ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಸಂಪದ ಆರ್ಕೈವಿನಿಂದ

ಲೇಖಕರು

savithasr's picture

ಪೂರ್ಣ ಹೆಸರು
ಸವಿತ

ಪರಿಚಯ

ಕದವ ತೆರೆ ಬೆಳಕು ಬರಲಿ ಓ ಚಿತ್ತಾ...

ಯುವ ಕವಿಗೆ ಬರೆದ ಪತ್ರಗಳು....

ಕಳೆದ ವಾರ ಡಿಸೆಂಬರ್ ೫ರಂದು ಸಂಜೆ ಮಲ್ಲೇಶ್ವರಂ ಗಾಂಧಿ ಸಾಹಿತ್ಯ ಭವನದಲ್ಲಿ "ಜಿ ಪಿ ರಾಜರತ್ನಂ ಜನ್ಮ ಶತಮಾನೋತ್ಸವ" ಸಮಾರಂಭವಿತ್ತು. ಕವಿ ಜಿ.ಎಸ್.ಶಿವರುದ್ರಪ್ಪನವರ ಅಧ್ಯಕ್ಷತೆಯಲ್ಲಿ, ಪ್ರೊ.ಅ.ರಾ.ಮಿತ್ರ ಅವರಿಂದ 'ರಾಜರತ್ನಂ-ಒಂದು ಮರು ನೆನಪು' ಉಪನ್ಯಾಸ, ಅತಿಥಿ - ಹೊ.ಶ್ರೀನಿವಾಸಯ್ಯನವರು.

ಪ್ರೊ.ಅ.ರಾ.ಮಿತ್ರ, ಜಿ.ಎಸ್.ಶಿವರುದ್ರಪ್ಪನವರು ರಾಜರತ್ನಂ ಅವರ ಸಾಧನೆಗಳನ್ನ ನೆನಪಿಸಿಕೊಟ್ಟು ಅವರ ಅನುಭವಗಳನ್ನ ಹಂಚಿಕೊಂಡರು. ಗಾಂಧಿ ಸಾಹಿತ್ಯ ಭವನದ ಪೂರ್ತಿ ಎಪ್ಪತ್ತು ಎಂಬತ್ತು ದಾಟಿದ ಹಿರಿಯರೇ ಇದ್ದರು. ಅಬ್ಬಾ....ಇಷ್ಟು ಇಳಿ ವಯಸ್ಸಿನಲ್ಲಿ ನಡೆದಾಡಲು,ಕುಳಿತುಕೊಳ್ಳಲು ಕಷ್ಟವಾದರೂ ಸಹ ಅವರವರ ಜೀವನ,ಅನುಭವಗಳ ಜೊತೆ ಬೆಸೆದುಕೊಂಡಿರುವ ರಾಜರತ್ನಂ ಅವರ ನೆನಪುಗಳನ್ನ ಇನ್ನಷ್ಟು ಹಸಿ ಮಾಡಿಕೊಳ್ಳಲು ಬಂದವರನ್ನೆಲ್ಲಾ ಕಂಡು ಬಹು ಅಚ್ಚರಿಯೆನಿಸಿತು...

ಉಪನ್ಯಾಸದ ಜೊತೆಗೆ ಪ್ರೊ.ಓ.ಎಲ್.ಎನ್.ಸ್ವಾಮಿಯವರು ಅನುವಾದಿಸಿರುವ ರೈನರ್ ಮಾರಿಯಾ ರಿಲ್ಕ್ - ಯುವ ಕವಿಗೆ ಬರೆದ ಪತ್ರಗಳು, ಸಂಧ್ಯಾ ದೇವಿಯವರ ಅಗ್ನಿ ದಿವ್ಯ, ಲಕ್ಕೂರು ಆನಂದರ ಬಟವಾಡೆಯಾಗದ ರಸೀತಿ ಪುಸ್ತಕಗಳ ಅನಾವರಣ ಕಾರ್ಯಕ್ರಮವೂ ಇತ್ತು. 

ಸಂಪದದಲ್ಲಿ ‘ಇಂದು ಓದಿದ ವಚನ ಮಾಲಿಕೆ’ಯಲ್ಲಿ ಬರೆಯುವ ಪ್ರೊ.ಓ.ಎಲ್.ಎನ್.ಸ್ವಾಮಿಯವರ ಮತ್ತು ಕಾರ್ಯಕ್ರಮಕ್ಕೆ ಬಂದ ಕೆಲವಾರು ಸಂಪದಿಗರ ಪರಿಚಯವಾದದ್ದು ಸಂತಸವಾಯ್ತು :).


 

ರೈನರ್ ಮಾರಿಯಾ ರಿಲ್ಕ್ ಯುವ ಕವಿ ಕಾಪ್ಪಸ್ ಗೆ ಬರೆದ ಪತ್ರಗಳು ಪುಸ್ತಕ ಬಹು ಇಷ್ಟವಾಯ್ತು. ಓದುತ್ತಾ ಹೋದಂತೆ ಅರಿವಿಲ್ಲದೆಯೇ ಆ ಪತ್ರಗಳು ನಿಮಗಾಗಿಯೇ ಬರೆದವೇನೋ ಅನ್ನಿಸುವುದು ಖಂಡಿತ. ಏಕಾಂತ, ಮೌನಕ್ಕೆ ರಿಲ್ಕ್ ತನ್ನ ಜೀವನದಲ್ಲಿ ಕೊಟ್ಟ ಆಯಾಮವನ್ನ ಆತನ ಪತ್ರಗಳೇ ಸೊಗಸಾಗಿ ತಿಳಿಸುತ್ತವೆ.

ಕೆಲವು ಸಾಲುಗಳು....

ಒಂದಷ್ಟು ಕಾಲ ಈ ಪುಸ್ತಕಗಳಲ್ಲೇ ಬದುಕು. ಅವುಗಳಿಂದ ಏನು ಕಲಿಯಬಹುದೋ ಅದನ್ನು ಕಲಿತುಕೋ. ಅದಕ್ಕಿಂತ ಮಿಗಿಲಾಗಿ ಪುಸ್ತಕಗಳನ್ನು ಪ್ರೀತಿಸು. ಪುಸ್ತಕಗಳಿಗೆ ನೀನು ತೋರಿದ ಪ್ರೀತಿ ಸಾವಿರ ಪಟ್ಟು ಹೆಚ್ಚಾಗಿ ನಿನ್ನ ಬಳಿಗೆ ಮರಳುತ್ತದೆ. ಬದುಕಿನಲ್ಲಿ ನೀನು ಏನು ಬೇಕಾದರೂ ಆಗು, ನಿನ್ನ ಎಲ್ಲ ಅನುಭವ, ನಿರಾಶೆ,ಸಂತೋಷಗಳ ಎಳೆಗಳ ನಡುವೆ ಈ ಓದಿನ ಪ್ರೀತಿಯ ಎಳೆಗಳು ದೃಡವಾಗಿ ಬಲು ಮುಖ್ಯವಾಗಿ ಇರುತ್ತವೆ.  

ನೀನು ಬರೆಯಲೇ ಬೇಕೆ,ಯಾಕೆ? ಎಂಬ ಕಾರಣವನ್ನು ಹುಡುಕಿಕೋ, ಬರೆಯಲೇಬೇಕೆಂಬ ಆಸೆ ಹೃದಯದ ಆಳದಲ್ಲಿ ಬೇರು ಬಿಟ್ಟಿದೆಯೋ, ಬರೆಯುವ ಅವಕಾಶ ನಿನಗೆ ದೊರೆಯದಿದ್ದರೆ ಸಾಯುತ್ತೀಯೋ-ನೋಡಿಕೋ. ಇದು ಮುಖ್ಯ. ಇರುಳಲ್ಲಿ, ನಿನ್ನ ಮನಸ್ಸು ಅತ್ಯಂತ ಶಾಂತವಾಗಿರುವಾಗ ಕೇಳಿಕೋ - ನಾನು ಬರೆಯಲೇ ಬೇಕೆ? ನಿನ್ನ ಅಂತರಂಗದ ಆಳಕ್ಕಿಳಿದು ಉತ್ತರ ಹುಡುಕು. ಸರಳವಾದ ದೃಡವಾದ 'ಹೌದು, ಬರೆಯಲೇಬೇಕು' ಎಂಬ ಉತ್ತರ ನಿನ್ನೊಳಗೆ ಮೊಳಗಿದರೆ ನಿನ್ನ ಇಡೀ ಬದುಕನ್ನು ಈ ಅಗತ್ಯಕ್ಕೆ ತಕ್ಕಂತೆ ಕಟ್ಟಿಕೋ. ಆಮೇಲೆ ಇದುವರೆಗೂ ಯಾರೂ ಹೇಳಿಯೇ ಇಲ್ಲವೇನೋ ಎಂಬಂತೆ ನೀನು ಕಂಡದ್ದು, ಅನುಭವಿಸಿದ್ದು, ಬಯಸಿದ್ದು,ಕಳೆದುಕೊಂಡದ್ದು ಎಲ್ಲವನ್ನೂ ಹೇಳಲು ಪ್ರಯತ್ನಿಸು.

ಅಗಾಧವಾಗಿರಬೇಕು ಈ ಮೌನ.ಸದ್ದುಗಳಿಗೆ ಚಲನೆಗಳಿಗೆ ಅವಕಾಶವಿರುವ ಮೌನ; ದೂರದ ಸಮುದ್ರದ ಮೊರೆತವೂ ಕೇಳುವ ಮೌನ; ಇತಿಹಾಸ ಪೂರ್ವ ಕಾಲದ ಸಾಮರಸ್ಯದ ಸ್ವರಗಳು ಕೇಳಿಸುವ ಮೌನ. ಈ ಅದ್ಭುತವಾದ ಏಕಾಂತವು ನಿನ್ನ ಮೇಲೆ ವರ್ತಿಸುವುದಕ್ಕೆ ನೀನು ಸಮಾಧಾನದಿಂದ ಅವಕಾಶ ಮಾಡಿಕೊಟ್ಟಿರುವೆ ಎಂದು ಆಶಿಸುತ್ತೇನೆ.

 


 

ಇಷ್ಟು ಸೂಕ್ಷ್ಮವಾಗಿ ತಿಳಿ ಹೇಳುವ ಪತ್ರಗಳನ್ನ ಬರೆದ ಕವಿ ರಿಲ್ಕ್ ಗೆ,
ಅವು ನನಗಷ್ಟೇ ಅಲ್ಲ ಬೆಳೆಯುತ್ತಿರುವ ಪ್ರತಿ ಯುವ ಕವಿಗೆ ಅವಶ್ಯವಾದವೆಂದು ಪ್ರಕಟಿಸಿದ ಕವಿ ಕಾಪ್ಪಸ್ ಗೆ,
ಅವುಗಳನ್ನ ಕನ್ನಡಕ್ಕೆ ಅನುವಾದಿಸಿ ಹಳೆಯ ಮತ್ತು ಹೊಸ ಕವಿಗಳ ನಡುವೆ ಸಾತತ್ಯವನ್ನ ಬೆಸೆಯುವ ದಿಶೆಯಲ್ಲಿರುವ ನಮ್ಮ ಪ್ರೊ.ಓ.ಎಲ್.ಎನ್.ಸ್ವಾಮಿಯವರಿಗೆ ಧನ್ಯವಾದಗಳು.

-ಸವಿತ

ಹೆಚ್ಚಿನ ವಿಚಾರಗಳು:http://kn.wikipedia.org/wiki/ಓ.ಎಲ್.ಎನ್.ಸ್ವಾಮಿ

ಯುವ ಕವಿಗೆ ಬರೆದ ಪತ್ರಗಳು - ಪುಸ್ತಕದ ಮುಖಪುಟ

ಸಂಪದದಲ್ಲಿ ರಿಲ್ಕ್ ಕವಿತೆಗಳು:

ಚನ್ನಾಗಿಯೇ ಗೊತ್ತಿದೆ, ಆದರೂ...

ವಾಕಿಂಗ್

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
anil.ramesh's picture

Quote:
ಸಂಪದದಲ್ಲಿ ‘ಇಂದು ಓದಿದ ವಚನ ಮಾಲಿಕೆ’ಯಲ್ಲಿ ಬರೆಯುವ ಪ್ರೊ.ಓ.ಎಲ್.ಎನ್.ಸ್ವಾಮಿಯವರ ಮತ್ತು ಕಾರ್ಯಕ್ರಮಕ್ಕೆ ಬಂದ ಕೆಲವಾರು ಸಂಪದಿಗರ ಪರಿಚಯವಾದದ್ದು ಸಂತಸವಾಯ್ತು.

ಈ ಕಾರ್ಯಕ್ರಮಕ್ಕೆ ಬಂದಿದ್ದ ಸಂಪದ ಬಳಗದವರನ್ನು ನೋಡಿ ನನಗೂ ನಲಿವಾಯ್ತು. :)

ಸಂಪದದ ಹರಿ, ಮುರಳಿ ಕೂಡ ಬಂದಿದ್ದರು.

ಅಂದಹಾಗೆ, ನಿಮ್ಮ ವಿವರಣೆ ಚೆನ್ನಾಗಿದೆ.

-ಅನಿಲ್.

savithasr's picture

ಹುರಿದುಂಬಿದ್ದಕ್ಕೆ ಧನ್ಯವಾದಗಳು ಅನಿಲ್ :)

uday_itagi's picture

ಉದಯ ಇಟಗಿ
ನಿಮ್ಮ ಲೇಖನ ತುಂಬಾ ಆತ್ಮೀಯವಾಗಿದೆ. ಹೀಗೆ ಬರೆಯುತ್ತಿರಿ

savithasr's picture

ಧನ್ಯವಾದಗಳು ಉದಯ್
-ಸವಿತ

palachandra's picture

ಸವಿತಾಅವರೇ,

ಪುಸ್ತಕ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದ

--
PaLa

ASHOKKUMAR's picture

>>ನೀನು ಬರೆಯಲೇ ಬೇಕೆ,ಯಾಕೆ? ಎಂಬ ಕಾರಣವನ್ನು ಹುಡುಕಿಕೋ, ಬರೆಯಲೇಬೇಕೆಂಬ ಆಸೆ ಹೃದಯದ ಆಳದಲ್ಲಿ ಬೇರು ಬಿಟ್ಟಿದೆಯೋ, >>ಬರೆಯುವ ಅವಕಾಶ ನಿನಗೆ ದೊರೆಯದಿದ್ದರೆ ಸಾಯುತ್ತೀಯೋ-ನೋಡಿಕೋ. ಇದು ಮುಖ್ಯ.

ಇಲ್ಲ ಎಂದೆನಿಸಿದರೆ ಏನು ಮಾಡಬೇಕು? ಸವಿತಾರವರೇ ಹೇಳ್ತೀರಾ?
*ಅಶೋಕ್

savithasr's picture

>>ಇಲ್ಲ ಎಂದೆನಿಸಿದರೆ ಏನು ಮಾಡಬೇಕು?

ಅಶೋಕ್,
ಆ ಪುಸ್ತಕದಲ್ಲಿ, ರಿಲ್ಕ್ ಈ ಉತ್ತರದ ಬಗ್ಗೆನೂ ಬರ್ದಿದಾರೆ, ನೀವೇ ಓದಿನೋಡಿ :)
-ಸವಿತ

savithasr's picture

ಧನ್ಯವಾದಗಳು ಪಾಲಚಂದ್ರರೇ :)
-ಸವಿತ

muralihr's picture

ಅದ್ಯಾಕೋ ಏನೋ ಪತ್ರಿಕೆ ವರದಿಯ೦ತೆ ಬರೆದಿರುವಿರಿ.. ಇರಲಿ .. ನಿಮ್ಮ ಪಾಯಿ೦ಟ್ಗಳಿಗೆ ಸ್ವಲ್ಪ ಸೇರಿಸುವ ಪ್ರಯತ್ನ ಮಾಡ್ತೇನೆ..

೧> ಎಲ್ಲಾದಕ್ಕೂ ಮೂಖ್ಯ ವಿಷಯ ಅ೦ದರೆ ಜಿ.ಪಿ. ರಾಜರತ್ನ೦ ಕುಡುಕರಾಗಿರಗದೇ
"ಏ೦ಡಾ ಮುಟ್ಟಿದ ಕೈನಾ ಜೋಡಿಸ್ತೀನಿ" ಅ೦ತಾ ಕುಡುಕನ೦ಗೆ
ಬರೆದಿರುವ ಭಾಷೆ ಮತ್ತು ಅದರ ಶೈಲಿಯ ಗುಟ್ಟು ಅ.ರಾ.ಮಿತ್ರ ತಿಳಿಸಿದರು.
೨> ಇನ್ನೂ ತಮಾಷೆಯಾಗಿದ್ದ ವಿಚಾರ ಅ೦ದರೆ ರಾಜರತ್ನ೦ರವರ್ ಶಿಷ್ಯರೊಬ್ಬರು
ರಾಜರತ್ನ೦ ಶೈಲಿಯಲ್ಲೇ ಒ೦ದು ಪದ್ಯ ಅರ್ಪಣೆ ಮಾಡಿ ಓದಿದರು .ಅದು ತು೦ಬಾ ಚೆನ್ನಾಗಿತ್ತು.
ಜಿ.ಪಿ ರಾಜರತ್ನ೦ ಬರೆದಿರುವ "ಇಸ್ಲಾ೦ ಧರ್ಮದ ಪರಿಮಳ" ಅನ್ನುವ ಪುಸ್ತಕ ತಗೋ ಬೇಕು
ಅ೦ತಾ ಇದ್ದೆ, ಹೊರಗೆ ಬ೦ದ ಮೇಲೆ ಮರೆತು ಹೋಯ್ತು. ಜಿ.ಪಿ ರಾಜರತ್ನ೦ ನವರ ಬಗ್ಗೆ ಸ೦ಪದದಲ್ಲಿ ಚರ್ಚೆ ಆಗ ಬೇಕು.
ಸವಿತಾ ಅವರೇ

"ನೀವೇ ಒಸಿ ರತ್ನನ್ ಪದಗಳ್ ಓದಿ
ನಮ್ಮ ಕಿವಿಗೂ ತುಸು ಊದಿ.."

savithasr's picture

ಧನ್ಯವಾದಗಳು ಮುರಳಿ,
ಈಗೀಗ ಬರೆಯೋದಕ್ಕೆ ಶುರು ಮಾಡಿದ್ದೀನಿ, ತಿದ್ದಿಕೊಳ್ತೀನಿ :)

>>ಜಿ.ಪಿ ರಾಜರತ್ನ೦ ನವರ ಬಗ್ಗೆ ಸ೦ಪದದಲ್ಲಿ ಚರ್ಚೆ ಆಗ ಬೇಕು.
ಒಳ್ಳೇ ವಿಚಾರ,ಶುರು ಮಾಡೋಣ :)
-ಸವಿತ

mahesha's picture

ಸಕ್ಕತ್ .!

ಸವಿತಾ ತಂಗಿ ಚನ್ನಾಗಿ ಬರೆದಿದ್ದೀರ :)

ಆ ಹೊತ್ತಗೆಗಳ್ನು ಓದಲು ತಿಣುಕುವೆನು.

ನನ್ನಿ

savithasr's picture

ಪ್ರೋತ್ಸಾಹಕ್ಕೆ ಧನ್ಯವಾದಗಳು ಮಹೇಶಣ್ಣ :)
ಸ್ವಾಮಿಯವರು ಪುಸ್ತಕದಲ್ಲಿ ಕೆಲವಾರು ಹೊಸ ಪದಗಳನ್ನ ಉಪಯೋಗಿಸಿದ್ದಾರೆ.
ಉದಾ: ರಿಕ್ತತೆ,ಉತ್ತ ಉಕ್ಕೆ,ಮಾತಾಳಿ...
ಮೇಲೆ ಬರೆದಿರೋ 'ಸಾತತ್ಯ' ಪದವನ್ನ ಅವರು ಕಾರ್ಯಕ್ರಮದಲ್ಲಿ ಮಾತಾಡುವಾಗ ಬಳಸಿದ್ರು.
-ಸವಿತ

savithru's picture

ಸವಿತಾ

ಛೆ ...ಈ ಪ್ರೊಗ್ರಾಮ್ ಮಿಸ್ ಮಾಡಿಕೊಂಡು ತುಂಬ ಲಾಸ್ ಮಾಡಿಕೊಂಡೆ ಅನ್ನಿಸ್ತ ಇದೆ. ಕಾರ್ಯ ಕ್ರಮ ಮುಗಿದ ಮೇಲೆ ಇದು ಇಲ್ಲಿ ಇದೆ ಅಂತ ಗೊತ್ತಾಯ್ತ. ಇನ್ನು ಮುಂದಾದರೂ ನನ್ನ ಮೈಲುಗಳನ್ನು ಪ್ರತಿ ದಿನ ಚೆಕ್ ಮಾಡಬೇಕು.

ಹರಿ ಮತ್ತು ನಾಡಿಗರನ್ನು ಒಮ್ಮೆ, ಒಂದೇ ಕಡೆ , ಮಾತಾಡಿಸೋ ಚಾನ್ಸ್ ಹೋಯ್ತು. ಇರಲಿ ಮುಂದಿನ ಕಾರ್ಯಕ್ರಮ ಯಾವಗ್ಲಾದ್ರೂ ಇಟ್ಕಂಡ್ರೆ ತಿಳಿಸ್ತಾ ಇರ್ರಿ.

ಪರಿಚಸಿದ್ದಕ್ಕೆ ನನ್ನೀ.

ಸವಿತೃ

savithasr's picture

ಹೌದು, ಲಾಸ್ ಮಾಡಿಕೊಂಡ್ರಿ ಸವಿತೃ :)

>>ಹರಿ ಮತ್ತು ನಾಡಿಗರನ್ನು ಒಮ್ಮೆ, ಒಂದೇ ಕಡೆ, ಮಾತಾಡಿಸೋ ಚಾನ್ಸ್ ಹೋಯ್ತು.
ಒಬ್ಬರೇ ಅಲ್ವಾ? :?

-ಸವಿತ

hpn's picture

ಸವಿತ,
ನೀವು quote ಮಾಡಿರುವ ಸಾಲುಗಳ ಹಿಂದೆಯೇ ಇರುವ ಈ ಸಾಲುಗಳು ಬಹಳ ಇಷ್ಟವಾದವು:

ನಿನ್ನ ಕವಿತೆಗಳು ಚೆನ್ನಾಗಿವೆಯೇ ಎಂದು ಕೇಳಿದ್ದೀಯೆ, ನನ್ನನ್ನು. ಈ ಮೊದಲೇ ಬೇರೆಯವರನ್ನೂ ಕೇಳಿದ್ದೀಯೆ. ಪತ್ರಿಕೆಗಳಲ್ಲಿ ಪ್ರಕಟವಾಗಲೆಂದು ಕಳಿಸಿದ್ದೀಯೆ. ಬೇರೆಯವರ ಕವಿತೆಗಳೊಂದಿಗೆ ಹೋಲಿಸಿಕೊಂಡು ನೋಡಿದ್ದೀಯೆ. ಕೆಲವು ಸಂಪಾದಕರು ನಿನ್ನ ಕವಿತೆಗಳನ್ನು ನಿರಾಕರಿಸಿ ಹಿಂದಿರುಗಿಸಿದಾಗ ಹತಾಶನಾಗಿದ್ದೀಯೆ. ಇಂಥ ಕೆಲಸ ಮಾಡುವುದನ್ನು ದಯವಿಟ್ಟು ನಿಲ್ಲಿಸು ಎಂದು ಕೋರುತ್ತೇನೆ. ನೀನು ನನ್ನ ಸಲಹೆ ಸೂಚನೆಗಳು ಬೇಕು ಎಂದು ಕೇಳಿದ್ದರಿಂದ ಈ ಮಾತು. ಈಗ ನೀನು ದೃಷ್ಟಿಯನ್ನು ಹೊರಗೆ ಹಾಯಿಸಿದ್ದೀಯೆ. ತಕ್ಷಣದಲ್ಲಿ ಮಾಡಬೇಕಾದ ಕೆಲಸವೆಂದರೆ ಹೀಗೆ 'ಹೊರಗೆ ನೋಡುವುದು' ನಿಲ್ಲಬೇಕು. ಯಾರೂ. ಯಾರೆಂದರೆ ಯಾರೂ ಕೂಡ ನಿನಗೆ ಸಲಹೆ ಕೊಡುವುದಕ್ಕೆ, ಉಪದೇಶ ಮಾಡುವುದಕ್ಕೆ, ಸಹಾಯ ಮಾಡುವುದಕ್ಕೆ ಸಾಧ್ಯವಿಲ್ಲ, ನಿನ್ನ ಒಳಹೊಕ್ಕು ನೋಡಿಕೋ.

- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa

savithasr's picture

ಹರಿ,
ಈ ಸಾಲುಗಳು ಮತ್ತು 'ರಿಕ್ತತೆ' ಪದದ ಬಳಕೆ ಚೆನ್ನಾಗಿದೆ.

Quote:
ನಿನ್ನ ದಿನನಿತ್ಯದ ಬದುಕು ರಿಕ್ತವಾದದ್ದು ಎನಿಸಿದರೆ ಬದುಕನ್ನು ನಿಂದಿಸಬೇಡ, ನಿನ್ನನ್ನೇ ನಿಂದಿಸಿಕೋ.... ಬದುಕಿನ ಶ್ರೀಮಂತಿಕೆಯನ್ನು ಕಾಣಲಾರದ ನಿನ್ನ ರಿಕ್ತತೆಯನ್ನು ನಿಂದಿಸಿಕೋ.

ರಿಲ್ಕ್ ಬರೀ ಕವಿತ್ವವನ್ನಷ್ಟೇ ಅಲ್ಲ...ಹೆಚ್ಚಿನದನ್ನ ಹೇಳಿಕೊಡುತ್ತಿದ್ದಾರೆ ಅಲ್ಲವೇ.