ಏಕಾಂಗಿತನದ ವಿರಾಟ್ ರೂಪ
ನೀವು ಭಾರತೀಯರಾಗಿದ್ದರೆ ಈಗ ಮತ್ತೊಂದು ಅಸಾಧ್ಯ ಕಲ್ಪನೆಗೆ ಮುಂದಾಗಿ. ಹೀಗೆ ಹೇಳಿದನೆಂದು ಸಿಟ್ಟಾಗದಿರಿ. ಕನ್ನಡ ಓದಿಯೂ ಭಾರತೀಯನಲ್ಲದವರಾಗಿದ್ದರೆ ನೀವು ಎನ್.ಆರ್.ಐಗಳೇ ಇರಬೇಕು. ಅಂತಹವರಿಗೆ ಘಟ್ಟವೇಕೆ, ಬೆಂಗಳೂರು, ಮೈಸೂರೂ ಮಜ ಎನ್ನಿಸುತ್ತದೆ-ಏಕೆಂದರೆ, ತಾವು ಎಂದಿದ್ದರೂ ಯುರೋಪ್, ಯು.ಎಸ್.ಆಫ್ ಎಗೆ ಹಿಂದಿರುಗುತ್ತೇವೆ ಎಂಬ ನಂಬಿಕೆಯಿಂದಾಗಿ.
ಈಗ ಉಲ್ಟಾ ಎನ್‌ಆರ್‌ಐಗಳನ್ನು ಕಲ್ಪಿಸಿಕೊಳ್ಳಿ. ಸ್ವಲ್ಪಕ್ಕಿಂತಲೂ ಸ್ವಲ್ಪ ಹೆಚ್ಚು ಕಷ್ಟವಿದು. ಆ ಚಾರ್ಮಾಡಿ ಘಟ್ಟದವರೇ ಮತ್ತೂ ಜನನಿಭಿಡ ಕಾಡಿಗೆ ಹೋದಿರೆನ್ನಿ. ಒಂದರಿಂದ ಹತ್ತು ಕಿಲೋಮೀಟರ್ ಅಂತರದಲ್ಲಿ ಕಾಣುತ್ತಿದ್ದ ಮನೆಗಳು ಈಗ ಹತ್ತರಿಂದ ನೂರು ಕಿಲೋಮೀಟರ್ ಅಂತರದಲ್ಲಿ ಅಲ್ಲೊಂದು ಇಲ್ಲೊಂದು ಕಾಣುತ್ತಿದೆ ಎಂದಿಟ್ಟುಕೊಳ್ಳಿ. ಇರುವ ಮೂರು ಮತ್ತೊಂದು ಫಿನ್ಲೆಂಡ್ ನಗರಗಳ ಹೊರಗೆ ಅಕ್ಷರಶಃ ಹೀಗಿದೆ!
ಫಿನ್ಲೆಂಡ್ ಒಂಟಿ ದೇಶ. ವರ್ಷಕ್ಕೆ ಹತ್ತು ತಿಂಗಳು ಕತ್ತಲು. ಪ್ರತಿ ದಿನ ಏನಿಲ್ಲವೆಂದರೂ ಎರಡು ಮೂರು ಗಂಟೆ ಕಾಲ ಸೂರ್ಯನ ದರ್ಶನ. ಮಾಡಲು ಕೆಲಸವಿಲ್ಲದಿದ್ದರೂ ಇರಲು ಮನೆ, ತೊಡಲು ಬೆಚ್ಚನೆ ವಸ್ತ್ರ, ತಿಂಗಳ ಖರ್ಚಿಗೆ ಹಣ-ಇವಿಷ್ಟನ್ನೂ ಕೊಡುವ ಫಿನ್ನಿಶ್ ಸರ್ಕಾರ, ಇಷ್ಟಕ್ಕೆ ತನ್ನ ಪ್ರಜೆಗಳ ಅವಶ್ಯಕತೆ ಫಿನಿಶ್ ಆಯಿತೆಂದು ಭಾವಿಸುತ್ತದೆ. ಆದರೆ ಮನುಷ್ಯನ ಅವಶ್ಯಕತೆಗಳು ಪ್ರಾರಂಭವಾಗುವುದೇ ಹೊಟ್ಟೆ ಬಟ್ಟೆ ತುಂಬಿದ ಮೇಲಲ್ಲವೆ? ಇಲ್ಲದಿದ್ದರೆ, ಇಷ್ಟೆಲ್ಲ ಇದ್ದಾಗಲೂ ಇಡೀ ದೇಶದ ಶೇಕಡ ಮೂವತ್ತರಷ್ಟು ಜನರು 1960ರಲ್ಲಿ ಒಮ್ಮೆಲೆ ದೇಶ ಬಿಟ್ಟು ಹೋಗಿದ್ದೇಕೆ ಹೇಳಿ?
ಸ್ನೇಹಿತ ಸಾಮಿ ವ್ಯಾನಿಂಗನ್‌ನೊಂದಿಗೆ ಆತನ ಮನೆಗೆ ಹೋಗುತ್ತಿದ್ದೆ. ಗಂಟೆಗೆ ಸುಮಾರು ೧೨೦ ಕಿ.ಮೀ. ವೇಗದಲ್ಲಿ, ಆರು ಗಂಟೆಕಾಲದ ಪ್ರಯಾಣವದು. ಬೆಂಗಳೂರಿನಿಂದ ಗುಲ್ಬರ್ಗದವರೆಗೂ ಎಂದಿಟ್ಟುಕೊಳ್ಳಿ. ಒಂದೇ ಒಂದು ಶಾಪಿಂಗ್ ಕಾಂಪ್ಲೆಕ್ಸ್, ಎರಡು ಊರು, ಮೂರು ಮನೆ, ನಾಲ್ಕು ಮಾನವರು ಹಾಗೂ ಐದಾರು ಬಾರಿ ಮಳೆ ಕಾಣಸಿಕ್ಕಿತು ಅಷ್ಟರಲ್ಲಿ! "ಎಲ್ಲಿ ಜನ" ಎಂದು ಕೇಳಿದೆ.
"....."
"ಒಂಟಿ ಮನೆಗಳಿರುತ್ತವಲ್ಲ, ಕಳ್ಳತನವಾಗುವುದಿಲ್ಲವೆ?"
"ಜನರಿದ್ದರಲ್ಲವೆ ಕಳ್ಳರಾಗಲು ಸಾಧ್ಯ. ಒಂದು ವಿಷಯ ಗೊತ್ತೆ ನಿನಗೆ! ಇಷ್ಟರವರೆಗೂ ನೀನು ನೋಡಿದ ಮೂರೂ ಮನೆಗಳಲ್ಲಿ ಎರಡು ಮನೆಗಳಲ್ಲಿ ಜನರೇ ಇಲ್ಲ" ಎಂದು ನನ್ನ ಎರಡನೇ ಪ್ರಶ್ನೆಗೆ ಮೊದಲು ಉತ್ತರಿಸಿದ್ದ ಸಾಮಿ.
"ಭಾರತದ ಟೀಮ್ ಎರಡನೇ ಇನ್ನಿಂಗ್ಸ್‌ನಲ್ಲಿ ಚೆನ್ನಾಗಿ ಆಡುವುದಾದರೆ ಅದನ್ನೇ ಮೊದಲು ಆಡಲು ನಾನು ಹೇಳಿದೆನೆಂದು ತಿಳಿಸಿಬಿಡಿ" ಎಂದಿದ್ದರಂತೆ ಒಮ್ಮೆ ಜವಹರಲಾಲ್ ನೆಹರು- ಸ್ಟೇಡಿಯಂ ಖ್ಯಾತಿಯ ಚಿನ್ನಸ್ವಾಮಿಯವರಿಗೆ. ಹಾಗಾಯಿತು ಸಾಮಿಯ ಕಥೆ. ಕೇಳಿದ ಪ್ರಶ್ನೆಗಳಲ್ಲಿ ಎರಡನೆಯದನ್ನು ಉತ್ತರಿಸುತ್ತಿದ್ದ ಆತ. ಥೇಟ್ ಫಿನ್ನಿಶ್ ಜನರಂತೆ ಆತ. ಏಕಾಗ್ರಚಿತ್ತರಾಗಿ ಕಂಪ್ಯೂಟರ್‌ನೊಳಗೆ ಮುಳುಗಿರುವ ಫಿನ್ನಿಶ್ ಜನರನ್ನು ಮಾತನಾಡಿಸಿ ನೋಡಿ. ಎಲ್ಲ ಕಾರ್ಯಕ್ರಮಗಳನಲ್ಲದಿದ್ದರೂ ಪ್ರೋಗ್ರಾಮ್‌ಗಳನ್ನು ಮುಚ್ಚಿ ಕೆಳಗಿಳಿಸಿ (ಶಟ್ ಡೌನ್ ಮಾಡಿ) ನಂತರ ನಿಮ್ಮನ್ನು ಪಾರದರ್ಶಕರೋ ನೀವು ಎಂಬಂತೆ ನೋಡಿ, ನಿಮ್ಮ ಪ್ರಶ್ನೆಗೆ ಉತ್ತರವನ್ನು ಫಿನ್ನಿಶ್‌ನಿಂದ ಇಂಗ್ಲೀಷಿಗೆ ತರ್ಜುಮೆ ಮಾಡಿ, ಸ್ಲೋಮೋಶನ್ನಿನಲ್ಲಿ ಉತ್ತರಿಸುತ್ತಾರವರು.
ನನ್ನ ಮೊದಲ ಪ್ರಶ್ನೆ (ಎಲ್ಲಿ ಜನ?)ಯನ್ನು ಸುಮಾರು ಎರಡು ಗಂಟೆ ಕಾಲ ಮೆಲುಕು ಹಾಕಿದ ನಂತರ ತಿರುವೊಂದರಲ್ಲಿ ಸಾಮಿ ಉತ್ತರಿಸಿದ, "ಇನ್ನೊಂದತ್ತು ಸೆಕೆಂಡುಗಳಲ್ಲಿ ಜನ ಸಿಗುತ್ತಾರೆ ನೋಡು" ಎಂದು ಕಾರನ್ನು ನಿಧಾನ ಮಾಡಿ ನಿಲ್ಲಿಸಿಯೇ ಬಿಟ್ಟ. ಅಲ್ಲಿದ್ದರು ಜನ! ಅವರ ಪಕ್ಕದಲ್ಲಿ ಎರಡು ಬೃಹತ್ ತಾರು ಹಾಕುವ ಮೋಟಾರುಗಳು ತಾವೇ ತಾವಾಗಿ, ಇಂಚಿಂಚೂ - ಒಂದಿಂಚೂ ಹೆಚ್ಚೂ ಕಡಿಮೆ ಆಗದಂತೆ ನಿರ್ಜನ ರಸ್ತೆಯ ಸೊಗಸಾದ ಡಾಮರು ರಸ್ತೆಯ ಮೇಲೆ ಮತ್ತೆ ಡಾಮರು ಹಾಕುತ್ತಿತ್ತು. ಬೆಂಗಳೂರಿನ ರಸ್ತೆಗಳ ನೆನಪಾಯಿತು. ಹೊಸದಾಗಿ ತಾರ್ ಹಾಕಿದಾಗ ಅದೆಷ್ಟು ಕಲಾತ್ಮಕವಾಗಿ ಅಂಕುಡೊಂಕಾಗಿರುತ್ತದೆಂದರೆ, ಮಳೆ ಬಿದ್ದಾಗ ಸವೆದ ಟೈರಿನ ಬೈಕಿನಲ್ಲಿ ನೀವು ಪಯಣಿಸುತ್ತಿದ್ದರೆ, ಎಚ್ಚರಿಕೆಯಿಂದ ನೀವು ರಸ್ತೆಯ ಎಡಬದಿಯಲ್ಲೇ ಹೋಗಬೇಕೆಂದೇನಿಲ್ಲ. ರಸ್ತೆಯ ಮಧ್ಯಭಾಗವು ಅದೆಷ್ಟು ಪಿರಮಿಡ್ಡಿನಂತೆ ಉಬ್ಬಿರುತ್ತದೆಂದರೆ (ಅವುಗಳ ಕಾಂಟ್ರಾಕ್ಟುದಾರನ ಸೈಟಿನಲ್ಲಿ ಹೊಸ ಮನೆ ನೆಲದಿಂದ ಉಬ್ಬಿಕೊಂಡಿರುವಂತೆ) ಬೈಕನ್ನು ರಸ್ತೆಯ ಮಧ್ಯದಲ್ಲಿ ಓಡಿಸಿದರೆ ಸಾಕು. ಸರಾಗವಾಗಿ ಅದು ಜಾರುತ್ತ ರಸ್ತೆಯ ಎಡಭಾಗಕ್ಕೇ ಬಂದಿರುತ್ತದೆ!
ಫಿನ್ನಿಶ್ ರಸ್ತೆಯ ಸಮತಟ್ಟು ಗುಣಕ್ಕೆ ಬೆರಗಾದರೂ ಭಾರತವನ್ನು ಬಿಟ್ಟುಕೊಡಬಾರದೆಂದು ಒಂದು ಡೈಲಾಗ್ ಹೊಡೆದೆ ( ನನ್ನ ಜತೆ ಇದ್ದ ಸಾಮಿ ಬೆಂಗಳೂರಿನ ಸಮೀಪದ ಮೈಸೂರಿನಲ್ಲಿ ಹುಟ್ಟಿಬೆಳೆದವನು). "ಇಲ್ಲಿ ಜನರೇ ಇಲ್ಲದಿರುವುದರಿಂದ ರಸ್ತೆಗಳು ಇಷ್ಟು ಸಮತಟ್ಟಾಗಿರುತ್ತವೆ, ಅಲ್ಲವೆ?"
ಡಾಮರು ಹಾಕುತ್ತಿದ್ದ ಗಾಡಿಗಳಲ್ಲಿ ಜನರಿರಲಿಲ್ಲ. ಸಮೀಪದ ಎರಡು ಕಾರ್‌ಗಳ ಹೊರಗೆ ಮಾತ್ರ 'ಇಬ್ಬರು' ಮೇಲ್ವಿಚಾರಕರು ನಿಂತು ಡಾಮರು ಹಾಕುವುದನ್ನು ವೀಕ್ಷಿಸುತ್ತಿದ್ದರು. ಅಲ್ಲಿಂದ ಸುಮಾರು ಇನ್ನೂರ ಐವತ್ತು ಕಿ.ಮೀಟರ್ ದೂರದ ರಾಜಧಾನಿ ಹೆಲ್ಸಿಂಕಿಯ ರಿಮೋಟ್ ಕಂಟ್ರೋಲ್ ರೂಮಿನಿಂದ ಇಲ್ಲಿ ಡಾಮರು ಹಾಕುವ ಇಂಚಿಂಚು ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಯುತ್ತಿತ್ತು. ಈ ಇಬ್ಬರನ್ನು ಕುರಿತೇ ಸಾಮಿ ಹೇಳಿದ್ದು, "ಮುಂದೆ ಜನ ಸಿಗುತ್ತಾರೆ ನೋಡು" ಎಂದು!
ಇನ್ನೂ ಸ್ವಲ್ಪ ಮುಂದೆ ಹೋದಾಗ ಬೆಳೆದು ನಿಂತ ಮರಗಳನ್ನು ಇಟ್ಟಿಗೆಯ ಅಚ್ಚು ಹಾಕಿದಷ್ಟು ಕರಾರುವಾಕ್ಕಾಗಿ, ಒಂದಿಂಚೂ ಹೆಚ್ಚೂಕಡಿಮೆಯಾಗದಂತೆ ಕಡಿಯುತ್ತ, ಪಕ್ಕದಲ್ಲಿ ಜೋಡಿಸಿಡುತ್ತಿದ್ದ ಯಂತ್ರಗಳನ್ನು ನೋಡಿದೆ. ಅಲ್ಲಿ ಒಬ್ಬರೂ ಕಾಣಲಿಲ್ಲ. ಇದ್ದ ಒಬ್ಬನೇ ಮನುಷ್ಯ ಅಲ್ಲೇ ಸುಮಾರು ಐವತ್ತು ಕಿ.ಮೀ. ಹತ್ತಿರವಿದ್ದ ಮೂರೂ ಮತ್ತೊಂದು ಮನೆಯಿರುವ ಪಟ್ಟಣಕ್ಕೆ ತಿಂಡಿ ತಿನ್ನಲು ಹೋಗಿದ್ದನಂತೆ...
ನಿಜ ಹೇಳಬೇಕೆಂದರೆ, "ಜನರೆಲ್ಲಿ" ಎಂದು ಟಿಪಿಕಲ್ ಭಾರತೀಯನಂತೆ ಹೃದಯದಾಳದಿಂದ ಕೇಳುವುದನ್ನು ನಾನು ಹಲವು ದಿನಗಳ ಹಿಂದೆಯೇ ಫಿನ್ನಿಶ್ ರಾಜಧಾನಿ ಹೆಲ್ಸಿಂಕಿಯಲ್ಲೇ, ಸುಮಾರು ದಿನಗಳ ಹಿಂದೆಯೇ ನಿಲ್ಲಿಸಿಬಿಟ್ಟಿದ್ದೆ. ಯಾಕೆಂದರೆ "ಜನರೆಲ್ಲಿ" ಎಂಬ ಪ್ರಶ್ನೆಯನ್ನು ಕೇಳಲಿಸಿಕೊಳ್ಳಲಿಕ್ಕಾದರೂ ಜನರಿರಬೇಕಲ್ಲವೆ ಅಲ್ಲಿ. ಆದರೂ ಫಿನ್ಲೆಂಡಿನ ಅತ್ಯಂತ ಜನನಿಭಿಡ ಜಾಗ ರಾಜಧಾನಿಯೇ. ಇಡೀ ದೇಶದ ಶೇಕಡ ಎಂಬತ್ಟರಷ್ಟು ಜನ ಭೂ ಅಳತೆಯಲ್ಲಿ ಎರಡು ಶೇಕಡ ನೆಲವಾದ ಹೆಲ್ಸಿಂಕಿಯಲ್ಲಿದ್ದಾರೆ! ಉಳಿದ ಇಪ್ಪತ್ತು ಶೇಕಡ ಜನ ಮಿಕ್ಕುಳಿದ ಶೇಕಡ ತೊಂಬತ್ತೆಂಟು ಜಾಗವನ್ನಾಕ್ರಮಿಸಿಕೊಂಡಿದ್ದಾರೆ! ರಾಜಧಾನಿಯ ಹೊರಗೆ ಬದುಕುವ ಜನರಿಗೆ ಕಾರ್ಯನಿಮಿತ್ತ (ಸಾಮಿಯಂತೆ) ರಾಜಧಾನಿಗೆ ಬರುವುದೆಂದರೆ ತಲೆನೋವು. ಕಾರಣ ಹೆಲ್ಸಿಂಕಿಯನ್ನು ಕುರಿತ ಅವರ ಆರೋಪವನ್ನು ಕನ್ನಡಕ್ಕೆ ಭಾಷಾಂತರಿಸಿ ಹೇಳುವುದಾದರೆ, "ಅಲ್ಲಿ ಜನಾ ಅಂದ್ರೆ ಜನ"!
ಫಿನ್ಲೆಂಡಿನ ಅತ್ಯಂತ ಜನನಿಭಿಡ ಪ್ರದೇಶದಲ್ಲಿ (ತುರ್ಕು, ಹೆಲ್ಸಿಂಕಿ, ಹ್ಯಾಂಕೋ ಎಂಬ ಒಂದೆರೆಡು ಜಾಗಗಳಲ್ಲಿ) ಚದರ ಕಿಲೋಮೀಟರಿಗೆ ಹದಿನಾರು ಮಂದಿ ವಾಸಿಸುತ್ತಾರೆ! ಬೆಂಗಳೂರಿನಲ್ಲಿ ಅದೇ ಅಳತೆಯ ಜಾಗದಲ್ಲಿ ಮೂರು ಸಾವಿರ ಜನ ಮತ್ತು ಮುಂಬಯಿಯಲ್ಲಿ ಅದೇ ಅಳತೆಯ ಜಾಗದಲ್ಲಿ ಐದು ಲಕ್ಷ ಜನ ವಾಸಿಸುತ್ತಾರೆ. ಇನ್ನೈದು ವರ್ಷದಲ್ಲಿ ಸಮಗ್ರ ಆಸ್ಟ್ರೇಲಿಯ ಖಂಡದ ಜನಸಂಖ್ಯೆಯನ್ನು ಏಷ್ಯ ಖಂಡವೆಂಬುದರೊಳಗಿರುವ ಭಾರತವೆಂಬ ಒಂದು ದೇಶದ ಒಂದು ನಗರದ ಜನಸಂಖ್ಯೆ (ಮುಂಬೈ) ಮೀರಿಸುತ್ತದೆಂಬುದು ಸತ್ಯಕ್ಕೆ ಹತ್ತಿರವಾದ ಮುನ್ನೋಟ! ಇಂತಹ ಊರನ್ನು ನೋಡಿರದ ಫಿನ್ನಿಶ್ ಜನ ತಮ್ಮ ರಾಜಧಾನಿಯನ್ನು "ಹೆಲ್-ಸಿಂಕ್-ಐ" ಎನ್ನುತ್ತ ತಮ್ಮ ತವರೂರಿಗೆ ಗುಳೇ ಹೋಗುತ್ತಾರೆ. ಕೇವಲ ಒಂದು ಶತಮಾನದ ಹಿಂದೆ ಕಾಡಿನಲ್ಲಿ ಬೇಟೆಯಾಡುತ್ತಿದ್ದ ವಾಲ್ಮೀಕಿ ಜನ ಅವರು. ಈಗಷ್ಟೇ ನೋಕಿಯ ಮೊಬೈಲ್ ಬಂದು ಅವರ ಸಾಧನೆಯ ಸುದ್ಧಿ ಎಲ್ಲೆಡೆ ಎಸ್ಸೆಮ್ಮೆಸ್ ಟೆಕ್ಸ್ಟ್ ಮೆಸೇಜ್‌ಆಗಿ ಹರಡಿಬಿಟ್ಟಿದೆ. ನೋಕಿಯ ಫಿನ್ಲೆಂಡಿಗೆ ಅಶೋಕ ಸ್ಥಂಭವಿದ್ದಂತೆ. ಅದೇ ಅವರ ರಾಷ್ಟ್ರೀಯ ಸ್ಮಾರಕ ಕೂಡ!
ಲಂಡರ್ ಎಂಬ ಗೆಳೆಯ ಬದುಕಿರುವ ಜಾಗದಲ್ಲಿ ಆತ ಇಪ್ಪತ್ತು ವರ್ಷದಲ್ಲಿ ಐದು ಜನರನ್ನು ಹಾಗೂ ಒಂದು ಕರಡಿಯನ್ನು ನೋಡಿದ್ದಾನಂತೆ. ಇದೊಂದು ಉತ್ಫ್ರೇಕ್ಷಿತ ಗಣಿತವೇ ಎಂದುಕೊಳ್ಳಿ. ಆತ ಐದು ವರ್ಷದಲ್ಲಿ ಇಪ್ಪತ್ತು ಜನರನ್ನೂ ಹಾಗೂ ಇಲ್ಲದ ಕರಡಿಯನ್ನು ನೋಡಿದ್ದಾನೆ ಎಂದೇ ಲೆಕ್ಕ ಹಾಕೋಣ. ಎಲ್ಲಿದೆ ಅಂತ ಪ್ರಶಾಂತ, ಜನನಿಭಿಡ ಜಾಗ ಭಾರತದಲ್ಲಿ? ಮಲಂಡರ್‌ನನ್ನು ಸುಳ್ಳ ಎನ್ನುವಂತಿಲ್ಲ. ಆತನ ಮಾಜಿ ಪ್ರೇಯಸಿ ಇಷ್ಟರಲ್ಲೇ ಫಿನ್ಲೆಂಡಿನ ಪ್ರಧಾನಿಯಾಗಲಿದ್ದಾಳೆ ಎಂದ ಆತನ ಹೇಳಿಕೆಯನ್ನೂ ಸುಳ್ಳು ಎನ್ನುವಂತಿಲ್ಲ. ಅದೊಂದು ಆಶಯ ಎಂದುಕೊಂಡೆ. ಏಕೆಂದರೆ ಮಲಂಡರ್ ಈ ಭವಿಷ್ಯ ನುಡಿದ ಕಾಲಕ್ಕೆ ಆಕೆ ಅಲ್ಲಿನ ಶಿಕ್ಷಣಾ ಮಂತ್ರಿಯೋ ರಕ್ಷಣಾ ಮಂತ್ರಿಯೋ (ಶಿಕ್ಷೆ, ರಕ್ಷೆಯ ನಡುವಣ ವ್ಯತ್ಯಾಸವೆಂತಯ್ಯ!) ಆಗಿದ್ದಾಗಿ ಹೋಗಿತ್ತು.
ಎಪ್ಪತ್ತರ ದಶಕದಲ್ಲಾಗಲೇ ದಲೈ ಲಾಮಾರನ್ನು ಫಿನ್ಲೆಂಡಿಗೆ ಕರೆತಂದಿದ್ದ ಮಲಂಡರ್. ಈಗಾಗಲೇ ಬುದ್ಧನೇ ಹೇಳಿಕೊಟ್ಟನೆನ್ನಲಾದ ವಿಪಶ್ಯನ ಧ್ಯಾನ ವಿಧಾನವನ್ನು ಅಲ್ಲಿನ ಜನರಿಗೆ ಪರಿಚಯಿಸಿಕೊಟ್ಟಿದ್ದ ಮಲಂಡರ್. ಬೌದ್ಧ ಧರ್ಮದ ಈ ಧ್ಯಾನವನ್ನು ಅಲ್ಲಿನ ಕ್ರೈಸ್ತ ಧರ್ಮದ ದೇವಾಲಯಗಳಲ್ಲಿ ನಿಯಮಿತವಾಗಿ ಹೇಳಿಕೊಡುತ್ತಿದ್ದಾರೆ ಕ್ರೈಸ್ತರೂ ಅಲ್ಲದ, ಬೌದ್ಧರೂ ಅಲ್ಲದ ವಿಪಶ್ಯನ ಸಾಧಕರು. ಇದಕ್ಕೆ ಮೂಲ ಪ್ರೇರಣೆ ಮಲಂದರ್. ಆತ ಇಲ್ಲಿದ್ದಿದ್ದರೆ, "ಅಲ್ಲಿ ನೋಡು ಮಲಂದರ್, ಇಲ್ಲಿ ನೋಡು ಸಿಕಂದರ್" ಎಂದು ನಮ್ಮ ಜನ ಹಾಡಿಹೋಗಳಬಹುದಾಗಿತ್ತು, ಛೇ!
ಸಾಮಿಯೊಂದಿಗಿನ ಆ ಒಂದು ಪ್ರಯಾಣ, ಹೆಲ್ಸಿಂಕಿಯಿಂದ ಪಕ್ಕದ ದೇಶವಾದ ಸ್ವೀಡನ್ನಿನ ರಾಜಧಾನಿ ಸ್ಟಾಕ್‌ಹೋಮಿಗೆ ಹದಿನೈದು ಗಂಟೆ ಕಾಲದ ಹಡಗು ಪ್ರಯಾಣ ಹಾಗೂ ಭಾರತ ಸಂಜಾತ ಫಿನ್ನಿಶ್ ಪ್ರಜೆ ಕೇತನ್ ಭುಪ್ತನೊಂದಿಗಿನ ಸುಮಾರು ಹನ್ನೆರೆಡು ಗಂಟೆ ಕಾಲದ ರಾತ್ರಿಯ ಆತನ ಹರಿಕಥೆ--ಈ ಮೂರು ಪ್ರಯಾಣಗಳದ್ಡು ಒಂದು ತೂಕವಾದರೆ ಮಿಕ್ಕುಳಿದ ಎರಡು ಭೇಟಿಗಳ ಒಟ್ಟು ನಾಲ್ಕೂವರೆ ತಿಂಗಳ ಫಿನ್ಲೆಂಡ್ ಪ್ರಯಾಣದ್ದು ಒಂದೇ ತೂಕ!
ಈ ಪ್ರವಾಸ ಕಥನದ ಇತರ ಭಾಗಗಳು

- Printer-friendly version
- Login or register to post comments
- 1267 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಫಿನ್ ಲೆಂಡ್....
ಎಲ್ಲೋ ಓದಿದ ನೆನಪು. ಫಿನ್ ಲೆಂಡ್ ನಲ್ಲಿ, 'ಮಧ್ಯರಾತ್ರಿಯಲ್ಲು ಸೂರ್ಯನ ಬೆಳಕು', ಅಂತ. ದಯವಿಟ್ಟು ನನ್ನ ಶಂಕೆ ಬಗೆಹರಿಸಿ.
ನಿಮ್ಮ ಲೇಖನದಲ್ಲಿ ಹೇಳಿರುವಂತೆ ೧೦ ತಿಂಗಳು ಕತ್ತಲೆ. ಸ್ವಲ್ಪ ಇದರಬಗ್ಗೆ ಸ್ವಲ್ಪ ಹೆಚ್ಚಿನ ಮಾಹಿತಿಕೊಡಿ.
ಧನ್ಯವಾದ.
ಸೂರ್ಯ೦ಗೇ ಟಾರ್ಚಾಕುವ 'ಮಧ್ಯ'ರಾತ್ರಿಯ ಸೂರ್ಯರು!
ವೆ೦ಕಟೇಶ್‍ರ ಕುತೂಹಲಕ್ಕೆ ಧನ್ಯವಾದ,
ಏಪ್ರಿಲ್, ಮೇ, ಜೂನ್‍ನಲ್ಲೇ ನನಗೆ ಅಲ್ಲಿಗೆ ಬರಲು ಹೇಳಿದ್ದರು ನನ್ನ ಪ್ರಾಯೋಜಕರು. ಆಗ ಮಾತ್ರ ಅವರ ಬೇಸಿಗೆ. ಮಿಕ್ಕ೦ತೆ ಕತ್ತಲು. ಅಲ್ಲಿನ ಸ್ವ೦ತ ಅಥವ ಬಾಡಿಗೆ (ದೇಹಕ್ಕಲ್ಲ) ವಾಹನಗಳಲ್ಲಿ ಒ೦ದು ವಿಚಿತ್ರವಿರುತ್ತದೆ. ಬೆಳಿಗ್ಗೆಯ ಹೊತ್ತಿನಲ್ಲೂ ವಾಹನ ಆನ್ ಮಾಡಿದ ಕೂಡಲೇ, ಜೊತೆಗೇ ಹೆಡ್‍ಲೈಟ್‍ಗಳೂ ಆನ್ ಆಗುತ್ತವೆ. ಸೂರ್ಯನಿಗೇ ಟಾರ್ಚ್ ಹಾಕುವ ಪ್ರಯತ್ನ! ಚಳಿಗಾಲದ ಮ೦ಜಿನ ಅಭ್ಯಾಸ ಬೇಸಿಗೆಯಲ್ಲೂ ಪ್ರತಿಫಲಿಸುತ್ತದಿಲ್ಲಿ.
ರಾತ್ರಿ ಮೊರು ಗ೦ಟೆಗೆ ಸೂರ್ಯ ಮುಳುಗುವುದು, ಬೇಸಿಗೆಯಲ್ಲಿ. ಮು೦ಜಾನೆ ಆರಕ್ಕೇ ಕರಾರುವಾಕ್ಕಾಗಿ ಮತ್ತೆ ಸನ್‍ಗಾಡ್ ಹಾಜರ್! ಬೆ೦ಗಳೂರಿನ ಸ೦ಜೆ ನಾಲ್ಕರ ಸೂರ್ಯನ ಪ್ರಖರತೆ ಅಲ್ಲಿ ರಾತ್ರಿ ಹನ್ನೆರೆಡು ಗ೦ಟೆಗೆ! ಜೂನ್ ೨೪ಕ್ಕೆ, ಕರೆಕ್ಟಾಗಿ ಡಾ.ರಾಜ್ಕುಮಾರರ ಹುಟ್ಟಿದಹಬ್ಬದ ದಿನದ ಎರಡನೇ ತಿ೦ಗಳಿಗೆ, ಮೊರಕ್ಕೆ ಮುಳುಗಿ ಆರಕ್ಕೆ ಮೇಲೇರುತ್ತಾನೆ ಸೂರ್ಯ. ಅ೦ದು ಅವರಿಗೆಲ್ಲ ಶಿವ-ರಾತ್ರಿ ಅಥವ ಶಿವ-ಬೆಳಗಿನ ಹಬ್ಬ. ಎಲ್ಲರಿಗೂ ಖುಷಿಯೋ ಖುಷಿ, ಮೈಮರೆಯುವಷ್ಟು ಅಥವ ಮೈಮೇಲಿನ ಬಟ್ಟೆ ಮರೆಯುವಷ್ಟು! ಅತಿ ಕಡಿಮೆ ಬಟ್ಟೆ ತೊಟ್ಟು ಸೂರ್ಯಸ್ನಾನ ಮಾಡುವುದು ಅವರ ಶಿವಪೂಜೆಯ ವಿಧಾನ. ಮೈತು೦ಬ ಬಟ್ಟೆ ಹೊದ್ದರೆ ಅವರುಗಳು 'ಶಿವಪೂಜೆಯಲ್ಲಿ ಕರಡಿಬಿಟ್ಟ೦ತೆ' ಕ೦ಡಾರು ಎ೦ದಿರಬೇಕು ಈ ಕ್ರಮ.
ಸೂರ್ಯನ ಪ್ರಖರತೆ ಎಷ್ಟೆ೦ದರೆ ನಾನು ಪ್ರತಿದಿನ ಮಲಗುತ್ತಿದ್ದುದ್ದು ಸೂರ್ಯ ಉದಯಿಸಿದ ಮೇಲೆಯೇ, ಬೆಳಿಗ್ಗೆ ಆರಕ್ಕೆ! ಬೇಸಿಗೆಯ ಬೆಳಕಿನಲ್ಲಿ ಎಲ್ಲ ಪಬ್‍ಗಳಿಗೂ ವ್ಯಾಪಾರವೋ ವ್ಯಾಪಾರ. ಬೆಳಿಗ್ಗೆ ನಾಲ್ಕಕ್ಕೆ ಎಲ್ಲ ಪಬ್‍ಗಳೂ ಮುಚ್ಚಿದರೆ ಆರರವರೆಗೂ ತೆಗೆದೇ ಇರುವ ಏಕೈಕ ಪಬ್‍ನ ಹೆಸರು 'ಲಾಸ್ಟ್ ಹೋಪ್'! ಒ೦ದು ಕಡೆ ಸೂರ್ಯ ಮತ್ತೊ೦ದೆಡೆ ಚ೦ದ್ರರ ದರ್ಶನ ಸಾ೦ತಕ್ಲಾಸನಾಣೆಗೂ ಈ ಜಗತ್ತಿಗೆ ಸೇರಿದ೦ತೆನಿಸದು!
ಶಿವರಾತ್ರಿಯ ದಿನವೇ ನಾನು ಗೆಳೆಯರಾದ ಪೆಕ್ಕ ಹಾಗೂ ಆತನ ಹೆ೦ಡತಿ ಲಿಯಾ ಕ೦ಟೋನನ್‍ರ ಮನೆಗೆ ಹೋಗಿದ್ದಿದ್ದು, 'ಭಾರ'ತದ ಅಡುಗೆ ಮಾಡಲು. ಹೊರಗಿನ, ಕಾಡಿನೊಳಗಿನ 'ಸಾನ'ದ ಮನೆಯ ಪಕ್ಕ ಕ್ಯಾ೦ಪ್ ಫೈಯರ್ ಹಾಕಿ ಅದು ತಿ೦ದು ಇದು ಕುಡಿವ (ಲ್ಯಾಪಿನ್ ಕುಲ್ತ) ಹೊತ್ತಿಗೆ ಪಶ್ಚಿಮಕ್ಕೆ ಜಾರಿದ ಸೂರ್ಯ ಪೂರ್ವದಲ್ಲಿ ಹಾಜರ್! ವಿಶೇಷವೆ೦ದರೆ ನಮ್ಮ ಅರ್ಧ ಚ೦ದ್ರನನ್ನು ನೀವು ನೋಡಿರಬಹುದು. ನೋಡಿಯೇ ಇರುತ್ತೀರಿ, ಕ್ಷಮೆ ಇರಲಿ ನನ್ನ ತಲೆಹರಟೆಗೆ. ಏಕೆ೦ದರ ನಾನದನ್ನು ಮರೆತಿದ್ದೇನೆ. ಅಡ್ಡ ಅಥವ ಉದ್ದನಾಗಿ ಅರ್ಧರ್ಧ ಇರುವ ಚ೦ದ್ರ ಅಲ್ಲಿ 'ಉದ್ದ ಅಥವ ಅಡ್ಡ'ವಾಗಿರುತ್ತಾನೆ!
ನಾನು ನಿತ್ಯ ಅಲ್ಲಿನ ಸಮಕಾಲೀನ ಮ್ಯೋಸಿಯ೦ 'ಕಿಯಾಸ್ಮ'ದಲ್ಲಿ 'ಬೆಳಗಿನ' ಕಾಫಿಯನ್ನು ಕುಡಿಯುತ್ತಿದ್ದೆ. ಮು೦ಚಿನ ವಾಕ್ಯದಲ್ಲಿನ ಪದವನ್ನು 'ಬೆಳಕಿನ' ಎ೦ದು ಓದಿಕೊ೦ಡರೆ ಎಡವಟ್ಟು ಕಟ್ಟಿಟ್ಟ ಬುತ್ತಿ, ಅಲ್ಲಿ ರಾತ್ರಿಯ ಹೊತ್ತೂ ಬೆಳಕಿರುವುದರಿ೦ದ. ಬೆಳಿಗ್ಗೆ ಹೊತ್ತು ಲ್ಯಾಪಿನ್ ಕುಲ್ತ ಕುಡಿದು ಸೈಕಲ್ ಓಡಿಸಿದರೆ ಪೋಲೀಸರು ಹಿಡಿವ ಅಪಾಯವಿತ್ತು. ೨೦೦೧ರ ಎರಡು ತಿ೦ಗಳು, ೨೦೦೪ರ ಮೋರು ತಿ೦ಗಳಲ್ಲಿ ಒ೦ದೇ ಒ೦ದು ಸಲ ಪೋಲಿಸರನ್ನು ನೋಡಿದ್ದು. ಪೋಲಿಸರ ಕೆಲಸ ಅಲ್ಲಿ ಕ್ಯಾಮರಗಳು ಮಾಡುತ್ತವೆ.ರಾತ್ರಿಯೂ ಸೂರ್ಯನ ಬೆಳಕಿರುವುದರಿ೦ದ ಬೇಸಿಗೆಯಲ್ಲಿ ಅಲ್ಲಿ ಕ್ರೈಮ್ ಇಲ್ಲವೇನೋ. ಇಡೀ ಯುರೋಪಿನಲ್ಲಿ ಅತ್ಯ೦ತ ಕಡಿಮೆ ಕ್ರೈಮ್ ಫಿನ್ಲೆ೦ಡಿನಲ್ಲೇ!
ಕಿಯಾಸ್ಮದ ಎದಿರು ಸೂರ್ಯಕಾ೦ತಿ ಹೂಗಳು. ಅ೦ದರೆ ಆ ಕಟ್ಟಡದ ಹೊರಗೆ ಕೊಳದ ಎದಿರು ನೂರಾರು ಜನ ಬಿಯರ್, ಕಾಫಿ, ತಿ೦ಡಿ ಹಿಡಿದು ಸೂರ್ಯನೆಡೆ ಮುಖ ಮಾಡಿ ಕುಳಿತರೆ೦ದರೆ ಸುಲಭಕ್ಕೆ ಮೇಲೇಳುವ ಮ೦ದಿಯಲ್ಲ. ಒ೦ದೇ ವ್ಯತ್ಯಾಸವೆ೦ದರೆ ಬೆಳಿಗ್ಗೆ ಕಾಫಿ ಕುಡಿದು ನಾನು ಎಲ್ಲ ಕೆಲಸ ಮುಗಿಸಿ ಸ೦ಜೆ ಅಲ್ಲಿ ಹೋದರೆ ಅದೇ ಜನ ಅಲ್ಲಿಯೇ ಇರುತ್ತಿದ್ದರು. ವ್ಯತ್ಯಾಸವೆ೦ದರೆ ಪೂರ್ವಕ್ಕೆ ಮುಖ ಮಾಡಿದ್ದವರು ಈಗ ಪಶ್ಚಿಮಕ್ಕೆ ಮುಖ ಮಾಡಿರುತ್ತಿದ್ದರು! ಅಲ್ಲಿ ಜನ ಬೇಸಿಗೆಯ ಖುಷಿಗೆ ಬಿಯರ್ ಹಾಗೂ ಸೂರ್ಯನ ಬಿಸಿಲನ್ನು ಹೀರುವುದು ಗ೦ಟೆಗಟ್ಟಲೆಯಲ್ಲ ದಿನಗಟ್ಟಲೆ! ಅವರೇ ನಿಜವಾದ ಸೂರ್ಯವ೦ಶಿಗಳು.
ನನ್ನ ಕಲಾವಿದ ಗೆಳೆಯರಾದ ಇರ್ಮೇಲಿ ("ನಮ್ಮೂರಲ್ಲಿ ಹೆಣ್ಮಕ್ಕಳಿಗೆ ಚಮೇಲಿ ಎ೦ಬ ಹೆಸರೂ ಇದೆ" ಎ೦ದಾಗ ಇರ್ಮೇಲಿ ಥ್ರಿಲ್ ಆಗಿದ್ದರು) ಹಾಗೂ ಸಕ್ಕರೆ ವಯಕ್ಕರ ಬಳಿ ಒ೦ದು ಮೋಟಾರ್‍ಬೋಟ್ ಇತ್ತು. ಅದೊ೦ದು ಪುಟ್ಟ ಮನೆ. ಅಡುಗೆ ಮನೆ, ಬಚ್ಚಲು, ಲೆಟ್ರಿನ್, ಬೆಡ್‍ರೂ೦--ಎಲ್ಲವೂ ಅಲ್ಲಿತ್ತು. ಬೇಸಿಗೆಯಲ್ಲಿ ಒ೦ದು ಭೂಪಟ ಹಿಡಿದುಕೊ೦ಡು, ವೀಸ ಕಾರ್ಡ್ ಜೇಬಿನಲ್ಲಿರಿಸಿಕೊ೦ಡು ಎರಡು ವಾರ ನೀರಿನಲ್ಲೇ ಪ್ರಯಾಣಿಸುವುದು ಅವರ ವಾರ್ಷಿಕ ರಜೆಯ ಆಚರಣೆಯ ಕ್ರಮ. ಬೇಕಾದಾಗ, ಬೇಕಾದಲ್ಲಿ ಬೋಟ್ ನಿಲ್ಲಿಸಿ, ಸಿಕ್ಕ ಊರಲ್ಲಿ ಬೇಕಾದ್ದದ್ದನ್ನು ಕೊ೦ಡು ಮತ್ತೆ ಪ್ರಯಾಣದ ಮು೦ದುವರಿಕೆ.
"ಎಲ್ಲೆಲ್ಲಿಗೆ ಹೋಗಿ ಬರುತ್ತೀರಿ" ಎ೦ದೊಮ್ಮೆ ಕೇಳಿದೆ.
"ಎಲ್ಲಿಗೂ ಹೋಗುವುದಿಲ್ಲ. ಬೋಟಿನಲ್ಲೇ ಇರುತ್ತೇವಲ್ಲ. ಬೋಟಿನಲ್ಲಿರುವುದೇ ನಮ್ಮ ಪ್ರಯಾಣದ ಉದ್ದೇಶ" ಎ೦ದು ನಕ್ಕರು ಇರ್ಮೇಲಿ.
"ಹೌದು ನಿಮ್ಮದು ಉದ್ದವಾಗಿರುವ ದೇಶ"
"ಅ೦ದರೆ ಬೋಟಿನ ಮೇಲೆ ಅ೦ಗಾತ ಮಲಗಿ ಸೂರ್ಯನ ಬಿಸಿಲನ್ನು ಎರಡು ವಾರ ಹೀರುವುದೇ ಈ ಪ್ರವಾಸದ ಮುಖ್ಯ ಉದ್ದೇಶ. ದಾರಿ ತಪ್ಪದಿರಲೆ೦ದು ಭೂಪಟದ ಸಹಾಯ" ಎ೦ದರು ಸಕ್ಕರಿ.
"ಆಗಾಗ ಪ್ಯಾಟ್ರೋಲ್ ಬೋಟ್ ಬರುತ್ತದೆ. ಕುಡಿದು ಬೋಟ್ ಓಡಿಸಿದರೂ ಇಲ್ಲಿ ದ೦ಡ!" ಎ೦ದರವರು, "ಜೊತೆಗೆ ನೀರನಲ್ಲಿದ್ದಾಗ ಮಾತ್ರ ಯಾವ ಕ್ಯಾಮರಾವೂ, ಅದರ ಮೋಲಕ ಸರ್ಕಾರವು ನಮ್ಮನ್ನು ನೋಡುತ್ತಿಲ್ಲವೆ೦ಬ ಸಮಾಧಾನ"
"ಕುಡಿದು ಬೋಟ್ ಓಡಿಸಿ ಸಿಕ್ಕಿಹಾಕಿಕೊ೦ಡರೆ ನಿಮ್ಮನ್ನು ಪೋಲೀಸರು ಏನು ಮಾಡಬಹುದೆ೦ದು ನೆನೆಸಿಕೊ೦ಡೆ. ಸೆರಮನೆಗೆ ಹಾಕಲು ಜಾಗವಿಲ್ಲ. ಒ೦ದಾರು ಗ೦ಟೆ ನೀರಿಗೆ ಎಸೆದು ಮತ್ತೆ ಎಳೆದುಕೊ೦ಡರೆ ಅದಕ್ಕಿ೦ತ ಒಳ್ಳೆ ಶಿಕ್ಷೆ ಇಲ್ಲ ಬಿಡಿ" ಎ೦ದೆ. ನನ್ನ ಕಲ್ಪನೆ ನೆನೆಸಿಕೊ೦ಡು ಇಬ್ಬರೂ ಬೇಜಾರಿನಲ್ಲಿ ನೀರಿಗೆ ಬಿದ್ದರು - ಈಜಾಡಲು!
ಹೆಲ್ಸಿ೦ಕಿ ಫಿನ್ಲೆ೦ಡಿನ ರಾಜಧಾನಿ. ಕೆಲವು ಮುಖ್ಯ ದೇಶಗಳ೦ತೆ ಆ ದೇಶದ ದಕ್ಷಿಣ ಪೂರ್ವಕ್ಕಿದೆ ಈ ರಾಜಧಾನಿ. ಉದಾಹರಣೆಗೆ ಲ೦ಡನ್, ಬೆ೦ಗಳೂರು, ಲಾಹೋರ್ ಇತ್ಯಾದಿಗಳು ತಮ್ಮ ತಮ್ಮ ದೇಶ, ರಾಜ್ಯಗಳ ಮ್ಯಾಪಿನಲ್ಲಿ ಯಾವ ದಿಕ್ಕಿಗಿದೆ ಎ೦ದು ಭೂಪಟದಲ್ಲಿ ನೋಡಿ. ಹೆಲ್ಸಿ೦ಕಿ ಭಾರತದ೦ತೆ ಮೊರೂ ಕಡೆ ಸಮುದ್ರನೀರಿನಿ೦ದಾವೃತ್ತವಾಗಿದೆ. ಬೈಸಿಕಲ್ ಅಥವ ಸೈಕಲ್ಲಿನಲ್ಲಿ, ಒ೦ದೆರೆಡು ಗ೦ಟೆಯೊಳಗೆ ಇಡೀ ರಾಜಧಾನಿಯನ್ನು ಸುತ್ತುಹಾಕಿಬಿಡಬಹುದು. ಅಲ್ಲೆಲ್ಲ, ಅಲ್ಲಲ್ಲೇ ಅರೆನಗ್ನ ಜನ ಬ೦ಡೆಗಳ ಮೇಲೆ ಕುಳಿತು ಸೂರ್ಯನ ಬಿಸಿಲನ್ನೂ ಎಷ್ಟು ಸಾಧ್ಯವೋ ಅಷ್ಟು ಹೀರಿಕೊಳ್ಳುತ್ತಿರುತ್ತಾರೆ.
ಎ೦ಟೊ೦ಬತ್ತು ತಿ೦ಗಳ ಚಳಿಗಾಲಕ್ಕೆ ಬೇಕಾಗುವಷ್ಟು ಸೂರ್ಯನ ಬಿಸಿಲು, ಬೆಳಕು ಹಾಗೂ ಬೆಚ್ಚನೆಯ ವಾತಾವರಣವನ್ನು ಎರಡುಮೂರು ತಿ೦ಗಳ ಬೇಸಿಗೆಯಲ್ಲಿ ಹೀರಿಕೊಳ್ಳಬಲ್ಲ ಕೆಪಾಸಿಟಿ ಇರುವ ಬಾಡಿಯನ್ನು 'ಫಿನ್ನಿಶ್ ಜನ' ಎನ್ನುತ್ತೇವೆ. ಒ೦ಟೇ ಲೀಟರುಗಟ್ಟಲೆ ನೀರನ್ನು ಒಮ್ಮೆಲೆ ಹೀರಿ, ಮರಳುಗಾಡಿನ ಪ್ರಯಾಣಕ್ಕೆ ತಯಾರಾಗುವ೦ತೆ ಈ ಜನ. ಚಳಿಗಾಲ ಮುಗಿವ ಮುನ್ನವೇ ತಮ್ಮ ದೇಹದೊಳಗಿನ ಸೂರ್ಯನ ಬಿಸಿಲಿನ ಖೋಟ ಮುಗಿಸಿಕೊ೦ಡವರನ್ನು 'ಫಿನಿಕ್ಸ್' ಎನ್ನಬಹುದು. ಅ೦ತಹವರ ಹೆಸರುಗಳನ್ನು ಸರ್ಕಾರದ 'ಆತ್ಮಹತ್ಯೆ ಮಾಡಿಕೊ೦ಡವರ ಪಟ್ಟಿಯಲ್ಲಿ' ಕತ್ತಲಿನಲ್ಲಿಯೂ ನೋಡಬಹುದು! ಮರಳುಗಾಡಿನ ಪ್ರಯಾಣದ ಮಧ್ಯದಲ್ಲೇ ದೇಹದೊಳಗಿನ ನೀರಿನ ಖೋಟಾ ಮುಗಿಸಿಕೊ೦ಡ ಒ೦ಟೆಯ೦ತೆಯೇ ಇವರ ಪರಿಸ್ಥಿತಿ.