಇದು ಅವರ ಲೇಖನದಿಂದಲೇ ಸ್ಪಷ್ಟ.
ನಾನು ಬರೆದಿದ್ದೇ ಸರಿ ಎಂಬ ಡಿಎಸ್ ನಾಗಭೂಷಣ ಅವರ ಧೋರಣೆ ಅವರ ಪ್ರತಿಕ್ರಿಯೆಯಲ್ಲಿಯೂ ವ್ಯಕ್ತವಾಗಿದೆ. ಎಲ್ಲ ವಿಷಯಗಳಿಗೆ ಒಂದೇ ಸಾರಿ ಉತ್ತರ ಕೊಡಲು ಹೊರಟ ಅವರು ಹಾಸ್ಯಾಸ್ಪದರಾಗಿ ವಿಫಲರಾಗಿದ್ದಾರೆ.
ಈ ಕುರಿತು ಇನ್ನಷ್ಟು ಪ್ರತಿಕ್ರಿಯೆ ಸೇರಿಸಬೇಕಿತ್ತು. ಆ ಕುರಿತು ನಂತರ ಬರೆಯುತ್ತೇನೆ.
ಈ ಎಲ್ಲ ಚರ್ಚೆಗಳು ವೈಯಕ್ತಿಕವಾಗಿ ನಡೆಯುತ್ತಿಲ್ಲ ಎಂಬುದನ್ನು ಡಿಎಸ್ ನಾಗಭೂಷಣ ಅವರು ಅರಿಯುವ ಮನಸ್ಸು ಮಾಡಿದರಷ್ಟೇ ಅವರ ವಾದಕ್ಕೆ ಪುಷ್ಠಿ ದೊರೆತೀತು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ನಾಗಭೂಷಣ್ ಸರ್,
ಸಂಪದದಲ್ಲಿನ ಚರ್ಚೆಗೆ ನೀವು ಸ್ಪಂದಿಸುವ ಪ್ರಯತ್ನ ಮಾಡಿರುವುದು ನಿಜಕ್ಕೂ ಸಂತೋಷದ ಸಂಗತಿ.
ನಾನು ವಿಕ್ರಾಂತ ಕರ್ನಾಟಕ ಓದಲು ಶುರು ಮಾಡಿದಾಗಿನಿಂದ ನಿಮ್ಮ ಕಾಲಂನ್ನು ಬಿಡದೆ ಓದುತ್ತಿದ್ದೇನೆ. ಅನೇಕ ವಿಷಯಗಳಲ್ಲಿ ನಿಮ್ಮ ಅಭಿಪ್ರಾಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ನನಗೆ ನಿಮ್ಮ ಕಾಳಜಿ ಹಾಗೂ ವೈಚಾರಿಕತೆಯ ಬಗ್ಗೆ ಎಂದೂ ಸಂಶಯ ಬಂದಿಲ್ಲ.
ಕಾಶ್ಮೀರದ ಸಮಸ್ಯೆಗ ಬಗ್ಗೆ ಮಾತನಾಡುವ ನನ್ನ ವಯೋಮಾನದ ಹುಡುಗರು, ಹುಡುಗಿಯರು ನೀವು ಹೇಳಿದ ಹಾಗೆ ಅದನ್ನೊಂದು ಕೋಮುವಾರು ವಿಷಯವಾಗಿ ಗ್ರಹಿಸಿಯೇ ಮಾತನಾಡುತ್ತೇವೆ. ಹಾಗೂ ನಮ್ಮ ಅಭಿಪ್ರಾಯಗಳಿಗೆ ವೇದಿಕೆಗಳಾಗಿ ವೈಯಕ್ತಿಕ ಬ್ಲಾಗುಗಳು, ಕಮ್ಯುನಿಟಿ ಬ್ಲಾಗುಗಳು ಸಿಕ್ಕಿರುವುದರಿಂದ ನಾವು ನಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹರಿಬಿಡುತ್ತಿದ್ದೇವೆ. ನಾನು ಹಿರಿಯರಾದ ಚಾಮರಾಜ ಸವಡಿಯವರ ಪ್ರತಿಕ್ರಿಯೆ ಬಗ್ಗೆ ಏನನ್ನೂ ಹೇಳಲಾರೆ ಆದರೆ ಉಳಿದಂತೆ ಬಹುತೇಕರು ಕಾಶ್ಮೀರದ ಇತಿಹಾಸ ಹಾಗೂ ಅಲ್ಲಿನ ವಾಸ್ತವಿಕ ಪರಿಸ್ಥಿತಿಯನ್ನು ತಿಳಿಯುವ ಪ್ರಯತ್ನ ಮಾಡದೆ ಅಭಿಪ್ರಾಯ ರೂಪಿಸಿಕೊಂಡಿದ್ದಾರೆ ಎನ್ನಬಹುದು. ಇದಕ್ಕೆ ನಾನೂ ಹೊರತಾಗಿಲ್ಲ. ನಿಮ್ಮ ಈ ಪ್ರತಿಕ್ರಿಯೆಯಲ್ಲಿನ ಕೆಲವು ಅಂಶಗಳು ನನ್ನ ಅನೇಕ ಸಂಶಯಗಳನ್ನು ನಿವಾರಿಸಿವೆ.
ಸಮರ್ಥನೆಗಾಗಿ ಉಲ್ಲೇಖಿಸಿರುವ ನ್ಯಾಯಾಯಲಯದ ತೀರ್ಪಿಗೂ ವಿರುದ್ಧವಾಗಿದೆ ಎಂಬುದನ್ನೂ ಗಮನಿಸಬಹುದು!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...
ಮುಖ್ಯವಾಗಿ ಜಮ್ಮೂ ಮತ್ತು ಕಾಶ್ಮೀರದಲ್ಲಿ - ಹಿ೦ದೂ ಮತ್ತು ಮಸ್ಲಿ೦ ಜನರ ನ೦ಬರು
ಹೆಚ್ಚು ಕಡಿಮೆ ಒ೦ದೇ ಸ೦ಖ್ಯೆಯಲ್ಲದೆ.
ನೀವು ಒಮ್ಮೆ ಈ ತಾಣಕ್ಕೆ ಭೇಟಿ ನೀಡಿ - ಕಾಶ್ಮೀರದಲ್ಲಿ ಆದ ಬದಲಾವಣೆಗಳತ್ತ ಗಮನ ಹರಿಸಬೇಕು.
ನ೦ಗ೦ತೂ ಸೆನ್ಸಸ್ ನಲ್ಲಿ ಎಷ್ಟು ಜನ ಹಿ೦ದೂ ಎಷ್ಟು ಜನ ಮುಸ್ಲಿ೦ ಜನ ಇದ್ದಾರೆ ಅನ್ನೋ ಲೆಕ್ಕ ಕಿನ್ನಾ
ಎಷ್ಟು ಜನ ಗ೦ಡು, ಎಷ್ಟು ಜನ ಹೆಣ್ಣು ಜಾತಿಯವ್ರು ಅನ್ನೋದು ಮುಖ್ಯ ಅನ್ಸತ್ತೆ .
Muslim-majority Kashmir has a population of 5,476,970 .
while Jammu is home to 4,429,887 people.
ಈಗ ಸುಮಾರು ೫೦ ನೇ ದಶಕದಲ್ಲಿ ದೇಶ ವಿಭಜನೆ ಆದ ಮೇಲೆ - ಈ ರೀತಿ ಪೋಲರೈಜೇಷನ್ ಆಗಿದೆಯೋ ಅಥವಾ ಮು೦ಚೆ ಆಯ್ತೋ ನೀವೇ ಹೇಳ ಬೇಕು.
ಒ೦ದ೦ತೂ ಸತ್ಯ ಇಬ್ರೂ ಸುಳ್ಳೂ ಹೇಳೋ ಜನರೇ - ಬಿ.ಜೇ.ಪಿ ಯವ್ರೂ ಹಾಗೂ ಹುರಿಯತ್ ನವ್ರೂ .
ಹುರಿಯತ್ ನವರ ಒಳ ಜಗಳದಿ೦ದಾ ಘನಿ ಲೋನ್ ಕೊ೦ದು ಹಾಕಿದ್ದು ನೀವು ಮರೆತ ಹಾಗಿದೆ.
ಸಮಸ್ಯೆ ಕೇವಲ ಭಾರತದ ಸರ್ಕಾರ ಅಷ್ಟೇ ಅಲ್ಲಾ ಅರ್ವ್ರರ್ ಮಧ್ಯೆ ಕೂಡ ಕೊ೦ದು ತಿನ್ನೋ ಅಷ್ಟು
ಮಟ್ಟಿಗಿದೆ.
ಕೊಂಡಿಗಳಿಗೆ ಧನ್ಯವಾದ. ನಾನು ಇದನ್ನೇ ಹುಡುಕ್ತಿದ್ದೆ.
ಕೀರ್ತಿ ಕಿರಣ್ ಎಂ
ಓಹೊ!! ನಿಮ್ಮ ಪ್ರತಿಕ್ರೀಯೆಗೆ ಚಾವಡಿಯವರು ಚಾವಟಿ ಬೀಸ ಬೇಕಾಯಿತೇ?.. ನೀಮ್ಮ ಲೇಖನಗಳಿಗೆ ಮೆಚ್ಚಿ ಹಾಗು ವಿರೋದಿಸಿ ಪ್ರತಿಕ್ರೀಯೆ ನೀಡಿದವರಲ್ಲಿ ನಾನು ಒಬ್ಬ. ಮತ್ತೆ ನಿಮ್ಮಿಂದ ಸರಿಯಾದ ಉತ್ತರ ಬರದ ಕಾರಣ ಈಗ ಅದನ್ನು ಓದುವುದನ್ನೆ ನಿಲಿಸಿದ್ದೇನೆ..ನೀಮ್ಮ ಈ ಸ್ಪಂದನ ನೋಡಿದಮೇಲೆ ಸ್ಪಷ್ಟವಾಯಿತು ನೀವು ನಿಮ್ಮ ಖುಶಿಗೊಸ್ಕರ ಬರೆದು ಬಿಸಾಕ್ತಿರಾ ಒದೊರು ಓದಲಿ..ಇಲ್ಲದಿದ್ದರೆ ಹಾಳಾಗಿ ಹೊಗಲಿ ಅಂತ.
ನಿಮ್ಮ ರಾಷ್ತ್ರೀಯರ ಮುಂದಿನ ಪ್ರಶ್ನೆಯ ಬಗ್ಗೆ ನನ್ನ ಪ್ರತಿಕ್ರಿಯೆ.
ರಾಜಕಾರಣಿಗಳ ಮತದ ಆಸೆ ನಮ್ಮ ದೇಶವನ್ನು ಈ ಸ್ಥಿತಿಗೆ ತಳ್ಳಿದೆ. ಕೇಂದ್ರಸರ್ಕಾರದ ಒಬ್ಬ ವ್ಯಕ್ತಿಯೂ ಇದರ ಬಗ್ಗೆ ಚಕಾರ ಎತ್ತಿಲ್ಲ. ಕಾಶ್ಮೀರ ನಮ್ಮ ರಾಷ್ತ್ರದ ಅವಿಭಾಜ್ಯ ಅಂಗ. ಮೊದಲು ಆ ಭಾಗಕ್ಕೆ ನೀಡಿರುವ ಸ್ವಾಯತ್ತತೆ, ವಿಶೇಷ ಸವಲತ್ತು ರದ್ದು ಪಡಿಸಿ, ಅವರನ್ನು ಮುಖ್ಯವಾಹಿನಿಗೆ ತರಬೇಕು. ಅವರಿಗೆ ಭಾರತ ಬಿಟ್ಟು ಬೇರೆ ಎಲ್ಲೂ ದಾರಿ ಇಲ್ಲ ಅನ್ನೊದನ್ನ ಮನದಟ್ಟು ಮಾಡಿಸಬೇಕು. ನಮ್ಮ ತೆರಿಗೆ ಹಣದಲ್ಲಿ ಅವರಿಗೆ ವಿಶೇಷ ಸವಲತ್ತು ಕೊಟ್ಟು ಅಲ್ಲಿ ಅವರು ಬೇರೆ ರಾಷ್ತ್ರದ ಧ್ವಜ ಹಾರಿಸುವುದಾದರೆ, ಸವಲತ್ತು ಕೊಡುವುದು ಯೇಕೆ?
ಒಮ್ಮೆ ಸೇನೆಗೆ ಪೂರ್ಣ ಸ್ವಾತಂತ್ರಕೊಟ್ಟು, ಈ ಗೊಡ್ಡು ಪ್ರತ್ಯೇಕತಾವಾದಿಗಳನ್ನು ಮಟ್ಟ ಹಾಕಬೇಕು.
ನಿಮ್ಮ ಇನ್ನೊಂದು ಪ್ರಶ್ನೆ, "ಮೂಲ ಕಾಶ್ಮೀರದ ಮೂರನೇ ಒಂದು ಭಾಗದಷ್ಟಿರುವ-'ಆಝಾದ್ ಕಾಶ್ಮೀರ'ವನ್ನು ನಾವು ಮರುವಶಪಡಿಸಿಕೊಳ್ಳಬಹುದಿತ್ತಲ್ಲ?" ಬಹುಶಃ ತಮಗೆ ಗೊತ್ತು ಅನ್ನಿಸುತ್ತೆ, ಇದನ್ನ ನಮ್ಮ ಸೇನೆ ವಶಪಡಿಸಿಕೊಂಡಿತು ೬೨ರ ಯುದ್ದದಲ್ಲಿ. ಆದರೆ ನೊಬೆಲ್ ಶಾಂತಿ ಪುರಸ್ಕಾರದ ಆಸೆಯ ಹಿಂದೆ ಬಿದ್ದು, ಗೆಲ್ಲುತ್ತಿದ್ದ ಸೇನೆಯೇ ಬಿಳಿ ಧ್ವಜ ತೋರಿಸಿ ಹಿಂದೆ ಬರುವಂತೆ ಮಾಡಿದರು ಒಬ್ಬ ವ್ಯಕ್ತಿ. ಇವತ್ತಿಗೂ ಎಷ್ತು ಸೈನಿಕರು ಅಲ್ಲಿ ಬಲಿದನ ಮಾಡಿದ್ದಾರೆ/ಮಾಡ್ತಾ ಇದ್ದಾರೆ ಅನ್ನೋದನ್ನ ನೆನೆಸಿಕೊಂಡರೆ, ನಮ್ಮ ನೆಲದಲ್ಲೆ ಈ ರೀತಿ ಅನುಭವಿಸ್ತಾ ಇದ್ದೀವಲ್ಲ ಅಂತ ಕಣ್ಣೀರು ಬರುತ್ತೆ, ಇದೆಲ್ಲ ತಾವು ಈ ಲೇಖನ ಬರೆಯೊಕ್ಕೆ ಮುಂಚೆ ಒಮ್ಮೆ ನೆನೆಸಿಕೊಂಡಿದೀರ ಅನ್ಕೊಂಡಿದೀನಿ. ಕಾಶ್ಮೀರ, ಕೇವಲ ಮುಸ್ಳೀಮರಿಗೆ ಮಾತ್ರ ಸೇರಿದ್ದಲ್ಲ,, ಅಲ್ಲಿ ಹಿಂದುಗಳು ಇದ್ದಾರೆ, ಆದ್ರೆ ಎಷ್ಟು ಜನ ನಿರ್ವಸತಿಗರಾಗಿ, ಒಡಿಬಂದು ದೆಹಲಿಯಲ್ಲಿ ನೆಲೆಸಿದ್ದಾರೆ, ಅವರ ಬಗ್ಗೆ ತಾವು ಯಾಕೆ ಮಾತಾಡುತ್ತಿಲ್ಲ?
ಕೊನೆಯ ಸಾಲು : "ಮುಳ್ಳನ್ನ ಮುಳ್ಳಿಂದಲೆ ತೆಗೆಯಬೇಕು"
--ಭಾಸ್ಕರ
1962ರಲ್ಲಿ ಆಝಾದ್ ಕಾಶ್ಮೀರವನ್ನು ನಾವು ವಶಪಡಿಸಿಕೊಂಡಿದ್ದೆವು ಮತ್ತು ಯಾರದೋ ನೊಬೆಲ್ ಪ್ರಶಸ್ತಿ ಆಸೆಗಾಗಿ ಅದನ್ನು ಬಿಟ್ಟುಕೊಟ್ಟೆವು ಎನ್ನುವುದು ಶುದ್ಧ ಸುಳ್ಳು. 1962ರಲ್ಲಿ ನಾವು ಎದುರಿಸಿದ್ದು ಚೀನಾವನ್ನು. ನಾವು ಮೊದಲ ಬಾರಿಗೆ ಪಾಕಿಸ್ತಾನದೊಂದಿಗೆ ಯುದ್ಧ ಮಾಡಬೇಕಾಗಿ ಬಂದುದು 1967ರಲ್ಲಿ. ಆ ಯದ್ಧದಲ್ಲಿ ಎರಡೂ ದೇಶಗಳು ಪರಸ್ಪರರ ಗಡಿ ದಾಟಿ ಬಂದು, ಪಾಕಿಸ್ತಾನ ಭಾರತಕ್ಕಿಂತ ಸ್ವಲ್ಪ ಜಾಸ್ತಿ ಪ್ರದೇಶವನ್ನು ಕಳೆದುಕೊಂಡಿತ್ತು. ನಂತರದ ಅಂತಾರಾಷ್ಟ್ರೀಯ ಕದನ ಒಪ್ಪಂದಕ್ಕೆ ಅನುಗುಣವಾಗಿ ಪರಸ್ಪರ ಆಕ್ರಮಿತ ಪ್ರದೇಶಗಳನ್ನು ಬಿಟ್ಟುಕೊಟ್ಟವಷ್ಟೆ.
ವಾಸ್ತವವನ್ನು ಎದುರಿಸಿ, ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗದಷ್ಟು ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡವರು ಮಾತ್ರ ಹೀಗೆ ಸಾರ್ವಜನಿಕವಾಗಿ ತಪ್ಪು ಮಾಹಿತಿ ನೀಡುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆದು, ಸಮಸ್ಯೆಯನ್ನು ಬಿಡಿಸಲಾಗದಷ್ಟು ಜಟಿಲಗೊಳಿಸುತ್ತಾರೆ. ಇಂತಹವರೇ ಸೇನೆ ನುಗ್ಗಿಸಿ ಪ್ರತ್ಯೇಕತಾವಾದಿಗಳನ್ನು ಬಗ್ಗು ಬಡಿಯಿರಿ ಎಂಬಂತಹ ಹುಸಿ ವೀರಾವೇಶದ ಮತ್ತು ಅವ್ಯವಾಹಾರಿಕ ಸಲಹೆಗಳನ್ನು ನೀಡಬಲ್ಲರು.
ಪ್ರತ್ಯೇಕತಾವಾದಿಗಳನ್ನು ಬಗ್ಗು ಬಡಿಯುವುದು ನಿಮ್ಮ ದ್ರುಷ್ಟಿಯಲ್ಲಿ ತಪ್ಪಾ ಸ್ವಾಮಿ...
ರೀ ಲೇಖಕರೆ ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಅರ್ಥಾನೆ ಬದಲಾಯಿಸಿ ಬಿಡ್ತೀರಲ್ಲಾ ನಿಮ್ಮಂತವರೆಲ್ಲಾ ಸೇರ್ಕೊಂಡು....ಹೌದು ಇನ್ನು ಯಾಕೆ ಸುಮ್ನಿದ್ದೀರ ನೆನ್ನೆ ತಾನೆ ಕ್ರೂರಿಗಳಾದ ಸೈನಿಕರು ಅಮಾಯಕ ಉಗ್ರವಾದಿಗಳನ್ನ ಕೊಂದಿದ್ದಾರಲ್ಲ...
ಪಾಪ ಅವ್ರೇನೊ ತಮ್ಮ ಪಾಡಿಗೆ ತಾವು ಅವ್ರ ಕಾಶ್ಮೀರದಲ್ಲಿ ಗಲಾಟೆ ಮಾದ್ಕೊಳ್ಳೊದಿಕ್ಕೆ ಬಂದಿದ್ರೆ ಅವ್ರನ್ನ ಕೊಂದ್ಬಿಟ್ಟಿದ್ದಾರಲ್ಲ ಈ ಕ್ರೂರಿಗಳು ...
ಸತ್ತವರಿಗೊಸ್ಕರ ಶೋಕಾಚರಣೆ ಮಾಡೊದಲ್ವೆ..?