ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

— ಡಿ.ವಿ.ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸಸ್ಯಗಳು ಹೇಗೆ ಬೆಳೆಯುತ್ತವೆ ಗೊತ್ತೇ? (ರೈತರೇ ಬದುಕಲು ಕಲಿಯಿರಿ-೭)

Sugarcane.JPG

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ
ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ
ದಾರಿ ತೋರುವ ಕೈಪಿಡಿ)

ಸಸ್ಯಗಳು ಹೇಗೆ ಬೆಳೆಯುತ್ತವೆ?

ಕೃಷಿ ಮಾಡುತ್ತಿರುವ ಹಾಗೂ ಮಾಡಲು ಹೊರಟ ಎಲ್ಲರೂ ಮೊದಲು ಕೇಳಿಕೊಳ್ಳಬೇಕಾದ
ಪ್ರಶ್ನೆಯಿದು. ಇದಕ್ಕೆ ಸಾಮಾನ್ಯವಾಗಿ ದೊರೆಯುವ ಉತ್ತರ ಎಂದರೆ ’ಮಳೆ (ನೀರು), ಬಿಸಿಲು
ಹಾಗೂ ಗೊಬ್ಬರದ ಮೂಲಕ’.

ನಿಜ. ಒಂದು ಗಿಡ ಬೆಳೆಯಬೇಕೆಂದರೆ ಅದಕ್ಕೆ ಬಿಸಿಲು, ನೀರು, ಗಾಳಿ ಹಾಗೂ ಗೊಬ್ಬರ
ಬೇಕೇ ಬೇಕು. ಒಂದೇ ಮಾತಿನಲ್ಲಿ ಹೇಳುವುದಾದರೆ ಪಂಚಭೂತಗಳು ಎಂದು ನಾವು ಕರೆಯುವ ನೀರು,
ಗಾಳಿ, ಆಕಾಶ, ಸೂರ್ಯನ ಬಿಸಿಲು ಹಾಗೂ ಮಣ್ಣು- ಈ ಐದೂ ಪ್ರಮುಖ ಅಂಶಗಳು ಗಿಡಗಳ
ಬೆಳವಣಿಗೆಗೆ ಬೇಕೇ ಬೇಕು. ಆದರೆ ಎಷ್ಟು ಪ್ರಮಾಣದಲ್ಲಿ ಬೇಕು ಎಂಬುದೇ ಕೃಷಿಯಲ್ಲಿ
ಅಡಗಿರುವ ರಹಸ್ಯ.

ಸುಭಾಷ ಪಾಳೇಕರ ಅವರ ಮಾತಿನಲ್ಲೇ ಹೇಳುವುದಾದರೆ, ಈ ಪ್ರಮಾಣದ ಮಹತ್ವ ಅರಿತುಕೊಂಡರೆ ಕೃಷಿಯ ರಹಸ್ಯವನ್ನೇ ತಿಳಿದಂತೆ.

ಗೊಬ್ಬರ ಹೆಚ್ಚು ಕೊಟ್ಟಷ್ಟೂ ಇಳುವರಿ ಹೆಚ್ಚು ಎಂಬ ಭ್ರಮೆ ನಮ್ಮ ರೈತರಲ್ಲಿದೆ.
ಇದಕ್ಕೆ ಕಾರಣ ನಮ್ಮ ಕೃಷಿ ವಿಜ್ಞಾನಿಗಳು. ಪ್ರತಿ ಬಾರಿ ಬೆಳೆ ಪಡೆದಾಗಲೂ ಭೂಮಿಯಿಂದ
ಹೊರಹೋಗುವ ಸತ್ವದ ಪ್ರಮಾಣ ಹೆಚ್ಚಿರುವುದರಿಂದ ಗೊಬ್ಬರದ ರೂಪದಲ್ಲಿ ಅದನ್ನು ಭೂಮಿಗೆ
ಹಿಂತಿರುಗಿಸಬೇಕು ಎಂಬುದು ವಿಜ್ಞಾನಿಗಳ ಪ್ರತಿಪಾದನೆ. 

ಆದರೆ ಇದು ಎಷ್ಟೊಂದು ಸುಳ್ಳು ಎನ್ನುವುದನ್ನು ಪಾಳೇಕರ್ ಅವರು ಕೆಳಗಿನ ಪ್ರಯೋಗದ ಮೂಲಕ ವಿವರಿಸುತ್ತಾರೆ.

ಒಂದು ಕ್ವಿಂಟಲ್ ಕಬ್ಬು ತೆಗೆದುಕೊಳ್ಳಿ. ಒಂದು ವಾರದ ಕಾಲ ಆ ಕಬ್ಬನ್ನು ತೀವ್ರ
ಬಿಸಿಲಿನಲ್ಲಿ ಒಣಗಿಸಿ. ಅದರೊಳಗೆ ಏನೂ ಹಸಿ ಉಳಿಯದಂತೆ ಒಣಗಿಸಿದ ನಂತರ ಕಬ್ಬನ್ನು
ಮತ್ತೆ ತೂಕ ಮಾಡಿ. ಈಗ ಅದರ ತೂಕ ಕೇವಲ ೨೨ ಕೆ.ಜಿ. ಮಾತ್ರ. ಅಂದರೆ ನೂರು ಕೆ.ಜಿ.
ಕಬ್ಬು ಒಣಗಿದ ನಂತರ ೨೨ ಕೆ.ಜಿ.ಗೆ ಇಳಿಯಿತು. ಉಳಿದ ೭೮ ಕೆ.ಜಿ. ಏನಿತ್ತು? ಮತ್ತು ಅದು
ಎಲ್ಲಿಗೆ ಹೋಯಿತು?

ಅದಕ್ಕೆ ಉತ್ತರ ಇಲ್ಲಿದೆ.

ಕಬ್ಬಿನಲ್ಲಿದ್ದ ನೀರು ಬಿಸಿಲಿಗೆ ಸಿಕ್ಕು ಆವಿಯಾಗಿ ವಾಪಸ್ ಪ್ರಕೃತಿಯನ್ನು ಸೇರಿಕೊಂಡಿತು. ಅಂದರೆ ಕಬ್ಬಿನ ಮೈಯಲ್ಲಿದ್ದ ಶೇ.೭೮ ಪಾಲು ನೀರು.

ಈಗ ಬಾಕಿ ಉಳಿದ ೨೨ ಕೆ.ಜಿ. ಕಬ್ಬಿಗೆ ಬೆಂಕಿ ಹಚ್ಚಿ. ಕೊನೆಗೆ ಉಳಿಯುವ ಬೂದಿಯನ್ನು
ತೂಕ ಹಾಕಿ. ಅದು ಸುಮಾರು ೧.೫ ಕೆಜಿ ಇರುತ್ತದೆ. ಅಂದರೆ ೨೦.೫ ಕೆ.ಜಿ. ತೂಕದಷ್ಟು
ಶಕ್ತಿ ಬೆಂಕಿ ಮತ್ತು ಗಾಳಿಯ ರೂಪದಲ್ಲಿ ವಾಪಸ್ ಪ್ರಕೃತಿಗೆ ಹಿಂತಿರುಗಿತು.

ಇದರರ್ಥ: ಒಂದು ಕ್ವಿಂಟಲ್ ಕಬ್ಬಿನಲ್ಲಿ ಇದ್ದುದು ನೀರಿನ ರೂಪದಲ್ಲಿ ೭೮ ಕೆ.ಜಿ.
ಮತ್ತು ಗಾಳಿ ಮತ್ತು ಸೂರ್ಯನ ಬೆಳಕಿನ ಶಕ್ತಿಯ ರೂಪದಲ್ಲಿ ಬಂದುದು ೨೦.೫ ಕೆ.ಜಿ. ಬಾಕಿ
ಉಳಿದ ೧.೫ ಕೆ.ಜಿ. ಬಂದಿದ್ದು ಭೂಮಿಯ ಮೂಲಕ. ಅಂದರೆ ಭೂಮಿಯ ಸತ್ವದ ಪ್ರಮಾಣ ಬೆಳೆಯ
ಶೇ.೧.೫ ಮಾತ್ರ.

ಆದರೆ ಈ ಒಂದು ಕ್ವಿಂಟಲ್ ಬೆಳೆ ಪಡೆಯಲು ನಾವು ಭೂಮಿಗೆ ಸುರಿಯುತ್ತಿರುವ ಗೊಬ್ಬರದ
ಪ್ರಮಾಣ ನೆನೆಸಿಕೊಂಡರೆ ಮೈ ನಡುಗುತ್ತದೆ. ಕೃಷಿ ವಿಜ್ಞಾನಿಗಳು ಹೇಳುತ್ತಿರುವುದು
ಮಹಾಸುಳ್ಳು ಎಂಬುದು ಗೊತ್ತಾಗುತ್ತದೆ. ಏಕೆಂದರೆ ನೀರು, ಗಾಳಿ ಮತ್ತು ಸೂರ್ಯನ ಶಕ್ತಿ
ನಿಸರ್ಗದಿಂದ ನಮಗೆ ಉಚಿತವಾಗಿ ದೊರೆಯುತ್ತಿದೆ. ನಾವು ನೀಡಬಹುದಾಗಿದ್ದು ಕೇವಲ ಶೇ.೧.೫
ಪ್ರಮಾಣದ ಸತ್ವ ಮಾತ್ರ. ಅಂದರೆ ಒಂದು ಕ್ವಿಂಟಲ್ ಕಬ್ಬು ಬೆಳೆಯಲು ಭೂಮಿಗೆ ಬೇಕಾದ
ಗೊಬ್ಬರದ ಪ್ರಮಾಣ ೧.೫ ಕೆಜಿ ಮಾತ್ರ.

ಆದರೆ ಈ ಗೊಬ್ಬರವನ್ನು ಕೂಡ ನಾವು ಹೊರಗಿನಿಂದ ತರಬೇಕಿಲ್ಲ. ಅದು ಭೂಮಿಯಲ್ಲಿಯೇ
ದೊರೆಯುತ್ತದೆ ಎನ್ನುತ್ತಾರೆ ಸುಭಾಷ ಪಾಳೇಕರ್. ಆಶ್ಚರ್ಯವೆನಿಸಿದರೂ ಈ ಮಾತು ಸತ್ಯ.
ಹೇಗೆಂದರೆ ಈ ಒಂದೂವರೆ ಕೆ.ಜಿ. ಸತ್ವದಲ್ಲಿ ಮುಕ್ಕಾಲು ಪಾಲಿಗಿಂತ ಹೆಚ್ಚು ಭಾಗ
ಭೂಮಿಯೊಳಗಿನ ಕೃಷಿತ್ಯಾಜ್ಯಗಳಿಂದಲೇ ದೊರಕುತ್ತದೆ. ಬಾಕಿ ಉಳಿದ ಕಾಲು ಭಾಗವನ್ನು
ಜೀವಾಮೃತದ ರೂಪದಲ್ಲಿ ನಾವು ಒದಗಿಸಬೇಕಷ್ಟೇ. (ಜೀವಾಮೃತದ ಬಗ್ಗೆ ಮುಂದಿನ ಅಧ್ಯಾಯದಲ್ಲಿ
ಹೆಚ್ಚಿನ ವಿವರಗಳಿವೆ).

ಸುಭಾಷ ಪಾಳೇಕರ ಅವರು ನೈಸರ್ಗಿಕ ಕೃಷಿಯನ್ನು ಶೂನ್ಯ ಬಂಡವಾಳದ ಕೃಷಿ ಎಂದು ಕರೆದಿರುವುದು ಈ ಹಿನ್ನೆಲೆಯಲ್ಲಿ.

(ಮುಂದುವರಿಯುವುದು)

- ಚಾಮರಾಜ ಸವಡಿ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
ASHOKKUMAR's picture

ಕುತೂಹಲಕಾರಿ ಮಾಹಿತಿ.ಶೂನ್ಯ ಬಂಡವಾಳದೆ ಕೃಷಿ ಅನ್ನುವ ಪದ ಹಣಕ್ಕೆ ಸಂಬಂಧ ಪ್ಪಟ್ಟದ್ದಲ್ಲವೇ?
*ಅಶೋಕ್

Chamaraj's picture

ಇಲ್ಲಿ ಬಂಡವಾಳ ಎಂದರೆ ಹಣ ಮತ್ತು ಸಮಯ.

- ಚಾಮರಾಜ ಸವಡಿ
http://chamarajsavad...

apr's picture

ಬರವಣಿಗೆ ತುಂಬ ಚೆನ್ನಾಗಿದೆ. ನೀವು ಕೊಟ್ಟ ಕಬ್ಬಿನ ಉದಾಹರಣೆ ಯೋಚಿಸುವಂತೆ ಮಾಡುತ್ತದೆ. ಆದರೆ ಅದು ಇನ್ನಷ್ಟು ತರ್ಕವನ್ನೂ ಬೇಡುತ್ತದೆ. ಮನುಷ್ಯನ ದೇಹವನ್ನು ಕೂಡ ಹೀಗೆ ಒಣಗಿಸಿ, ನಂತರ ಬೂದಿ ಮಾಡಿದರೆ ಸಿಗುವುದು ಇಂತಿಷ್ಟು ಕೆಲವೇ ಗ್ರಾಮ್ ಬೂದಿ ಎಂದಾದರೆ, ಮನುಷ್ಯನಿಗೆ ಆಹಾರ ಎಷ್ಟು ಕಡಿಮೆ ಸಾಕಾದೀತು - ಜೀವಿಸುವುದಕ್ಕೆ. ಪಾಳೇಕರ್ ವಿಧಾನವನ್ನು ಅನುಸರಿಸಿ ಯಶಸ್ಸು ಗಳಿಸಿದ ರೈತರ ಬಗ್ಗೆ ಪತ್ರಿಕೆಗಳಲ್ಲಿ ಬಂದ ಲೇಖನ ಓದಿ ಅಲ್ಲಿಗೆ ನಮ್ಮೂರಿನ ಹಲವು ರೈತರು ಹೋದರೆ ಅವರನ್ನು ಸಾಗ ಹಾಕಿದ್ದು, ಅವರ ಸಂಶಯಗಳಿಗೆ ಉತ್ತರಿಸದೇ ಜಾರಿಕೊಂಡದ್ದು ಈ ವಿಧಾನದ ಬಗ್ಗೆ ತುಸು ಸಂಶಯವನ್ನು ಉಂಟು ಮಾಡಿದ್ದು ಸುಳ್ಳಲ್ಲ. ಕಷ್ಟ ಅಂದರೆ ವಿಜ್ಞಾನಿಗಳನ್ನು ನಂಬುವಂತಿಲ್ಲ. ಸರಿ, ಇಲ್ಲೊಬ್ಬರು ಜೀವಾಮ್ರುತ ಉಣಿಸುವವರು ಮರೆಯಲ್ಲಿ ಸೊಸೈಟಿಯಿಂದ ರಾಸಾಯನಿಕಗಳನ್ನು ತರುವವರಿದ್ದಾರೆ. ಅಂಥವರು ಇನ್ನೂ ಅಪಾಯಕಾರಿ. ನಿಮ್ಮ ಲೇಖನ ನಿಜ ದಾರಿಯನ್ನು ವಿವರಿಸುತ್ತದೆ. ಪ್ರಯೋಗ ಮಾಡಿ, ಸರಿ ದಾರಿಯನ್ನು ರೈತರಾದ ನಾವು ಕಂಡುಕೊಳ್ಲಬೇಕಾಗುತ್ತದೆ. ಲೇಖನಗಳನ್ನು ಖುಷಿಯಿಂದ ಓದುತ್ತಿದ್ದೇನೆ.
ರಾಧಾಕೃಷ್ಣ

Chamaraj's picture

ಧನ್ಯವಾದಗಳು ರಾಧಾಕೃಷ್ಣ ಅವರೇ.

ನಿಮ್ಮನ್ನು ಕಾಡಿದ, ನಿಮಗೆ ಕಂಡ ವಿಷಯಗಳು ನನಗೂ ಕಾಡಿವೆ, ಕಂಡಿವೆ. ಅದಕ್ಕೆಂದೇ ಆಯಾ ಪ್ರದೇಶದ ಭೌತಿಕ ಲಕ್ಷಣಗಳಿಗೆ ಅನುಗುಣವಾಗಿ ರೈತರೇ ತಕ್ಕ ದಾರಿಯನ್ನು ಕಂಡುಕೊಳ್ಳಬೇಕಾಗುತ್ತದೆ ಎಂದು ನಾನು ಸ್ಪಷ್ಟಪಡಿಸಿದ್ದೇನೆ.

ನೈಸರ್ಗಿಕ ಕೃಷಿ ಎಂಬುದು ವಿದ್ಯುತ್ತಿನಂತೆ. ಆಯಾ ಉಪಕರಣಗಳಿಗೆ ಸೂಕ್ತವಾಗಿ ಅದನ್ನು ಹರಿಸಬೇಕಾಗುತ್ತದೆ. ಆಯಾ ಪ್ರದೇಶದ ಆಸಕ್ತರು ಈ ನಿಟ್ಟಿನಲ್ಲಿ ಪ್ರಯೋಗ ಮಾಡಿ ಫಲಿತಾಂಶ ವಿವರಿಸಿದರೆ, ಅದನ್ನೂ ಸೇರಿಸಿಕೊಂಡು ಸಮಗ್ರ ಕೃಷಿ ಕೈಪಿಡಿ ತಯಾರಿಸಬಹುದು.

ನಿಮ್ಮ ಗಮನಕ್ಕೆ ಬಂದವನ್ನು ನೀವೂ ಬರೆಯಿರಿ. ಕೆಲಸದ ಒತ್ತಡವಿದ್ದರೆ ಮಾಹಿತಿಯನ್ನು ನನಗೆ chamarajs at gmail.comಗೆ ಮಿಂಚಂಚೆ ಮಾಡಿದರೂ ಸಾಕು. ನಾನು ಸೇರಿಸಿಕೊಂಡು ಬರೆಯುತ್ತೇನೆ. ’ಇದು ಅಂತಿಮ, ಇದರಲ್ಲಿ ಹೇಳಿದ್ದೇ ಪರಮಸತ್ಯ’ ಎಂಬುದು ಈ ಲೇಖನಮಾಲೆಯ ಉದ್ದೇಶವಲ್ಲ. ಇದೊಂದು ವಿಸ್ತರಿಸುತ್ತಿರುವ ಕ್ಷೇತ್ರ ಎಂಬ ಪ್ರಜ್ಞೆಯ ಹಿನ್ನೆಲೆಯಲ್ಲಿ, ಈ ಕ್ಷಣಕ್ಕೆ ಕಂಡ, ಹಾಗೂ ತಕ್ಕಮಟ್ಟಿಗಿನ ಫಲಿತಾಂಶವನ್ನೂ ಒದಗಿಸಿದ ವಿಷಯಗಳನ್ನಷ್ಟೇ ಬರೆಯುತ್ತಿದ್ದೇನೆ.

ಒಂದಂತೂ ನಿಜ: ಸಾವಿರಾರು ವರ್ಷಗಳಿಂದ ಬೆಳದಿರುವ ಪದ್ಧತಿಯನ್ನು ಸಾರಾಸಗಟಾಗಿ ತಿರಸ್ಕರಿಸುವುದು ಅಪಾಯಕಾರಿ. ಮರಳಿ ನಿಸರ್ಗದ ಮಾದರಿಗೆ ಹೋಗುವ ಅನಿವಾರ್ಯತೆಯನ್ನು ಬಿಂಬಿಸುವುದಷ್ಟೇ ನನ್ನ ಉದ್ದೇಶ.

ಬದಲಾವಣೆಗೆ, ಹೊಸ ಸೇರ್ಪಡೆಗಳಿಗೆ ಖಂಡಿತ ಅವಕಾಶವಿದೆ.

- ಚಾಮರಾಜ ಸವಡಿ
http://chamarajsavad...

apr's picture

ಚಾಮರಾಜರೇ, ನಿಮ್ಮ ಬರಹ ಪ್ರಭಾವಿಸಿದೆ ನನ್ನನ್ನು. ನೀವಂದದ್ದು ಸರಿ. ಎಲ್ಲ ಕಡೆ ಹೊಂದುವ ಪದ್ದತಿ ಇರಲಾರದು್. ಆಯಾ ಭೌಗೋಳಿಕ ಪ್ರದೇಶ, ಜನ ಜೀವನದ ರೀತಿ ನೀತಿ, ಸಾಮಾಜಿಕ ಸಂದರ್ಭಗಳು ನಾವು ಅನುಸರಿಸುವ ಕೃಷಿ ಪಧ್ಧತಿಯನ್ನು ಪ್ರಭಾವಿಸುತ್ತವೆ. ಆದರೂ ಕೃಷಿಯಲ್ಲಿ ನಾವು ಅನುಸರಿಸಲೇಬೇಕಾದ ಕೆಲವೊಂದು ಮೌಲ್ಯಗಳ ಬಗ್ಗೆ - ವಿಷ, ರಾಸಾಯನಿಕಗಳ ಬಳಕೆ ಇತ್ಯಾದಿ - ಜೀವನದ ಮೌಲ್ಯಗಳಂತೆ (ಪ್ರಾಮಾಣಿಕತೆ, ನೈತಿಕತೆ..) ಹೆಹ್ಚ್ಹುತಗಾದೆ ಇರಬಾರದು. ಅದನ್ನು ನಿಮ್ಮ ಬರಹಗಳು ಹೇಳುತ್ತಿವೆ. ಬರಹ ಹೀಗೆ ಮಾಡಬಹುದು ಎನ್ನುತ್ತದೆಯೇ ಹೊರತು "ಹೀಗೆ ಮಾಡು" ಎಂದು ನಿರ್ದೇಶಿಸುವುದಿಲ್ಲ ಮತ್ತು ಬೋಧಿಸುವುದಿಲ್ಲ. ಅದಕ್ಕೇಂದೇ ಖುಷಿಯಾದದ್ದು. ಸಾವಯವದ ಹವೆಯಲ್ಲಿರುವ ಅದೇ ಕುಟುಂಬದ ಭಾಗವಾಗಿರುವ (ಎ.ಪಿ.ಚಂದ್ರಶೇಖರ) ನನಗೆ ನನ್ನ ತೋಟದ ಒಂದು ಸಣ್ಣ ಭಾಗವನ್ನು ಯಾಕೆ ಇಂಥದೊಂದು ಪ್ರಯೋಗಕ್ಕೆ ಒಡ್ಡಬಾರದೆಂದು ಅನ್ನಿಸಿದೆ. ಸಮಯ, ಸಂದರ್ಭಗಳನ್ನು ಅನುಸರಿಸಿ ಮಾಡಬೇಕೆಂದಿದ್ದೇನೆ - ನನ್ನ ಉದ್ಯೋಗವಾದ ಅಧ್ಯಾಪನದ ಪುರುಸೊತ್ತಿನಲ್ಲಿ. ನಿಮ್ಮ ಜೀವಾಮೃತದ ಬರವಣಿಗೆ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದೇನೆ !
ರಾಧಾಕೃಷ್ಣ

Chamaraj's picture

ನೀವು ಎ.ಪಿ. ಚಂದ್ರಶೇಖರ್‌ ಅವರ ಬಳಗವಾ? ಖುಷಿಯಾಯಿತು ಕೇಳಿ. ಹಾಗಿದ್ದರೆ ನಿಮಗೆ ಈ ಲೇಖನಮಾಲೆಯ ಅವಶ್ಯಕತೆಯೇ ಇಲ್ಲ. ಜೀವಂತ ಪ್ರಯೋಗಶಾಲೆಯೇ ನಿಮ್ಮ ಹತ್ತಿರ ಇದೆ. ಈ ಲೇಖನಮಾಲೆ ಮುಕ್ತಾಯವಾದ ನಂತರ, ಮುಂದಿನ ಭಾಗವನ್ನು ನೀವೇ ಶುರು ಮಾಡಬೇಕು.

- ಚಾಮರಾಜ ಸವಡಿ

apr's picture

ಗೊತ್ತೇ ಅಣ್ಣನನ್ನು? ಖುಷಿಯಾಯಿತು ನಿಮ್ಮ ಪ್ರಶಂಸೆ ಕೇಳಿ. ಆದರೆ ಉತ್ತಮವಾದದ್ದು ಯಾರು ಹೇಳಿದರೂ, ಎಷ್ಟು ಬಾರಿ ಕೇಳಿದರೂ ಅದು ಸವಕಲಾಗದು - ಶಾಸ್ತ್ರೀಯ ಸಂಗೀತದಂತೆ. ಆದರೆ ನನ್ನ ಆಸಕ್ತಿ ಕೃಷಿ ಬರವಣಿಗೆಯಲ್ಲಿಲ್ಲ. ಖಗೋಳ, ಭೌತ ವಿಜ್ಞಾನದ ಬರವಣಿಗೆ ಖಯಾಲಿ. ಆದರೆ ಕೃಷಿ ಬರವಣಿಗೆಯನ್ನು ಖುಷಿ ಪಟ್ಟು ಓದುತ್ತೇನೆ.
ರಾಧಾಕೃಷ್ಣ

Chamaraj's picture

:) ಖಗೋಳ, ಭೌತವಿಜ್ಞಾನ ನನಗೂ ಆಸಕ್ತಿ ಇರುವ ಕ್ಷೇತ್ರಗಳು. ಈ ಕುರಿತ ನಿಮ್ಮ ಬರವಣಿಗೆ ಓದುವ ಕುತೂಹಲ ಇದೆ. ಬ್ಲ್ಯಾಕ್‌ಹೋಲ್‌ಗಳ ಬಗ್ಗೆ ಇತ್ತೀಚೆಗೆ ಹೊಸ ಸಂಶೋಧನೆಗಳು ಆಗಿವೆ. ಇದುವರೆಗಿನ ನಂಬಿಕೆ ಅಲ್ಲಾಡಿಸುವಂಥ ಬೆಳವಣಿಗೆ ಅದು. ಆ ಕುರಿತು ಬರೆಯಿರಿ ಸರ್‌.

- ಚಾಮರಾಜ ಸವಡಿ

palachandra's picture

ಚಾಮರಾಜರೇ,
ಕಬ್ಬಿನ ಉದಾಹರಣೆ ಚೆನ್ನಾಗಿದೆ ಅಂತೆಯೇ ರಾಧಾಕೃಷ್ಣರ ವಿಚಾರವೂ ಕೂಡ. ಅಂತೆಯೇ ಸತ್ವ ಬರೀ ಕಬ್ಬಿನಲ್ಲಲ್ಲದೇ ಕಬ್ಬಿನ ಬೇರು, ಎಲೆಗಳಲ್ಲಿಯೂ ಇರುತ್ತದಲ್ಲವೇ..
ಸಾಮಾನ್ಯವಾಗಿ ಇಂತಹ ತ್ಯಾಜ್ಯ ಹೈನುಗಾರಿಕೆಗೆ ಉಪಯೋಗಿಸುವುದು ಪದ್ಧತಿ. ಇನ್ನು ಆಯಾ ಬೆಳೆಗೆ ಸಂಬಂಧಿಸಿದಂತೆ ಅದಕ್ಕೆ ಬೇಕಾದ ಖನಿಜ ಲವಣಾಂಶವನ್ನು ಮಣ್ಣಿನ ಪರೀಕ್ಷೆ ನಡೆಸಿ, ಅಗತ್ಯ ಬಿದ್ದಿದ್ದು ಕೊಡುವುದೂ (ಕ್ಯಾಲ್ಸಿಯಂ ಕಮ್ಮಿ ಅಂತ ಕ್ಯಾಲ್ಸಿಯಂ ಮಾತ್ರೆ ತಗೊಳ್ಳುವ ಹಾಗೆ).
ಇದನ್ನೆಲ್ಲಾ ಜೀವಾಮೃತ (ನನಗೆ ತಿಳಿದಂತೆ ಇದು ಹೈನುಗಾರಿಕೆ ತ್ಯಾಜ್ಯ ಮತ್ತು ಬೂದಿ ಇನ್ನಿತರ ವಸ್ತುಗಳ ಮಿಶ್ರಣ.) ತುಂಬಬಲ್ಲದೇ?

ಜೀವಾಮೃತದ ಬಗ್ಗೆ ತಿಳಿದುಕೊಳ್ಳಲು ನಿಮ್ಮ ಮುಂದಿನ ಸರಣಿಗೆ ಕಾಯುತ್ತಾ..
--
PaLa

Chamaraj's picture

ಪೀಠಿಕೆ ಆದ ನಂತರ ಮೂಲ ವಿಷಯ ಬರುವುದು ಖಂಡಿತ ಪಾಲಚಂದ್ರ. ಜೀವಾಮೃತ ಅನ್ನೋದು ಕ್ಯಾಟಲಿಸ್ಟ್‌ ಥರಾ. ಅದು ಪ್ರಚೋದಿಸುತ್ತದೆ. ಅದರ ಜೊತೆಗೆ ಲಘುಪೋಷಕಾಂಶಗಳು ಒಂದಿಷ್ಟಿರುತ್ತವೆ. ಹೇಗಿದ್ರೂ ಮುಂದೆ ಓದ್ತೀರಲ್ಲ.

- ಚಾಮರಾಜ ಸವಡಿ
http://chamarajsavad...

kulkarni.mac's picture

ಸವಡಿಯವರೇ....

ನಿಮ್ಮ ಮೋಬೈಲ್ ನಂಬರ ಕೊಡ್ತೀರಾ?
ಮಾತಾಡಬೇಕಿತ್ತು.. ನಿಮ್ಮ ಹತ್ರ?
ಪ್ರೀತಿಯಿಂದ
ಗಿರಿ