ಕಾರಂತರ ಜೀವಂತ ಪಾತ್ರಗಳು ೨೦ (೪)
ದಿನವೆಲ್ಲ ತನ್ನ ಕಣ್ನು ತಪ್ಪಿಸಿಯೇ ಓಡಾಡಿದ ವಿಮಲೆಯನ್ನು ವ್ಯಾಸ ಅವಳು ಶಾಲೆಗೆ ಹೋಗುತ್ತಿದ್ದ ದಾರಿಯಲ್ಲಿಯೇ ಸಂಧಿಸಿದ . " ಏಕೆ ವಿಮಲೆ ನನ್ನನ್ನು ಕಾಣಲೂ ಸಹ ಜಿಗುಪ್ಸೆಯೇ ? ನಾನೇನು ಮಾಡಲು ಸಾಧ್ಯವಿತ್ತು ? ವಿಧಿ ಯಾರು ಯಾರ ಬಾಳಿನಲ್ಲಿ ಯಾವ ಯಾವ ಆಟವನ್ನು ಆಡಬೇಕೆಂದಿದೆಯೋ ಯಾರು ಊಹಿಸಲು ಸಾಧ್ಯ ? ,, ಎಂದು ನೋವಿನಿಂದ ಮಾತಾಡಿದ , ಇದಕ್ಕೆ ಉತ್ತರವಾಗಿ ಕಣ್ಣೀರಲ್ಲದೆ ವಿಮಲೆಯಿಂದ ಬೇರೆ ಮಾತೇ ಬರಲಿಲ್ಲ . ಪುನಃ ವ್ಯಾಸನೇ " ವಿಮಲೆ ಆದದ್ದೆಲ್ಲಾ ಆಯಿತು , ಬಂದ ಬವಣೆಗಳಿಗೆ ಕೊರಗುವುದರಲ್ಲಿ ಅರ್ಥವಿಲ್ಲ . ಬಾಳನ್ನು ಎದುರಿಸುವ ಎದೆಗಾರಿಕೆಯನ್ನು ನಾವು ಬೆಳೆಸಿಕೊಳ್ಳಬೇಕಷ್ಟೆ . ಈಗಲು ನೀನು ಧೈರ್ಯ ವಹಿಸಿದರೆ ಪುನಃ ಬಾಳಿನಲ್ಲಿ ನವ ಉಷೆಯನ್ನು ಕಾಣಬಹುದು . ನಿನಗಾಗಿ ನಿನ್ನ ವ್ಯಾಸ ಇನ್ನೂ ಕಾದಿದ್ದಾನೆ . ನಿರ್ಧಾರ ನಿನ್ನದು ,, ಎಂದು ಧೃಢವಾಗಿ ತಿಳಿಸಿ ಬೊಂಬಾಯಿಗೆ ಮರಳಿದ .
ಬೊಂಬಾಯಿಗೆ ಮರಳಿದ ವ್ಯಾಸ ಅಲ್ಲಿ ನಾಟ್ಯಶಾಲೆಯನ್ನು ತೆರೆದು ನರ್ತನದ ಗುರುವಾದ . ನಾಟ್ಯಶಾಲೆಗೆ ಪ್ರೇರಣೆ ನೀಡಿದ ಟ್ಯೂಬ ಮಾತ್ರ ಫ್ರಾನ್ಸಗೆ ಹಿಂತಿರುಗಿ ಹೋಗಿದ್ದಳು . ಅವಳ ಯಾವ ನಿರೀಕ್ಷೆಗಳು ಅವಳಲ್ಲಿ ನಿರಾಸೆಯನ್ನುಂಟುಮಾಡಿದ್ದವೋ ಅವನ್ನು ಅವಳು ಮಾತ್ರ ಬಲ್ಲಳು . ವ್ಯಾಸನ ನರ್ತನ ಶಾಲೆಗೆ ದೊರಕಿದ ಒಬ್ಬ ಅಪೂರ್ವ ಪ್ರತಿಭಾವಂತ ವಿದ್ಯಾರ್ಥಿನಿ ಕೀರ್ತಿ ಎಂಬ ಹುಡುಗಿ ತನ್ನ ಪ್ರತಿಭೆಯಿಂದ ವ್ಯಾಸನ ಮನಸ್ಸನ್ನು ಗೆದ್ದಳು .
ವಿಮಲೆ ತನ್ನ ತಾಯಿ ಮತ್ತು ಅಣ್ಣ ಕೃಷ್ಣನ ಸಹಕಾರದಿಂದ ಬೊಂಬಾಯಿಗೆ ಬಂದು ವ್ಯಾಸನನ್ನು ಮದುವೆಯಾದಳು . ಇದರಿಂದ ಕೋಪಿಸಿಕೊಂಡವರೆಂದರೆ ವಿಮಲೆಯ ತಂದೆ ಶ್ರೀನಿವಾಸರಾಯರು ಮತ್ತು ಅವಳ ಚಿಕ್ಕಪ್ಪ ರಾಮರಾಯರು . ರಾಮರಾಯರಂತೂ ಕೆಂಡಾಮಂಡಲವಾಗಿ ತಮ್ಮ ವಂಶಕ್ಕೇ ಅಗೌರವ ತಂದ ವ್ಯಾಸನನ್ನು ಸಾಕಾಗುವಷ್ಟು ಹಳಿದರು .
ಬೊಂಬಾಯಿಯ ಯಾಂತ್ರಿಕ ಜೀವನ ವ್ಯಾಸನಿಗೆ ಬೇಸರ ತರಿಸಿತ್ತು . ಅದುವರೆಗೆ ತಾಯಿ ತಂಗಿಯರಿಂದ ದೂರವಿದ್ದು ಅಲ್ಲಿಂದಲೇ ಅವರಿಗೆ ಹಣಕಾಸಿನ ನೆರವು ನೀಡುತ್ತಿದ್ದ ವ್ಯಾಸ, ಈಗ ಅವರ ಜೊತೆಗೇನೇ ಇರುವಾಸೆಯಿಂದ ಉಡುಪಿಗೇ ಹಿಂದಿರುಗಲು ನಿರ್ಧರಿಸಿದ . ಆ ವೇಳೆಗೆ ತಂಗಿ ಯಮುನೆಯ ಮದುವೆಯನ್ನೂ ಯೋಗ್ಯ ವರ ರಾಜಗೋಪಾಲರೊಂದಿಗೆ ನಡೆಸಿದುದರಿಂದ ತಂಗಿಯ ಕುಟುಂಬಕ್ಕೂ ಹತ್ತಿರವಿರುವ ಆಸೆ, ರಾಜಗೋಪಾಲರ ಪ್ರೀತಿಯ ಆಮಂತ್ರಣದಿಂದಾಗಿ ಅವನಲ್ಲಿ ಅಂಕುರಿಸಿತ್ತು . ವಿರೋಧ ವ್ಯಕ್ತಪಡಿಸುವ ರಾಮರಾಯರಂತಹವರ ನಾಲಿಗೆಗೆ ಅವನು ಸೊಪ್ಪು ಹಾಕಬೇಕಾಗಿರಲಿಲ್ಲ .
ಉಡುಪಿಯಲ್ಲಿ ವ್ಯಾಸ ನಾಟ್ಯ ಶಾಲೆಯನ್ನು ತೆರೆದ. ಅಲ್ಲಿಯೇ ನಮ್ಮ ’ಮರಳಿ ಮಣ್ಣಿಗೆ’ಯ ರಾಮರಾಯರ ಪರಿಚಯದ ಲಾಭ ಅವನಿಗೆ ದೊರಕಿದುದು . ಅವರ ಹಳ್ಳಿಗೂ ಹೋದ ವ್ಯಾಸ , ಅವರ ತಾಯಿ ನಾಗವೇಣಿ ಅಮ್ಮನವರನ್ನೂ ಕಂಡ . ಅಲ್ಲಿ ಉಕ್ಕಿದ ಸಮುದ್ರದೆದುರಿನಲ್ಲಿ ’ಸಮುದ್ರ ಪ್ರತೀಕಾರ’ ಎಂಬ ರೂಪಕದ ರಾಮರಾಯರ ವಯೋಲಿನ್ ವಾದನದ ಜೀವ ಚೈತನ್ಯವನ್ನು ಆಲಿಸಿ , ಅವರ ಸಹಜ ಕಲೆಯ ಕೃಷಿಗೆ ಬೆರಗಾಗಿ ಹೋದ . ನಂತರ ಅವರ ಜೊತೆಗೆ ಸೇರಿಯೇ ತನ್ನ ಕಲಾತಂಡದ ಪ್ರದರ್ಶನಗಳನ್ನು ಉಡುಪಿಯಲ್ಲಿ ನೀಡಿ ನಾಟ್ಯದ ಹೊಸ ಮಾರ್ಗಗಳನ್ನು ಆವಿಷ್ಕರಿಸಿದ .
ಈ ನಡುವೆ ಅವನ ನೆಚ್ಚಿನ ಶಿಷ್ಯೆ ಕೀರ್ತಿ , ಚಲನಚಿತ್ರಗಳಲ್ಲಿ ನಟಿಸಿ ಕೀರ್ತಿ ಪ್ರತಿಷ್ಟೆಗಳನ್ನು ಗಳಿಸಿದಳು .ಇದರಿಂದ ತೀರಾ ನೊಂದವನೆಂದರೆ ವ್ಯಾಸ .ಅವನ ನೋವು ಅವಳ ಕೀರ್ತಿಯನ್ನು ಕುರಿತಲ್ಲ ; ಅವಳ ಅಧೋಗತಿಯನ್ನು ಕಂಡು . ಚಲನಚಿತ್ರಗಳಲ್ಲಿ ಅವಳು ನಟಿಸುತ್ತಿದ್ದ ಕೀಳು ಅಭಿರುಚಿಯ ಪಾತ್ರಗಳನ್ನು ಕಂಡು ಅವನ ಮನಸ್ಸು ತೀರಾ ನೊಂದಿತು . ದುಡ್ಡಿಗಾಗಿ ನಮ್ಮ ಸೀತೆ ದ್ರೌಪತಿಯರನ್ನು ಬೇಕಾದರೂ , ಬೀದಿಯ ಬೆಲೆವೆಣ್ಣಿನಂತೆ ವೇಷ ಹಾಕಿ ಚಿತ್ರಿಸಬಲ್ಲ , ಸಿನಿಮಾದವರ ನಡವಳಿಕೆ ಅವನಿಗೆ ವಾಕರಿಕೆ ಬರುವಂತಿತ್ತು . ಇದನ್ನೆಲ್ಲಾ ತೀರಾ ನೋವಿನಿಂದ ಹೆಂಡತಿ ವಿಮಲೆಯೊಡನೆ ಹಂಚಿಕೊಳ್ಳುತ್ತಿದ್ದ ವ್ಯಾಸನಿಗೆ , ವಿಮಲೆ ಸಾಂತ್ವನದ ಮಾತಾಡುತ್ತಿದ್ದಳು . ಹೀಗಿರುವಾಗಲೇ ಕೀರ್ತಿಯಿಂದ ವ್ಯಾಸನಿಗೆ ತಕ್ಷಣಕ್ಕೆ ಬಂದು ಕಾಣಬೇಕೆಂದೂ ಇಲ್ಲವಾದರೆ ತಾನು ಉಳಿಯುವಂತಿಲ್ಲವೆಂದೂ ತಂತಿ ಬಂದಿತು . ಇದರಿಂದ ಕೋಪಗೊಂಡ ವ್ಯಾಸ ಅದನ್ನು ಹರಿದು ಹಾಕಿದ . ಮುಂದಿನೆರಡು ದಿನಗಳಲ್ಲಿ ಕೀರ್ತಿಯ ತಾಯಿಯಿಂದ ಪುನಃ ಟೆಲಿಗ್ರಾಂ ಬರುತ್ತದೆ . ತಕ್ಷಣ ಬರಲೇಬೇಕೆಂದು ಕೀರ್ತಿಯ ಪ್ರಾಣ ಆಪತ್ತಿನಲ್ಲಿದೆಯೆಂದೂ ಅದರಲ್ಲಿರುತ್ತದೆ . ಈ ಬಾರಿ ವಿಮಲೆ ಅವರು ಯಾವ ಆಪತ್ತಿನಲ್ಲಿದ್ದಾರೆಯೋ ಹೋಗಿ ನೋಡಲೇಬೇಕೆಂದು ಬೇಡುತ್ತಾಳೆ .
ಬೊಂಬಾಯಿಯಲ್ಲಿ ಆಸ್ಪತ್ರೆಯಲ್ಲಿ ಜೀವನ ಮರಣದೊಡನೆ ಹೋರಾಡುತ್ತಿದ್ದ ಕೀರ್ತಿಯನ್ನು ತಿಂಗಳಾನುಗಟ್ಟಲೆ ಸುಶ್ರೂಷೆಯಿಂದ ಉಳಿಸಿಕೊಳ್ಳುವ ಪ್ರಮೇಯ ವ್ಯಾಸನಿಗೆ ಒದಗುತ್ತದೆ . ವೈದ್ಯರು ’ ನಮ್ಮ ಪ್ರಯತ್ನಕ್ಕಿಂತ ನೀವು ಬಂದುದು ಅವಳಿಗೆ ಪುನರ್ಜನ್ಮವಾಯಿತು ’ ಎನ್ನುತ್ತಾರೆ . ವ್ಯಾಸನೆದುರು ತನ್ನ ಕೀರ್ತಿ, ಪ್ರತಿಷ್ಟೆಯ ಆಸೆಯಿಂದ ತಾನು ತುಳಿದ ತಪ್ಪುದಾರಿ ಹೇಗೆ ತನಗೆ ಮುಳುವಾಯಿತೆಂಬುದನ್ನು ಪ್ರಾಂಜಲವಾಗಿ ಒಪ್ಪಿಕೊಂಡ ಕೀರ್ತಿ ’ಇನ್ನು ಬೊಂಬಾಯಿಯಲ್ಲಿ ನಾನಿರುವುದಿಲ್ಲ ’ ಎಂದು ನಿರ್ಧರಿಸಿ " ಇನ್ನು ಮುಂದೆ ಸದಾ ಕಾಲವೂ ನಾನು ನಿಮ್ಮ ಶಿಷ್ಯೆ , ನೀವು ತೋರಿಸಿದ್ದೇ ನನಗೆ ದಾರಿ ,, ಎಂದು ವ್ಯಾಸನೊಡನೆ ಉಡುಪಿಗೇ ಬಂದುಬಿಡುತ್ತಾಳೆ .
ಈಗ ವ್ಯಾಸನಿಗೆ ಸಿದ್ದಾರ್ಥನ ತ್ಯಾಗವನ್ನು ಒಂದು ವಿಶೇಷ ನಾಟ್ಯ ಪ್ರಯೋಗ ಮಾಡಲು ಸಾಧ್ಯವೆನ್ನಿಸುತ್ತಿದೆ . ಯಶೋಧರೆಯ ಪಾತ್ರ ವಹಿಸಲು ನೊಂದು ಮಾಗಿದ ಕೀರ್ತಿ ಇದ್ದಾಳೆ .
- Login or register to post comments
- 268 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ನಿಮ್ಮ ಬರಹಗಳನ್ನು ವಿಮರ್ಶಿವಷ್ಟು ನನಗೆ ಸಾಹಿತ್ಯ ತಿಳಿದಿಲ್ಲ ಸರ್. ಆದ್ರೆ ಕಾರಂತರ ಕಾದಂಬರಿಗಳಲ್ಲಿ (ನಾನು ಅವರ ಎಲ್ಲಾ ಕಾದಂಬರಿಗಳನ್ನು ಓದಿಲ್ಲ) ನಾನ್ ಗಮನಿಸಿದ ಅಂಶ ಅಂದ್ರೆ ಹೀರೊ ತುಂಬಾ ಕಷ್ಟ ಅನುಭವಿಸುತ್ತಾನೆ. ಮುಂದೆ ಆ ಪರಿಸ್ಥಿತಿಗಳು ಅವನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪಾತ್ರ ವಹಿಸಿದರೂ, ಒಬ್ಬ ಮನುಷ್ಯ ಒಳ್ಳೆಯವನಾಗಬೇಕೆಂದ್ರೆ (ಇದು ರಿಲೆಟಿವ್ ಪದ) ಅಷ್ಟೆಲ್ಲಾ ಪಾಡು ಪಡಬೇಕೆಂದು ನನಗನ್ನಿಸೋಲ್ಲ. ಇನ್ನು ಕೆಲವು ಸಲ ೧೯೨೦-೪೦ ರ ಸುಮಾರಿಗೆ ಕರಾವಳಿಯಲ್ಲಿ ಬದುಕೆ ಅಷ್ಟು ಕಷ್ಟಕರವಾಗಿತ್ತೆ? ಎಂದು ಅನ್ನಿಸಿದ್ದೂ ಇದೆ.
ನಲ್ಮೆಯ ಸಂತೋಷ್
ಕಥಾನಾಯಕರು ಕಷ್ಟಗಳನ್ನು ಅನುಭವಿಸುವುದು ಅಥವಾ ಇನ್ನಾವುದಾದರೂ ಸಿದ್ದ ಮಾದರಿಗಳು ಕಾರಂತರ ಪಾತ್ರಗಳಲ್ಲ . ಸಾಮಾನ್ಯವಾಗಿ ಜೀವನದಲ್ಲಿ ಎದುರಾಗುವ ಪ್ರಸಕ್ತಿಗಳಿಗೆ ಪ್ರತಿಕ್ರಿಯಿಸುವ ಮಾನವ ಸ್ವಭಾವವೇ ಅವನ ವ್ಯಕ್ತಿತ್ವವಾಗಿ ವಿಕಸಿಸುವ ರೀತಿಯನ್ನು ಅನಾವರಣಗೊಳಿಸುತ್ತಾ ಹೋಗುವುದೇ ಕಾರಂತ ಮಾದರಿ . ೧೯೨೦ - ೩೦ ರ ದಶಕದ ಜೀವನ ಕಷ್ಟಕರವಾಗಿತ್ತೇ ? ಎನ್ನುವ ಪ್ರಶ್ನೆಯನ್ನು ಮುಂದಿಡುತ್ತೀರಿ , ಅದಕ್ಕೆ ಉತ್ತರ ಖಂಡಿತ ಕಷ್ಟಕರವಾಗಿತ್ತು . ಆದರೆ ಅಂದಿನ ಜನ ಅದನ್ನು ಕಷ್ಟ ಎಂದುಕೊಳ್ಳುವುದಕ್ಕಿಂತ ಅದು ತಮ್ಮ ಪ್ರಾರಾಬ್ಧ ಎಂದುಕೊಂಡದ್ದೇ ಹೆಚ್ಚು . ಏಕೆಂದರೆ ನನ್ನದೇ ಬಾಲ್ಯದ ಸಮಯದ ಮಾನವ ಶ್ರಮವನ್ನು ನೆನೆದರೆ ಇಂದಿನ ಜೀವನ ಸಾಕಷ್ಟು ಸುಲಭವಾದುದು . ಕಾರಂತರ ಸಾಹಿತ್ಯದಲ್ಲಿ ಊಹಾತ್ಮಕ ಅಂಶಗಳು ಕಡಿಮೆ . ಎಲ್ಲ ಸಹಜ , ನೇರ ಮತ್ತು ಸರಳ . ಕಾರಂತ ಸಾಹಿತ್ಯದ ಬಗೆಗಿನ ನಿಮ್ಮ ಆಸಕ್ತಿಗೆ ಅಭಿನಂದನೆಗಳು .