ಕಾರಂತರ ಜೀವಂತ ಪಾತ್ರಗಳು ೧೬ (೪)
ಇವೆಲ್ಲವುಗಳ ನಡುವೆಯೇ ಜಯರಾಮನ ಬಾಳಿನಲ್ಲಿ ಆಕಸ್ಮಿಕವಾಗಿ ಪ್ರವೇಶಪಡೆದ ಕಲಾವಿದ ಬಾಲಕೃಷ್ಣ ಅವನ ತಂಗಿ ಉಮೆ ಇನ್ನೊಂದೇ ಸನ್ನಿವೇಶವನ್ನು ಸೃಷ್ಟಿಸುತ್ತಾರೆ . ಸಮಾಜದ ಕ್ರೂರ ಪಾಶಗಳಿಗೆ ಸಿಕ್ಕಿ ತನ್ನ ಯಾವುದೇ ಅಪರಾಧಗಳೇ ಇಲ್ಲದಿದ್ದರೂ , ಕೇವಲ ತನ್ನ ಹುಟ್ಟಿನ ಕಾರಣದಿಂದಲೇ ಸಮಾಜದ ವ್ಯಂಗ್ಯಕ್ಕೆ ಗುರಿಯಾಗುವ ಅಸಹಾಯಕತೆಗೆ ಉಮೆ ಸಿಲುಕಿರುತ್ತಾಳೆ. ಇದು ಜರಾಮನನ್ನು ತೀವ್ರವಾದ ಚಿಂತನೆಗಳಿಗೆ ಈಡು ಮಾಡುತ್ತದೆ . ಸಮಾಜದಿಂದ ವೇಶ್ಯೆಯ ಪಟ್ಟ ಕಟ್ಟಿಸಿಕೊಂಡವಳ ಮಗಳಿಗೆ, ಸಂಸಾರವಂದಿಗ ಬದುಕನ್ನೇ ನಿರಾಕರಿಸುವ ಸಮಾಜದ ಕಠೋರ ನೀತಿ ಅವನಿಗೆ ತುಂಬಾ ನಿಷ್ಟುರವಾದುನಿಸುತ್ತದೆ . ಇಂತಹ ಬಾಳಿನಿಂದ ಹೊರಬರಲೇಬೇಕೆಂಬ ಉಮೆಯ ಛಲ ಅವನಿಗೆ ತುಂಬಾ ಸರಿ ಎನಿಸುತ್ತದೆ . ಅಂತಹ ಬಾಳಿಗೆ ಬರಿಯ ಸಾಂತ್ವನವನ್ನು ಮಾತ್ರ ನೀಡದೆ ಅವರ ಆಸೆಗಳಿಗೆ ಒತ್ತಾಸೆಯಾಗಿ ನಿಂತು , ಆ ಅಣ್ಣ ತಂಗಿಯರನ್ನು ಶಿವಮೊಗ್ಗೆಯ ತನ್ನ ಮನೆಯಲ್ಲಿಯೇ ಇರಲು ಅವಕಾಶ ಕಲ್ಪಿಸಿ , ಉಮೆಯ ಓದು ಬಾಲಕೃಷ್ಣನ ಸಂಗೀತ ಸಾಧನೆ ಎರಡಕ್ಕೂ ನೆರವಾದ ಜಯರಾಮ ಸಮಾಜದ ವ್ಯಂಗ್ಯಕ್ಕೂ ಗುರಿಯಾಗುತ್ತಾನೆ .
ಈ ನಡುವೆ ಅನಾಥ ಹೆಂಗಸೊಬ್ಬಳು ಮರಣೋನ್ಮುಖ ಅವಸ್ಥೆಯಲ್ಲಿ ಹೆತ್ತು ಕೈಬಿಟ್ಟುಹೋದ ಮಗುವೊಂದನ್ನು ಸಾಕುವ ಜವಾಬ್ದಾರಿಯನ್ನು ಹೆಗಲಿಗೆ ಹಾಕಿಕೊಳ್ಳುವ ಜಯರಾಮನ ಮನಃಸ್ಥಿತಿ ಉಮೆಯ ಅಚ್ಚರಿಗೂ ಕಾರಣವಾಗುತ್ತದೆ . ಆ ಮಗುವಿನ ಪರಿಸ್ಥಿತಿಯನ್ನು ಜಯರಾಮನ ಗಮನಕ್ಕೆ ತಂದವಳೇ ಉಮೆ , ಹೀಗಾಗಿ ಜಯರಾಮನನ್ನು ಇಂತಹ ಪ್ರಸಂಗಕ್ಕೆ ಸಿಲುಕಿಸುವಲ್ಲಿ ತನ್ನ ಪಾತ್ರವೂ ಇದೆ ಎಂಬುದನ್ನು ಅರಿತ ಉಮೆ , ಆ ಮಗುವಿನ ಪಾಲನೆಯ ಜವಾಬ್ದಾರಿಯನ್ನು ತಾನೂ ಹೊರುತ್ತಾಳೆ . ಜಯರಾಮನ ಅಣ್ಣನ ಸಂಸಾರ ಅವನ ಹೆಂಡತಿ ಚಂಪೆಯಿಂದ ಮೂರಾಬಟ್ಟೆಯಾಗಿ, ಅವರ ಮಗು ತಂದೆ ತಾಯಿ ಇದ್ದೂ ಇಲ್ಲದಂತಾದ ಸ್ಥಿತಿಯಲ್ಲಿ ಅಣ್ಣ ಶ್ರೀರಾಮನ ಮಾನಸಿಕ ಅಸ್ವಸ್ಥತೆಯ ಕಾರಣದಿಂದ ಆ ಮಗುವನ್ನೂ ತನ್ನ ಆಶ್ರಯಕ್ಕೆ ತರುತ್ತಾನೆ . ಹೀಗಾಗಿ ಮದುವೆಯೇ ಇಲ್ಲದ ಜಯರಾಮ ಎರಡು ಅಸಹಾಯಕ ಶಿಶುಗಳ ಪೋಷಕನಾಗುತ್ತಾನೆ .
ಜಯರಾಮನ ನಡೆಗಳನ್ನು ಅರಿಯದ ಸಮಾಜ ಅವನನ್ನು ಅಪಾರ್ಥ ಮಾಡಿಕೊಳ್ಳುತ್ತದೆ . ಅವನ ತಂದೆ ನರಸಿಂಹಯ್ಯಸಹ ಜಯರಾಮ ಉಮೆಯಲ್ಲಿ ಅನುರಕ್ತನಾಗಿದ್ದಾನೆಂದೇ ತಿಳಿದು ಖಿನ್ನನಾಗುತ್ತಾನೆ . ಸ್ವತಃ ಉಮೆಗೂ ಜಯರಾಮನ ಮನದ ಬಯಕೆ ಅರ್ಥವಾಗುವುದಿಲ್ಲ . ಉಮೆಯ ಬದುಕಿನಲ್ಲಿ ಹೊಸ ಪರ್ವವೊಂದು ಒದಗಿ , ಅವಳ ಅಣ್ಣ ಬಾಲಕೃಷ್ಣ ಮತ್ತು ಅವಳ ಮನಸ್ಸಿನ ಇಚ್ಛೆಯಂತೆಯೇ ಅವರಿಗೆ ಮದುವೆಯ ಯೋಗ ಕೂಡಿ ಬರುತ್ತದೆ . ಆಗ ಉಮೆ ತನ್ನ ಅಣ್ಣನೊಡನೆ ತೋಡಿಕೊಳ್ಳುವುದು ಅದುವರೆಗೆ ಆಶ್ರಯನೀಡಿ ಪೋಷಿಸಿದ ಜಯರಾಮನ ಅನುಮತಿಯನ್ನು ಪಡೆಯಬೇಕೆಂಬುದು . ಅವಳ ಅಣ್ಣ ಬಾಲಕೃಷ್ಣ ಪಾತಾಳದಿಂದ ಆಕಾಶದ ಅಂತರಕ್ಕೆ ಕೈ ಚಾಚಿರುವ ತಂಗಿಯ ಮನಸ್ಸಿಗೆ ದಿಗ್ಭ್ರಮೆಗೊಂಡು ವಸ್ತು ಸ್ಥಿತಿಯನ್ನು ವಿವರಿಸುತ್ತಾನೆ. "ಅಣ್ಣ ಅದನ್ನು ನಾನು ಬಲ್ಲೆ ನಾನು ಅವರ ಮನೆಯ ಕಸ ಗುಡಿಸಲೂ ಅರ್ಹತೆ ಇಲ್ಲದವಳು . ಆದರೆ ನನಗೆ ನಿನಗೆ ಕಷ್ಟದಲ್ಲಿ ಆಶ್ರಯ ನೀಡಿ ವಿದ್ಯಾಭ್ಯಾಸ ಮಾಡಲು , ಬಾಳಿನಲ್ಲಿ ಹೊಸ ಭರವಸೆಗಳು ಮೂಡಲು ಕಾರಣರಾದವರ ಅನುಮತಿಯನ್ನು ಇಂತಹ ಮುಖ್ಯ ಸಂದರ್ಭದಲ್ಲಿ ಪಡೆಯಬೇಕೆಂಬುದಷ್ಟೇ ನನ್ನ ಬಯಕೆ , ನೀನು ಬೇಕಾದರೆ ಮದುವೆಯಾಗು , ನಾನು ಮಾತ್ರ ಅವರು ಹೇಳಿದಂತೆಯೇ ನಡೆಯುವವಳು ,, ಎಂದು ದೊಡ್ಡತನವನ್ನು ತೋರಿಸುತ್ತಾಳೆ .
ಜಯರಾಮನಿಗಾಗಿ ಉಮೆ ಏನು ಮಾಡಲೂ ಸಿದ್ದಳಾಗುತ್ತಾಳೆ . ತಾನು ನಿರಾಕರಿಸಿದ ಬದುಕಾದ ಬಂಗಾರದವಳ ಬಾಳನ್ನೂ ಸಹ ’ಅವನು ಇಷ್ಟಪಟ್ಟರೆ ನಡೆಸಿಯೇನು, ಎನ್ನುವಂತಹ ನಿಲುವಿಗೂ ಬರುತ್ತಾಳೆ . ಆದರೆ ಜಯರಾಮ ಅವಳನ್ನು ಕಾಣಲು ಇಷ್ಟಪಡುವುದು ಮದುಮಗಳಾಗಿ, ಗೃಹಿಣಿಯಾಗಿ . ತನ್ನ ಕರುಣೆಯ ಕಾರಣದಿಂದ ಅವಳು ತನ್ನ ಒಡವೆಯಾಗಬೇಕಾಗಿಲ್ಲ. ದಾಂಪತ್ಯ ಕರುಣೆಯ ಅಭಿವ್ಯಕ್ತಿಯಲ್ಲ , ಅದು ಕರುಣೆ ಔದರ್ಯಗಳನ್ನು ಮೀರಿದ, ಸಹಾನುಭೂತಿ ವಿಶ್ವಾಸಗಳನ್ನೊಳಗೊಂಡ ಸಮಾನ ಮನಸ್ಕತೆ . ಹೀಗಾಗಿ ಉಮೆ ತನ್ನ ಕರುಣೆಯ ಪಾಶಕ್ಕೆ ಸಿಲುಕಬೇಕಾಗಿಲ್ಲವೆಂದು, ಅವಳನ್ನು ಅವಳ ಅಣ್ಣ ತಾಯಂದಿರ ಇಷ್ಟದಂತೆ ಅವರು ಆರಿಸಿದ ವರನೊಡನೆ ಮದುವೆಯಾಗಲು ಸೂಚಿಸುತ್ತಾನೆ .
ಹೀಗೆ ಇಡೀ ಕಾದಂಬರಿ ಹಳತು, ಹೊಸದರ ನಡುವಣ ಸಂಘರ್ಷ , ವೈಚಾರಿಕತೆಯ ಸಿಕ್ಕುಗಳು , ದಾಂಪತ್ಯದ ತೊಡಕುಗಳು ,ಮಾನವೀಯ ಸಂಬಂಧಗಳ ಸೂಕ್ಷ್ಮ ನೆಯ್ಗೆ , ಕಾಲದ ಸ್ಥಿತ್ಯಂತರಗಳು ಮತ್ತು ಅದರಿಂದ ಜನಜೀವನದ ಮೇಲಾಗುವ ಪರಿಣಾಮಗಳು ಈ ರೀತಿಯ ಅನೇಕ ವಿಷಯಗಳನ್ನು ತನ್ನದೇ ಕೌಶಲ್ಯದಿಂದ ವಿವರಿಸುತ್ತ ಹೋಗುತ್ತದೆ .
- Login or register to post comments
- 198 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS: