19
June
2013

ಆತ್ಮಾವಲೋಕನ

December 7, 2008 - 4:48pm
hariharapurasridhar
ಉಪನ್ಯಾಸ ಮಾಡುವುದು, ಚಿಂತನೆಗಳನ್ನು ಬರೆಯುವುದು ಸುಲಭ. ಮನಸ್ಸಿನಲ್ಲಿ ಮೂಡುವ ಒಳ್ಳೆಯ ಭಾವನೆಗಳಿಗೆ ಅಕ್ಷರ ಕೊಡುವ ಕೆಲಸವನ್ನು ಮಾಡಿದರೆ ಲೇಖನಗಳು ಮೂಡಿಬಂದುಬಿಡುತ್ತವೆ. ಆದರೆ ಅದರಲ್ಲಿ ತಿಳಿಸುವ ನೀತಿಯಾಗಲೀ ಒಳ್ಳೆಯವಿಚಾರವಾಗಲೀ ನಮ್ಮ ಮನೆಯಲ್ಲಿದೆಯೇ? ಎಂದು ಆತ್ಮಾವಲೋಕನ ,ಮಾಡಿಕೊಂಡಾಗ ಹೇಗಿರುತ್ತೆ? ನನ್ನ ಮಿತ್ರನೊಬ್ಬ ಸಾಮಾಜಿಕ ಕಾರ್ಯಕರ್ತ. ಸಮಾಜದ ಕೆಲಸಕ್ಕಾಗಿ ಊರೂರು ಅಲೆಯುತ್ತಾನೆ. ಆದರೆ ಅವರ ಮನೆಯಲ್ಲಿಯೇ ನೆಮ್ಮದಿಯಿಲ್ಲ. ಅತೀ ಸಿಟ್ಟಿನ ಸ್ವಭಾವ. ತಾನು ತನ್ನನ್ನು ತಿದ್ದಿಕೊಳ್ಳದೇ ಇತರರಿಗೆ ಉಪದೇಶ ಮಾಡಿದರೆ ಎಷ್ಟು ಪೊಳ್ಳಾಗಿ ಕಣುತ್ತೆ, ಅಲ್ಲವೇ! ಅನೇಕ ವೇಳೆ ನಮಗೆ ಸರಿ ಕಂಡಿದ್ದನ್ನೆಲ್ಲಾ ತುಂಬಾ ಚಿಂತನ-ಮಂಥನ ನಡೆಸದೆ ಬರೆಯುವ ಸ್ವಭಾವ ನಮ್ಮಂತ ಅನೇಕರಿಗೆ. ಅದಕ್ಕಾಗಿಯೇ ನನ್ನ ಮಿತ್ರನೊಬ್ಬ ಹೇಳುತ್ತಾನೆ. "ನಿಮಗೆಲ್ಲಾ ಬರೆಯುವ ತಿಕ್ಕಲು"- ಹೌದಲ್ಲವೇ ನಾವು ಬರೆಯುವುದನ್ನು ನಿಲ್ಲಿಸಿ ಬಿಟ್ಟರೆ ಪ್ರಪಂಚವೇನೂ ಮುಳುಗುವುದಿಲ್ಲ, ಅಲ್ಲವೇ! ಅಲ್ಲದೆ ನಮಗೆ ಸರಿಕಂಡದ್ದು ಎಲ್ಲರಿಗೂ ಸರಿಕಾಣಬೇಕೆಂದೇನೂ ನಿಯಮವಿಲ್ಲ. ಹಾಗೆ ನೋಡಿದರೆ ಏನು ನಡೆಯುತ್ತಿದೆಯೋ ಅದು ಸರಿಯೂ ಅಲ್ಲ, ತಪ್ಪೂ ಅಲ್ಲ. ನನ್ನ ಇನ್ನೊಬ್ಬ ಮಿತ್ರ ಹೇಳುತ್ತಿರುತ್ತಾನೆ" ಚಿಂತನೆ ಬರೆಯುವವರೆಲ್ಲಾ, ಭಾಷಣ ಮಾಡುವವರೆಲ್ಲಾ ಅದರಂತೆ ಬದುಕಿ ಬಿಟ್ಟರೆ , ನಿಜವಾಗಿ ಸಮಾಜದಲ್ಲಿ ಅಷ್ಟರ ಮಟ್ಟಿಗೆ ಅನೀತಿ ಕಡಿಮೆಯಾಗುತ್ತೆ! ಅಬ್ಭಾ! ಎಂತಹಾ ಮಾತು, ಅಲ್ವಾ? ಒಮ್ಮೆ ಎದೆಮುಟ್ಟಿ ನೋಡಿಕೊಳ್ಳಲೇ ಬೇಕಾಗುತ್ತದೆ. ಒಮ್ಮೆ ಒಬ್ಬ ಪ್ರವಚನ ಕಾರರ ಪ್ರವಚನವನ್ನು ಏರ್ಪಡಿಸಿದ್ದೆ. ಆಗ್ಗಾಗ್ಗೆ ಅಂತಾ ಕೆಲಸ ಮಾಡ್ತಾ ಇರ್ತೀನಿ. ನನ್ನ ಮಿತ್ರ ವೈದ್ಯರನ್ನು ಪ್ರವಚನ ಕೇಳಲು ಕರೆದೆ. ಅವರು ನನ್ನನ್ನು ಕೇಳಿದರು "ಯಾವ ವಿಷಯದ ಬಗ್ಗೆ ಪ್ರವಚನ ಮಾಡುತ್ತಾರೆ?" ನಾನು ಹೇಳಿದೆ" ಆನಂದದ ಹಾದಿಯಲ್ಲಿ’ ವೈದ್ಯರು-" ಯಾರು ಪ್ರವಚನ ಕೇಳಲು ಬರಬೇಕು?" ನಾನು-"ಎಲ್ಲರೂ ಬರಬೇಕು" ವೈದ್ಯರು- " ನೋಡಿ ಪ್ರವಚನ ಮಾಡುವವರು ಮತ್ತು ನೀವು ಆನಂದದಿಂದ ವಂಚಿತರಾಗಿದ್ದೀರಿ, ಅದಕ್ಕಾಗಿ ಅವರು ಹೇಳಿ ತೀಟೆ ತೀರಿಸಿಕೊಳ್ಳುತ್ತಾರೆ, ನೀವು ಪ್ರವಚನ ಕೇಳುವಷ್ಟು ಹೊತ್ತಾದರೂ ಆನಂದವಾಗಿರಬಹುದೆಂದುಕೊಂಡಿದ್ದೀರಿ" ವೈದ್ಯರು ಪ್ರವಚನಕ್ಕೆ ಬರದಿದ್ದರೂ ಚಿಂತೆಯಿಲ್ಲ, ಅವರು ನನ್ನ ಮನಸ್ಸಿನಲ್ಲಿ ಚಿಂತನೆ ಯೊಂದಕ್ಕೆ ದಾರಿ ಮಾಡಿಕೊಟ್ಟಿದ್ದರು. ಹೌದು,ನಾವು ಚಿಂತನ-ಮಂಥನ ಬರವಣಿಗೆಯಲ್ಲಿ ನಡೆಸಿದರೆ ಸಾಲದು, ನಮ್ಮ ಮನೆಗಳಲ್ಲಿ ಮೊದಲು ನಮ್ಮ ಒಳ್ಳೆಯ ಚಿಂತನೆಗಳು ಅನುಷ್ಠಾನಕ್ಕೆ ಬರಬೇಕು. ಆಗ ನಮ್ಮ ಬರವಣಿಗೆ, ಉಪನ್ಯಾಸಗಳಿಗಿಂತ ನಮ್ಮ ಬದುಕು ಪರಿಣಾಮ ಬೀರಬಲ್ಲದು.
ಲೇಖನ ವರ್ಗ (Category): 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ASHOKKUMAR on
>>ಆದರೆ ಅದರಲ್ಲಿ ತಿಳಿಸುವ ನೀತಿಯಾಗಲೀ ಒಳ್ಳೆಯವಿಚಾರವಾಗಲೀ ನಮ್ಮ ಮನೆಯಲ್ಲಿದೆಯೇ? ಎಂದು ಆತ್ಮಾವಲೋಕನ ,ಮಾಡಿಕೊಂಡಾಗ ಹೇಗಿರುತ್ತೆ? ಹೌದು ಸರ್.. ಒಳ್ಳೆಯ ವಿಚಾರಗಳು ನಮ್ಮ ಮನದಲ್ಲಿದ್ದರೆ ಸಾಲದು..ನಮ್ಮ ನಡೆ ನುಡಿಯಲ್ಲಿಯೂ ಇರಬೇಕು. ಮಾಡಿ ತೋರಿಸುವುದು,ಆಡಿ ತೋರಿಸುವುದಕ್ಕಿಂತ ಖಂಡಿತಾ ಮೇಲು! *ಅಶೋಕ್

Submitted by venkatesh on
ಹೌದು. ಆತ್ಮಾವಲೋಕನ ಪ್ರತಿಯೊಬ್ಬರಿಗೂ, ಪ್ರತಿಹಂತದಲ್ಲೂ ಅತ್ಯವಶ್ಯಕ. ಮೊದಲು ನಾವು ನಾವುಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ನಂತರ, ಆತ್ಮಾವಲೋಕನಕ್ಕೆ ನಮ್ಮನ್ನು ನಾವೇ ಎಡೆಮಾಡಿಕೊಳ್ಳಬೇಕು. ನಿಧಾನವಾಗಿ, ಶಾಂತಚಿತ್ತರಾಗಿ, ಇಂದು ಇದನ್ನು ಮಾಡಿದ್ದೇನೆ. ನಾನು ಮಾಡಿದ್ದು ಸರಿಯೇ ? ಅದರಿಂದ ಯಾರಿಗೆ ನೋವಾಯಿತು ? ಆದ ಅನುಕೂಲಗಳೇನು ? ಎಷ್ಟು ಹೆಚ್ಚು ಜನರು ಅದರಿಂದ ಪ್ರಭಾವಿತರಾದರು. ಎನ್ನುವುದು ಮುಖ್ಯ. ಅದರಲ್ಲೂ ನಾಯಕನಾದವನು ಇದನ್ನು ಪ್ರತಿದಿನ ಮಾಡಿ, ತನ್ನ ತಪ್ಪುಗಳನ್ನು ಸುಧಾರಿಸಿಕೊಳ್ಳಬೇಕು. ಅದೇ ಜಾಗದಲ್ಲಿ ನಮ್ಮ ತಂದೆಯವರಿದ್ದರೆ, ಏನುಮಾಡುತ್ತಿದ್ದರು ? ಆ ಕೆಲಸವನ್ನು ಹೇಗೆಮಾಡಿದರೆ ಒಳ್ಳೆಯದು. ಬೇರೆಯವರು ಅಂತಹ ಸಂದರ್ಭವನ್ನು ಹೇಗೆ ಎದುರಿಸುತ್ತಾರೆ ? ಇದಕ್ಕೆ ಮೊದಲು, ನಾವು ಒಳ್ಳೆಯ ಜ್ಞಾನವನ್ನು ಸಂಪಾದಿಸಿರಬೇಕು. ಇತ್ಯಾದಿ. ಇದು ಅಗತ್ಯ, ಹಾಗೂ ಬಹುಮುಖ್ಯ ಸಹಿತ ! ಕನ್ನಡ ನನ್ನ ತಾಯ್ನುಡಿ; ನನ್ನುಸಿರು.

Submitted by hariharapurasridhar on
ಧನ್ಯವಾದಗಳು, ಚೆನ್ನಾಗಿ ಪ್ರತಿಕ್ರಿಯಿಸಿದ್ದೀರಿ.