ಏನಿದೆ ಬದುಕಿನಲಿ
ಅಲೆದಾಟ ಹುಡುಕಾಟ
ಮುಗಿಯದ ಪರಿಪಾಟ
ಆಸ್ವಾದಿಸುವ ಮನಸಿಲ್ಲದಿರೆ
ಏನಿದೆ ಬದುಕಿನಲಿ...
ಮನಸಿನಾಳದಲಿ
ಕನಸ ಲೋಕದಲಿ
ಮೈಮರೆಯದಿರೆ
ಏನಿದೆ ಬದುಕಿನಲಿ...
ಜೊತೆ ನಡೆವವರಾ
ಹಿತವನು ಕಂಡು
ಖುಶಿಪಡದಿದ್ದರೆ
ಏನಿದೆ ಬದುಕಿನಲಿ...
ಭಯದ ಕತ್ತಲಲಿ
ಜೀವವ ತುಂಬುವ
ಬೆಳಕಿಲ್ಲದಿರೆ
ಏನಿದೆ ಬದುಕಿನಲಿ...
ಕಣ್ಗಳರಳುವ
ಪ್ರೇಮದ ಮಿಂಚನು
ಅಳೆಯಲಾಗದಿರೆ
ಏನಿದೆ ಬದುಕಿನಲಿ...
ಇಟ್ಟ ಹೆಜ್ಜೆಯನು
ದಿಟ್ಟಿಸಿ ನೋಡಿ
ಸಾರ್ಥಕವೆನಿಸದಿರೆ
ಏನಿದೆ ಬದುಕಿನಲಿ.....

- Login or register to post comments
- 613 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ತುಂಬಾ ಚೆನ್ನಾಗಿದೆ :)
ಬಹಳ ಚೆನ್ನಾಗಿ ಬರೆದಿದ್ದೀರ. ಯಾವಾಗ ಬರೆದದ್ದು?
ಧನ್ಯವಾದಗಳು
ಧನ್ಯವಾದಗಳು...
ಕವನ,ಬರೆದು ಹಾಗೆ ಕಳಿಸಿರೋದು.
ಉತ್ತಮ ಚಿಂತನೆ
ಸಿಂಚನ ಅವರೇ ತುಂಬಾ ಒಳ್ಳೆಯ ವಿಚಾರ. ಜೀವನದ ಹಲವು ಮಜಲುಗಳಲ್ಲಿ ಎಲ್ಲ ಇದ್ದೂ ಇರದಂತಿರುತ್ತವೆ ಅನ್ನೋದನ್ನು ತೋರಿಸಿದ್ದೀರಾ? ಇದೊಂದು ಮಾಯಾಲೋಕ. ಕೇನೋಪನಿಷತ್ ನಲ್ಲಿ ಹೇಳುವಂತೆ ಈ ಜೀವನ ಒಂದು ಕನಸು. ಕನಸಿನಲ್ಲಿರುವವರೆಗೂ ಅದರ ಅರಿವಾಗದು. ಹೊರಗೆ ಬಂದ ನಂತರ ಅದರ ಅರಿವಾಗುವುದು. ಹೊರಗೆ ಬಂದವರು ಮತ್ತೆ ಅದೇ ಕನಸಿನೊಳಗೆ ಹೋಗಲಾರರು.
ಉತ್ತಮ ಆಧ್ಯಾತ್ಮಿಕ ಚಿಂತನೆ
ತವಿಶ್ರೀನಿವಾಸ
ಧನ್ಯವಾದಗಳು
ಧನ್ಯವಾದಗಳು...
ಇದು ವಸ್ತವಿಕತೆಯನ್ನು ಅರಿತು ಅದರೊಡನೆ ಬೆರೆತು ಸಂತಸದಿ ಬಾಳುವ ಕಲೆ.ಇದನ್ನು ಆಧ್ಯಾತ್ಮ ಚಿಂತನೆ ಎನ್ನುತ್ತೀರಾ?
ಚಿಂತನೆ
ಅಧ್ಯಾತ್ಮ ಚಿಂತನೆ ಅಂದರೆ ತಲೆಯ ಮೇಲೆ ಹೋಗೋ ವಿಷಯಗಳು ಅಂತ ಅಲ್ಲ. ವಿನೋಭಾ ಅವರ ಪ್ರಕಾರ ಅಧ್ಯಾತ್ಮ ಚಿಂತನೆ ಪ್ರಾರಂಭವಾಗುವುದು ಉಪನಿಷತ್ತುಗಳ ಸಾರ ತಿಳಿದ ಮೇಲೆ. ಉಪನಿಷತ್ತಿನಲ್ಲಿ ಜೀವನ ಮಾಡುವ ಕಲೆಯನ್ನೇ ಹೇಳುವುದು. ನೀವು ಹೇಳ್ತಿರೋದೂ ಅದೇ. ಬಹುಶ: ನಿಮಗೆ ತಿಳಿಯದೇ ನಿಮ್ಮ ಅಂತರಾಳದಿಂದ ಬಂದಿರೋ ಮಾತುಗಳು. ಇದಕ್ಕೆ ಪುಸ್ತಕ ಓದಿಯೇ ಜ್ಞಾನ ಬಂದಿರಬೇಕು ಅಂತೇನೂ ಇಲ್ಲ. ಗೋರಾ ಕುಂಬಾರನೂ, ಕನಕದಾಸರೂ, ಅಧ್ಯಾತ್ಮ ಚಿಂತಕರೇ. ಇದೇ ದಿಕ್ಕಿನಲ್ಲಿ ನಿಮ್ಮ ಬರವಣಿಗೆಗಳು ಸಾಗಲಿ. ನಮ್ಮಂತಹವರಿಗೆ ಜೀವನ ಮಾಡುವ ದಾರಿ ತೋರಿಸಿ.
ಆ ಸರ್ವಶಕ್ತನ ಕರುಣೆ ನಿಮ್ಮ ಮೇಲೆ ಸದಾ ಇರಲಿ.
ತವಿಶ್ರೀನಿವಾಸ
ಚೆನ್ನಾಗಿದೆ, ಆದರೆ
ಕವಿತೆಯ ಐಡಿಯಾ ಇಷ್ಟ ಆಯಿತು. ನೀವು ವಿಚಾರಗಳನ್ನು ರೂಪಕಗಳ ಮುಖಾಂತರ ಹೇಳುವುದಕ್ಕೆ ಪ್ರಯತ್ನಿಸಿದರೆ ಇನ್ನೂ ಉತ್ತಮವಾಗುತ್ತದೆ. ಈಗಿರುವಂತೆ ಕೇವಲ ಅಮೂರ್ತ ಹೇಳಿಕೆಗಳಿಗೆ ಪ್ರಾಮುಖ್ಯ ದೊರೆತಿದೆ. ನಾಲ್ಕನೆಯ ಸ್ಟಾಂಜಾದ ಕತ್ತಲು-ಬೆಳಕು ಥರ ನಿಮ್ಮ ಐಡಿಯಾಗಳು ರೂಪಕದ ರೂಪತಳೆದರೆ ಕವಿತೆ ಸದೃಢವಾಗುತ್ತದೆ. ಅಂದಹಾಗೆ ಎರಡನೆಯ ಸಾಲಿನ "ಪರಿಪಾಟ" ಎಂಬ ಪದವನ್ನು ಕುರಿತು ಕೊಂಚ ಯೋಚಿಸಿನೋಡಿ. ಯಾಕೋ ಅದು ಸರಿಯಾಗಿ ಹೊಂದುವಂತೆ ತೋರುತ್ತಿಲ್ಲ.
ನಾಗಭೂಷಣ
:)
ಒಳ್ಳೆಯ ಬೆಳವಣಿಗೆಗಳನ್ನು ಸೂಚಿಸುವ (constructive) ಕಾಮೆಂಟ್ ನಿಮ್ಮದು. ಸಾಹಿತ್ಯ ಜಗತ್ತಿನ ಪ್ರಮುಖರೊಬ್ಬರು ಜೊತೆಗಿದ್ದರೆ ಆಗಬಹುದಾದ "Difference"ಗೆ ಅತ್ಯುತ್ತಮ ಉದಾಹರಣೆಯಿದು.
ಧನ್ಯವಾದಗಳು
ಧನ್ಯವಾದಗಳು...
"ಪರಿಪಾಟ" ಎನ್ನುವ ಶಬ್ಧದ ಬಳಕೆ ನಿಮಗುಂಟುಮಾಡಿದ ಗೊಂದಲ ನನಗೆ ತಿಳಿಯಲಿಲ್ಲ.
'ಪರಿಪಾಟ' ಅಂದರೆ ರೂಢಿ, ಹಿಂದಿನಿಂದ ನಡೆದು ಬಂದ ಪಧ್ದತಿ.ನಮ್ಮ ಬದುಕಿನಲ್ಲಿ ಅವುಗಳ ಪಾತ್ರವೂ ಮುಖ್ಯವಾಗಿದೆ.ನಾವು ಜೀವಿಸುತ್ತಿದ್ದೇವೆ ಅಂದರೆ ಪ್ರತಿ ಕ್ಷಣದಲ್ಲೂ ಏನನ್ನೋ ಪಡೆದುಕೊಳ್ಳುತ್ತೇವೆ,ಕಳೆದುಕೊಳ್ಳುತ್ತೇವೆ.ಹೇಗೆ ಪ್ರತಿಕ್ಷಣವೂ ಕಾರ್ಯನಿರತವಾಗಿರುತ್ತದೆ.ಅಲೆದಾಟ ಹುಡುಕಾಟಗಳು ನಿತ್ಯದ ದಿನಚರಿ.ಇವುಗಳೊಂದಿಗೆ ಅದೆಷ್ಟೊ ಸಂಪ್ರದಾಯಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ರೂಢಿಯಲ್ಲಿವೆ. ಇವೆಲ್ಲವುಗಳನ್ನು ನಾವು ಅಂಟಿಕೊಂಡಿರುವ ಅನಿಶ್ಟವೆಂಬಂತೆ ಚಿತ್ರಿಸಿಕೊಂಡು ಕುರುಡರಾಗಿ ಅನುಸರಿಸುವುದಕ್ಕಿಂತ ಅದರ ಆಳಕ್ಕಿಳಿದು ಅವುಗಳ ಅರ್ಥ ಅರಿತು ಅನುಸರಿಸಿದರೆ ಬದುಕು ಸುಂದರವಾಗುವುದೆಂಬ ಅರ್ಥದಲ್ಲಿ ನಾನು ಇಲ್ಲಿ 'ಪರಿಪಾಟ' ಎಂಬ ಶಬ್ಧವನ್ನು ಬಳಸಿದ್ದೇನೆ.
ಸಿಂಚನಾ
ಪರಿಪಾಟ, ಪರಿಪಾಠ
ಪರಿಪಾಟ, ಪರಿಪಾಟಲು ಈ ಪದಗಳನ್ನು ಅನಗತ್ಯವಾದ ಗೋಜಲು ಅನ್ನುವ ಅರ್ಥದಲ್ಲಿ ಬಳಸುವ ಪರಿಪಾಠವಿದೆ. ನೀವು ಹೇಳುವ ಹ್ಯಾಬಿಟ್ ಅನ್ನುವ ಅರ್ಥದಲ್ಲಿ ಪರಿಪಾಠ ಇರಬೇಕಲ್ಲವೆ? ಪರಿಪಾಠಗಳನ್ನು ಪರೀಕ್ಷಿಸಿಕೊಳ್ಳುವುದು ತೀರ ಅಗತ್ಯವೇ ಸರಿ. ಆ ಮಟ್ಟಿಗೆ ನಿಮ್ಮ ಮಾತು ನಿಜ. ಈಗಿರುವಂತೆ ಮೊದಲ ಸಾಲಿನ ಕೊನೆಯ ಪದದ ಅರ್ಥದೊಡನೆ ಪರಿಪಾಟ ಎಂಬ ಮಾತಿನ ಅರ್ಥ ಯಾಕೋ ಹೊಂದುತ್ತಿಲ್ಲ ಅನ್ನಿಸಿತು.
ಪರಿಪಾಠ
ನನಗನ್ನಿಸಿದಂತೆ ಪರಿಪಾಠವೇ ಸರಿ. ಪರಿಪಾಠ ಅಂದರೆ ರೂಢಿ, ಪದ್ಧತಿ. ಇದು ಸಂಸ್ಕೃತ ಮೂಲದ ಪದ. ಪರಿ ಅಂದರೆ ಸುತ್ತಲು ಮತ್ತು ಪಾಠ ಅಂದರೆ ಕಲಿಯುವಂಥದ್ದು, ಮತ್ತೆ ಮತ್ತೆ ರೂಢಿಸುವುದು. ಮಾಡಿದ್ದನ್ನೇ ಮತ್ತೆ ಮತ್ತೆ ಚಕ್ರ ಸುತ್ತಿದಂತೆ ಮಾಡುತ್ತಿರುವುದು ಎಂದರ್ಥ. ಇದರ ಪ್ರಕಾರ ಪರಿಪಾಠವೇ ಸರಿ ಅಲ್ಲವೇ?
-----
ತವಿಶ್ರೀನಿವಾಸ