ಕನ್ನಡ ಉಳಿಸುವಿಕೆ: ಭಿನ್ನ ನಿಲುವು
ಕನ್ನಡದ ಕೊರತೆ ಚರ್ಚೆಯ ಸರಣಿಯಲ್ಲಿ ನಾನು ಮಂಡಿಸಿದ ಅಭಿಪ್ರಾಯವೊಂದಕ್ಕೆ ಶ್ರೀ ಬೆನಕ ಸ್ವಲ್ಪ ದೀರ್ಘವಾದ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ. ನನ್ನ ಪ್ರತಿಕ್ರಿಯೆ ನಿರೀಕ್ಷಿಸಿದ್ದಕ್ಕಿಂತ ದೊಡ್ಡದಾಗಿದೆ ಎನಿಸಿದ್ದರಿಂದ ಲೇಖನವಾಗಿ ಪ್ರಕಟಿಸಿದ್ದೇನೆ.
ಸಂವಹನ ಮುಖ್ಯ ಎಂದು ಹೇಳಿದಾಗಲೆಲ್ಲಾ ಸಂವಹನ ಮುಖ್ಯ ಎಂದು ಮಾತನಾಡುವವರು ಕನ್ನಡವನ್ನು ಹಾಳು ಮಾಡಲು ನಿಂತಿದ್ದಾರೆ ಎಂಬ ಟೀಕೆಯನ್ನು ಎದುರಿಸಬೇಕಾಗುತ್ತದೆ. ಡಿ. ಎನ್. ಶಂಕರಭಟ್ಟರಂಥ ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ ಭಾಷಾ ವಿಜ್ಞಾನಿ ಕೂಡಾ ಇದೇ ಬಗೆಯ ಟೀಕೆಯನ್ನು ಎದುರಿಸಬೇಕಾಗಿರುವುದರಿಂದ ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಭಾಷೆಗೆ ಸಂಬಂಧಿಸಿದಂತೆ ಈ ಶುದ್ಧ, ಅಶುದ್ಧ ಮುಂತಾದ ಪರಿಕಲ್ಪನೆಗಳು ಸಾಪೇಕ್ಷವಾದವು. ಇದು ಶುದ್ಧ ಇದು ಅಶುದ್ಧ ಎಂದು ಹೇಳುವುದು ಆ ಕ್ಷಣದ ಸತ್ಯಗಳು ಮಾತ್ರ.
ಈಗ ಎಕ್ಸಿಕ್ಯುಟಿವ್ ಇಂಜಿನಿಯರ್ ಪದದ ವಿಷಯವನ್ನೇ ತೆಗೆದುಕೊಳ್ಳಿ. ಬರೆಹದಲ್ಲಿ ಕನ್ನಡ ಉಳಿಸಲು ಹೊರಟಿರುವ ನಮ್ಮಂಥವರು ಇದನ್ನು ಕಷ್ಟಪಟ್ಟು ಬಳಸಬೇಕು. ಆಡು ನುಡಿಯಲ್ಲಿ ಇಇ ಆಗಿಯೋ ಎಕ್ಸಿಕ್ಯುಟೀವ್ ಇಂಜಿನಿಯರ್ ಆಗಿಯೋ ಇರುತ್ತದೆ. ಹೊಸ ಪರಿಕಲ್ಪನೆಗಳ ಅಭಿವ್ಯಕ್ತಿಗಳು ಹೀಗೆಯೇ ರೂಪುಗೊಳ್ಳುತ್ತವೆ. ಇದಕ್ಕೊಂದು ಒಳ್ಳೆಯ ಉದಾಹರಣೆಯೆಂದರೆ ಹಳೆ ಮೈಸೂರು ಭಾಗದಲ್ಲಿ ಯಾವ ಕುಗ್ರಾಮದಲ್ಲೂ, ಎಂಥಾ ಅನಕ್ಷರಸ್ಥನೂ ಶಾಲೆಯನ್ನು ಇಸ್ಕೂಲು, ಸ್ಕೂಲು ಎಂದೇ ಕರೆಯುತ್ತಾನೆ. ಇದಕ್ಕೆ ಸಾಮಾಜಿಕ ಮತ್ತು ಚಾರಿತ್ರಿಕ ಕಾರಣಗಳಿವೆ. ನಾವು ಈಗ ಹೇಳುವ ಶಾಲೆಗಳು ಬರುವುದಕ್ಕಿಂತ ಮುನ್ನ ಇಲ್ಲಿ ಇದ್ದದ್ದು ಐಗಳ ಮಠಗಳು-ಇವುಗಳನ್ನು ಕೂಲಿ ಮಠ ಎಂದೂ ಕರೆಯುತ್ತಾರೆ. ಇನ್ನುಳಿದದ್ದು ವೇದ ಪಾಠ ಶಾಲೆಯಂಥವು. ಇವುಗಳ ಒಳಕ್ಕೆ ನಿರ್ದಿಷ್ಟ ಜಾತಿಯವರನ್ನು ಹೊರತು ಪಡಿಸಿ ಉಳಿದವರಿಗೆ ಪ್ರವೇಶವಿರಲಿಲ್ಲ. ಅವರ ಮಟ್ಟಿಗೆ ಐಗಳ ಮಠವಂತೂ ಶಾಲೆಯಲ್ಲ. ಹಾಗೆಂದು ಬ್ರಿಟಿಷರ ತಂದ ಸ್ಕೂಲ್ ಗಳೂ ಶಾಲೆಯಲ್ಲ. ಹಾಗಾಗಿ ಸ್ಕೂಲ್ ಅವರ ಬಾಯಲ್ಲಿ ಇಸ್ಕೂಲು, ಇಸ್ಕೋಲು ಹೀಗೆ ಏನೋ ಒಂದು ಆಗಿ ಉಳಿಯಿತು.
ಇದನ್ನು ಸರಿಪಡಿಸಬೇಕು ಎಂದು ವಾದಿಸಬಹುದು. ಆದರೆ ಸರಿಪಡಿಸುವುದು ಮಾತ್ರ ಸಾಧ್ಯವಾಗದ ಕೆಲಸ. ಸಾಮಾಜಿಕ, ಚಾರಿತ್ರಿಕ, ಆರ್ಥಿಕ ಒತ್ತಡ ಕೆಲ ಸಂದರ್ಭಗಳಲ್ಲಿ ರಾಜಕೀಯ ಒತ್ತಡಗಳೂ ಭಾಷೆಯ ಸುತ್ತ ದಂಡೆಯೊಂದನ್ನು ರೂಪಿಸುತ್ತಲೋ, ಹುಚ್ಚು ಪ್ರವಾಹಕ್ಕೆ ಕಾರಣವಾಗುತ್ತಲೋ ಇರುತ್ತವೆ.
ಇನ್ನು ಇಂಗ್ಲಿಷ್ ಪದಗಳನ್ನು ಕನ್ನಡದಲ್ಲಿ ಸೇರಿಸುವುದರಿಂದ ಕನ್ನಡ ಹಾಳಾಗುತ್ತದೆ ಎಂದು ಭಾವಿಸಬೇಕಾಗಿಲ್ಲ. ಕನ್ನಡದಲ್ಲಿ ಸಂಸ್ಕೃತದ ಪದಗಳನ್ನು ನಾವು ಸಲೀಸಾಗಿ ಬಳಸಬಹುದಾದರೆ ಇಂಗ್ಲಿಷ್ ನ ಪದಗಳನ್ನೂ ಹಾಗೆಯೇ ಬಳಸಬಹುದು. ಭಾರತದ ಮಟ್ಟಿಗೆ ಒಂದು ಕಾಲದಲ್ಲಿ ಸಂಸ್ಕೃತ ಲಿಂಗ್ವಾ ಫ್ರಾಂಕಾ ಆಗಿತ್ತು. ಈಗ ಆ ಸ್ಥಾನ ಇಂಗ್ಲಿಷಿಗೆ ಬಂದಿದೆ. ಇದೊಂದು ಚಾರಿತ್ರಿಕ-ರಾಜಕೀಯ ಒತ್ತಡದ ಪರಿಣಾಮ. ಇದನ್ನು ನಾವು ಹೇಗೆ ಬದಲಾಯಿಸುವುದಕ್ಕೆ ಸಾಧ್ಯವಿಲ್ಲವೋ ಹಾಗೆಯೇ ಕನ್ನಡದೊಳಗೆ ಕೆಲವು ಇಂಗ್ಲಿಷ್ ಪದಗಳು ನುಸುಳುವುದನ್ನೂ ತಪ್ಪಿಸುವುದು ಸಾಧ್ಯವಿಲ್ಲ.
ಹೀಗೆ ನುಸುಳಿದ ಕನ್ನಡೇತರ ಭಾಷೆಯ ಪದಗಳು ಕ್ರಮೇಣ ಕನ್ನಡೀಕರಣಕ್ಕೆ ಗುರಿಯಾಗುತ್ತವೆ. ಬಸ್ ಎಂಬ ಪದ ಕನ್ನಡದ್ದೆಂದೇ ನಮಗನ್ನಿಸುವುದಿಲ್ಲವೇ. ರೈಲು ಕೂಡಾ ಇದೇ ಪಟ್ಟಿಗೆ ಸೇರುತ್ತದೆ. ಬಸ್, ರೈಲುಗಳು ಕನ್ನಡಕ್ಕೆ ಬಂದ ಕಾಲಘಟ್ಟಕ್ಕೂ ಈಗಿನ ಸ್ಥಿತಿಗೂ ಬಹಳ ವ್ಯತ್ಯಾಸವಿದೆ ಎಂಬುದು ನಿಜ. ಈ ವ್ಯತ್ಯಾಸವನ್ನು ಸೃಷ್ಟಿಸಿದವರೂ ನಾವೇ. ಅಂದರೆ ಕನ್ನಡವನ್ನು ಮೊದಲು ಮರೆತು ಇಂಗ್ಲಿಷ್ ಕನ್ನಡಕ್ಕಿಂತ ಶ್ರೇಷ್ಠ ಎಂದು ಕೊಂಡವರು ನಾವೇ ಅಂದರೆ ಈಗ ಕನ್ನಡವನ್ನು ಉಳಿಸಲು ಹೊರಟಿರುವ ನಮ್ಮಂಥ ಶಿಕ್ಷಿತ ಮಧ್ಯಮ ವರ್ಗ.
ಈಗಲೂ ನಮಗೆ ಕನ್ನಡವನ್ನು ಉಳಿಸುವುದು ಒಂದು ರೀತಿಯ ಅಂಚೆ ಚೀಟಿ ಸಂಗ್ರಹಿಸುವಂಥ ಹವ್ಯಾಸವೇ ಹೊರತು ಅದೊಂದು ಸಾಮಾಜಿಕ, ರಾಜಕೀಯ ಅಥವಾ ಆರ್ಥಿಕ ಅಗತ್ಯವಲ್ಲ. ನಾವು ಭಾಷೆಯ ಕುರಿತಂತೆ ನಡೆಸುವ ಚರ್ಚೆಗಳೆಲ್ಲವೂ ಕೇವಲ ವ್ಯಾಕರಣದ ಕುರಿತ ಒಣ ಚರ್ಚೆಯಾಗಿ ಬದಲಾಗುವುದು ಇದರಿಂದಲೇ. ಭಾಷೆಯನ್ನು ಉಳಿಸುವ ಕುರಿತ ಚರ್ಚೆಯಲ್ಲಿ ನಮಗೆ ಬೇಕಿರುವುದು ಬೌದ್ಧಿಕ ಸರ್ಕಸ್ ನಿಂದ ದೊರೆಯುವ ಆನಂದ ಮಾತ್ರ.

- Login or register to post comments
- 1200 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಸರಿ ಒಪ್ಪಿದೆ. ಕೆಲವು ಪ್ರಶ್ನೆಗಳು
ಸರಿ ಆಯ್ತು ಕೆಲವು ಪ್ರಶ್ನೆಗಳು
೧. ಯೆಸ್ಟರ್ ಡೇ ಮಾರ್ನಿಂಗ್ ಏನು ಈಟ್ ಮಾಡಿದಿರಿ.
೨. ಟುಮಾರೋ ನಿಮ್ಮ ಮದರ್ ಬರ್ತಾ ಇದ್ದಾರಲ್ವ. Kindly bring her to our home also.
೩. ಟುಡೇ ನೈಟ್ ಏನು ತಿಂಡಿ ಪ್ರಿಪೇರ್ ಮಾಡೋಣ.
೪. ನಾನು ಅಂದೇ ಹಾಕಿದ್ದೇೆ, ಅದು ಉದಯ ಟಿವಿಯಲ್ಲಿ ಬಂದಿತ್ತು.
ಫಂಕ್ಷನ್ ಗೆ ಟು ಡೇಸ್ ಬಿಫೋರ್ ಫೇಸ್ ಪ್ಯಾಕ್ ಅಪ್ಲೈ ಮಾಡಿ.
೫. ಲಾಸ್ಟ್ ವೀಕ್ ತುಂಬಾ ಫೀವರ್ ಇತ್ತು. ಈಗ ಬೆಟರಾಗಿದ್ದೀನಿ.
ಇಂತಹ ವಾಕ್ಯಗಳನ್ನು, ಕನ್ನಡ ಅಭ್ಯಾಸ ಮಾಡಿಯೂ ನಿರ್ಲಕ್ಷ್ಯ ಭಾವ ಹೊಂದಿರುವ ನಮ್ಮಂಥ ಪಟ್ಟಣದ ಜನರು ಉಪಯೋಗಿಸುತ್ತಾ, ನಾನು ಮಾಡುತ್ತಿರುವುದು ತಪ್ಪಲ್ಲ, ಜಾಗತೀಕರಣದ ಪ್ರಭಾವ, ನನ್ನಿಂದ ಯಾವುದೇ ಸಂಸ್ಕೃತಿ ನಾಶವಾಗಿಲ್ಲ ಎಂದು ಬೊೂಬ್ಬೆಯಿಡುತ್ತೇವೆ.
ಇಲ್ಲಿ ಗಮನಿಸುವ ಅಂಶವೆಂದರೆ: ನೆನ್ನೆ, ನಾಳೆ, ಇವತ್ತು ಇಂತಹ ಇನ್ನೂ ಅನೇಕ ನಿರ್ದಿಷ್ಟ ಪದಗಳಿಗೆ ಎಂದೂ ಸಹ ನಾವು ಸಂಸ್ಕೃತದ ಮೊರೆ ಹೋಗಿಲ್ಲ. ಕನ್ನಡ ಸಂಸ್ಕೃತಿಯ ಪ್ರಭಾವವಿರುವ ಪದಗಳಿಗೆ ನಾವು ಸಂಸ್ಕೃತ ಪದಗಳ ಮೊರೆಹೋಗಬೇಕಾಗಿಲ್ಲ ಎಂಬುದನ್ನು ಶಂಕರಭಟ್ಟರೇ ನಿರೂಪಿಸಿದ್ದಾರಲ್ಲ. ನಾವು ಎಲ್ಲೂ ಇಂಗ್ಲೀಷ್ ಬೇಡವೆಂದಿಲ್ಲ. ಬಳಕೆಯಲ್ಲಿರುವ ಕನ್ನಡ ಸಂಸ್ಕೃತಿಯ ಬಿಂಬಿಸುವ ಬದಗಳಿಗೆ ಇಂಗ್ಲೀಷ್ ಬೇಡ ಎಂದಷ್ಟೇ ಹೇಳುವುದು.
ನೀವು ಅವಾಗವಾಗ ಕೊಡುವ ಮೆಕ್ಯಾನಿಕ್ ಉದಾಹರಣೆ ಕೂಡ ಇದಕ್ಕೆ ಹೊರತಾಗಿಲ್ಲ. ಗಮನಿಸಿ ನೋಡಿ, ನಮ್ಮ ನಿಮ್ಮ ಮೆಕ್ಯಾನಿಕ್ ಮೆಕ್ಯಾನಿಕಲ್ ಇಂಜಿನಿಯರಿಂಗಿಗೆ ಸಂಬಂಧಪಟ್ಟ ಇಂಗ್ಲೀಷ್ ಪದಗಳನ್ನು ಉಪಯೋಗಿಸುತ್ತಾನೆಯೇ ಹೊರತು ಇಂಗ್ಲೀಷ್ ಸಂಸ್ಕೃತಿಯ ಪ್ರಭಾವದಿಂದ ಮಾತನಾಡುವುದಿಲ್ಲ.
ಉದಾ : Screw driver ಹಿಡ್ಕೊಂಡು - Screw driver hold ಮಾಡ್ಕೊಂಡು
ಅವನು Screw driver ಹಿಡ್ಕೊಂಡು ಕೆಲಸ ಮಾಡ್ತಾನೆಯೇ ಹೊರತು Screw driver hold ಮಾಡ್ತಾ work ಮಾಡುವುದಿಲ್ಲ. work ಮಾಡಿದರೆ ಏನೂ ತಪ್ಪಿಲ್ಲ ಎನ್ನುವ ವಾದ ಇನ್ನು ಕೆಲವರದಾದರೆ ನಾವೇನೂ ಮಾಡಲು ಸಾಧ್ಯವಿಲ್ಲ.
ನಮಗೆ ಬೇಕಿರುವುದು ಕನ್ನಡದ ಉಳಿಸುವಿಕೆಯಲ್ಲ ಬೆಳೆಸುವಿಕೆ. ಬೆಳವಣಿಗೆಯಲ್ಲಿ ಉಳಿವು ಕೂಡ ಇದೆ ಮತ್ತು ಆ ಬೆಳವಣಿಗೆ ಬಳಕೆಯಲ್ಲಲ್ಲದೆ ಬೇರೆಲ್ಲೂ ಇಲ್ಲ.
ಸಿಲ್ಲಿ ಲಲ್ಲಿಯ ಚಿಕ್ಕೋಡಿ ಚಿನ್ನಸ್ವಾಮಿಯ ನಮಸ್ಕಾರ ಮತ್ತು ಜೈ ಕರ್ನಾಟಕ ಮಾತೆ.
ಇಂಗ್ಲಿಷ್ ಸೇರಿಸುವುದು ಯಾರು?
ನಿಮ್ಮ ಮೆಕ್ಯಾನಿಕ್ ಮೆಕ್ಯಾನಿಕಲ್ ಇಂಜಿನಿಯರಿಂಗಿಗೆ ಸಂಬಂಧಪಟ್ಟ ಇಂಗ್ಲೀಷ್ ಪದಗಳನ್ನು ಉಪಯೋಗಿಸುತ್ತಾನೆಯೇ ಹೊರತು ಇಂಗ್ಲೀಷ್ ಸಂಸ್ಕೃತಿಯ ಪ್ರಭಾವದಿಂದ ಮಾತನಾಡುವುದಿಲ್ಲ. ಅಂದರೆ ಈ ರೀತಿ ಮಾತನಾಡುವುದು ನಮ್ಮ ನಿಮ್ಮಂಥವರು ಎಂದಾಯಿತಲ್ಲವೇ. ಅಂದರೆ ಸಮಸ್ಯೆ ಇರುವುದು ಬೌದ್ಧಿಕ ಸರ್ಕಸ್ಸಿನ ಆನಂದಕ್ಕಾಗಿ ತುಡಿಯುವವರದ್ದೇ ಹೊರತು ಕನ್ನಡ ಬಳಸುವ ಸಾಮಾನ್ಯನದ್ದಲ್ಲ ಎಂಬುದು ಸರಿಯೇ ಆಯಿತಲ್ಲವೇ?
ಇನ್ನು ನೀವು ನೀಡಿರುವ ಉದಾಹರಣೆಗಳಿಗೆ ನಾನು ಪ್ರತಿಕ್ರಿಯಿಸಲು ಹೋಗುವುದಿಲ್ಲ. ಆಡು ನುಡಿಯಲ್ಲಿ ಹೀಗಿರುವುದನ್ನು ನಾನು ಯಾವತ್ತೂ ಗಮನಿಸಿಲ್ಲ. ನಾನು ವ್ಯಾಕರಣ ವಿರೋಧಿಯೂ ಅಲ್ಲ. ನನ್ನ ನಿಲುವು ಬಹಳ ಸರಳ. ಭಾಷೆ ಸ್ಥಾಯಿ ಅಲ್ಲ. ಅದು ಕಾಲ ಧರ್ಮಕ್ಕೆ ಸ್ಪಂದಿಸುವ, ಬದಲಾಗುವ, ಹೊಸ ರೂಪ ಪಡೆಯುವ ಸಂವಹನ ಮಾಧ್ಯಮ. ನೀವು ಹೇಳುತ್ತಿರುವ ಇಂಗ್ಲಿಷ್ ಸಂಸ್ಕೃತಿ ಕೂಡಾ ಒಂದು ಆರ್ಥಿಕ ಅಗತ್ಯದ ಪರಿಣಾಮ ಎಂಬುದನ್ನು ನಾವು ಮರೆಯಬಾರದು. ಕನ್ನಡ ಈ ಒತ್ತಡವನ್ನು ಬ್ರಿಟಿಷ್ ಆಡಳಿತದ ದಿನಗಳಿಂದಲೂ ಎದುರಿಸಿದೆ. ಉಳಿದುಕೊಂಡಿದೆ. ಇದು ಎಲ್ಲಾ ಭಾರತೀಯ ಭಾಷೆಗಳಿಗೂ ಅನ್ವಯಿಸುತ್ತದೆ.
ಇನ್ನು hold ಮಾಡುವುದು ಮುಂತಾದ ಪ್ರಯೋಗಗಳಿಗೆ ಸಂಬಂಧಿಸಿ ನಾನು ನನ್ನ ಲೇಖನದಲ್ಲಿಯೇ ಉತ್ತರಿಸಿದ್ದೇನೆ. ಅನ್ಯ ಭಾಷೆಯ ಪದಗಳನ್ನು ಒಂದು ಭಾಷೆ ಸ್ವೀಕರಿಸುವುದು ತನ್ನಲ್ಲಿ ಇಲ್ಲದ ಪರಿಕಲ್ಪನೆಗಳ ಅಭಿವ್ಯಕ್ತಿಗೆ ಮಾತ್ರ. ಇಸ್ಕೂಲು-ಶಾಲೆ ಉದಾಹರಣೆ ಗಮನಿಸಿ. ಹೀಗೆ ಸ್ವೀಕಾರಕ್ಕೊಂದು ನಿಯಮವಿದೆ. ಬಸ್ಸು, ರೈಲುಗಳು ಉಳಿದಂತೆ ಗಟ್ಟಿಯಾಗಿರುವವರು ಉಳಿಯುತ್ತವೆ. ಇಲ್ಲದೇ ಇರುವವು ಅಳಿಯುತ್ತವೆ. ಇದನ್ನು ನಾನು ಇಂಗ್ಲಿಷ್ ಆಕ್ರಮಣ ಎಂದು ಭಾವಿಸಬೇಕಾಗಿಲ್ಲ.
ಉಳಿಸಿಕೊಳ್ಳುವಿಕೆ-ಕೆಲವು ವಿಚಾರಗಳು
ಈ ಚರ್ಚೆಯನ್ನು ಓದಿದಾಗ ನನ್ನ ಮನಸ್ಸಿಗೆ ಹೊಳೆದ ಕೆಲ ವಿಚಾರಗಳಿವು,ವಿಷಯಾಂತರವೆಂದು ಅನ್ನಿಸಿದರೆ ಕ್ಷಮಿಸಿ...
ಕನ್ನಡ ಉಳಿಸಬೇಕೆಂಬ ಪರಿಕಲ್ಪನೆಯೇ ತೀರ್ಥಹಳ್ಳಿ, ಆಗುಂಬೆ, ಶೃಂಗೇರಿ ಸುತ್ತಲಿನ ಹಳ್ಳಿಗಳಲ್ಲಿ ಅಸಂಗತವಾಗುತ್ತದೆ.ನಮ್ಮೂರಿನ ಜನ ಕನ್ನಡದಲ್ಲಿ(ಕನ್ನಡದಲ್ಲಿ ಮಾತ್ರ) ಸಲೀಸಾಗಿ ಮಾತನಾಡುತ್ತಾರೆ.ಬಸ್ಸು, ಕಾರು, ಪೋಲೀಸು ಇತ್ಯಾದಿಗಳನ್ನು ಕನ್ನಡ, ಇಂಗ್ಲೀಷುಗಳ ಗೊಡವೆ ಇಲ್ಲದೆ ಬಳಸುತ್ತಾರೆ.ನಮ್ಮ ಮನೆಯ ಅಡಿಕೆ ತೋಟಕ್ಕೆ ಕೆಲಸಕ್ಕೆ ಬರುವವನೊಬ್ಬ "ಅಪೆಂಡಿಕ್ಸ್" ಪದವನ್ನು ಸುಧಾರಿಸಿ "ಅಪ್ಪಣ್ಣಯ್ಯನ ಸರ" ಎಂದು ಹೇಳುತ್ತಾನೆ. ಅವನೇ ಬಳಸುವ " ಬುರ್ನಾಸು" ಪದದ ಮೂಲ "Born ass" ಇರಬೇಕೆಂದು ನನ್ನ ಗುಮಾನಿ.
ಸುನಿಲರವರು ಉದಾಹರಿಸಿದ ತೆರನಾಗಿ ಕನ್ನಡ ಮಾತನಾಡುವವರು ಬೆಂಗಳೂರಿನಂತಹ ಮಹಾನಗರದಲ್ಲಿ ಹೇರಳವಾಗಿದ್ದಾರೆ ಅನ್ಸುತ್ತೆ.ಈಟಿವಿ, ಉದಯಟಿವಿಗಳಲ್ಲಿ ಬರುವ ನಮ್ಮ ನಟೀಮಣಿಗಳ ಸಂದರ್ಶನಗಳನ್ನು ನೋಡಿದರೆ ಇಂತಹ ಸ್ಯಾಂಪಲ್ಲುಗಳು ಹೇರಳವಾಗಿ ಸಿಗುತ್ತವೆ.ಆದರೆ ಇದರಿಂದ ಕನ್ನಡದ ಗತಿ ಎಲ್ಲ ಕಡೆ ಹೀಗೆ ಆಗಿದೆ ಎಂದು ನಿರ್ಧರಿಸಲಾಗದು.ಮೇಲಾಗಿ ಬಹಳಷ್ಟು ಜನರಿಗೆ ಇಂಗ್ಲಿಷಿನ ಅಜ್ಞಾನವೇ ಮುಳುವಾಗಿದೆ.ಹಳ್ಳಿಯ ಹಿನ್ನಲೆಯಿಂದ ಬಂದ ಸುಮಾರು ಜನ ನನ್ನ ಸ್ನೇಹಿತರು ಒಳ್ಳೆಯ ಅಂಕ ಹೊಂದಿದ್ದು, ತಾರ್ಕಿಕವಾಗಿ ಆಲೋಚಿಸುವ ಸಾಮರ್ಥ್ಯ ಇದ್ದರೂ ಸಹ ಇಂಗ್ಲಿಷಿನಲ್ಲಿ ಸುಲಲಿತವಾಗಿ ಮಾತನಾಡಲು ಬರದ ಕಾರಣ ಕ್ಯಾಂಪಸ್ ಇಂಟರ್ವ್ಯೂಗಳಲ್ಲಿ ಆಯ್ಕೆಯಾಗಲಿಲ್ಲ.
ನನ್ನ ಕೆಲ ಸಹೋದ್ಯೋಗಿ ಮಿತ್ರರು ಹಟಕ್ಕೆ ಬಿದ್ದವರಂತೆ ತಮ್ಮ ಖಾಸಗಿ ಹರಟೆಗಳನ್ನು ಇಂಗ್ಲೀಷಿನಲ್ಲಿ ತೊಡಗುವುದನ್ನು ನೋಡಿ ಕನಿಕರ ಪಡುತ್ತೇನೆ. ಆ ಭಾಷೆ ಎಷ್ಟೆಂದರೂ ಅವರಿಗೆ ಪರಕೀಯವಾದುದರಿಂದ ಆ ಸಂಭಾಷಣೆಯಲ್ಲಿ ಜೀವಂತಿಕೆ, ತೀವ್ರತೆ ಇರೋಲ್ಲ.ಗೆಳೆಯರ ಗುಂಪಿನ ಹರಟೆಯ ತರಲೆ, ಕುಚೋದ್ಯ, ಗೇಲಿ ಇವೆಲ್ಲ ಮಾಯ.ಗಹನವಾದದ್ದು, ಭಾವ ತೀವ್ರತೆಯನ್ನ ಅಪೇಕ್ಷಿಸುವ ವಿಷಯಗಳ ಪ್ರಸ್ತಾಪವೂ ಇಲ್ಲ,ಎಲ್ಲ ಅದೇ ಚರ್ವಿತ ಚರ್ವಣ.
ಇದನ್ನೆಲ್ಲ ಗಮನಿಸಿದಾಗ ಭಾಷಾ ಶುದ್ಧಿಗಿಂತ ಸಂವಹನ ಸಾಧ್ಯವಾಗುವ, ಸಂವೇದನೆಗಳ ಅಭಿವ್ಯಕ್ತಿ ಸಾಧ್ಯವಾಗುವ ಭಾಷಾ ಬಳಕೆ ಮುಖ್ಯ ಅನ್ನಿಸುತ್ತೆ.
ನಮಗೆ ಯಾವ ಭಾಷೆಯಲ್ಲಿ ಮನಸ್ಸೋ ಇಚ್ಛೆ ಬಯ್ಯಲು ಬರುತ್ತದೆಯೋ, ಹರಟೆ, ಗೇಲಿ ಸಾಧ್ಯವಾಗುತ್ತದೆಯೋ,ಹೇಳಲಾರದ್ದನ್ನ ಹೇಳಲು ಸಾಧ್ಯವಾಗುತ್ತದೆಯೋ ಆ ಭಾಷೆಯನ್ನೆ ಸಾಧ್ಯವಾದಷ್ಟು ಬಳಸುವುದು ಸೂಕ್ತವಲ್ಲವೇ?
ಎನ್ ಆರ್ ಐ ಕನ್ನಡಿಗರ ಕನ್ನಡ ಉಳಿಸುವಿಕೆ
ಪ್ರಿಯ ರಾಮ್ ಕುಮಾರ್ ನಿಮ್ಮ ಅಭಿಪ್ರಾಯವನ್ನು ನಾನೂ ಒಪ್ಪುತ್ತೇನೆ.
ಮಲೆನಾಡಿನ ಊರುಗಳೆಲ್ಲಾ ಹೀಗೆಯೇ ಇರುತ್ತವೆ. ನಮ್ಮ ಮನೆಯ ಉದಾಹರಣೆಯನ್ನು ಹೇಳುವುದಾದರೆ ನಾವು ಮನೆಯಲ್ಲಿ ಮಲಯಾಳಂ ಮಾತನಾಡುತ್ತೇವೆ. ಬೀದಿಯಲ್ಲಿ ಕನ್ನಡ ಮಾತನಾಡುತ್ತೇವೆ. ಈ ಬಗೆಯ ದ್ವಿ ಭಾಷಾ ವಾತಾವರಣ ನನ್ನ ಕನ್ನಡವನ್ನು ಪ್ರಭಾವಿಸಿದೆ ಎಂದಾಗಲೀ ಮಲೆಯಾಳಂ ಅನ್ನು ಪ್ರಭಾವಿಸಿದೆ ಎಂದಾಗಲೀ ನನಗನ್ನಿಸುತ್ತಿಲ್ಲ. ಹಾಗೆ ನೋಡಿದರೆ ನನಗೆ ಕನ್ನಡವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಲೆಯಾಳಂ ಹಾಗೆಯೇ ಮಲೆಯಾಳಂ ಅನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಕನ್ನಡ ಸಹಕರಿಸಿದೆ.
ದಕ್ಷಿಣ ಕನ್ನಡದಲ್ಲಿ ಇದು ಬೇರೆಯೇ ರೀತಿಯಲ್ಲಿದೆ. ದಕ್ಷಿಣ ಕನ್ನಡಿಗರು ಗ್ರಾಂಥಿಕ ಕನ್ನಡ ಮಾತನಾಡುತ್ತಾರೆ. ಏಕೆಂದರೆ ಅಲ್ಲಿ ಆಡು ನುಡಿ ತುಳು, ಕೊಂಕಣಿ ಇಲ್ಲವೇ ಬ್ಯಾರಿ. ಕೊಂಕಣಿ ಅಥವಾ ಬ್ಯಾರಿ ಮಾತನಾಡುವವರು ಬೀದಿಯಲ್ಲಿ ತುಳು ಮಾತನಾಡುತ್ತಾರೆ. ಕನ್ನಡ ಅವರಿಗೆ ಹೊರ ಜಗತ್ತಿನ ಜತೆಗೆ ಸಂಪರ್ಕ ಇರಿಸಿಕೊಳ್ಳುವ ಇಂಗ್ಲಿಷ್ ನಂಥ ಭಾಷೆ. ಆದರೂ ಕನ್ನಡಕ್ಕೆ ಸಂಬಂಧಿಸಿದ ಪ್ರಮುಖ ಕೆಲಸಗಳು ದಕ್ಷಿಣ ಕನ್ನಡದಲ್ಲಿಯೇ ನಡೆದವು ಎಂಬುದನ್ನು ನಾವು ಮರೆಯಲು ಸಾಧ್ಯವೇ.
ಕನ್ನಡ ಉಳಿಸುವ ಎನ್ ಆರ್ ಐ ಕನ್ನಡಿರ ಭ್ರಮೆಯಿಂದ ಕನ್ನಡಿಗರನ್ನು ಹೊರತರಬೇಕಾದ ಅಗತ್ಯವಿದೆ. ಕನ್ನಡಕ್ಕೆ ಅಪಾಯವಿದೆ ಎಂದು ಭಾವಿಸುತ್ತಿರುವವರಲ್ಲಿ ಹೆಚ್ಚಿನವರು ಆರ್ಥಿಕ ಅಗತ್ಯಗಳಿಗಾಗಿ ಇಂಗ್ಲಿಷನ್ನು ಬಳಸುತ್ತಿರುವವರು (ಇವರು ಕನ್ನಡ ನಾಡಿನೊಳಗಿದ್ದೇ ಎನ್ ಆರ್ ಐ ಕನ್ನಡಿಗರಾದವರು) ಎಂಬುದು ಗಮನಾರ್ಹ. ತಮಾಷೆ ಎಂದರೆ ಆಗುಂಬೆಯ, ಇಲ್ಲ ಸಕಲೇಶಪುರದ ಸಹಜವಾಗಿ ಕನ್ನಡ ಬಳಸುವ ಜನ ಬ್ಲಾಗ್ ಬರೆಯುವುದೂ ಇಲ್ಲ. ಬ್ಲಾಗ್ ಓದುವುದೂ ಇಲ್ಲ. ಹಾಗಾಗಿ ಅವರಿಗೆ ಕನ್ನಡಕ್ಕೆ ಅಪಾಯವಿದೆ ಎಂಬ ಭಯವೂ ಕಾಡುತ್ತಿಲ್ಲ.
ಭೌದ್ಧಿಕ ಸರ್ಕಸ್!
ಅಂತೆಯೇ,
"ಶುದ್ಧ" ಭಾಷಾ ಪ್ರಯೋಗದ ಭರಾಟೆಯಲ್ಲಿ ನಮಗೆ ಬೇಕಾಗಿರುವುದು ವ್ಯಾಕರಣದ ಕುರಿತು (ತಲೆದೋರುವ) ಚರ್ಚೆಯೇ (ತನ್ಮೂಲಕ ದೊರೆಯುವ ಭೌದ್ಧಿಕ ಸರ್ಕಸ್ ನ ಆನಂದ) ಹೊರತು, ನಿಜವಾದ ಪದ (ಭಾಷಾ) ಪ್ರಯೋಗವಲ್ಲ ಅಂತ ಹೇಳಬಹುದೇ?
ಬಸವಣ್ಣನೇ ಹೇಳಿದಂತೆ,
"ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ.
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ."
ನಮ್ಮೀ ಭಾಷೆಯ ಉಳಿವಿನ ಕುರಿತ ಚರ್ಚೆಯು (ಅರ್ಥಾತ್, ಭೌದ್ಧಿಕ ಸರ್ಕಸ್) ಕೇವಲ ತೋರಿಕೆಗೋ ಎಂದು ಹಲವಾರು ಬಾರಿ ಮನಸ್ಸಿನಲ್ಲಿ ಅನುಮಾನವೇಳುತ್ತದೆ! ಈ ಮೊದಲೇ ಉಳಿದವರು ಹೇಳಿದಂತೆ, ಕನ್ನಡವನ್ನು ಯಾವ ಯೋಚನೆಗಳಿಲ್ಲದೆ ಬಳಸುವರು, internet ನಲ್ಲಿ ನಡೆಯುತ್ತಿರುವ ಈ ಎಲ್ಲಾ ವಾದ-ಪ್ರತಿವಾದಗಳ ಅರಿವೂ ಇಲ್ಲದೆ, ವ್ಯಾಕರಣಬದ್ಧವಾಗಿಯೋ ಅಥವಾ ಇಲ್ಲವಾಗಿಯೋ, ನಿಶ್ಚಿಂತರಾಗಿ, ಬಳಸುತ್ತಿದ್ದಾರೆ. ಎಲ್ಲಿಯವರೆಗೆ ಜನಸಾಮಾನ್ಯರು ಹೀಗೆ ಕನ್ನಡವನ್ನು ಬಳಸುವರೋ, ಅಲ್ಲಿಯವರೆಗೆ ಕನ್ನಡಕ್ಕೆ ಅಳಿವಿಲ್ಲ!
ಅನಿವಾಸಿಗಳ ತಪ್ಪೇನು?
ಮಿತ್ರರೇ,
ಗಿಡ-ಮರಗಳು ಕಾಡಿನಲ್ಲಿ ತಾವೇ ಬೆಳೆಯುತ್ತವೆ; ಏಕೆಂದರೆ ಅಲ್ಲಿ ಮೊದಲೇ ಸಸ್ಯ ಸಮೃದ್ಧಿಗೆ ಅಗತ್ಯವಾದ ಎಲ್ಲವೂ ದೊರಕುತ್ತವೆ. ನಾವು ಬೆಳೆಸಬೇಕಿರುವುದು ಪಸೆಯಾರಿಹೋಗಿರುವ ಒಣ ನಾಡಿನಲ್ಲಿ; ಏಕೆಂದರೆ ಅಲ್ಲಿ ನೆಲದ ಜಲ ಇಂಗುತ್ತಿದೆ; ಮರಗಳು ಉರುಳುತ್ತಿವೆ; ಹೊಸ ಸಸಿಗಳಿಗೆ ಕಳ್ಳಿ ಹಬ್ಬುತ್ತಿದೆ! ಹಾಗಾಗಿ, "ಸಸ್ಯಸಂಕುಲ ನಾಶವಾಗುತ್ತಿದೆ, ರಕ್ಷಿಸಿ!" ಎಂದರೆ, "ಏನಿಲ್ಲ, ಕಾಡುಗಳೆಲ್ಲಾ ಚೆನ್ನಾಗಿಯೇ ಇವೆ" ಎಂಬ ಉತ್ತರ ದೊರಕಿದಂತಾಯಿತು! ಆ ಎಲ್ಲ ಕಾಡುಗಳು ಶುಷ್ಕ ನಾಡಾಗಿ ಪರಿವರ್ತನೆ ಹೊಂದಲು ಬಿಡಬಾರದೆಂಬುದೂ ಮರೆತು ಹೋದಂತಿದೆ!
ಯಾವುದನ್ನೇ ಆದರೂ ಸರಿಯಾಗಿ ಕಲಿಯೋಣವೆಂಬ ಆಸೆಯೇ ಇಲ್ಲವಾದ್ದರಿಂದ ಕೆಲವರಿಗೆ, ಅದು 'ಬೌದ್ಧಿಕ ಕಸರತ್ತು' ಎನಿಸುವುದು; ತಮಗೆ ಇಷ್ಟವಾಗದೆ, ಕಷ್ಟವಾದಲ್ಲಿ, ಹೋಗಲಿ ಎಂದು ಬಿಡದೆ, ಇತರರೂ ಕಲಿಯಬೇಕಿಲ್ಲ ಎಂದು ವಾದಿಸುವವರಿಗೆ ಏನು ಹೇಳುವುದು? ಅಸಂಬದ್ಧ ಎನ್ ಆರ್ ಐ ವಾದವನ್ನು ಇಲ್ಲಿ ಬಲವಂತವಾಗಿ ತೂರಿಸುವ ಅಗತ್ಯವಿಲ್ಲ. ಕನ್ನಡ ಉಳಿಸಲು ಹಂಬಲಿಸುವ ಅನಿವಾಸಿಗಳ ತಪ್ಪೇನು? ತಾವು ಕನ್ನಡದಲ್ಲಿ ಬರೆಯಬೇಕೆಂಬ ಹಂಬಲದಿಂದ ಬ್ಲಾಗುತ್ತಿರುವವರ ತಪ್ಪೇನು? ಈ ಹಂಬಲ, ಚರ್ಚೆ ಕೇವಲ ಒಣ ಪ್ರತಿಷ್ಠೆಯೇ ಆಗಿದೆ ಎಂಬುದು ಅವರವರ ಪೂರ್ವಾಗ್ರಹ ಅಷ್ಟೇ. ಕನ್ನಡವನ್ನು ಕೆಲವರು ಅಥವಾ ಕೆಲವು ಭಾಗದ ಜನರು ಗುತ್ತಿಗೆಗೆ ತೆಗೆದುಕೊಂಡಂತೆ ಮಾತನಾಡುವುದು ಭಾಷಾದೃಷ್ಟಿಯಿಂದ ಸರಿಯಲ್ಲ. ಕನ್ನಡದ ಅಭಿವೃದ್ಧಿಗೆ ಒಳ-ಹೊರ ನಾಡಿನವರು 'ಏನನ್ನು' 'ಹೇಗೆ' ಮಾಡಬೇಕೆಂದು ಚರ್ಚಿಸಬೇಕೇ ಹೊರತು, ಈ ಚರ್ಚೆ ಕೇವಲ ಬೌದ್ಧಿಕ ಕಸರತ್ತು ಎನ್ನುವವರು ತಮ್ಮ ಬುದ್ಧಿ ಖರ್ಚು ಮಾಡದೆ, ಕಸರತ್ತಿನಲ್ಲಿ ಭಾಗವಹಿಸದೆ ಸುಮ್ಮನಿರುವುದು ಎಲ್ಲರಿಗೂ ಒಳಿತು.
ಇಲ್ಲಿ ಯಾರನ್ನೂ ಟೀಕಿಸುವ ಉದ್ದೇಶ ನನಗಿಲ್ಲ. ನನ್ನ ಅಭಿಪ್ರಾಯವನ್ನು ನಾನು ಹೇಳಿದ್ದೇನೆ; ಬದಲಿ ನಿಲುವುಗಳಿರಬಹುದು, ಚಿಂತೆಯಿಲ್ಲ; ಎಲ್ಲವೂ ಕನ್ನಡಕ್ಕೆ ಒಳಿತನ್ನು ಮಾಡುವುದಾದರೆ ಸಂತೋಷ. ಇನ್ನು ಕೀಲಿ ಮಣೆ ನಿಮ್ಮ ಮುಂದಿದೆ. ನಾನು ವಿಶ್ರಮಿಸುತ್ತೇನೆ.
ನಿಮ್ಮವ
ಬೆನಕ
ಕಾಫಿ ಶಾಪ್ ಸೋಷಿಯಲಿಸಂ.
ಕನ್ನಡದ ಅಭಿವೃದ್ಧಿಗೆ ಕನ್ನಡ ನಾಡಿನ ಒಳಗಿರುವವರು ಮತ್ತು ಹೊರಗಿರುವವರು ವಿಶೇಷವಾದ ಏನನ್ನೂ ಮಾಡಬೇಕಾಗಿಲ್ಲ. ಹೀಗೆ ಸುಮ್ಮನೆ ಕನ್ನಡದಲ್ಲಿ ಗುದ್ದಾಡಿದರೂ ಸಾಕಾಗುತ್ತದೆ. ಇನ್ನು ಎನ್ ಆರ್ ಐ ಕನ್ನಡ ಉಳಿಸುವಿಕೆಗೆ ಸಂಬಂಧಿಸಿದಂತೆ ಒಂದು ಸ್ಪಷ್ಟೀಕರಣ ಇದೆ. ಇದನ್ನು ಎನ್ ಆರ್ ಐಗಳನ್ನು ದೂಷಿಸಲು ಅಥವಾ ಟೀಕಿಸಲು ಬಳಸಿದ್ದಲ್ಲ. ನಾಡಿನಿಂದ ಹೊರಗಿರುವವರಿಗೆ ನಾಡಿನ ಮೇಲಿ ಪ್ರೀತಿ ಉಕ್ಕುವುದು ಸಹಜ. ಈ ಪ್ರೀತಿ ಕೆಲವು ಭಾವುಕ ಅತಿರೇಕಗಳಿಗೆ ಕಾರಣವಾಗುತ್ತದೆ. ಕನ್ನಡ ಹಾಳಾಗುತ್ತಿದೆ ಎಂಬ ಅಭದ್ರತೆ ಕಾಡುವುದು ಇಂಥ ಎನ್ ಆರ್ ಐ ಮನಸ್ಥಿತಿಯಲ್ಲಿ ಎಂಬುದನ್ನು ನಾನು ಹೇಳಿದ್ದೇನಷ್ಟೇ. ಇನ್ನು ಬೌದ್ಧಿಕ ಕಸರತ್ತಿಗೆ ಸಂಬಂಧಿಸಿದ ವಿಷಯ. ಈ ಪದ ಬಳಕೆಯಿಂದ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ. ಆದರೆ ಆ ನಿಲುವಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಏಕೆಂದರೆ ಈ ಬಗೆಯ ಚರ್ಚೆಗಳನ್ನು ನಡೆಸುವ ನನಗೂ ಕನ್ನಡದ ಅಳಿವು-ಉಳಿವು ಒಂದು ಸಾಮಾಜಿಕ, ರಾಜಕೀಯ, ಆರ್ಥಿಕ ಅಗತ್ಯವಾಗಿಲ್ಲ. ಆ ಕಾರಣದಿಂದಾಗಿಯೇ ನಮ್ಮದು ಕೇವಲ ಕಾಫಿ ಶಾಫ್ ಸೋಶಿಯಲಿಸಂ ತರಹ ಕಾಣಿಸುತ್ತದೆ. ಈ ಮಾತುಗಳು ನನ್ನದೇ ನಿಲುವಿನ ವಿಮರ್ಶೆ ಕೂಡಾ.
ಗುತ್ತಿಗೆ
ಹೌದೌದು, ಭಾಷೆಯನ್ನು ಯಾರೂ ಗುತ್ತಿಗೆಗೆ ತೆಗೆದುಕೊಳ್ಳುವ ಹಾಗಿಲ್ಲ (ಈ ಮೇಲಿನ ಟಿಪ್ಪಣಿ ನೋಡಿ). ಅದು ಸಾಧ್ಯವೂ ಇಲ್ಲ! ಕುವೆಂಪುರವರೇ ಹೇಳಿದಂತೆ, "ಕನ್ನಡವೇ ಸತ್ಯ, ಕನ್ನಡವೇ ನಿತ್ಯ". ಹಾಗಾಗಿ, ಇಲ್ಲಿ ನಮ್ಮ ವಾದ-ವಿವಾದಗಳೇನೆ ಇದ್ದರೂ, ಕನ್ನಡದ ಎದುರು ಅವು ಗೌಣ! ಆದ್ದರಿಂದ, ಮಿತ್ರರೆ, ನಾವು ಕನ್ನಡದಲ್ಲಿ ಆಡೋಣ, ಕಲಿಯೋಣ, ಅರಿಯೋಣ, ಹಾಗೂ ವ್ಯವಹರಿಸೋಣ. ಕನ್ನಡದ ಮೇಲೆ ನಮ್ಮ ಪ್ರೀತಿಯಿದ್ದಲ್ಲಿ, ಸಹಜವಾಗಿಯೇ ನಾವು ಕನ್ನಡವನ್ನು ಬಳಸುತ್ತೇವೆ.
ಕುವೆಂಪುರವರನ್ನು ಪುನರುಚ್ಛರಿಸುತ್ತಾ,
"ಎಲ್ಲಾದರು ಇರು, ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು."
ಕನ್ನಡ ಉಳಿಸುವದು ಹೇಗೆ?
ಇಂಗ್ಲೀಷನ್ನು ೧ನೇ ತರಗತಿ ಯಿಂದ ಕಲಿಸಿದರೆ ಕನ್ನಡ ಅವಸಾನ ವಾಗುತ್ತದೆ ಎಂದು ಕೆಲವು ಬುದ್ಧಿಜೀವಿಗಳು ಬೊಬ್ಬೆ ಹಾಕುತ್ತಿದ್ದಾರೆ. ಆದರೆ ಕನ್ನಡ ಉಳಿಸಬೇಕಾದರೆ ಮೊದಲನೆಯದಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅಂದರೆ ವ್ಯವಹಾರಕ್ಕೆ ಕನ್ನಡ ಬಳಸುವದು ಅತ್ಯಾವಶ್ಯ. ಇದರಿಂದ ಕನ್ನಡ ಸ್ವಲ್ಪ ಅಪಬ್ರ್ಂಶ ವಾಗುವ ಅಪಾಯ ವಿದ್ದರೂ ಕನ್ನಡದ ಉಳಿವಿಗೆ ಅನಿವಾರ್ಯ. ಇಂದು ಬೆಂಗಲೂರಿನಂತ ನಗರ ಗಳಲ್ಲಿ ಇಂಗ್ಲೀಷ ಮಾತಾಡುವದು ಒಂದು ಪ್ಯಾಶನ್. ಪ್ರತಿಷ್ಠೆ. ಇದರಿಂದ ಕನ್ನಡಕ್ಕಾಗುವ ಅಪಾಯ ಅಪರಿಮಿತ. ಹೊರಗಿನಿಂದ ಬಂದವರಾರೂ ಇಂದು ಕನ್ನಡ ಕಲಿಯುವ ಕನಿಷ್ಠ ಪ್ರಯತ್ನವನ್ನು ಮಾಡುವದಿಲ್ಲ. ಅವರಿಗೆ ಅದರ ಅವಶ್ಯಕತೆ ಬೀಳುವದೇ ಇಲ್ಲ. ಇದಕ್ಕೆ ಮೊದಲು ಕಾನ್ವೆಂಟಗಳಲ್ಲಿ ಮಕ್ಕಳಿಗೆ ಹೊರಗೂ ಇಂಗ್ಲೀಷಿನಲ್ಲೇ ಮಾತಾಡುವಂತೆ ಪ್ರೇರೇಪಿಸುವದನ್ನು ತಪ್ಪಿಸಬೇಕು. ನಮ್ಮ ಸಾಹಿತ್ಯಪರಿಷತ್ತು ,ಕನ್ನಡ ಪರ ಸಂಘಟನೆಗಳು ಹೋರಾಡುವದು ಅನಿವಾರ್ಯ. ಆದರೆ ಅವರ ಹೋರಾಟ ಬೇರೆಯದೇ ಹಾದಿ ಹಿಡಿಯುತ್ತಿದೆ.
ಇಂಗ್ಲೀಷ ಭಾಷೆ ಕಲಿಯಲು ೨೪ ಗಂಟೆ ಅದನ್ನು ಮಾತಾಡುವ ಅಗತ್ಯ ಖಂಡಿತಾ ಇಲ್ಲ. ಸ್ಕೂಲಿನ ಒಳಗೆ ಮಾತಾಡುವಂತೆ ಬೇಕಾದರೆ ಹೇಳಲಿ ಆದರೆ ಹೊರಗೆ ಅವರು ಕನ್ನಡದಲ್ಲೇ ಮಾತಾಡುವ ಪರಿಸ್ಥಿತಿ ನಿರ್ಮಾಣ ವಾದರೆ ಕನ್ನಡ ತಾನೇ ಸ್ದೃಡವಾಗಿ ಬೆಳೆಯು ಸಾಮರ್ಥ್ಯ ಹೊಂದಿದೆ.
ಅನಂತ ಪಂಡಿತ