ಭೂಮಿಗೆ ವಿಷ ಉಣಿಸುವುದು ಸಾಕು (ರೈತರೇ ಬದುಕಲು ಕಲಿಯಿರಿ-೧)
(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)
ಇದನ್ನೊಮ್ಮೆ ಓದಿ ಬಿಡಿ!
ಇಂಥದೊಂದು ಪುಸ್ತಕವನ್ನು ಬರೆಯುವ ಆಸೆ ಬಹಳ ವರ್ಷಗಳ ಹಿಂದಿನದು.
ಗದಗ ಜಿಲ್ಲೆ ನರೇಗಲ್‌ನಲ್ಲಿ ಪಿಯುಸಿ ಓದುತ್ತಿದ್ದ ದಿನಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿದ್ದ ನನ್ನೂರು ಅಳವಂಡಿಯ ಹೊಲಗಳಿಗೆ ಸುಗ್ಗಿ ಕಾಲದಲ್ಲಿ ಹೋಗುತ್ತಿದ್ದೆ. ಹೊಲ ಒಣಗಿ ನಿಂತಿರುತ್ತಿತ್ತು. ಅಳಿದುಳಿದ ಬೆಳೆಯನ್ನು ಉಳಿಸಿ ಊರಿಗೆ ತರುವ ಕನಸು ಅವ್ವನದು.
ಆ ಕನಸು ಪೂರ್ತಿಯಾಗಿ ನನಸಾಗಲಿಲ್ಲ.
ಆ ದಿನಗಳಲ್ಲಿ, ಒಣ ಹೊಲದಲ್ಲಿ ನಿಂತು, ಹಚ್ಚಹಸುರಿನಿಂದ ಕೂಡಿದ್ದ ಬದುಗಳನ್ನು ನೋಡುತ್ತಿದ್ದ ನನ್ನ ಮನಸ್ಸಿನಲ್ಲಿ ಪ್ರಶ್ನೆಯೊಂದು ಮೊಳೆಯುತ್ತಿತ್ತು. ’ಇಷ್ಟೊಂದು ಗೊಬ್ಬರ ಹಾಕಿ, ಎಣ್ಣೆ (ಕೀಟನಾಶಕ) ಹೊಡೆದರೂ ಹೊಲ ಒಣಗಿದೆ. ಅದೇನೂ ಇಲ್ಲದೇ ಬದು ಸಮೃದ್ಧವಾಗಿದೆ, ಏಕೆ?
ಈ ಪ್ರಶ್ನೆ ಇಟ್ಟುಕೊಂಡು ಹೊರಟ ನನಗೆ ಉತ್ತರ ಸಿಕ್ಕಿದ್ದು ಹದಿನೈದು ವರ್ಷಗಳ ನಂತರ. ಈ ನಡುವೆ ಅನ್ನದ ಚೀಲ ತುಂಬಿಸಲು ಹಲವಾರು ಊರುಗಳನ್ನು ಸುತ್ತಿದೆ. ಹತ್ತಾರು ಬಗೆಯ ಕೆಲಸಗಳನ್ನು ಮಾಡಿದೆ. ಕೊನೆಗೆ ಪತ್ರಿಕೋದ್ಯಮಕ್ಕೆ ಬಂದಾಗ ಸಾವಯವ ಕೃಷಿ ಸಿದ್ಧಾಂತ ಗಮನ ಸೆಳೆಯಿತು. ಅದರ ಪ್ರಯೋಗಗಳ ಬೆನ್ನು ಬಿದ್ದಾಗ ದೊರಕಿದ ಅತ್ಯುತ್ತಮ ಉತ್ತರ ಸುಭಾಷ ಪಾಳೇಕರ ಅವರ ನೈಸರ್ಗಿಕ ಕೃಷಿ ಪದ್ಧತಿ. ಪ್ರಕೃತಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿ ಅನ್ನ ಬೆಳೆಯುವ ವಿಧಾನವೇ ಕೃಷಿಯಾದರೆ ಅದನ್ನು ಪ್ರಕೃತಿಗೆ ಹತ್ತಿರವಾಗಿ ಉಳಿಸಿಕೊಂಡು ಮಾಡುವ ವಿಧಾನವೇ ನೈಸರ್ಗಿಕ ಕೃಷಿ. ಇದು ಸಾವಯವ ಕೃಷಿಯ ಸುಧಾರಿತ ರೂಪ. ಇದನ್ನು ಈ ರೀತಿ ನೋಡಿದರೇ ಚೆನ್ನ.
ಇದರ ಹೊರತಾಗಿ ಹೇಳುವುದು ಬೇಕಾದಷ್ಟಿದೆ.
ಇವತ್ತು ನಮ್ಮ ರೈತ ತನ್ನ ಅಳಿವಿಗೆ ಸರ್ಕಾರದ ಮರ್ಜಿಯನ್ನೇ ಅವಲಂಬಿಸಿದ್ದಾನೆ. ಬಿತ್ತಲು ಅವನಿಗೆ ಸರ್ಕಾರವೇ ಬೀಜ ಕೊಡಬೇಕು, ಗೊಬ್ಬರ, ಕೀಟನಾಶಕ ನೀಡಬೇಕು. ಅಣೆಕಟ್ಟುಗಳ ಮೂಲಕ ಸರಿಯಾದ ಸಮಯಕ್ಕೆ ನೀರು ಬಿಡಬೇಕು. ಒಂದು ವೇಳೆ ಸರಿಯಾದ ಸಮಯದಲ್ಲಿ ಮಳೆ ಬಾರದಿದ್ದರೆ ಸರ್ಕಾರ ಮೋಡ ಬಿತ್ತನೆ ಮಾಡಿಸಿ ಮಳೆ ತರಬೇಕು. ಕಾಲಕಾಲಕ್ಕೆ ಆಕಾಶವಾಣಿ ಹಾಗೂ ಪತ್ರಿಕೆಗಳ ಮೂಲಕ ಸಲಹೆಗಳನ್ನು ನೀಡುತ್ತಿರಬೇಕು. ಬೆಳೆ ಕಟಾವಿಗೆ ಬಂದಾಗ ಬೆಂಬಲ ಬೆಲೆ ಘೋಷಿಸಬೇಕು. ಈ ಸರಣಿಯಲ್ಲಿ ಯಾವುದೇ ಒಂದು ಅಂಶ ಏರುಪೇರಾದರೂ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆಗ ಅವನ ಕುಟುಂಬಕ್ಕೆ ಸರ್ಕಾರವೇ ಪರಿಹಾರ ಕೊಡಬೇಕು. ಇಲ್ಲದಿದ್ದರೆ ಅದು ರೈತ ವಿರೋಧಿ ಸರ್ಕಾರವಾಗುತ್ತದೆ.
ರೈತರ ಈ ಪರಿಯ ಅವಲಂಬನೆಗೆ ಒಂದೆಡೆ ಸರ್ಕಾರ ಕಾರಣವಾಗಿದ್ದರೆ ಇನ್ನೊಂದೆಡೆ ನಮ್ಮ ರೈತರೂ ಅದಕ್ಕೆ ಮುಖ್ಯ ಕಾರಣಕರ್ತರು.
ಒಂದಾನೊಂದು ಕಾಲದಲ್ಲಿ ಸ್ವಾವಲಂಬಿಯಾಗಿಯಾಗಿದ್ದ ರೈತ ಇಂತಹ ವ್ಯವಸ್ಥೆಯಿಂದಾಗಿ ಪೂರ್ತಿ ಅವಲಂಬಿತನಾದ. ಬೀಜ, ಗೊಬ್ಬರ, ಕೀಟನಾಶಕಗಳ ವ್ಯಾಪಾರಿಯಿಂದ ಹಿಡಿದು ಲೇವಾದೇವಿಗಾರರು, ಧಾನ್ಯ ವರ್ತಕರು, ಕಮಿಷನ್ ಏಜೆಂಟರು, ಬ್ಯಾಂಕ್‌ಗಳು, ವಿದ್ಯುಚ್ಛಕ್ತಿ ಕಂಪನಿಗಳು, ಕೊನೆಗೆ ಸರ್ಕಾರ- ಹೀಗೆ ಪ್ರತಿಯೊಬ್ಬರ ಮೇಲೆಯೂ ಅವನ ಅವಲಂಬನೆ ಬೆಳೆಯಿತು. ಪ್ರತಿಯೊಂದು ಅವಲಂಬನೆಗೂ ಆತ ಸಮರ್ಥನೆಗಳನ್ನು ಹುಡುಕಿಕೊಂಡ. ತನ್ನೆಲ್ಲ ಸಮಸ್ಯೆಗಳನ್ನು ಒಮ್ಮೆಲೇ ನಿವಾರಿಸಿಕೊಳ್ಳಬೇಕು ಎಂಬ ಆತುರ ಬೆಳೆಸಿಕೊಂಡ. ಏನಾದರೂ ಸರಿ, ಭೂಮಿಗೆ ವಿಷ ಹಾಕಿದರೂ ಸರಿ, ಹೆಚ್ಚು ಬೆಳೆದು ಎಲ್ಲರ ಸಾಲಗಳನ್ನು ತೀರಿಸಬೇಕೆಂದು ಹೊರಟ.
ಅದರ ಪರಿಣಾಮ ಏನೆಂಬುದನ್ನು ನಾವೆಲ್ಲರೂ ಈಗ ಮನಗಾಣುತ್ತಿದ್ದೇವೆ.
ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದಾಗಿ ನಮ್ಮ ಭೂಮಿ ವಿಷಪೂರಿತವಾಗಿದೆ. ನಮ್ಮ ಬೆಳೆಗಳಲ್ಲಿ ಸತ್ವಕ್ಕಿಂತ ಹೆಚ್ಚು ವಿಷ ತುಂಬಿಕೊಂಡಿದೆ. ಇಂತಹ ಆಹಾರ ಸೇವಿಸಿ ನಮ್ಮ ಮಕ್ಕಳು ಬುದ್ಧಿಮಾಂದ್ಯವಾಗುತ್ತಿವೆ. ಎಳೆಯ ವಯಸ್ಸಿನಲ್ಲಿಯೇ ಡಯಾಬಿಟೀಸ್, ಹೃದಯರೋಗಗಳಿಗೆ ತುತ್ತಾಗತೊಡಗಿವೆ. ಅನಾರೋಗ್ಯ ಎಲ್ಲ ವಯಸ್ಸಿನವರನ್ನೂ ಕಾಡತೊಡಗಿದೆ. ಕಂಡು ಕೇಳರಿಯದ ಭೀಕರ ರೋಗಗಳು ಎಲ್ಲೆಡೆ ಆವರಿಸುತ್ತಿವೆ. ಒಂದೆಡೆ ಕಲುಷಿತಗೊಂಡ ಭೂಮಿ, ನೀರು ಹಾಗೂ ವಾಯು, ಇನ್ನೊಂದೆಡೆ ಅದಕ್ಕಿಂತ ಹೆಚ್ಚು ಕಲುಷಿತಗೊಂಡ ನಮ್ಮ ರೈತ-
ಇವಕ್ಕೆಲ್ಲ ಒಂದೇ ಉತ್ತರ ನೈಸರ್ಗಿಕ ಕೃಷಿ.
ಭೂಮಿ ತಾಯಿಗೆ ಮತ್ತೆ ಶರಣಾಗುವ ತತ್ವ ಇಲ್ಲಿದೆ. ಹಳೆಯದನ್ನೇ ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿ ಬಳಸಿಕೊಳ್ಳುವ ಜ್ಞಾನವಿದೆ. ರಾಸಾಯನಿಕಗಳನ್ನು ಸುರಿಯದೇ, ಪರಿಸರದಲ್ಲಿ ದೊರೆಯುವ ವಸ್ತುಗಳನ್ನೇ ಗೊಬ್ಬರ ಮತ್ತು ಕೀಟ ನಿಯಂತ್ರಕಗಳನ್ನಾಗಿ ಬಳಸುವ ಜಾಣ್ಮೆಯಿದೆ. ಭೂಮಿಯ ಮೇಲಿರುವ ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ ಹಾಗೂ ಪ್ರತಿಯೊಂದು ಜೀವಿಯೂ ಇನ್ನೊಂದರ ಬೆಳವಣಿಗೆಗೆ ಪೂರಕ ಎಂಬ ಪ್ರಕೃತಿ ನಿಯಮವನ್ನು ಮನ್ನಿಸುವ ವಿನಯವಿದೆ. ಇಂತಹ ಉದಾತ್ತ ಕಲ್ಪನೆಯನ್ನು ಹೊಂದಿರುವ ನೈಸರ್ಗಿಕ ಕೃಷಿ ನಮ್ಮೆಲ್ಲ ನೋವುಗಳಿಗೆ ಉತ್ತರವಾಗಲಿದೆ.
ಅಂತಹ ಸಾಧ್ಯತೆಗಳನ್ನು ನಿಮ್ಮ ಮುಂದೆ ತೆರೆದಿಡುವ ಸಣ್ಣ ಪ್ರಯತ್ನ ಈ ಲೇಖನಮಾಲೆ. ಇದನ್ನೋದಿದ ನಿಮ್ಮೆದೆಯಲ್ಲಿ ನಿಸರ್ಗ ಕುರಿತ ಪ್ರೀತಿ, ಗೌರವ, ಸುತ್ತಲಿನ ಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕಾದ ಮಹತ್ವದ ಅರಿವಾದರೆ ಪ್ರಯತ್ನ ಸಾರ್ಥಕ. ಅಂಥ ಕಾಳಜಿ ನಿಮ್ಮಲ್ಲಿ ಹುಟ್ಟಲಿ, ಎಲ್ಲರಿಗೂ ನೆಮ್ಮದಿಯ ಬದುಕು ದಕ್ಕಲಿ ಎಂಬ ಆಶಯದೊಂದಿಗೆ ಈ ಲೇಖನಮಾಲೆಯನ್ನು ಶುರು ಮಾಡುತ್ತಿದ್ದೇನೆ.
ಇದನ್ನೋದಿದ ನಿಮ್ಮೆದೆಯೊಳಗೆ ಒಬ್ಬ ನಿಜವಾದ ರೈತ ಕಣ್ತೆರೆಯುವಂತಾಗಲಿ!
(ಮುಂದುವರಿಯುವುದು)
- ಚಾಮರಾಜ ಸವಡಿ
- Login or register to post comments
- 472 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಸಾಲಿಡ್ ಬರವಣಿಗೆ!!
ಧನ್ಯವಾದಗಳೊ೦ದಿಗೆ,
ಮನಹ್ಪಠಲ
ಥ್ಯಾಂಕ್ಸ್ ಮನಹ್ಪಠಲ ಅವರೇ.
- ಚಾಮರಾಜ ಸವಡಿ
http://chamarajsavad...
ಗೆಳೆಯ ಚಾಮರಾಜ್ ರವರೆ
<ರೈತರ ಈ ಪರಿಯ ಅವಲಂಬನೆಗೆ ಒಂದೆಡೆ ಸರ್ಕಾರ ಕಾರಣವಾಗಿದ್ದರೆ ಇನ್ನೊಂದೆಡೆ ನಮ್ಮ ರೈತರೂ ಅದಕ್ಕೆ ಮುಖ್ಯ ಕಾರಣಕರ್ತರು. >
ಅಂಥ ಹೇಳಿದ್ದೀರಾ ನಿಮ್ಮ ಮಾತು ನಿಜವಾಗಿದೆ ,ನೀವೂ ಹೇಳಿರುವ ತರ ತಪ್ಪು ಇಬ್ಬರಲ್ಲೂ ಇದೆ ,ಅದಕ್ಕೆ ಸರ್ಕಾರ ಪ್ರತಿ ಹಳ್ಳಿ ಹಳ್ಳಿಗೂ ಇದರ ಬಗ್ಗೆ ಜಾಗ್ರುತಿ ಮೂಡಿಸಬೇಕು ಮತ್ತು ಇದನ್ನ ತಿಳಿದುಕೋಳ್ಳುವ ತಾಳ್ಮೆ ರೈತರಲ್ಲೂ ಬರಬೇಕು ಅಲ್ಲವಾ :)
ಇದಕ್ಕೆ ನೀವೇನು ಹೇಳುತೀರಾ
ಕೊನೆಯಲ್ಲಿ ತುಂಬ ದನ್ಯವಾದಗಳು ಇಂತಹ ಸಂಗ್ರಹ ಬರೆದ್ದಿದ್ದಕ್ಕೆ......
ನಿಮ್ಮವ
ಮಧುಸೂದನ್ ಗೌಡ
ಪ್ರತಿಯೊಂದಕ್ಕೂ ಸರ್ಕಾರವನ್ನೇ ನೆಚ್ಚಿಕೂತಿದ್ದಕ್ಕೇ ಕೃಷಿಯೊಂದೇ ಅಲ್ಲ, ಎಲ್ಲ ಸೃಜನಶೀಲ ಕ್ಷೇತ್ರಗಳು ಪರಾವಲಂಬಿಯಾಗಿ ಹಾಳಾಗಿವೆ ಮಧುಸೂದನ್. ಬದಲಾವಣೆ ತಕ್ಷಣಕ್ಕೆ ಆಗುವುದಿಲ್ಲ. ರಾಸಾಯನಿಕಗಳ ಬಳಕೆ ಕೂಡ ಒಮ್ಮೆಲೇ ಪ್ರಾರಂಭವಾಗಿದ್ದಲ್ಲ. ಆಕಾಶವಾಣಿ ಹಾಗೂ ಕೃಷಿ ಅಧಿಕಾರಿಗಳ ಮೂಲಕ ಸರ್ಕಾರ ದಶಕಗಳ ಕಾಲ ವಿಷ ಪ್ರಸಾರ ಮಾಡಿದೆ. ಪಾರಂಪರಿಕವಾದ ಪ್ರತಿಯೊಂದೂ ಉಪಯೋಗವಿಲ್ಲದ್ದು ಎಂಬುದನ್ನು ಮನದಟ್ಟು ಮಾಡಿಸಿದೆ. ಅದನ್ನೇ ಕೇಳುತ್ತ, ಅವರು ಹೇಳಿದಂತೆ ಕೃಷಿ ಪದ್ಧತಿ ರೂಪಿಸಿಕೊಂಡ ಕನಿಷ್ಟ ಎರಡು ತಲೆಮಾರುಗಳಿವೆ. ಹೀಗಾಗಿ, ಪರಿಸ್ಥಿತಿಯನ್ನು ನಿಭಾಯಿಸುವುದೇ ಸದ್ಯದ ದೊಡ್ಡ ಸವಾಲು. ಸಮಗ್ರ ಬದಲಾವಣೆಗೆ ದಶಕಗಳೇ ಹಿಡಿಯುತ್ತವೆ.
ಆದರೆ, ಅಂಥದೊಂದು ಪ್ರಯತ್ನ ಯಾವತ್ತಾದರೂ ಶುರುವಾಗಬೇಕಲ್ಲವೆ? ಈಗಾಗಲೇ ಸರ್ಕಾರೇತರ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಅಂಥ ಪ್ರಯತ್ನವನ್ನು ದೊಡ್ಡಮಟ್ಟದಲ್ಲಿ ಮಾಡುತ್ತಿದ್ದಾರೆ. ಆದರೆ, ಹಳ್ಳಿಹಳ್ಳಿಗಳಲ್ಲಿ ಹರಡಿರುವ ವೃತ್ತಿ ಕೃಷಿ. ಅಲ್ಲೆಲ್ಲ ತಲುಪಬೇಕೆಂದರೆ ಅದಕ್ಕೆ ಸಾಕಷ್ಟು ಇಚ್ಛಾಶಕ್ತಿ ಹಾಗೂ ಸಮಯ ಬೇಕಾಗುತ್ತದೆ. ತನ್ನದೇ ನೀತಿಯಿಂದ ಸರ್ಕಾರ ತಕ್ಷಣಕ್ಕೆ ವಿಮುಖವಾಗುವುದು ಸಾಧ್ಯವಿಲ್ಲ. ಹೀಗಾಗಿ, ವೈಯಕ್ತಿಕ ಮಟ್ಟದಲ್ಲಿ ಪ್ರಯತ್ನಿಸುವುದೊಂದೇ ಸದ್ಯದ ಉತ್ತಮ ಮಾರ್ಗ. ಅವಕಾಶ ಸಿಕ್ಕಾಗೆಲ್ಲ ಅದನ್ನು ವಿಸ್ತರಿಸುತ್ತ ಹೋಗುವುದೇ ಹೆಚ್ಚು ಪರಿಣಾಮಕಾರಿ.
- ಚಾಮರಾಜ ಸವಡಿ
http://chamarajsavad...
http://www.hariharap...
ಚಾಮರಾಜ್,
ಚಿತ್ರವನ್ನು ನೋಡಿ ಕಣ್ಣಾಲಿಗಳಲ್ಲಿ ನೀರು ಬಂತು. ಎಂತಹಾ ಅನ್ಯಾಯ ವಾಗ್ತಾ ಇದೆ. ಗೊತ್ತಿದ್ದೂ ಗೊತ್ತಿದ್ದೂ ಎಲ್ಲರೂ ಸೇರಿ ತಪ್ಪು ಮಾಡ್ತಾ ಇದ್ದೀವಿ.ವಿಷ ಉಣ್ಣುತ್ತಿದ್ದೇವೆ. ಪ್ರತಿದಿನ ಊಟ ಮಾಡುವಾಗ ಬೇಸರವಾಗುತ್ತದೆ. ಸೊಪ್ಪಿನಹುಳಿ[ಸಾಂಬಾರ್] ಮಾಡಿದರೆ ಸಾಮಾನ್ಯವಾಗಿ ಉಪ್ಪುಪ್ಪು. ಇದು ಅಡಿಗೆಗೆ ಹಾಕಿದ ಉಪ್ಪಲ್ಲ. ಸೊಪ್ಪು ಬೆಳೆಯುವಾಗಲೇ ಭೂಮಿಗೆ ಹಾಕಿದ ವಿಷ. ಚಿಕ್ಕ ವಯಸ್ಸಿನಲ್ಲಿ ನಾನು ಚಪ್ಪರಿಸಿದ ಹಾಲಿನ ರುಚಿ ಎಲ್ಲಿ ಹೋಯ್ತು? ಹಾಲಿನ ಬಣ್ಣವು ಸಹಜವಾಗಿ ಹಳದಿ ಇರುತ್ತಿತ್ತು. ಸಕ್ಕರೆ ಬೆರಸದೆ ಹಾಲು ಸಿಹಿಯಾಗಿಯೇ ಇರುತ್ತಿತ್ತು. ಈಗ ನಾವು ಕುಡಿಯುತ್ತಿರುವುದು ಹಾಲಲ್ಲ, ಹಾಲು ನೀಡುತ್ತಿರುವ ಪ್ರಾಣಿ ಹಸುವೂ ಅಲ್ಲ. ಅದೊಂದು ಪ್ರಾಣಿ ಅಷ್ಟೆ. ಯಾವ ತರಕಾರಿಯಲ್ಲೂ ರುಚಿ ಇಲ್ಲ. ಅಷ್ಟೇಕೆ, ಅಕ್ಕಿ,ಬೇಳೆ, ರಾಗಿ,ಜೋಳದಲ್ಲೂ ರುಚಿ ಇಲ್ಲ. ಕಾಟಾಚಾರಕ್ಕೆ ಹೊಟ್ಟೆ ತುಂಬಲು ತುರುಕಿಕೊಳ್ಳಬೇಕಷ್ಟೆ. ಇಂದಿನ ಜನರಿಗೆ ನಿಜವಾಗಿ ಆಹಾರದ ಒರಿಜಿನಲ್ ರುಚಿಯೇ ಗೊತ್ತಿಲ್ಲವೆಂದು ನಾನು ಭಾವಿಸುವೆ. ಕಾರಣ ಪಾಕೆಟ್ ನಲ್ಲಿ ಹಾಲು- ಮಾರ್ಕೆಟ್ ನಲ್ಲಿ ತರಕಾರಿ ತಂದು ಗೊತ್ತು ಹೊರತು ನಾಡ ಹಸುವನ್ನೂ ನೋಡಿಲ್ಲ, ತರಕಾರಿಗಿಡಗಳನ್ನೂ ನೋಡಿಲ್ಲ. ಒಂದಿಷ್ಟು ಶೋ ಗಿಡಗಳು ಹಾಗೂ ಗಾಜಿನಪೆಟ್ಟಿಗೆಯೊಳಗೆ ಮೀನು, ಬಿಳಿ ನಾಯಿ, ಇಷ್ಟು ಮಾತ್ರ ಗೊತ್ತು.
ನನಗೆ ಚೆನ್ನಾಗಿ ನೆನಪಿದೆ, ನಮ್ಮ ಮನೆಯಲ್ಲಿ ಹಸುಒಂದು ಕರು ಹಾಕಿದರೆ ಒಂದೆರಡು ತಿಂಗಳ ಕರು ಮನೆಯ ಮುಂದೆ ರಸ್ತೆಯಲ್ಲಿ ಒಂದು ತುದಿಯಿಂದ ಮತ್ತೊಂದು ತುದಿಗೆ ಚಿಂಗನೆ ನೆಗೆನೆಗೆದು ಜಿಂಕೆಯಂತೆ ಓಡುತ್ತಿದ್ದ ದೃಶ್ಯ ಈಗ ಕನಸು. ಮನೆಯಲ್ಲಿ ನಾಲ್ಕಾರು ಹಸುಗಳು, ನಾಲ್ಕಾರು ಕರುಗಳು, ಒಂದು ಜೊತೆ ಎತ್ತು, ಇದ್ದೇ ಇರುತ್ತಿತ್ತು. ಹೋರಿಗಳನ್ನು ನೋಡುವುದೇ ಒಂದು ವೈಭೋಗ.ಎಲ್ಲಾ ಕನಸು.
ಈ ನಮ್ಮ ಶ್ರೀಮಂತ ಜೀವನವಾದರೂ ಹೇಗಿದೆ? ಬೆಳಗ್ಗೆ ಎದ್ದೊಡನೆ ಒಂದು ಮಾತ್ರೆ, ರಾತ್ರಿ ಮಲಗಲು ಒಂದು ಮಾತ್ರೆ. ಊಟ ತಪ್ಪಿದರೂ ಮಾತ್ರೆಯ ಕಾಟ ತಪ್ಪುವಂತಿಲ್ಲ. ತಪ್ಪಿದರೆ ಆಟಕ್ಕೆ ತೆರೆ. ಇಂತಾ ಜೀವನ ಮಾಡಿಕೊಂಡು ನಮ್ಮಂತ ಸುಖಿಗಳಿಲ್ಲವೆಂದು ಬ್ರಮಿಸುತ್ತೀವಲ್ಲಾ!! ಛೇ| ಛೇ||
ವಾಜಪೇಯಿಯವರು ಒಮ್ಮೆ ಹೇಳಿದ್ದ ಮಾತು ನೆನಪಾಗುತ್ತಿದೆ- ಈ ಟ್ರಾಕ್ಟರ್ ಎತ್ತಿನಂತೆ ಉಳಬಹುದು, ಹುಲ್ಲು ತಿಂದು ಸಗಣಿ ಕೊಡಲು ಸಾಧ್ಯವೇ?
ನಿಜವಾಗಲೂ ನಾನು ಅನೇಕ ಭಾರಿ ಯೋಚಿಸಿದ್ದುಂಟು, ಒಂದು ಅರ್ಧ ಎಕರೆ ಜಮೀನಿನಲ್ಲಿ ಪುಟ್ಟ ಮನೆ ಮಾಡಿ,ಒಂದು ನಾಡಹಸು ಸಾಕಿ, ನಮ್ಮ ಮನೆಗೆ ಬೇಕಾಗುವ ಹಣ್ಣು ತರಕಾರಿಯನ್ನಾದರೂ ಭೂಮಿಗೆ ವಿಷ ಹಾಕದೇ ನಾನೇ ಬೆಳೆದುಕೊಳ್ಳಬೇಕೆಂದು. ಅದು ಯಾವಾಗ ಕೂಡಿಬರುತ್ತದೋ ನಾ ಕಾಣೆ. ನಿಜ ಹೇಳಲೇ ನನ್ನ ಜೀವನದ ಕಡೆಯ ಆಸೆ ಅದು.
ಶ್ರೀಧರ್ ಸಾರ್,
ಇಂದು ಹಸು ಎನ್ನುವುದು ಕಸದಿಂದ ರಸ ತೆಗೆಯುವ ಯಂತ್ರ ಎಂದೇ ನನ್ನ ಭಾವನೆ. ಸಾಕ್ಷಿ ಬೇಕಂದ್ರೆ ಬೆಂಗಳೂರಿನ ಯಾವುದೇ ಕಸದ ತೊಟ್ಟಿಯ ಬಳಿ ನೋಡಿ ಕನಿಷ್ಠ ಒಂದಾದರೂ ಹಸು ನಿಂತಿರುತ್ತೆ, ಸಂಜೆ ಅದರದ್ದೆ ಹಾಲನ್ನು ಎಲ್ಲರೂ ಉಪಯೋಗಿಸುತ್ತಾರೆ.
ಹಾಲು ಕರೆದು ತುಂಬಿದ ಪುಟ್ಟ ತಂಬಿಗೆಯನ್ನು ಅಮ್ಮನಿಗೆ ಗೊತ್ತಾಗದ ಹಾಗೆ ಕುಡಿದ ಬೆಚ್ಚಗಿನ ನೊರೆಹಾಲಿನ ನೆನಪು ಇಂದೂ ಕಾಡುತ್ತಿದೆ. ಸೌಟಿನಿಂದ ಕೆಳಗೆ ಬೀಳಲು ಒಲ್ಲೆ ಎನ್ನುತ್ತಿದ ಮೊಸರು ಎಲ್ಲಿ ಮಾಯವಾಯಿತೋ? :-(
ನನ್ನದೂ ಇದೇ ಆಸೆ ಆದರೆ ಬೆಂಗಳೂರೆಂಬ ಮಾಂತ್ರಿಕನಿಂದ ಬಿಡುಗಡೆ ಸಿಗುತ್ತದೆಯೆ? ಉತ್ತರಕ್ಕೆ ಆಕಾಶ ನೋಡಬೇಕಷ್ಟೆ.
ನಿಮ್ಮ ಸುದೀರ್ಘ ಪ್ರತಿಕ್ರಿಯೆಗೆ ಥ್ಯಾಂಕ್ಸ್ ಶ್ರೀಧರ ಸರ್. ದಿಢೀರ್ ಫಲಿತಾಂಶದ ಕೆಟ್ಟ ಪರಿಣಾಮಗಳನ್ನು ನಾವೆಲ್ಲ ಅನುಭವಿಸುತ್ತಿದ್ದೇವೆ. ಕೇವಲ ರೈತರನ್ನು ದೂರುವುದು ನಮ್ಮ ಜವಾಬ್ದಾರಿಯಿಂದ ಕಳಚಿಕೊಂಡಂತೆ. ಹಸಿರುಕ್ರಾಂತಿಯ ಹೆಸರಿನಲ್ಲಿ ಶುರುವಾದ ಅನಾಚಾರದ ದೀರ್ಘಕಾಲದ ಪರಿಣಾಮವನ್ನು ಇಂದು ಕಾಣುತ್ತಿದ್ದೇವೆ. ಆ ಕುರಿತು ಮುಂದಿನ ಅಧ್ಯಾಯಗಳಲ್ಲಿ ಬರೆಯುತ್ತೇನೆ.
ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದವರು, ಗ್ರಾಮೀಣ ಪ್ರದೇಶದ ಜೀವನದಲ್ಲಿ ಆಸಕ್ತರಾದವರು ತಂತಮ್ಮ ವ್ಯಾಪ್ತಿಯಲ್ಲಿ ಒಂದಿಷ್ಟು ಕೈ ಜೋಡಿಸಿದರೂ ಸಾಕು, ಕೃಷಿ ಮತ್ತೆ ಸಹಜವಾಗುತ್ತದೆ. ಈಗಿನಕ್ಕಿಂತ ಹೆಚ್ಚು ಲಾಭದಾಯಕವಾಗುತ್ತದೆ. ರಾಸಾಯನಿಕಗಳ ಪ್ರಭಾವ ಕಡಿಮೆಯಾಗಿ, ಕಳೆದುಕೊಂಡಿರುವ ರುಚಿ, ಸತ್ವ ಮತ್ತು ನೆಮ್ಮದಿ ಮತ್ತೆ ದಕ್ಕುತ್ತವೆ. ಕೃಷಿ ಕ್ಷೇತ್ರದಲ್ಲಿ ಇಂಥದೊಂದು ಬದಲಾವಣೆ ಹರಡಿದರೆ, ಅದು ಜೀವನದ ಇತರ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರುತ್ತದೆ ಎಂಬುದು ನನ್ನ ಅನಿಸಿಕೆ.
ಈಗಲೂ ನನ್ನ ಮನಸ್ಸು ಅತ್ತಲೇ ಇದೆ. ಊರಿಗೆ ಹೋಗಿ ಕೃಷಿ ಮಾಡುತ್ತ, ಬರವಣಿಗೆ ಹಾಗೂ ಇತರ ಆಸಕ್ತಿಗಳನ್ನು ಮುಂದುವರೆಸುವ ಮನಸ್ಸು ಇದೆ. ಬಹುಶಃ ತುಂಬ ಜನರಿಗೆ ಇಂಥದೇ ಆಸೆ ಇದೆ ಎಂದು ಅಂದುಕೊಂಡಿದ್ದೇನೆ.
- ಚಾಮರಾಜ ಸವಡಿ
http://chamarajsavad...
http://www.hariharap...
ಚಾಮರಾಜ್,
ನಿಮ್ಮಂತ ಕಳಕಳಿ ಇರುವ ನೂರು ಜನ ತಮ್ಮ ವಿಚಾರವನ್ನು ಮಂಡಿಸುತ್ತಾ ಇದ್ದರೆ ಖಂಡಿತಾ ಇಂದಲ್ಲಾ ನಾಳೆ ನಮ್ಮ ಪಾರಂಪರಿಕ ಕೃಷಿ,ಪಾರಂಪರಿಕ ಬದುಕು ಎಲ್ಲಾ ಮತ್ತೆ ಶುರುವಾಗುತ್ತೆ. ಹಳ್ಳಿಗಳಲ್ಲಿ ಬೇಸಿಗೆಯಲ್ಲಿ ನಾಟಕ ಮಾಡೋ ಅಬ್ಯಾಸವಿತ್ತು. ಅದನ್ನು ಕಲಿಯಬೇಕಾದರೆ ನಿತ್ಯವೂ ರಾತ್ರಿ ಒಂದುಕಡೆ ಸೇರಿ ರಂಗಗೀತೆಗಳನ್ನು ಅಭ್ಯಾಸ ಮಾಡುತ್ತಿದ್ದ ಕಾಲ ನೆನಪಾಗುತ್ತಿದೆ. ಕೋಲಾಟ ಮಾಯವಾಗೇ ಬಿಟ್ಟಿದೆ. ಇವೆಲ್ಲದರ ಹಿಂದೆ ಒಂದು ಪರಂಪರೆ ಮರೆಯಾಗುತ್ತಿದೆ. ಇದನ್ನೆಲ್ಲಾ ಧಾರ್ಮಿಕ ಆಚರಣೆಗೆ ಗಂಟು ಹಾಕುವ ಅಗತ್ಯವಿಲ್ಲ. ಅದೊಂದು ನಮ್ಮ ಗ್ರಾಮೀಣ ಸೊಗಡು. ರಾಮಚಂದ್ರಾಪುರದ ಶ್ರೀ ರಾಘವೇಶ ಭಾರತಿಗಳು ಭಾರತ ಮತ್ತು ಇಂಡಿಯಾ ಎಂಬ ಎರಡು ಜೀವನ ಶೈಲಿ ಗಳನ್ನು ಹೇಳುತ್ತಿರುತ್ತಾರೆ. ಇದಕ್ಕೆಲ್ಲಾ ಪರಸ್ಪರ ನಂಟಿದೆ. ಈ ಬಗ್ಗೆ ನೀವು ಬರೆಯುವುದಾದರೆ ಬರೆಯಿರಿ ಅಥವಾ ಸಮಯವಾದರೆ ನಾನು ಬರೆಯುವೆ.
ಇಂದಿನ ಸಮಸ್ಯೆಗಳಿಗೆ ರೈತನು ಕಾರಣನೆಂದು ರೈತನ ಮಗನಾಗಿ ನಾನು ಹೇಳುವುದಿಲ್ಲ. ಆದರೆ ಎಲ್ಲರಂತೆ ಅವನ ಪಾಲೂಇದೆ.ನಮ್ಮ ವ್ವವಸ್ಥೆಯದೇ ಪ್ರಧಾನ ಪಾತ್ರ. ಜನರಿಗೆ ಅರ್ಥವಾಗಬೇಕು. ಆ ಕಾಲ ಬರಬೇಕು, ಅದಕ್ಕಾಗಿ ಜಾಗೃತಿ ಮಾಡುವ ಕೆಲಸವನ್ನು ನಾವು-ನೀವು ಮಾಡಬೇಕು. ಏನಂತೀರಾ?
ಖಂಡಿತ ಸರ್. ವ್ಯವಸ್ಥೆ ಹದಗೆಡುವುದಕ್ಕೆ ಕೇವಲ ರೈತ ಮಾತ್ರ ಕಾರಣನಲ್ಲ. ಪ್ರತಿಕ್ರಿಯೆಯೊಂದರಲ್ಲಿ ಈ ವಿಷಯವನ್ನು ವಿವರಿಸಿದ್ದೇನೆ. ನೀವೂ ಗಮನಿಸಿರಬಹುದು. ನೀವಂದಂತೆ, ಕೃಷಿ ಸಹಜತೆಯತ್ತ ಹೊರಳಿದರೆ, ಗ್ರಾಮೀಣ ಭಾಗದ ಇತರ ಚಟುವಟಿಕೆಗಳಲ್ಲೂ ಸಹಜತೆ ವ್ಯಕ್ತವಾಗುವುದರಲ್ಲಿ ಅನುಮಾನವಿಲ್ಲ. ಏಕೆಂದರೆ, ಅವು ಒಂದಕ್ಕೊಂದು ಪೂರಕವಾದ ಚಟುವಟಿಕೆಗಳು. ಇದು ಸಾಧ್ಯವಾಗಬೇಕೆಂದರೆ, ರೈತರ ಜೊತೆ ಇತರ ಕ್ಷೇತ್ರದ ಪರಿಣಿತರೂ ಕೈಜೋಡಿಸಬೇಕು.
ಗ್ರಾಮೀಣ ಸೊಗಡಿನ ಬಗ್ಗೆ ಪತ್ರಿಕೆಗಳಲ್ಲಿ ಬಹಳಷ್ಟು ಸಾರಿ ಬರೆದಿದ್ದೇನೆ. ನೀವು ಇಷ್ಟಪಟ್ಟರೆ ಸಂಪದದಲ್ಲೂ ಅದರ ಬಗ್ಗೆ ಬರೆಯುತ್ತೇನೆ. ಜೊತೆಗೆ ನೀವೂ ಬರೆಯಿರಿ. ನಿಮ್ಮ ಒಳದೃಷ್ಟಿ ಖಂಡಿತ ನನಗಿಲ್ಲ.
- ಚಾಮರಾಜ ಸವಡಿ
http://chamarajsavad...
http://www.hariharap...
ಚಾಮರಾಜ್,
ನನಗನಿಸುವಂತೆ ನಮ್ಮಂತೆ ಮನದೊಳಗೆ ಪರಿತಪಿಸುವ ಜನ ಬಹಳಷ್ಟಿದ್ದಾರೆ. ಅವರು ವ್ಯಕ್ತ ಪಡಿಸಬೇಕಷ್ಟೆ.ನೀವು ಮಾಧ್ಯಮ ಮಿತ್ರರು. ಖಂಡಿತಾ ನೀವು ಈ ವಿಷಯಗಳಲ್ಲಿ ಜಾಗೃತಿ ಮಾಡುವ ಸ್ಪೀಡ್ ಜಾಸ್ತಿ ಮಾಡ್ತೀರಿ, ಎಂಬ ವಿಶ್ವಾಸದಲ್ಲಿ ನಾನಿರುವೆ.
ನಿಮ್ಮ ವಿಶ್ವಾಸಕ್ಕೆ ತುಂಬಾ ಧನ್ಯವಾದಗಳು ಶ್ರೀಧರ ಸರ್. ನನ್ನ ಗಮನಕ್ಕೆ ಬಂದ ಪ್ರಯೋಗಗಳ ಬಗ್ಗೆ ಲೇಖನದಲ್ಲಿ ವಿವರಿಸುತ್ತೇನೆ. ಆಸಕ್ತರು ಅವುಗಳನ್ನು ಪ್ರಯೋಗ ಮಾಡಿಯೇ ಪರಿಣಾಮ ಅರಿಯಬೇಕು.
- ಚಾಮರಾಜ ಸವಡಿ
http://chamarajsavad...
ಉದಯ ಇಟಗಿ
ನಿಮ್ಮ ಲೇಖನಕ್ಕೆ ಧನ್ಯವಾದಗಳು. ತುಂಬಾ ಉಪಯುಕ್ತ ಮಾಹಿತಿ. ನಿಮ್ಮ ಲೇಖನ ಜಪಾನಿನ ರೈತ ವಿಜ್ಞಾನಿ ಫುಕುಕಾರವರ (ಅವರು ಇತ್ತೀಚಿಗಷ್ಟೆ ತೀರಿಕೊಂಡರು) "One Straw Revolution" ಲೇಖನವನ್ನು ಜ್ಞಾಪಿಸುತ್ತದೆ.
ಸವಡಿಯವರೆ......
ಲೇಖನ ತುಂಬ ಚೆನ್ನಾಗಿದೆ. ಇನ್ನೊಂದು ವಿಷಯ, ನಾನು ಕೂಡ ಅಳವಂಡಿ ಯವನೆ....
ಆದರೆ ನಮ್ಮ ಕುಟುಂಬದವರೆಲ್ಲಾ ಧಾರವಾಡ ದಲ್ಲಿರುವದು.......
ಆಳವಂಡಿ ಅಂತ ಚಿಕ್ಕದಾದ ಊರಲ್ಲಿ ಓದಿ ನೀವು ಮಾಡಿರುವ ಸಾಧನೆ ಮೆಚ್ಚುವಂತದ್ದು........
ಪ್ರೀತಿಯಿಂದ
ಗಿರಿ
ಆಧುನಿಕ ಜೀವನ ಶೈಲಿ ಬಯಸುವವರು,ಸಾವಯವ ಕೃಷಿ ಅವಲಂಬಿಸಿ ಬದುಕುವುದು ಕಷ್ಟ ಎನ್ನುವುದೇ ಸಮಸ್ಯೆ.
*ಅಶೋಕ್
ಎಲ್ಲರೂ ಕೃಷಿಕರಾಗಬೇಕಿಲ್ಲ, ಅಶೋಕ್. ಈಗ ಕೃಷಿಕರಾಗಿರುವವರು ಅದನ್ನು ಅನುಸರಿಸಿದರೂ ಎಷ್ಟೊಂದು ಬದಲಾವಣೆಯಾಗುತ್ತದೆ. ನಾವೆಲ್ಲ ಸೇವಿಸುವ ಆಹಾರ ಬರುವುದೇ ಅಲ್ಲಿಂದ. ಹೀಗಾಗಿ, ಆ ಕ್ಷೇತ್ರ ಪರಿಸರಸ್ನೇಹಿಯಾಗಬೇಕಿದೆ.
- ಚಾಮರಾಜ ಸವಡಿ
http://chamarajsavad...
ಥ್ಯಾಂಕ್ಸ್ ಉದಯ್. ಸಾವಯವ ಕೃಷಿ ಕರ್ನಾಟಕ್ಕೆ ಹೆಚ್ಚು ಗೊತ್ತಾಗಿದ್ದೇ ತೇಜಸ್ವಿಯವರ ಅನುವಾದದಿಂದ. ’ಒಂದು ಹುಲ್ಲಿನ ಕ್ರಾಂತಿ’ ಪುಸ್ತಕ ಓದಿದಾಗ ಹಲವಾರು ವರ್ಷಗಳಿಂದ ನನ್ನನ್ನು ಕಾಡುತ್ತಿದ್ದ ಪ್ರಶ್ನೆಗೆ ಒಮ್ಮೆಲೇ ಉತ್ತರ ದೊರಕಿದಂತಾಯಿತು. ಆ ಭರವಸೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.
- ಚಾಮರಾಜ ಸವಡಿ
http://chamarajsavad...
http://www.hariharap...
ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇದೆ ಅಶೋಕ್. ಸಧ್ಯ ರಾಸಾಯನಿಕ ಗೊಬ್ಬರಗಳಿಂದ ಆಗುತ್ತಿರುವ ಅನಾಹುತವು ಭವಿಷ್ಯದಲ್ಲಿ ಉಲ್ಬಣವಾಗುವುದರಲ್ಲಿ ಸಂಶಯವಿಲ್ಲ. ಯಾವುದೂ ಅತಿರೇಕಕ್ಕೆ ಹೋದಾಗ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತವೆ. ಅಷ್ಟು ಹೊತ್ತಿಗೆ ಬಹಳಷ್ಟು ನಷ್ಟ ಆಗಿಬಿಟ್ಟಿರುತ್ತೆ.ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಬೆಳೆಯುವುದು ಸಾವಯವ ಕೃಷಿಯಿಂದ ಸಾಧ್ಯವಿಲ್ಲವೆಂದು ತಾನೇ ಅನುಮಾನ. ಈ ಬಗ್ಗೆ ಸಂಶೋಧನೆ ಆಗಲಿ. ಪರಿಹಾರ ಸಿಕ್ಕೇ ಸಿಗುತ್ತೆ. ನಮಗೆ ಆಹಾರ ಸಿಕ್ತಾ ಇರಬಹುದು, ಆದರೆ ನಿತ್ಯವೂ ಮಾತ್ರೆ ತಿಂದು ಬದುಕುವ ಈಪರಿ ಯಾರಿಗೆ ಪ್ರೀತಿ?
-----------------------------------------------------------------------------------------
ಇದು ಬೇರೆ ವಿಷಯ. ನನ್ನ ಒಂದು ಕವನದ ಲಿಂಕ್ ಕೊಡುವೆ. ಅದನ್ನು ದಯಮಾಡಿ ಓದಿ ಅದಕ್ಕೆ ಹೊಂದುವ ಒಂದು ವ್ಯಂಗ್ಯ ಚಿತ್ರ ಕಳಿಸಿಕೊಡಲು ಸಾಧ್ಯವೇ?ಲಿಂಕ್ ಇಲ್ಲಿದೆ.
http://sampada.net/a...
hariharapura_sridhar@rediffmail.com
>>ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಬೆಳೆಯುವುದು ಸಾವಯವ ಕೃಷಿಯಿಂದ ಸಾಧ್ಯವಿಲ್ಲವೆಂದು ತಾನೇ ಅನುಮಾನ.
ಹೌದು ಅದು ಒಂದು ಬಗೆಯ ಅನುಮಾನವದರೆ, ಇನ್ನೊಂದು ನಮ್ಮ ಐಷಾರಾಮಿ ಜೀವನ ಸಾಗಿಸುವ ಬಯಕೆಯಿಂದ ಬೇಕಾಗುವ ಹಣಕ್ಕಾಗಿ ಹೆಚ್ಚು ಹೆಚ್ಚು ಬೆಳೆಯುವ ತವಕ!
*ಅಶೋಕ್
http://www.hariharap...
ಐಷಾರಾಮೀ ಜೀವನಕ್ಕಾಗಿ ಮಾಡುವ ದಂಧೆ ಬಗ್ಗೆ ಸ್ವಲ್ಪ ಯೋಚಿಸಿದರೆ ಭಯವಾಗುತ್ತೆ! ಹಣಕ್ಕಾಗಿ ಜನರ ಜೀವದೊಡನೆ ಚಲ್ಲಾಟ ಮಾಡುವವರಿಲ್ಲವೇ!! ಹುಡುಕುತ್ತಾ ಹೋದರೆ ಸಮಸ್ಯೆಗಳು ಸಾವಿರ!!
ಚಾಮರಾಜ್,
ನಿಮ್ಮ ಕಾಳಜಿಗೆ ಹ್ಯಾಟ್ಸ್ ಆಫ್.
ನಿಮ್ಮ ಈ ಲೇಖನಮಾಲೆಯನ್ನು ತಪ್ಪದೇ ಓದುವೆ.
-ಅನಿಲ್.
ಥ್ಯಾಂಕ್ಸ್ ಅನಿಲ್. ಕೃಷಿಯ ಬಗ್ಗೆ ಇನ್ನೂ ಕಾಳಜಿ ಉಳಿಸಿಕೊಂಡಿದ್ದಕ್ಕೆ.
- ಚಾಮರಾಜ ಸವಡಿ
http://chamarajsavad...
ಚಾಮರಾಜರೇ,
>>ಆ ದಿನಗಳಲ್ಲಿ, ಒಣ ಹೊಲದಲ್ಲಿ ನಿಂತು, ಹಚ್ಚಹಸುರಿನಿಂದ ಕೂಡಿದ್ದ ಬದುಗಳನ್ನು ನೋಡುತ್ತಿದ್ದ ನನ್ನ ಮನಸ್ಸಿನಲ್ಲಿ ಪ್ರಶ್ನೆಯೊಂದು ಮೊಳೆಯುತ್ತಿತ್ತು. ’ಇಷ್ಟೊಂದು ಗೊಬ್ಬರ ಹಾಕಿ, ಎಣ್ಣೆ >>(ಕೀಟನಾಶಕ) ಹೊಡೆದರೂ ಹೊಲ ಒಣಗಿದೆ. ಅದೇನೂ ಇಲ್ಲದೇ ಬದು ಸಮೃದ್ಧವಾಗಿದೆ, ಏಕೆ?
ನಿಜಯಾಗಿಯೂ ಚಿಂತಿಸಬೇಕಾದ ಸಂಗತಿ. ಬರಹಕ್ಕೆ ನನ್ನಿ.
--
PaLa
ಥ್ಯಾಂಕ್ಸ್ ಪಾಲಚಂದ್ರ. ಮುಂದಿನ ಬರಹಗಳಲ್ಲಿ ಈ ಪ್ರಶ್ನೆಗೆ ಉತ್ತರ ಕೊಡುತ್ತ ಹೋಗುತ್ತೇನೆ.
- ಚಾಮರಾಜ ಸವಡಿ
http://chamarajsavad...
ಚಾಮರಾಜ್ ಸರ್,
ಲೇಖನ ಚೆನ್ನಾಗಿದೆ. ಉದಯ್ ಅವರು ಹೇಳಿದ ಹಾಗೆ "Fukuoka" ಅವರ "One straw revolution" ನೆನಪಾಗುತ್ತದೆ. "Fukuoka" ಅವರು ಛಲದಿಂದ ಸಾಧಿಸಿದ ನೈಸರ್ಗಿಕ ಕೃಷಿ ವಿಧಾನ ನಮ್ಮ ರೈತರಿಗೂ ಸ್ವಲ್ಪ ಮಟ್ಟಿಗೆ ಮಾದರಿ ಆಗಬೇಕು.
"If we throw mother nature out the window, she comes back in the door with a pitchfork."
"Fukuoka" ಅವರ ಈ ವಾಕ್ಯ ಎಂದಿಗೂ ಮರೆಯಾಲಗದ್ದು
ನಿಜ ಕುಮಾರ್ ಅವರೇ, ನಾಗೇಶ್ ಹೆಗಡೆ ಸರ್ ಹೇಳುವಂತೆ ’ಫುಕೊವೊಕಾ ಕೃಷಿ ಋಷಿ’. ರಾಸಾಯನಿಕಗಳ ವಿಷಕ್ಕೆ ನೆಲ ಕಚ್ಚುತ್ತಿರುವ ಬದುಕಿಗೆ ನೈಸರ್ಗಿಕ ಕೃಷಿ ಬಿಟ್ಟರೆ ಸದ್ಯ ಬೇರೆ ದಾರಿಯಿಲ್ಲ.
- ಚಾಮರಾಜ ಸವಡಿ
http://chamarajsavad...