24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನನಗೆ ಬೇಕಿಲ್ಲ

May 4, 2009 - 10:34am
h.a.shastry
ಅರ್ಥ ಹೊಳೆಯದ ಕವಿತೆ ನನಗೆ ಬೇಕಿಲ್ಲ ಅರ್ಥಗರ್ಭಿತವಿರಲಿ ಎಷ್ಟೇ ಅದು ಅರ್ಥೈಸುವೊತ್ತಡಕೆ ಮನ ಮುದುಡಲಲ್ಲ ಕವಿತೆ ಓದುವುದು ನಾ ಮನ ಅರಳಲೆಂದು. ಪ್ರೀತಿ ತೋರದ ಕೊಡುಗೆ ನನಗೆ ಬೇಕಿಲ್ಲ ಧಾರಾಳವಾಗಿರಲಿ ಎಷ್ಟೇ ಅದು ಪಡೆದು ಅಡಿಯಾಗುವುದು ನನಗಿಷ್ಟವಿಲ್ಲ ಸರಳ ಪ್ರೇಮದ ಕೊಡುಗೆ ನಾನು ಬಯಸುವುದು. ಪದವಿಗಂಟಿದ ಘನತೆ ನನಗೆ ಬೇಕಿಲ್ಲ ಫಲಕಾರಿಯಾಗಿರಲಿ ಎಷ್ಟೇ ಅದು ಪದವಿ ವ್ಯಕ್ತಿತ್ವವನು ಮರೆಮಾಡಲಲ್ಲ ಬದಲಾಗಿ ಅದರಿಂದ ತಾ ಮೆರೆಯಲಿಹುದು. ಶ್ರಮವು ಇಲ್ಲದ ಗಳಿಕೆ ನನಗೆ ಬೇಕಿಲ್ಲ ಭರ್ಜರಿಯೆ ಆಗಿರಲಿ ಎಷ್ಟೇ ಅದು ವಿಶ್ರಮಿಸಿ ಜಡವಾಗಿ ಕೊಳೆಯಲೆಂದಲ್ಲ ದುಡಿದುಂಡು ತೃಪ್ತಿಹೊಂದಲು ನಾನಿರುವುದು. ನಡತೆ ನೀಡದ ವಿದ್ಯೆ ನನಗೆ ಬೇಕಿಲ್ಲ ಉನ್ನತವೆ ಆಗಿರಲಿ ಎಷ್ಟೇ ಅದು ನಡತೆ ತಿಳಿಸದಮೇಲೆ ಅದಕೆ ಬೆಲೆಯಿಲ್ಲ ಬೆಲೆಯುಳ್ಳ ವಿದ್ಯೆಯದು ನನಗೆ ಬೇಕಿಹುದು. ಪರರಿಗಾಗದ ಬಾಳು ನನಗೆ ಬೇಕಿಲ್ಲ ನನಗಾಗಿ ’ಸುಖ’ ಕೊಡಲಿ ಎಷ್ಟೇ ಅದು ಪರರಿಗಾಗದ ಬಾಳು ಬಾಳುವೆಯೆ ಅಲ್ಲ ಬಾಳಲ್ಲದಲ್ಲಿ ’ಸುಖ’ ಸುಖವು ಹೇಗಹುದು? ಮುಪ್ಪಿಗಂಟಿಯೆ ಸಾವು ನನಗೆ ಬೇಕಿಲ್ಲ ಆರಾಮವಾಗಿರಲಿ ಎಷ್ಟೇ ಅದು ಬದುಕುವುದು ತಡವಾಗಿ ಸಾಯಲೆಂದಲ್ಲ ಕೃತಕೃತ್ಯನಾಗಿ ದಿನಕೆದುರಾಗಲೆಂದು.
ಲೇಖನ ವರ್ಗ (Category): 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by vinutha.mv on
ವಸ್ತುವೊ೦ದರಲ್ಲಿನ ಬೇಕು ಬೇಡಗಳ ಈ ನಿಮ್ಮ ವಿಶ್ಲೇಷಣೆ ತು೦ಬಾ ಚೆನ್ನಾಗಿದೆ. ಎಲ್ಲಿಯೂ ಭಾರವಾಗದ೦ತೆ ಸರಾಗವಾಗಿ ಓದಿಸಿಕೊ೦ಡು ಹೋಗುತ್ತದೆ.

Submitted by h.a.shastry on
ಮೆಚ್ಚುಗೆಗಾಗಿ ಧನ್ಯವಾದ. ’ಎಲ್ಲಿಯೂ ಭಾರವಾಗದ೦ತೆ’ ಎಂಬ ನುಡಿಗಟ್ಟು ನನಗೆ ಇಷ್ಟವಾಯಿತು.

Submitted by Harish Athreya on
ಆತ್ಮೀಯ ಎಲ್ಲ ಸಾಲುಗಳು ಅಮ್ರತ ಕವಿತೆಯೊಳಗಿನ ಭಾವ ಅದ್ಭುತ ಮಾತಿಗೆ ನಿಲುಕದ ಕವಿ ಕವಿತ ಕವಿತೆಯನ್ನ ಓದ್ತಾ ನೋಡ್ತಾ ಇದೀನಿ ಅನ್ಸಕ್ಕೆ ಶುರು ಆಯ್ತು ಚ೦ದ ಸರ್ ಹರೀಶ್ ಆತ್ರೇಯ

Submitted by h.a.shastry on
ಸರಳ-ಸುಂದರವಾಗಿ ವಿಮರ್ಶಿಸಿರುವ ತರ್ಕಶಾಸ್ತ್ರಿ ಮನಃಶಾಸ್ತ್ರಿ ಹರೀಶ ಆತ್ರೇಯಗೆ ಆನಂದರಾಮಶಾಸ್ತ್ರಿಯ ಧನ್ಯವಾದ.