ಮೇಲ್ಮಣ್ಣು ಎಂಬ ಬಂಗಾರ (ರೈತರೇ ಬದುಕಲು ಕಲಿಯಿರಿ-೬)
(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)
ಹೊಲದಲ್ಲಿರುವ ಮೇಲ್ಮಣ್ಣು ನಿಜಕ್ಕೂ ಅಮೂಲ್ಯ ಸಂಪತ್ತು. ಹಾಲಿನ ಸತ್ವ ಕೆನೆಯಲ್ಲಿರುವಂತೆ ಭೂಮಿಯ ಸತ್ವ ಮೇಲ್ಪದರದ ಮಣ್ಣಿನಲ್ಲಿರುತ್ತದೆ.
ಸುಭಾಷ ಪಾಳೇಕರ ಪ್ರಕಾರ ಭೂಮಿಯ ಮೇಲ್ಪದರದ ೪ರಿಂದ ೫ ಇಂಚು ಮಣ್ಣು ಭೂಮಿಯ ಕೆನೆ ಇದ್ದಂತೆ. ಅತ್ಯಂತ ಸತ್ವಯುತವಾಗಿರುವ ಈ ಮಣ್ಣು ಸೂಕ್ಷ್ಮಜೀವಿಗಳ ಆವಾಸಸ್ಥಾನ. ಕೃಷಿ ತ್ಯಾಜ್ಯಗಳು ಪೋಷಕಾಂಶಗಳಾಗಿ ಪರಿವರ್ತನೆಯಾಗುವುದು ಇಲ್ಲಿಯೇ. ಈ ೪ರಿಂದ ೫ ಇಂಚು ಆಳದ ಮಣ್ಣೇ ನೀರನ್ನು ಹೀರಿಕೊಂಡು ಆಳಕ್ಕೆ ಕಳಿಸುವುದು. ಎರೆಹುಳು ತನ್ನ ಹಿಕ್ಕೆ ಬಿಡುವುದು ಈ ಮಣ್ಣಿನಲ್ಲಿಯೇ. ಬೀಜ ಮೊಳಕೆಯೊಡೆಯಲು ಬಳಸುವುದು ಈ ಮಣ್ಣನ್ನೇ. ಕೃಷಿಯ ಶೇ.೯೦ರಷ್ಟು ಜೀವಜಾಲ ತನ್ನ ಅಸ್ತಿತ್ವಕ್ಕೆ ಮೇಲ್ಪದರದ ಈ ಮಣ್ಣನ್ನೇ ಅವಲಂಬಿಸಿದೆ.
ಹೀಗಿರುವಾಗ ಈ ಭಾಗಕ್ಕೆ ಎರಚುವ ರಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳು ಸೂಕ್ಷ್ಮಜೀವಿಗಳನ್ನು ಕೊಂದುಬಿಡುವುದರಿಂದ ಮಣ್ಣಿನ ಸತ್ವ ಕಡಿಮೆಯಾಗುತ್ತದೆ. ಅಲ್ಲದೇ ಆಳವಾದ ಉಳುಮೆ ಮಾಡುವುದರಿಂದ ಅಮೂಲ್ಯ ಮೇಲ್ಮಣ್ಣು ಭೂಮಿಯ ಕೆಳಕ್ಕೆ ಹೋಗಿ ವ್ಯರ್ಥವಾಗುತ್ತದೆ. ಮಳೆ ನೀರಿಗೆ ತಡೆ ಒಡ್ಡುವ ಕೃಷಿ ತ್ಯಾಜ್ಯಗಳು ಹಾಗೂ ಮುಚ್ಚುಗೆ ಹೊಲದಲ್ಲಿ ಇಲ್ಲದಿದ್ದರೆ ನೀರಿನೊಂದಿಗೆ ಮೇಲ್ಮಣ್ಣೂ ಹರಿದುಹೋಗಿ ರೈತನಿಗೆ ತುಂಬಲಾರದ ನಷ್ಟ ಉಂಟಾಗುತ್ತದೆ.
ಆದ್ದರಿಂದ ಮೇಲ್ಮಣ್ಣನ್ನು ಜತನದಿಂದ ರಕ್ಷಿಸಬೇಕು. ಇದು ನಮ್ಮ ಭೂಮಿಗೆ ಇರುವ ಮೊದಲ ಹೊದಿಕೆ. ಕೃಷಿ ತ್ಯಾಜ್ಯ ವಸ್ತುಗಳಿಂದ ಭೂಮಿಯನ್ನು ಮುಚ್ಚುವ ಮೂಲಕ ಸೂಕ್ಷ್ಮಜೀವಿಗಳು ಬದುಕುವ ವಾತಾವರಣ ಸೃಷ್ಟಿಸಬೇಕು. ಈ ರೀತಿಯ ಹೊದಿಕೆ ಇರುವಾಗ ಸೂರ್ಯನ ಬಿಸಿಲು ನೇರವಾಗಿ ಮಣ್ಣಿನ ಮೇಲೆ ಬೀಳುವುದಿಲ್ಲ. ಮಳೆ ಬಿದ್ದಾಗ ಅದನ್ನು ಹೀರಿಕೊಳ್ಳುವ ಕೃಷಿ ತ್ಯಾಜ್ಯ ನೀರು ಇಂಗಲು ಅವಕಾಶ ಮಾಡಿಕೊಡುತ್ತದೆ. ಮಳೆ ನೇರವಾಗಿ ಮಣ್ಣಿನ ಮೇಲೆ ಬೀಳದಂತೆ ಕಾಪಾಡುತ್ತದೆ. ಎಲ್ಲಕ್ಕಿಂತ ಮುಖ್ಯ: ಅದು ನೀರನ್ನು ಬೇಗ ಆವಿಯಾಗಲು ಬಿಡುವುದಿಲ್ಲ. ಮುಚ್ಚುಗೆ ಎಂಬುದು ಮೇಲ್ಮಣ್ಣು ಹಾಗೂ ವಾತಾವರಣದ ನಡುವೆ ಪೊರೆಯಂತೆ, ಅಮ್ಮನ ಸೆರಗಿನಂತೆ ಕೆಲಸ ಮಾಡುವ ಮೂಲಕ ಸಸ್ಯಗಳ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸುತ್ತದೆ.
ಇವೆರಡು ಹೊದಿಕೆಗಳ ಜತೆಗೆ, ವಿವಿಧ ಎತ್ತರದ, ಅವಧಿಯ ಅಂತರ ಬೆಳೆ ಹಾಗೂ ಮಿಶ್ರ ಬೆಳೆಗಳನ್ನು ಹಾಕುವ ಮೂಲಕ ನಾವು ಭೂಮಿಗೆ ಜೀವಂತ ಹೊದಿಕೆಯನ್ನು ಒದಗಿಸಬಹುದು. ಹಬ್ಬುತ್ತ ಹೋಗುವ ಬಳ್ಳಿಯಂತಹ ಬೆಳೆಗಳ ಜತೆಗೆ ಶೇಂಗಾ, ಕಡಲೆಯಂತಹ ನೆಲಮಟ್ಟದ ಬೆಳಗಳನ್ನು, ಅವಕ್ಕಿಂತ ಎತ್ತರವಾದ ಭತ್ತ, ಗೋದಿ, ಅಲಸಂದೆ, ಮೆಣಸಿನಕಾಯಿ, ಟೊಮ್ಯಾಟೋ ಬೆಳೆಗಳನ್ನು ಬೆಳೆಯಬಹುದು. ಒಂದು ವೇಳೆ ಹತ್ತಿ, ರಾಗಿ, ತೊಗರಿಯಂತಹ ಬೆಳೆಗಳನ್ನು ಹಾಕಿದ್ದರೆ ಜತೆಗೆ ಜೋಳ, ಬಾಳೆ, ಕಬ್ಬು ಮುಂತಾದವನ್ನು ಬೆಳೆಯುವ ಮೂಲಕ ಭೂಮಿಗೆ ಸಹಜ ಮುಚ್ಚುಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇವುಗಳ ಜತೆಗೆ ನುಗ್ಗೆಯಂತಹ ಬಲೆಬಲೆಯಾಗಿರುವ ಮರಗಳನ್ನು ಬೆಳೆಸುವುದರಿಂದ ವರ್ಷದ ಎಲ್ಲ ಕಾಲದಲ್ಲಿಯೂ ಸಹಜ ಮುಚ್ಚುಗೆ ಭೂಮಿಗೆ ಲಭ್ಯವಾಗುತ್ತದೆ.
ದುರಂತವೆಂದರೆ, ಭೂಮಿಯನ್ನು ಉಳುಮೆ ಮಾಡಿ, ಮಣ್ಣನ್ನು ಜಾಲಾಡುವ ಮೂಲಕ ಎರೆಹುಳುವಿಗೆ ನಾವು ಬದುಕುವ ಅವಕಾಶವನ್ನೇ ಕೊಟ್ಟಿಲ್ಲ. ಎಲ್ಲಿಯವರೆಗೆ ಬಿಸಿಲಿನ ಪ್ರಖರತೆ ನೇರವಾಗಿ ಹೊಲದ ಮಣ್ಣಿನ ಮೇಲೆ ಬೀಳುತ್ತಿರುತ್ತದೋ ಅಲ್ಲಿಯವರೆಗೆ ಎರೆಹುಳು ಹೊರಗೆ ಬರದೇ ಭೂಮಿಯಾಳದ ತಂಪಿನಲ್ಲಿ ಕೂತುಬಿಡುತ್ತದೆ. ಒಂದು ವೇಳೆ ಹೊಲದಲ್ಲಿ ರಾಸಾಯನಿಕ ಗೊಬ್ಬರ ಹಾಕಿದ್ದರೆ, ಕೀಟನಾಶಕ ಸಿಂಪಡಿಸಿದರೆ, ಮೇಲ್ಮೈಯಲ್ಲಿರುವ ಎರೆಹುಳುಗಳು ಸತ್ತು ಹೋಗುತ್ತವೆ. ಆಹಾರದ ಕೊರತೆಯಿಂದಾಗಿ, ಒಳಗಿರುವ ಎರೆಹುಳುಗಳು ನಿಧಾನವಾಗಿ ಸಾಯುತ್ತವೆ, ಇಲ್ಲವೇ ಪಕ್ಕದ ಹೊಲಗಳಿಗೆ ವಲಸೆ ಹೋಗುತ್ತವೆ.
ಆದ್ದರಿಂದ ನಿಮ್ಮ ಹೊಲದಲ್ಲಿ ಮುಚ್ಚುಗೆ ಇರಲಿ. ಇದು ನೀರನ್ನು ಹೀರಿಕೊಳ್ಳುತ್ತದೆ. ಬಿಸಿಲನ್ನು ತಡೆಯುತ್ತದೆ. ಕೋಟ್ಯಂತರ ಸೂಕ್ಷ್ಮಜೀವಿಗಳ ವಾಸಿಸುವ ತಾಣವಾಗಿ ಮಾರ್ಪಡುತ್ತದೆ. ಭೂಮಿಯಲ್ಲಿ ರಾಸಾಯನಿಕಗಳನ್ನು ಹಾಕಬೇಡಿ. ಆಗ ನೈಸರ್ಗಿಕ ವಾತಾವರಣ ಏರ್ಪಡುವುದರಿಂದ ಭೂಮಿಯಾಳದಲ್ಲಿರುವ ಎರೆಹುಳು ತಾನಾಗಿಯೇ ಮೇಲೆ ಬರುತ್ತದೆ. ಪ್ರತಿ ಬಾರಿ ಹೊಸ ರಂಧ್ರ ಕೊರೆಯುತ್ತದೆ. ಮಣ್ಣಿನಲ್ಲಿರುವ ಕೃಷಿ ತ್ಯಾಜ್ಯವನ್ನು ತಿಂದು ಅದನ್ನು ಗೊಬ್ಬರವಾಗಿ ಮಾರ್ಪಡಿಸುತ್ತದೆ.
ಎರೆಹುಳು ಕೊರೆದ ರಂಧ್ರಗಳ ಗೋಡೆಗಳಿಗೆ ಅದರ ಮೈಯಿಂದ ಸ್ರವಿಸುವ ದ್ರವ ಲೇಪನಗೊಳ್ಳುವುದರಿಂದ ರಂಧ್ರದ ಒಳಮೈ ಒಂದಿಷ್ಟು ಗಟ್ಟಿಯಾಗುತ್ತದೆ. ಇದರಿಂದ ಮಣ್ಣು ಕುಸಿಯುವುದಿಲ್ಲ. ಅಲ್ಲದೇ ಮಳೆ ನೀರು ಈ ರಂಧ್ರದ ಮೂಲಕ ಭೂಮಿಯೊಳಗೆ ಇಳಿಯುವುದು ಸುಲಭವಾಗಿ ಮಳೆ ನೀರು ಸಂಗ್ರಹ ತನಗೆ ತಾನೇ ನಡೆಯುತ್ತದೆ. ಇದಕ್ಕಾಗಿ ನೀವು ಪ್ರತ್ಯೇಕ ಖರ್ಚು ಮಾಡಬೇಕಿಲ್ಲ.
ಎರೆಹುಳುವಿನ ಸ್ರಾವಕದಲ್ಲಿ ಗಿಡಗಳ ಬೆಳವಣಿಗೆಗೆ ಬೇಕಾದ ಎಲ್ಲ ರೀತಿಯ ಪ್ರಚೋದಕಗಳು, ಅಮಿನೋ ಆಸಿಡ್‌ಗಳು ಹಾಗೂ ಲಘುಪೋಷಕಾಂಶಗಳು ಇವೆ. ಸಸ್ಯ ದೊಡ್ಡದಾಗಿ ಅದರ ಬೇರುಗಳು ಭೂಮಿಯಾಳಕ್ಕೆ ಇಳಿಯುವಾಗ, ಈ ರಂಧ್ರದ ಗೋಡೆಯಲ್ಲಿರುವ ಮಿತ್ರ ರಾಸಾಯನಿಕಗಳನ್ನು ಹೀರಿಕೊಂಡು ಚೆನ್ನಾಗಿ ಬೆಳೆಯುತ್ತವೆ. ಈ ರಂಧ್ರದ ಮೂಲಕ ಗಾಳಿಯಾಡುವುದರಿಂದ ಮಣ್ಣು ಉಸಿರಾಡಬಲ್ಲದು, ನೀರು ಕುಡಿಯಬಲ್ಲದು, ಕೃಷಿತ್ಯಾಜ್ಯಗಳ ಆಹಾರ ಸೇವಿಸಿ ಸಮೃದ್ಧವಾಗಬಲ್ಲುದು.
ಇಂತಹ ಮಣ್ಣು ಸಹಜವಾಗಿ ಹೆಚ್ಚು ನೀರನ್ನು ಹಿಡಿದಿಡುತ್ತದೆ. ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಕೋಟಿಕೋಟಿ ಸೂಕ್ಷ್ಮಜೀವಿಗಳು ವಾಸಿಸಲು ಬೇಕಾದ ವಾತಾವರಣ ನಿರ್ಮಾಣವಾಗುತ್ತದೆ. ಇವೆಲ್ಲ ನೈಸರ್ಗಿಕ ಚಟುವಟಿಕೆಯಿಂದಾಗಿ ಮಣ್ಣು ಪುಷ್ಠಿಕರವಾಗಿ, ಜೀವಂತಿಕೆಯಿಂದ ನಳನಳಿಸುತ್ತದೆ. ಮೃದುವಾಗುತ್ತದೆ. ಯಾವ ರಾಸಾಯನಿಕವೂ ಕೊಡದ ಫಲವತ್ತತೆಯನ್ನು ಪಡೆದುಕೊಳ್ಳುತ್ತದೆ. ಬಿದ್ದ ಮಳೆಯನ್ನು ಹೀರಿಕೊಳ್ಳುವ, ಹಿಡಿದಿಟ್ಟುಕೊಳ್ಳುವ, ಅದನ್ನು ನೆಲದಾಳಕ್ಕೆ ಕಳಿಸುವ ಮೂಲಕ ಜೀವ ಚಟುವಟಿಕೆಯನ್ನು ಪೋಷಿಸುವ ಸಾಮರ್ಥ್ಯ ಮಣ್ಣಿಗೆ ಬರುತ್ತದೆ.
ಎರೆಹುಳುವಿನ ಇನ್ನೊಂದು ಪ್ರಮುಖ ಅನುಕೂಲತೆ ಅದರ ನಿರಂತರ ಚಟುವಟಿಕೆ. ಎರೆಹುಳು ವಿಶ್ರಾಂತಿ ತೆಗೆದುಕೊಳ್ಳದೇ ನಿರಂತರವಾಗಿ ಚಲಿಸುತ್ತಿರುತ್ತದೆ. ಇದು ಭೂಮಿಯೊಳಗೆ ದಬ್ಬಣ (ಸಾಧಾರಣ ಗಾತ್ರದ ಮೊಳೆ) ಗಾತ್ರದ ನೇಗಿಲಿನಿಂದ ನಿರಂತರವಾಗಿ ಉಳುಮೆ ಮಾಡುವುದಕ್ಕೆ ಸಮ. ಎರೆಹುಳು ವರ್ಷದ ಎಲ್ಲ ದಿನಗಳಲ್ಲಿಯೂ ಸ್ವಯಂಚಾಲಿತ ನೇಗಿಲಿನಂತೆ ಭೂಮಿಯೊಳಗೆ ಕೆಲಸ ಮಾಡುತ್ತಲೇ ಇರುವುದರಿಂದ ಅದು ಇರುವಲ್ಲಿ ಉಳುಮೆಯ ಅವಶ್ಯಕತೆ ಬಾರದು.
ಇನ್ನು ಅದರ ವಿಸರ್ಜನೆ(ಹಿಕ್ಕೆ)ಯಂತೂ ಅದ್ಭುತ ಗೊಬ್ಬರ. ಏಕೆಂದರೆ ಎರೆಹುಳು ತಿನ್ನುವುದು ನಮ್ಮ ಹೊಲದಲ್ಲಿಯ ಕೃಷಿ ತ್ಯಾಜ್ಯವನ್ನೇ. ಹೀಗಾಗಿ ನಮ್ಮ ಹೊಲದ ಸತ್ವ ನಮ್ಮಲ್ಲಿಯೇ ಉಳಿದಂತಾಗುತ್ತದೆ. ಅದರ ಗೊಬ್ಬರದಲ್ಲಿ ಸಾಮಾನ್ಯ ರಸಾಯನಿಕ ಗೊಬ್ಬರದಲ್ಲಿರುವುದಕ್ಕಿಂತ ೧೧ ಪಟ್ಟು ಹೆಚ್ಚು ಪೊಟ್ಯಾಷ್, ೭ ಪಟ್ಟು ಹೆಚ್ಚು ಸಾರಜನಕ (ನೈಟ್ರೋಜನ್), ೯ ಪಟ್ಟು ಹೆಚ್ಚು ರಂಜಕ, ೧೦ ಪಟ್ಟು ಹೆಚ್ಚು ಮ್ಯಾಗ್ನೀಷಿಯಂ, ೯ ಪಟ್ಟು ಹೆಚ್ಚು ಗಂಧಕ (ಸಲ್ಫರ್), ೮ ಪಟ್ಟು ಹೆಚ್ಚು ಸುಣ್ಣ ಹಾಗೂ ಇತರ ಪೋಷಕಾಂಶಗಳು ಕನಿಷ್ಠ ೧೦ ಪಟ್ಟು ಹೆಚ್ಚಾಗಿರುತ್ತವೆ. ಇಷ್ಟೊಂದು ಸತ್ವಯುತ ಗೊಬ್ಬರವನ್ನು ಯಾವ ರಸಾಯನಿಕ ಗೊಬ್ಬರವೂ ನೀಡದು. ಅದೂ ಉಚಿತವಾಗಿ!
ಹೀಗಿರುವಾಗ, ಆಳದ ಉಳುಮೆ ಮಾಡುವುದು, ಹೊಲದ ಕೃಷಿ ತ್ಯಾಜ್ಯಗಳನ್ನೆಲ್ಲ ಸಂಗ್ರಹಿಸಿ ಸುಡುವುದು, ಇಲ್ಲವೇ ಸಾಗಿಸುವುದು, ರಾಸಾಯನಿಕಗಳ ಸಿಂಪರಣೆ, ಗೊಬ್ಬರ ಹಾಕುವುದು ಏತಕ್ಕೆ? ಭೂಮಿತಾಯಿಯನ್ನು ಅದರ ಪಾಡಿಗೆ ಬಿಟ್ಟರೆ, ಖರ್ಚೇ ಮಾಡದೇ ಭೂಮಿ ಫಲವತ್ತಾಗುತ್ತದೆ. ಯಾವುದೂ ಅತಿಯಾಗದಂತೆ, ಒಂದು ವ್ಯವಸ್ಥೆ ಇನ್ನೊಂದು ವ್ಯವಸ್ಥೆಯನ್ನು ನಿಯಂತ್ರಿಸುತ್ತ ಹೋಗುತ್ತದೆ.
(ಮುಂದುವರಿಯುವುದು)
- ಚಾಮರಾಜ ಸವಡಿ
- Login or register to post comments
- 439 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version



RSS:
ಪ್ರತಿಕ್ರಿಯೆಗಳು
ಚಾಮರಾಜರೇ,
ಹಾಲಿನ ಕೆನೆಯ ಹೋಲಿಕೆ, ಚಿತ್ರ ಅರ್ಥವತ್ತಾಗಿದೆ. ನಮ್ಮೂರಲ್ಲಿ ರೊಟೇಟಿಂಗ್ ಬೇಸಾಯ ಮಾಡ್ತಾರಾದ್ರೂ (ಮಳೆಗಾಲದಲ್ಲಿ ಭತ್ತ, ಛಳಿಗಾಲದಲ್ಲಿ ಉದ್ದು, ನೆಲಗಡಲೆ, ಅವಡೆ ಮುಂತಾದ ದ್ವಿಧಳ ಧಾನ್ಯ) ಮಧ್ಯದಲ್ಲಿ ಮೇಲ್ಮಣ್ಣು ರಕ್ಷಣೆಗೆ ನುಗ್ಗೆ, ಬಾಳೆ ಮುಂತಾದ ಮರ ನಡೊದಿಲ್ಲ. ಪ್ರಯೋಗಿಸಿ ನೋಡಬಹುದು.
ಅಲ್ಲದೇ ದ್ವಿಧಳ ಧಾನ್ಯಗಳ ಬೇರಿನಲ್ಲಿ ಗಂಟು ಮಾಡಿಕೊಂಡು ಮನೆಮಾಡಿಕೊಂಡ ಸೂಕ್ಷಾಣು ಜೀವಿ (Rhizobium leguminosarum), ನೈಟ್ರೋಜನ್ (ಸಾರಜನಕ) ಹೆಚ್ಚುವಂತೆ ಮಾಡುತ್ತದೆ.
ನಿಮ್ಮ ಈ ಸರಣಿ ಚೆನ್ನಾಗಿ ಮೂಡಿಬರುತ್ತಿದೆ, ಧನ್ಯವಾದಗಳು
--
PaLa
ಚಳಿಗಾಲದಲ್ಲಿ ನಮ್ಮೂರಲ್ಲಿ ಕೆಲವರು ದ್ವಿದಳ ಧಾನ್ಯ ಬೆಳೆದರೆ, ಕೆಲವರು ಭತ್ತ ಬೆಳೆ ತೆಗೆಯುತ್ತಾರೆ. ಆದರೆ ಇತ್ತೀಚಿನ ಹವಾಮಾನ ವೈಪರೀತ್ಯದಿಂದಾಗಿ ಕೆಲವೊಮ್ಮೆ ಡಿಸೆಂಬರ್ ಸಮಯದಲ್ಲೂ ಮಳೆ ಬರುತ್ತದೆ. ಇದರಿಂದ ದ್ವಿದಳ ಬೆಳೆಗಳು ಕೊಚ್ಚಿ ಹೋಗುತ್ತವೆ. ೨೦೦೭ ರಲ್ಲಿ extended monsoon ಇಂದಾಗಿ ತುಂಬಾ ಕಡಿಮೆ ಮಂದಿ ದ್ವಿದಳ ಬೆಳೆ ಹಾಕಿದ್ದರು.
-- ನಂದಕುಮಾರ
ಹಾಗಾದ್ರೆ, ಏನೂ ಬೆಳಿಲೇ ಇಲ್ವ ಅತ್ವಾ ಮತ್ತೆ ಭತ್ತ ಹಾಕಿದ್ರಾ ಅವ್ರೆಲ್ಲಾ? ಘಟ್ಟದ ಮೇಲೆ ಕೂಡ ಈ ಪದ್ಧತಿ ಚಾಲ್ತಿಯಲ್ಲಿದೆ. ವರ್ಷಕ್ಕೆರಡು ಬಾರಿ ಭತ್ತ ಅಲ್ಲಿಯೂ ಸಹ.
--
PaLa
ಕೆಲವರು ಹಾಗೆ ಬಿಟ್ಟರೆ ಮತ್ತೆ ಕೆಲವರು ಜನವರಿ ತಿಂಗಳಿನಲ್ಲಿ ಕೈ ಹಾಕಿದರು. ಆದರೆ ಮಾರ್ಚ್ ತಿಂಗಳ ಅಕಾಲಿಕ ಮಳೆಯಿಂದಾಗಿ ಬಿತ್ತಿದ್ದು ಕೊಚ್ಚಿ ಹೋಯಿತು. ಪಾಪ ಹಳ್ಳಿ ಜನರು ಖರ್ಚು ಮಾಡಿದೆಲ್ಲ ನೀರು ಪಾಲಾಯಿತು. ಅದಕ್ಕೆ ಸರಿಯಾಗಿ ೨೦೦೮ರಲ್ಲಿ ಮುಂಗಾರು ಸಹ ಕೈ ಕೊಟ್ಟಿತು.
-- ನಂದಕುಮಾರ
ಛೇ, ಪಾಪ.. ಮಾಹಿತಿಗೆ ವಂದನೆಗಳು ನಂದಕುಮಾರರೇ
--
PaLa
ಪ್ರಕೃತಿ ವೈಪರಿತ್ಯ ತಡೆಯಲು ಪ್ರಯತ್ನಿಸಬಹುದಷ್ಟೇ. ಉಳಿದ ಸಮಯದಲ್ಲಿಯಾದರೂ ನೈಸರ್ಗಿಕ ಕೃಷಿ ಪದ್ಧತಿ ಇದ್ದರೆ, ಕೊಚ್ಚಿಕೊಂಡು ಹೋಗದ ಬೆಳೆಗಳಿಂದ ಆದಾಯ ಪಡೆಯಬಹುದು. ನಿರೀಕ್ಷಿಸಿ.
- ಚಾಮರಾಜ ಸವಡಿ
http://chamarajsavad...
ಥ್ಯಾಂಕ್ಸ್ ಪಾಲಚಂದ್ರ. ಈ ಬರಹಗಳು ನಿಮ್ಮ ಕ್ಯಾಮೆರಾ ಕಣ್ಣನ್ನು ಪ್ರಚೋದಿಸಲಿ ಎಂಬ ಆಸೆ ನನಗೆ.
ನಾನು ಹೇಳುತ್ತಿರುವ ಅಂಶಗಳು ನೈಸರ್ಗಿಕ ಕೃಷಿ ಆಶಯವನ್ನಷ್ಟೇ ಬಿಂಬಿಸುತ್ತವೆ. ಪ್ರದೇಶದಿಂದ ಪ್ರದೇಶಕ್ಕೆ ಬೆಳೆ ಪದ್ಧತಿ ಬದಲಾಗುತ್ತದೆ, ಅಷ್ಟೇ. ನಾನು ಪ್ರಸ್ತಾಪಿಸಿದ ಮುಚ್ಚುಗೆಯ ಮೂರನೇ ಹಂತ ಮಲೆನಾಡಿಗೆ ಅನ್ವಯವಾಗುವುದಿಲ್ಲ. ಆ ಕುರಿತು ನಂತರದ ಕಂತುಗಳಲ್ಲಿ ವಿವರವಾಗಿ ಪ್ರಸ್ತಾಪಿಸುತ್ತೇನೆ.
ದ್ವಿದಳ ಧಾನ್ಯಗಳ ಬೇರುಗಳ ಗಂಟಿನಲ್ಲಿರುವ ರೈಜೋಬಿಯಂ ಜೀವಾಣುಗಳು ಒಂದರ್ಥದಲ್ಲಿ ಮಣ್ಣಿನಲ್ಲಿರುವ ಸಾರಜನಕದ ಕಾರ್ಖಾನೆಗಳೇ ಸರಿ.
- ಚಾಮರಾಜ ಸವಡಿ
http://chamarajsavad...
ಅದ್ಬುತವಾಗಿ ಬಂದಿದೆ, ಆದರೇ, ಅದರ ಜೊತೆಗೆ, ತೇಜಸ್ವಿಯವರ, ಸಹಜ ಕೃಷಿಯಲ್ಲಿ ಪ್ರಸ್ತಾಪಿಸಿರುವ ಕೆಲವು ಅಂಶಗಳನ್ನು ತಾವು ಗಣನೆಗೆ ತೆಗೆದುಕೊಳ್ಳಬೇಕಿತ್ತು ಎನಿಸುತ್ತದೆ.
ಹರಿಶ್ ಬಾನುಗೊಂದಿ
ನಿಮ್ಮ ಸಲಹೆ ಚೆನ್ನಾಗಿದೆ ಹರೀಶ್. ಆದರೆ, ನೈಸರ್ಗಿಕ ಕೃಷಿ ದೊಡ್ಡ ವಿಷಯ. ಎಲ್ಲವನ್ನೂ ಇಲ್ಲಿ ಸೇರಿಸಿಕೊಳ್ಳದೇ, ಹಿಂದೆ ನಾನು ಬರೆದಿದ್ದ ಪುಸ್ತಕದ ಅಂಶಗಳನ್ನಷ್ಟೇ ಪ್ರಸ್ತಾಪಿಸುತ್ತಿದ್ದೇನೆ. ತೇಜಸ್ವಿಯವರ ’ಒಂದು ಹುಲ್ಲಿನ ಕ್ರಾಂತಿ’ ಈಗಾಗಲೇ ಸಾಕಷ್ಟು ಜನಪ್ರಿಯವಾಗಿದ್ದು, ಅದರ ಅಂಶಗಳ ಆಶಯವೇ ಇಲ್ಲಿಯೂ ವ್ಯಕ್ತವಾಗಿದೆ.
- ಚಾಮರಾಜ ಸವಡಿ
http://chamarajsavad...
ಚಾಮರಾಜ್
ನಾನು ನಿಮ್ಮ ಬದುಕಲು ಕಲಿಯಿರಿ ಎಂದು ನಮ್ಮ ಅನ್ನದಾತರಿಗೆ ನೀವು ನೀಡುತ್ತಿರುವ ವಿಚಾರಗಳು ಮತ್ತು ವಿಷಯಗಳು ಓದುತ್ತಲೇ ಬಂದಿದ್ದೇನೆ, ಆದ್ರೆ ನನ್ನ ಸಲಹೆ ಇವೆಲ್ಲವನ್ನು ಒಂದು ಸಮಗ್ರ ಲೇಖನವನ್ನಾಗಿಸಿ ಪತ್ರಿಕೆಯಲ್ಲಿ ಪ್ರಕಟಿಸಿದರೆ ತಲುಪಬೇಕಾದವರಿಗೆ ಸರಿಯಾಗಿ ತಲುಪಬಹುದೆಂದು ನನ್ನ ಅನಿಸಿಕೆ.
:)
ಯಾರು ಏನೆ ಹೇಳಿದರೂ ನಿನ್ನ ಮನಸ್ಸಿನಂತೆ ನಡೆ
ಅರವಿಂದ್
http://aravindnimmav...
http://abhimanihudug...
ಅರವಿಂದ್ ಅವರೇ, ಈ ಎಲ್ಲ ವಿಚಾರಗಳನ್ನು ಬಿಡಿಬಿಡಿಯಾಗಿ ಪತ್ರಿಕೆಗಳಲ್ಲಿ ಬರೆದಾಗಿದೆ. ತುಂಬ ಜನ ಈಗಲೂ ಬರೆಯುತ್ತಲೇ ಇದ್ದಾರೆ. ಈ ವಿಷಯ ಕುರಿತು ನಾನು ಪುಸ್ತಕವನ್ನೂ ಬರೆದಿದ್ದೇನೆ. ಅಂತರ್ಜಾಲದಲ್ಲೂ ಅದು ಹರಿಯಲಿ ಎಂದು ಇಲ್ಲಿ ಸೇರಿಸುತ್ತಿದ್ದೇನೆ.
- ಚಾಮರಾಜ ಸವಡಿ
http://chamarajsavad...
ಚಾಮರಾಜ್,
ಉತ್ತಮ ಲೇಖನ ಮಾಲಿಕೆಗೆ ಧನ್ಯವಾದಗಳು.
ಆದ್ರೂ ನಿಮ್ಮ ಮೇಲೆ ಒಂದು ಅನುಮಾನ! ನಮ್ಮೆಲ್ಲರನ್ನೂ ಕೃಷಿಕಡೆಗೆ ಪ್ರಚೋದಿಸಿ ನೀವು ಮಾತ್ರ ಬೆಂಗಳೂರಿನಲ್ಲೆ ಉಳಿದು ಬಿಡುವ ನಿಮ್ಮ ಹುನ್ನಾರಕ್ಕೆ ;-) (ತಮಾಷೆಗೆ ಸಾರ್)
ನೀವು ಹೇಳಿರುವ ಪದ್ದತಿಗಳನ್ನು ಅಳವಡಿಸಿಕೊಂಡರೆ ಎಷ್ಟೊಂದು ಖರ್ಚು ಕೂಡ ಕಡಿಮೆಯಾಗುತ್ತದೆಯಲ್ಲವೆ? ಪರಾವಲಂಭನೆಯೂ ಕಡಿಮೆಯಾಗುತ್ತದೆ.
ಉಳುಮೆ ಮಾಡದೆ, ಕಳೆ ಕೀಳದೆ, ಕೃತಕವಾಗಿ ನೀರು ಹರಿಸದೆ, ನೈಸರ್ಗಿಕವಾಗಿ ತೋಟ ಮಾಡಿ ಹೆಚ್ಚು ಆದಾಯ ಗಳಿಸುತ್ತಿದ್ದ ಧಾರವಾಡದ ಅನಿವಾಸಿ ಅಥವ ವಿದೇಶಿ ದಂಪತಿಗಳ ಬಗ್ಗೆ ಒಂದು ಲೇಖನವನ್ನು ಓದಿದ್ದೆ. ನಿಮ್ಮ ಲೇಖನಗಳನ್ನು ಓದಿದ ಮೇಲೆ ಅದು ನೆನಪಿಗೆ ಬಂತು ಯಾವ ಪತ್ರಿಕೆ ಮತ್ತು ಸಮಯ ನೆನಪಿಲ್ಲ.
ದಯವಿಟ್ಟು ತಾವು ಬರೆದಿರುವ ಈ ಪುಸ್ತಕ ಎಲ್ಲಿ ಸಿಗುತ್ತದೆ ಎಂದು ತಿಳಿಸಿ.
>>ಹಬ್ಬುತ್ತ ಹೋಗುವ ಬಳ್ಳಿಯಂತಹ ಬೆಳೆಗಳ ಜತೆಗೆ ಶೇಂಗಾ, ಕಡಲೆಯಂತಹ ನೆಲಮಟ್ಟದ ಬೆಳಗಳನ್ನು, ಅವಕ್ಕಿಂತ ಎತ್ತರವಾದ ಭತ್ತ, ಗೋದಿ, ಅಲಸಂದೆ, ಮೆಣಸಿನಕಾಯಿ, ಟೊಮ್ಯಾಟೋ ಬೆಳೆಗಳನ್ನು ಬೆಳೆಯಬಹುದು.
ಭತ್ತದೊಂದಿಗೆ ಮಿಶ್ರ ಬೆಳೆ? ಇದು ಪ್ರಾಯೋಗಿಕವೆನ್ನುವ ಬಗ್ಗೆ ನನಗೆ ತುಸು ಸಂಶಯವಿದೆ.
*ಅಶೋಕ್
ಹಬ್ಬುತ್ತ ಹೋಗುವ ಬಳ್ಳಿಯಂತಹ ಬೆಳೆಗಳ ಜೊತೆ... ಎಂಬ ಸಾಲು ಓದಿ ನಿಮಗೆ ಅನುಮಾನ ಏಕೆ ಬಂತು ಅಶೋಕ್? ಹಾಗೆ ನೋಡಿದರೆ ಭತ್ತ ನೀರಿನಲ್ಲಿ ಬೆಳೆಯುವ ಬೆಳೆಯೇ ಅಲ್ಲ. ಅದರ ಬಗ್ಗೆ ಮುಂದಿನ ಕಂತುಗಳಲ್ಲಿ ಬರೆಯಲಿದ್ದೇನೆ. ನಿಮ್ಮ ಸಂಶಯವನ್ನು ನಿವಾರಿಸಲು ಯತ್ನಿಸುತ್ತೇನೆ.
- ಚಾಮರಾಜ ಸವಡಿ
http://chamarajsavad...
ಭತ್ತ ನೀರಿನಲ್ಲಿ ಬೆಳೆಯುವುದಲ್ಲವೆಂದರೂ, ಅದಕ್ಕೆ ಬಿಸಿಲು ಹೆಚ್ಚು ಬೇಕು.
ನೆರಳಿದ್ದ ಜಾಗದಲ್ಲಿ ಇಳುವರಿ ಕುಂಠಿತವಾಗುವುದನ್ನು ನಾನು ಗಮನಿಸಿದ್ದೇನೆ.
*ಅಶೋಕ್
ಅಶೋಕ್ ಅವರೇ ಸರಿಯಾದ ಪ್ರಶ್ನೆ ಕೇಳಿದ್ದೀರಿ. ಇಲ್ಲಿ ಭತ್ತಕ್ಕೆ ನೆರಳು ಮಾಡುವುದಿಲ್ಲ. ಆಯಾ ಬೆಳೆಗಳಿಗೆ ಅನುಗುಣವಾಗಿ ಪದ್ಧತಿ ಬದಲಾಗುತ್ತದೆ. ಮುಚ್ಚುಗೆಯ ಒಟ್ಟಾರೆ ಆಶಯ ಬಿಂಬಿಸುವಾಗ ಭತ್ತದ ಉದಾಹರಣೆಯನ್ನೂ ಕೊಟ್ಟಿದ್ದೇನೆ. ಆದರೆ, ಭತ್ತದ ಜೊತೆ ಮಿಶ್ರಬೆಳೆ ಬೆಳೆಯಬಹುದು.
ಲೇಖನಮಾಲೆ ಯಾವುದೇ ನಿಶ್ಚಿತ ಪ್ರದೇಶದ ಬೆಳೆ ಪದ್ಧತಿಯನ್ನು ವಿವರಿಸುವುದಿಲ್ಲ. ನೈಸರ್ಗಿಕ ಕೃಷಿಯ ಒಟ್ಟು ಆಶಯವನ್ನಷ್ಟೇ ಬಿಂಬಿಸುತ್ತದೆ. ಆಯಾ ಪ್ರದೇಶದ ವಿಶಿಷ್ಟ್ಯತೆಗೆ ಅನುಗುಣವಾಗಿ ಆಸಕ್ತರು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಕುರಿತು ಸಮಗ್ರ ಲೇಖನಮಾಲೆಯ ನಂತರ ಚರ್ಚಿಸುವ ಉದ್ದೇಶವಿದೆ.
ನಿಮ್ಮ ಸಲಹೆಗಳನ್ನು ಖಂಡಿತ ಚರ್ಚಿಸುತ್ತೇನೆ. ಇತರ ಸಂಪದಿಗರೂ ಅದರಲ್ಲಿ ಪಾಲ್ಗೊಳ್ಳಲಿ ಎಂಬುದು ನನ್ನ ಆಶಯ.
- ಚಾಮರಾಜ ಸವಡಿ
http://chamarajsavad...
ನಿಮ್ಮ ಹೆಸರು ಮಜವಾಗಿದೆ ಪ್ರಸ್ಕಾ. :)
ನನಗೆ ಕೃಷಿ ಬಗ್ಗೆ ವೈಯಕ್ತಿಕ ಆಸಕ್ತಿ ಇದೆ. ಆದರೆ, ಮಗಳ ಚಿಕಿತ್ಸೆ ದೃಷ್ಟಿಯಿಂದ ಬೆಂಗಳೂರು ಸೇರಿಕೊಂಡಿದ್ದೇನೆ. ಅವಕಾಶ ಸಿಕ್ಕ ಕೂಡಲೇ ಮರಳಿ ಮಣ್ಣಿಗೆ. :)
ಮುಂದಿನ ಕಂತುಗಳಲ್ಲಿ ಬಹುತೇಕ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಕಾಯುತ್ತೀರಲ್ಲ?
- ಚಾಮರಾಜ ಸವಡಿ
http://chamarajsavad...
ಶ್ರೀ ಚಾಮರಾಜ್,
ಸಂಕ್ರಾಂತಿಗೆ ಮುನ್ನವೇ ಕೃಷಿಯಲ್ಲಿ ಕ್ರಾಂತಿಕಾರಕ ವಿಚಾರಗಳನ್ನು ತಿಳಿಸುತ್ತಿದ್ದೀರಿ.ಸಂಪದಿಗರೂ ಓದಿ ಪ್ರತಿಕ್ರಿಯಿಸುತ್ತಿದ್ದಾರೆ. ನಿಜವಾಗಿ ಸಂತಸವಾಗಿದೆ.ಆದರೆ ಹಳ್ಳಿ ರೈತನಿಗೆ ತಿಳಿಸಲು ಏನಾದರೂ ಮಾಡಬೇಕಲ್ಲಾ!!ಇದು ಹಳ್ಳಿಯಿಂದ ಬರುವ ಬೆಳೆಗಾಗಿ ಪಟ್ಟಣದಲ್ಲಿ ಕಾಯುತ್ತಾ ಕುಳಿತಿರುವ ವಿದ್ಯಾವಂತರ ಜವಾಬ್ದಾರಿ. ಏನಾದರೂ ಮಾಡಬೇಕಲ್ಲಾ!! ನಿಮಗೂ ಸಂಪದಿಗರೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು.
ಹರಿಹರಪುರಶ್ರೀಧರ್
ಶ್ರೀಧರ್ ಸರ್, ಎಲ್ಲೋ ಒಂದು ಕಡೆ ದೀಪ ಹಚ್ಚುತ್ತೇವೆ. ಅದರಿಂದ ಸ್ಫೂರ್ತಿ ಪಡೆದವರು ತಾವಿರುವಲ್ಲಿ ದೀಪ ಹೊತ್ತಿಸಿದರೂ ಸಾಕು, ಇಡೀ ಪ್ರದೇಶವೇ ಬೆಳಗುತ್ತದೆ. ಮುದ್ರಣ ಮಾಧ್ಯಮದಲ್ಲಿದ್ದಾಗ ಬರೆದ ವಿಚಾರಗಳಿವು. ಈಗ ಅವನ್ನೇ ಅಂತರ್ಜಾಲದಲ್ಲಿ ಹರಿಬಿಡುತ್ತಿದ್ದೇನೆ. ತಲುಪಬೇಕಾದವರಿಗೆ ಅವು ಖಂಡಿತವಾಗಿ ತಲುಪುತ್ತವೆ.
- ಚಾಮರಾಜ ಸವಡಿ
http://chamarajsavad...