ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮರುಕಳಿಸಿದ ನೆನಪು

ಮರುಕಳಿಸಿದ ನೆನಪು
ಈದಿನದ ವಿಜಯಕರ್ನಾಟಕ ಪತ್ರಿಕೆಯಲ್ಲಿ ಶ್ರೀವತ್ಸ ಜೋಶಿಯವರ "ಕಥೆ ಇದೆ ಎಲ್ಲರಲ್ಲೂ, ಕೇಳುವ ಕಿವಿಗಳಿಲ್ಲ ಯಾರಲ್ಲೂ!" ಎಂಬ ಅಂಕಣದಲ್ಲಿ ತಮ್ಮ ಅಣ್ಣ ಟೇಪ್‍ರೆಕಾರ್ಡರ್ ತಂದಾಗಿನ ಅನುಭವ ಮತ್ತು ಅದನ್ನು ಇತ್ತೀಚೆಗೆ ಹಾಕಿ ಕೇಳಿದಾಗ ಆದ ಅನುಭವವನ್ನು ಮನಮುಟ್ಟುವಂತೆ ವರ್ಣಿಸಿದ್ದಾರೆ. ಅದನ್ನು ಓದಿದಾಗ ನನ್ನದೂ ಇಂತಹುದೇ ಒಂದು ಅನುಭವದ ನೆನಪು ಮರುಕಳಿಸಿತು. ಸುಮಾರು 1972-73ರ ಸಮಯ ನಮ್ಮ ಮನೆಗೂ ಟೇಪ್‍ರೆಕಾರ್ಡರ್ ಬಂತು. ಅದರಲ್ಲಿ ನಾನೂ ಜೋಶಿಯವರ ಅಣ್ಣನಂತೆಯೇ ಮನೆಯವರ ಹಾಡು ಮಾತನ್ನೆಲ್ಲಾ ರೆಕಾರ್ಡ್ ಮಾಡುತ್ತಿದ್ದೆ. ನಮ್ಮ ಅತ್ತೆಯವರು ಅಂದರೆ ನನ್ನವರ ತಾಯಿಯವರು ನಮ್ಮ ಮದುವೆಯ ಹೊತ್ತಿಗೆ 65 ವರ್ಷಗಳನ್ನು ದಾಟಿದ್ದರು. ಹೀಗಾಗಿ ಅವರಿಗೆ ಸ್ವಲ್ಪ ಹುಶಾರು ತಪ್ಪಿದರೂ ತುಂಬಾ ಸಪ್ಪಗಾಗಿಬಿಡುತ್ತಿದ್ದರು. ನಮ್ಮ ಮನೆಗೆ ಟೇಪ್‍ರೆಕಾರ್ಡರ್ ಬಂದ ಹೊಸತರಲ್ಲಿ ಒಂದು ದಿನ ಹೀಗೆಯೇ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಬೇಡದ ವಿಚಾರಗಳನ್ನು ಏನೇನೋ ಮನಸ್ಸಿನಲ್ಲಿ ತುಂಬಿಕೊಂಡು ಬೇಜಾರು ಮಾಡಿಕೊಳ್ಳುತ್ತಿದ್ದರು. ಅವರಿಗೆ ಅವನ್ನೆಲ್ಲಾ ಮರೆಯುವಂತೆ ಮಾಡಿ ಉತ್ಸಾಹ ಮೂಡಿಸಬೇಕೆಂದು ಟೇಪ್‍ರೆಕಾರ್ಡರನ್ನು ಆವರ ಬಳಿ ತೆಗೆದುಕೊಂಡು ಹೋಗಿ ಕುಳಿತೆ. "ಅತ್ತೆ, ನೀವು ಹಾಡು ಹೇಳಿ. ನಾನು ರೆಕಾರ್ಡ್ ಮಾಡುತ್ತೇನೆ" ಎಂದು ಹೇಳಿದೆ. ಅವರಿಗೆ ಹಾಡು ಎಂದರೆ ಪ್ರಾಣ. ಎಷ್ಟೊ ದೇವರನಾಮಗಳು ಸಂಪ್ರದಾಯ ಗೀತೆಗಳು ಎಲ್ಲಾ ಹಾಡುತ್ತಿದ್ದರು. ತಕ್ಷಣ ತನ್ನ ನೋವನ್ನೆಲ್ಲಾ ಮರೆತು, ಮಲಗಿದಲ್ಲೆ, "ಸ್ವಲ್ಪ ತಡಿಯೇ, ನಾನು ಒಂದು ಸಲ ಹಾಡಿ ನೋಡ್ಕೋತೀನಿ ಆಮೇಲೆ ಅದನ್ನ ಹಾಕು ಆಯ್ತಾ?" ಎಂದರು. ನಾನು ಹೂಂ ಎಂದರೂ ನಾನಂತೂ ಟೇಪ್‍ರೆಕಾರ್ಡರ್ ಆನ್ ಮಾಡಿಯಾಗಿತ್ತು. ನನ್ನ ಆಶ್ಚರ್ಯಕ್ಕೆ ಪೂರ್ವೀಕಲ್ಯಾಣಿ ರಾಗದ ಮುತ್ತುಸ್ವಾಮಿ ದೀಕ್ಷಿತರ ಕೃತಿ ಮೀನಾಕ್ಷಿಮೇಮುದಂ ಚಿಟ್ಟೆ ಸ್ವರದ ಸಮೇತ ಹಾಡಿದರು. ಜೊತೆಗೆ ಇನ್ನೊಂದು ಕೃತಿಯನ್ನೂ ಹಾಡಿದರು. ನಾನು ರೆಕಾರ್ಡ್ ಮಾಡುತ್ತಿರುವುದು ತಿಳಿಯದೇ ಮಧ್ಯೆ ಮಧ್ಯೆ ಮಾತನಾಡಿದ್ದೆಲ್ಲಾ ರೆಕಾರ್ಡ್ ಆಗಿತ್ತು. ಒಮ್ಮೆ ಒಂದು ಪದ ಸರಿಯಾಗಿ ಹೇಳಲಾಗದೇ ನಗುತ್ತಾ " ಬಾಯಲ್ಲಿ ಒಂದು ಹಲ್ಲೂ ಇಲ್ಲ, ಈಗ ಹಾಡು ಹೇಳೋ ಆಸೆ ನೋಡು ನಂಗೆ" ಎಂದರು. ಮತ್ತೊಮ್ಮೆ ನಾನು ರೆಕಾರ್ಡ್ ಮಾಡುತ್ತಿರುವುದು ಅವರ ಗಮನಕ್ಕೆ ಬಂದು, "ಹಾಕಿದೀಯೇನೇ! ಸ್ವಲ್ಪ ತಡಿ, ಆಮೇಲೆ ಹಾಕು ಅಂತ ಹೇಳಿರಲಿಲ್ವೇನೇ ನಾನು?" ಎಂದು ನನ್ನ ಮೇಲೆ ಕೋಪ ಮಾಡಿಕೊಂಡರು. ಆಮಾತೆಲ್ಲವೂ ರೆಕಾರ್ಡ್ ಆಗಿತ್ತು. ಅದು ನನಗೆ ತುಂಬಾ ಖುಶಿ ಕೊಟ್ಟ ಕಾರಣ ಅದನ್ನು ಅಳಿಸಿ ಹಾಕಿ ಅದರ ಮೇಲೆ ಮತ್ತೆ ರೆಕಾರ್ಡ್ ಮಾಡಲು ಮನಸ್ಸು ಬರಲಿಲ್ಲ. ಮತ್ತೆ ಹೊಸ ಕ್ಯಾಸೆಟ್ ತಂದು, "ಈಗ ಹಾಡಿ ಸರಿಯಾಗಿ ರೆಕಾರ್ಡ್ ಮಾಡ್ತೀನಿ." ಎಂದು ಸಮಾಧಾನ ಮಾಡಿ ಅವರ ಕೋಪವನ್ನು ಇಳಿಸಿದೆ. ನಂತರ ಮಧ್ಯೆ ಮಾತನಾಡದೇ ತದೇಕಚಿತ್ತವಾಗಿ ಅವರು ಹಾಡಿದ್ದನ್ನು ಗಲಾಟೆಯಿಲ್ಲದೇ ರೆಕಾರ್ಡ್ ಮಾಡಿದೆ. ಆದರೆ ನಮ್ಮ ದುರದೃಷ್ಟವೋ ಏನೋ ತುಂಬಾ ಚೆನ್ನಾಗಿ ಮೂಡಿಬಂದಿದ್ದ ಆ ಕ್ಯಾಸೆಟ್ ನಾವು ಮನೆ ಬದಲಾಯಿಸುವಾಗ ಕಳೆದು ಹೋಯಿತು. ಆದರೆ ಮಲಗಿದಕಡೆಯೇ ಅಭ್ಯಾಸ ಮಾಡಿಕೊಳ್ಳಲೆಂದು ಅವರು ಹಾಡಿ ಮಾತನಾಡಿ ನನ್ನಮೇಲೆ ಕೋಪ ಮಾಡಿಕೊಂಡು ಹೇಳಿದ, ಮಾತಾಡಿದ ಕ್ಯಾಸೆಟ್ ನಮ್ಮ ಬಳಿ ಇನ್ನೂ ಜೋಪಾನವಾಗಿ ಇದೆ. ಅದನ್ನು ಅಪರೂಪದ ನಿಧಿ ಎಂಬಂತೆ ನನ್ನವರು ಬಹಳ ಜೋಪಾನ ಮಾಡಿ ಇಟ್ಟಿದ್ದಾರೆ. ಅವರ ಅಕ್ಕಂದಿರು ಅಣ್ಣಂದಿರು ಬಂದಾಗಲೆಲ್ಲ ಹಾಕಿ ಕೇಳಿ ಕೇಳಿಸಿ ಸಂಭ್ರಮಪಡುತ್ತಿರುತ್ತಾರೆ. ಅವರ ಈ ಸಂಭ್ರಮ ನೋಡಿದಾಗಲೆಲ್ಲಾ ಕಳೆದು ಹೋದ ಆ ಕ್ಯಾಸೆಟ್ ನೆನಪಾಗಿ ನನ್ನ ಕಣ್ಣುಗಳಲ್ಲಿ ಹನಿಗೂಡುತ್ತವೆ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
srivathsajoshi's picture

ಆತ್ಮೀಯ ಶೈಲಾಸ್ವಾಮಿ ಅವರಿಗೆ ನಮಸ್ಕಾರ.

ಲೇಖನವನ್ನು ಮೆಚ್ಚಿ, ನಿಮ್ಮ ನೆನಪಿನ ಸುರುಳಿಯನ್ನು ಬಿಚ್ಚಿ ಇಲ್ಲಿ ಸಂಪದದ ಓದುಗರನ್ನೂ ಒಳ್ಳೆಯ ಚಿಂತನೆಗೆ ಹಚ್ಚಿದ್ದೀರಿ, ನಿಮಗೆ ಧನ್ಯವಾದಗಳು. ನಿಮ್ಮ ಅತ್ತೆಯವರ ಧ್ವನಿಯನ್ನು ರೆಕಾರ್ಡ್ ಮಾಡಿದ ನಿಮ್ಮ ಅನುಭವಕಥನವನ್ನೂ ಮನಮುಟ್ಟುವಂತೆ ಬರೆದಿದ್ದೀರಿ.

ನನ್ನ ಲೇಖನದಲ್ಲಿ ಪ್ರಸ್ತಾಪಿಸಿದ್ದ ’ಇನ್ನೊಬ್ಬ ಚಿಕ್ಕಪ್ಪ ಸ್ವಾತಂತ್ರ್ಯಸಮರದ ಕಥನವನ್ನು ಹೇಳಿದರು...’ ಅಂಶವನ್ನು ಲೇಖನದಲ್ಲಿ ನನಗೆ ವಿಸ್ತರಿಸುವುದಕ್ಕಾಗಲಿಲ್ಲ (ಒಟ್ಟು ಸ್ಥಳಾವಕಾಶಕ್ಕೆನ್ಯಾಯವೊದಗಿಸಬೇಕಿದ್ದುದರಿಂದ). ಆದರೆ ಅದರ ಬಗ್ಗೆಯೇ ಲೇಖನ ಬರೆಯುವಷ್ಟು ಸ್ವಾರಸ್ಯಕರವಾಗಿತ್ತು ಆ ರೆಕಾರ್ಡಿಂಗ್ ಪ್ರಸಂಗ. ನಮ್ಮ ಚಿಕ್ಕಪ್ಪ (ಯಕ್ಷಗಾನಪಟು ಡಾ| ಪ್ರಭಾಕರ ಜೋಶಿಯವರ ತಂದೆ) ಅಪ್ಪಟದೇಶಪ್ರೇಮಿ, ಹಿಂದುತ್ವ ಅವರ ಧಮನಿಧಮನಿಗಳಲ್ಲಿ ಹರಿಯುತ್ತಿತ್ತು. ಮರಾಠಿ ಪತ್ರಿಕೆ ’ಕೇಸರಿ’ಯನ್ನು ತರಿಸಿ ಓದುತ್ತಿದ್ದರು. ವೃದ್ಧಾಪ್ಯದಲ್ಲಿ ಅವರಿಗೆ ಸ್ಥೂಲಕಾಯ ಬಂದದ್ದರಿಂದ ಓಡಾಡುವುದಕ್ಕೂ ಆಗುತ್ತಿರಲಿಲ್ಲ. ಕುಳಿತಲ್ಲಿಯೇ ಗ್ರಂಥಪಠಣ, ಪತ್ರಿಕೆಓದು, ಮೊಮ್ಮಕ್ಕಳಿಗೆ ಸ್ತೋತ್ರ/ಸಂಸ್ಕೃತ ಹೇಳಿಕೊಡುವುದು ಇತ್ಯಾದಿ ಮಾಡುತ್ತಿದ್ದರು. ಅವರನ್ನು ಭೇಟಿಯಾಗಲು ನನ್ನ ಅಣ್ಣ ಹೋಗಿದ್ದಾಗ ಸ್ವಾತಂತ್ರ್ಯಸಮರದ ಒಂದು ಕಥೆಯನ್ನು ಹೇಳಲು ಸಂತೋಷದಿಂದ ಒಪ್ಪಿದ್ದರು.

ಚಿಕ್ಕಪ್ಪನವರಿಗೆ ಎಲೆಅಡಿಕೆ ಹಾಕುವ ಅಭ್ಯಾಸ ಇತ್ತು. ಅವತ್ತಿನ ರೆಕಾರ್ಡಿಂಗ್ ವೇಳೆಯೂ ಎಲೆಅಡಿಕೆ ಬಾಯಲ್ಲಿ ಹಾಗೆಯೇ ಇರುವಾಗಲೇ ಮಾತು. ನಡುವೆ ಪೀಕದಾನಿಯಲ್ಲಿ ಉಗುಳಿದ ಶಬ್ದ. ಅದರ ಬಗ್ಗೆ ತಪ್ಪಿತಸ್ಥಭಾವ ಬಂದು "ಓಹ್ ಅದೂ ಸೇರಿಕೊಂಡುಬಿಟ್ಟಿತಾ?" ಎಂದು ಹೇಳಿಬಿಟ್ಟರು, ಅಷ್ಟೇಅಲ್ಲ ಆರೀತಿ ತಾವು ಕೇಳಿದ್ದೂ ರೆಕಾರ್ಡ್ ಆಯಿತಲ್ಲ ಎಂದು ಅವರಿಗೆ ಅರಿವಾಗುವುದಕ್ಕೂ ತಡವಾಗಲಿಲ್ಲ. "ಇನ್ನು ಗಪ್ ಚುಪ್ ಆಗಿ ಕಥೆ ಹೇಳುತ್ತೇನೆ..." ಎಂದು ಮುಂದುವರೆಸಿದರು. ಆ ಮಾತುಗಳೆಲ್ಲ ನಮ್ಮಲ್ಲಿರುವ ಕ್ಯಾಸೆಟ್‌ನಲ್ಲಿ ಭದ್ರವಾಗಿವೆ, ಆ ಹಿರಿಯ ಚೇತನದ ಬೆಚ್ಚಗಿನ ನೆನಪಾಗಿ ಉಳಿದಿವೆ!

ನಿಮ್ಮ ಬರಹಕ್ಕೆ ಮತ್ತೊಮ್ಮೆ ಕೃತಜ್ಞತೆಗಳು.

shylaswamy's picture

ಪ್ರಿಯ ಜೋಶಿಯವರೇ,
ತಮ್ಮ ಪ್ರತಿಕ್ರಿಯೆ ನೋಡಿ ಸಂತೋಷವಾಯಿತು. ನಿಜಕ್ಕೂ ನಮ್ಮ ಹಿರಿಯರ ಮಾತುಕಥೆ , ಅವರ ಆ ಮುಗ್ಧತೆ, ಆ ಉತ್ಸಾಹ ಇಂದಿನ ಜನರಲ್ಲಿ ಕಾಣಲು ಸಾಧ್ಯವೇ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ನಿಮ್ಮ ಚಿಕ್ಕಪ್ಪನವರ ವಿಚಾರ ಓದಿದಾಗ ತುಂಬಾ ಖುಶಿಯಾಯಿತು.
ವಿಜಯಕರ್ನಾಟಕದಲ್ಲಿ ಬರುವ ನಿಮ್ಮ ಎಲ್ಲಾ ಬರಹಗಳನ್ನೂ ನಾನು ಓದುತ್ತೇನೆ. ನಿಮ್ಮ ಭಾಷೆ ಮತ್ತು ಶೈಲಿ ನನಗೆ ತುಂಬಾ ಇಷ್ಟ. ತಮ್ಮ ತಕ್ಷಣದ ಪ್ರತಿಕ್ರಿಯೆಗೆ ಧನ್ಯವಾದಗಳು.
ಶೈಲಾಸ್ವಾಮಿ

ASHOKKUMAR's picture

ಒಂದು ಒಳ್ಳೆಯ ಬರಹ ಇನ್ನೊಂದು ಒಳ್ಳೆಯ ಬರಹಕ್ಕೆ ಸ್ಪೂರ್ತಿ!
*ಅಶೋಕ್

gurubaliga's picture

ಪ್ರಭಾಕರ ಜೋಷಿಯವರ ಎಲ್ಲ ಪನ್ನುಗಳನ್ನು, ಚಟಾಕಿಗಳನ್ನು, ವಾದ ಚಾತುರ್ಯವನ್ನೂ, ವಿಷಯ ಭಂಡಾರವನ್ನೂ ಹತ್ತಿರದಿಂದ ಸವಿದು ಬಲ್ಲ ನನಗೆ ಅವರ ತಂದೆಯವರೂ ಎಷ್ಟು ಕ್ರಿಯಾಶೀಲ ವ್ಯಕ್ತಿತ್ವದವರಿರಬಹುದು ಎನ್ನುವ ಅಂದಾಜು ದಕ್ಕಿತು.
ವಿಕ ಲೇಖನ ನಾನು ಓದಿಲ್ಲ. ಆದರೆ ನಿಮ್ಮ ಈ ಚುಟುಕು ಕಾಮೆನ್ಟಿನಲ್ಲೆ ಅದರ ಬಾಲಂಗೋಚಿಯ ದರ್ಶನವಾಯಿತು.
ಸೊಲ್ಮೆ
ಹಾಗೆ ಇಂಥದ್ದೊಂದು ವಿಷಯಕ್ಕೆ ಸಾಕ್ಷಿಯಾಗಿ ತಮ್ಮ ಲೇಖನ ಬರೆದ ಶೈಲಾ ಸ್ವಾಮಿಯವರಿಗೂ ಸೊಲ್ಮೆ.

palachandra's picture

ನೆನಪು ಮಧುರ, ೪ ದಶಕಗಳವರೆಗೂ ಜೋಪಾನವಾಗಿ ಕಾಯ್ದಿಟ್ಟುಕೊಂಡು ಕ್ಯಾಸೆಟ್ಟು ಹಾಗೂ ನಮಗೆ ಅದರ ಸವಿಯುಣಿಸಿದ್ದಕ್ಕೆ ನನ್ನಿ

--
PaLa

ಗಣೇಶ's picture

ಶೈಲಾ ಸ್ವಾಮಿಯವರೆ,

'ಕಥೆ ಇದೆ ಎಲ್ಲರಲ್ಲೂ, ಕೇಳುವ ಕಿವಿಗಳಿಲ್ಲ ಯಾರಲ್ಲೂ' ಶ್ರೀವತ್ಸರವರ ಲೇಖನ ನಾನೂ ಓದಿದ್ದೆ. ಹೆಡ್ಡಿಂಗೇ ಸೂಪರ್. ನಮ್ಮ ಅಜ್ಜಿ ಸಹ ತಮ್ಮ ಬಗ್ಗೆ,ತಮ್ಮ ಹಿರಿಯರ ಬಗ್ಗೆ ಹೇಳಿದ್ದನ್ನು ಟೇಪ್ ಮಾಡಿದ್ದೆ.೨ ಟೇಪು ಮುಗಿದರೂ ಅವರು ಹೇಳುವುದನ್ನು ಮುಗಿಸಿರಲಿಲ್ಲ. ಈ ಸಿ.ಡಿ. ಯುಗ ಸುರುವಾದ ಮೇಲೆ ಅದು ಮನೆಯಲ್ಲಿದೆಯೋ ಕಳೆದು ಹೋಗಿದೆಯೋ -ಹುಡುಕ ಬೇಕು.

ಕೆಲ ವರ್ಷದ ಹಿಂದೆ ವಿಡಿಯೋ ಕ್ಯಾಮರ ತಂದಾಗ ತಂದೆ- ತಾಯಿಯ ಬಳಿ ತಮ್ಮ ಅನುಭವಗಳ ಬಗ್ಗೆ ಹೇಳಲು ಕೇಳಿದಾಗ ಒಪ್ಪಲೇ ಇಲ್ಲ. ನಂತರ ಮೊಮ್ಮಕ್ಕಳೆಲ್ಲರು ಸುತ್ತು ಹಾಕಿ ಕುಳಿತು ಕೇಳಿದಾಗ ಹೇಳಲು ಸುರುಮಾಡಿದರು-ಮಾತನಾಡಿದರು,ಅತ್ತರು(ತಾಯಿ) ,ಮೌನವಾದರು,ಪುನ: ಮಾತು, ನಗು,ಮಾತು ಅಳು...
ಮೊಮ್ಮಕ್ಕಳೂ ಜತೆಯಲ್ಲಿ ಅಳುತ್ತಿದ್ದರು,ನಗುತ್ತಿದ್ದರು.
ಎಷ್ಟೊಂದು ವಿಷಯಗಳು ಅವರ ಮನದೊಳಗೇ ಇತ್ತು.ಅವರಿಗೆ ಹೇಳುವ ಮನಸಿತ್ತೋ ಏನೋ? ನಾವು ಕೇಳುತ್ತೇವೋ ಇಲ್ಲವೋ ಎಂದು ಸುಮ್ಮನಿದ್ದರು ಕಾಣುತ್ತದೆ. ಕೇಳುವ ಕಿವಿ ಬಂದಾಗ ಕತೆ ಬಿಚ್ಚಿಡುತ್ತಾ ಹೋದರು.
ಶ್ರೀವತ್ಸ,ಶೈಲಾರವರಿಗೆ ನನ್ನಿ,
-ಗಣೇಶ.

srivathsajoshi's picture

ಗಣೇಶ್ ಅವರಿಗೆ ನಮಸ್ಕಾರ.

ಲೇಖನವನ್ನು "ಅನುಭವಿಸಿ" ಪ್ರತಿಕ್ರಿಯೆ ಬರೆಯುವುದೆಂದರೆ ಹೀಗೆ! ನಿಮಗೆ ಹೃತ್ಪೂರ್ವಕ ಧನ್ಯವಾದ.
"ನಂತರ ಮೊಮ್ಮಕ್ಕಳೆಲ್ಲರು ಸುತ್ತು ಹಾಕಿ ಕುಳಿತು ಕೇಳಿದಾಗ ಹೇಳಲು ಸುರುಮಾಡಿದರು-ಮಾತನಾಡಿದರು,ಅತ್ತರು(ತಾಯಿ) ,ಮೌನವಾದರು,ಪುನ: ಮಾತು, ನಗು,ಮಾತು ಅಳು...ಮೊಮ್ಮಕ್ಕಳೂ ಜತೆಯಲ್ಲಿ ಅಳುತ್ತಿದ್ದರು,ನಗುತ್ತಿದ್ದರು...." - ಹೌದು, storycorpsನ very concept ಅದೇ!

ಅಂದಹಾಗೆ ವಿ.ಕ ಲೇಖನದುದ್ದಕ್ಕೂ ಸ್ಟೋರಿಕಾರ್ಪ್ಸ್ ಎಂದಿದೆ. ಇಂಗ್ಲೀಷ್ ಉಚ್ಚಾರದ ಪ್ರಕಾರ ಅದು ’ಸ್ಟೋರಿಕೋರ್’ ಎಂದಾಗಬೇಕು. ಉಳಿದಂತೆ ವೆಬ್‌ಸೈಟ್ ವಿಳಾಸ (storycoprs.net) ಮತ್ತು ಇತರ ವಿಷಯಗಳೆಲ್ಲ ಸರಿಯಾಗಿಯೇ ಇವೆ.

venkatesh's picture

ಶ್ರೀವತ್ಸಜೋಷಿ ಹಾಗೂ ಶೈಲಜಾರವರಿಗೆ,

ಉತ್ತಮ ವಿಚಾರ ವಿನಿಮಯ. ನಿಮ್ಮ ಜೊತೆ ನನ್ನದೂ ಸ್ವಲ್ಪ ಇರಲೆಂದು ಹೇಳುತ್ತಿದ್ದೇನೆ. ನಮ್ಮಮಾವ, [ಹೆಣ್ಣುಕೊಟ್ಟಮಾವ] ಶ್ರೀ. ದಿವಂಗತ ತಿಮ್ಮಪ್ಪಯ್ಯನವರ ಆಕಾಶವಾಣಿಯ, ಧ್ವನಿಮುದ್ರಿತ ಸಂವಾದದ ಕ್ಯಾಸೆಟ್ ನಮ್ಮ ಬಳಿಯಿದೆ. ನಾವು ಶ್ಯಾನುಭೋಗರ ಮನೆತನದವರು. ಅದಲ್ಲದೆ, ನಾವು ಆ ಕ್ಷೇತ್ರದ ಸುಂಕವನ್ನೂ ವಸೂಲಿಮಾಡುತ್ತಿದ್ದೆವು. [ನಮ್ಮ ಹಿರಿಯರು]

ಇದು ಸುಮಾರು ಒಂದೂವರೆ ಗಂಟೆಗಳಕಾಲ, ಚಿತ್ರದುರ್ಗ ಬಾನುಲಿಕೇಂದ್ರದಿಂದ ಪ್ರಸಾರವಾಗಿತ್ತು. ಆ ಕಾರ್ಯಕ್ರಮದ ಒಂದು ತುಣುಕಿನ ಬಗ್ಗೆ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳುತ್ತಿದ್ದೇನೆ. ಆಗಿನ ಕಾಲದ ಶ್ಯಾನುಭೋಗರ ಬಗ್ಗೆ, ನಮ್ಮ ಮಾವನವರನ್ನು ಮಾತಾಡಿಸಿ, ಸಂವಾದಕ್ಕೆ ಒಪ್ಪಿಸಿದ್ದರು. ಅವರಿಗೆ ಅದೊಂದು ಸಡಗರ. ಅಂದಿನ ವ್ಯವಸ್ಥೆಯಲ್ಲಿ, ಅವರೇ ಕೊನೆಯ ಶ್ಯಾನುಭೋಗರು. ಅವರ ನಂತರ, ವಿಲೇಜ್ ಅಕೌಂಟೆಂಟ್ ಗಳು ಹೊಸದಾಗಿ ಬಂದರು. ನಮ್ಮ ಮಾವನವರು, ಆಕಾಶವಾಣಿಯ ಅಧಿಕಾರಿಯು ಕೇಳಿದ ಪ್ರಶ್ನೆಗಳಿಗೆಲ್ಲಾ ಸಮರ್ಪಕ ಉತ್ತರಗಳನ್ನು ಶುದ್ಧಕನ್ನಡದಲ್ಲಿ ಕೊಟ್ಟು, ಆಗಿನಕಾಲದ ಜಮಾಬಂದಿ ಲೆಖ್ಹ, ಮತ್ತೆ ಪಾಣಿ, ಗೋಮಾಳ, ಕೆರೆ, ಜಮೀನು ಇತ್ಯಾದಿಗಳ ವಿಸ್ತೀರ್ಣದ ವಿವರಗಳು ಗುಂಟೆ ಎಕರೆ ಇತ್ಯಾದಿಗಳಬಗ್ಗೆ ಇರುವ ಮಾಹಿತಿಗಳನ್ನು ಈಗಲೂ ನಾವು ಕೇಳಿ ಆನಂದಿಸುತ್ತಿದ್ದೇವೆ. ಅದೊಂದು ರಸಾನುಭವ !

ಕೊಂಡಿಯನ್ನು ಗಮನಿಸಿ :

http://emmetammanna....

ಕನ್ನಡ ನನ್ನ ತಾಯ್ನುಡಿ; ನನ್ನುಸಿರು.

venkatesh's picture

ಇದರ ಸರಿಯಾದ ಕೊಂಡಿ ಕೆಳಗಿದೆ :

http://kn.wikipedia....

ಕನ್ನಡ ನನ್ನ ತಾಯ್ನುಡಿ; ನನ್ನುಸಿರು.

anil.ramesh's picture

Quote:
ಆದರೆ ನಮ್ಮ ದುರದೃಷ್ಟವೋ ಏನೋ ತುಂಬಾ ಚೆನ್ನಾಗಿ ಮೂಡಿಬಂದಿದ್ದ ಆ ಕ್ಯಾಸೆಟ್ ನಾವು ಮನೆ ಬದಲಾಯಿಸುವಾಗ ಕಳೆದು ಹೋಯಿತು.

ಕ್ಯಾಸೆಟ್ ಕಳೆದುಹೋದ ವಿಷಯ ತಿಳಿದು ಬೇಸರವಾಯ್ತು.

Quote:
ಆದರೆ ಮಲಗಿದಕಡೆಯೇ ಅಭ್ಯಾಸ ಮಾಡಿಕೊಳ್ಳಲೆಂದು ಅವರು ಹಾಡಿ ಮಾತನಾಡಿ ನನ್ನಮೇಲೆ ಕೋಪ ಮಾಡಿಕೊಂಡು ಹೇಳಿದ, ಮಾತಾಡಿದ ಕ್ಯಾಸೆಟ್ ನಮ್ಮ ಬಳಿ ಇನ್ನೂ ಜೋಪಾನವಾಗಿ ಇದೆ. ಅದನ್ನು ಅಪರೂಪದ ನಿಧಿ ಎಂಬಂತೆ ನನ್ನವರು ಬಹಳ ಜೋಪಾನ ಮಾಡಿ ಇಟ್ಟಿದ್ದಾರೆ.

ಮರುಕ್ಷಣವೇ ಇದನ್ನು ಓದಿ ಸಂತೋಷವಾಯ್ತು.

ನಿಮ್ಮ ಅತ್ತೆಯವರು ನಿಮ್ಮನ್ನು ಸಂಬೋಧಿಸಿದ ರೀತಿ ನೋಡಿ, ನಮ್ಮ ಅಜ್ಜಿ (ತಂದೆಯ ತಾಯಿ) ಯ ನೆನಪಾಯಿತು. ಅವರೂ ಹೀಗೇ ನನ್ನ ಅಮ್ಮ ಮತ್ತು ನನ್ನ ದೊಡ್ಡಮ್ಮನ ಜೊತೆ ಮಾತಾಡೋದು...

ಈಗ ಅವರು ನಮ್ಮ ದೊಡ್ಡಪ್ಪನ ಮನೆಯಲ್ಲಿ ಇದ್ದಾರೆ.

-ಅನಿಲ್.

shylaswamy's picture

ಪ್ರಿಯ ಸ್ನೇಹಿತರೇ,
ತಮ್ಮೆಲ್ಲರ ಪ್ರತಿಕ್ರಿಯೆಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು. ಅಂತೂ ಶ್ರೀವತ್ಸ ಜೋಶಿಯವರು ಸಂಪದಿಗರೆಲ್ಲರಿಗೂ ತಮ್ಮ ತಮ್ಮ ಮನೆಯ ಹಿರಿಯರನ್ನು ನೆನಪು ಮಾಡಿಕೊಳ್ಳುವಂತೆ ಮಾಡಿ ನಮ್ಮೆಲ್ಲರ ಕೃತಜ್ಞತೆಗೆ ಪಾತ್ರರಾಗಿದ್ದಾರೆ. ನಿಜಕ್ಕೂ ಅವರ ಲೇಖನ ಎಷ್ಟು ಒಳ್ಳೆಯ ಕೆಲಸ ಮಾಡಿದೆ ಅಲ್ವಾ? ಎಲ್ಲರಿಗೂ ಒಮ್ಮೆ ನಮ್ಮ ಹಿರಿಯರ ಪ್ರೀತಿ, ಸ್ನೇಹ, ಮುಗ್ಧತೆ, ಹುಸಿಕೋಪ ಎಲ್ಲವನ್ನೂ ಮೆಲುಕು ಹಾಕುವಂತಾಯಿತಲ್ಲ! ಇಲ್ಲಿ ಪ್ರತಿಕ್ರಿಯಿಸಿರುವ ವೆಂಕಟೇಶ್, ಗಣೇಶ್ ಮತ್ತು ಅನಿಲ್ ತಮ್ಮ ಹಿರಿಯರನ್ನು ನೆನಪು ಮಾಡಿಕೊಂಡ ರೀತಿ ಎಷ್ಟು ಚಂದ! ಆದರೆ ಅನಿಲ್ ಅವರೇ, ನಾನು ಕಳೆದುಕೊಂಡ ಕ್ಯಾಸೆಟ್‍ನಲ್ಲಿ ನನ್ನ ಅತ್ತೆಯವರು ಸಾಕಷ್ಟು ಹಾಡುಗಳನ್ನು ಹಾಡಿದ್ದರು. ನಿಜಕ್ಕೂ ಅದು ನಮ್ಮ ವರೆಗೆ ದೊಡ್ಡ ನಷ್ಟವೇ. ಆದರೂ ಇಷ್ಟಾದರೂ ಉಳಿದಿದೆಯಲ್ಲ ಅಂತ ಸಮಾಧಾನ ಅಷ್ಟೆ. ನಿಮ್ಮೆಲ್ಲರ ಪ್ರತಿಕ್ರಿಯೆ ನೋಡಿ ಖುಶಿಯಾಗುತ್ತಿದೆ ನನಗೆ. ಹಾಗೆಯೇ ಪ್ರೋತ್ಸಾಹಕರ ಪ್ರತಿಕ್ರಿಯೆ ನೀಡಿದ ಅಶೋಕ್ ಕುಮಾರ್, ಗುರುಬಾಳಿಗಾ ಹಾಗೂ ಪಾಲಚಂದ್ರ ಅವರಿಗೂ ಕೂಡ ನನ್ನ ಧನ್ಯವಾದಗಳು.
ಶೈಲಾಸ್ವಾಮಿ