22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಬಣ್ಣದ ತಗಡಿನ ತುತ್ತೂರಿ.... :)

December 19, 2008 - 11:04am
savithasr

ಜಿ.ಪಿ.ರಾಜರತ್ನಂ - ಶತಮಾನದ ಕವಿಯ ಪರಿಚಯ ಶಿಶು ಗೀತೆಗಳ ಮೂಲಕ...

ಪದ್ಯ ಶುರುವಾದ ಸಮಯ:

೧೯೩೨ರಲ್ಲಿ ರತ್ನ ಎಂ.ಎ ಪಧವೀಧರರಾಗಿದ್ದರು.ಆ ಕಾಲದಲ್ಲಿ ಕನ್ನಡ ಎಂ.ಎ ಮಾಡಿದವರ ಸಂಖ್ಯೆ ತೀರಾ ಕಡಿಮೆ...ಆದರೂ ಅವರು ಕಲಿತಿದ್ದ ವಿದ್ಯೆಯನ್ನು ಉಪಯೋಗಿಸುವ ಯಾವ ಉದ್ಯೋಗ ಸಿಕ್ಕಿರಲಿಲ್ಲ. ಮುಂದೆ ಏನು ಮಾಡಬೇಕೆನ್ನೋದು ತೊಚದೇ ಇದ್ದ ಸಮಯ. ಆರೋಗ್ಯ ಕೆಟ್ಟಿದ್ದರಿಂದ ಅವರ ತಂದೆ ರಜ ತೆಗೆದುಕೊಳ್ಳಬೇಕಾಗಿ ಬಂದಾಗ, ತಂದೆಯ ಜಾಗಕ್ಕೆ ಬದಲಿಯಾಗಿ ರತ್ನ ಹೋದರು. ಅವರ ತಂದೆ ಮಿಡ್ಲಿಸ್ಕೂಲಿನ ಎರಡು ಮೂರನೇ ತರಗತಿಗಳಿಗೆ ಪಾಠ ಹೇಳುತ್ತಿದ್ದರು. ಅವರ ಬದಲಿಗೆ ಹೋದ ರತ್ನರಿಗೂ ಅದೇ ಪಾಠ ಬಿತ್ತು...!!

ಎಂ.ಎ ಪರೀಕ್ಷೆ ಪಾಸುಮಾಡಿದವರಿಗೆ ಮಿಡ್ಲಿಸ್ಕೂಲ್ ಪಾಠ ಮಾಡುವುದು ಏನು ಕಷ್ಟವೇ....?! ಎಂದುಕೊಂಡು ಯಾವ ಪೂರ್ವ ಸಿದ್ಧತೆಗಳಿಲ್ಲದೆ ತರಗತಿಗೆ ಹೋದರು. ಆವತ್ತು ಮಾಡಬೇಕಾದ ಪಠ್ಯ ಭಾಗವನ್ನ ಓದಿಕೊಂಡರು.

"ಎಂಟು ಗೇಣಿನ ದೇಹ...ರೋಮಗಳೆಂಟು ಕೋಟಿಯು...ಮೂಳೆಯರವತ್ತೆಂಟು...ಇತ್ಯಾದಿ....ಈ ದೇಹ ಕಟ್ಟಿಕೊಂಡು ಏಕೆ ಗೊಳಾಡುತ್ತೀ...ಪರಮಾತ್ಮನನ್ನ ಧ್ಯಾನಿಸಿ ಪರಲೋಕಕ್ಕೆ ಹೋಗು ಮಗು" ಎಂದು ಮೊದಲಾಗುವ ಹರಿಭಕ್ತಿ ಸಾರದ ಪದ್ಯ ಪಾಠವನ್ನು ಎರಡನೇ ತರಗತಿಯ ಮಕ್ಕಳಿಗೆ ಭೊದಿಸಬೇಕಾಗಿತ್ತು!!!ಅದನ್ನ ಹೇಗೆ ಮಾಡುವುದೆಂದು ದಿಕ್ಕು ಕಾಣದೆ, ಮುಂದಿನ ಗದ್ಯ ಪಾಠವನ್ನ ಓದಿದರು

"ದೇವರು ಎಂಬ ವ್ಯಕ್ತಿಯು ಇರುವುದೇ? ಎಂಬುದರ ಕುರಿತಾಗಿ ವಿಚಾರಪರ ರಾಯರಿಗೂ ಭಕ್ತಾಗ್ರೇಸರ ಶಾಸ್ತ್ರಿಗಳಿಗೂ ನಡೆದ ಒಂದು ಸಂವಾದ." ಬರೆದವರಿದೆ ಅದು ಇಷ್ಟವಾಗಿರಬಹುದು ಆದರೆ ಎರಡನೇ ತರಗತಿಯ ಮಕ್ಕಳಿಗೆ ಅಲ್ಲ.. 

ಎರಡನೆಯ ತರಗತಿಗೆ ಹೋದರು ಅಲ್ಲಿ ಮೊದಲನೆ ಪಾಠ: 'ಸೌವರ್ಣಮಧ್ಯ ಸ್ಥಿತಿ' ಹಾಗೆಂದರೆ? ಅರ್ಥವಾಗಲಿಲ್ಲ....ಅಲ್ಲೇ ಪಕ್ಕದಲ್ಲಿ ಇಂಗ್ಲೀಷಿನಲ್ಲಿ "The Golden Mean" ಎಂದು ಬರೆದಿದ್ದರು...!!!ಅವರ ಮೇಷ್ಟ್ರುತನದ ಮೊದಲನೆ ದಿನ ಹೀಗೆ ಆರಂಭವಾಯಿತು... :) 

"ಪರಮಾತ್ಮಾ! ಮಕ್ಕಳಿಗೆ ಹೇಳಬೇಕಾದುದನ್ನ ಸುಲಭವಾಗಿ ಸರಳವಾಗಿ ತಿಳಿಸಲು ಸಾಧ್ಯವಿಲ್ಲವೇ? ಪಠ್ಯ ಪುಸ್ತಕದ ಪಾಠಗಳು ಅರ್ಥವಾಗಲಿ ಬಿಡಲಿ ಮಾಡಿಯೇ ತೀರಬೇಕು. ಇದರ ಜೊತೆಗೆ ಮಕ್ಕಳಿಗೆ ಉಲ್ಲಾಸ ಕೊಡುವ ಉತ್ಸಾಹಗೊಳಿಸುವ ಕತೆ ಕವನಗಳನ್ನ ಕೂಡಿಸಬಾರದೇಕೆ??" ಅನ್ನೋ ಮನಸಾಯಿತು ಹಾಗೆ ಕಟ್ಟಿ ಹೇಳಿ ಕೊಟ್ಟ ಮೊದಲ ಕವನವೇ 'ತುತ್ತೂರಿ'... :)

ಬಣ್ಣದ ತಗಡಿನ ತುತ್ತೂರಿ...

ಕಾಸಿಗೆ ಕೊಂಡನು ಕಸ್ತೂರಿ...

ಎಂದು ಹೇಳಿಕೊಂಡು ಮಕ್ಕಳು ಶಾಲೆಯಲ್ಲಿ, ಮನೆಯ ಬಳಿ ಕುಣಿದಾಡುವ ಗದ್ದಲ ಕಿವಿಗೆ ಬೀಳದಿದ್ದುದು ಅಪೂರ್ವ. ಅವರ ಉಲ್ಲಾಸಕ್ಕೆ ತುತ್ತೂರಿಯೊಂದೇ ಸಾಕಾಗಿತ್ತು....ಅದೆಷ್ಟು ಸಲ ಓದಿದರೂ... ಊದಿದರೂ...ಅವರು ದಣಿದದ್ದು ಕಾಣಿಸಲಿಲ್ಲ. ಅದೇ ಪಟ್ಟಿನಲ್ಲಿ ದಿನಕ್ಕೆ ಮೂರು ನಾಲ್ಕು ಕವನಗಳಂತೆ ಬಾಲಕರೊಡನೆ ಬಾಲಕರಾಗಿ ಹೇಳಿಕೊಟ್ಟರು. 

ಹಾಗೆ ರತ್ನರು ಶಿವರಾಮ ಕಾರಂತರ ಮಕ್ಕಳ ಕೂಟದಲ್ಲಿ ಹೇಳಿಕೊಟ್ಟ ಮತ್ತೊಂದು ಪದ್ಯ:

ದೊಡ್ಡ ಪಟ್ಟೆ ಹುಲಿ

ಕಾಡುದಾರಿಯಲಿ

ನಡುಗಿ ನಿಂತು ಹೇಳಿತಿಂತು

ಅಯ್ಯೋ ಅಪ್ಪ ಚಳಿ ||

ಮುಂದಿನ ವರ್ಷದ ಮಕ್ಕಳ ಕೂಟಕ್ಕೆ ಹೋದಾಗ ಅಲ್ಲಿಗೆ ಬಂದಿದ್ದ ಮಕ್ಕಳಿಂದ ಚುಟುಕುಗಳ ಸುರಿಮಳೆ. ಬಂದವರಲ್ಲಿ ಒಬ್ಬೊಬ್ಬನೂ ಐವತ್ತು ನೂರು ಚುಟುಕ ಹೊಸೆದು ತಂದಿದ್ದರಂತೆ..ಚಿಕ್ಕ ಹುಡುಗ ಬರೆದ ಒಂದು ಚುಟುಕ,

ಸರಕು ಇರುವ ಗಾಡಿ

ಹೋಗುತಿತ್ತು ಓಡಿ

ಕದಿಯಲೆಂದು

ಗಾಡಿ ಹಿಂದೆ

ಓಡುತಿದ್ದ ಕೇಡಿ ||

ಅವರ ತುತ್ತೂರಿ, ಕಡಲೆ ಪುರಿ, ಚುಟುಕ, ಕಲ್ಲುಸಕ್ಕರೆ, ರಸಕವಳ ಮತ್ತು ತಾರೆ ಎಲ್ಲಾ ಪದ್ಯ ಸಂಕಲನಗಳಲ್ಲಿರುವ ಪದ್ಯಗಳು "ಕಂದನ ಕಾವ್ಯ ಮಾಲೆ" ಪುಸ್ತಕದಲ್ಲಿವೆ. ಅದರಲ್ಲಿ ಒಟ್ಟು ನೂರು ಪದ್ಯಗಳಿವೆ...!! 

ಚಿಕ್ಕಂದಿನಲ್ಲಿ ಅವರ ತಾಯಿ ಇಟ್ಟ ಹೆಸರು ರಾಜ ಅಂತ. ಜಿ.ಪಿ.ರಾಜಯ್ಯಂಗಾರ್...ಹೇಗೆ ಜಿ.ಪಿ.ರಾಜರತ್ನಂ ಆದರು?? ಅನ್ನೋದು ಮಾತ್ರ ಬಹಳ ಸ್ವಾರಸ್ಯಮಯವಾದದ್ದು. ನೀವು ಅದನ್ನ ಓದಿಯೇ ಅನುಭವಿಸಬೇಕು :) ಅವರ ಹೆಸರನ್ನ ಅವರೇ ಇಟ್ಟುಕೊಳ್ಳುವ ಛಾನ್ಸು ಅದೆಷ್ಟು ಜನಕ್ಕೆ ದೊರೆತೀತು....!!! :)

---------

ಮೊನ್ನೆ "ಕಂದನ ಕಾವ್ಯ ಮಾಲೆ" ಪುಸ್ತಕದ ಪದ್ಯಗಳನ್ನ ಓದುವಾಗ....ಚಿಕ್ಕಂದಿನಲ್ಲಿ ಕಲಿತ ಪದ್ಯ...ಮತ್ತದರ ರಾಗ ಇನ್ನೂ ಮರೆತು ಹೋಗಿಲ್ಲದ್ದು ಕಂಡು ನನ್ನ ಹುಮ್ಮಸ್ಸು ಹಿಮ್ಮಡಿಯಾಗಿ....ಇನ್ನೂ ಜೋರಾಗಿ ಹಾಡಿಕೊಂಡದ್ದು ಬಹಳ ಖುಷಿ ಆಯ್ತು...!! :)

ನಾನು ಪದ್ಯದ ಒಂದೆರಡು ಸಾಲುಗಳನ್ನ ಬರೀತೇನೆ...ನೀವು ನಿಮ್ಮ ನೆನಪಿನಂಗಳದಿಂದ ನೆನಪಿಸಿಕೊಂಡು ಪದ್ಯಗಳನ್ನ ಪೂರ್ತಿಮಾಡಿ :) ನೋಡೋಣ ಯಾರಿಗೆ ಎಷ್ಟು ಪದ್ಯಗಳು ನೆನಪಿವೆ ಅಂತ..ಶುರು ಮಾಡೋಣಾ.. 

1. ತುತ್ತೂರಿ

ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ

ಸರಿಗಮ ಪದನಿಸ ಊದಿದನು ಸನಿಧಪ ಮಗರಿಸ ಊದಿದನು

2. ಊಟದ ಆಟ

ಒಂದು ಎರಡು ಬಾಳೆಲೆ ಹರಡು । ಮೂರು ನಾಕು ಅನ್ನ ಹಾಕು ।
ಐದು ಆರು ಬೇಳೆ ಸಾರು । ಏಳು ಎಂಟು ಪಲ್ಯಕೆ ದಂಟು ।
ಒಂಬತ್ತು ಹತ್ತು ಎಲೆ ಮುದುರೆತ್ತು । ಒಂದರಿಂದ ಹತ್ತು ಹೀಗಿತ್ತು ಊಟದ ಆಟವು ಮುಗಿದಿತ್ತು ।।

3. ಹತ್ತು ಹತ್ತು ಇಪ್ಪತ್ತು

ಹತ್ತು ಹತ್ತು ಇಪ್ಪತ್ತು, ತೋಟಕೆ ಹೋದನು ಸಂಪತ್ತು
ಇಪ್ಪತ್ತು ಹತ್ತು ಮೂವತ್ತು, ಕೈಯಲಿ ಒಂದು ಕಲ್ಲಿತ್ತು ।।

ಮೂವತ್ತು ಹತ್ತು ನಲವತ್ತು, ಎದುರಲಿ ಮಾವಿನ ಮರವಿತ್ತು
ನಲವತ್ತು ಹತ್ತು ಐವತ್ತು, ಮರದಲಿ ಕಾಯಿ ತುಂಬಿತ್ತು ।।

ಐವತ್ತು ಹತ್ತು ಅರವತ್ತು, ಕಲ್ಲನು ಬೀರಿದ ಸಂಪತ್ತು|
ಅರವತ್ತು ಹತ್ತು ಎಪ್ಪತ್ತು, ಕಾಯಿಗಳೆಲ್ಲ ಉದುರಿತ್ತು ।।

ಎಪ್ಪತ್ತು ಹತ್ತು ಎಂಬತ್ತು, ಮಾಲಿಯ ಕಂಡನು ಸಂಪತ್ತು|
ಎಂಬತ್ತು ಹತ್ತು ತೊಂಬತ್ತು, ಕಾಲುಗಳೆರಡು ಓಡಿತ್ತು ।।

ತೊಂಬತ್ತು ಹತ್ತು ನೂರಾಯ್ತು, ತಲುಪಿದ ಮನೆಗೆ ಸಂಪತ್ತು ।।

4. ಗಡಿಯಾರದ ಸಡಗರ

ಕೋಳಿ ಕೂಗಿತೇಳು ಕಂದ....ಸೂರ್ಯ ಪೂರ್ವದಲ್ಲಿ ಬಂದ

ಹೆಚ್ಚು ಮಲಗಲೇನು ಚೆಂದ....ಬಾ ಕಂದ ಬಾ....

ಟಿಕ್ ಟಾಕ್ ಟಿಕ್ ಟಾಕ್...ಟಿಕ್ ಟಿಕ್ ಟಿಕ್

5. ವರ್ಷಕೆ ಆರೇ ಆರು ಋತು

ಚೈತ್ರ ವೈಶಾಖ ವಸಂತ ಋತು 

6. ಕಡಲೆ ಪುರಿ

ಪುರಿ ಪುರಿ ಕಡಲೆ ಪುರಿ ಗರಂ ಗರಂ ಕಡಲೆ ಪುರಿ

ಎಲ್ಲ ಬನ್ನಿ ತೆಗೆದು ತಿನ್ನಿ ಗರಂ ಗರಂ ಕಡಲೆ ಪುರಿ

ಕಾಸಿಗೊಂದು ಸೇರು ಪುರಿ... 

7. ನಮ್ಮ ಮನೆಯ ಸಣ್ಣ ಪಾಪ

ನಮ್ಮ ಮನೆಯಲೊಂದು ಸಣ್ಣ ಪಾಪನಿರುವುದು 

ಎತ್ತಿಕೊಳಲು ಹೋದರದಕೆ ಕೋಪ ಬರುವುದು....

8. ಚುಟುಕ

ಝಣ ಝಣ ಝಣ ಜೇಬು ತುಂಬ ಹಣ

ಮೇಲಕೆತ್ತಿ ಕೆಳಗೆ ಬಿಡಲು ಸದ್ದು....ಠಣ್ ಠಣ ಠಣ

9. ರೊಟ್ಟಿಯಂಗಡಿಯ ಕಿಟ್ಟಪ್ಪ

ರೊಟ್ಟಿಯಂಗಡಿಯ ಕಿಟ್ಟಪ್ಪ ನನಗೊಂದು ರೊಟ್ಟಿ ತಟ್ಟಪ್ಪ..

ಪುಟಾಣಿ ರೊಟ್ಟಿ ಕೆಂಪಗೆ ಸುಟ್ಟು ಒಂಬತ್ತು ಕಾಸಿಗೆ ಕಟ್ಟಪ್ಪ।।

10. ನಾಯಿಮರಿ ನಾಯಿಮರಿ

ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ?
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು
ನಾಯಿ ಮರಿ ನಾಯಿ ಮರಿ ತಿಂಡಿ ತಿಂದು ಏನು ಮಾಡುವೆ?
ತಿಂಡಿ ತಿಂದು ಗಟ್ಟಿಯಾಗಿ ಮನೆಯ ಕಾಯುವೆ
ನಾಯಿ ಮರಿ ನಾಯಿ ಮರಿ ಕಳ್ಳಬಂದರೇನು ಮಾಡುವೆ?
ಲೋಳ್ ಲೋಳ್ ಬೌ ಎಂದು ಕೂಗಿಯಾಡುವೆ ।।

11. ಈ ಕತೆ

ಒಂದು ಕಾಡಿನ ಮಧ್ಯದೊಳಗೆ ಎರಡು ಮರಗಳ ನಡುವೆ ಮಲಗಿ
ಮೂರು ಕರಡಿಗಳಾಡುತಿದ್ದವು ನಾಲ್ಕು ಮರಿಗಳ ಸೇರಿಸಿ

12. ಒಂದು ಎರಡು

ಒಂದೆಂಬೋದು ಒಬ್ಬನೇ ಸೂರ್ಯ 

ಎರಡೆಂಬೋದೇನೆ ಹೆಸರ್ ಹೇಳೇ  

-----------

ನಾವು ಚಿಕ್ಕಂದಿನಲ್ಲಿ ಇನ್ನೊಂದು ಪದ್ಯ ಹಾಡುತ್ತಿದ್ದೆವು , ಇದು ಯಾರು ಬರೆದದ್ದು ಅಂತ ಗೊತ್ತಿಲ್ಲ 

ಮಳೆ ಬಂತು ಮಳೆ

ಕೊಡೆ ಹಿಡಿದು ನಡೆ

ಜಾರಿ ಬಿದ್ದರಾಯ್ತು ನೋಡು

ಬಟ್ಟೆಯೆಲ್ಲ ಕೊಳೆ

ಸೋಪು ಹಾಕಿ ಒಗೆ

ನೊರೆ ಬಂತು ನೊರೆ

....ಮುಂದಿನ ಸಾಲುಗಳು ಮರೆತು ಹೋಗಿವೆ ನಿಮ್ಮಲ್ಲಿ ಯಾರಿಗಾದರೂ ನೆನಪಿದ್ರೆ ಬರೀರಿ... :)

----------

ಜಿ.ಪಿ.ರಾಜರತ್ನಂ ಬರೀ ಸಾಹಿತ್ಯಕ್ಕಷ್ಟೇ ಅಲ್ಲದೆ ಜೈನ ಮತ್ತು ಭೌದ್ಧ ಧರ್ಮದ ಅನೇಕ ಪುಸ್ತಕಗಳನ್ನ ಅನುವಾದ ಮಾಡಿದ್ದಾರೆ. ಪಾಳಿ ಭಾಷೆ ಕಲಿತು ಬೌದ್ಧ ಧರ್ಮದ ಅನೇಕ ಸೂತ್ರಗಳನ್ನ ಕನ್ನಡಕ್ಕೆ ಅನುವಾದಿಸಿದ್ದು ಸಾಧನೆಯೇ ಸರಿ. ಹೆಚ್ಚಿನ ವಿಚಾರಗಳಿಗೆ ಅವರ ಪುಸ್ತಕಗಳನ್ನ ಓದಿ. ಜೊತೆಗೆ ವಿಕಿಪೀಡಿಯದಿಂದ...

ಹಾಗೇ 'ಯೆಂಡ ಕುಡುಕ ರತ್ನ'ನ ಬಗ್ಗೆ ಯಾರದ್ರೂ ಓದಿ ಸಂಪದದಲ್ಲಿ ಬರೀರಿ.... :)

ಧನ್ಯವಾದಗಳು

ಸವಿತ

No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by roopablrao on
ಹೋದವಾರ ತಾನೆ ಚಿಣ್ಣರ ಹಾಡುಗಳ ಸಿ.ಡಿ ತಂದಿದ್ದೆ. ತುಂಬಾ ಚೆನ್ನಾಗಿವೆ ಸಾಧ್ಯವಾದರೆ ಒಮ್ಮೆ ಕೊಂಡು ಓದಿ. ಖುಷಿಯಾಗುತ್ತದೆ ಮಕ್ಕಳ ಜೊತೆ ಮಕ್ಕಳಾಗುವ ಸಡಗರ ರೂಪ

Submitted by savithasr on
ಧನ್ಯವಾದಗಳು ರೂಪಾವ್ರೇ :) ನಾನು ಕಳೆದ ವಾರವಷ್ಟೇ "ಕಂದನ ಕಾವ್ಯ ಮಾಲೆ" ಪುಸ್ತಕ ತಂದೆ...ಸಿಡಿ ಸೆಕ್ಷನ್ ನೋಡಲಿಲ್ಲ..ಪದ್ಯಗಳನ್ನ ಯಾರು ಹಾಡಿದ್ದಾರೆ? -ಸವಿತ

Submitted by palachandra on
ಸವಿತಾಅವರೇ, "ಕವಿ ಕಾವ್ಯ ಪರಿಚಯ" ಚೆನ್ನಾಗಿದೆ.. ೫ ಕ್ಕೆ ೪.೫ ಕೊಡಬಹುದು :) ಈ ಮೇಲಿನ ಹಾಡುಗಳನ್ನ ಅನಿಮೇಶನ್ ಮೂಲಕ ಹಾಡಿ ತೋರಿಸಿದ್ದಾರೆ. ಅದರ ಸಿ.ಡಿ. ಸ್ವಪ್ನದಲ್ಲಿ ಸಿಕ್ಕುತ್ತೆ. ಯಾರು ಬರೆದದ್ದೋ ಗೊತ್ತಿಲ್ಲ, ಚಿಕ್ಕಂದಿನಲ್ಲಿ ಈ ಮೇಲಿನದ್ದೂ ಅಲ್ಲದೇ ಇತರ ಪದ್ಯಗಳು ನೆನಪಾದವು ಬಸ್ ಬಂತು ಬಸ್ ಕೆಂಪು ಮೂತಿ ಬಸ್ ನಾನು ಡ್ರೈವರ್ ಆಗುವೆ ಬಸ್ಸನ್ನು ಬಿಡುವೆ ನಾನು ಕಂಡಕ್ಟರ್ ಆಗುವೆ ಟಿಕೇಟನ್ನು ಕೊಡುವೆ ನಮ್ಮೂರ ಸೀನ ಹಿಡಿದನೊಂದು ಮೀನ ಸೀನಗೊಂದು ಸೀನು ಬರಲು ಜಾರಿ ಹೋಯ್ತು ಮೀನ ಬೇಕೇ ಬೇಕೇ ತರಕಾರಿ ತರ ತರ ಜಾತಿಯ ತರಕಾರಿ ಮುಂದೆ ಎಲ್ಲಾ ತರಕಾರಿ ಬಗ್ಗೆ ವಿವರ ಇದೆ, ನೆನಪಿಲ್ಲ.. ಬಾಲವಾಡಿ (ಅಂಗನವಾಡಿ)ಗೆ ಹೋಗಬೇಕಾದ್ರೆ ಒಂದು ತಿಂಗ್ಳು ಈ ಹಾಡಿಗೆ ಹೆಜ್ಜೆ ಹಾಕಿಸಿ ಅಭ್ಯಾಸ ಮಾಡಿಸಿದ್ರು. ವಾರ್ಷಿಕೋತ್ಸವದ ದಿನ ಮಾನ್ಯ ಅತಿಥಿಗಳು ತುಸು ಜಾಸ್ತಿಯೇ ಭಾಷಣ ಮಾಡಿದ್ದರಿಂದ ಸ್ಟೇಜ್ ಹತ್ತೋ ಸಮಯಕ್ಕೆ ನಿದ್ದೆ ಬಂದು ಬಿಟ್ಟಿತ್ತು (೮ ಗಂಟೆ ನನಗೆ ಆಗ ಮಧ್ಯ ರಾತ್ರಿ!). ಅಮ್ಮ ಎಬ್ಬಿಸಿ ಚೊಕಲೇಟ್ ಕೊಡಿಸ್ತೀನಿ, ಐಸ್ ಕ್ರೀಮ್ ಕೊಡಿಸ್ತೀನಿ, ಎಷ್ಟೆ ಪುಸಲಾಯಿಸಿದ್ರೂ ಊಹೂಂ.. ಕೊನೇಗೆ ಅಮ್ಮಂಗೆ ಕೋಪ ಬಂದು ಚಿವುಟಿ ಮನೆಗೆ ಕರೆದುಕೊಂಡು ಬಂದ್ರು. ನಾನೊಬ್ಬ ಇಲ್ದೆ ಇದ್ರೆ ಡಾನ್ಸ್ ನಡೀಯೋಲ್ವೆ? ನಡೀತು ಆದ್ರೆ ಮುಂದಿನ ಸಾಲಲ್ಲಿ ಇಬ್ರ ಬದ್ಲು ಒಬ್ನೆ ಇದ್ದ.. -- PaLa

Submitted by savithasr on
ಧನ್ಯವಾದಗಳು ಪಾಲಚಂದ್ರರೇ :) >>"ಕವಿ ಕಾವ್ಯ ಪರಿಚಯ" ಚೆನ್ನಾಗಿದೆ.. ೫ ಕ್ಕೆ ೪.೫ ಕೊಡಬಹುದು ತುಂಬಾ ಖುಷಿಯಾಯ್ತು :) ನೀವು ಬರೆದಿರೋ ಪದ್ಯವನ್ನ ನಾವು ಹಾಡುತ್ತಿದ್ದ ವರ್ಶನ್: ಬಸ್ ಬಂತು ಬಸ್ಸು ಗವರ್ಮೆಂಟ್ ಬಸ್ಸು ಕೆಂಪು ಬಿಳಿಯ ಬಣ್ಣ ನೋಡು ಬಾರಣ್ಣ ನಾನು ಡ್ರೈವರ್ ಆಗುವೆ ನೀನು ಕಂಡಕ್ಟರ್ ಆಗುವೆ ನೀನು ರೈಟ್ ಎಂದು ಹೇಳುವೆ ನಾನು ಬಸ್ಸನ್ನು ಬಿಡುವೆ :) >>ಒಂದು ತಿಂಗ್ಳು ಈ ಹಾಡಿಗೆ ಹೆಜ್ಜೆ ಹಾಕಿಸಿ ಅಭ್ಯಾಸ ಮಾಡಿಸಿದ್ರು. ಹಾಗಾದ್ರೆ ನಿಮ್ಮ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಡಾನ್ಸೂ ಮಾಡ್ತೀರಾ ಅನ್ನಿ :) -ಸವಿತ

Submitted by roopablrao on
ತೋಟಕೆ ಹೋಗೊ ತಿಮ್ಮ ಮಳೆ ಬರುತ್ತಮ್ಮ ಅಂತ ಒಂದು ಹಾಡಿದೆ ಪೂರ್ತಿ ಸಾಹಿತ್ಯ್ ಗೊತ್ತಿಲ್ಲ ಯಾರಿಗಾದರೂ ಗೊತ್ತಿದ್ರೆ ಹೇಳಿ ರೂಪ

Submitted by Achala Sethu on
ತೋಟಕೆ ಹೋಗೋ ತಿಮ್ಮ ತೋಳ ಬಂದೀತಮ್ಮ ಹಸು ಮೇಯ್ಸೋ ತಿಮ್ಮ ಹಸು ಹಾದೀತಮ್ಮ ನೀರು ಸೇದೋ ತಿಮ್ಮ ಕಾಲು ಜಾರೀತಮ್ಮ ಊಟಕೆ ಬಾರೋ ತಿಮ್ಮ ಓಡಿ ಬಂದೇನಮ್ಮ ಇನ್ನುಳಿದ ಚರಣಗಳು ನೆನಪಿಲ್ಲ...ನೀವೇ ಏನಾದ್ರೂ ಸೇರಿಸ್ತಾ ಹೊಗ್ಬಹುದು :)

Submitted by savithasr on
ಧನ್ಯವಾದಗಳು ರೂಪಾ ಮತ್ತು ಅಚಲಾವ್ರೆ :) ತೋಟಕೆ ಹೋಗೋ ತಿಮ್ಮ ತೋಳ ಬಂದೀತಮ್ಮ ಹಸು ಮೇಯ್ಸೊ ತಿಮ್ಮ ಹಸು ಹಾದೀತಮ್ಮ ಒಲೆ ಉರ್ಸೊ ತಿಮ್ಮ ಉರಿ ಸುಟ್ಟೀತಮ್ಮ ಪಾಟ ಬರೆಯೊ ತಿಮ್ಮ ಬಳಪ ಇಲ್ಲವಮ್ಮ ಹೂವು ಬಿಡ್ಸೊ ತಿಮ್ಮ ಹಾವು ಕಚ್ಚೀತಮ್ಮ ಕಾವಲಿತಾರೊ ತಿಮ್ಮ ಕಾಲುನೋವುತ್ತಮ್ಮ ನೀರು ಸೇದೊ ತಿಮ್ಮ ಕೈ ನೋವುತ್ತಮ್ಮ ಊಟಕೆ ಬಾರೊ ತಿಮ್ಮ ಓಡಿಬರ್ತೀನಮ್ಮ :)

Submitted by girish.rajanal on
ಸವಿತಾ, ನಾ ಓದಿದ್ದ, ಕಲಿತಿದ್ದ ಪದ್ಯಗಳೇ ನನಗೆ ನೆನಪಿದ್ದಿದ್ದಿಲ್ಲ.. ಸವಿ ನೆನಪುಗಳನ್ನು ತಂದಿದ್ದಕ್ಕೆ ನಿಮಗೆ ಹೆನ್ನನ್ನಿ. ಖೋ ನ ಜಾಯೆ ಯೇ ತಾರೆ ಜಮೀನ್ ಪರ್‍.... ನಿಮ್ಮವ, ಗಿರೀಶ ರಾಜನಾಳ ಹಂತಾದು ಹಿಂತಾದು ಕೂಡಿ ಸಂತ್ಯಾಗ ಹೋದ್ರss..ಸಂತ್ಯಾಗೊಂದು ಹಂತಾದs ಸಿಕ್ಕಿತ್ತಂತ...!!!

Submitted by savithasr on
ಧನ್ಯವಾದಗಳು ಗಿರೀಶ್ :) >>ಹಂತಾದು ಹಿಂತಾದು ಕೂಡಿ ಸಂತ್ಯಾಗ ಹೋದ್ರss..ಸಂತ್ಯಾಗೊಂದು ಹಂತಾದs ಸಿಕ್ಕಿತ್ತಂತ...!!! ಈ ಸಾಲು ಓದಲಿಕ್ಕೆ ಚಲೋ ಅನ್ನಿಸ್ತು...ಹಂತಾದು ಹಿಂತಾದು ಅಂದ್ರ ಏನು? -ಸವಿತ

Submitted by girish.rajanal on
ಸವಿತಾ, ಹಂತಾದು ಹಿಂತಾದು ಅಂದ್ರ ಇದನ್ನ ಯಾರಿಗಾದರೂ ಹೋಲಿಸಬಹುದು.. ಉದಾ: ಇಬ್ಬರು ಉಡಾಳರಗೆ ಇಂತಹ ಜಾಗಕ್ಕೆ ಇಲ್ಲವೇ ಸ್ಥಳಕ್ಕೆ ಹೋಗಿ ಅಂದ್ರ, ಅಲ್ಲಿಗೆ ಹೋದ್ರೂ ಅವರಿಗೆ ಇನ್ನೊಬ್ಬ ಉಡಾಳ ಜೋಡಿಯಾದನಂತೆ..ಇದು ಒಂತರಾ ವ್ಯಂಗ್ಯದ ಮಾತು ಕೆಲವೊಮ್ಮ ಹಾಸ್ಯಮಯವಾಗಿರುತ್ತೆ. ಕೆಲವು ಜನ ಇರ್ತಾರೆ ಅವರು ಎಲ್ಲಿ ಹೋದರೂ ಅವರಂತ ಗೆಳೆಯರೇ ಸಿಗೋದು(ಅಂದರೆ ಅಂತವರ ಜೊತೆ ಜಾಸ್ತಿ ಬೆರೀತಾರೆ) ಇದರೀತಿ ಇನ್ನೊಂದೈತಿ, ಅಜ್ಞಾಡಿ ಕೈಯಾಗ ಆರತಿ ಕೊಟ್ಟರ ಆರು ತಿಂಗಳು ಹಿಡಕೊಂಡು ನಿಂತಿತ್ತಂತ... ಅಜ್ಞಾಡಿ=ಅಜ್ಞಾನಿ, ಅವಿವೇಕಿ, ಮೂಢ.. ನಿಮ್ಮವ, ಗಿರೀಶ ರಾಜನಾಳ ಹಂತಾದು ಹಿಂತಾದು ಕೂಡಿ ಸಂತ್ಯಾಗ ಹೋದ್ರss..ಸಂತ್ಯಾಗೊಂದು ಹಂತಾದs ಸಿಕ್ಕಿತ್ತಂತ...!!!

Submitted by savithasr on
ಹಂತಾದು ಹಿಂತಾದು ಕೂಡಿ ಸಂತ್ಯಾಗ ಹೋದ್ರss..ಸಂತ್ಯಾಗೊಂದು ಹಂತಾದs ಸಿಕ್ಕಿತ್ತಂತ...!!! ಈಗ ಅರ್ಥವಾಯ್ತು ನೋಡ್ರಿ ಗಿರೀಶ್ :) ಇದು ಗಾದೆ ಮಾತೋ ಅಥವಾ ಯಾರಾದ್ರು ಬರೆದದ್ದೋ? ಧನ್ಯವಾದಗಳು -ಸವಿತ

Submitted by rasikathe on
ಸವಿತಾ, ನಿಮ್ಮ ಲೇಖನ ಚೆನ್ನಾಗಿದೆ. ನನ್ಗೂ ಮಕ್ಕಳು ಹೇಳುವ ತುಂಬಾ ಪದಗಳು ಬರತ್ತೆ. ಕೆಲವು ಇನ್ನೂ ನೆನಪಿದೆ. ಆದರೂ ಎಲ್ಲಾದರೂ ಬರೆದಿಡೋಣ ಅಂತ ಆಗಾಗ್ಗೆ ಅಂದು ಕೊಳ್ಳುವುದೇ ಆಗಿದೆ. ಇಲ್ಲಿದೆ ಒಂದು , ಇದು ನನ್ನ ತಲೆಯಲ್ಲಿರುವ ಸಿ. ಡಿ. ಯಿಂದ.................. ಸಣ್ಣಕ್ಕಿ ಸಣ್ಣ ಗುಲಗಂಜಿ ಬಣ್ಣ ಕರಿಸೀರೆ ಉಡಿಸಿ ಬಿಳಿ ರವಿಕೆ ತೊಡಿಸಿ ಆನೆ ಮೇಲೆ ಕೂರಿಸಿ ಅಂಭಾರಿ ಮಾಡಿಸಿ ಕಳಿಸ್ಬಹುದಣ್ಣ ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲಾ ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ ಕಾಲಾವಕಾಶವಾದಾಗ ಇನ್ನೊಮ್ಮೆ ಬರೀತೀನಿ. ಧನ್ಯವಾದಗಳು! ರಸಿಕತೆ!

Submitted by savithasr on
'ಬಾರೋ ಬಾರೋ ಮಳೆರಾಯ' ನಾವೂ ಹಾಡ್ತಿದ್ವಿ.ಪದ್ಯವನ್ನ ನೆನೆಸಿದ್ದಕ್ಕೆ ಧನ್ಯವಾದಗಳು ಮೀನಾವ್ರೇ :) >>ಆದರೂ ಎಲ್ಲಾದರೂ ಬರೆದಿಡೋಣ ಅಂತ ಆಗಾಗ್ಗೆ ಅಂದು ಕೊಳ್ಳುವುದೇ ಆಗಿದೆ. ಮತ್ತೇಕೆ ತಡ? ಬೇಗ ಬರೆದು ನಮಗೂ ಓದಲು ಕೊಡ್ತೀರಾ ಅಂತ ನಿರೀಕ್ಷೆಯಲ್ಲಿ... -ಸವಿತ

Submitted by Chamaraj on
ಮರೆತಿದ್ದೆ ಅಂದುಕೊಂಡಿದ್ದ ಎಷ್ಟೊಂದು ಸುಮಧುರ ನೆನಪುಗಳನ್ನು ಕೆದಕಿದ್ದೀರಿ ಸವಿತಾ! ಕವಿತೆಯೊಂದನ್ನು ಆಸ್ವಾದಿಸುವಂತೆ ಬರೆಯುವುದು ಬಹಳಷ್ಟು ಹಳೆಯ ಕವಿಗಳ ವೈಶಿಷ್ಟ್ಯ. ಜಿಪಿ ರಾಜರತ್ನಂ ಅವರಲ್ಲೊಬ್ಬರು. ಅವರ ಯೆಂಡ್ಕುಡುಕ ರತ್ನ ಓದಿದವರಿಗೆ ರಾಜರತ್ನಂ ಸಕತ್‌ ಗುಂಡು ಪಾರ್ಟಿ ಇರಬೇಕು ಎಂಬ ಶಂಕೆ ಹುಟ್ಟಿಸುತ್ತದೆ. ತಮಾಷೆಯ ಸಂಗತಿ ಎಂದರೆ, ರಾಜರತ್ನಂ ಕುಡಿಯುತ್ತಿರಲಿಲ್ಲ. ಆದರೆ, ಕುಡಿದವರಿಗಿಂತ ಸೊಗಸಾಗಿ ಕುಡುಕರ ಲಕ್ಷಣಗಳನ್ನು, ಭಾವನೆಗಳನ್ನು ಹೇಳಿದ್ದಾರೆ. ಆ ಪುಸ್ತಕ ಸಿಕ್ಕರೆ ಖಂಡಿತವಾಗಿ ರತ್ನನ ಬಗ್ಗೆ ಬರೆಯುತ್ತೇನೆ. - ಚಾಮರಾಜ ಸವಡಿ http://chamarajsavad...

Submitted by savithasr on
ಧನ್ಯವಾದಗಳು ಚಾಮರಾಜರೇ :) >>ಯೆಂಡ್ಕುಡುಕ ರತ್ನ ಓದಿದವರಿಗೆ ರಾಜರತ್ನಂ ಸಕತ್‌ ಗುಂಡು ಪಾರ್ಟಿ ಇರಬೇಕು ಎಂಬ ಶಂಕೆ ಹುಟ್ಟಿಸುತ್ತದೆ. ಹೌದು ಖಂಡಿತವಾಗಿ ೧೦೦% ಅನ್ನಿಸತ್ತೆ. >>ಆ ಪುಸ್ತಕ ಸಿಕ್ಕರೆ ಖಂಡಿತವಾಗಿ ರತ್ನನ ಬಗ್ಗೆ ಬರೆಯುತ್ತೇನೆ "ರತ್ನನ ಪದಗಳು ಮತ್ತು ನಾಗನ ಪದಗಳು" ಅಂತ ಒಂದೇ ಪುಸ್ತಕದಲ್ಲಿ ಯೆಂಡ್ಕುಡುಕ ರತ್ನರ ಎಲ್ಲಾ ಪದ್ಯಗಳ ಸಂಗ್ರಹವಿದೆ. ಪುಸ್ತಕ ಸಪ್ನದಲ್ಲಿ ಸಿಗುತ್ತೆ. ರತ್ನರ ಬಗ್ಗೆ ನಿಮ್ಮ ಲೇಖನದ ನಿರೀಕ್ಷೆಯಲ್ಲಿ... -ಸವಿತ

Submitted by cmariejoseph on
೧೯೭೭ರ ಒಂದು ಬೆಳಗ್ಗೆ. . ಆಕಾಶವಾಣಿ, ಬೆಂಗಳೂರು, ಈಗ ಚಿಂತನ ಜಿ ಪಿ ರಾಜರತ್ನಂ ಅವರಿಂದ. "ಇಂದಿನ ಚಿಂತನ watch. ವಾಚ್ ಅಂದರೆ ಗಡಿಯಾರ. ಹಿಂದೆಲ್ಲ ಜನ ಸಮಯವನ್ನು ತಿಳಿಯುವುದಕ್ಕೆ ಸೂರ್ಯನ ಕಡೆ ಮುಖ ಮಾಡುತ್ತಿದ್ದರು. ಈಗಲಾದರೋ ತಮ್ಮ ಮಣಿಕಟ್ಟಿನ ಮೇಲೊಂದು ಪುಟ್ಟ ಯಂತ್ರವನ್ನು ಕಟ್ಟಿಕೊಂಡು ಸಮಯ, ದಿನಾಂಕ, ಕ್ಷಣ, ಗಳಿಗೆ ಮಾತ್ರವಲ್ಲ ಲೆಕ್ಕವನ್ನು ಮಾಡುವುದಕ್ಕೂ ಅದನ್ನೇ ನೆಚ್ಚುವಂಥ ಪರಾವಲಂಬಿಗಳಾಗಿಬಿಟ್ಟಿದ್ದಾರೆ ನಮ್ಮ ಜನ. ಇರಲಿ, ನಾನು ಹೇಳ ಹೊರಟಿರುವ ವಾಚ್ ಅದಲ್ಲ. ನನ್ನ ವಾಚ್ ಇಂಗ್ಲಿಷಿನ ಡಬ್ಲ್ಯು ಎ ಟಿ ಸಿ ಎಚ್ ಅನ್ನೋ ವಾಚ್. ಈ ವಾಚ್ ಎಂದರೆ ಕಾಯುವುದು ಎಂದರ್ಥ. ಅಂದರೆ ವಾಚ್ ಯುವರ್‍ ವರ್ಡ್, ವಾಚ್ ಯುವರ್‍ ಆಕ್ಷನ್, ವಾಚ್ ಯುವರ್‍ ಥಾಟ್, ವಾಚ್ ಯುವರ್‍ ಕ್ಯಾರಕ್ಟರ್‍ ಮತ್ತು ವಾಚ್ ಯುವರ್‍ ಹಾರ್ಟ್. ನಿನ್ನ ಮಾತು, ಕ್ರಿಯೆ, ಅಂತಃಕರಣ ಮತ್ತು ಶೀಲಗಳನ್ನು ಶುದ್ಧವಾಗಿಟ್ಟುಕೊಂಡರೆ ನಿನ್ನ ಮನಸ್ಸು ತ್ರಿಕರಣ ಶುದ್ಧವಾಗಿರುತ್ತದೆ. . ." ಇನ್ನೂ ಏನೋ ಇದೆ. ಮರೆತುಹೋಗಿದೆ. ಪ್ರೀತಿಯಿಂದ ಸಿ ಮರಿಜೋಸೆಫ್

Submitted by savithasr on
ರತ್ನರ ಚಿಂತನವನ್ನ ನಮ್ಮೊಡನೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಮರಿಜೋಸೆಫರೇ,ನೀವು ಅವರ ಮಾತುಗಳನ್ನೂ ಕೇಳಿದ್ದೀರಾ? ಇನ್ನಷ್ಟು ವಿಚಾರಗಳನ್ನ ತಿಳಿಸಿ. ನಿಮಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. -ಸವಿತ

Submitted by manjunath s reddy on
ಈ ಪದ್ಯಗಳನ್ನು ಚಿಕ್ಕಂದಿನಲ್ಲಿ ಓದಿದ್ದರು ಇವೆಲ್ಲ ರಾಜರತ್ನಂ ಬರೆದಿದ್ದು ಅಂತ ತಿಳಿದಿರಲಿಲ್ಲ... ಈ ಪದ್ಯಗಳೊಂದಿಗೆ ಬೆಸೆದಿರುವ ಬಾಲ್ಯ ಹಾಗು ಬಾಲ್ಯದ ಶಾಲೆ ಎಲ್ಲವೂ ನೆನಪಾಗುತ್ತಿದೆ. ನೆನಪಿಸಿದಕ್ಕೆ ದನ್ಯವಾದಗಳು. ಸಂಪತ್ತಿನ ಪದ್ಯ ದೂರದರ್ಶನದಲ್ಲಿ ದ್ರುಶ್ಯಗೀತೆಯಾಗಿ ನೋಡಿದ ನೆನಪು manjunath s reddy

Submitted by savithasr on
ಧನ್ಯವಾದಗಳು ಮಂಜುನಾಥ್ :) >>ಸಂಪತ್ತಿನ ಪದ್ಯ ದೂರದರ್ಶನದಲ್ಲಿ ದ್ರುಶ್ಯಗೀತೆಯಾಗಿ ನೋಡಿದ ನೆನಪು ಯಾವಾಗ?ಚಿಕ್ಕಂದಿನಲ್ಲೇ ಅಥವಾ ಇತ್ತೀಚಿಗೇ? -ಸವಿತ

Submitted by cmariejoseph on
ಸವೀ, ನನ್ನ ಜೀವನಾದರ್ಶಗಳನ್ನು ರೂಪಿಸಿಕೊಳ್ಳುವಲ್ಲಿ ಬಹು ಪ್ರಭಾವ ಬೀರಿದ ಕವಿ ಅವರು. ಶಾಲಾದಿನಗಳಲ್ಲಿ ಅವರ ಮನೆಯ ಸೀಬೆ ಗಿಡದಲ್ಲಿ ಸೀಬೆಕಾಯಿ ಕದ್ದಿದ್ದು, ಮತ್ತೆ ಅವರಿಂದ ಬುದ್ದಿವಾದ ಹೇಳಿಸಿಕೊಂಡಿದ್ದು, ಮುಂದೆ ಅವರ ಪುಸ್ತಕಗಳನ್ನೆಲ್ಲ ಒಂದೇ ಸಮನೆ ಓದಿದ್ದು, ಸಾಧ್ಯವಿದ್ದಾಗಲೆಲ್ಲ ಅವರ ಉಪನ್ಯಾಸಗಳನ್ನು ಕೇಳಿದ್ದು, ದೆಹಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ನಂತರದ ಕೆಲ ಕಾಲದಲ್ಲೇ ಅವರು ಕಾಲವಾದದ್ದು, ಆಗ ತುಂಬಾ ಆಪ್ತರೊಬ್ಬರನ್ನು ಕಳೆದುಕೊಂಡಂಥ ಭಾವ ನನ್ನನ್ನಾವರಿಸಿದ್ದು, ಇವೆಲ್ಲ ಮರೆಯಲಾಗದ ನೆನಪುಗಳು. ಯಾವಾಗಲಾದರೂ ಈ ಬಗ್ಗೆ ಬರೀತೀನಮ್ಮ. ಧನ್ಯವಾದಗಳು. ಪ್ರೀತಿಯಿಂದ ಸಿ ಮರಿಜೋಸೆಫ್

Submitted by savithasr on
ವಾವ್ ಮರಿಜೋಸೆಫರೆ..ನೀವು ಅವರೊಟ್ಟಿಗೆ ಮಾತಾಡಿದ್ದೀರಾ ಕೂಡ..ಅಂತ ಅದೃಷ್ಟ ಎಲ್ಲರಿಗೂ ಸಿಗಲ್ಲ. ಅವರ ಪದ್ಯಗಳನ್ನ ಹಾಡಿಕೊಂಡು ಬೆಳೆದ ನಮಗೆ, ನಿಮ್ಮ ಅನುಭವಗಳ ಲೇಖನದ ಮೂಲಕ ರತ್ನರ ಪರಿಚಯವನ್ನ ಇನ್ನಷ್ಟು ಮಾಡಿಸಿ. ಧನ್ಯವಾದಗಳು -ಸವಿತ