ಝೆನ್ ಕಥೆ ೩೫: ನಾನು ಯಾರೋ!
ಮನಸ್ಸೆಲ್ಲ ಕಸಿವಿಸಿ ತುಂಬಿದ್ದ, ದಿಗಭ್ರಾಂತನಂತಿದ್ದ ಒಬ್ಬಾತ ಝೆನ್ ಗುರುವಿನ ಬಳಿಗೆ ಬಂದ. "ನಾನು ಹತಾಶ, ಹುಚ್ಚು ಹಿಡಿದಿದೆ ಅನ್ನಿಸುತ್ತದೆ. ನಾನು ಯಾರೆಂದು ತಿಳಿಯುತ್ತಿಲ್ಲ. ದಯವಿಟ್ಟು ನನ್ನ ಸತ್ಯ ಸ್ವರೂಪವನ್ನು ತಿಳಿಸಿ" ಎಂದು ಕೋರಿದ.
ಗುರು ಅವನತ್ತ ಕಣ್ಣೆತ್ತಿಯೂ ನೋಡಲಿಲ್ಲ. ಉತ್ತರವನ್ನೂ ಕೊಡಲಿಲ್ಲ.
ಬಂದಾತ ಬೇಡಿದ, ಗೋಗರೆದ, ಅಂಗಲಾಚಿದ.
ಗುರು ಮಾತ್ರ ಮೌನಿ.
ಕೊನೆಗೊಮ್ಮೆ ಹತಾಶನಾಗಿ ವಾಪಸ್ಸು ಹೋಗಲು ಹಿಂದಿರುಗಿದ ಆ ಮನುಷ್ಯ.
ಆಗ ಗುರು ತಟ್ಟನೆ ಆ ಮನುಷ್ಯನ ಹೆಸರಿಡಿದು ಕೂಗಿದ.
ಆತ ನಿಂತು, ಹಿಂದಿರುಗಿ "ಏನು?" ಎಂದ.
"ನಿನ್ನ ಸ್ವರೂಪ, ನಿನ್ನ ಸತ್ಯ ಅದೇ, ತಿಳಿಯಿತೇ" ಎಂದ ಗುರು.
[ಈ ಕಥೆ ಯೋಚಿಸಿದಂತೆಲ್ಲ ಅರ್ಥಗಳನ್ನು ಹೊಳೆಸೀತು]

- Login or register to post comments
- 1148 hits
- Email this page





RSS:
ಪ್ರತಿಕ್ರಿಯೆಗಳು
ನಾನು ಯಾರೋ .. ಅರ್ಥ?
ನಮ್ಮ ಹೆಸರು ಸತ್ಯವೇ, ಅಥವಾ ಆ ಹೆಸರಿನ ಹಿಂದಿರುವ ಒಟ್ಟಾರೆ ಇರುವಿಕೆ (ಅರ್ಥಾತ್ ನಮ್ನ ಸುಖ ದುಃಖ, ನೋವು ನಲಿವು, ಆಸೆ ನಿರಾಸೆ ..) ಸತ್ಯವೇ, ಅಥವಾ ಗುರುವು ಕರೆದಿದ್ದು ತನ್ನನ್ನು ಎಂಬ ಶಿಷ್ಯನ ಅರಿವು ಸತ್ಯವೇ?
ನಾನು ಯಾರೋ .. ಅರ್ಥ.
ಅವರವರ ಪಾಲಿಗೆ ಅವರವರ ತಿಳುವಳಿಕೆಯೇ ಸತ್ಯ , ಹೆಸರು ಹಿಡಿದು ಕರೆದಾಗ ಓಗೊಡುತ್ತಾನೆಂದರೆ , ಅವನು ತನ್ನನ್ನು ಆ ಹೆಸರಿನಿಂದ ಗುರುತಿಸಿಕೊಂಡು , ಆ ಹೆಸರನ್ನು ತಾನೆಂದು ಒಪ್ಪಿಕೊಳ್ಳುತ್ತಾನೆಂದಲ್ಲವೇ ? ಹಾಗಿರುವಲ್ಲಿ ವ್ಯರ್ಥ ಗೊಂದಲ ಏಕೆ ? ಈ ವಿಷಯವನ್ನೇ ಗುರು ತಿಳಿಯಪಡಿಸುತ್ತ ಇರುವದು.
ತಿಳುವಳಿಕೆ ..
ಅಂದರೆ ನಿಮ್ಮ ಪ್ರಕಾರ ಶಿಷ್ಯನ ತಿಳುವಳಿಕೆ ಅಥವಾ ಅರಿವು ಸತ್ಯ. ಒಂದು ಪಕ್ಷ ಗುರುವಿಗೆ ಪ್ರಶ್ನೆ ಕೇಳಿದವನ ಹೆಸರು ಗೊತ್ತಿಲ್ಲದಿದ್ದಲ್ಲಿ, ಗುರುವು ಅವನನ್ನು 'ಹೋಯ್' ಎಂದು ಸಂಭೋದಿಸಿದ್ರೂ ಕೂಡ, ಅವನು ಗುರುವು ತನ್ನನ್ನೇ ಕರೆಯುತ್ತಿರುವುದೆಂದು ಅರಿತು ಉತ್ತರ ಕೊಡುತ್ತಿದ್ದ.
ಏನಂತೀರಿ?
Re: ಝೆನ್ ಕಥೆ ೩೫: ನಾನು ಯಾರೋ!
ಇದರ ಒಂದು ಮುಖ್ಯವಾದ ಅರ್ಥ ಇರುವುದು ನಾನು ಮಾತ್ರ ಎಲ್ಲಾ ನನ್ನಲ್ಲಿ - ರಮಣ ಮಹರ್ಷಿಗಳು ಹೇಳಿದಂತೆ ನಾನು ಯಾರು ಎಂದು ಪ್ರಶ್ನಿಸಿಕೊಂಡರೆ ಎಲ್ಲಾ ಹೊಳೆಯುತ್ತದೆ.
Re: ಝೆನ್ ಕಥೆ ೩೫: ನಾನು ಯಾರೋ!
ಇದು ಸರಿ. ನಾವು ನಮ್ಮೊಳಗೆ ನೋಡಿಕೊಳ್ಳದೆ ಹೊರಗೆ ಇಲ್ಲದ ಉತ್ತರಗಳಿಗಾಗಿ ಪರದಾಡುತ್ತಿರುತ್ತೇವೆ. ಒಂದು ಕ್ಷಣ ನಮ್ಮೊಳಗೆ ನಾವು ನೋಡಿಕೊಂಡರೆ ಅಚ್ಚರಿಯಾಗುವುದು ಖಂಡಿತ. ಉತ್ತರಗಳು ತಕ್ಷಣ ಸಿಗದಿದ್ದರೂ ಅದರ ಸಾಧ್ಯತೆಗಳಂತು ಹೊಳೆಯುತ್ತವೆ.