19
June
2013

ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು

March 10, 2009 - 6:11pm
nkumar

ಮಧೂರುಗಣೇಶ ಚತುರ್ಥಿಯಂದು ಕರಾವಳಿಯ ಅನೇಕ ಕಡೆ ಒಂದು ಹಾಡು ಕೇಳಿಬರುತ್ತದೆ. ಇದರ ಸಾಹಿತ್ಯ ಸರಿಯಾಗಿ ತಿಳಿದಿಲ್ಲ. ಆ ಹಾಡಿನಲ್ಲಿ ಕೆಳಗಿನ ಚರಣ ಬರುತ್ತದೆ. ಈ ಚರಣದಲ್ಲಿ ಕರಾವಳಿಯ ಪ್ರಸಿದ್ಧ ಗಣಪತಿ ದೇವಾಲಯಗಳ ಹೆಸರುಗಳಿವೆ.

"ಮಧೂರು ಗಣಪತಿ ಶರವು ಗಣಪತಿ ಕುಂಭಾಸಿ ಗಣಪತಿ ಶರಣಂ
ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ ಗೋಕರ್ಣ ಗಣಪತಿ ಶರಣಂ"


ಈ ದೇವಸ್ಥಾನಗಳ ವಿಶೇಷತೆಯೆಂದರೆ (ಒಂದೆರಡು ಬಿಟ್ಟು) ಅಪಾರ ಪ್ರಕೃತಿ ಸೌಂದರ್ಯದಿಂದ ಆವರಿಸಿದೆ. ಇಲ್ಲಿ ನಾನು ಸಂಕ್ಷಿಪ್ತ ವಿವರಣೆಯನ್ನು ನೀಡಿದ್ದೇನೆ. ವಿಸ್ತಾರವಾಗಿ ಸಮಯವಿದ್ದಾಗ ಬರೆಯುತ್ತೇನೆ. ಈ ದೇವಸ್ಥಾನಗಳು ಎಷ್ಟು ಪ್ರಸಿದ್ಧಿ ಎಂದರೆ ಕರಾವಳಿಯ ಬಿರುಸಿನ ಮಳೆಗಾಲದ ಮಧ್ಯೆಯೂ ಗಣೇಶ ಚತುರ್ಥಿಯಂದು ಬಹಳ ಜನ ಸೇರುತ್ತಾರೆ. ಗಣಪತಿ ದೇವಸ್ಥಾನ ಎಂದು ಎಲ್ಲೂ ಇಲ್ಲ. ಗಣಪತಿ ಜೊತೆಗೆ ಶಿವನೂ ಇರುವನು. ಹಾಗೆ ಈ ಎಲ್ಲಾ ದೇವಸ್ಥಾನಗಳಿಗೂ ಐತಿಹಾಸಿಕ ಹಿನ್ನೆಲೆ ಇದೆ.

೧) ಮಧೂರು ಗಣಪತಿ: ಕಾಸರಗೋಡು ಜಿಲ್ಲೆಯ ಮಧೂರು ಎಂಬ ಸುಂದರ ಊರಿನಲ್ಲಿ ಈ ಗಣಪ ನೆಲೆಸಿದ್ದಾನೆ. ಮಂಗಳೂರಿನಿಂದ ಕಾಸರಗೋಡಿಗೆ ಹೋಗಿ ಅಲ್ಲಿಂದ ಮಧೂರಿಗೆ ಹೋಗಬಹುದು. ಮಧೂರು ರಾಷ್ಟ್ರೀಯ ಹೆದ್ದಾರಿ-೧೭ ಬಳಿ ಬರುವುದೋ ತಿಳಿದಿಲ್ಲ. ಇಲ್ಲಿ ಹೊಳೆಯೊಂದು ಹರಿಯುತ್ತದೆ. ಮಳೆಗಾಲದಲ್ಲಿ ಈ ದೇವಸ್ಥಾನ ಸಂಪೂರ್ಣ ಹೊಳೆಯಾಗುತ್ತದೆ. ಆದರೂ ಚೌತಿಯಂದು ಜನರಿಗೆನೂ ಕಡಿಮೆಯಿಲ್ಲ.

೨) ಶರವು ಗಣಪತಿ: ಈ ದೇವಸ್ಥಾನ ಮಂಗಳೂರು ನಗರದ ಹೃದಯ ಭಾಗದಲ್ಲಿದೆ. ವಿಶ್ವಭವನ ಬಸ್ ನಿಲ್ದಾಣದಿಂದ ಸ್ವಲ್ಪ ನಡೆದರೆ ಈ ದೇವಸ್ಥಾನ ಸಿಗುತ್ತದೆ.

೩) ಕುಂಭಾಸಿ ಗಣಪತಿ: ಈ ದೇವಸ್ಥಾನ ಉಡುಪಿ ಕುಂದಾಪುರದ ಮಧ್ಯೆ ಇದೆ. ರಾಹೆ-೧೭ರ ಕುಂಭಾಸಿ ಎಂಬ ಜಾಗದಲ್ಲಿ ಇಳಿದು ನಂತರ ಅಡ್ಡ ರಸ್ತೆಯಲ್ಲಿ ಅನೆಗುಡ್ಡೆಗೆ ಹೋಗಬೇಕು. ಇಲ್ಲಿ ದೇವಸ್ಥಾನ. ಈ ದೇವಸ್ಥಾನದ ಕಡುಬು ಬಹಳ ರುಚಿ. ಈ ದೇವಸ್ಥಾನದ ಬಳಿ ಇರುವ ಮೆಟ್ಟಿಲುಗಳಲ್ಲಿ ಇಳಿದು ಹೋದರೆ ಶಿವನ ದೇವಸ್ಥಾನ ಸಿಗುತ್ತದೆ.

೪) ಹಟ್ಟಿಯಂಗಡಿ ಗಣಪತಿ: ಕುಂದಾಪುರ-ಕೊಲ್ಲೂರು ಮಾರ್ಗ ಮಧ್ಯದಲ್ಲಿ ಕಾಣಸಿಗುವ ಈ ದೇವಸ್ಥಾನ ಕೂಡ ಬಹಳ ಪ್ರಸಿದ್ಧ.

೫) ಇಡಗುಂಜಿ ಗಣಪತಿ: ಹೊನ್ನಾವರದ ಬಳಿ ಬರುವ ಇಡಗುಂಜಿ ದೇವಸ್ಥಾನ ಬಹಳ ನಿಸರ್ಗ ರಮಣೇಯವಾಗಿದೆ. ಇಲ್ಲಿನ ದೇವಸ್ಥಾನಕ್ಕೆ ಕಳೆದ ವರ್ಷ ಚೌತಿಯಂದು ೫೦,೦೦೦ಕ್ಕಿಂತಲೂ ಅಧಿಕ ಭಕ್ತರು ಭೇಟಿ ನೀಡಿದ್ದರು.

೬) ಗೋಕರ್ಣ ಗಣಪತಿ: ಶಿವನ ಆತ್ಮಲಿಂಗದಿಂದ ಭೂಕೈಲಾಸ ಎಂದು ಪ್ರಸಿದ್ಧಿ ಪಡೆದ ಗೋಕರ್ಣದಲ್ಲಿ ಶಿವನಿಗಿರುವಷ್ಟೇ ಪ್ರಾಶಸ್ತ್ಯ ಗಣೇಶನಿಗಿದೆ. ಯಾಕೆಂದರೆ ಗಣಪನೆ ಇಟ್ಟಿದ್ದಲ್ಲವೆ :)

೭) ಸೌತಡ್ಕ ಗಣಪತಿ: ಇವುಗಳನ್ನು ಬಿಟ್ಟು, ರಾಹೆ-೪೮ ರಿಂದ ಧರ್ಮಸ್ಥಳಕ್ಕೆ [ಶಿರಾಡಿ ಘಾಟಿ ಇಳಿದ ತಕ್ಷಣ ಗುಂಡ್ಯ ಸಿಗುತ್ತದೆ. ಗುಂಡ್ಯದಿಂದ ನೆಲ್ಯಾಡಿಗೆ (ಅಂದರೆ ಮಂಗಳೂರು ಕಡೆ) ಹೋಗುವಾಗ ರಾಹೆ-೪೮ರಲ್ಲಿ ಬಲಕ್ಕೆ ಒಂದು ರಸ್ತೆ ಧರ್ಮಸ್ಥಳಕ್ಕೆ ಹೋಗುತ್ತದೆ] ಹೋಗುವ ಮಾರ್ಗದಲ್ಲಿ ಸೌತಡ್ಕ ಎಂಬಲ್ಲಿ ಮಹಾಗಣಪತಿ ದೇವಸ್ಥಾನವಿದೆ. ವಿಶೇಷವೆಂದರೆ ಈ ದೇವಸ್ಥಾನ ಮರದಡಿ ಇದೆ. ಎಷ್ಟು ಬಾರಿ ಮಂಟಪ ಕಟ್ಟಿದರೂ ಕುಸಿದು ಬೀಳುತ್ತಿತ್ತಂತೆ. ಯಾಕೋ ಗಣಪತಿಗೆ ಮರವೇ ಖುಷಿಯೇನೋ. ಇಲ್ಲಿನ ಅಪ್ಪ ಪ್ರಸಾದ, ಅವಲಕ್ಕಿ ಪಂಚಕಜ್ಜಾಯ ಬಹಳ ರುಚಿ. ಹಾಗೆ ಈ ದೇವಸ್ಥಾನವೂ ಕೂಡ ಹಚ್ಚ ಹಸಿರಿನಿಂದ ಕೂಡಿದೆ.

-----------------------------------------------------------------------------------------------------------------------------


ಕೃಷ್ಣಪ್ರಕಾಶರ ಚಿತ್ರಪುಟದಲ್ಲಿ ಮಧೂರು ಗಣಪನ ನೋಡಿದಾಗ, ಹಾಗೆ ಅನಿಲ್ ಅವರ ಜ್ಯೋತಿರ್ಲಿಂಗಗಳ ಲೇಖನ ಓದಿದಾಗ, ಕರಾವಳಿಯ ಗಣಪತಿ ದೇವಾಲಯಗಳ ಬಗ್ಗೆ ಯಾಕೆ ಬರೆಯಬಾರದು ಎಂಬ ಆಲೋಚನೆ ಮನದಲ್ಲಿ ಹುಟ್ಟಿತು. ಅದರ ಪರಿಣಾಮ ಈ ಸಣ್ಣ ಲೇಖನ. ಈ ಕ್ಷೇತ್ರಗಳ ಬಗ್ಗೆ ಅಧಿಕ ಮಾಹಿತಿ ಇದ್ದರೆ ಬಲ್ಲವರು ಹಂಚಿಕೊಳ್ಳಬೇಕಾಗಿ ವಿನಂತಿ.


---------------------------------------------------------------------------------------------------------------------------------------------------
ಚಿತ್ರ: ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಮಧೂರು, ಕಾಸರಗೋಡು ಜಿಲ್ಲೆ. ಕೃಷ್ಣಪ್ರಕಾಶ ಬೊಳುಂಬು ಅವರ ಚಿತ್ರ ಪುಟದಿಂದ ಬಳಸಿದ್ದು

ಲೇಖನ ವರ್ಗ (Category): 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by nkumar on
ನಿಸರ್ಗ ಬಹಳ ಚೆನ್ನಾಗಿದೆ ಎಂದು ನನ್ನ ಸ್ನೇಹಿತ(ಕುಮಟಾ ಊರಿನವ) ಹೇಳುತ್ತಿದ್ದ. ದೇವಸ್ಥಾನಕ್ಕೆ ಬೆಟ್ಟ ಇಳಿದು ಹೋಗಬೇಕೆ? ನಾನು ಇದುವರೆಗೆ ಹೋಗಿಲ್ಲ. ಈ ಬಾರಿಯಾದರೂ ಹೋಗಬೇಕು.

Submitted by ಗಣೇಶ on
ನಂದ ಕುಮಾರ್, ಮಾಹಿತಿಗೆ ಧನ್ಯವಾದಗಳು, >>ಈ ದೇವಸ್ಥಾನಗಳು ಎಷ್ಟು ಪ್ರಸಿದ್ಧಿ ಎಂದರೆ ಕರಾವಳಿಯ ಬಿರುಸಿನ ಮಳೆಗಾಲದ ಮಧ್ಯೆಯೂ ಗಣೇಶ ಚತುರ್ಥಿಯಂದು ಬಹಳ ಜನ ಸೇರುತ್ತಾರೆ. -ಗಣೇಶ ಚತುರ್ಥಿಯಂದು ಮಾತ್ರ ಹೋಗುವುದು ನಮ್ಮ ಬೆಂಗಳೂರಿಗರು :) . ಕಳೆದ ಮಳೆಗಾಲದಲ್ಲಿ 'ಛತ್ರದ ಗಣಪತಿ'(ಧರ್ಮಸ್ಠಳ), ಸೌತಡ್ಕ ಗಣಪತಿ ದೇವಸ್ಥಾನಕ್ಕೆ ಹೋಗಿದ್ದೆ. ಗಾಳಿ ಮಳೆ ವಿಪರೀತ..ಪೂಜೆ ಮಾಮೂಲಿನಂತೆ ನಡೆಯುತ್ತಿತ್ತು. ಜನರೂ ಬರುತ್ತಲೇ ಇದ್ದರು. -ಮಧೂರು ಗಣಪತಿ. ಮಳೆಗಾಲದಲ್ಲಿ ಈ ದೇವಸ್ಥಾನ ಸಂಪೂರ್ಣ ಹೊಳೆಯಾಗುತ್ತದೆ. ಸತ್ಯ.ನನ್ನ ಮಿತ್ರನ ಬಳಿ ಅದರ ಪೋಟೋಗಳಿದ್ದುವು. ಸಿಕ್ಕಿದರೆ ಚಿತ್ರಪುಟದಲ್ಲಿ ಹಾಕುವೆನು. ವಿಸ್ತಾರವಾದ ಲೇಖನಕ್ಕಾಗಿ ಕಾಯುತ್ತಿರುವೆ, -ಗಣೇಶ.

Submitted by ASHOKKUMAR on
ಹೌದು ..ಮಧೂರಿನಲ್ಲಿ ಮಳೆಗಾಲದಲ್ಲಿ ದೇವಸ್ಥಾನಕ್ಕೆ ನೆರೆ ನೀರು ಬರುವುದಿದೆ

Submitted by nkumar on
ಪ್ರತಿ ವರ್ಷ ಈ ಸುದ್ಧಿ ಉದಯವಾಣಿಯಲ್ಲಿ ಮಾಮೂಲಾಗಿದೆ ಅಲ್ಲವೇ :)

Submitted by nkumar on
ಪ್ರತಿಕ್ರಿಯೆಗೆ ವಂದನೆಗಳು ಗಣೇಶಣ್ಣ. >>ಗಣೇಶ ಚತುರ್ಥಿಯಂದು ಮಾತ್ರ ಹೋಗುವುದು ನಮ್ಮ ಬೆಂಗಳೂರಿಗರು ಹೌದೇ? >>ಸೌತಡ್ಕ ಗಣಪತಿ ದೇವಸ್ಥಾನಕ್ಕೆ ಹೋಗಿದ್ದೆ. ಗಾಳಿ ಮಳೆ ವಿಪರೀತ..ಪೂಜೆ ಮಾಮೂಲಿನಂತೆ ನಡೆಯುತ್ತಿತ್ತು. ಜನರೂ ಬರುತ್ತಲೇ ಇದ್ದರು. ಇದು ಕರಾವಳಿಯ ಅಥವಾ ಮಲೆನಾಡಿನ ಯಾವ ಭಾಗಕ್ಕೆ ಹೋದರೂ ಕಂಡು ಬರುತ್ತದೆ. >>ಮಧೂರು ಗಣಪತಿ ಮಳೆಗಾಲದಲ್ಲಿ ಮಾಮೂಲು ಇದು. ಆದಷ್ಟು ಬೇಗ ಚಿತ್ರಗಳನ್ನು ಸೇರಿಸಿ. ವಿಸ್ತಾರವಾಗಿ ಸಮಯವಿದ್ದಾಗ ಬರೆಯುತ್ತೇನೆ. ಹೆಚ್ಚಿನ ಮಾಹಿತಿ ಕ್ರೋಢಿಕರಿಸಬೇಕು. ಕೆಲಸದ ಮಧ್ಯೆ ಬರೆಯಲು ಕಷ್ಟ :(

Submitted by shaamala on
ನಂದಕುಮಾರ್ ಅವರೇ, ಗಣಪತಿಯ ದೇಗುಲಗಳ ಬಗ್ಗೆ ಸೊಗಸಾದ ಲೇಖನ ಬರೆದಿದ್ದೀರಿ. ಇನ್ನಷ್ಟು ಚಿತ್ರಗಳಿದ್ದರೆ ಚೆನ್ನಾಗಿತ್ತು. ಚಿತ್ರದಲ್ಲಿರುವುದು ಯಾವ ಊರಿನ ದೇಗುಲ? ಧನ್ಯವಾದಗಳು, ಶಾಮಲ

Submitted by nkumar on
ಪ್ರತಿಕ್ರಿಯೆಗೆ ವಂದನೆಗಳು ಶಾಮಲ ಅವರೆ. ಚಿತ್ರಗಳನ್ನು ಗೂಗಲ್ ಮಾಡಿ ನೋಡಬಹುದು. ಹೊರಗಿನ ಚಿತ್ರ ಹಾಕಲು ನಿಯಮಗಳಿರುವುದರಿಂದ ನಾನೆ ದೇವಸ್ಥಾನಗಳಿಗೆ ಭೇಟಿ ನೀಡಿ ಚಿತ್ರಗಳನ್ನು ಸೇರಿಸುತ್ತೇನೆ. ಚಿತ್ರದಲ್ಲಿರುವುದು ಮಧೂರು ದೇವಸ್ಥಾನ. ಲೇಖನದ ಕೊನೆಗೆ ಸೇರಿಸಿದ್ದೆನೆ ನೋಡಿ. ಕೃಪೆ: ಕೃಷ್ಣಪ್ರಕಾಶ ಬೊಳುಂಬು ಅವರ ಚಿತ್ರ ಪುಟ.