ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಬದುಕಿದ್ದಾಗ ವಿಘ್ನವಿನಾಶಕ. ಸತ್ತಾಗ.. ?

ಕಾಡಿನ ಸಲಗವೊಂದು ಸತ್ತಾಗ ಅವೈಜ್ಞಾನಿಕ ರೀತ್ಯಾ ಕೋರೆಗಳನ್ನು ಕತ್ತರಿಸಿದ ನಂತರ ಉಳಿದ ಶವದ ಬರ್ಬರ ದೃಶ್ಯ. ಸಂಗ್ರಹ ಚಿತ್ರ.

ಇತ್ತೀಚೆಗೆ ನಾಡಿನ ಪಳಗಿದ ಆನೆಗಳು ಕೊಡಗಿನಲ್ಲಿ ಕಾಡಿನ ಪುಂಡಾನೆಯನ್ನು ಬಂಧಿಸಲು ಹೆಣಗಿದ ಸುದ್ದಿ ನೀವೆಲ್ಲ ಮಾಧ್ಯಮಗಳಲ್ಲಿ ಓದಿದ್ದೀರಿ. ಹಾಗೆಯೇ ತರಬೇತಿ ಶಿಬಿರದ ವರೆಗೆ ಬಂಧಿಸಿ ತರುವಾಗ ಆಘಾತಗೊಂಡು ಆ ಕಾಡಿನ ಸಲಗ ಸತ್ತಿದ್ದು ಸಹ ತಮ್ಮ ಅರಿವಿಗಿದೆ. ಒಟ್ಟಾರೆ ನಮ್ಮ ಕೆಲಸಗಳೆಲ್ಲ ದುರಂತಕ್ಕೆ ನಾಂದಿ ಹಾಡುತ್ತವೆ. ಏಕೆಂದರೆ ನಮ್ಮ ಕಾರ್ಯಾಚರಣೆಗಳೆಲ್ಲ "Trial & error method!" ಮಾದರಿಯವು.

ಕಾಡಾನೆ ಸತ್ತ ಪ್ರದೇಶದ ನ್ಯಾಯಿಕ ಅಧಿಕಾರ ಹೊಂದಿರುವ ಅರಣ್ಯ ವಲಯದ ಅಧಿಕಾರಿಗಳು ಮೊದಲು ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆಶ್ಚರ್ಯ ಎಂದರೆ ಸ್ಥಳೀಯರಿಗೆ ಗೊತ್ತಿರುವ ಮಾಹಿತಿ, ಗೊಂಡಾರಣ್ಯದ ಆಯಕಟ್ಟಿನ ಸ್ಥಳಗಳ ಪರಿಚಯ ಆ ವ್ಯಾಪ್ತಿಯ ಅರಣ್ಯ ರಕ್ಷಕರಿಗೂ ಇರುವುದಿಲ್ಲ! ಇನ್ನು ಪ್ರತಿಶತ ೭೦ ರಷ್ಟು ಅಧಿಕಾರಿಗಳು ಇಂತಹ ಘಟನೆ ನಡೆದಾಗಲೇ ಸ್ಥಳದ ಭೇಟಿಗೆ ಹೊರಡುವವರು. ಏಕೆಂದರೆ, ಅರಣ್ಯ ಪಾಲಕರಾದಿಯಾಗಿ ಅವರಿಗೆ ಇದು ಆಸಕ್ತಿಯ ವಿಷಯವಲ್ಲ. ಸರಕಾರಿ ನೌಕರಿ. ಒಂದರ್ಥದಲ್ಲಿ ಸರಕಾರಿ ಶ್ರಾದ್ಧ. ಮೇಜಿನ ಬುಡದ ಗಳಿಕೆಯ ಹಾದಿ. ಸ್ಥಳೀಯರ ಸಹಾಯ, ಸಹಕಾರ ಯಾಚಿಸುತ್ತಾರೆ. ಹಾಗೆಯೇ ತಮ್ಮ ‘ಕರ್ತವ್ಯ ಪರಾಯಣತೆ’ ಪ್ರದರ್ಶಿಸಿ, ಸ್ಥಳೀಯರ ಮೇಲೂ ಪ್ರಕರಣ ದಾಖಲಿಸಿ, ತಾವು ಇಲಾಖಾ ವಿಚಾರಣೆಯಿಂದ ಪಾರಾಗುವಲ್ಲಿ ನಿಸ್ಸೀಮರಿದ್ದಾರೆ.

ಹೀಗೆ, ವನ್ಯ ಪ್ರಾಣಿಯ ಶವದ ಮಹಜರು ನಡೆಸಿ, ಪಂಚನಾಮೆ ಮಾಡಿಸಿ ವರದಿ ಬರೆದು ನಿಟ್ಟುಸಿರು ಬಿಡುತ್ತಾರೆ. ಇಲ್ಲಿ ಜಿಜ್ಞಾಸೆಯ ವಿಷಯವೆಂದರೆ ಸತ್ತ ಆನೆಯ ಬಹುಮೂಲ್ಯದ ಕೋರೆ ಹಾಗು ಚರ್ಮ ಏನು ಮಾಡುತ್ತಾರೆ? ಎಂಬುದು.

ಸರ್ವೇ ಸಾಧಾರಣವಾಗಿ ಅರಣ್ಯ ಪಾಲಕರು ಆ ಶವಕ್ಕೆ ಕೈ ಹಚ್ಚುವುದು ಅಪರೂಪ. ಹಾಗಾಗಿ ಅಲ್ಪಸ್ವಲ್ಪ ಜ್ಞಾನವಿರುವ, ಸಣ್ಣಪುಟ್ಟ ಬೇಟೆಯಾಡುವ ಹವ್ಯಾಸವಿರುವ ಜನರನ್ನೇ ಗುರುತಿಸಿ ಶವದ ಅಂತಿಮ ವಿಧಿ ವಿಧಾನಗಳಿಗೆ ಬಳಸಿಕೊಳ್ಳುವುದು ವಾಡಿಕೆ. ಅವರ ಬಳಿ ಇರುವ ಮೊಂಡು ಅಸ್ತ್ರಗಳನ್ನೇ ಬಳಸಿ, ಹೃದಯವಿದ್ರಾವಕವಾಗಿ ಬರ್ಬರ ಎಂಬುವಂತೆ ಶವ ಕತ್ತರಿಸುವುದು ನಡೆದು ಬಂದ ಸಂಪ್ರದಾಯ. ಕಾಡು ಸಲಗ ನಾಡು ರಸ್ತೆಯ ಹತ್ತಿರದಲ್ಲಿಯೇ ಅಸುನೀಗಿದರೆ ಮುಖಕ್ಕೆ ಆಸಿಡ್ ಸುರಿದು ಕೋರೆಗಳನ್ನು ಕಿತ್ತುಕೊಳ್ಳಲಾಗುತ್ತದೆ. ಕಾರಣ ಬೆಳೆದ ಸಲಗದ ಕೋರೆಯ ಒಂದು ಮೂರಾಂಶ ಭಾಗ ತಲೆ ಬುರುಡೆಯ ತನಕ ಹರಡಿರುತ್ತದೆ. ಅದೆಷ್ಟು ವಿರೂಪಗೊಳ್ಳುತ್ತದೆ ಊಹಿಸಿ. ನಂತರ ಉಳಿದ ಯಾವುದೇ ಭಾಗ ತೆಗೆಯದೇ ನಾಲ್ಕಾರು ಟನ್ ಕಟ್ಟಿಗೆ ಪೇರಿಸಿ ಪರಿಸರ ಅಸ್ನೇಹಿಯಾಗಿ ಸುಡುತ್ತಾರೆ.

ಹಾಗೆಯೇ ಅದು ದಟ್ಟ ಕಾಡಿನ ಅತ್ಯಂತ ಮಧ್ಯಭಾಗದಲ್ಲಿ ಸಲಗ ಸಾವನ್ನಪ್ಪಿದ್ದರೆ ಅಲ್ಲಿಯ ತನಕ ಆಸಿಡ್ ಹೇಗೆ ಹೊತ್ತೊಯ್ಯುವುದು? ಆ ಕಾಡಿನ ಓರೆ ಕೋರೆಗಳನ್ನು ಬಲ್ಲ ಸ್ಥಳೀಯರ ಕೈಗೆ ಕೊಡಲಿ, ಕುಡಗೋಲು ಕೊಟ್ಟು ಆ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ. ಅತ್ಯಂತ ಬರ್ಬರವಾಗಿ ಮುಖವನ್ನು ಕತ್ತರಿಸಿ, ಕೊಡಲಿ ಪೆಟ್ಟುಗಳಿಂದ ಘಾತಗೊಳಿಸಿ ಲಕ್ಷಾಂತರ ರುಪಾಯಿ ಕೋರೆಗಳನ್ನು ಕಿತ್ತುಕೊಂಡು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಲಾಗುತ್ತದೆ. ಕಾನೂನು ಪರಿಧಿಯಲ್ಲಿದ್ದುಕೊಂಡು, ಕೋರೆಗಳನ್ನು ಕತ್ತರಿಸಲು ಕಾನೂನು ಮುರಿಯುವ ಕಾಡುಗಳ್ಳರ ‘ಕೌಶಲ್ಯ’ ಬಳಸುತ್ತಿರುವುದು ಅನಾಗರಿಕ ಎಂದು ನನ್ನ ಭಾವನೆ.

ಇಗಾಗಲೇ ಮೈಸೂರಿನ ಅರಣ್ಯ ವೃತ್ತದಲ್ಲಿ ೫ ದೊಡ್ಡ ಕಬ್ಬಿಣದ ಪೆಟ್ಟಿಗೆಯಲ್ಲಿ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಕೋರೆಗಳನ್ನು ಸಂಗ್ರಹಿಸಿ ಇಡಲಾಗಿದೆ. ಅವುಗಳಿಗೆ ಸರಕಾರ ಯಾವ ಗತಿ ಕಾಣಿಸುವುದೋ ಕಾದು ನೋಡಬೇಕು. ತಂತ್ರಜ್ಞಾನ ಬೆಳೆದಿದೆ. ವೈಜ್ಞಾನಿಕ ಯುಗದಲ್ಲಿ ನಾವು ಬದುಕುತ್ತಿದ್ದೇವೆ. ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಈಜುತ್ತಿದ್ದೇವೆ. ಆದರೂ ಒಂದು ವಿದ್ಯುತ್ ಚಾಲಿತ ಅಥವಾ ಮಾನವ ಚಾಲಿತ ಗರಗಸ ಇಲಾಖೆಗೆ ತಂದುಕೊಳ್ಳಲು ಸಾಧ್ಯವಿಲ್ಲವೇ? ವೈಜ್ಞಾನಿಕ ರೀತ್ಯಾ ಕಾಡು ಪ್ರಾಣಿಗಳನ್ನು ಬಂಧಿಸಲು, ಪಳಗಿಸಲು, ಸತ್ತಾಗ ಯೋಗ್ಯ ರೀತಿ ಗೌರವದ ವಿದಾಯ ಹೇಳುವ ವಿಧಾನಗಳನ್ನು ಇಲಾಖೆ ಮೈಗೂಡಿಸಿಕೊಳ್ಳಬಾರದೇ?

ಪತ್ರಿಕೆಗಳು ಇಂತಹ ವಿಷಯಗಳ ಕುರಿತು ವರದಿಗಳನ್ನು ಪ್ರಕಟಿಸಿದಾಗ ಓದುಗರು ಕೊನೆ ಪಕ್ಷ ಸಂಪಾದಕರಿಗೆ ಪತ್ರ ಬರೆದಾದರೂ ಪ್ರತಿಭಟಿಸುವ ಗುಣ ರೂಢಿಸಿಕೊಳ್ಳೋಣ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
ಗಣೇಶ's picture

ಹರ್ಷವರ್ಧನರೆ,
ಆನೆಯ ಚಿತ್ರ ನೋಡಿ ಸಂಕಟವಾಯಿತು.
ಈ ಕಾರ್ಯ 'ವೀರಪ್ಪನ್ ಬಳಗ'ದ್ದೋ ಎಂದಿದ್ದೆ. ನಮ್ಮ ಅರಣ್ಯ ಇಲಾಖೆದ್ದು...ಕ್ರೌರ್ಯತೆಯಲ್ಲಿ ವೀರಪ್ಪನ್‌ಗಿಂತ ಒಂದು ದಂತ(ಕೈ) ಮೇಲೆ.
>>>ಪತ್ರಿಕೆಗಳು ಇಂತಹ ವಿಷಯಗಳ ಕುರಿತು ವರದಿಗಳನ್ನು ಪ್ರಕಟಿಸಿದಾಗ ಓದುಗರು ಕೊನೆ ಪಕ್ಷ ಸಂಪಾದಕರಿಗೆ ಪತ್ರ ಬರೆದಾದರೂ ಪ್ರತಿಭಟಿಸುವ ಗುಣ ರೂಢಿಸಿಕೊಳ್ಳೋಣ.
-ಸಂಪಾದಕರಿಗೆ ಓದುಗರು ಪತ್ರ ಬರೆದಿರುತ್ತಾರೆ. ಸ್ಥಳದ ಅಭಾವದಿಂದ ಪ್ರಕಟಿಸುವುದಿಲ್ಲ. ಕೊನೇಪಕ್ಷ ೫-೬ ಮಂದಿ ವಿರೋಧಿಸಿ ಪತ್ರ ಬರೆದಿದ್ದಾರೆ ಎಂದಾದರೂ ಬರೆಯಬಹುದಲ್ವಾ? ಊಹೂಂ..
ಬ್ಲಾಗೇ ಗತಿ.
-ಗಣೇಶ.

shaamala's picture

ಅಬ್ಬಾ ಎಂಥಾ ಘೋರ! ಈ ರೀತಿ ಮಾಡಲು ಹೇಗೆ ಮನಸ್ಸು ಬರತ್ತೆ? ರೈಥರನ್ನೆಲ್ಲ ಚೀನಾ ದೇಶಕ್ಕೆ ತರಬೇತಿಗೆ ಕಳಿಸಿದ ಹಾಗೆ ಅರಣ್ಯ ಇಲಾಖೆಯವರನ್ನೂ ಅಮೆರಿಕಾಗೆ ಅಥವಾ ಇನ್ಯಾವುದಾದರೂ 'ಮುಂದುವರಿದ' ದೇಶಕ್ಕೆ ಕಳಿಸಬೇಕು. ಅಮೇರಿಕಾದಿಂದ ಯುದ್ಧ ಸಾಮಗ್ರಿ ತರಿಸುವುದನ್ನು ಕಡಿಮೆ ಮಾಡಿ ಇಂತಹ ಇಲಾಖೆಗಳ ಉಪಯೋಗಕ್ಕೆ ಬೇಕಾಗುವ ಆಧುನಿಕ ಉಪಕರಣಗಳನ್ನು ತರಿಸಬೇಕು. ಇದು ಯಾವ ಪಾರ್ಟಿ ಅಧಿಕಾರಕ್ಕೆ ಬಂದರೆ ನಡೆಯುವ ಕೆಲಸ?

ಶಾಮಲ

harshavardhan v.sheelavant's picture

ಸು.ಶ್ರೀ. ಶ್ಯಾಮಲಾ ಅವರೇ,

ಅಂತಹ ತಂತ್ರಜ್ಞಾನಕ್ಕೆ ನಮ್ಮಲ್ಲಿ ಕೊರತೆ ಇಲ್ಲ. ನಮ್ಮವರ ಮನಸ್ಸು ‘ಟೆಕ್ನೋ ಸೇವಿ’ ಯಾಗಲು ತಯಾರಿಲ್ಲ. ಮೇಲಾಗಿ ಅರಣ್ಯ ಇಲಾಖೆ ಬದ್ಧತೆ ಮತ್ತ್ತು ಸಿದ್ಧತೆಗಳು ಪ್ರಶ್ನಾರ್ಹವಾಗಿವೆ. ಕಾಳಜಿ, ಕಳಕಳಿ ಹಾಗು ಮಾನವೀಯತೆ..ಹೌದು ಈ ಶಬ್ದಗಳು ಅದೆಷ್ಟೋ ಸವಕಲಾಗಿದ್ದರೂ ಅವನ್ನೇ ನಾನಿಲ್ಲಿ ಬಳಸಬೇಕು. ಇವ್ಯಾವು ಅವರಿಗೆ ಇದ್ದಂತಿಲ್ಲ. ನಾವು ಪಡೆಯುವ ಡಿಗ್ರಿ ಬೇರೆ..ಬದುಕಿನ ಉದಾತ್ತತೆ ಅನುಭೂತಿಸುವ ಶಿಕ್ಷಣ ಬೇರೆ.

ನಾವೇ ಇನ್ನು ನಾಗರಿಕ ಪತ್ರಕರ್ತರಾಗೋಣ. ಇಂತಹ ಅನಾಗರಿಕ ವರ್ತನೆಗಳು ಕಂಡುಬಂದಲ್ಲೆಲ್ಲ ಖಂಡಿಸೋಣ. ಲೇಖನ ಬರೆದು ಬಿಸಿ ಮುಟ್ಟಿಸಲು ಸಿದ್ಧರಾಗೋಣ. ಆಗ ನೋಡಿ..ನಾಗರಿಕ ಪತ್ರಿಕೋದ್ಯಮದ ಮಹಿಮೆ.

harshavardhan v.sheelavant's picture

ಆತ್ಮೀಯ ಗಣೇಶ್,

ಸಂಪಾದಕರು ಬೇಸರಿಸಿಕೊಂಡರೂ ಪರವಾಗಿಲ್ಲ. ನಮ್ಮ ಒಂದು ಪ್ರತಿರೋಧ ದಾಖಲಾಗಲಿ ಎಂಬ ಕೂಗು ನನ್ನದು. ಕಾಡಾನೆ ಮಾತ್ರವಲ್ಲ ಯಾವುದೇ ಬಹುಮೂಲ್ಯ ಪ್ರಾಣಿ ಅಸುನೀಗಿದರೂ ಅದಕ್ಕೆ ಸಲ್ಲುವ ಗೌರವ ಈ ಪರಿಯದ್ದೇ. ಪ್ರಜ್ಞಾವಂತರಾದರೂ ಇಂತಹ ಹೇಯ ಕೃತ್ಯಗಳನ್ನು ಪ್ರಶ್ನಿಸುವಂತಾದರೆ ಅಧಿಕಾರಸ್ಥ ಮಹನೀಯರು ಮೈಯೆಲ್ಲ ಕಣ್ಣಾಗಿ ಕರ್ತವ್ಯ ನಿರ್ಬಹಿಸುತ್ತಾರೆ.

ಪ್ರತಿಕ್ರಿಯೆಗೆ ಧನ್ಯವಾದ.

nkumar's picture

ಹರ್ಷವರ್ಧನರೆ,

ಆನೆ ಚಿತ್ರ ನೋಡಿ ತುಂಬಾ ಬೇಸರವಾಯಿತು. ಸುಬ್ರಮಣ್ಯ ದೇವಸ್ಥಾನದ ಆನೆ ತೀರಿಕೊಂಡಾಗ ಇಡಿ ಊರೇ ಕಣ್ಣೀರು ಸುರಿಸಿತ್ತು. ಪಾಪ ಈ ಆನೆ ಬಗ್ಗೆ ಮರುಕಪಡುವವರು ಯಾರು ಇಲ್ಲವೇನೋ?

ಅರಣ್ಯದ ಅಧಿಕಾರಿಗಳು ಅದರ ದಂತದಿಂದ ಬೇಕಾದಷ್ಟು ಲಾಭ ಗಳಿಸಿರಬಹುದು.

-- ನಂದಕುಮಾರ

harshavardhan v.sheelavant's picture

ಆತ್ಮೀಯ ಎನ್.ಕುಮಾರ್,

ಇಲ್ಲಿ ಕಾಡಿನ ಸಾಕು ತಂದೆಯಾದ ಆ ಭಗಂತನೇ ಕಣ್ಣೀರು ಸುರಿಸಿರಬೇಕು. ಏಕೆಂದರೆ ಅದರ ಪಾಲಕರು ಇಷ್ಟು ನಿರ್ದಯವಾಗಿದ್ದಾರೆ. ಬಹುಶ: ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದರೆ ಹೀಗಾಗಲಾರದು. ಸಹೋದ್ಯೋಗಿಗಳಿಗೆ ಆಜ್ಞೆ ನೀಡಿ ತಮ್ಮ ಪಾಲಿನ ಜವಾಬ್ದಾರಿ ಕಳಚಿಕೊಂಡರಾಯಿತು ಎಂದುಕೊಂಡಿದ್ದಕ್ಕೆ ಈ ಪರಿಯ ಗೌರವ ಆ ಸಲಗಕ್ಕೆ ಸಂದಿದೆ. ಹಾಗೆ ದಂತವನ್ನು ಇಲಾಖೆಯವರು ಕಬಳಿಸಲು ಸಾಧ್ಯವಿಲ್ಲ. ಕಾನೂನಿನ ಅನ್ವಯ ಮಹಜರು ನಡೆಸಿ ಪಂಚರ ಸಮ್ಮ್ಮುಖದಲ್ಲಿ ವರದಿ ಸಿದ್ಧಗೊಳ್ಳುತ್ತದೆ.

anil.ramesh's picture

ಛೇ! ಛೇ! ಛೇ! :(

ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ

ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ
ಒಳ್ಳೇದೆಲ್ಲ ಬೇಕು ಎಂಬ ಛಲದಲ್ಲಿ

ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ

-ಅನಿಲ್.

harshavardhan v.sheelavant's picture

ಆತ್ಮೀಯ ಅನಿಲ್,

ತಮ್ಮ ಈ ಕವನ ನನ್ನ ಇಡೀ ಲೇಖನಕ್ಕೆ ಸಮವಾಗಿದೆ. ಪುಟವಿಟ್ಟಂತಾಗಿದೆ. ಪ್ರತಿಕ್ರಿಯೆಗೆ ಧನ್ಯವಾದಗಳು.

anil.ramesh's picture

ಈ ಗೀತೆ ಗಿರಿಕನ್ಯೆ ಚಿತ್ರದ್ದು.

ಕವನ ನನ್ನದಲ್ಲ :)

ಅಲ್ಲಿ ಹಾಕಲು ಮರೆತೆ.

-ಅನಿಲ್.

harshavardhan v.sheelavant's picture

ಆತ್ಮೀಯ ಅನೀಲ್,

ಇರಲಿ ಬಿಡಿ. ಆದರೆ ಸಕಾಲಿಕವಾಗಿ ಆ ಮೂರು ಸಾಲುಗಳನ್ನು ನೆನಪಿಸಿಕೊಂಡಿದ್ದೀರಲ್ಲ ಅದು ಶ್ಲಾಘನೀಯ.

palachandra's picture

ಹರ್ಷವರ್ಧನ್,
ನನಗೆ ಈ ಫೋಟೋ ನೋಡೋಕೆ ಆಗ್ತಾ ಇಲ್ಲ, ಮತ್ತೆ ಲೇಖನ ಓದೋಕೂ.. ಆದರೂ ನನ್ನ ಸಂತಾಪ
--
PaLa

harshavardhan v.sheelavant's picture

ಆತ್ಮೀಯ ಫಾಲಚಂದ್ರ,

ನಿಜಕ್ಕೂ ಅದು ಖೇದಕರ. ನಿಮ್ಮ ಅಭಿಪ್ರಾಯವೇ ನನ್ನದೂ. ಆದರೆ ಗಟ್ಟಿ ಧೈರ್ಯಮಾಡಿ ಒಬ್ಬರಾದರೂ ವಿಷಯ ಎತ್ತಿಕೊಳ್ಳುವುದು ಅತ್ಯವಶ್ಯವಾಗಿತ್ತು. ಹಾಗಾಗಿ. ನಿಜಕ್ಕೂ ಸಂಪದಿಗರ ಮನಕಲಕುವ ಉದ್ದೇಶ ನನ್ನದಾಗಿರಲಿಲ್ಲ. ವಿಷಯದ ಗಾಂಭೀರ್ಯತೆ ತೋರ್ಪಡಿಸುವುದಾಗಿತ್ತು.

ಪ್ರತಿಕ್ರಿಯೆಗೆ ಧನ್ಯವಾದ.