ವಚನ ಚಿಂತನ:೧೨: ನಾ ದೇವನಲ್ಲದೆ ನೀ ದೇವನೇ?
ನಾ ದೇವನಲ್ಲದೆ ನೀ ದೇವನೇ
ನೀ ದೇವರಾದರೆ ಎನ್ನನೇಕೆ ಸಲಹೆ
ಆರೈದು ಒಂದು ಕುಡಿತೆ ಉದಕವನೆರೆವೆ
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ
ನಾ ದೇವ ಕಾಣಾ ಗುಹೇಶ್ವರ
ನಾನೇ ದೇವರೇ ಹೊರತು ನೀನು ದೇವರಲ್ಲ. ನೀನು ದೇವರಾದರೆ ನನ್ನನ್ನು ಯಾಕೆ ಸಲಹುವುದಿಲ್ಲ? ನಿನಗೆ ಒಂದಿಷ್ಟು ನೀರೆರೆದು ಪ್ರೀತಿಯಿಂದ ಸ್ನಾನ ಮಾಡಿಸುವವನು ನಾನು, ಹಸಿವಾದಾಗ ನಿನಗೆ ತುತ್ತು ಅನ್ನ ನೀಡುವವನು ನಾನು. ನಾನೇ ದೇವರು.
ಈ ವಚನವನ್ನು ನಾಲ್ಕು ಥರದಲ್ಲಿ ಅರ್ಥಮಾಡಿಕೊಳ್ಳಬಹುದು ಅನ್ನಿಸುತ್ತದೆ. “ಹೋಗಯ್ಯಾ, ನೀನೆಂಥ ದೇವರು, ನಿನ್ನನ್ನು ನಾನು ಸಲಹುತ್ತಿದ್ದೇನೆಯೇ ಹೊರತು ನೀನು ನನ್ನನ್ನು ಸಲಹುತ್ತಿಲ್ಲ” ಅನ್ನುವ ಧೋರಣೆ ಇದ್ದೀತು.
ಅಥವಾ “ನಿನ್ನನ್ನು ನಾನೇ ಕಾಪಾಡಬೇಕಾಗಿ ಬಂದಿದೆಯಲ್ಲ, ನನ್ನನ್ನು ಕಾಪಾಡದ ನೀನು ದೇವರೇ?” ಅನ್ನುವ ಛಾಲೆಂಜ್ ಇರಬಹುದು.
ಅಥವಾ ಎರಡು ಮತ್ತು ಮೂರನೆಯ ಸಾಲುಗಳನ್ನು ಗಮನಿಸಿದರೆ ಯಾರಿಗೆ ಹಸಿವಾದರೆ, ಯಾರಿಗೆ ಬೇಕಾದರೆ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ನನಗೆ ಬೇಕೆಂದು ನಿನಗೆ ಸ್ನಾನ ಮಾಡಿಸುವೆ, ನನಗೆ ಹಸಿವಾದರೆ ನಿನಗೆ ಉಣಬಡಿಸಿ ನಾನು ಉಣುವೆ ಅನ್ನುವ ಅರ್ಥ ಇದ್ದೀತೆ ಅನ್ನಿಸಿ ದೇವರ ಕಲ್ಪನೆ ಮನುಷ್ಯನ ಮನಸ್ಸಿನಲ್ಲಿ ಮೂಡಿದ್ದು, ಆದ್ದರಿಂದ ದೇವರ ಕಲ್ಪನೆಯನ್ನು ಮೂಡಿಸಿಕೊಂಡ ಮನುಷ್ಯನೇ ದೇವರಿಗಿಂತ ಮಿಗಿಲು ಅನ್ನುವ ಅರ್ಥ ಹೊಳೆದೀತು.
ಇನ್ನೂ ಒಂದು ಸಾಧ್ಯತೆ ಎಂದರೆ ನಾನು ಕಲ್ಪಿಸಿಕೊಂಡ, ಆದ್ದರಿಂದಲೇ ನನ್ನೊಳಗಿರುವ ದೇವರು ಮತ್ತು ಹಾಗೆ ಕಲ್ಪಿಸಿಕೊಂಡ ನಾನು ಬೇರೆ ಬೇರೆ ಅಲ್ಲವೇ ಅಲ್ಲ ಅನ್ನುವ ಅರ್ಥವೂ ಇದ್ದೀತು.
ನೀನು ದೇವರೇ ಅನ್ನುವ ಅರ್ಥವಾದರೆ ಮನುಷ್ಯನ ಆತ್ಮವಿಶ್ವಾಸದ ಮಾತಾಗಿ ಕೇಳುತ್ತದೆ. ಛಾಲೆಂಜ್ ಅಂದುಕೊಂಡರೆ ಮನುಷ್ಯನ ವಿಶ್ವಾಸದ ಅತಿರೇಕವಾಗಿ ಕಾಣುವುದೂ ಉಂಟು. ನನಗೆ ಬೇಕೆಂದು ನಿನಗೆ ಉಣಿಸುವೆ ಇತ್ಯಾದಿಯಾಗಿ ಅರ್ಥಮಾಡಿಕೊಂಡರೆ ದೇವರ ಕಲ್ಪನೆ ಮನುಷ್ಯನಿಗೆ ಅನಿವಾರ್ಯ ಅನ್ನಿಸೀತು. ಇನ್ನು ನಾಲ್ಕನೆಯ ಅರ್ಥವೇ ಸರಿ ಎಂದುಕೊಂಡರೆ ಪ್ರತಿಯೊಬ್ಬರೊಳಗೂ ಇರುವ ದೈವತ್ವವನ್ನು ಕುರಿತ ಮಾತು ಅನ್ನಿಸೀತು.

- Login or register to post comments
- 1027 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಸತ್ಯ
ಬಹುಶ: ಇದರ ಅರ್ಥ ಹೀಗೆ :
ನಾನು, ನೀನು ಅ೦ಬೋ ಭೇದ ಇರುವವರೆಗು, ಸನಾತನವಾದ "ನಾನು" ವಿನ ಸತ್ಯ ದರ್ಶನವಾಗುವುದಿಲ್ಲಾ.
"ನೀನು " ಅನ್ನುತಿರುವುದು, ಅಲಿಸಿ ಹೋದ ಅಹ೦ಕಾರಕ್ಕೆ.
ಇಲ್ಲಿ ನಿಸರ್ಗದತ್ತ ಮಹರಾಜ್ ರವರ ಮಾತುಗಳನ್ನು ಓದಬಹುದು.
http://www.nonduality.com/iam.htm
"IAM THAT" ಪುಸ್ತಕದಿ೦ದ ಆಯ್ಕೆಗಳು.
* Go deep into the sense of 'I am' and you will find....focus your mind on 'I am', which is pure and simple being.
* When I say 'I am', I do not mean a separate entity with a body as its nucleus. I mean the totality of being, the ocean of consciousness, the entire universe of all that is and knows. I have nothing to desire for I am complete forever.
*Establish yourself firmly in the awareness of 'I am'. This is the beginning and also the end of all endeavour.
*Refuse all thoughts except one: the thought 'I am'. The mind will rebel in the beginning, but with patience and perseverance it will yield and keep quiet. Once you are quiet, things will begin to happen spontaneously and quite naturally, without any interference on your part.
*Give your heart and mind to brooding over the 'I am', what is it, how is it, what is its source, its life, its meaning. It is very much like digging a well. You reject all that is not water, till you reach the life-giving spring.
Take the first step first. All blessings come from within. Turn within. 'I am' you know. Be with it all the time you can spare, until you revert to it spontaneously. There is no simpler and easier way.
*Before all beginnings, after all ending -- I am. All has its being in me, in the 'I am', that shines in every living being.
*On a deeper level my experience is your experience. Dive deep within yourself and you will find it easily and simply. Go in the direction of 'I am'.
*What do you love now? The 'I am'. Give your heart and mind to it, think of nothing else. This, when effortless and natural, is the highest state. In it love itself is the lover and the beloved.
ಅನಿಸಿಕೆ: ವಚನ ಚಿಂತನ:೧೨: ನಾ ದೇವನಲ್ಲದೆ ನೀ ದೇವನೇ?
ಸರ್,
ನಾ ದೇವನಲ್ಲದೆ ನೀ ದೇವನೇ
ನೀ ದೇವರಾದರೆ ಎನ್ನನೇಕೆ ಸಲಹೆ
ಆರೈದು ಒಂದು ಕುಡಿತೆ ಉದಕವನೆರೆವೆ
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ
ನಾ ದೇವ ಕಾಣಾ ಗುಹೇಶ್ವರ
ಇದರ ತಿಳಿವನ್ನು ನನಗೆ ತಿಳಿದಂತೆ ಹೇಳಲು ಒಂದು ಕಿರುಜತುನ. ನಾ ದೇವನಲ್ಲದೇ ನೀ ದೇವನೇ? ನೀ ದೇವನಾದರೆ ಎನ್ನನೇಕೆ ಸಲಹೆ? ನೀರಡಿಸಿದಾಗ ನೀರು ಕುಡಿವೆ, ಹಸಿದಾಗ ಒಂದು ತುತ್ತು ಓಗರವನ್ನಿಕ್ಕುವೆ. ಅಂದರೆ ಇಲ್ಲಿ ನೀರಡಿಸುವವನೂ ನಾನೇ, ಹಾಗೆ ನೀರಡಿಸಿದಾಗ ನೀರು ಕುಡಿವವನೂ ನಾನೇ, ಮತ್ತು ಹಸಿಯುವವನೂ ನಾನೇ, ಹಾಗೆ ಹಸಿದಾಗ ಅನ್ನ ಉಣ್ಣುವವನೂ ನಾನೇ. ಆದರೆ ಹಸಿವು, ನೀರಡಿಕೆಗಳನ್ನು ನಮ್ಮ ಮೈಗೆ ನೆಂಟಾದವುಗಳೆಂದು ತೆಗೆದುಕೊಂಡರೆ, ಹಸಿಯುವ ನನ್ನ ಮೈಗೆ ಉಣಬಡಿಸುವವ ನಾನೇ ಅಂದ ಮೇಲೇ ನನ್ನನ್ನು ನಾನು ಪೊರೆದುಕೊಳ್ಳುವದಕ್ಕಾಗಿ ಏನು ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಿರುವವ ನಾನೇ, ಹಾಗಾಗಿ ನನಗೆ ನಾನೇ ದೇವರು, ಮತ್ತಾರೂ ಅಲ್ಲ!
Re: ವಚನ ಚಿಂತನ:೧೨: ನಾ ದೇವನಲ್ಲದೆ ನೀ ದೇವನೇ?
ನನ್ನ್ನ ಅರ್ಥೈಸುವಿಕೆ ಹೀಗಿದೆ (ತಪ್ಪಿದ್ದರೆ ದಯವಿಟ್ಟು ತಿದ್ದಿ) :-
ಇಲ್ಲಿ 'ನಾನು' ಎಂಬುದು ಆ ವ್ಯಕ್ತಿಯ ಶ್ರದ್ದ್ಧೆ - ಭಕ್ತಿಗಳ ಪ್ರತೀಕ . ಆದ್ದರಿಂದ ವಚನಕಾರನು ತನ್ನ ಶ್ರದ್ದೆ, ಭಕ್ತಿಗಳು ಬಾಹ್ಯವಾದ ದೇವರಿಗಿಂತ ಮೇಲು ಅಥವ ಮುಖ್ಯ ಎಂದು ಹೇಳುತ್ತಾನೆ. ಇದು ದೇವರ ವಿರುದ್ಧವಾದ ನಿಲುವಲ್ಲದಿದ್ದರೂ ದೈವ - ದೈವ ಭಕ್ತಿಯ ಬಗ್ಗೆ ಜಿಙ್ನಾಸೆ ಮೂಡಿಸುವಂತಹ ವಿಚಾರ. ಮನುಷ್ಯನು ತನ್ನ ಅನುಕೂಲಗಳಿಗೋಸ್ಕರ ಸೃಷ್ತಿಸಿಕೊಂಡ ದೇವರಿಗಿಂತ ಆ ಮನುಷ್ಯಪ್ರಯತ್ನವೇ ಮಿಗಿಲಾದುದು ಎಂದು ವಚನಕಾರನು ತಿಳಿದಿರಬಹುದು.
ಈ ನಿಲುವು ಬಹುಶಃ ಎಲ್ಲ ವಚನಕಾರರಲ್ಲಿ ಕಾಣಬಹುದು. ಉದಾ ಬಸವಣ್ಣನವರ ಈ ವಚನ
"ಎನಗಿಂತ ಕಿರಿಯರಿಲ್ಲ
ಶಿವಭಕ್ತರಿಗಿಂತ ಹಿರಿಯರಿಲ್ಲ ..."
ಇಲ್ಲೂ ಕೂಡ ಮೇಲೆ ತಿಳಿಸಿದ ವಿಚಾರವಿದ್ದರೊ ಅಷ್ಟು ನಿಷ್ಠುರವಾಗಿಲ್ಲ. ಇಲ್ಲಿ ಗಮನಿಸಬೇಕಾದ ಅಂಶ ಬಸವಣ್ಣನವರು "ಶಿವಭಕ್ತರಿಗಿಂತ ಹಿರಿಯರಿಲ್ಲ..." ಎಂದು ಏಕೆ ಹೇಳುತ್ತಾರೆ ಶಿವನಿಗಿಂತ(ದೇವರಿಗಿಂತ) ಹಿರಿಯರಿಲ್ಲ ಎಂದು ಏಕೆ ಹೇಳಲಿಲ್ಲ? ಎಂಬುದು. ಅವರು ದೈವಕ್ಕಿಂತ ದೈವಭಕ್ತಿಯೇ(ಭಕ್ತರೆ) ಹಿರಿದು, ಶುದ್ಧ ದೈವ ಭಕ್ತಿಯುಳ್ಳವನು ದೈವವನ್ನು ಮೀರಿಸಬಲ್ಲ ಎಂದು ನಂಬಿದ್ದರೆಂದು ಖಂಡಿತವಾಗಿ ಹೇಳಬಹುದು. ಈ ಮಾತನ್ನು ಬಹು ಮಟ್ಟಿನ ಆಸ್ತಿಕರು ಒಪ್ಪುತ್ತಾರೊ ತಿಳಿಯದು. ಭಕ್ತಿಯು ಮುಕ್ತಿಯ ಸಾಧನವೊಂದೆ ಅಲ್ಲ ಬದುಕನ್ನು ಹಸನು ಮಾಡುವ ಶಕ್ತಿ ಹೊಂದಿದೆ ಎಂದು ಈ ವಚನಕಾರರು ನಂಬಿರಬಹುದು.
-ಜೈ ಕರ್ನಾಟಕ
ಉ: ವಚನ ಚಿಂತನ:೧೨: ನಾ ದೇವನಲ್ಲದೆ ನೀ ದೇವನೇ?
"ಎನಗಿಂತ ಕಿಱಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ". ಇದು ಬಸವಣ್ಣನವರು ತಿಳಿದ ತತ್ತ್ವ. ಶೈವರ ಪ್ರಕಾರ ತಾನು ಮತ್ತು ಶಿವ ಒಂದೇ ಎಂದು ಅಱಿತವನೇ ನಿಜವಾದ ಶಿವಭಕ್ತ. ಅದಕ್ಕಿಂತ ಮಿಗಿಲಾದ ಅಱಿವಿಲ್ಲ. ಆದ್ದಱಿಂದ ಶಿವಭಕ್ತನೇ ಎಲ್ಲರಿಗಿಂತ ಹಿರಿಯ. ನಾನು ಕಿಱಿಯ ಎಂದು ಬಸವಣ್ಣನವರು ಹೇೞುವುದು ಅವರ ವಿನಯವನ್ನು ತೋಱಿಸುತ್ತದೆ.