25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅನನ್ಯ ಅಲ್ಲಮ ೩ (೧)

May 9, 2009 - 1:47pm
csomsekraiah

ಅನಿಮಿಷ ಯೋಗಿಯ ಆತ್ಮಸಂವಾದದ ನಂತರ ಅಲ್ಲಮನ ತರಂಗಿತ ಮನಸ್ಸು ನಿಶ್ಚಲವಾಗತೊಡಗಿತು . ಆದರೆ ಅದಷ್ಟೇ ಸಂಪೂರ್ಣ ಸತ್ಯವಾಗಿರಲಿಲ್ಲ ; ಸತ್ಯದ ಅಗಾಧ ಸಾಧ್ಯತೆಗಳ ಬಗ್ಗೆ ಅನ್ವೇಷಣೆ ಆಗತಾನೆ ಆರಂಭವಾಗಿತ್ತು . ಅದಕ್ಕಾಗಿ ಕಾಲೆಳೆದತ್ತ ಅವನ ಪಯಣ , ದೇಶ, ದೇಶಾಂತರಗಳಲ್ಲಿ , ಜನ ಜಂಗುಳಿಗಳ ನಡುವೆ ಅಲ್ಲಮನೆಂಬ ವ್ಯಕ್ತಿತ್ವವೇ ಕರಗಿ ಹೋಗುವಷ್ಟು ,ಜನ ಮಾನಸದೊಡನೆ ಲೀನವಾದ ಸ್ಥಿತಿಯಲ್ಲಿ ಸಮಷ್ಟಿ ಸ್ವರೂಪದ ಸತ್ಯದ ಅನ್ವೇಷಣೆ ; ಇಲ್ಲ ಅಲ್ಲೆಲ್ಲಿಯೂ ಸಮಗ್ರ ಸತ್ಯದ ಹೊಳಹು ಕಂಡು ಬರಲಿಲ್ಲ .

 

ತನ್ನ ಅಂತರಂಗದೊಳಗಲ್ಲಿಯೇ ಅನ್ವೇಷಣೆಗೆ ತೊಡಗಲು, ನಿಬಿಡ ಕಾನನಾಂತರಗಳಲ್ಲಿ ನಿಡುಗಾಲದ ಏಕಾಂತ . ತಾನು ಬಾಲ್ಯದಲ್ಲಿಯೇ ಕಲಿತಿದ್ದ ಪ್ರಾಥಮಿಕ ಯೌಗಿಕ ಕ್ರಿಯೆಗಳ ಪ್ರಯೋಗಕ್ಕಾಗಿ ನಿತಾಂತ ಮೌನದ ಗುಹೆಗಳಲ್ಲಿ ವಾಸ . ಎಷ್ಟು ದಿನ ? ಎಷ್ಟು ಕಾಲ ? ಹನ್ನೆರಡು ವರ್ಷವೋ ? ಹದಿನಾಲ್ಕೋ ? ಯಾರು ಬಲ್ಲರು ? ಈ ದೀರ್ಘ ಕಾಲದ ಅವಧಿಯಲ್ಲಿ ಅವನು ಉಂಡನೋ ? ಎಷ್ಟು ಉಪವಾಸವಿದ್ದನೋ ? ಶರೀರ ಧರ್ಮಗಳನ್ನು ಮರೆತನೋ ; ಸಹಿಸಿದನೋ? ಅವನು ಮಾತ್ರವೇ ಬಲ್ಲನು .

 

ಉಂಡನೆಂದಡೆ ಹಸಿವಿಲ್ಲ , ಕಂಡಹನೆಂದರೆ ಪ್ರತಿಯಿಲ್ಲ

ನೋಡಿರೇ ನೋಡಿರೇ ಉದಕದೊಳಗಣ ಜ್ಯೋತಿಯಂದವ

ಗುಹೇಶ್ವರ ನಿಮ್ಮ ನಾಮವ ಹಿಡಿದು ಬಿಟ್ಟಡೆ ಭಂಗವಯ್ಯ

ಹಸಿವಿಲ್ಲದೆ ಉಣಬಲ್ಲಡೆಉಪಾಧಿ ಇಲ್ಲದೆ ಬೇಡಬಲ್ಲಡೆ

ಅದು ಮರ್ಮ ಅದು ಸಂಬಂಧ ಅವರ ನಡೆ ಪಾವನ , ಅವರ ನುಡಿ ತತ್ವ

ಅವರು ಜಗದಾರಾಧ್ಯರೆಂಬೆ ಗುಹೇಶ್ವರ

 

ಯೌಗಿಕ ಅನುಸಂಧಾನದಲ್ಲಿ ಹಗಲಿರುಳುಗಳು ಅರಿವೇ ಇಲ್ಲದಂತೆ ಉರುಳಿ ಹೋದವು , ಅಂತರಂಗದ ಅನ್ವೇಷಣೆಗಳಿಗಾಗಿ ಬಾಹ್ಯ ಶರೀರ ನಿತ್ಯ ಪ್ರಯೋಗ ಭೂಮಿಯಾಯಿತು . ಸ್ಥೂಲ , ಸೂಕ್ಷ್ಮ ಗುರು , ಲಘುಗಳ ಹಂಗಿಲ್ಲದ ಆತ್ಮದ ಆವೇಗಕ್ಕೆ ಭೌತಿಕ ನಿಯತಿಗಳ ಜಡ ಸಮೂಹವಾದ ಶರೀರ ಸಮಷ್ಟಿಯೂ ತತ್ತರಿಸಿ ಹೋಯಿತು .ಎಲ್ಲ ಜಂಜಡ, ತತ್ತರ, ಬಿತ್ತರಗಳ ನಡುವೆ ಮೌನದಲ್ಲಿ ; ಮುಗ್ಧತೆಯಲ್ಲಿ ಮೂಲಾತಿಮೂಲದ ಪ್ರಶಾಂತಿಯನ್ನು ಸ್ಪರ್ಶಿಸಲು ಅವಿರತ ಪ್ರಯತ್ನ ಸಾಗಿತು .

 

ಹಿಂದಣ ಅನಂತವನು, ಮುಂದಣ ಅನಂತವನು

ಒಂದು ದಿನ ಒಳಕೊಂಡಿತ್ತು ನೋಡಾ !

ಒಂದು ದಿನವನೊಳಕೊಂಡು ಮಾತಾಡುವ ಮಹಂತನ ಕಂಡು ಬಲ್ಲವರಾರಯ್ಯ ?

ಆದ್ಯರು ವೇದ್ಯರು ಅನಂತ ಹಿರಿಯರು

ಲಿಂಗದಂತುವನರಿಯದೆ ಅಂತೆ ಹೋದರು ಗುಹೇಶ್ವರ

 

ಅಲ್ಲಮನ ಜೀವಮಾನದಲ್ಲಿ ಬಹಿರಂಗದಲ್ಲಿ ಅವನು ಕಂಡುದಕ್ಕಿಂತಾ ಯಾರಿಗೂ ಕಾಣದೆ ಎಲ್ಲಿಯೋ ತನ್ನೊಳಗೇ ತಾನು ಸಮರಸ ಭಾವದಲ್ಲಿದ್ದ ಅವಧಿಯೇ ಹೆಚ್ಚು . ಅದರಿಂದಾಗಿಯೇ ಬಾಹ್ಯ ಪ್ರಪಂಚಕ್ಕೆ ಅವನು ನಿಗೂಢ ; ಮೋಡಗಳ ಮರೆಯಲ್ಲಾಡುವ ಸೂರ್ಯನಂತೆ ವಿಸ್ಮಯ ಸ್ವರೂಪ .ಹೊರ ಕಾಣಿಸಿದಾಗ ಕಣ್ಣು ನೆಟ್ಟು ನೋಡಲಸದಳವಾದ ತೇಜಸ್ಸು .ಮಾನವ ಮಾತ್ರರನ್ನು ಮುಗ್ಧಗೊಳಿಸುವ , ಮನಕ್ಕೆ ಸಾಂತ್ವನ , ಮುದಗಳನ್ನು ನೀಡುವ ಅಪೂರ್ವ ಶಕ್ತಿಯುತ ಬಿಂಬ ಅಲ್ಲಮನದು .

 

ಇಪ್ಪತ್ತೈದು ತತ್ವದ ಹತ್ತೆಂಬ ದ್ವಾರದಲ್ಲಿ ಬಳಲುವ

ವ್ಯರ್ಥಗೇಡಿ ಮನವ ನಾನೇನೆಂಬೆನಯ್ಯ

ತನ್ನ ತಾ ತಿಳಿಯಲು ತನಗೆ ತಾನನ್ಯವಿಲ್ಲ ಮರುಳೆ !

ಮುತ್ತಯ್ಯನ ಬೆಣ್ಣೆಯ ಶಿಶು ನುಂಗಿತ್ತು

ಮತ್ತೆ ಶಿಶುವಿವ ಸುಖವನೇನೆಂಬೆ ಗುಹೇಶ್ವರ

 

ಕಾನನಾಂತರದ ನಿಗೂಢ ಗುಹೆಗಳಲ್ಲಿ ನಡೆಸಿದ ಅಷ್ಟಾಂಗಯೋಗದ ಅನುಸಂಧಾನಗಳು , ಮನ, ವಚನ , ಕಾಯಗಳನ್ನು ಸಮಸ್ಥಿತಿಯಲ್ಲಿರಿಸಿ , ಹಸಿವು, ನಿದ್ರೆ, ನೀರಡಿಕೆಗಳನ್ನು ಐಚ್ಚಿಕಗೊಳಿಸಿ, ಅಸ್ಥಿರ ಮನಸ್ಸಿನ ಹೊಯ್ದಾಟವನ್ನು , ನಿವಾತ ಸ್ಥಳದ ದೀಪದಂತೆ ಸ್ಥಿರಗೊಳಿಸಿದ ಪರಿಣಾಮವಾಗಿ ಆತ್ಮವು ಶಾಶ್ವತ ಸತ್ಯದೊಡನೆ ಸಮಾಹಿತವಾಗಿ ದಿವ್ಯ ಪ್ರಭೆಯಾಯಿತು .

 

ಸ್ಥೂಲ, ಸೂಕ್ಷ್ಮದೊಳಗೆ ಬೆಳಗುವ ಮಹಾಬೆಳಗಾಗಿ

ಹೊಳೆವ ಜ್ಞಾನಜ್ಯೋತಿ ದಳಗಳನೆಲ್ಲವ ಮೀರಿ

ನೆಳಲ ನುಂಗಿದ ಬಿಸಿಲಿನೊಳಗೆ ಚಂದ್ರಮನುದಯ

ಜಲಧಿವಲಯದ ಬೆಳಸ ಹೇಳಲಸದಳವಲ್ಲ !

ಆಳು ಆಳ್ವನ ನುಂಗಿ ಈರೇಳು ಭುವನಂಗಳ ದಾಂಟಿ

ಗುಹೇಶ್ವರ ನಿಂದ ನಿಲವು ಹೊರಗು ಒಳಗನೆ ನುಂಗಿತ್ತು

 

ಅಲ್ಲಮನ ಇರವಿನ ಜೊತೆಗೆ ಪ್ರಚ್ಛನ್ನ ಶಾಂತಿಯು ನೆಲೆಗೊಂಡು ಕಾಂತಾರದ ಕ್ರೂರ ಪ್ರಾಣಿಗಳೂ ಸಹ ಅಸೀಮ ಶಾಂತಿಯ ಸಾನ್ನಿಧ್ಯದಲ್ಲಿ ಶಿರಬಾಗಿ ನಿಂತವು . ಪ್ರಕೃತಿಯೆಲ್ಲವೂ ಅಲ್ಲಮನೊಳಗಣ ಮೂಲಪ್ರಕೃತಿಯೊಡನೆ ಸಮಾಹಿತವಾಗಿ , ಸಮೇಳವಾಯಿತು . ಶರಣ ಲಿಂಗಾರ್ಚನೆಯ ಮಾಡಲೆಂದು ಪುಷ್ಪಕ್ಕೆ ಕರವ ನೀಡಿದರೆ ಆ ಪುಷ್ಪ ನೋಡ ನೋಡ ಕರದೊಳಗಿತ್ತಲ್ಲಾ ! ಅದು ಓಗರದ ಗೊಬ್ಬರವನುಣದು ಕಾಮದ ಗಣ್ಣಿಯರಿಯದು ನಿದ್ರೆಯ ಕಪ್ಪೊತ್ತದು ಅರುಣ ಚಂದ್ರರ ತೆರೆಯಲ್ಲಿ ಬೆಳೆಯದು ಲಿಂಗವೇದಿಯಾಗಿ ಬೆಳೆದ ಪುಷ್ಪವನು ಗುಹೇಶ್ವರ ನಿಮ್ಮ ಶರಣ ಪ್ರಾಣ ಲಿಂಗಕ್ಕೆ ಪೂಜೆಯ ಮಾಡಿದನು ನಿರ್ವಚನ : ಎಲೆ ಮನವೆ , ನೀ ನಿನ್ನ ನಿಜವ ತಿಳಿವಡೆ ಆ ನಿನ್ನ ನಿಜವ ಹೇಳುವೆ ಕೇಳು : ಅದು ಕೇವಲ ಜ್ಯೋತಿ , ಅದು ವರ್ಣಾತೀತ ನೀನದನರಸುವಾಗ ನಿನಗಾವಲ್ಲಿ ನಿಶ್ಚಯ ತೋರಿತ್ತು - ಅದೀಗ ನಿನ್ನ ಪರಿಪೂರ್ಣತ್ವದ ನೆಲೆ . ಆ ನಿನ್ನ ನಿಜವ ನಿಶ್ಚಯಿಸಿ ನಿರ್ಗಮನಿಯಾದಲ್ಲಿ ಅದೇ ನಿನ್ನ ಸಮ್ಯಜ್ಞಾನದ ತೋರಿಕೆ ಆ ತೋರಿಕೆಯ ಅಖಂಡ ಬೆಳಗಿನ ಹೊಳಹಿನೊಳಗೆ ನೀ ನಮ್ಮ ಗುಹೇಶ್ವರ ಲಿಂಗದ ಶ್ರೀಚರಣವನರಸಿಕೊಂಡು ನಿಶ್ಚಿಂತನಾಗೆಲೆ ಮನವೇ .

ಲೇಖನ ವರ್ಗ (Category): 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by cmariejoseph on
ಮಾಯೆಯ ನಾಟ್ಯ, ಮದ್ದಳೆಯ ನಾದ, ಹೆಬ್ಬೆರಳಿನಲ್ಲಿ ಒಸರುವ ರಕ್ತ, ಅನಿಮಿಷ ದರ್ಶನ, ಗೋರಕ್ಷ ಸಂವಾದ . . .ಹೀಗೆ ಹಲವು ನೆನಪುಗಳು ಮರುಕಳಿಸಿದವು. "ನಿನ್ನ ನಿಜವ ನಿಶ್ಚಯಿಸಿ ನಿರ್ಗಮನಿಯಾದಲ್ಲಿ ಅದೇ ನಿನ್ನ ಸಮ್ಯಕ್ ಜ್ಞಾನದ ತೋರಿಕೆ" ಆ ಬೆಳಕಲ್ಲಿ ದೇವರ ಕಾಣು ಎನ್ನುವ ಆ ಪ್ರಭುದೇವರಿಗೆ ಶರಣು. ಪ್ರೀತಿಯಿಂದ ಸಿ ಮರಿಜೋಸೆಫ್

Submitted by csomsekraiah on
ಪ್ರೀತಿಯ ಮರಿ ಜೋಸೆಫ್ ಎರಡೇ ಸಾಲಿನ ಪ್ರತಿಕ್ರಿಯೆಯಲ್ಲಿ , ಅಲ್ಲಮನ ಜೀವನ ವಿಶೇಷಗಳ ಚಿತ್ರ ಸರಣಿಯನ್ನು ನಿರ್ಮಿಸಿದ್ದಕ್ಕೆ ಧನ್ಯವಾದಗಳು.

Submitted by savithru on
ಸಾರ್ ತುಂಬಾ ಅಂದ್ರೆ ತುಂಬಾ ಪ್ರೌಢ ಲೇಖನ. ಒಂದೊಂದು ಸಾಲೂ ಗಹನ. ಮತ್ತೆ ಮತ್ತೆ ಓದಬೇಕು ಅನುಸ್ತಾ ಇದೆ. ಈಗಾಗಲೇ ೩-೪ ಬಾರಿ ಓದಿದ್ದೇನೆ. ಇನ್ನೂ ಓದುತ್ತೇನೆ. ಆದರೂ ಪ್ರತಿಕ್ರಿಯೆ ಕೊಡಲು ಏನೂ ಹೊಳೆಯುತ್ತಿಲ್ಲ. ಕೆಲ ವಿಷಯಗಳನ್ನು, ಅಲ್ಲಮನಿಗಿಂತ ಸರಳವಾಗಿ ಮತ್ತು ಕಡಿಮೆ ಪದಗಳಲ್ಲಿ ಹೇಳಲು ಬೇರಾರಿಗೂ ಸಾಧ್ಯವಿಲ್ಲವೇನೋ ಅನ್ನಿಸಿದ್ದಿದೆ... ಮತ್ತು ಇಲ್ಲಿ ವಚನಗಳ "technical" ಪದಗಳ ಅರ್ಥ ನಮಗೆ ಗೊತ್ತಿದ್ದರೆ ಬಹುಶ "ಒಂದು ವಿಷಯ"ದ ಬಗ್ಗೆ ಇದಕ್ಕಿಂತ ಸರಳ / ನೇರ ಮಾತು ಸಾಧ್ಯವೇ ಇಲ್ಲ ಅನ್ನಿಸಬಹುದು. ಇಂತ ಮಹಾನ್ ಅಲ್ಲಮನನ್ನು ನಮಗೆ ಪರಿಚಯಿಸುತ್ತಿರುವ ನಿಮಗೆ ಸಾವಿರ ಶರಣು. ಮುಂದುವರೆಸಿ... ಮುಂದೊಮ್ಮೆಯಾದರೂ ಅಲ್ಲಮನ ವಚನಗಳು ನನಗೆ ಅರ್ಥವಾಗುತ್ತವೆ ಅನ್ನುವ ನಿರೀಕ್ಷೆಯಲ್ಲಿ ಸವಿತೃ

Submitted by csomsekraiah on
ಪ್ರೀತಿಯ ಸವಿತೃ ತಮ್ಮ ಪ್ರತಿಕ್ರಿಯೆ ತಮ್ಮ ಆಸಕ್ತಿಯನ್ನು ಹೊರಗೆಡಹಿದೆ , ಬರೆಯುವವನಿಗೆ ಇಂತಹ ಸಹೃದಯ ಮಿತ್ರರ ಹೊರತು ಇನ್ನೇನು ಬೇಕು ?

Submitted by shaamala on
ಸೋಮಶೇಖರಯ್ಯನವರೆ, "ಅನನ್ಯ ಅಲ್ಲಮ" ಸರಣಿ ಬಹಳ ಚೆನ್ನಾಗಿ ಬರುತ್ತಿದೆ. ಮುಂದಿನ ಭಾಗಗಳಿಗಾಗಿ ಎದುರು ನೋಡುತ್ತಿದ್ದೇನೆ. ಅಲ್ಲಮನ ವಚನಗಳೆಂದರೆ ನನಗೆ ಮೊದಲಿಂದಲೂ ವಿಶೇಷ ಸೆಳೆತವಿದ್ದರೂ ಆತನ ಹೆಚ್ಚಿನ ವಚನಗಳನ್ನ ಅರ್ಥೈಸಿಕೊಳ್ಳುವುದು ಕಠಿಣವೆಂದು ನಾನು ಓದುವುದನ್ನು ನಿಲ್ಲಿಸಿಬಿಟ್ಟಿದ್ದೆ, ನಿಮ್ಮ ಬರಹದ ಮೂಲಕ ಸುಲಭದಲ್ಲಿ ಮತ್ತೆ ಅಲ್ಲಮನ ಅಂತರಾತ್ಮದ ದರ್ಶನವಾಗುತ್ತಿದೆ. > > ಚೆನ್ನಾದ, ನಿಜದ ತಿಳಿಯನ್ನಷ್ಟೇ ಹೇಳುವ ಸಾಲುಗಳು. ಧನ್ಯವಾದಗಳು, ಶಾಮಲ

Submitted by csomsekraiah on
ಶಾಮಲ ಅವರಿಗೆ ವಂದನೆಗಳು ವಚನ ಸಾಹಿತ್ಯದಲ್ಲಿಯೇ ಅಕ್ಕ , ಅಲ್ಲಮ ಬಹು ದೊಡ್ಡ ಅನುಭಾವಿಗಳು . ’ಅನನ್ಯ ಅಲ್ಲಮ’ ಇನ್ನೂ ಬಹುದೂರ ಕ್ರಮಿಸಬೇಕಾದ ದಾರಿ . ನಿಮ್ಮಂತಹವರ ಆಸಕ್ತಿಯ ಮಾತುಗಳು ನನ್ನ ದಾರಿಯನ್ನು ಹಗುರಗೊಳಿಸುತ್ತವೆ .

Submitted by shreekant.mishrikoti on

ಓ ಎಲ್ ನಾಗಭೂಷಣಸ್ವಾಮಿಯವರ 'ಲೋಕಾಂತ ಏಕಾಂತ' ಪುಸ್ತಕ ನನ್ನಲ್ಲಿ ಅಲ್ಲಮನ ಬಗೆಗೆ ಕುತೂಹಲ ಮೂಡಿಸಿತ್ತು . ನಿಮ್ಮ ಸರಣಿ ಈ ವರೆಗೆ ಓದಲಾಗಿರಲಿಲ್ಲ . ಈಗ ಪುರುಸೊತ್ತಾಗಿ ಮೊದಲಿನಿಂದ ಓದುತ್ತ ಕೂತಿದ್ದೇನೆ. ಅಲ್ಲಮನನ್ನು ತಿಳಿಯಲು ನಿಮ್ಮ ಬರಹಗಳು ನೆರವಾಗಲಿವೆ. ನಿಮ್ಮ ಸರಣಿಯ ಕ್ರಮಿಸುವ ದಾರಿಯಲ್ಲಿ ನಾನೂ ಇದ್ದೇನೆ.
ಈ ಸರಣಿಗಾಗಿ ತುಂಬಾ ತುಂಬಾ ಧನ್ಯವಾದಗಳು.