ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)

ಎತ್ತು, ಬಂಡಿಯ ಸುತ್ತ ತಿರುಗುತ್ತಿದ್ದ ಬದುಕು

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ನಿಜಕ್ಕೂ ಒಂದು ಕಾಲವಿತ್ತು.

ಆಗ ಮಳೆ ಸರಿಯಾಗಿ ಬರುತ್ತಿತ್ತು. ಅಂದರೆ ಸರಿಯಾದ ಸಮಯಕ್ಕೆ, ಸರಿಯಾದ ಪ್ರಮಾಣದಲ್ಲಿ, ನಾವು ಹೇಗೆ ಇಷ್ಟಪಡುತ್ತೇವೆಯೋ ಹಾಗೆ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಮಳೆ ನಕ್ಷತ್ರಗಳು, ತಿಥಿಗಳು ರೂಪಿತವಾದವು. ಇಂತಿಂಥ ಮಳೆ ಇಂತಿಂಥ ದಿನದಲ್ಲಿ ಪ್ರಾರಂಭವಾಗಿ ಇಷ್ಟು ದಿನಗಳವರೆಗೆ ಬರುತ್ತದೆ. ನಂತರ ಇಂತಹ ಮಳೆ ಪ್ರವೇಶ ಮಾಡುತ್ತದೆ ಎಂದು ಪಂಚಾಂಗ ನೋಡದೇ ಹೇಳುವಷ್ಟು ಕರಾರುವಾಕ್ಕಾಗಿ ಮಳೆಯ ದಿನಚರಿ ಇರುತ್ತಿತ್ತು. ನಮ್ಮ ಇಡೀ ಒಕ್ಕಲುತನ ರೂಪಿತವಾಗಿದ್ದೇ ಇಂತಹ ಕರಾರುವಾಕ್ಕಾದ ವ್ಯವಸ್ಥೆಯಿಂದ. ಒಂದೆರಡು ಬಾರಿ ದಿನಚರಿಯಲ್ಲಿ ಏರುಪೇರಾದರೂ ಮುಂದಿನ ಮಳೆ ಅದನ್ನು ಸರಿಪಡಿಸುತ್ತಿತ್ತು.

ಆದರೆ ಕ್ರಮೇಣ ಮಳೆ ಕಣ್ಣಾಮುಚ್ಚಾಲೆ ಶುರು ಮಾಡಿತು.

ಜೂನ್ ಒಂದಕ್ಕೆ ಮುಂಗಾರು ಮಳೆ ಭಾರತದ ಗಡಿ ಪ್ರವೇಶಿಸುತ್ತದೆ ಎನ್ನುತ್ತಾರೆ ಹವಾಮಾನತಜ್ಞರು. ಆದರೆ ಅದಕ್ಕಿಂತ ಸಾಕಷ್ಟು ಮುಂಚೆಯೇ ಮುಂಗಾರು ಮುಂಚಿನ ಮಳೆ ನಮ್ಮ ಕೆಟ್ಟ ಬೇಸಿಗೆಯನ್ನು ತಣಿಸಿರುತ್ತಿತ್ತು. ಭೂಮಿ ಹದಗೊಳಿಸಲು ರೈತರಿಗೆ ಸೂಚನೆ ನೀಡಿರುತ್ತಿತ್ತು. ಈ ಸಲದ ಮಳೆಗಾಲ ಹೇಗಿರುತ್ತದೆ ಎಂಬ ಬಗ್ಗೆ ರೈತರಲ್ಲಿ ಚರ್ಚೆ ಹುಟ್ಟಿಸಿ, ಬಿತ್ತನೆಗೆ ಸಿದ್ಧವಾಗಲು ಅವರಿಗೆ ಅವಕಾಶ ಕೊಡುತ್ತಿತ್ತು.

ಆಗ ರೈತ ನಿಜಕ್ಕೂ ಕೆಲಸಗಾರನಾಗಿದ್ದ. ಬಿತ್ತನೆಗೆ ಮುಂಚಿತವಾಗಿಯೇ ಸಾಕಷ್ಟು ಸಿದ್ಧತೆ ಮಾಡಿಕೊಂಡಿರುತ್ತಿದ್ದ. ಯಾವ ವಿಜ್ಞಾನಿ ಹೇಳಿರದಿದ್ದರೂ ಭೂಮಿಗೆ ಅಗತ್ಯವಾಗಿ ಬೇಕಾದ ಗೊಬ್ಬರ ಹಾಕಿರುತ್ತಿದ್ದ. ಬೀಜಕ್ಕೆ ಉಪಚಾರ ಮಾಡುತ್ತಿದ್ದ. ಭೂಮಿಗಾಗಲಿ ಬೀಜಗಳಿಗಾಗಲಿ ವಿಷ ಸುರಿಯುವ ಪದ್ಧತಿ ಇರದ್ದರಿಂದ ಆಗ ನಡೆಯುತ್ತಿದ್ದುದು ಅಪ್ಪಟ ನೈಸರ್ಗಿಕ ಕೃಷಿ.

ಹದವಾಗಿ ಮಳೆ ಬೀಳುತ್ತಿದ್ದಂತೆ ಬಿತ್ತನೆ ಶುರುವಾಗುತ್ತಿತ್ತು. ಆಗ ಇದ್ದ ಒಂದೇ ಒಂದು ಯಂತ್ರ ಎಂದರೆ ಎತ್ತು ಮತ್ತು ಬಂಡಿ. ರಾಸಾಯನಿಕಗಳ ಸೋಂಕಿರದಿದ್ದರಿಂದ ಕೀಟಬಾಧೆ ಹತೋಟಿಯಲ್ಲಿರುತ್ತಿತ್ತು. ಭೂಮಿಗೆ ಯಾವ ರೀತಿಯ ಕಷ್ಟವೂ ಇರಲಿಲ್ಲ. ಒಂದು ಪ್ರಮಾಣದ ಬೆಳೆ ಕೈಗೆ ಬರುವ ಭರವಸೆ ಇದ್ದೇ ಇರುತ್ತಿತ್ತು.

ಬೆಳೆ ಕೈಗೆ ಬರುವವರೆಗೂ ಭೂಮಿ ಹಾಗೂ ಬೆಳೆಗಳನ್ನು ಪೋಷಿಸುವ ಹಲವಾರು ಪದ್ಧತಿಗಳನ್ನು ರೈತರು ಅನುಸರಿಸುತ್ತಿದ್ದರು. ಭೂಮಿತಾಯನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವ, ಬಣ್ಣಿಸುವ ಹಾಡು, ಹಬ್ಬ ಚಾಲ್ತಿಯಲ್ಲಿರುತ್ತಿದ್ದವು. ಇಡೀ ಸಮುದಾಯದ ಬೆಳವಣಿಗೆ ಭೂಮಿ, ಬೆಳೆ, ದನಕರುಗಳ ನಡುವಿನ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಜಾನಪದ ಹಾಡುಗಳು, ಸುಗ್ಗಿ ಪದಗಳು, ಹಂತಿ ಪದಗಳು- ಹೀಗೆ ಒಂದಿಡೀ ವ್ಯವಸ್ಥೆ ನಮ್ಮ ಕೃಷಿಯನ್ನು ಅವಲಂಬಿಸಿ ಬೆಳೆಯಿತು.

’ಸುಗ್ಗಿ’ ಎಂಬ ಶಬ್ದವೇ ಹಿಗ್ಗು ಮೂಡಿಸುವಂಥದು. ಬೆಳೆ ಕೈಗೆ ಬರುವ ಗಳಿಗೆಯಲ್ಲಿ ಅದಕ್ಕೆ ಕಾರಣರಾದ ಎಲ್ಲರನ್ನೂ ಸ್ಮರಿಸಿ, ಎಲ್ಲರಿಗೂ ಶಕ್ತ್ಯಾನುಸಾರ ದಾನ ನೀಡಿ, ಮಿಕ್ಕಿದ ಬೆಳೆಯಲ್ಲಿ ಸರ್ಕಾರದ ಪಾಲು ಕೊಟ್ಟರೂ ರೈತನಿಗೆ ವರ್ಷವಿಡೀ ಬದುಕಲು ಬೇಕಾದಷ್ಟು ಧಾನ್ಯ ಉಳಿಯುತ್ತಿತ್ತು. ನಿತ್ಯ ಬಳಸುವ ಜೋಳ, ರಾಗಿ, ಅಕ್ಕಿ, ಗೋದಿ ಜತೆಗೆ ಬೇಳೆಕಾಳುಗಳನ್ನೂ ಬೆಳೆದುಕೊಂಡಿರುತ್ತಿದ್ದ ರೈತ ಅಷ್ಟಿಷ್ಟು ತರಕಾರಿ, ಹಣ್ಣು ಮುಂತಾದವನ್ನು ಹಾಕಿಕೊಂಡು ಬದುಕುತ್ತಿದ್ದ. ಕುಟುಂಬ, ಓಣಿ, ಕೇರಿ, ಊರು, ಪ್ರಾಂತ್ಯ, ರಾಜ್ಯ- ಹೀಗೆ ಇಡೀ ವ್ಯವಸ್ಥೆ ಕೃಷಿಯ ಈ ಚಟುವಟಿಕೆಯೊಂದಿಗೆ ತನ್ನನ್ನು ಗುರುತಿಸಿಕೊಂಡಿತ್ತು. ಹೀಗಾಗಿ ಕೃಷಿ ಸಮಾಜದ ಮುಖ್ಯ ವೃತ್ತಿಯಾಗಿತ್ತು. ಇತರ ಎಲ್ಲ ವೃತ್ತಿಗಳನ್ನು ಪೋಷಿಸುವಂಥದಾಗಿತ್ತು.

ಸಾವಿರಾರು ವರ್ಷಗಳಿಂದ ಜಾರಿಯಲ್ಲಿದ್ದ ಈ ವ್ಯವಸ್ಥೆಗೆ ಕೊಡಲಿ ಪೆಟ್ಟು ಬಿದ್ದಿದ್ದು ನಮ್ಮ ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರಿಂದ.

’ಗ್ರಾಮಗಳಲ್ಲಿಯೇ ದೇಶ ಅಡಗಿದೆ’ ಎಂಬ ಗಾಂಧೀಜಿಯವರ ಮಾತನ್ನು ಕಡೆಗಣಿಸಿದ ನೆಹರು ೧೯೫೦ರ ದಶಕದಲ್ಲಿ ಜಾರಿಗೆ ತಂದ ’ಹಸಿರು ಕ್ರಾಂತಿ’ ದೇಶದ ಕೃಷಿ ಪದ್ಧತಿಯನ್ನು ಬುಡಮೇಲು ಮಾಡಿತು. ಹೆಚ್ಚು ಬೆಳೆಯಬೇಕು ಎಂಬುದೊಂದೇ ಧ್ಯೇಯವಾಗಿ, ಹೇಗೆ ಬೆಳೆಯಬೇಕು ಎಂಬ ಮೂಲಭೂತ ಪ್ರಶ್ನೆಯನ್ನು ನಿರ್ಲಕ್ಷ್ಯಿಸಲಾಯಿತು. ಕೃಷಿ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತಿರದಿದ್ದ, ದೇಶವನ್ನು ಆಹಾರದಲ್ಲಿ ಸ್ವಾವಲಂಬಿಯಾಗಿಸುವ ಮೂಲಕ ಅಂತರ್‌ರಾಷ್ಟ್ರೀಯ ಸಮುದಾಯದ ಗಮನ ಸೆಳೆಯುವ ತುರ್ತಿದ್ದ ನೆಹರೂ ಅವರಿಗೆ ತಕ್ಷಣದ ಯಶಸ್ಸಿನ ಅವಶ್ಯಕತೆಯಿತ್ತು. ಆದ್ದರಿಂದ ರಸಾಯನಿಕ ಗೊಬ್ಬರಗಳನ್ನು ಸುರಿದು, ಕೀಟನಾಶಕಗಳನ್ನು ಬಳಸಿ ಹೆಚ್ಚು ಬೆಳೆಯುವ ವಿದೇಶಿ ಕೃಷಿ ತಂತ್ರಜ್ಞಾನವನ್ನು ವಿವೇಚನೆಯಿಲ್ಲದೇ ಭಾರತಕ್ಕೆ ತಂದರು.

ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ರಸಾಯನಿಕ ಗೊಬ್ಬರ ತಯಾರಿಸುವ ಕಾರ್ಖಾನೆಗಳನ್ನು ಸ್ಥಾಪಿಸಲಾಯಿತು. ದುಬಾರಿ ಬೆಲೆಯ ಗೊಬ್ಬರ ಹಾಗೂ ಕೀಟನಾಶಕಗಳನ್ನು ರೈತರು ಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಕೃಷಿ ಸಹಾಯಧನ (ಸಬ್ಸಿಡಿ) ಹಾಗೂ ಕೃಷಿ ಸಾಲಗಳನ್ನು ನೀಡಲಾಯಿತು. ಗೊಬ್ಬರ, ಕೀಟನಾಶಕ, ಆಳದ ಉಳುಮೆ ಮುಂತಾದ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಹೆಚ್ಚು ಬೆಳೆಯಬಹುದು ಎಂದು ರೈತರಿಗೆ ಆಮಿಷ ಒಡ್ಡಲಾಯಿತು. ಇದರ ಪ್ರಚಾರಕ್ಕಾಗಿ ಆಕಾಶವಾಣಿಯನ್ನು ಬಳಸಿಕೊಳ್ಳಲಾಯಿತು. ದೇಶಾದ್ಯಂತ ಕೃಷಿ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಕೃಷಿ ಸಂಬಂಧಿ ಕಚೇರಿಗಳನ್ನು ಸ್ಥಾಪಿಸಲಾಯಿತು.

ನೋಡನೋಡುತ್ತಲೇ ಇವೆಲ್ಲ ಬೆಳವಣಿಗೆಗಳು ವಿಪರೀತ ವೇಗದಲ್ಲಿ ನಡೆಯತೊಡಗಿದವು. ದೇಶದ ಬೆಳವಣಿಗೆ ನಮ್ಮ ಹೊಲಗಳಲ್ಲಿದೆ ಎಂಬ ಘೋಷಣೆ ಎದ್ದಿತು. ರೈತ ಇದರ ಕೇಂದ್ರ ಬಿಂದುವಾದ. ತನ್ನ ಪಾಡಿಗೆ ತಾನು ಬೀಜ, ಗೊಬ್ಬರ ಉತ್ಪಾದಿಸಿಕೊಂಡು, ಮನೆಯವರ ಸಹಾಯದಿಂದ ಕೃಷಿ ಕಾರ್ಯ ನಡೆಸುತ್ತಿದ್ದ ರೈತನ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪ ಶುರುವಾಯಿತು. ನಿನ್ನ ಹೊಲಕ್ಕೆ ಇಂತಹ ಗೊಬ್ಬರ ಹಾಕು, ಇಂತಹ ಬೀಜ ಬಿತ್ತು ಎಂಬ ಬೋಧನೆ ಶುರುವಾಯಿತು. ಇದಕ್ಕಾಗಿ ಆಕಾಶವಾಣಿಯನ್ನು ಎಗ್ಗಿಲ್ಲದೇ ಬಳಸಿಕೊಳ್ಳಲಾಯಿತು. ಹೊಸ ಪದ್ಧತಿಯಿಂದ ಹೆಚ್ಚು ಬೆಳೆಯಬಹುದು, ಹೆಚ್ಚು ಗಳಿಸಬಹುದು, ಆಗ ದೇಶ ಮುಂದೆ ಬರುತ್ತದೆ ಎಂದು ರೈತನ ಮುಂದೆ ಬಣ್ಣದ ಕನಸು ಕಟ್ಟಿಕೊಟ್ಟರು.

ಇದನ್ನು ಒಪ್ಪದ ರೈತನನ್ನು ಗಮಾರ ಎಂದು ಕರೆಯಲಾಯಿತು. ಪಾರಂಪರಿಕ ಕೃಷಿ ಪದ್ಧತಿಯನ್ನು ಹಳೆಯ ವಿಧಾನ ಎಂದು ಕರೆದು, ಅದರಿಂದ ಹೆಚ್ಚು ಬೆಳೆಯಲು ಸಾಧ್ಯವಿಲ್ಲ ಎಂದು ಪ್ರಚಾರ ಮಾಡಲಾಯಿತು. ಮೊದಲು ತನ್ನ ಪಾಡಿಗೆ ತಾನಿದ್ದ ರೈತನಿಗೆ ಸುತ್ತ ನಡೆಯುತ್ತಿದ್ದ ಬೆಳವಣಿಗೆಯನ್ನು ನೋಡಿಕೊಂಡು ಸುಮ್ಮನಿರಲಾಗಲಿಲ್ಲ. ಮೊದಲ ಹೋಳಿಗೆಗೆ ರುಚಿ ಹೆಚ್ಚು ಎನ್ನುವಂತೆ ರಸಾಯನಿಕ ಗೊಬ್ಬರದ ರುಚಿ ಕಂಡ ಭೂಮಿಯಲ್ಲಿ ಬೆಳೆ ಚೆನ್ನಾಗಿ ಬಂದಿತು. ಆಗ ದೇಶದಲ್ಲಿ ಆಹಾರ ಧಾನ್ಯಗಳ ಕೊರತೆ ಇದ್ದುದರಿಂದ ಉತ್ತಮ ಬೆಲೆಯೂ ರೈತನಿಗೆ ದಕ್ಕಿತು.

ಇವೆಲ್ಲದರಿಂದ ಇತರ ರೈತರು ಆಮಿಷಕ್ಕೆ ಒಳಗಾದರು. ರಸಾಯನಿಕಗಳನ್ನು ಬಳಸಿ ಹೆಚ್ಚು ಬೆಳೆಯಬಹುದು ಎಂದು ಭಾವಿಸಿದರು. ಸಾಲ ಕೊಡಲು ಸರ್ಕಾರ ಸಿದ್ಧವಿತ್ತು. ಬೆಳೆದ ಬೆಳೆಗೆ ಉತ್ತಮ ಬೆಲೆ ದಕ್ಕುತ್ತಿತ್ತು. ಇನ್ನು ನಮ್ಮ ಜೀವನದಲ್ಲಿ ಸುಖಿ ಕಾಲ ಶುರುವಾಯಿತು ಎಂಬ ಪುಳಕದಲ್ಲಿ ರೈತ ಸಾರಾಸಗಟಾಗಿ ರಸಾಯನಿಕ ಕೃಷಿಗೆ ಇಳಿದ. ೧೯೫೦, ೧೯೬೦ ಹಾಗೂ ೭೦ರ ದಶಕದಲ್ಲಾದ ಮುಖ್ಯ ಬೆಳವಣಿಗೆ ಇದು.

ಒಂದಿಡೀ ತಲೆಮಾರು ಪಾರಂಪರಿಕ ಕೃಷಿ ಕೈಬಿಟ್ಟು ರಸಾಯನಿಕ ಕೃಷಿಗೆ ಇಳಿದ ಕಾಲವಿದು. ಹಳೆಯದು ಹಿಂದಾಯಿತು. ಹೊಸದು ಮುಂದೆ ಬಂದಿತು. ರಸಾಯನಿಕಗಳಿಗೆ ಭೂಮಿ ಇದೇ ರೀತಿ ಸ್ಪಂದಿಸುತ್ತದೆ ಎಂಬ ಭ್ರಮೆಯಲ್ಲಿ ಹೆಚ್ಚು ಹೆಚ್ಚು ಬೆಳೆಯುವ ಆತುರದಲ್ಲಿ ರೈತ ಸಾವಿರಾರು ವರ್ಷಗಳಿಂದ ಬೆಳೆಸಿಕೊಂಡು ಬಂದಿದ್ದ ಜ್ಞಾನವನ್ನು ಕೈಬಿಟ್ಟ.

ಆದರೆ ಬಂದಿದ್ದು ರೋಗ.

ಮೊತ್ತಮೊದಲ ಬಾರಿಗೆ ಬೆಳೆಗೆ ಕೀಟಗಳ ಹಾವಳಿ ಅನಿರೀಕ್ಷಿತವಾಗಿ ಹೆಚ್ಚಿತು. ಅದುವರೆಗೆ ಇವೆಯೋ ಇಲ್ಲವೋ ಎಂಬಂತಿದ್ದ ಕೀಟಗಳು ದೊಡ್ಡ ಪ್ರಮಾಣದಲ್ಲಿ ಬೆಳೆಯನ್ನು ಮುಕ್ಕಲಾರಂಭಿಸಿದವು. ಕಂಗಾಲಾದ ರೈತನ ನೆರವಿಗೆ ಬಂದಿದ್ದು ಹಸಿರುಕ್ರಾಂತಿಯ ತಂತ್ರಜ್ಞಾನವೇ. ಕೀಟನಾಶಕಗಳನ್ನು ಬಳಸಿ, ಬೆಳೆಯನ್ನು ಉಳಿಸಿ ಎಂದಿತು ಸರ್ಕಾರ. ರೈತನ ಹೊಲಕ್ಕೆ ವಿಷ ತುಂಬಿದ ಬಾಟಲಿಗಳು ಬರಲಾರಂಭಿಸಿದವು. ಅವುಗಳ ಹಿಂದೆ ಬಹುರಾಷ್ಟ್ರೀಯ ಕಂಪನಿಗಳು ಬಂದವು. ಉತ್ಪಾದನೆ ಖರ್ಚು ಹೆಚ್ಚಿದ್ದರಿಂದ ಬ್ಯಾಂಕುಗಳು ಸಾಲ ಹಿಡಿದುಕೊಂಡು ಬಂದವು. ಎಲ್ಲೋ ದೂರ ದೆಹಲಿ, ಬೆಂಗಳೂರಿನಂತಹ ನಗರಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದ್ದ ವ್ಯವಸ್ಥೆ ಕುಗ್ರಾಮದಲ್ಲಿರುತ್ತಿದ್ದ ರೈತನ ಹೊಲಗಳನ್ನು ಪ್ರವೇಶಿಸಿತು.

ಆದರೆ ಇದರಿಂದಾದ ದುರಂತ ಊಹೆಗೂ ನಿಲುಕದಂಥದು!

(ಮುಂದುವರಿಯುವುದು)

- ಚಾಮರಾಜ ಸವಡಿ

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)

nkumar's picture

ಲೇಖನ ಚೆನ್ನಾಗಿದೆ ಚಾಮರಾಜ್ ಸರ್.

ಬೇಸಿಗೆಯಲ್ಲಿ ತುಂಬಾ ಮಳೆ ಬಂದರೆ ಜನಕ್ಕೆ ತುಂಬಾ ಸಂತಸವಾಗುತ್ತದೆ. ಆದರೆ ನಿಜಾಂಶ ಏನೆಂದರೆ ಬೇಸಿಗೆಯಲ್ಲಿ ತುಂಬಾ ಮಳೆ ಬಂದರೆ ಮುಂಗಾರು ವೇಳೆ ಅಗತ್ಯ ವಾಯುಭಾರ ಕುಸಿತ ಉಂಟಾಗುವುದಿಲ್ಲ. ಇದರಿಂದ ಮುಂಗಾರು ಕೈ ಕೊಡುವ ಸಾಧ್ಯತೆಗಳು ಹೆಚ್ಚು. ಕಳೆದ ವರ್ಷ ಕರಾವಳಿಯಲ್ಲಿ ಈ ತರಹದ ಅನುಭವ ಆಗಿದೆ. ಮಾರ್ಚ್ ತಿಂಗಳಲ್ಲಿ ಸಿಕ್ಕಾಪಟ್ಟೆ ಮಳೆ ಬಂದು ಮುಂಗಾರು ಸಂಪೂರ್ಣ ಕೈ ಕೊಟ್ಟಿತು. ಜನರಿಗೆನೋ ಮಾರ್ಚ್ ಮಳೆಯಿಂದ ಖುಷಿಯಾಯಿತು. ಆದರೆ ಅದರ ಅಡ್ಡ ಪರಿಣಾಮ ಎಷ್ಟು ಜನಗಳಿಗೆ ಗೊತ್ತಾಯಿತು ಎಂದು ತಿಳಿದಿಲ್ಲ.

ಉ: ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)

Chamaraj's picture

ನಂದಕುಮಾರ್‌ ಅವರೇ, ಬೇಸಿಗೆ ಮಳೆ ವಿಪರೀತವಾಗಿ ಬಂದರೆ ಮಾತ್ರ ನೀವು ಹೇಳಿದಂತೆ ಮುಂಗಾರು ಹಂಗಾಮಿನಲ್ಲಿ ಸಹಜ ಮಳೆ ಕಡಿಮೆಯಾಗಬಹುದು. ಆದರೆ, ಮುಂಗಾರು ಮುಂಚಿನ (ಪ್ರೀ ಮಾನ್ಸೂನ್‌) ಮಳೆಗಳೂ ಇವೆ. ಬೇಸಿಗೆಯ ಬಿರುಸನ್ನು ತಗ್ಗಿಸುವ ಮಟ್ಟಿಗೆ ಮಾತ್ರ ಬರುವಂಥವು ಅವು. ಅಷ್ಟಕ್ಕೂ ಮಳೆ ಹೀಗೇ ಸುರಿಯಬೇಕು ಎಂಬುದು ನಮ್ಮ ಕೈಲಿಲ್ಲವಲ್ಲ. ಹೀಗಾಗಿ, ಬಿದ್ದ ಮಳೆ ನೀರನ್ನು ಸಂಗ್ರಹಿಸಿಡುವ ಕೆಲಸ ನಡೆದರೆ, ಮಳೆಯ ಅಡ್ಡಪರಿಣಾಮಗಳನ್ನು ಸಹಿಸಲು ಸಾಧ್ಯ. ಆ ಬಗ್ಗೆಯೂ ಲೇಖನಮಾಲೆಯಲ್ಲಿ ಬರೆಯಲಿದ್ದೇನೆ.

- ಚಾಮರಾಜ ಸವಡಿ
http://chamarajsavadi.blogspot.com

ಉ: ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)

hariharapurasridhar's picture

http://www.hariharapurasridhar.blogspot.com

ಚಾಮರಾಜ್,
ನಮ್ಮ ಅತಿಯಾಸೆಗೆ ದೊರೆತಿರುವ ಫಲವಿದು. ನಾವು ಸರಿಯಾಗುವ ವರೆಗೂ ಮಳೆ ಹೀಗೆಯೇ. ನಿಮ್ಮ ಲೇಖನಕ್ಕೆ ಪೂರಕವಾಗಿ ಒಂದಿಷ್ಟು ಬರೆಯುವೆ.
ಕೋಸು ಬೆಳೆಯುವುದನ್ನು ನೋಡಿದ ಯಾರೂ, ಕೋಸನ್ನು ತಿನ್ನಲು ಇಚ್ಛಿಸುವಿದಿಲ್ಲ. ಭೂಮಿಗೆ ವಿಷ ಹಾಕಿ ಬೆಳೆಯುವುದಲ್ಲದೆ ಕೋಸಿನ ಒಂದೊಂದು ಎಲೆಗಳು ಬೆಳೆಯುವಾಗಲೂ ಕೀಟ ನಾಶಕವನ್ನು ಸಿಂಪಡಿಸಲಾಗುತ್ತದೆ. ಯಾವ ಕೋಸು ನೋಡಲು ಚೆನ್ನಾಗಿ ಕಾಣುವುದೋ ಅದರಲ್ಲೇ ಹೆಚ್ಚು ವಿಷ. ಬೆಲ್ಲ ಮಾಡುವುದನ್ನು ನೋಡಿದರೂ ಅಷ್ಟೆ, ಅದಕ್ಕೆ ಹಾಕುವ ಕೆಮಿಕಲ್ ನಳನ್ನು ನೋಡಿದರೆ ಗಾಭರಿ ಆಗುತ್ತದೆ. ಇದು ಎಲ್ಲರಿಗೂ ಗೊತ್ತಿದ್ದರೂ, ಇದೇ ಅನಿವಾರ್ಯವೆಂದು ಒಪ್ಪಿಕೊಂಡು ಬಿಟ್ಟಿದ್ದಾರಲ್ಲಾ!! ನಮ್ಮ ಜನರನ್ನು ಜಾಗೃತಿ ಗೊಳಿಸುವುದು ಹೇಗೆ? ಬಹುಷ: ಕಾಲವೇ ಪಾಠ ಕಲಿಸುತ್ತೆ. ಕಾಯಬೇಕಲ್ಲಾ!!
ಒಂದು ಲೀಟರ್ ಹಾಲಿನ ಬೆಲೆ ಇಪ್ಪತ್ತು ರೂಪಾಯಿ ಆದರೂ ಚಿಂತೆ ಯಿಲ್ಲ. ನಾಡಹಸುವಿನ ಹಾಲು ಬೇಕು. ಒಂದು ಕೆ.ಜಿ ತರಕಾರಿ ಬೆಲೆ ಐವತ್ತು ರೂಪಾಯಿ ಯಾದರೂ ಚಿಂತೆ ಯಿಲ್ಲ ಸಾಮಯವ ಗೊಬ್ಬರದಿಂದ ಬೆಳೆದ ,ಕ್ರಿಮಿನಾಶಕ ಬೆರೆಯದ ತರಕಾರಿ ಬೇಕೆಂಬ ಬೇಡಿಕೆ ಇದೆ, ಕೊಡುವ ಜನರು ಬೇಕು, ಇದರಲ್ಲಿ ಮೋಸ ವಾಗದಂತೆ ಶುದ್ಧ ನಾಡಹಸುವಿನ ಹಾಲು, ಸಾಮಯವ ಗೊಬ್ಬರದಿಂದ ಬೆಳೆದ ಅಕ್ಕಿ, ತರಕಾರಿ ಕೊಡುವ ರೈತ ಬೇಕು, ರೈತರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಸಂಘಟನೆಗಳು ಮುಂದೆ ಬರಬೇಕಿದೆ.

ಉ: ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)

Chamaraj's picture

ಶ್ರೀಧರ ಸರ್‌, ಕೋಸು ಹಾಗೂ ಇತರ ಬೆಳೆಗಳಿಗೆ ಸಂಬಂಧಿಸಿದಂತೆ ನನ್ನ ಲೇಖನಮಾಲೆಯಲ್ಲಿ ಬರೆಯಲಿದ್ದೇನೆ. ನೀವು ಅದನ್ನು ಪ್ರಸ್ತಾಪಿಸಿದ್ದು ಒಳ್ಳೆಯದೇ ಆಯಿತು.

ಯಾವುದೇ ಉಪಯುಕ್ತ ವಿಷಯ ಸಂಕೀರ್ಣವಾಗಿರುವುದಿಲ್ಲ. ಆಗಬಾರದು ಕೂಡ. ಅದು ಮೇಲ್ನೋಟಕ್ಕೆ ಸರಳವಾಗಿ ಕಾಣುವಂತೆ, ಅರ್ಥವಾಗುವಂತೆ ಇರಬೇಕು- ಮಗುವಿನ ಮುಗುಳ್ನಗೆಯಂತೆ. ಹೀಗಾಗಿ, ತಂತ್ರಜ್ಞಾನದ ಹೆಸರಿನಲ್ಲಿ ಕೃಷಿ ಕ್ಷೇತ್ರದಲ್ಲಿರುವ ಅನಾಚಾರಗಳನ್ನು ಖಂಡಿಸಬೇಕಾಗುತ್ತದೆ. ವಿಜ್ಞಾನದ ಹೆಸರಿನಲ್ಲಿ ಇವತ್ತು ಪ್ರತಿಯೊಂದಕ್ಕೂ ಅತಿಯಾದ ಪ್ರಯೋಗಗಳನ್ನು ಮಾಡುವ ರೂಢಿ ಬಂದಿದೆ. ತಂತ್ರಜ್ಞಾನದ ಸಹಾಯ ಪಡೆದುಕೊಂಡಿದ್ದರೆ ಮಾತ್ರ ಅದು ಶುದ್ಧ, ಶ್ರೇಷ್ಠ ಎಂಬ ಮನೋಭಾವನೆ ಬೆಳೆದಿದೆ. ಇದು ಬೇಕಾ?

ಪ್ರತಿಯೊಂದನ್ನೂ ದುರ್ಬೀನು ಹಾಕಿಕೊಂಡು ನೋಡುತ್ತ ಹೋಗುವ ಅವಶ್ಯಕತೆ ಇದೆಯಾ? ಕೃಷಿ ಒಂದು ರೀತಿಯಲ್ಲಿ ಸ್ವಯಂಪೂರ್ಣ ವೃತ್ತಿ. ಏನೇನೂ ಓದಿರದ, ತೀರಾ ಸಾಮಾನ್ಯ ಜ್ಞಾನ ಇರುವ ವ್ಯಕ್ತಿಯೂ ಸುಲಭವಾಗಿ ಮಾಡಬಹುದಾದ ಕೆಲಸ. ಆದರೆ, ಇಂತಹ ಸರಳ ವೃತ್ತಿಗೆ ತಂತ್ರಜ್ಞಾನ, ವಿಶ್ವವಿದ್ಯಾಲಯಗಳು, ಕಾರ್ಖಾನೆಗಳು, ಮುಂತಾದವನ್ನು ಸೇರಿಸಿ ಅದನ್ನೊಂದು ಸಂಕೀರ್ಣ ವೃತ್ತಿಯನ್ನಾಗಿ ಮಾಡಿದ್ದಾರೆ. ಇದು ನಿಲ್ಲಬೇಕೆಂದರೆ, ನೈಸರ್ಗಿಕ ಕೃಷಿ ಉತ್ತಮ ವಿಧಾನ. ಇದಕ್ಕಿಂತ ಉತ್ತಮವಾದದ್ದು ಬಂದರೆ ಅದನ್ನೂ ಸ್ವಾಗತಿಸೋಣ.

- ಚಾಮರಾಜ ಸವಡಿ
http://chamarajsavadi.blogspot.com

ಉ: ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)

hariharapurasridhar's picture

http://www.hariharapurasridhar.blogspot.com

ಅಂತೂ ನಿಮ್ಮ ರೈತ ಜಾಗೃತಿ ಮುಂದುವರೆಯಲಿ ಚಾಮರಾಜ್, ಇಂತಾ ಮಾನಸಿಕತೆ ಇರುವವರ ಸಂಖ್ಯೆ ಹೆಚ್ಚಿದರೆ ಸ್ವಲ್ಪ ಸುಧಾರಿಸೀತು.ಇಂದಲ್ಲಾ ನಾಳೆ ನೈಸರ್ಗಿಕ ಕೃಷಿ ಮತ್ತೆ ಬರಲೇ ಬೇಕು ಚಕ್ರ ತಿರುಗಿದಂತೆ, ಆದರೆ ಅಷ್ಟು ಹೊತ್ತಿಗೆ ತುಂಬಾ ಹಾನಿಯಾಗಿರುತ್ತದಲ್ಲಾ!! ಎಂಬುದೇ ದು:ಖದ ಸಂಗತಿ

ಉ: ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)

girish.rajanal's picture

ಅಗದೀ ಚೋಲೋ ಬರಹ ಬರದೀರಿ ಸರ್‍,
ಸಹಜ ಬೆಸಾಯ ಪದ್ಧತಿ ಮೇಲೆ ಸಾಕಶ್ಟು ಇನ್ನೂ ಬೆಳಕು ಚೆಲ್ಲಬೇಕು ಸರ್‍,
ನಮ್ಮೂರಿನ್ಯಾಗ ಹಿರಿಯ ರೈತರೂ ಸಹ ಇನ್ನೂ ಕೀಟನಾಶಕ, ರಾಸಾಯನಿಕಗಳ ಮೇಲೆ ಅವಲಂಬಿಸಿದ್ದಾರೆ...
ಅವರ ತಲೆಮಾರೇ ಇಶ್ಟೋಂದು ಕೆಟ್ಟಿರಬೇಕಾದರೆ..ಇನ್ನೂ ಈಗಿನ ತಲೆಮಾರು ಹೆಂಗಿರಬೇಕು ಹೇಳ್ರಿ..

ನಿಮ್ಮವ,
ಗಿರೀಶ ರಾಜನಾಳ
ಊದುದು ಕೊಟ್ಟು ಬಾರಿಸುದು ತಗೊಂಡ್ರಂತ!!!

ಉ: ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)

Chamaraj's picture

ನಿಜ ಗಿರೀಶ. ನಮ್ಮದು ಕಲಬೆರಕೆ ಪೀಳಿಗೆ. ತುಂಬಾ ಅಪಾಯಕಾರಿ ಸ್ಥಿತಿ ಇದು.

- ಚಾಮರಾಜ ಸವಡಿ
http://chamarajsavadi.blogspot.com

Syndicate content