ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕಾಡುಕೋಣಗಳಿಗೆ ಧಾರವಾಡ ಈಗ ಮಾವನ ಮನೆ!

ಏನು..? ನನಗೆ ಬೈಕ್ ಹೊಡೆಯಲು ಬರುವುದಿಲ್ಲವೇ? ನನಗೆ ಅಡ್ಡ ಬಂದರೆ ಅಷ್ಟೇ..! ಎನ್ನುತ್ತಿದೆ ಕಾಡುಕೋಣ. ಚಿತ್ರ:ಬಿ.ಎಂ.ಕೇದಾರನಾಥೇಶ್ವರ ಸ್ವಾಮಿ.

ಬಹುಶ: ನಮ್ಮ ನಾಡಿನ ಕಾಡುಕೋಣಗಳಿಗೆ ಧಾರವಾಡ ಮಾವನ ಮನೆಯಾಗುತ್ತಿದೆ!

ಆರು ತಿಂಗಳ ಹಿಂದೆ ಕಾಡುಕೋಣವೊಂದು ಕಾಂಕ್ರೀಟ್ ನಗರಿ ಧಾರವಾಡಕ್ಕೆ ಭೇಟಿ ನೀಡಿತ್ತು. ಚುಮುಚುಮು ಬೆಳಕು ಹರಿಯುತ್ತಿದ್ದ ಹೊತ್ತಿನಲ್ಲಿ ಎಲ್ಲರ ಮೈ ಛಳಿ ಬಿಡಿಸಿತ್ತು ಆ ಆಗಂತುಕ ಕಾಡು ಪ್ರಾಣಿ. ನಡು ಬೀದಿಯಲ್ಲಿ ರಾಜಾರೋಷವಾಗಿ ಓಡಾಡಿ, ಎಲ್ಲರ ನೋಟ ತನ್ನತ್ತ ಸಮೀಕರಿಸಿಕೊಂಡಿತ್ತು ಅಪರೂಪದ ಕಾಡುಕೋಣ. ಸ್ಥಳೀಯರ ಸಹಕಾರದಿಂದ ಕೊನೆಗೆ ಅರಣ್ಯ ಇಲಾಖೆಯವರ ಕೈಗೆ ಸೆರೆ ಸಿಕ್ಕು, ನಾಡು ಪಾಲಾಗಿದ್ದ ಕಾಡುಕೋಣ ಕಾಡು ಪಾಲಾಯಿತು. ಅಂತೂ ಅಪರೂಪದ ಅಥಿತಿ ತನ್ನ ಹಿಂಡು ಸೇರಿತ್ತು. ಹೀಗೆ ಪ್ರಕರಣ ಸುಖಾಂತ್ಯ ಕಂಡು ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು.

ಆದರೆ. ಮತ್ತೆ ಪುನ: ಕಳೆದ ಭಾನುವಾರ ಮತ್ತೊಂದು ಕಾಡುಕೋಣ ನಗರಕ್ಕೆ ಆಗಮಿಸಿತ್ತು. ಮೂಕಪ್ರಾಣಿ ತನ್ನ ಹಕ್ಕಿಗಾಗಿ ಧರಣಿ ನಡೆಸಿದಂತೆ, ಯಾರಿಗೂ ಅಂಜದೇ-ಅಳುಕದೇ ಗಜ ಗಾಂಭೀರ್ಯದಲ್ಲಿ ಊರು ಸುತ್ತು ಹೊಡೆಯಿತು. ಈ ಬಾರಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದ ಕೋಣ...ನೇರವಾಗಿ ನುಗ್ಗಿದ್ದು ವಿದ್ಯಾಗಿರಿಯ ಜೆ.ಎಸ್.ಎಸ್. ಮಹಾವಿದ್ಯಾಲಯದ ಆವರಣಕ್ಕೆ. ಸಾವಿರಾರು ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು ಕಾಡುಕೋಣ ನೋಡಿ..ದಿಕ್ಕಾಪಾಲಾಗಿ ಚದುರಿದರು. "ಬಿಟ್ಟುಬಿಡದೇ ಅಸೈನ್ ಮೆಂಟ್ ಗಳನ್ನು ಕೊಟ್ಟು, ಜೀವ ತಿನ್ನುವ ನಮ್ಮ ಮಾಸ್ತರ್ ಕೋಣನ ಕೈಗೆ ಸಿಗಲಿ" ಎಂದು ಹಾಸ್ಯ ಚಟಾಕಿ ಕೂಡ ಕೆಲವರು ಹಾರಿಸಿದರು. ಯಾವುದರ ಪರಿವೆಯೂ ಇಲ್ಲದೇ, ‘ನಾನು ನಿಮ್ಮಂತೆ ಹೆಸರು ಹಚ್ಚಿಸಿಕೊಳ್ಳಲು ಬಂದಿದ್ದೇನೆ’ ಎಂಬುವಂತಿತ್ತು ಅವನ ಠೀವಿ!

ಜನ ನೋಡಲು ಮುಗಿಬಿದ್ದು, ತನ್ನನ್ನು ಬೆಂಬತ್ತಿದ್ದು ತಿಳಿಯುತ್ತಲೇ ಕೋಣ, ಮಹಾವಿದ್ಯಾಲಯದ ೧೨ ಫೂಟ್ ಎತ್ತರದ ತಡೆಗೋಡೆಯನ್ನು ಒಂದೇ ನೆಗೆತಕ್ಕೆ ಛಂಗನೇ ಹಾರಿ ಪಕ್ಕದ ಸ್ಮಶಾನಕ್ಕೆ ನುಗ್ಗಿತು. ಪರೀಕ್ಷೆಗಳು ನಡೆದಾಗ ‘ಕಾಪಿ’ ನೀಡಲು ಗಿಡ ಹತ್ತಿ, ಕಾಲೇಜ್ ಕಂಪೌಂಡ್ ಎಗರುತ್ತಿದ್ದ ಉಡಾಳರನ್ನು ಮೀರಿಸುವಂತಿತ್ತು ನೆಗೆತ. ಆದರೆ, ಕೋಣ ಹಾರಿದ್ದು ಜೀವನದ ಪರೀಕ್ಷೆ ಎದುರಿಸುತ್ತ! ಹಾಗೆಯೇ ಜೀವಂತ ಇದ್ದವರ ಕಾಟ ತಡೆಯಲಾರದೇ, ಸತ್ತು ಮಲಗಿರುವವರ ಸ್ಮಶಾನದಲ್ಲಾದರೂ ತನಗೆ ನೆಮ್ಮದಿ ಸಿಕ್ಕೀತು ಎಂದು ಅರಸಿತ್ತು ಅದು. ಆದರೂ ಜನ ಬಿಡಲಿಲ್ಲ. ಎಸ್.ಎಂ.ಎಸ್ ಸಂದೇಶಗಳನ್ನು ರವಾನಿಸುತ್ತ ತಮ್ಮ ಇಡೀ ಬಳಗವನ್ನೇ ಸ್ಥಳಕ್ಕೆ ಕರೆಸಿದ್ದರೂ ನಾಡ ಪ್ರಾಣಿಗಳು. ಇಷ್ಟೆಲ್ಲ ಆದರೂ ಕಾಡುಕೋಣ ವನ್ನು ಬೆನ್ನಟ್ಟಿದವರು ಮಾಧ್ಯಮದವರು. ಅರಣ್ಯ ಇಲಾಖೆಯ ಸಿಬ್ಬಂದಿ ಇನ್ನೂ ಸ್ಥಳಕ್ಕೆ ಬಂದಿರಲಿಲ್ಲ!

ಅರಣ್ಯ ಇಲಾಖೆಯ ಅಧಿಕಾರಿಗಳು ಮಾಧ್ಯಮದವರಿಂದ ಸುದ್ದಿ ಪಡೆದು, ಯಾವ ಸಿದ್ಧತೆಯೂ ಇಲ್ಲದೇ ಕೇವಲ ಜೀಪ್ ಹತ್ತಿ ಸ್ಥಳಕ್ಕೆ ಬಂದರು. ಇನ್ನು ಮಾಡುವುದೇನು? ಸರಿ..ಜೀಪ್ ಹತ್ತಿ ಅದನ್ನು ಕಾಡಿನ ತನಕ ಓಡಿಸುವ ನಿರ್ಧಾರ ಮಾಡಿದರು. ಕಾಡುಕೋಣ ‘ಬನ್ನಿ ನೋಡೋಣ’ ಎಂದು ಸವಾಲೆಸೆದು, ಗೊರಸುಗಳನ್ನು ನೆಲಕ್ಕೆ ತಿಕ್ಕಿ ನಾಗಾಲೋಟದಲ್ಲಿ ಓಡಿದರೆ..ಎಲ್ಲರ ದಿಕ್ಕೇ ತಪ್ಪಿತು! ಪೊಲೀಸರು ಸಹ ತಮ್ಮ ವಾಕಿ- ಟಾಕಿ ಗಳೊಂದಿಗೆ ‘ಲೋಕೆಷನ್’ ಗುರುತಿಸುತ್ತ ಹೊರಟರು. ಆಗಲೇ ತನ್ನ ಮೈಗೆ, ಮೂಗಿಗೆ ಹಾಗು ಗೊರಸುಗಳಿಗೆ ತರಚಿದ ಗಾಯಗಳನ್ನು ಮಾಡಿಕೊಂಡಿದ್ದ ಕೋಣ, ತನ್ನ ಪ್ರಯಾಸದ ಪ್ರವಾಸದಿಂದ ಬಸವಳಿದಿತ್ತು. ಬಾಯಿಯಿಂದ ನೊರೆ ಬೀಳುತ್ತಿತ್ತು. ಆದರೂ ಹೂಂಕಾರ ಕಡಿಮೆ ಯಾಗಿರಲಿಲ್ಲ!

ಹಾಗೂ ಹೀಗೂ ಹೊಸಯಲ್ಲಾಪೂರದ ಕೂಟಿನ ವರೆಗೆ ಒಯ್ದು, ಗಾಂಧಿ ನಗರಕ್ಕೆ ಕೋಣವನ್ನು ತಿರುಗಿಸುವುದರೊಳಗೆ ದೇವರು ನೆನಪಾಗಿದ್ದ. ಅರಣ್ಯ ಇಲಾಖೆಯ ಜೀಪ್ ಬೆನ್ನಟ್ಟಿ, ರೈಲು ಹಳಿ ದಾಟಿಸುವಲ್ಲಿ ಯಶಸ್ವಿಯಾಯಿತು. ಸುದೈವದಿಂದ ಯಾವುದೇ ರೈಲು ಆಗ ಅಲ್ಲಿ ಹೊರಟಿರಲಿಲ್ಲ. ಕಾಡುಕೋಣ ರಜತಗಿರಿಯ ಶ್ರೀ ಧರ್ಮಸ್ಥಳ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲದ ಆವರಣ ತೂರಿತು. ಪೊಲೀಸರು ಎಚ್ಚರಿಕೆಯ ಸೈರನ್ ಮೊಳಗಿಸುತ್ತ, ಕಾಲೇಜು ಆವರಣದಲ್ಲಿ ಸೂಚನೆ ನೀಡುತ್ತ ಆಗಂತುಕ ಅಥಿತಿಯ ಆಗಮನ ಅರುಹಿದರು. ಭಾವಿ ಅಭಿಯಂತರರು ಹೌಹಾರಿದರು. ಪ್ರಾಧ್ಯಾಪಕರು ಸಹ ಅಚ್ಚರಿಪಟ್ಟರು. ಇನ್ನೇನು ಆವರಣದಿಂದ ಹೊರ ಓಡಿಸಬೇಕು ಎನ್ನುವಷ್ಟರಲ್ಲಿ, ಯಾರೋ ಹಾರ್ನ್ ಬಾರಿಸಿದರು. ಕಾಡುಕೋಣನ ಸಿಟ್ಟು ನೆತ್ತಿಗೇರಿತು. ಸ್ಟ್ಯಾಂಡಿನಲ್ಲಿ ನಿಂತಿದ್ದ ‘ಬಜಾಜ್ ವಿಕ್ಟರ್’ ಬೈಕ್ ನ್ನು ತನ್ನ ಒಂದೇ ಕೊಂಬಿನಲ್ಲಿ ಎತ್ತಿ ನೆಲಕ್ಕೆ ಅಪ್ಪಳಿಸುವಂತೆ ಒಗೆಯಿತು. ಇದಂತೂ ಸಾತ್ವಿಕ ಸಿಟ್ಟಾಗಿರಲಿಲ್ಲ!

ಮಹಾವಿದ್ಯಾಲಯದ ಹಸಿರು ಹಾಸಿನ ಮೇಲೆ ತುಸು ವಿಶ್ರಾಂತಿ ಪಡೆದ ಕೋಣ, ಮತ್ತೆ ತನ್ನ ಗುರಿ ಸಾಧಿಸುವಂತೆ ಅಣಿಯಾಯಿತು. ರಭಸದಿಂದ ಗಾಳಿ ಗುದ್ದುತ್ತ, ಕ್ಷಣಾರ್ಧದಲ್ಲಿ ಕ್ಯಾಂಪಸ್ ಹೊರಗಿತ್ತು! ಹಾಗೆಯೇ ಅನಾಯಾಸವಾಗಿ ಮೂರು ಗುಡ್ಡಗಳನ್ನು ಹತ್ತಿ ಇಳಿದು ಸೋಮೇಶ್ವರ ಕೊಳ್ಳಕ್ಕೆ ಇಳಿಯಿತು. ಎಲ್ಲರೂ ಅತ್ತ ಧಾವಿಸಿದರು. ಶಾಲ್ಮಲಾ ನದಿ ತಟದಲ್ಲಿ ನೀರು ಕುಡಿದು, ತುಸು ಸಾವರಿಸಿಕೊಂಡ ಕಾಡುಕೋಣ ಯಾರ ಅಪ್ಪಣೆಗೂ ಕಾಯದೇ ಅಳ್ನಾವರ ಕಾಡಿನತ್ತ ನಿರ್ಲಿಪ್ತವಾಗಿ ಪ್ರಯಾಣ ಬೆಳೆಸಿತು. ಅಗಾಗ ನಿಂತು, ಹಿಂತಿರುಗಿ ನೋಡಿ, ಸಿಂಹಾವಲೋಕನ ಮಾಡಿದಂತೆ ಮಾಧ್ಯಮದವರಿಗೆ ಪೋಸು ನೀಡುತ್ತ..‘ಮತ್ತೆ ಬರುತ್ತೇನೆ ಸದ್ಯದಲ್ಲಿಯೇ’ ಎಂದು ಸೂರ್ಯ ಮುಳುಗುವ ಹೊತ್ತಿಗೆ ಕಾಡುಕೋಣ ತನ್ನ ನಾಡು ಸೇರಿತು.

ಕಾಡುಕೋಣದ ಪೌರುಷ ಸೆರೆ ಹಿಡಿಯಲು ೨೦ಕ್ಕೂ ಹೆಚ್ಚು ಕಿ.ಮೀಗಳನ್ನು ಓಡಿದ, ಹೆಣಗಿದ ಮಾಧ್ಯಮಗಳ ಛಾಯಾಪತ್ರಕರ್ತರು ೩ ದಿನಗಳ ಕಾಲ ಆರೈಕೆಯಾದರು. ಆದರೆ ಅರಣ್ಯ ಇಲಾಖೆಯವರು ಯಥಾ ಪ್ರಕಾರ ಮತ್ತೆ ಬೆಳಿಗ್ಗೆ ನೌಕರಿಗೆ ಅಣಿಯಾಗಿದ್ದರು! ಏಕೆಂದರೆ ಅವರು ಬೆನ್ನಟ್ಟಿದ್ದು ಜೀಪಿನಲ್ಲಿ! ಇಂದಿಗೂ ನಮ್ಮ ಊರಿನ ಅರಣ್ಯ ಇಲಾಖೆಯ ಕಚೇರಿ ಅಧಿಕಾರಿಗಳು ಅರವಳಿಕೆ ಚುಚ್ಚುಮದ್ದು ಸಂಗ್ರಹಿಸಿ ಇಟ್ಟಿಲ್ಲ. ಹಾಗೆಯೇ ಈ ಅನಿರೀಕ್ಷಿತ ಘಟನೆಗಳನ್ನು ಎದುರಿಸಲು ಯಾವ ಪೂರ್ವ ತಯಾರಿ, ಅಥವಾ ವಿಪತ್ತು ನಿರ್ವಹಣಾ ತರಬೇತಿ ಸಿಬ್ಬಂದಿಗೆ ಕೊಟ್ಟಿಟ್ಟಿಲ್ಲ.

ಈ ಕಾಡುಕೋಣ ಸಾಂಸ್ಕೃತಿಕ ನಗರಿಗೆ ಭೇಟಿ ನೀಡಿದ ಸುಸಂಸ್ಕೃತ ಕಾಡುಕೋಣ ಇದ್ದಿರಬಹುದು! ನಸೀಬುಗಟ್ಟಿತ್ತು ಬದುಕಿ ಕಾಡುಪಾಲಾಯಿತು. ನಾಡಿನ ಪ್ರಾಣಿಗೆ ಈ ಕಾಡು ಪ್ರಾಣಿ ಆಕಸ್ಮಾತ್ ತನ್ನ ಪ್ರಾಣಭಯದಿಂದ ಪ್ರಾಣಘಾತುಕವಾಗಿ ಪರಿಣಮಿಸಿದ್ದರೆ? ಪೊಲೀಸರ ಗುಂಡಿಗೆ ಬಲಿಯಾಗಬೇಕಿತ್ತು. ಹಕ್ಕುಗಳ ಬಗ್ಗೆ ಮಾತ್ರ ಜಾಗರೂಕರಾಗಿರುವ ನಮಗೆ ಬುದ್ಧಿ ಅಷ್ಟು ಬೇಗ ಬರಲಾರದು. ಹಾಗಾಗಿ ಆದಷ್ಟು ಇಂತಹ ಸುಸಂಸ್ಕೃತ ಕಾಡು ಪ್ರಾಣಿಗಳೇ ಧಾರವಾಡಕ್ಕೆ ಭೇಟಿ ನೀಡುತ್ತಿರಲಿ..ಯಾವಾಗಲೊಮ್ಮೆ! ಎಂಬುದೇ ನನ್ನ ಆಸೆ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
nkumar's picture

>> "ಬಿಟ್ಟುಬಿಡದೇ ಅಸೈನ್ ಮೆಂಟ್ ಗಳನ್ನು ಕೊಟ್ಟು, ಜೀವ ತಿನ್ನುವ ನಮ್ಮ ಮಾಸ್ತರ್ ಕೋಣನ ಕೈಗೆ ಸಿಗಲಿ" :D

ನಮ್ಮ ಹಳ್ಳಿಯಲ್ಲೂ ಒಮ್ಮೆ ಚಿರತೆ ಬಂದಾಗ ಜನರು ತುಂಬಾ ಭಯಭೀತರಾಗಿದ್ದರು. ತದನಂತರ ಚಿರತೆ ತನ್ನ ಪಾಡಿಗೆ ಕಾಡಿಗೆ ಮರಳಿತು.
ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್.

harshavardhan v.sheelavant's picture

ಆತ್ಮೀಯ ಕುಮಾರ್,

ಖುಷಿಯಾಯಿತು ನಿಮ್ಮ ಪ್ರತಿಕ್ರಿಯೆ ಓದಿ. ನಿಮ್ಮೂರಲ್ಲಿ ಜೀವಂತವಾಗಿ ಚಿರತೆಯನ್ನು ಕಾಡಿಗೆ ಬಿಟ್ಟರೆ, ನಮ್ಮ ಊರಿನ ಹತ್ತಿರದ ಕಳಸನಕೊಪ್ಪದಲ್ಲಿ ಚಿರತೆ ಬಂದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಪೂರ್ವ ಸಿದ್ಧತೆ ಮಾಡಿಕೊಂಡಿರಲಿಲ್ಲ. ಜೊತೆಗೆ ಜನ ತಾಳ್ಮೆಗೆಟ್ಟು ರಂಪ ಮಾಡಿದ್ದರಿಂದ ಪೊಲೀಸರ ಗುಂಡಿಗೆ ಅದು ಬಲಿಯಾಗಬೇಕಾಯಿತು.

ಧನ್ಯವಾದ.

nkumar's picture

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತದೆ. ಕಾಡು ಪ್ರಾಣಿಗಳು ನಾಡಿಗೆ ಬರಲು ತಾನೆ ಕಾರಣ ಎಂದು ಮಾನವನಿಗೆ ತಿಳಿದಿದ್ದರೂ ಬಲಿಯಾಗುವುದು ಪ್ರಾಣಿಗಳು.

harshavardhan v.sheelavant's picture

ಆತ್ಮೀಯ ಕುಮಾರ್,

ನಿಜಕ್ಕೂ ಇದು ಚಿಂತನೆಗೆ ಹಾಗೇ ಚಿಂತೆಗೆ ಈಡು ಮಾಡಬೇಕಾದ ವಿಚಾರ. ಪ್ರತಿ ಕಾಡಿನ ಪ್ರಾಣಿಗಳು ನಮ್ಮ ಕರ್ತವ್ಯಗಳ ಸೂಚ್ಯವಾಗಿ ಎಚ್ಚರಿಸಲು ಹೀಗೆ ಡೇಂಜರ್ ಸಿಗ್ನಲ್ ಆಗಿ ಬರುತ್ತವೆ ಎಂಬ ಅನಿಸಿಕೆ ನನ್ನದು.

anil.ramesh's picture

ಪ್ರೀತಿಯ ಹರ್ಷವರ್ಧನ್,
ನಿಮ್ಮ ಲೇಖನ ಬಹಳ ಚೆನ್ನಾಗಿದೆ.

ಸಧ್ಯ! ಮೈಸೂರಿನಲ್ಲಿ ಚಿರತೆಯನ್ನು ಕೊಂದ ಹಾಗೆ ಈ ಕಾಡುಕೋಣವನ್ನು ಸಾಯಿಸಲಿಲ್ಲವಲ್ಲ.
ಅದೇ ಪುಣ್ಯ!!!

-ಅನಿಲ್.

harshavardhan v.sheelavant's picture

ಆತ್ಮೀಯ ಅನಿಲ್,

ನಿಮ್ಮ ಕಳಕಳಿ ಹಾಗು ಕಾಳಜಿ ಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದ. ನಮ್ಮವರಿಗೆ ಅದು ಯಾವುದೇ ಪ್ರಾಣಘಾತುಕ ಘಾತ ಮಾಡಲಿಲ್ಲ ಎಂಬ ಕಾರಣಕ್ಕೆ, ಮಾಧ್ಯಮದವರು ತುಸು ಸಂಯಮದಿಂದ ವರ್ತಿಸಿದ್ದಕ್ಕೆ (೨ನೇ ಬಾರಿ ಬಂದಿದೆ ಇದು ಧಾರವಾಡಕ್ಕೆ!) ಅದಕ್ಕೆ ಪ್ರಾಣ ಭಿಕ್ಷೆ ಲಭಿಸಿದೆ. ಇಲ್ಲದಿದ್ದಲ್ಲಿ ಅದು ಶವವಾಗಿಯೇ ಸಂಪದಿಗರಿಗೆ ದೊರಕುತ್ತಿತ್ತು. ‘ಕೊಲ್ಲುವವನಿಗಿಂತ ಕಾಯುವವ ದೊಡ್ಡವ’ ಹಾಗಾಗಿ ಬದುಕಿತು.

anil.ramesh's picture

ಕೋಣನಿಗೆ ಕೋಪ ಬಂದಿದ್ದು ಈಗಿರುವ ಚಿತ್ರ ನೋಡಿ ಖಾತ್ರಿ ಆಯ್ತು. :)

ಸಧ್ಯ!!! ಬೈಕ್ ಮೇಲೆ ಯಾರೂ ಕುಳಿತಿರಲಿಲ್ಲ...

-ಅನಿಲ್.

harshavardhan v.sheelavant's picture

ಆತ್ಮೀಯ ಅನಿಲ್,

ಅದು ಸಹ ಬೈಕ್ ಹತ್ತಲು ಹೋಗಿತ್ತು. ಆದರೆ ಕಿಕ್ ಹೊಡೆಯಲು ಅದಕ್ಕೆ ಬರಲಿಲ್ಲ. ಸಿಟ್ಟು ಬಂದು ತಾನೇ ಕಿಕ್ ಕೊಟ್ಟಿತು..ಬೈಕ್..ಎಗರಿಬಿತ್ತು! ಅಂದಹಾಗೆ ಅನಿಲ್, ನಮ್ಮ ಛಾಯಾಪತ್ರಕರ್ತ ಕೇದಾರನಾಥ್ ಅವರ ಸಮಯ ಪ್ರಜ್ಞೆ ನೋಡಿ. ಬೇರೆ ಯಾರಿಗೂ ಸಿಗದ ಅಪರೂಪದ ಚಿತ್ರವಿದು.

anil.ramesh's picture

ಸಾಧ್ಯವಾದರೆ, ಕೇದಾರನಾಥರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿರಿ.

-ಅನಿಲ್.

harshavardhan v.sheelavant's picture

ಅನಿಲ್, ಕೂಡಲೇ ತಿಳಿಸಿದ್ದೇನೆ. ಖುಷಿ ಪಟ್ಟರು ನಮ್ಮ ಕೇದಾರ್.

anil.ramesh's picture

ಹರ್ಷವರ್ಧನ್,
ತುಂಬಾ ಧನ್ಯವಾದ. :)

-ಅನಿಲ್.

vikashegde's picture

ನಂಗಿಲ್ಲಿ ಕಾಣುಕೋಣದ ವಿಷಯಕ್ಕಿಂತ ’ಮಾಧ್ಯಮದವರು ಸಂಯಮದಿಂದ ವರ್ತಿಸಿದರು’ ಎಂಬ ವಿಷಯವೇ ಆಶ್ಛರ್ಯ ಆಗ್ತಾ ಇದೆ :)

prasca's picture

ಕರ್ನಾಟಕವೆಂಬ ಕಾಡಿನಿಂದ ಅಮೇರಿಕಾವೆಂಬ ನಾಡಿಗೆ ಹೋಗಿ ಡಾಕ್ಟರೇಟ್ ಪಡೆಯಲು ಹೋದ ನಮ್ಮ ಮುಖ್ಯಮಂತ್ರಿಯವರ ಸ್ಪೂರ್ತಿ ಪಡೆದು ಡಾಕ್ಟರೇಟ್ ಪಡೆಯಲು ಬಂದಿರಬೇಕು.
ಧಾರವಾಡ ಎಮ್ಮೆಗಳಿಗೆ ಪ್ರಸಿದ್ದಿಯಲ್ಲವೆ? ಅವನ್ನು ಹುಡುಕಿಕೊಂಡು ಬಂದಿರಬಹುದೆ?

harshavardhan v.sheelavant's picture

ಆತ್ಮೀಯರೇ,

ನಿಜಕ್ಕೂ ನಮ್ಮನ್ನೆಲ್ಲ ನಗಿಸಿದ, ಹಾಸ್ಯಪೂರಿತ ಆದರೆ ಚಿಂತನಾರ್ಹ ಪ್ರತಿಕ್ರಿಯೆ ತಮ್ಮದು. ಧಾರವಾಡದಲ್ಲಿ ಈಗ ಎಮ್ಮಿ ಕೆರೆಯೂ ಉಳಿದಿಲ್ಲ..ಮೊದಲಿನಿಂತ ಎಮ್ಮೆಗಳೂ ಕಾಣಸಿಗುವುದಿಲ್ಲ. ಆದರೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪಡೆದವರನ್ನು ನೋಡಲು ಬಂದಿರಬೇಕು! ಒಟ್ಟಾರೆ ಓದು ಮುಕ್ಕಾಲು; ಬುದ್ಧಿ ಒಕ್ಕಾಲು! ಎಂದು ಸಾಬೀತು ಪಡಿಸಿತು ಈ ಆಪದ್ಭಾಂಧವ.

umeshhubliwala's picture

ಧಾರವಾಡ ಎಮ್ಮಿಗೆ ಫೇಮಸ್ ಆಗಿತ್ತು ಒಂದಾನೊಂದು ಕಾಲದಾಗ

ಹಳೇ ಗೆಳತಿ ಹುಡುಕಿಕೊಂಡು ಕೋಣ ಬಂದಿರಬೇಕು ಹೌದಲ್ರೀ ?

umeshhubliwala's picture

ಧಾರವಾಡ ಎಮ್ಮಿಗೆ ಫೇಮಸ್ ಆಗಿತ್ತು ಒಂದಾನೊಂದು ಕಾಲದಾಗ

ಹಳೇ ಗೆಳತಿ ಹುಡುಕಿಕೊಂಡು ಕೋಣ ಬಂದಿರಬೇಕು ಹೌದಲ್ರೀ ?

harshavardhan v.sheelavant's picture

ಆತ್ಮೀಯ ಉಮೇಶ್,

ಕೋಣನ ಗೆಳತಿಯನ್ನು ಕಟ್ಟಿ ಹಾಕಿ, ಪ್ರೇಮಕ್ಕೆ ಅಡ್ಡಿ ಪಡಿಸಿರುವ ಮಾಲೀಕನನ್ನು ಹುಡುಕಿಕೊಂಡು ಅದು ಬಂದಿತ್ರೀ..ಅಡ್ರೆಸ್ ನಿಮ್ಮದು ಕೊಡಲೇ..?

ಕ್ಷಮಿಸಿ..ಸುಮ್ಮನೇ ನಿಮ್ಮ ಮಾತಿಗೆ ಜೋಡಿಸಿದೆ. ನಾನೇ ಹೇಳಿದ್ದೇನೆ..ಧಾರವಾಡ ಈಗ ಅವುಗಳಿಗೆ ಮಾವನ ಮನೆ!

girish.rajanal's picture

ಚಿತ್ರ ಮಾತ್ರ ಸಖತ್ತಾಗಿದೆ..:)
ನಿಮ್ಮವ,
ಗಿರೀಶ ರಾಜನಾಳ
ಹಂತಾದು ಹಿಂತಾದು ಕೂಡಿ ಸಂತ್ಯಾಗ ಹೋದ್ರss..ಸಂತ್ಯಾಗೊಂದು ಹಂತಾದs ಸಿಕ್ಕಿತ್ತಂತ...!!!

Shilpa Bhovi's picture

ಈಗಾಗಲೇ ಸಾಕಷ್ಟು ಬಾರಿ ಕಾಡು ಪ್ರಾಣಿಗಳು ‘ನಮ್ಮ’ ನಾಡಿಗೆ ಭೇಟಿ ನೀಡಿವೆ. ಆದರೆ ತಾವು ಈ ಲೇಖನದಲ್ಲಿ ಮಾವನ ಮನೆಗೆ ಬಂದ ಕೋಣನ ಬಗ್ಗೆ ಅದು ಬಂದ ರಭಸದಷ್ಟೇ ವೇಗದಲ್ಲಿ ಚೆನ್ನಾಗಿ ವಿವರಿಸಿದ್ದೀರಿ. ಆದರೆ ಉಳಿದ ಪ್ರಾಣಿಗಳಿಗೆ ಅಂತಹ ಅದೃಷ್ಟ ಇರಲಿಲ್ಲವೇನೋ? ಕಾರಣ ನಿಮ್ಮಂತಹ ಲೇಖಕರ ಐಗೆ ಅವುಗಳ ‘ಟೂರ್ ಪ್ರೋಗ್ರಾಂ’ ಟಿ.ಪಿ. ಸಿಕ್ಕಿಲ್ಲ! ಒಟ್ಟಿನಲ್ಲಿ ಹೇಳುವುದಾರೆ ಡಿಸೆಂಬರ್ ತಿಂಗಳಿನ ಛಳಿಯಲ್ಲಿ ಪ್ರವಾಸಕ್ಕೆ ಹೊರಟ ಕೋಣನ ಬಗ್ಗೆ ಅಷ್ಟೇ ಬಿಸಿ ಬಿಸಿಯಾಗಿ ವಿವರಿಸಿದ್ದೀರಿ!

ಶಿಲ್ಪಾ ಬಿ. ಭೋವಿ

Anuradha Naik's picture

ಮಾನ್ಯರೇ,

ಛಾಯಾಪತ್ರಕರ್ತ ಕೇದಾರನಾಥ್ ಅವರ ಸಮಯಪ್ರಜ್ಞೆ ಮೆಚ್ಚಬೇಕಾದದ್ದು. ನಿಜಕ್ಕೂ ಜೀವದ ಹಂಗು ತೊರೆದು ಹೋರಾಟಕ್ಕೆ ನಿಂತ ಕಾಡುಕೋಣವನ್ನು ಎದುರಿಸುತ್ತ ಸಕಾಲಿಕಾವಾಗಿ ಕ್ಲಿಕ್ಕಿಸಿದ ಚಿತ್ರ, ಮೂಡಿರುವ ರೀತಿ ಮೈನವಿರೇಳಿಸುವಂತಹುದು. ಚಿತ್ರ ನೋಡಲು ಸಹ ಭಯಾನಕವಾಗಿದ್ದು, ಲೇಖನದ ಮೌಲ್ಯ ಈ ಛಾಯಾಚಿತ್ರದಿಂದ ಹೆಚ್ಚಿದೆ.

ಅನುರಾಧಾ ನಾಯ್ಕ

Madhu Hegde's picture

ಆತ್ಮೀಯರೇ,

ಕಾಡುಕೋಣದ ಚಿತ್ರ ನಿಜವಾಗಿಯೂ ಅಪರೂಪದ್ದು. ಛಾಯಾಪತ್ರಕರ್ತನ ಸಮಯಪ್ರಜ್ಞೆ ಮೆಚ್ಚತಕ್ಕಂತಹದು. ವಿಶೇಷ ಕ್ಷಣಗಳನ್ನು ನಮಗಾಗಿ ಸೆರೆಹಿಡಿದ ಕೇದಾರನಾಥ್ ಅವರಿಗೆ ಧನ್ಯವಾದ.

ಮಧು ಹೆಗಡೆ, ನೀಲಕೋಡ.

Srinivas Reddy's picture

ಖುಷಿಯಾಯಿತು ಛಾಯಾಚಿತ್ರ ನೋಡಿ. ಈ ಚಿತ್ರ ಸಮಯಪ್ರಜ್ಞೆಯಿಂದ ಕೂಡಿದ್ದು, ಛಾಯಾಪತ್ರಕರ್ತ ಕೇದಾರನಾಥ್ ಅವರ ಕ್ಯಾಮೆರಾ ಕೌಶಲ್ಯ ವ್ಯಕ್ತವಾಗುತ್ತದೆ. ಛಾಯಾಚಿತ್ರವು ಸಾವಿರ ಶಬ್ದಗಳಿಗೆ ಸಮವಾಗಿದೆ.

ಶ್ರೀನಿವಾಸ ರೆಡ್ಡಿ.