ಝೆನ್ ಕಥೆ ೩೪: ಜ್ಞಾನೋದಯ
ಶಿಷ್ಯನೊಬ್ಬ ಗುರುವನ್ನು ಕೇಳಿದ: "ಗುರುವೇ, ಜ್ಞಾನೋದಯ ಎಂದರೆ ಏನು?"
ಗುರು ಹೇಳಿದ: "ಹಸಿವಾದಾಗ ಉಣ್ಣು, ಬಾಯಾರಿದಾಗ ನೀರು ಕುಡಿ, ನಿದ್ರೆ ಬಂದಾಗ ಮಲಗು"
[ಕುವೆಂಪು ಕವಿತೆಯೊಂದರ ಕೊನೆಯ ಸಾಲುಗಳು: "ಅರಿವಾಸೆಯೆ ಮಾಯಾಬಂಧ, ಇರುವುದೆ ಮುಕ್ತಿಯ ಆನಂದ"]

- Login or register to post comments
- 974 hits
- Email this page






RSS:
ಪ್ರತಿಕ್ರಿಯೆಗಳು
ಅಬ್ಬಾ!
ಮೇಲ್ನೋಟಕ್ಕೆ ಎಂತಹ ಸರಳವಾದ ಮಾತುಗಳೆನಿಸಿದರೂ ತುಂಬಾ ಅರ್ಥಗರ್ಭಿತವಾಗಿದೆ. ಯಾವುದೇ ಕೆಲಸ ಮಾಡಿದರೂ ಅರಿತು ಮಾಡಿದರಷ್ಟೇ ಅದಕ್ಕೆ ಅರ್ಥ ಬರುವುದು. ಅರಿವಿಗೆ ಹೆಚ್ಚಿನ ಮಹತ್ವ ಇದೆ ಅಲ್ಲವೇ? ನನ್ನ ಅನಿಸಿಕೆ ಸರಿಯೇ ಸಾರ್.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಕುವೆಂಪುರವರ ಯಾವ ಕವಿತೆಯದು?
ಇರುವುದೆ ಮುಕ್ತಿಯ ಆನಂದ ... ಆಹಾ, ಎಂತಹ ಅರ್ಥಗರ್ಭಿತವಾದ ಸಾಲು! ಇದು ಕುವೆಂಪುರವರ ಯಾವ ಕವಿತೆಯ ಕೊನೆಯ ಸಾಲು?
ಇರುವುದೆ ಮುಕ್ತಿಯ ಆನಂದ ಕುವೆಂಪು ಕವಿತೆ
ಪಕ್ಷಿಕಾಶಿ ಸಂಕಲನದ "ಇಂತಹ ಸುಂದರ ಪ್ರಾತಃಕಾಲದಿ" ಕವಿತೆಯ ಕೊನೆಯ ಎರಡು ಸಾಲು ಇವು.
"ಇಂತಹ ಸುಂದರ ಪ್ರಾತಃಕಾಲದಿ
ಜೀವಿಸುವುದಕಿಂತಲು ಬೇರೆಯ ಗುರಿ
ಜೀವಕೆ ಬೇಕಿಲ್ಲ:
ಚಿರ ಸೌಂದರ್ಯದ ಸಂಪದವಿದ್ದರೆ
ಧರ್ಮಕೆ ಚ್ಯುತಿಯಿಲ್ಲ.
ಮತಿಯಲ್ಲ
ರಸಾನುಭೂತಿಯ ರಸಪಥವಲ್ಲದೆ
ಸತ್ಯಕೆ ಗತಿಯಿಲ್ಲ!"
ಎಂದು ಕವಿತೆ ಆರಂಭವಾಗುತ್ತದೆ. ಸಾಮಾನ್ಯವಾಗಿ ನಮ್ಮ ಧರ್ಮಗಳೆಲ್ಲ ಸೌಂದರ್ಯ ದ್ವೇಷಿಗಳು. ಕುವೆಂಪು ಸೌಂದರ್ಯವನ್ನು ಗ್ರಹಿಸುವ ಮೂಲಕವೇ ಸತ್ಯದ ಗ್ರಹಿಕೆ ಅನ್ನುತ್ತಾರೆ. ಮತಿ ಸತ್ಯವನ್ನು ಕಾಣಿಸಲಾರದು ಅನ್ನುತ್ತಾರೆ.
ಮುಂದೆ ನೋಡಿ:
"ನಿನ್ನೆಯ ಸಂಜೆಯ ಮಳೆಯಲಿ ಮಿಂದು
ಕಳಕಳಿಸುವ ಹಸುರ್ಬಯಲಲಿ ಇಂದು
ಹೊಂಬಿಸಿಲಲಿ ಉರಿದಿರೆ ಜಲಬಿಂದು
ಸತ್ತಳೊ ಉರ್ವಶಿ ಸ್ವರ್ಗದಲಿ!
ಗಾಳಿಯ ಮಂಡಲ ಸ್ಫಟಿಕದವೋಲಿದೆ;
ನಭವೋ ನೀಲವಿತಾನವ ಹೋಲಿದೆ;
ಅಲ್ಲಲ್ಲಿಯೆ ಮುಗಿಲಿನ ಪಟ ತೇಲಿದೆ;
ವೈಕುಂಠವಿದೆ ನಿಸರ್ಗದಲಿ!"
ನಿನ್ನೆ ಸಂಜೆ ಬಿದ್ದು ಇಂದಿನ ಬೆಳಗಿನ ಬಿಸಿಲಲ್ಲಿ ಹೊಳೆಯುವ ಮಳೆ ಹನಿಯ ಚೆಲುವಿನ ಮುಂದೆ ಉರ್ವಶಿ ಸತ್ತಂತೆ. ಸ್ಫಟಿಕದಂಥ ಸ್ವಚ್ಛ ಗಾಳಿ, ನೀಲಿ ಬಾವುಟದಂಥ ಆಕಾಶ, ಇದೇ ವೈಕುಂಠ. ಚೆಲುವನ್ನು ಕಾಣುವ ಕಣ್ಣಲ್ಲವೆ ಇದು!
ಈಗ ಕೊನೆಯ ಸ್ಟಾಂಜಾ. ನೀವು ಕೇಳಿದ ಸಾಲುಗಳು:
ದನಕರುಗಳು ಮೇಯುತ 'ಇವೆ';
ಗಿರಿತರುಗಳು ಬದುಕನು ಸವಿಯುತ 'ಇವೆ';
ಅರಿವಾಸೆಯ ಮಾಯೆಗೆ ಬೀಳದೆ 'ಇವೆ';
ಇರುವಿಕೆಯಾನಂದದಿ ನಲಿಯುತ 'ಇವೆ';
ಇರುವಿಕೆಗಿಂತಲು ಹೆಚ್ಚಿನ ಗೋಜಿಗೆ ಹೋಗದಿವೆ!
'ಅರಿವಾ'ಸೆಯೆ ಮಾಯಾಬಂಧ;
'ಇರು'ವುದೆ ಮುಕ್ತಿಯ ಆನಂದ!
'ಅರಿವಾ'ಸೆಯ ಬಿಡು; 'ಇರು'ವಾಸೆಯ ತೊಡು!
ಇಂತಹ ಸಮಯದಿ 'ಇರುವಿಕೆ'ಗಿಂತಲು
ಹೆಚ್ಚಿನ 'ಅರಿವಿ'ಲ್ಲ!
ಇಂತಹ ದಿವ್ಯಪ್ರಭಾತ ಕಾಲದಿ
ಜೀವಿಸುವುದಕಿಂತಲು ರಸಜೀವಿಗೆ
ಬೇರೆಯ ಗುರಿಯಿಲ್ಲ!"
ಕುವೆಂಪು ಈ ಕವಿತೆ ಬರೆದದ್ದು ೮-೯-೧೯೩೪. ನಾನು ಕೋಟ್ ಮಾಡಿದ ಸಾಲುಗಳು ಕೊನೆಯ ಸ್ಟಾಂಜಾದವು. ನೆನಪು ಕೈಕೊಟ್ಟದ್ದರಿಂದ ಕೊನೆಯ ಸಾಲು ಎಂದಿದ್ದೆ. ಈಗ ನೋಡಿದರೆ ಹೀಗಿದೆ. ಇರಲಿ. ಅದರಿಂದ ಅರ್ಥಕ್ಕೇನೂ ತೊಂದರೆಯಿಲ್ಲ.
ಕುವೆಂಪು ಇಲ್ಲಿ ಇರುವುದು ಮತ್ತು ಅರಿಯುವುದು, ಇಂಗ್ಲಿಷಿನ ಬೀಯಿಂಗ್ ಮತ್ತು ಬಿಕಮಿಂಗ್ ಎಂಬ ನಿಲುವುಗಳಲ್ಲಿ ಇರುವಿಕೆಗೆ, ಬೀಯಿಂಗ್‌ಗೆ ಮಹತ್ವ ನೀಡಿದ್ದಾರೆ. ಆದರೆ ನಾವು ನೀವೆಲ್ಲ ಸಾಮಾನ್ಯವಾಗಿ ಬಿಕಮಿಂಗ್ ಏನೋ ಆಗಬೇಕು, ಆಗಲೇ ಬದುಕು ಸಾರ್ಥಕ ಎಂದು ತಿಳಿದು ಬದುಕುತ್ತಿರುವವರು. ಝೆನ್ ಕತೆಯೂ ಕುವೆಂಪು ಕವಿತೆಯೂ ಆಗುವ ಆಸೆಗಿಂತ, ಅರಿಯುವ ಆಸೆಗಿಂತ ಸುಮ್ಮನೆ ನಿಜವಾಗಿ ಇರುವುದು ಮುಖ್ಯ, ಅದೇ ಮುಕ್ತಿ ಅನ್ನುತ್ತವೆ. ಹಾಗೆ ಇರದೆ ನಾವು ಎಷ್ಟೊಂದು ಸುಂದರ ಪ್ರಾತಃ ಕಾಲಗಳನ್ನೂ, ಜೀವಂತ ಕ್ಷಣಗಳನ್ನೂ ಕಳೆದುಕೊಂಡಿದ್ದೇವೆ! ಸುಮ್ಮನೆ ಇರುವುದಕ್ಕೆ ಸಾಧ್ಯವಿದ್ದಿದ್ದರೆ...!! ಅದು ಎಷ್ಟು ಕಷ್ಟ ಎಂದು ನಿಮಗೂ ನನಗೂ ಗೊತ್ತು, ಅಲ್ಲವೇ!
ಇರುವಂತೆ ಇರು!
ಶಂಕರಾಚಾರ್ಯರು, ರಮಣ ಮಹರ್ಷಿಗಳು, ಜಿಡ್ಡು ಕೃಷ್ಣಮೂರ್ತಿ .. ಎಲ್ಲರೂ ಹೇಳಿದ್ದು ಇದನ್ನೆ! ಕುವೆಂಪುರವರ 'ದೋಣಿ ಸಾಗಲಿ' ಕವನದ
'ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ'
ಸಾಲುಗಳನ್ನು ಓದಿ ನಾನು ಹೀಗೆಯೆ ಪ್ರಭಾವಿತನಾಗಿದ್ದೆ.
ಕುವೆಂಪುರವರ (ಪಕ್ಷಿಕಾಶಿ ಸಂಕಲನದ) ಈ ಕವಿತೆಯನ್ನು ಕಳುಹಿಸಿದ್ದಕ್ಕೆ ಧನ್ಯವಾಧಗಳು!