ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹತ್ತು ಮನಸುಗಳು ಹೆಣೆವ ಕಥೆ

ಮೊದಲಷ್ಟು ಪೀಠಿಕೆ ಹಾಕ್ತೀನಿ. ನಾನು ಒಂದು ಟೋಸ್ಟ್ ಮಾಸ್ಟರ್ಸ್ ಕ್ಲಬ್ಬಿನ ಸದಸ್ಯ. ಪ್ರತೀ ಮೀಟಿಂಗ್ ನಲ್ಲೂ ಟೇಬಲ್ ಟಾಪಿಕ್ಸ್ ಇದ್ದೇ ಇರತ್ತೆ. ಟೇಬಲ್ ಟಾಪಿಕ್ಸ್ ಮಾಸ್ಟರ್ ಒಂದು ನಾಕೈದು ಜನಕ್ಕೆ ಯಾವುದಾದ್ರೂ ಒಂದು ಪ್ರಶ್ನೆ ಕೇಳ್ತಾನೆ (ಅಥ್ವಾ ಕೇಳ್ತಾಳೆ ಅಂದ್ಕೊಳಿ). ಅವರು ಅದಕ್ಕೆ ೧-೨ ನಿಮಿಷದಲ್ಲಿ ಉತ್ತರ ಕೊಡಬೇಕು. ಒಂದು ಸಲದ ಮೀಟಿಂಗ್ ನಲ್ಲಿ ಸ್ವಲ್ಪ ಬೇರೆ ರೀತಿ ಮಾಡಿದ್ವಿ. ಟೇಬಲ್ ಟಾಪಿಕ್ಸ್ ಮಾಸ್ಟರ್ ಒಂದು ಸಾಲನ್ನು ಹೇಳಿ, ಯಾರೋ ಒಬ್ಬರಿಗೆ ಆ ಸಾಲಿಂದ ಮುಂದುವರೆಸಲು ಹೇಳಿದ. ಅವರು ೧-೨ ನಿಮಿಷ ಮಾತಾಡಿ ಮತ್ತೊಬ್ಬರಿಗೆ ಖೋ ಕೊಟ್ಟರು. ಅವರು ಮೊದಲು ಮಾತಾಡಿದವರ ಮಾತಿಗೇ ಸೇರಿಸಿಕೊಂಡಂತಿರುವಂತೆ ಮುಂದೆ ಮಾತಾಡಿ ಮತ್ತೊಬ್ಬರಿಗೆ ಖೋ. ಒಟ್ಟು ೬-೭ ಜನ ಮಾತಾಡಿ ಮುಗಿಸುವ ಹೊತ್ತಿಗೆ ಒಂದು ಒಳ್ಳೇ ಹಾಸ್ಯಮಯವಾದ ಕಥೆ ಮೂಡಿಬಂದಿತ್ತು.

ಇವತ್ತು ಅದೇ ರೀತಿ  ಯಾಕೆ ಬರೀಬಾರದು ಅನ್ನಿಸಿತು. ಅದಕ್ಕೆ ಈ ಪ್ರಯತ್ನ.

ಈ ಕೆಲವು ನಿಯಮಗಳನ್ನ ಪಾಲಿಸಿದರೆ, ಒಳ್ಳೇದು ಅಂತ ತೋರುತ್ತೆ:

೧. ಯಾವ ಸಂಪದಿಗರು ಬೇಕಾದರೂ ಟಿಪ್ಪಣಿ ಹಾಕುವುದರ ಮೂಲಕ ಕಥೆ ಮುಂದುವರಿಸಬಹುದು

೨. ಬರೆಯೋರೆಲ್ಲ ಸುಮಾರು ಒಂದು-ಎರಡು ಪುಟಕ್ಕಿಂತ ಕಮ್ಮಿ ಬರೆದರೆ ಚೆನ್ನ. ತೀರಾ ದೊಡ್ಡದಾಗಿ ಗೋಜಲಾಗೋದಕ್ಕಿಂತ ವಾಸಿ ಅಲ್ವಾ? ಅಲ್ಲದೆ ಕೊನೆಕೊನೆಗೆ ಬಂದವರಿಗೆ ಬಹಳ ಕಷ್ಟ ಆಗುತ್ತಲ್ಲ ;)

೩. ಕಥೆಗೆ ನಾನು ’ಹತ್ತು ಮನಸುಗಳು ಹೆಣೆವ ಕಥೆ’ ಅಂತ ತಲೆಬರಹ ಕೊಟ್ಬಿಟ್ಟಿದ್ದೀನಿ. ಆದ್ದರಿಂದ ೧೦ನೇ ಟಿಪ್ಪಣಿ ಹಾಕೋರು ಅದನ್ನ ಒಂದು ಸರಿಯಾದ ನೆಲೆಯಲ್ಲಿ ನಿಲ್ಲಿಸಬೇಕಾಗತ್ತೆ. ಆಮೇಲೆ ಬರೆಯುವವರು, ಈ ಹತ್ತನೇ ಅಂತ್ಯದ ಬದಲು ಬೇರೊಂದು ಅಂತ್ಯ ಬೇಕಾದರೆ ಹಾಕಬಹುದು, ಆದರೆ ಅದಕ್ಕೂ ಮುಂದಕ್ಕೆ ಕಥೆ ಬೆಳಸುವುದು ಬೇಡ.

ಇಷ್ಟು ಸಾಕು ಅನ್ನಿಸುತ್ತೆ.

ಹಾ! ಒಂದು ವಿಷಯ ಮರೆತೆ. ಸ್ವಲ್ಪ ಏನಾದ್ರೂ ನಿಗೂಢತೆ ತುಂಬಿದ್ರೆ ಚೆನ್ನಾಗಿತ್ತು ಅನ್ಸತ್ತೆ ಅಲ್ವಾ? ಅದಕ್ಕೆ ಹೀಗೆ ಮಾಡಿದರೆ ಹೇಗೆ?

೪. ಪ್ರತಿ ಟಿಪ್ಪಣಿಗಾರರೂ (ಅಂದರೆ ಕಥೆ ಮುಂದುವರೆಸುವವರೂ) ಅವರವರ ಬರಹಗಳ ಕೊನೇ ಸಾಲಿನಲ್ಲಿ ಯಾವುದಾದರೂ ಒಂದು ಸದ್ದಿನ ಬಗ್ಗೆ ಬರೆಯಬೇಕು. (ಹೇಗೆ ಅನ್ನೋದಕ್ಕೆ ಮೊದಲ ಭಾಗದ ಕೊನೇ ಸಾಲು ನೋಡಿ :) ಮುಂದುವರೆಸುವವರು ಆ ಸದ್ದನ್ನು ತಾವು ಬರೆಯುವ ಭಾಗದಲ್ಲಿ ಹೇಗಾದರೂ ಜಾಣತನದಿಂದ ಉಪಯೋಗಿಸಿಕೊಳ್ಳಬಹುದು.ಕಥೆ ಮುಗಿಸುವರಿಗೆ ಈ ಪ್ರಶ್ನೆ ಬರೋದಿಲ್ಲ.

ಇಷ್ಟು ಸಾಕಿದ್ರೆ ಇನ್ನು ಕತೆಯ ಆರಂಭ ನಾನು ಮಾಡಿಬಿಡುವೆ -ಯಾಕಂದ್ರೆ ನನಗೆ ಚೆನ್ನಾಗಿ ಕಥೆ ಗಥೆ ಬರೆಯೋಕೆ ಬರಲ್ಲ. ಸಂಪದದಲ್ಲಿ ಒಳ್ಳೊಳ್ಳೆ ಕಥೆಗಾರರಿದಾರಲ್ಲ - ಅವರು ಇದಕ್ಕೆ ಒಳ್ಳೇ ಗತಿ ಕಾಣಿಸ್ತಾರೆ ಅನ್ನೋದು ನನಗೆ ಖಾತ್ರಿ.

ಇಲ್ಲಿಗೆ ಪೀಠಿಕೆ ಸಾಕು. ಕತೆ ಕೇಳೋಣ ಮತ್ತೆ.

*************************************************************************************

*************************************************************************************

ಹೊರಗಡೆ ಧೋ ಅಂತ ಮಳೆ ಸುರಿಯುತ್ತಿದೆ. ಗಡಿಯಾರ ನೋಡಿದಳು ಮಾಧವಿ. ಆಗಲೇ ಎಂಟೂವರೆ ಆಗುತ್ತಾ ಬಂದಿದೆ. ಸಂಜೆ ಕುರುಕಲು ತಿಂಡಿ ಒಂದಷ್ಟು ತಿಂದಿದ್ದರಿಂದ ಊಟ ಮಾಡೋದಕ್ಕೆ ಮನಸ್ಸಿಲ್ಲ. ಎರಡು ವಾರದಿಂದ ಒಬ್ಬಳೇ ಇದ್ದು ಬೇಜಾರಾಗಿ ಹೋಗಿದೆ. ತಿಂಗಳಲ್ಲಿ ಅರ್ಧವೆಲ್ಲ ಪರಊರೋ ಪರದೇಶವೋ ಎಲ್ಲಿ ಎಂದರಲ್ಲಿ ಕೆಲಸ ಎಂದು ತಿರುಗೋ ಗಂಡ. ಮದುವೆಯಾಗೋಕೆ ಮುಂಚೆ ಜೋಯಿಸರು ಒಂದು ಸಲ ಇವಳನ್ನು ನೋಡಿ "ನಿನ್ನ ಕಾಲಲ್ಲಿ ಚಕ್ರ ಇದೆ. ದೇಶಾಂತರ ಪ್ರಯಾಣ ಮಾಡೋದು ಬರೆದಿದೆ ನಿನ್ನ ಹಣೇಲಿ" ಅಂದಿದ್ದರು. ಆದರೆ ಹಾಗೇನೂ ಆಗಲಿಲ್ಲ. ಹೋದಕಡೆಗೆಲ್ಲ ಸುರೇಶ ಒಬ್ಬನೇ ಹೋಗುವುದೇ ರೂಢಿ. ಮೊದಮೊದಲು ಇವಳೂ ಒಮ್ಮೆಮ್ಮೆ ಅವನ ಜೊತೆ ಹೋಗುತ್ತಿದ್ದರೂ, ಮಕ್ಕಳ ಜವಾಬ್ದಾರಿ ಹೆಚ್ಚಿದ ಮೇಲೆ ಹಾಗೆ ಹೋಗುವುದನ್ನು ನಿಲ್ಲಿಸಿಬಿಟ್ಟಿದ್ದಳು.

ಮಕ್ಕಳಾದರೂ ಈಗ ಊರಲ್ಲಿ ಇದ್ದರೆ ಈ ಸಲ ಇಷ್ಟು ಬೇಜಾರಾಗುತ್ತಿರಲಿಲ್ಲ.  ಆದರೆ ಈ ಸಲ ಅವರೂ ಇಲ್ಲ! ತಾನು ಒಬ್ಬಳೇ ಇದ್ದದ್ದು ಯಾವತ್ತೂ ಇಲ್ಲ ಅಂತಿಲ್ಲವಾದರೂ ಇದೇ ಎರಡುವಾರ ಪೂರ್ತಿ ಹೀಗಿದ್ದಿದ್ದು ಅನ್ನುವುದು ಅವಳ ಹೊಳವಿಗೆ ಬಂತು. ತಕ್ಷಣ ತನ್ನ ಸಂಗೀತದ ಮೇಷ್ಟರ ನೆನಪಾಯಿತು. ಸಂಗೀತ ಬರುವವರಿಗೆ ಮತ್ತೆ ಪುಸ್ತಕ ಓದೋ ಆಸಕ್ತಿ ಇರುವವರಿಗೆ ಯಾವತ್ತೂ ಯಾವ ಕಾರಣಕ್ಕೂ ಬೇಸರ ಆಗೋದಿಲ್ಲ ಅಂತ ಅವರು ಹೇಳ್ತಿದ್ದರಲ್ಲ! ಸರಿ ಒಂದು ನಾಕು ಭಾವಗೀತೆಗಳನ್ನಾದರೂ ಹಾಡಿಕೊಳ್ಳಬಹುದು ಅಂತ ತಂಬೂರಿ ಶ್ರುತಿ ಮಾಡಿಕೊಂಡಳು. ಅದ್ಯಾಕೋ ತಂಬೂರಿಯನ್ನು ನುಡಿಸುತ್ತಿದ್ದ ಹಾಗೇ ನಾಂದಿ ಚಿತ್ರದಲ್ಲಿ ಕಲ್ಪನಾ ಹಾಗೇ ತಂಬೂರಿ ನುಡಿಸಿಕೊಳ್ಳುತ್ತ  ’ಉಡುಗೊರೆಯೊಂದ ತಂದ’ ಅಂತ ಹೇಳುವ ಹಾಡು ಮನಸ್ಸಿಗೆ ಬಂದು ಅದನ್ನೇ ಮೊದಲು ಹಾಡಿದಳು. ಎಷ್ಟೋ ವರ್ಷದ ಹಿಂದೆ ಕಾಲೇಜಿನಲ್ಲಿದ್ದಾಗ ಅವಳು ವೇದಿಕೆಯ ಮೇಲೆ ಈ ಹಾಡನ್ನು ಹಾಡುತ್ತಿದ್ದಾಗ ಕಾಲೇಜಿನ ಹುಡುಗರ ಕಣ್ಣೆಲ್ಲ ಅವಳ ಮೇಲೇ ನೆಟ್ಟಿರುತ್ತಿದ್ದಿದ್ದು ನೆನಪಾಗಿ ಒಂದು ಕ್ಷಣ ಮನಸ್ಸು ಹಗುರಾಯಿತು.

ಮತ್ತೆ ಮುಂದೆ ಯಾವ ಹಾಡು ಹಾಡಲೆಂದು ಸಂಗೀತ ಪಸ್ತಕದ ಪುಟಗಳನ್ನು ಸರಿಸಿದಳು ಮಾಧವಿ.’ಮಲಗೋ ಮಲಗೆನ್ನ ಮರಿಯೇ’ ಅನ್ನುವ ಹಾಡು ಕಂಡಿತು. ಅಯ್ಯೋ ಪಾಪ ಈ ಹಾಡನ್ನು ಹಾಡುತ್ತಿದ್ದ ಸುಲೋಚನಾ ಹೋಗಿಬಿಟ್ಟರಲ್ಲ ಈಗ ತಾನೇ ಕೆಲವು ದಿನಗಳ ಹಿಂದೆ ಅಂದುಕೊಂಡಳು. ಮುಂದಿನ ಪುಟದಲ್ಲಿದ್ದುದ್ದೂ ಸುಲೋಚನಾ ಹಾಡುತ್ತಿದ್ದ ಹಾಡೇ.

ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ ಗಂಡ

ಈ ಹಾಡನ್ನು ಒಂದು ಸಲ ಕಾಲೇಜಿನಲ್ಲಿ ಹಾಡಿದಾಗ  ಯಾರೋ ಒಬ್ಬ ಒಂದು ಕಾಗದದುಂಡೆಯನ್ನು ಇವಳ ಕಡೆಗೆ ಎಸೆದಿದ್ದ. ಕಾರ್ಯಕ್ರಮ ನಡೆಯುತ್ತಿದ್ದ ಆಡಿಟೋರಿಯಮ್ ನಲ್ಲಿ ಬೆಳಕಿರಲಿಲ್ಲವಾಗಿ, ಯಾರು ಅಂತ ಅವಳಿಗೆ ಗೊತ್ತಾಗಿರಲಿಲ್ಲ. ಹೆದರಿ ಹೋಗಿದ್ದಳು ಅವಳು.

ಆಮೇಲೆ ಆ ಕಾಗದದುಂಡೆಯನ್ನು ಬಿಚ್ಚಿನೋಡಿದರೆ, ಅದಲ್ಲಿ ಹೀಗೆ ಬರೆದಿತ್ತು.

ನಾನಾಗಬಹುದೇ ನಿನ್ನ ಗಂಡ?
ಆಣೆಯಿಡಲೇ? ನಾನಲ್ಲ ಪುಂಡ!

ಹಳೆಯ ನೆನಪುಗಳು ಯಾಕೆ ಹೀಗೆ ಕಾಡುತ್ತಿವೆಯಲ್ಲ ಎನ್ನಿಸಿತು ಮಾಧವಿಗೆ.

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ ರಾಡಿಗೊಳಿಸದಿರು ಮತ್ತೆ ಮಧುರ ನೆನಪೇ

ಪಲ್ಲವಿಯನ್ನೇ ಮತ್ತೆ ಮತ್ತೆ ಹಾಡಿಕೊಳ್ಳುತ್ತಿದ್ದಂತೆ, ಹೊರಗೆ ಬಾಗಿಲಿನ ಕರೆಗಂಟೆ ಡಿಂಗ್ ಡಾಂಗ್ ಎಂದು ಬಾರಿಸಿದ್ದು ಮಾಧವಿಗೆ ಕೇಳಿಸಿತು....

*******

*******

ಮೊದಲ ಟಿಪ್ಪಣಿ ಕಾರರು ಇನ್ನು ಕಥೆಯನ್ನು ಮುಂದುವರೆಸುವರು ......

 

 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
srinivasps's picture

ನನ್ನ ಪ್ರಯತ್ನ ಇಲ್ಲಿದೆ...

--ಶ್ರೀ
*****************
ಕರೆಗಂಟೆಯ ಸದ್ದಿಗೆ ನೆನಪುಗಳ ಸುಳಿಯಿಂದ ಹೊರಬಂದ ಮಾಧವಿ ಬಾಗಿಲನ್ನು ತೆರೆದಳು...

ಬಾಗಿಲ ಮುಂದೆ ನಿಂತ ವ್ಯಕ್ತಿ ನಸು ನಕ್ಕು ಕೇಳಿದ, ’ನಮಸ್ತೆ, ನಿಮ್ಮ ಮನೆ ಮುಂದೆ To-Let ಬೋರ್ಡ್ ಇದೆ... ಮನೆ ಬಾಡಿಗೆಗೆ ಇದೆಯಾ?’
’ಹೌದು, ಮಹಡಿ ಮನೆ, ಎರಡು ರೂಮ್ ಇವೆ...’
ಅಪರಿಚಿತರನ್ನು ಗಂಡ ಇಲ್ಲದಾಗ ಮನೆ ಒಳಗೆ ಕರೆಯುವುದೇ ಬೇಡವೇ ಎಂಬ ಇಬ್ಬಂದಿಯಿಂದ ಬಾಗಿಲ ಬಳಿಯೇ ಮಾತನಾಡಿಸಿದಳು...
’ಎಷ್ಟು ಜನ ಇದ್ದೀರಿ ನಿಮ್ಮ ಮನೆಯಲ್ಲಿ?’ ’ನಾವು ೪-ಮಂದಿ...ಹೆಂಡತಿ, ಇಬ್ಬರು ಮಕ್ಕಳು, ಮಕ್ಕಳಿಬ್ಬರೂ ಓದುತ್ತಿದ್ದಾರೆ’...
ಕನ್ನಡದಲ್ಲಿ ಅಚ್ಚುಕಟ್ಟಾಗಿ ಮಾತನಾಡುವುದನ್ನು ಕೇಳಿದ ಮಾಧವಿಗೆ ಕೊಂಚ ಸಮಾಧಾನ...
ಯಾರಾದರೂ ಪರವಾಗಿಲ್ಲ ಎಂದು ಸುರೇಶ್ ಹೇಳಿದ್ದರೂ, ಮಾಧವಿಗೆ ಕನ್ನಡಿಗರಿಗೇ ಮನೆ ಬಾಡಿಗೆಗೆ ಕೊಡಬೇಕೆಂಬ ಆಸೆ...
’ಸರಿ, ನಮ್ಮ ಮನೆಯವರಿಲ್ಲ...ಬರೋ ಭಾನುವಾರ ಬಂದು ಅವರೊಡನೆ ಮಾತಾಡ್ತೀರಾ?’
ಆ ವ್ಯಕ್ತಿ, ’ಸರಿ ಹಾಗೆ ಆಗಲಿ. ಇದು ನನ್ನ ನಂಬರ್’ ಎಂದು, ಹೆಸರು, ವಿಳಾಸ ಮುಂತಾದ ವಿವರಗಳನ್ನು ಬರೆದು ಚೀಟಿಯಲ್ಲಿ ಕೊಟ್ಟ.
’ಭಾನುವಾರ ಬೆಳಿಗ್ಗೆ ೧೦ಕ್ಕೆ ಬರುತ್ತೀನಿ. ನಮಸ್ತೆ’ ಎಂದು ಹೊರಟ ವ್ಯಕ್ತಿ ಮತ್ತೆ ಏನೋ ವಿಚಿತ್ರವಾಗಿ ಮರು ನೋಡಿದ್ದು ಗಮನಕ್ಕೆ ಬಂತು...
’ಏನಾಯ್ತು, ಮನೆ ಬಗ್ಗೆ ಏನಾದರೂ ಕೇಳಬೇಕಿತ್ತಾ?’ ಎಂದಳು...
ಆ ವ್ಯಕ್ತಿ, ಕೊಂಚ ಹಿಂಜರಿಕೆಯಿಂದಲೇ ಕೇಳಿದ...’ಈಗ ನಾನು ಬೆಲ್ ಮಾಡುವ ಮುಂಚೆ ಹಾಡು ಕೇಳಿ ಬರುತ್ತಿತ್ತು...ನೀವೇನಾ ಹಾಡುತ್ತಿದ್ದುದು?’
ಈ ರೀತಿಯ ಪ್ರಶ್ನೆಯನ್ನು ಎದುರು ನೋಡದ ಮಾಧವಿ, ಕಸಿವಿಸಿಯಿಂದಲೇ ಹೇಳಿದಳು, ’ಹೌದು...ನಾನೇ...’
ಉತ್ತರಿಂದ ಆ ವ್ಯಕ್ತಿಯ ಮುಖದಲ್ಲಿ ಬದಲಾವಣೆಯನ್ನು ಗಮನಿಸಿದಳು ಮಾಧವಿ...
ಆ ವ್ಯಕ್ತಿ ಹೆಚ್ಚೇನು ಹೇಳದೇ, ’ಬರ್ತೀನಿ ಮೇಡಮ್’ ಎಂದು ಗೇಟು ಕಿರ್ರನೇ ತೆಗೆದು ಹೊರಟು ಹೋದರು...
*****************

sritri's picture

ಆ ವ್ಯಕ್ತಿ ಹಾಗೇಕೆ ತನ್ನನ್ನು ನೋಡಿದ? ಯೋಚನೆಗೆ ಸಿಲುಕಿದಳು ಮಾಧವಿ. ‘ನೀನು ಈ ವಯಸ್ಸಿನಲ್ಲಿಯೂ ಸುಂದರಿಯೇ. ಅದಕ್ಕೆ ಹಾಗೆ ನೋಡಿರುತ್ತಾನೆ ಬಿಡು’ ಸುರೇಶ ಈಗಿದ್ದಿದ್ದರೆ ಹೀಗೆಯೇ ತಮಾಷೆ ಮಾಡಿರುತ್ತಿದ್ದ ಅನ್ನಿಸಿ ಮಾಧವಿಗೆ ನಗು ಬಂತು. ಸುರೇಶ ಹಾಗೆಯೇ. ಅವನಿದ್ದ ಕಡೆ ಸದಾ ಹಾಸ್ಯ, ನಗು. ಆದರೆ ನಡುವಯಸ್ಸನ್ನು ಮೀರಿದ ಆ ವ್ಯಕ್ತಿ ತನ್ನ ಸೌಂದರ್ಯವನ್ನು ಮೆಚ್ಚಿ ಹಾಗೆ ನೋಡಿದ್ದಲ್ಲವೆಂದು ಅವಳಿಗೂ ಗೊತ್ತಿತ್ತು. ಮತ್ತೆ ಮತ್ತೆ ಆ ವ್ಯಕ್ತಿಯ ಮುಖವನ್ನು ಮನಸ್ಸಿಗೆ ತಂದುಕೊಳ್ಳುತ್ತಿರುವಂತೆ ಆ ಮುಖ ತನಗೆ ಪರಿಚಯವಿದೆ ಎಂದು ಅನಿಸತೊಡಗಿತು. ಹಾಳಾದ್ದು...ನನಗೂ ವಯಸ್ಸಾಯಿತು, ಒಂದೂ ನೆನಪಾಗುತ್ತಿಲ್ಲವೆಂದು ಗೊಣಗಿಕೊಂಡಳು. ಹಾಡು ಮುಂದುವರೆಸಲೆಂದು ಪುಸ್ತಕ ತೆಗೆದುಕೊಂಡು ಪುಟ ತಿರುವತೊಡಗಿದಳು.

ಕೈ ಒಂದೊಂದಾಗಿ ಪುಟ ತಿರುವುತ್ತಿತ್ತು. ‘ಸುಮ ಸುಂದರ ತರುಲತೆಗಳ ಬೃಂದಾವನ ಲೀಲೆ...ಸುಪ್ರಭಾತ ಚಂದ್ರೋದಯ ರಾಗಾರುಣ ಜಾಲೆ ....’ ಭಾವಗೀತೆ ತೆರೆದುಕೊಂಡಿತು. ಉಳಿದೆಲ್ಲಾ ಹಾಡು ತನ್ನದೇ ಹಸ್ತಾಕ್ಷರದಲ್ಲಿದ್ದರೆ ಇದು ಮಾತ್ರ ಬೇರೆ ಯಾರದ್ದೋ ಕೈಬರಹದಲ್ಲಿದ್ದುದ್ದು ಮಾಧವಿಯನ್ನು ಸೆಳೆಯಿತು. ಯಾರು ಇದನ್ನು ಬರೆದಿದ್ದು? ತಾನಂತೂ ಅಲ್ಲ. ತಂಗಿ ಮೇನಕಾಳ ಕಾಗೆ ಕಾಲು ಗುಬ್ಬಿ ಕಾಲು ಬರವಣಿಗೆಯೂ ಅಲ್ಲ. ಯಾರದಿರಬಹುದು? ಸುಂದರವಾದ ಅಕ್ಷರ ಪಂಕ್ತಿಗಳ ಮೇಲೆ ಕಣ್ಣಾಡಿಸುತ್ತಿದ್ದಂತೆ ಯಾವುದೋ ನೆನಪೊಂದು ಮಾಧವಿಯ ಕೈಹಿಡಿದೆಳೆಯಿತು. ಇದು ಶಾರ್ವರಿಯ ಅಚ್ಚುಮೆಚ್ಚಿನ ಹಾಡಲ್ಲವೇ? ನನ್ನ ಪುಸ್ತಕದಲ್ಲಿ ಬರೆದುಕೊಟ್ಟಿದ್ದೂ ಅವಳೇ. ಎರಡು ವರ್ಷದ ಹಿಂದೆ ಭೇಟಿ ಮಾಡಿದ್ದಾಗ ಯಾವುದೋ ಖಾಯಿಲೆಯಿಂದ ನರಳುತ್ತಿದ್ದಳು. ಈಗೆಲ್ಲಿದ್ದಾಳೋ? ಹೇಗಿದ್ದಾಳೋ? ಮನೆ ಬದಲಾವಣೆಯಾದಾಗ ಅವಳ ವಿಳಾಸ, ದೂರವಾಣಿಗಳಿದ್ದ ಪುಸ್ತಕವೂ ಕಳೆದುಹೋಗಿತ್ತು. ನಿಜ ಹೇಳಬೇಕೆಂದರೆ ಅವಳನ್ನು ಸಂಪರ್ಕಿಸಲು ತಾನು ಪ್ರಯತ್ನಿಸಿರಲೇ ಇಲ್ಲ. ಅವಳನ್ನು ಭೇಟಿಯಾಗಲೇಬೇಕೆಂದಿದ್ದರೆ ವಿಳಾಸ ದೊರಕಿಸಿಕೊಳ್ಳುವುದೇನೂ ಕಷ್ಟವಿರಲಿಲ್ಲ.

ಜೀವದ ಗೆಳತಿಯರಾಗಿದ್ದ ತಮ್ಮಿಬ್ಬರ ನಡುವೆ ಮೊಟ್ಟಮೊದಲ ಬಾರಿಗೆ ವಿರಸ ಮೂಡಿದ್ದೇಕೆ ಎಂದು ನೆನಪಿಸಿಕೊಳ್ಳಲು ಪ್ರಯತ್ನಿಸಿದಳು ಮಾಧವಿ. ಎಷ್ಟೋ ವರ್ಷಗಳ ಹಿಂದಿನ ಸಂಗತಿ ತಟ್ಟನೆ ನೆನಪಾಗಲಿಲ್ಲ. ಕಾಲ ಕಳೆದಂತೆ ಅಂದಿನ ರಾಗದ್ವೇಷಗಳೂ ಹಿಂದಿನ ತೀವ್ರತೆಯನ್ನು ಕಳೆದುಕೊಂಡಿದ್ದವು. ತನ್ನನ್ನು ವಂಚಿಸಿದ ಶಾರ್ವರಿ ಪಡೆದುಕೊಂಡಿದ್ದಾದರೂ ಏನು? ಕುಡುಕ ಗಂಡ, ಅವಿವೇಕಿ ಮಕ್ಕಳು, ಜೊತೆಗೆ ಕಿತ್ತು ತಿನ್ನುವ ರೋಗದಿಂದ ದಯನೀಯ ಪರಿಸ್ಥಿತಿಯಲ್ಲಿದ್ದ ಶಾರ್ವರಿಯನ್ನು ದ್ವೇಷಿಸುವುದರಲ್ಲಿ ಅರ್ಥವಿದೆಯೇ? ಶಾರ್ವರಿಯ ಮೇಲೆ ತನಗೀಗ ಯಾವ ಹಗೆಯೂ ಇಲ್ಲ ಅಂದುಕೊಂಡಳು ಮಾಧವಿ. ಮನಸ್ಸು ನಿರಾಳವಾಯಿತು. ಶಾರ್ವರಿಯಿಂದ ಸರ್ವನಾಶವಾಗಿದ್ದ ತನ್ನ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಮಾಧವಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆ ದಿನಗಳಲ್ಲಿ ಸುರೇಶ ಜೊತೆಗಿರದಿದ್ದರೆ ತಾನೇನಾಗಿರುತ್ತಿದ್ದೆನೊ.

ಇದ್ದಕ್ಕಿದ್ದಂತೆ ಶಾರ್ವರಿಗೂ, ಈಗಷ್ಟೇ ಮನೆ ಬಾಡಿಗೆಗೆಂದು ಬಂದ ವ್ಯಕ್ತಿಗೂ ಯಾವುದೋ ಸಂಬಂಧದ ಎಳೆ ಇದೆಯೆಂಬ ಅನಿಸಿಕೆ ಮಾಧವಿಯಲ್ಲಿ ಬಲವಾಯಿತು. ‘ಅರೆ ಹೌದಲ್ಲವೇ?’ ತನ್ನ ಮತ್ತು ಶಾರ್ವರಿಯ ಸ್ನೇಹದಲ್ಲಿ ಬಿರುಕು ಮೂಡಲು ಈಗ ಬಂದ ವ್ಯಕ್ತಿಯೇ ಕಾರಣನಲ್ಲವೇ? ಆ ನೆನಪಿನಿಂದಲೇ ಮಾಧವಿಯ ಸೌಮ್ಯ ಮುಖ ಸೆಟೆದುಕೊಂಡು ಬಿರುಸಾಯಿತು. ಹಳೆಯ ನೆನಪನ್ನೆಲ್ಲಾ ಅಳಿಸಿ ಹಾಕುವಂತೆ ಶಾರ್ವರಿಯ ಕೈಬರಹವಿದ್ದ ಪುಟವನ್ನು ಕಿತ್ತು ಪರಪರ ಹರಿದು ಹಾಕಿದಳು. ಆ ವ್ಯಕ್ತಿ ಮತ್ತೆ ಬಂದರೆ ಹೇಳಿಬಿಡಬೇಕು. ನಿನ್ನಂತಹ ನಯವಂಚಕನಿಗೆ ಮನೆ ಕೊಡುವುದು ಸಾಧ್ಯವಿಲ್ಲ!!

ಮಾಧವಿಯ ಮನಸ್ಸಿನ ತಲ್ಲಣದ ಅರಿವಿಲ್ಲದಂತೆ ನಿರ್ಲಿಪ್ತ ಗಡಿಯಾರ ಡಣ್... ಡಣ್... ಎಂದು ಹನ್ನೆರಡು ಸಾರಿ ಬಡಿದು ಮಧ್ಯರಾತ್ರಿಯಾಗಿರುವುದನ್ನು ಸೂಚಿಸಿತು.

rasikathe's picture

*****************
ಪ್ರತಿದಿನಾ ಇಷ್ಟೊತ್ತಿಗೆ ನಿದ್ರಿಸಿ ಕನಸುಕಾಣುತ್ತಿರಲಿಲ್ಲವೇ? ಆದರೆ ಇವತ್ತು ಈ ಮನಸ್ಸೇಕೋ ಲಂಗು ಲಗಾಮು ಇಲ್ಲದೆ ಓಡುತ್ತಿದೆ. ನಿದಿರೆಯು ಬರದೇ ಲಹರಿ ಮುಂದುವರಿದಿತ್ತು............"ಹೌದು ಇವನೇ "ಪ್ರಣಯ್", ಅದೇ ನಗು, ಅದೇ ಮುಖ. ಈಗ ವಯಸ್ಸಾಗಿದ್ದರಿಂದ ಮಂಡಾಗಿದೆ ಮೂಗು, ನಗು ಎಲ್ಲವೂ. ನನ್ನ, ಶಾರ್ವರಿಯ ಮಧ್ಯ ಬಂದವನು, ನನ್ನ ಪ್ರೀತಿಯ ಅರಿಯಲಾರದವನು. ಅಥವಾ ಅರಿತರೂ ಅರಿಯಲಾರದವನಂತೆ ವರ್ತಿಸಿದವನು. ವರ್ಷಗಳು ಉರುಳಿದರೂ ನನಗ್ಯಾಕೆ ಇಷ್ಟೊಂದು ಕೋಪ ಇವನಮೇಲೆ ಬರುತ್ತಿದೆ. ನನಗ್ಯಾವುದಕ್ಕೂ ಕಡಿಮೆಯಾಗಿಲ್ಲ, ನನ್ನ ಮನ ಅರ್ಥೈಸಿಕೊಳ್ಳುವ ಗಂಡ, ಒಂದೇಮನೆ ಸಾಲದೂ ಅಂತ ಎರಡು ಮನೆಗಳು, ಚಿನ್ನದಂತ ಮಕ್ಕಳು ಇಷ್ಟೆಲ್ಲಾ ಇದ್ದರೂ ಈ ಮನಸ್ಸು ವರುಷಗಳ ಹಿಂದೆ ಸಿಗದಿದ್ದ ಈ ಪ್ರೀತಿಗೆ ಯಾಕೆ ಪರಿತಪಿಸುತ್ತಿದೆ? ಅದು ಮೊದಲನೆಯ ಪ್ರಣಯವೆಂದೇ? ಗಂಡ- ಹೆಂಡತಿಯಾಗಲು ಏಳೇಳು ಜನ್ಮದ ಅನುಭಂದವಿರಬೇಕಂತೆ. ಅದಿಲ್ಲದೇ ಇದು ಸಾಧ್ಯವಾಗುತ್ತಿರಲಿಲ್ಲ, ಅರ್ಥಾತ್ ಸಾಧ್ಯವಾಗಿಲ್ಲ ಎಂದು ಕೊಂಡು ಸುಮ್ಮನಿರಬಾರದೇ? ತಿಳಿದೂ ತಿಳಿದೂ ಇದೇಕೆ ಈ ತರ ಮನವೆಂಬ ಮರ್ಕಟ? ಒಂದು ಸಲ ಪ್ರಣಯನನ್ನು ಕೇಳಿಯೇ ತೀರಬೇಕು, ಅವನಿಂದಲೇ ಉತ್ತರಪಡೆಯಬೇಕು. ಇಲ್ಲದಿದ್ದರೆ ಮನಶ್ಯಾಂತಿ ಸಿಗುವುದು ದೊಡ್ಡ ಕನಸಾಗಿ ಉಳಿಯುವುದಂತೂ ನಿಜ. ಎಲ್ಲಾ ಪ್ರಣಯನಮೇಲೇ ಹೊರಿಸುತ್ತಿದ್ದೆನಲ್ಲಾ, ಶಾರ್ವರಿಯ ಕೈವಾಡವೇನಾಗಿತ್ತು ಈ ಸಂಬಂಧದಲ್ಲಿ? ಅವಳು ನನ್ನ ಜೀವದ ಗೆಳತಿಯಂತಿದ್ದರಿಂದ ಅವಳ ತಪ್ಪು ನನಗರಿವಿಲ್ಲದೇ ಮುದುಡಿದೆಯೇ? ಇದನ್ನು ತಿಳಿಯುವುದಕ್ಕಾದರೂ , ಪ್ರಣಯನ ಹತ್ತಿರ ಮಾತಾಡಬೇಕು.

ಶಾರ್ವರಿ ನನ್ನನ್ನು ಮತ್ತು ಪ್ರಣಯನನ್ನು ದೂರ ಮಾಡಿದಳು, ನಮ್ಮ ಸಂಬಂಧವನ್ನು ಮುರಿಯಲು ನನ್ನೊಡನಿದ್ದ ಅವಳ ಗೆಳೆತನವನ್ನು ಉಪಯೋಗಿಸಿದಳು. ಅವಳ ಸ್ವಾರ್ಥಕ್ಕೆ ಹೀಗೆ ಮಾಡಿದಳೇ?ಇಷ್ಟಕ್ಕೂ ನಾನೇನು ಮಾಡಿದ್ದೆ ಅವಳಿಗೆ? ಅಥವಾ ಅವಳು ನನ್ನ ಒಳ್ಳೆಯದಕ್ಕೆ ಹೀಗೆ ಮಾಡಿದಳೆ? ಏನೋ "ಆದದ್ದೆಲ್ಲಾ ಒಳಿತೇ ಆಯಿತು" ಅನ್ನೋಹಾಗೆ ನಾನೇ ಈಗ ಸುಖವಾಗಿರೋದು. ಶಾರ್ವರೀಗೆ ಎಲ್ಲಾ ಕಷ್ಟಗಳೂ ಮುತ್ತಿಕೊಂಡವು. ಇದೆಲ್ಲಾ ಸಂಶಯಗಳನ್ನು ಪರಿಹರಿಸಿಕೊಳ್ಳಲು ಇದೊಂದೇ ಅವಕಾಶ. ಪ್ರಣಯ ಮತ್ತೆ ಮನೆ ನೋಡಲು ಬಂದಾಗ ಏನಾದರೂ ಸಂಚು ಹೂಡಿ ಅವನೊಡನೆ ಮಾತನಾಡಬೇಕು.

ಟ್ರಿನ್............ಟ್ರಿನ್.....................ಟ್ರಿನ್........................ಫೋನ್ ಶಬ್ಧ ಕೇಳಿಸಿತು. (ಈ ಹೊತ್ತಲ್ಲಿ ಯಾರು ಕರೆಯುತ್ತಿದ್ದಾರೆ? ಯಾಕೋ ಒಂದಥರಾ ಭಯವಾಗುತ್ತಿದೆ ಎಂದುಕೊಂಡು ಫೋನ್ ಕೈಗೆತ್ತಿಕೊಂಡಳು)

Jyothi M's picture

ಅಷ್ಟರಲ್ಲೇ ಲೈನ್ ಕಟ್ ಆಗಿತ್ತು. ಯಾರು ಕರೆದರೆಂದು ತಿಳಿಯದೇ ಕಸಿವಿಸಿಗೊಂಡಳು. ತಂಬೂರಿಯ ಮುಂದಿನಿಂದ ಮೇಲೆದ್ದು ಒಂದು ಲೋಟ ನೀರು ಗಟಗಟ ಕುಡಿದು ನಡುಮನೆಗೆ ಬರುವಷ್ಟರಲ್ಲಿ ಮತ್ತೆ ಫೋನ್ ರಿಂಗಣಿಸಿತು. ತಕ್ಷಣ ಎತ್ತಿಕೊಂಡಳು. ಅತ್ತಲಿಂದ ಸುರೇಶ್ ದನಿ. "ಯಾಕೇ ಇನ್ನೂ ಮಲಗಿಲ್ಲಾ? ನಿನಗೇನೋ ತಲೆನೋವು ಬಂದಿದೆ ಅಂತ ನನ್ನ ಹೃದಯ ಕೂಗ್ತಿತ್ತು. ಅದ್ಕೇ ರಾತ್ರಿ ತಡವಾದರೂ ಫೋನ್ ಮಾಡ್ದೆ. ಚೆನ್ನಾಗಿದ್ದೀಯಾ ತಾನೆ?" ಪ್ರಶ್ನೆಗಳ ಸುರಿಮಳೆ ಅವನಿಂದ. ಸಂಜೆ ಶುರುವಾಗಿದ್ದ ಸೋನೆ ಇನ್ನೂ ಸುರಿಯುತ್ತಿತ್ತು ಹೊರಗೆ. ಅವನ ಕಕುಲಾತಿಗೆ ಗಂಟಲುಬ್ಬಿ ಬಂದರೂ, ಎರಡು ದೀರ್ಘ ಉಸಿರು ತೆಗೆದುಕೊಂಡು, ಭಾವನೆಗಳನ್ನು ಹತೋಟಿಗೆ ತಂದುಕೊಂಡು, "ಏನಿಲ್ಲ ಸುಶ್. ಮಕ್ಕಳೂ ಇಲ್ಲ, ನೀನೂ ಇಲ್ಲಿಲ್ಲ. ಯಾಕೋ ಬೋರ್ ಅನ್ನಿಸ್ತಿತ್ತು. ಅದ್ಕೇ ಹಾಡಿಕೊಳ್ತಿದ್ದೆ. ಹೊತ್ತು ಹೋಗಿದ್ದೇ ತಿಳೀಲಿಲ್ಲ. ನೀನು ಹೇಗಿದ್ದೀಯ? ಹೇಗಿದೆ ಸ್ವಿಸ್ ಪರ್ವತ ಶ್ರೇಣಿ? ನನ್ನ ಬಿಟ್ಟು ಹೋಗಿದ್ದೆಯಲ್ಲ, ಅದಕ್ಕೇ ನಿನಗೇ ತಳಮಳ ಆಗಿರಬೇಕು. ನನ್ನ ಮೇಲೆ ಯಾಕೆ ದೂರು ಹಾಕ್ತೀಯ?" ನಗೆಯಲ್ಲಿ ಮರೆಸಿದಳು.
"ಏನಮ್ಮ, ನನಗೇ ಟೋಪೀನಾ? ನಿನ್ನ ದನಿ ನಂಗೆ ಗೊತ್ತಾಗಲ್ಲ ಅಂದ್ಕೊಂಡಿದೀಯ? ಯಾಕೆ ಅಳ್ತಿದ್ದೆ, ಹೇಳು? ಇಲ್ಲದಿದ್ರೆ, ನನ್ನ ಎಲ್ಲ ಕೆಲ್ಸ ಬಿಟ್ಟು ನಾಳೇನೇ ಫ್ಲೈಟ್ ಹಿಡೀತೀನಿ. ಮೂವತ್ತು ವರ್ಷದಿಂದ ನಿನ್ನ ಕಂಡಿದ್ದೀನಿ. ಜೊತೆಜೊತೆಗೆ ಇಪ್ಪತ್ಮೂರು ವರ್ಷ ಬಾಳಿದ್ದೀವಿ. ಯಾಕೆ ಇನ್ನೂ ಮರೆಸೋ ಪ್ರಯತ್ನ? ಹೇಳು, ಏನಾಯ್ತು? ಅಮ್ಮ ಏನಾದ್ರೂ ಫೋನ್ ಮಾಡಿದ್ಲಾ?"
"ಇಲ್ಲ ಸುಶ್, ಅಂಥಾದ್ದೇನಿಲ್ಲ. `ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ...' ಹಾಡ್ತಿದ್ದೆ. ಅದನ್ನು ನೀನಿಲ್ಲದಾಗ ಹಾಡಿದ್ರೆ ಹೇಗಿರತ್ತೆ, ನಿನಗೂ ಗೊತ್ತು. ಶನಿವಾರ ಬರ್ತೀಯಲ್ಲ. ಅದೇ ಸಂತೋಷ. ಸುಮ್ನೆ ಚಿಂತೆ ಮಾಡ್ಬೇಡ. ನಿನ್ ಕೆಲ್ಸ ನೋಡ್ಕೋ. ಊಟ-ತಿಂಡಿ ಸರಿಯಾಗಿ ಮಾಡು. ನಾನು ಆರಾಮಾಗಿದ್ದೀನಿ. ಸರೀನಾ?"
ಮತ್ತೊಂದೆರಡು ಹರಟೆಯ ಮಾತುಗಳನ್ನಾಡಿ ಸುರೇಶ್ ಫೋನಿಟ್ಟ. ಆದರವನಿಗೆ ಸಮಾಧಾನವಾದಂತಿರಲಿಲ್ಲ.

ಮರೆತರೂ ಮರೆಯಗೊಡದ ಹಳೆಯ ನೆನಪಿನ ಕೆಸರು ಆಗಲೇ ಮೇಲೆದ್ದು ಮನಸ್ಸು ರಾಡಿಯಾಗಿತ್ತು. ನಿದ್ರೆ ದೂರಾಗಿತ್ತು. ನೆನಪುಗಳಲ್ಲಿ ಹೂತುಹೋದಳು ಮಾಧವಿ.

ಕಾಲೇಜಿನ ದಿನಗಳಲ್ಲಿ ತನ್ನ ಹಾಡಿನ ಮೋಡಿಗೆ ಬಿದ್ದವರಲ್ಲಿ ಸುರೇಶನೂ ಒಬ್ಬ. ದೂರದ ನೆಂಟನೆಂಬ ಸಲುಗೆಯೂ ಇತ್ತು. ನೆಂಟತನದ ಮಟ್ಟದಿಂದ ನಂಟು ಮೇಲೇರದಂತೆ ಇವಳೇ ದೂರವಿಟ್ಟಿದ್ದಳೋ, ಅಮ್ಮನ ಕೆಂಗಣ್ಣು ಹಾಗೆ ಮಾಡಿಸಿತ್ತೋ ಇಂದಿಗೂ ಅವಳಿಗರಿವಿಲ್ಲ. ಅಷ್ಟರಲ್ಲಿ ಶಾರ್ವರಿಯ ಮೂಲಕ ಪರಿಚಯವಾದವನು ಪ್ರಣಯ್. ಅವನ ಕಂಠ, ನಾಟಕಗಳಲ್ಲಿ ಅವನ ಅಭಿನಯ, ಮತ್ತು ಅವನ ನಯವಾದ ಮಾತುಗಾರಿಕೆಗೆ ಸೋತಿದ್ದಳು ಮಾಧವಿ. ಅವನು ಕವಿತೆಯನ್ನೂ ಬರೆದು ತಾನವುಗಳನ್ನು ಹಾಡಿ ಇಬ್ಬರೂ ಪ್ರಸಿದ್ಧರಾಗುವ ಕನಸುಗಳನ್ನು ಹದಿಹೃದಯ ಕಟ್ಟಿಕೊಂಡಿತ್ತು. ಶಾರ್ವರಿಗೆ ಗೆಳತಿಯ ಮನಸ್ಸು ತಿಳಿದಿತ್ತು. ಇವಳಿಗೆ ತಿಳಿಯದಂತೆ ಇಬ್ಬರನ್ನೂ ದೂರ ಮಾಡುವ ಪ್ರಯತ್ನ ನಡೆಸಿದ್ದಳು. ಕಾಲೇಜಿನ ಕೊನೆಯ ದಿನಗಳಲ್ಲಿ ಪ್ರಣಯ್ ಇವಳಿಗೆ ಮುಖಭಂಗವಾಗುವಂತೆ ಎಲ್ಲರ ಮುಂದೆಯೂ ಹೀಯಾಳಿಸಿದ್ದಾಗ ಮಾಧವಿಯ ಜೊತೆ ನಿಂತವನು ಸುರೇಶ್. ಅಂದಿನಿಂದ ಅವನಲ್ಲಿನ ನಿಜವಾದ ಗೆಳೆಯನನ್ನು ಕಂಡುಕೊಂಡ ಮಾಧವಿ, ಅವನನ್ನೇ ಬಾಳಸಂಗಾತಿಯಾಗಿಯೂ ಆಯ್ದುಕೊಂಡಾಗ ಇಬ್ಬರ ಅಮ್ಮಂದಿರ ಹೊರತಾಗಿ ಎಲ್ಲರೂ ಮೆಚ್ಚಿಕೊಂಡಿದ್ದರು. ತನ್ನ ಸ್ನೇಹ, ಪ್ರೀತಿ, ವಿಶ್ವಾಸ, ಹರಟೆ, ಲವಲವಿಕೆಗಳಿಂದ ಪ್ರಣಯ್ ಎಂಬ ಪ್ರಳಯವನ್ನು ಮರೆಸಿ, ಮಾಧವಿಯನ್ನು ಮತ್ತೆ ಚಿಗುರಿಸಿದ್ದ. ಎಲ್ಲವನ್ನೂ ತಿಳಿದೂ ಹಳೆಯದನ್ನು ಮೆಟ್ಟಿನಿಂತ ಸುರೇಶ್ ಮಾಧವಿಯ ಸರ್ವಸ್ವವೂ ಆಗಿದ್ದ.

ಇಷ್ಟೆಲ್ಲ ನೆನಪುಗಳ ಹಿನ್ನೆಲೆಯಲ್ಲಿಯೇ, ಪ್ರಣಯ್ ಮತ್ತೆ ಬಂದಾಗ ಆತನಿಂದ ಪೂರ್ಣ ಸತ್ಯ ತಿಳಿಯುವ ಆಕೆಯ ಯೋಚನೆಯೂ ಹಿಂದೆ ಬಿತ್ತು. ಏನೇ ಆಗಲಿ, ತಾನೀಗ ನೆಮ್ಮದಿಯ ಬಾಳು ಬಾಳುತ್ತಿದ್ದೇನೆ. ಹಿಂದಿನದನ್ನು ಕೆದಕಿ ಏನಾಗಬೇಕಿದೆ? ಆದರೆ, ಅವನಿಗೆ ಮನೆಯನ್ನು ಬಾಡಿಗೆಗೆ ಕೊಡುವದಂತೂ ಸಾಧ್ಯವಿಲ್ಲ. ಭೂತಕ್ಕೆ ಬಾಗಿಲನ್ನು ತೆರೆಯುವ ಅಗತ್ಯವಿಲ್ಲ ಅಂದುಕೊಳ್ಳುತ್ತಿರುವಾಗಲೇ ಬೀದಿಯಲ್ಲಿ ಹಾಲಿನವನ ಸೈಕಲ್ ಬೆಲ್ - ಟ್ರಿಣ್... ಟ್ರಿಣ್... ಎಂದಿತು. ಇನ್ನೂ ಸುರಿಯುತ್ತಿದ್ದ ಮಳೆಗೆ ನೆನೆಯದಂತೆ ಕೊಡೆ ಹಿಡಿದು ಬಾಗಿಲು ತೆರೆದು ಅಂಗಳಕ್ಕೆ ಬಂದಳು.

srinivasps's picture

ಈ ಕಥೆ, ಬರೀ ನಾಲ್ಕನೇ ಮನಸ್ಸಿನ ಹೆಣಿಗೆಗೇ ನಿಂತೋಯ್ತಲ್ಲಾ?

Jyothi M's picture

ಹೌದು ಶ್ರೀನಿವಾಸ್. ಹೊಸಬರು ಯಾರಾದರೂ ಬರೆಯಲಿ ಅಂತ ನನ್ನ ಸ್ನೇಹಿತೆಯೂ ನಾನೂ ಸುಮ್ಮನಿದ್ದೇವೆ. ಯಾರೂ ಬರೆಯುತ್ತಿಲ್ಲ. ನೀವಾದರೂ ಮತ್ತೆ ಮುಂದುವರಿಸಿ, ನಾನೂ ಕೈ ಜೋಡಿಸುತ್ತೇನೆ.

hamsanandi's picture

ಸಂಪದದ ಕಥೆಗಾರರಲ್ಲ ಎಲ್ಲಿ ಹೋದರು?

ಬಚ್ಚಿಟ್ಕೊಂಡವರೆಲ್ಲ ಹೊರಕ್ಕೆ ಬನ್ನಿ! ರೂಪಾ, ಗುರುಬಾಳಿಗ, ಶೈಲಾಸ್ವಾಮಿ .......ಮತ್ತೆ ನಾನು ಹೇಳದೇ ಬಿಟ್ಟ ಹಲವಾರು ಜನ...

-ಹಂಸಾನಂದಿ

sm.sathyacharana's picture

ಹಾಲಿನವ, ಮಾಧವಿಯ ಕೈಗೆ ಹಾಲಿನ ಪೊಟ್ಟಣ ಕೊಟ್ಟು ಹೊರಟುಹೋದದ್ದಾದರೂ, ಮಾಧವಿಯ ಹೆಜ್ಜೆ, ಇನ್ನೂ ಅಂಗಳದಿಂದ ಬಾಗಿಲೆಡೆ ತಿರುಗಿರಲೇ.. ಇಲ್ಲ.. ಕೈಯಲ್ಲಿದ್ದ ಹಾಲಿನ ಪೊಟ್ಟಣ ಹಾಗೇ ಇತ್ತು. ಆದರೆ ಮಾಧವಿಯ ಮನಸ್ಸು, ಅಂಗಳ ದಾಟಿ, ಆ ಧಾರಾಕಾರದ ಮಳೆಯಲ್ಲಿ ಮತ್ತೆ ನೆನೆಯಲಾರಂಭಿಸಿತ್ತು.

ಅದು, ಆ ದಿನ, ಪ್ರಣಯ್ ಮುಖಭಂಗ ಮಾಡಿದ ದಿನ. ಬೇಜಾರಿಂದ ಅಲ್ಲೇ ಕಾಲೇಜಿನ ಗ್ರಂಥಾಲಯದಲ್ಲೇ ಮೆಟ್ಟಿಲ್ಲಲ್ಲೇ ಕುಳಿತ ಮಾಧವಿ, ಆ ಮೈಮರೆತದಿಂದ ಹೊರಬಂದದ್ದು ಎಲ್ಲೋ ಯಾರೋ ತನ್ನ ಹೆಸರನ್ನ ಬಹು ಮೃದುವಾಗಿ, ಸವಿಯಾಗಿ ಕರೆಯುತ್ತಿದ್ದಾರೆ ಅನ್ನಿಸಿದಾಗ. ಅದು ಸುರೇಶ, ಅವಳ ಪಕ್ಕದಲ್ಲೇ ಕುಳಿತು ಕರೆದದ್ದಾಗಿತ್ತು.

ಮತ್ತೆ ನಿಧಾನ, ಈ ಹೊರ ಪ್ರಪಂಚಕ್ಕೆ ಬರೋ ಪ್ರಯತ್ನದಲ್ಲಿ ಅವಳಿಗೆ ಆಸರೆಯಾದವ, ಸುರೇಶ್. ಅಂದು ತರಗತಿಗಳು ಆಗಲೇ ಮುಗಿದಿತ್ತು,ವಿಧ್ಯಾರ್ಥಿಗಳಾರು ಕಾಲೇಜಿನಲ್ಲಿ ಕಾಣುತ್ತಿರಲಿಲ್ಲ; ಹೊರಗೋ ಧಾರಾಕಾರ ಮಳೆ. ಮಾಧವಿಯ ಹೃದಯ, ಅಂದು ಅನುಭವಿಸಿದ್ದ ಘಾಸಿಯಿಂದ ಹೊರಬರೋ ವ್ಯರ್ಥ ಪ್ರಯತ್ನದಲ್ಲಿದ್ದರೆ, ಸುರೇಶ್‌ನ ಕರೆ ಅವಳಿಗೆ ವಾಸ್ತವಿಕ ಪ್ರಪಂಚದ, ಮತ್ತೊಂದು ಸದ್ಯದಲ್ಲೇ ಬಂದೆರಗಬಹುದಾಗಿದ್ದ, ಅವರ ಅಮ್ಮನ ಕಹಿನೋಟದ, ವ್ಯಂಗ್ಯದ ಮಾತಿನ ನೆನಪನ್ನ ತರಿಸಿ, ಇನ್ನೂ ಮಳೆಯಲ್ಲಿ ನೆನಯದಿದ್ದ ಮಾಧವಿ, ಒಳಗಿಂದನೇ ಎದ್ದ ಪೂರ್ಣ ಮಟ್ಟದ ಚಳಿಯಲ್ಲಿ, ತರಗುಟ್ಟಿ ಹೋಗಿದ್ದಳು. ಅವಳ ಆ ಸ್ಥಿತಿಗೆ, ಬೆಚ್ಚನೆಯ ಅನುಭವ ನೀಡಲೋಸುಗವೇನೋ ಎಂಬಂತೆ, ಸುರೇಶ್ ಅವಳನ್ನ ಒಂದು ಬದಿಯಿಂದ ಬಳಸಿ ಹಿಡಿದದ್ದು. ಅಂದು ಮಾಧವಿಗೆ ಅದು ಹೇಗೋ ಸಹ್ಯ ಅನ್ನಿಸತೊಡಗಿತ್ತು.

ಅದು, ಆ ದಿನ ಸುರೇಶ್‌ನನ್ನ ಸರಿಯಾಗಿ ತಿಳಿಯಾರಂಭಿಸಿದ ದಿನ.. ಮಳೆ ಇದೇ ರೀತಿಯಲ್ಲಿ ಭೋ.. ಅಂತ ಸುರಿಯುತ್ತಿದ್ದರೆ, ಸುರೇಶ್‌ನ ಕಣ್ಣಗಳು, ಮಾಧವಿಯ ಹೃದಯಕ್ಕೆ ಸಮಾಧಾನ ನೀಡುತ್ತಿವೆಯೇನೋ ಅನ್ನುವಂತಾ ರೀತಿಯಲ್ಲಿ.. ಎಂದೆಂದೂ ಕಂಡಿರದ, ಎಂದೆಂದೂ ಅನುಭವಿಸಿರದ ತಂಪನ್ನ ಮಾಧವಿಗೆ ನೀಡುತ್ತಿದ್ದವು..

ಮನೆಯಲ್ಲಿ, ಪ್ರಣಯ್‌ನ ವಿಚಾರ ಹೇಗೋ ಗೊತ್ತಾಗಿದೆ ಅಂತ ಗೊತ್ತಾದ ಮೇಲೆ, ಏನು ಮಾಡಬೇಕು ಅನ್ನೋ ಗೊಂದಲಕ್ಕೆ ಬಿದ್ದಾಗ ಮತ್ತೆ ಮಾಧವಿಗೆ ಸಮಾಧಾನ ಮಾಡಿದ್ದು, ಅದೇ ಸುರೇಶ್. ಸುರೇಶ್‌ಗೆ ಮಾಧವಿಯ ಜೀವನದ ಬಗ್ಗೆ, ಮಾಧವಿಗಿಂತಾ ಹೆಚ್ಚು ಗೊತ್ತಿದಿಯಾ ಅಂತಾ ಅವಳಿಗೆ ಅನ್ನಿಸತೊಡಗಿತ್ತು. ಆದರೆ, ಸುರೇಶ್ ಎಲ್ಲೂ ತನ್ನ ಮಿತಿ ಮೀರದೇ, ತನ್ನ ಶಿಸ್ತು ಮೀರದೇ, ಮಾಧವಿಗೆ ಎಲ್ಲಾ ರೀತಿಯಲ್ಲೂ ಆಸರೆಯಾಗಿದ್ದ. ಅವಳ ಎಲ್ಲಾ ದುಃಖ ಮರೆಸಿದ, ಅವಳ ಜೀವನದಲ್ಲಿ ಮತ್ತೆ ಸಂತೋಷ ಚಿಮ್ಮುವಂತೆ ಮಾಡಿದ್ದ. ಅವಳ ಕಾಲೇಜಿನ ಓದು, ಯಾವುದೇ ತೊಂದರೆ ಇಲ್ಲದಂತೆ ಸಂಪೂರ್ಣ ಆಗಲು, ಸುರೇಶ್ ತನ್ನೆಲ್ಲಾ ಪ್ರಯತ್ನ ಮಾಡಿ, ಮಾಧವಿಗೆ ಎಲ್ಲೂ ಅವಳ ಭೂತದ ನೆನಪು ಮರುಕಳಿಸದಂತೆ ನೋಡಿಕೊಂಡ. "ಪ್ರಸ್ತುತ"ದಲ್ಲಿ ತಾನೇ ಒಂದು ತೊಂದರೆಯಾಗದಂತೆ ಒಂದು ಸುರಕ್ಷಿತ ದೂರವನ್ನ ಉಳಿಸಿಕೊಂಡು, ಕಾಲೇಜು ಮುಗಿದ ನಂತರ, ತಾನು ಒಂದೆಡೆ ಕೆಲಸ ಸೇರಿದರೂ, ತನ್ನೊಡನೆ, ಅದು ಯಾವ ರೀತಿಯಲ್ಲಿ, ನಾನು ಅವನ ಬಿಟ್ಟು ಬೇರೆಯವರ ಬಗ್ಗೆ ಯೋಚನೆ ಮಾಡದ ಹಾಗೆ, ಮಾಡಿದನಲ್ಲಾ." ಅಂತಾ ಮಾಧವಿ ಅಚ್ಚರಿಪಡಲಾರಂಭಿಸಿದ್ದಳು.

ಸುರೇಶ್ ಅಂದು, ತನ್ನ ಕೆಲಸದಲ್ಲಿ ಎರಡೇ ವರ್ಷದಲ್ಲಿ ಉತ್ತಮ ಮಟ್ಟಕ್ಕೆ ಏರಿ, ಮಾಧವಿಯ ಮನೆಗೆ, ತನ್ನ ಅಮ್ಮನ ಒತ್ತಾಯಿಸಿ ಕರೆತಂದು, ಮಾಧವಿಯನ್ನ ನೋಡಲು ಬಂದಾಗ, ಸುರೇಶನ ಒಳ್ಳೆತನಕ್ಕೆ ಮೆಚ್ಚಿದ್ದ, ಮಾಧವಿಯ ಮುದ್ದಿನ ಅಪ್ಪನಿಂದಾಗಿ, ಮದುವೆಯ ಓಲಗವೇನೋ.. ಯಾವುದೇ ತೊಂದರೆ ಇಲ್ಲವೇನೋ ಅನ್ನವಂತೆ ಊದಿತ್ತು..

ಎಲ್ಲಿ ಎಲ್ಲವನ್ನೂ ಕಳೆದುಕೊಳ್ಳತ್ತೇನೆ ಅಂದುಕೊಂಡಿದ್ದ ಮಾಧವಿಗೆ, ಹೀಗೆ ಅಚಾನಕ್ಕಾಗಿ ಎಲ್ಲಾ ಸರಿಯಾಗಿ ನಡೆದಾಗ, ಒಮ್ಮೆ ಬಹು ಗಾಬರಿಯೂ ಆಗಿ, ಇದು, ಎಲ್ಲಿ ಎಲ್ಲಾ ಉಲ್ಟಾ ಆಗಿಬಿಡುತ್ತೋ ಅನ್ನೋ ಭಯ.. ಮದುವೆ ಆಗೋವರೆವಿಗೂ ಕಾಡಿದ್ದು ನಿಜವೇ. ಹೀಗೂ ಅಗುತ್ತಾ ಜೀವನದಲ್ಲಿ, ಇಷ್ಟು ಸುಖವಾಗೇ ನಡೆಯುತ್ತಾ ಎಲ್ಲರ ಜೀವನ ಅಂತ ಯೋಚಿಸಹೋದ ಮಾಧವಿಗೆ ತಕ್ಷಣ ಮತ್ತೆ.. ಶಾರ್ವರಿಯ ಆ ಮುಖ, ಮತ್ತೆ ಮತ್ತೆ ಕಣ್ಣ ಮುಂದೆ ಬರತೊಡಗಿತ್ತು..

ಧಾರಕಾರದ ಅಂದಿನ ಮಳೆಯು ಅವಳ ಮುಖದ ಮೇಲೆ ತನ್ನ ಚಿಮಖುಲನ್ನ ಚಿಮುಖಿಸುತ್ತಾ ಇದ್ದರೂ, ಅವಳ ಮನಸ್ಸು ಇನ್ನೂ ಮತ್ತೆ ಅದೇ ಮೊದಲ ದಿನದ ಸುರೇಶ್‌ನ ಬಳಸುವಿಕೆಯಿಂದ ಹಿಡಿದು, ಶಾರ್ವರಿಯ ಅಂದು ಅವಳ ಕೊನೆಯದಾಗಿ ನೋಡಿದ ಆ.. ಆ.. ನೋವಿನ ಮುಖದ ಸುತ್ತಮುತ್ತಾನೇ ಸುತ್ತುತ್ತಿತ್ತು.. ಅವಳನ್ನು ಮತ್ತೆ ವಾಸ್ತವಕ್ಕೆ ಮತ್ತ ತಂದದ್ದು.. ಅಷ್ಟರಲ್ಲೇ ಎಲ್ಲಿಂದನೋ ಕೇಳಿಬಂದಿದ್ದ.. ಆ ಮಳೆಯ ಧಾರಾಕಾರದ ಮಧ್ಯದ ಒಂದು ದನಿ..

"ಮಾಧವೀ..."

[ಯಾವತ್ತೂ ಕತೆ ಬರೆಯೋ ಪ್ರಯತ್ನ ಮಾಡಿಲ್ಲ.. ಇದು ನನ್ನ ಮೊದಲ ಪ್ರಯತ್ನ.. ಸರಿಯಾಗಿದೆ ಅನ್ನಿಸಿದಲ್ಲಿ ದಯವಿಟ್ಟು ಮುಂದುವರೆಸಿ.. ಇಲ್ಲವಾದಲ್ಲಿ.. ಮೇಲೆ ಜ್ಯೋತಿಯವರು ಬಿಟ್ಟಲ್ಲಿಂದ ಮುಂದುವರೆಸಬಹುದು.. :)

ನಿಮ್ಮೊಲವಿನ,
ಸತ್ಯ..]

roopablrao's picture

ಮಾಧವಿ ಧ್ವನಿ ಬಂದತ್ತ ನೋಡಿದಳು
ಮಳೆಯ ಹನಿಗಳ ನಡುವಲ್ಲಿ ಮತ್ತೆ ಕಾಣಿಸಿತು ಅದೇ ಮುಖ. ಹೋಗಿದ್ದವನೇಕೆ ಮತ್ತೆ ಬಂದ ಪ್ರಣಯ್. ಮಳೆಯಲ್ಲೂ ಮೊಗ ಬೆವರಲಾರಂಭಿಸಿತು.
"ಮಾಧವಿ" ಮತ್ತೊಮ್ಮೆ ಕರೆದ
ಅದೇ ಸ್ವರಕ್ಕಾಗಿ ಅಲ್ಲವೇ ತಾನು ಪ್ರಣಯ್‌ಗೆ ಮನಸೋತಿದ್ದು.
ಅಂದು ಇದೇ ರೀತಿಯ ಸೋನೆ ಮಳೆ ಸುರಿಯುತ್ತಿತ್ತು. ಎಲ್ಲರೂ ತಮ್ಮತಮ್ಮ ಕ್ಲಾಸ್ ರೂಮಿನಲ್ಲಿ ಸೇರಿದ್ದರು ತಾನು ಮತ್ತು ಶಾರ್ವರಿ ಇಬ್ಬರೇ
ಮಳೆಯಲ್ಲಿ ತೋಯುತ್ತಾ ಸಂತಸ ಪಡುತ್ತಿದ್ದೆವು
ಆ ಮಳೆಯಲ್ಲಿ ತಮ್ಮಂತೆ ಮತ್ತೊಬ್ಬ ಶಿಳ್ಳೇ ಹಾಕುತ್ತಾ ಮಳೆ ಹನಿಗಳ ಜೊತೆ ಆಟವಾಡುತ್ತಿದ್ದ.
ನೋಡಿದ ಕ್ಷಣದಲ್ಲಿ ತನ್ನ ಮನವನ್ನು ಆತ ಸೂರೆ ಹೊಡೆದಿದ್ದ. ಆದರೆ ಅದೇ ವೇಳೆಗೆ ಶಾರ್ವರಿ ಹಾಗು ಪ್ರಣಯ್‌ನ ಕಣ್ಣು ಒಂದಾಗಿದ್ದು ತನಗೇಕೆ ತಿಳಿಯಲಿಲ್ಲ.
ತಿಳಿದಿದ್ದರೆ ಆಗಲೆ ಬಿಟ್ಟುಕೊಡುತ್ತಿದ್ದೆನಾ? . ಉತ್ತರ ಕೊಡಲು ಮನಸು ಈಗಲೂ ಹಿಂದೇಟು ಹಾಕುತ್ತಿದೆ.
"ಮಾಧವಿ . ಚೆನ್ನಾಗಿದ್ದೀಯಾ?" ಪ್ರಣಯ್ ಕೇಳಿದ
"ಹಾ ನಾನು ಚೆನ್ನಾಗಿದ್ದೀನಿ. ನೀನು ಹ್ಯಾಗಿದ್ದೀಯಾ" ಒಂದೊಂದೇ ಮಾತನ್ನು ಬಿಡಿ ಬಿಡಿಯಾಗಿ ಕೇಳಿದಳು
"ಆಗಲೇ ಅನುಮಾನ ಬಂತು ಆದರೆ ಅದು ನೀನಾ ಅಲ್ಲವಾ ಅಂತ ಖಚಿತ ಆಗಿರಲಿಲ್ಲ .ಯಾಕೋ ಹೋಗ್ತಾ ಹೋಗ್ತಾ ಅದು ನೀನೆ ಅಂತ ಹೊಳೀತು. ಒಳಗೆ ಕರೆಯೋದಿಲ್ವಾ"
"ಅಯ್ಯೋ ಪ್ರಣಯ್ ಸಾರಿ ಬಾ ಒಳಗೆ."
ಆತ ಸುತ್ತೆಲ್ಲಾ ನೋಡಿದ.ಕೂರಲು ಹೇಳಿದ
"ಶಾರ್ವರಿ ಹೇಗಿದಾಳೆ" ಕೇಳಬಾರದೆಂದೆನಿಸಿದರು ಕೇಳಿಯೇ ಬಿಟ್ಟಳು
"ಶಾರ್ವರಿ? ನಾನು ಬಂದದ್ದೂ ನಿನ್ನನ್ನ ಅವಳ ಬಗ್ಗೇನೇ ಕೇಳೋದಿಕ್ಕೆ" ಆತ ಅಚ್ಚರಿಯಿಂದ ಹೇಳಿದ
"ನಂಗೆಲ್ಲಿ ಗೊತ್ತಾಗುತ್ತೆ ಅವಳ ಬಗ್ಗೆ . ಅಂದು ಅವಳ ಜೊತೆ ಜಗಳ ಆಡಿದ ದಿನದಿಂದ ಇಂದಿನವರೆಗೆ ಅವಳ ಬಗ್ಗೆ ಎಂದೂ ಯೋಚಿಸಿಲ್ಲ. ಆದ್ರೆ ನಿಂಗೆ ಅವಳ ಬಗ್ಗೆ ಗೊತ್ತಿರಬೇಕಲ್ಲವಾ?"
"ಇಲ್ಲ ಮಾಧವಿ. ಅವಳು ನನ್ನನ್ನ ಬಿಟ್ಟು ತುಂಬಾ ದೂರ ಹೊರಟು ಹೋದಳು"
"ಆಂ" ಅಚ್ಚರಿಯಿಂದ ಬಾಯಿ ತೆಗೆದಳು. ಮನದ ಮೂಲೆಯಲ್ಲೆಲ್ಲೋ ಸಂತಸ ಕಾಣುತ್ತಿದೆ ಎಂದೆನಿಸಿತು .
"ಯಾಕೆ ಏನಾಯ್ತು? "

hamsanandi's picture

ಅದ್ಯಾಕೋ ಏಳೇ ಮನಸ್ಸುಗಳ ನಂತರ ಬ್ರೇಕ್ ಹಾಕ್ಬಿಟ್ಟಿದೆಯಲ್ಲ ಕಥೆ?

ಅದಕ್ಕೇ ಮೇಲೆ ತಂದಿದೇನೆ! ಮತ್ತು ಮೂರು ಜನ ಎಲ್ಲಿದೀರ? ಬೇಗ ಬನ್ನಿ....ಕಥೆ ಮುಗಿಸಿ.

sm.sathyacharana's picture

ಹೂಂ.. ನಾನೂ ಕಾಯುತ್ತಾ ಇದ್ದೇನೆ.. ಬಹಳ ದಿವಸದಿಂದ..
ಹೊಸಬರು.. ಬಹಳ ಜನ.. ಇತ್ತೀಚೆಗೆ.. ಸಂಪದದಲ್ಲಿ.. ಬರಹ ಬರೆಯುತ್ತಿದ್ದಾರೆ..
ಯಾರಾದರೂ ಮತ್ತೆ ಪ್ರಯತ್ನಿಸಬಹುದೇ..?

ಸಂಪದಿಗರೇ.. ಬನ್ನಿ..
ಕತೆ ಮುಂದುವರೆಸಿ..

ನಿಮ್ಮೊಲವಿನ,
ಸತ್ಯ..

drushya pradeep's picture

"ಏನಂತ ಹೇಳಲಿ ಮಾಧವಿ, ನನ್ನಷ್ಟು ದುರದೃಷ್ಟವಂತ ಬೇರೆ ಯಾರು ಇಲ್ಲ ಅನ್ಸುತ್ತೆ.. ನನ್ನ ಪ್ರೀತಿಸ್ದವಳನ್ನ ನಾನೇ ದೂರ ಮಾಡ್ಕೊಂಡೆ.. ನಾನು ಪ್ರೀತಿಸ್ದವಳು ನನ್ನಿಂದ ದೂರ ಆದ್ಲು.. ಒಟ್ನಲ್ಲಿ ನಾನು ಏಕಾಂಗಿ ಆದೆ.. ಆದ್ರೆ ನಿನಗೆ ನಾನು ಮಾಡ್ದ ಅವ್ಮಾನ ನನ್ನ ಕಾಡ್ತನೆ ಇತ್ತು.. ಅಷ್ಟ್ರಲ್ಲಿ ಸುರೇಶ್ ನಿಂಗೆ ನೆಮ್ದಿ ತುಂಬಕ್ಕೆ ಬಂದಿದ್ದ.. ಮತ್ತೆ ನಿನ್ನ ಹತ್ರ ಬಂದು ಮಾತಾಡ್ಸಕ್ಕೆ ಧೈರ್ಯ ಸಾಲ್ದೆ, ಅದೆ ಊರಲ್ಲಿ ಇರಕ್ಕೂ ಆಗ್ದೆ ಹೊರಟು ಹೋದೆ.. ನೀನು, ಶಾರ್ವರಿ ಪದೇ ಪದೇ ನನ್ನ ನೆನಪನ್ನು ಕಾಡ್ತನೆ ಇದ್ರಿ... ಆದ್ರು ಜೀವ್ನದ ಹಾದಿ ಕವಲೊಡೆದ ಮೇಲೆ ಹಿಂದಿನದೆಲ್ಲ ಮರೆತು ಮುಂದೆ ಹೋಗ್ಲೆ ಬೇಕಿತ್ತು.... ನಾನು ಹೊರಡೋ ನಿರ್ಧಾರ ಮಾಡಿದಾಗ್ಲೆ ನಿನ್ನ ಮದುವೆ ಸುದ್ದಿ ನನಗೆ ತಿಳಿದಿದ್ದು.. ನಿನ್ನ ಜೀವನದಲ್ಲಿ ನಾನು ವಿಲ್ಲನ್ ಆಗ್ಲಿಲ್ಲ ಅನ್ನೋ ನೆಮ್ಮದಿ ಮಾತ್ರ ನನ್ನ ಜೊತೆಯಲ್ಲಿದ್ದಿದ್ದು..
ನಾನು ನನ್ನ ಜೀವನ ರೂಪಿಸಿಕೊಳ್ಳೋ ಹೋರಾಟದಲ್ಲಿದ್ದೆ.. ಹಿಂದಿನ ಯಾವ ವಿಷಯಗಳು ನನಗೆ ಬೇಕಾಗಿರಲಿಲ್ಲ.. ನನ್ನ ಸುತ್ತ ಒಂದು ಕೋಟೆ ಕಟ್ಕೊಂಡು ಬದುಕ್ತಿದ್ದೆ..... ಆದ್ರೆ ಅದು ಉರುಳಿಹೋಗೋ ಕಾಲ ಹತ್ರ ಬಂದಿತ್ತು.. ಆ ಬಿರುಗಾಳಿ ಬೀಸಿದ್ದು ಶಾರ್ವರಿ ಕಡೆಯಿಂದ... ಎಲ್ಲವನ್ನ ಮರಿಬೇಕು ಅಂದುಕೊಂಡ್ರೆ ಅದನ್ನ ಮರೆಯೋದಕ್ಕೆ ಆಗೋದೆ ಇಲ್ವೆನೋ.. ಮರ್ತು ಹೋಗ್ಬೇಕು ಅಂತನೆ ಅದರ ನೆನಪು ಜಾಸ್ತಿ ಆಗ್ತಿರುತ್ತೆ... ಅದೆಲ್ಲಿದ್ಲೋ ಮಹರಾಯ್ತಿ... ಕಾಲೇಜ್ನಲ್ಲಿದ್ದಾಗ ನಂಜೊತೆ ಅಷ್ಟು ಚೆನ್ನಾಗಿದವ್ಳಿಗೆ ಅದೇನಾಯ್ತು ಅಂತನೇ ಗೊತ್ತಾಗ್ಲಿಲ್ಲ.. ಏನು ಕಾರಣ ಇಲ್ದೆ ಜಗಳ ಮಾಡಿ ಹೋದಮೇಲೆ ಅವಳ ಬಗ್ಗೆ ತಿಳಿದ್ಕೊಳ್ಳೊ ಒಂದು ಸಣ್ಣ ಪ್ರಯತ್ನನೂ ಮಾಡ್ದೆ ಬಂದೆ ನಾನು.. ಆಮೇಲೆ ಅವಳ ಬಗ್ಗೆ ತಿಳಿದಿದ್ದು ಎಷ್ಟೋ ವರ್ಷದ ನಂತ್ರನೇ.. ನಾನು ನನ್ನ ಸುತ್ತ ಕಟ್ಟಿದ್ದ ಕೋಟೆ, ನನ್ನ ಜೀವನ ಎಲ್ಲ ಪುಡಿ ಪುಡಿ ಆದ್ಮೇಲೆನೇ....
ನನ್ನ ಬಿಟ್ಟು ಹೋದ್ಮೇಲೆ ಅವಳು ಶಾರ್ವರಿ ಅನ್ನೋ ಹೆಸರನ್ನ ಬದ್ಲಾಯ್ಸಿ ಕೊಂಡ್ಳು.. ಮುಗ್ಧ ಅವಳ ಹೊಸ ಹೆಸ್ರು.. ನನ್ನ ಜೀವನದಲ್ಲಿ ನಾನು ನೋಡಿದ ದೊಡ್ಡ ಜೋಕ್ ಇದು.. ಇಂತ ಸ್ವಭಾವಕ್ಕೆ ಎಂತ ಹೆಸ್ರು.. ಹ್ಮ್ಮ್..
ಏ ಮಾಧವಿ ಏನು ಯೋಚ್ನೆ ಮಾಡ್ತಿದ್ದಿಯಾ?? ನಿನ್ನ ಅನ್ಮಾನ ನಿಜ.. ಅವತ್ತಿನ ಟಾಪ್ ಸ್ಟಾರ್ ನಟಿ ಗಾಯಕಿ ಮುಗ್ಧನೇ ಶಾರ್ವರಿ... ಹೆಸ್ರು ರೂಪ ಎಲ್ಲ ಬದ್ಲಾದಾಗ ಗುರ್ತು ಹಿಡಿಯಕ್ಕೆ ಆಗ್ಲಿಲ್ಲ... ಆದ್ರೆ ಅವ್ಳು ಅಂತ ಗೊತ್ತಾಗಿದ್ದು......
ಇಷ್ಟು ಹೊತ್ತಿಗೆ ನಿಂಗೇ ಅರ್ಥವಾಗಿರ್ಬೇಕಲ್ಲ ಮಾಧವಿ?? ಅವಳಿಂದ ನಾನು ಅನುಭವಿಸಿದ ಪಾಡು.. ಪೇಪರ್ನಲ್ಲಷ್ಟೇ ಓದಿರ್ತಿಯ.. ಆದ್ರೆ ನಿಜವಾದ ಕಥೆ ಏನು ಅಂತ ಈಗ ನಾನೇ ಹೇಳ್ತಿನಿ ಕೇಳು.... "

ಉದ್ವೇಗದಿಂದ್ದ ಮಾಲತಿಯ ಎದೆ ಬಡಿತದ ಧಕ್ ಧಕ್ ಸದ್ದು ಪ್ರಣಯನಿಗೆ ಕೇಳಿಸುವಷ್ಟು ಜೋರಾಗೇ ಇತ್ತು....