ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ದಿ ಬೆಸ್ಟ್ ಆಫ್ 'ಸಂಪದ' › ಪ್ರವಾಸ ಕಥನ › ಫಿನ್ಲೆಂಡ್ ಪ್ರವಾಸ ಕಥನ

'ಸಾನ' ಮಾಡಿದರೆ ಫಿನ್ನಿಶ್

August 2, 2006 - 10:24pm — anilkumar

ಫಿನ್ನಿಶ್ 'ಸಾನ'ವನ್ನು ಅಲ್ಲಿಗೆ ಹೋಗುವ ಭಾರತೀಯರು ಮಾಡುವುದಿಲ್ಲ. ಮಾಡದಿದ್ದರೆ ನೋಡಲು ಸಿಗುವುದೂ ಇಲ್ಲ. ಬಚ್ಚಲ ಮನೆಯಲ್ಲಿ ದೊಡ್ಡ ಹಗೇವು ಅಥವ ಉದ್ದನೆಯ ಹಂಡೆ ಇರುತ್ತದೆ. ಅದರೊಳಗೆ ಕಲ್ಲು ಗುಂಡುಗಳು. ಇಡೀ ಸಾನದ ಕೋಣೆಗೆ ಹಬೆ ಉಕ್ಕುವುದು ಆ ಅಲ್ಲಾದೀನನ ಮ್ಯಾಜಿಕ್ ಹಂಡೆಯಿಂದ. ಹೊರಗಿನ ಚಳಿಯಿಂದಾಗಿ ಹಬೆ ಬೇಗನೆ ತಣ್ಣಗಾಗ ತೊಡಗುತ್ತದೆ. ಕೋಣೆಯ ಕಾಲು ಭಾಗ ಆಕ್ರಮಿಸಿಕೊಂಡಿರುತ್ತದೆ ಆ ಹಂಡೆ. ಅದರ ಸುತ್ತಲೂ ಮರದ ಚಜ್ಜ ಮತ್ತು ಅದನ್ನು ಹತ್ತಿ ಹೋಗಲು ನಾಲ್ಕಾರು ಮೆಟ್ಟಿಲುಗಳು. ಮರದ ಚಜ್ಜೆಯ ಮೇಲೆ ಜನ ಸುಮ್ಮನು, ದುಂಡಗೆ ಕುಳಿತುಕೊಳ್ಳಬೇಕು (ದುಂಡಗೆ ಎಂದರೆ 'ಬರ್ತ್‌ಡೆ ಡ್ರಸ್' ಎಂದರ್ಥ). ಆದ್ದರಿಂದಲೇ ಭಾರತೀಯರು ಸಾನ ಮಾಡಲು ನಿರಾಕರಿಸುವುದು.

'ಸಾನ'ದ ನಂತರ ಬೋಟ್ ರೈಡ್ಹಬೆ ಏರತೊಡಗಿದಂತೆಲ್ಲ ಸೌಟಿನಲ್ಲಿ ನೀರನ್ನು ಹಂಡೆಗೆ ಸುರಿದರಾಯಿತು. ಹಬೆ ಹೆಚ್ಚಾಗುತ್ತದೆ. ಕ್ರಮೇಣ ನಿಧಾನವಾಗುತ್ತದೆ. ಫಿನ್ನಿಶ್ ಜನ ಎಷ್ಟು ಕಡಿಮೆ ಹಬೆಯಿಂದ ಸಾನ ಆರಂಭಿಸುತ್ತಾರೋ ಪರದೇಶೀಯರು ಅಷ್ಟಕ್ಕೇ ಹೊರ ಓಡಿಹೋಗುತ್ತಾರೆ, ತಡೆಯಲಾರದೆ. ಗೋಡೆಯ ಮೇಲೊಂದು ಬಿಸಿಯನ್ನು ತೋರಿಸುವ ಗಡಿಯಾರ. ಸುಮಾರು ೧೦೦ ಡಿಗ್ರಿ ಬಿಸಿ ದಾಟಿಬಿಡುತ್ತದೆ ಒಮ್ಮೊಮ್ಮೆ. ಆದರೆ ಅದು ನಿಜವಾದ ೧೦೦ ಡಿಗ್ರಿಗೆ ಸಮನಲ್ಲ--ಒಂದು ಅಥವ ಒಂದೂವರೆ ಡಿಗ್ರಿ ಕಡಿಮೆ ಇರುತ್ತದೆ. ಮತ್ತು ಹಬೆ ತಡೆಯಲು ಬಿರ್ಚಿ ಸೊಪ್ಪನ್ನು ಮೈಗೆಲ್ಲ ಹೊಡೆದುಕೊಳ್ಳಬೇಕು, ನಮ್ಮ ಭದ್ರಕಾಳಿ ಮೈಮೇಲೆ ಬಂದವರಂತೆ. ಮತ್ತು ಬಿಯರ್ ಕುಡಿದಷ್ಟೂ ದೇಹದ ಒಳಹೊರಗಿನ ಟೆಂಪರೇಚರ್ ಮಧ್ಯೆ ಒಂದು ಸಾವಯವ ಸಂಬಂಧ ಏರ್ಪಟ್ಟುಬಿಡುತ್ತದೆ.

ಸಾನದ ಬಿಸಿ ತಡೆಯಲಾರದೆ ಹೊರಗೆ ಬಂದೆವು. "ಕೊಳ ಎಲ್ಲಿ?" ಎಂದು ಕೇಳಿದೆ. ವಿಪರೀತ ಬಿಸಿ ತಪ್ಪಿಸಿಕೊಂಡು ವಿಪರೀತ ತಣ್ಣಗಿನ (ಅಥವ ಫಿನ್ನಿಶ್ ಭಾಷೆಯಲ್ಲಿ 'ತಣ್ಣಗಿನ') ನೀರಿನಲ್ಲಿ ಮುಳುಗಬೇಕು. ಆಗ ಬಿಸಿಲಿನ ಮಹತ್ವ ಅರ್ಥವಾಗುತ್ತದೆ. ಗಡಗಡ ನಡುಗುತ್ತ ಮತ್ತೆ ಸಾನದ ಮನೆಗೆ ಓಡಬೇಕು--ದುಂಡಗೆ. ಇದೊಂದು ಕೋಳಿ-ಮೊಟ್ಟೆ ಪ್ರಶ್ನೆ. ಚಳಿಯಿಂದ ಬಿಸಿಗೋ ಅಥವ ಬಿಸಿಯಿಂದ ಚಳಿಗೋ ಎಂದು. "ಬೇರೆಯದು ಎಂದೆಂದಿಗೂ ಆಕರ್ಷಕವೇ" ಎಂದು ಬೇರೆ ಬೇರೆಯವರು ತಿಮಿರಾನದಂದಿಂದ ತುದಿಯಾನಂದದವರೆಗೆ ಹೇಳಿರುವ ಅಮೃತ ವಾಕ್ಯದಂತೆ ಇದು. 'ನ'ಒತ್ತು ತೆಗೆದ ಈ ಕ್ರಿಯೆಯಲ್ಲಿ ಪಾಲ್ಗೊಂಡಿದ್ದಾಗಲೇ ಅಂತಹ ಮಹಾತ್ಮರಿಗೆ ಈ ಜಗದ ಈ ನಿಗೂಢ ಹೊಳೆದಿರಬಹುದು. ಅಂತಯವರ ಹೊಟ್ಟೆ ತಣ್ಣಗೆ ಮಿಕ್ಕೆಲ್ಲ ಅಂಗಗಳು ಬೆಚ್ಚಗಿರಲಿ ಪ್ರಭುವೆ!

ಒಂದಿಪ್ಪತ್ತಡಿ ಅಗಲ ಆರಡಿ ಆಳದ ಒಂದು ಕೊಳ ತೋಡಿಟ್ಟಿದ್ದ ಸಾಮಿ. ಅದನ್ನೇನೂ ತಣ್ಣಗೆ ಮಾಡುವ ಅವಶ್ಯಕತೆ ಇಲ್ಲವಲ್ಲ. ಅಷ್ಟರಲ್ಲಾಗಲೇ ಬೆಳಗಿನ ಜಾವ ಒಂದೂವರೆ. ಸೂರ್ಯ ಮುಳುಗುವ ಹೊತ್ತು!! ಹೊರಗಿದ್ದಂತಹ ಬೆಳಕು ಮಾತ್ರ ನಾನು ನಿಜ ಜೀವನದಲ್ಲೇಲ್ಲೂ ನೋಡಿರಲಿಲ್ಲ. ಆ ಬೆಳಕಿನಿಂದ ನಮ್ಮ ಭಾಷೆಯ ಇತಿಮಿತಿ ಅರ್ಥವಾದಂತಾಯ್ತು. ಅದನ್ನು ವರ್ಣಿಸುವುದು ಹೇಗೆ? "ಸ್ಲೀಪಿ ಹ್ಯಾಲೋಸ್" ಸಿನೆಮದಲ್ಲಿರುವಂತಹ ಬೆಳಕದು. ಅದರಲ್ಲಿ ಒಂದೇ ಒಂದು ಪ್ರಕರ ಸೂರ್ಯನಬೆಳಕಿನ ದೃಶ್ಯವಿಲ್ಲ!

ಸಾಮಿಯ ಹೆಂಡತಿ ಮಿನ್ನ ಯೂನಿವರ್ಸಿಟಿ ಪ್ರೊಫೆಸರ್. ಆತನಿಗಿಂತ ಒಂದೈದಾರು ಪಟ್ಟು ಹೆಚ್ಚು ಸಂಬಳ. ಮದುವೆಯಾಗಿದ್ದಾರೋ ಇಲ್ಲ ಸುಮ್ಮನೆ "ಲಿವಿಂಗ್ ಟುಗೆದರ್" ವ್ಯವಸ್ಥೆಯೊ ಗೊತ್ತಿಲ್ಲ. ಆದರೆ ಎಂಟತ್ತು ವರ್ಷದಿಂದ ಸುಖವಾಗಿ ಬದುಕಿದ್ದಾರೆ. "ಇನ್ನತ್ತು ವರ್ಷಕ್ಕೆ ಆಕೆ ಜೊತೆಯಲ್ಲಿರುತ್ತಾಳೋ ಇಲ್ಲವೋ" ಎಂದಿದ್ದ ಮಾತಿನ ಮಧ್ಯೆ ಸಾಮಿ. "ಹಾಗೆ ಹೇಳಲು ಕಾರಣವೇನಾದರೂ ಇದೆಯ?" "ನಿರ್ದಿಷ್ಟ ಕಾರಣವೇನೂ ಇಲ್ಲ" ಎಂದು ಸುಮ್ಮನಾದ. ಆ ದೇಶದಲ್ಲಿ ಜೊತೆಯಲ್ಲಿ ಇರುವವರೆಗು ಮಾತ್ರ ಸಂಬಂಧಗಳು. ಹೆನ್ರಿ ಗ್ರಹನ್ ಎಂಬ ಸ್ವೀಡನ್ನಿನಲ್ಲಿ ಹುಟ್ಟಿ ಫಿನ್ಲೆಂಡಿನಲ್ಲಿದ್ದ ಕಲಾವಿದ ಗೆಳೆಯನೊಬ್ಬ ಒಮ್ಮೆ ಹೇಳಿದ್ದ, "ಏನು ಮಾಡುವುದು, ಒಬ್ಬಳೂ ಸರಿಯಾಗಿ ಜೊತೆಯಲ್ಲಿರುವುದಿಲ್ಲ. ನಾನು ಭಾರತೀಯಳನ್ನೇ ಮದುವೆಯಾಗುವುದು. ಭಾರತೀಯ ಹುಡುಗಿ ಎಂದಿಗೂ ತನ್ನ ಗಂಡನನ್ನು ತೊರೆಯುವುದಿಲ್ಲ", ಎಂದು ತಮಾಷೆ ಮಾಡಿದ್ದ. "ಹೌದು, ಈ ಜನ್ಮಕ್ಕೆ ಭಾರತೀಯಳು ಹಾಗೂ ನೀನು ಒಟ್ಟಿಗೆ ಅಂಟಿಕೊಳ್ಳುತ್ತೇವೆಂದು ನಿಮ್ಮ ಮದುವೆಯಲ್ಲಿ ಅರ್ಥವಾಗದ ಸಂಸ್ಕೃತದಲ್ಲಿ ಒಪ್ಪಿಕೊಂಡರೆ ಮುಂದಿನ ಇನ್ನಾರು ಜನ್ಮದಲ್ಲಿ ಅದೇ ಪಾರ್ಟ್ನರ್ ಪರಸ್ಪರ ನಿಮ್ಮಿಬ್ಬರಿಗೂ ಬಿಟ್ಟಿ", ಎಂದೆ. "ವಾಟ್ ಅ ಡಿಸ್ಕೌಂಟ್" ಎಂದು ಉದ್ಘರಿಸಿದ. ಸಾಮಿಯ ಹೆಂಡತಿಯ ತಂಗಿಯೂ ರಜಕ್ಕೆ ಬಂದಿದ್ದಳು. "ಆಕೆಗೆ ನಲ್ಕಾರು ಮಕ್ಕಳು" ಎಂದು ಪರಿಚಯಿಸಿದ್ದ ಸಾಮಿ. "ನನಗೆ ಮಕ್ಕಳೇ ಇಲ್ಲ" ಎಂದಿದ್ದಳಾಕೆ, ಮಾರನೇ ದಿನ ವಾಪಸ್ ನನ್ನನ್ನು ಸಮೀಪದ (೧೨೦ ಕಿಲೋಮೀಟರ್ ಸ್ಪೀಡಿನಲ್ಲಿ ಕೇವಲ ಒಂದು ಗಂಟೆ ಡ್ರೈವ್ ನಂತರ ಸಿಗುತ್ತಿದ್ದ ಸಮೀಪದ ಸಾವೊನ್‌ಲಿನ ಎಂಬ ರೈಲು ನಿಲ್ದಾಣಕ್ಕೆ ಡ್ರಾಪ್ ಮಾಡುತ್ತಿದ್ದಾಗ). ಅಂದರೆ ಆಕೆಯ ಈಗಿನ ಗಂಡನ ಆಗಿನ ಹೆಂಡತಿಯರಿಂದ ಇರಬಹುದಾದ ಮಕ್ಕಳನ್ನು ಸಾಕಿಕೊಂಡಿದ್ದಾಳೆಂದು ಅರ್ಥಮಾಡಿಕೊಂಡೆ).

ಸುರೇಖಳ ಫೋಟೋ ತೋರಿಸಿ, "ನನ್ನ ಹೆಂಡತಿ" ಎಂದೆ. "ಅಂದರೆ ನಿನ್ನ ಪಾಟ್ನರ್ ಅಲ್ಲವೆ?" ಎಂದಳು. "ಅಲ್ಲ ನನ್ನ ಹೆಂಡತಿ, ಮಾಜಿ ಪ್ರೇಯಸಿ" ಎಂದು ತಮಾಷೆ ಮಾಡಿದೆ. ಮದುವೆ ಎಂಬ ಸಂಸ್ಥೆ ಮುರಿದುಬಿದ್ದಿರುವ ಸಮಾಜ 'ಫಿನ್ನಿಶ್'ನದಾಗಿದೆ. ಇಲ್ಲಿನ ಜನರು ಏಕಾಂಗಿಗಳೋ, ಏಕಾಂಗಿಗಳಾಗಿ ಬದುಕುವುದನ್ನು ಕಾಡು ಕಲಿಸಿದೆಯೋ ಅಥವ ಏಕಾಂಗಿಗಳಾಗಿರುವುದರಿಂದಲೇ ಅದೊಂದು ಚಟವಾಗಿಬಿಟ್ಟಿದೆಯೋ ಒಂದೂ ತಿಳಿಯುವುದಿಲ್ಲ. ಏಕೆಂದರೆ ಮುಂಚಿನ ವಾಕ್ಯದ ಮೂರೂ ಕ್ರಿಯೆಗಳು ಅವರ ಮಟ್ಟಿಗೆ ಐತಿಹಾಸಿಕವಾಗಿ ಸತ್ಯವಾದ ವಿಚಾರ. ಕೇವಲ ನೂರು ವರ್ಷದ ಹಿಂದೆ ಕಾಡುಗಳಲ್ಲಿ ರೈತರಾಗಿ, ಭೇಟಿಗಾರರಾಗಿದ್ದವರಿವರು. ಸರ್ಕಾರವು ಹೆಣ್ಮಕ್ಕಳಿಗೆ ಓದಲು ವಿದ್ಯಾರ್ಥಿವೇತನ ನೀಡಿದ ಕೂಡಲೆ ಕಾಡಿನ ಹೆಣ್ಮಕ್ಕಳೆಲ್ಲ ಹೊಸಿಲು ದಾಟಿದ ಹೆಣ್ಣುಗಳಾಗಿ ಹೋದರು ನಗರಕ್ಕೆ. ಜನರೇ ಇಲ್ಲದ ನಾಡಾದ ಫಿನ್ಲೆಂಡಿನ ಕಾಡುಗಳಲ್ಲಿ ಇದ್ದ ಹೆಣ್ಮಕ್ಕಳೂ ಇಲ್ಲದಾದಾಗ ಶೇಕಡ ಅರವತ್ತು ಮಂದಿ ಮಾಯವಾದಂತಾಯ್ತು (ಅಲ್ಲಿ ಹೆಂಗಸರದ್ದೆ ಇಂದಿಗೂ ಕಾರುಬಾರು ಮತ್ತು ಕಾರು ಮತ್ತು ಬಾರು ಹೆಚ್ಚು). ಇಡಿಯ ಹಳ್ಳಿಯ ರೈತಾಪಿ ಜನಜೀವನ ಕುಸಿದು ಬಿದ್ದದ್ದು ಹೀಗೆ. ಅದಕ್ಕೇ ಕನ್ನಡದಲ್ಲಿ ಹೇಳುವುದು, "ಹೆಂಗಸು ಹೊಸಿಲು ದಾಟಬಾರದೆಂದು". ಇಂತಹ ಕ್ರಿಯೆಯ ಫಲ ಅದೆಷ್ಟು ಸಮೃದ್ಧ!!

ಈ ಪ್ರವಾಸ ಕಥನದ ಇತರ ಭಾಗಗಳು

1. ಸಾವಿನ ಚೇತೋಹಾರಿ ಆರಂಭ 2. ಮೊಬೈಲ್ ಮೌನಿಗಳು
3. ಏಕಾಂಗಿತನದ ವಿರಾಟ್ ರೂಪ 4. ಸಾಮಿ ಎಂಬ ಕಂಪೆನಿಕೊಡುವ ವಾನ್ ಇಂಜನ್
5. 'ಸಾನ' ಮಾಡಿದರೆ ಫಿನ್ನಿಶ್ 6. ಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ
7. ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ 8. ಇಲ್ಲದೆಯೂ ಇರುವವನ ಕಥೆ
9. ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ! 10.ಎಲ್ಲೆಲ್ಲಿಯೂ ಎದುರು ಸಿಗುವವರು
11.ಏಳೇಳು ಸುತ್ತಿನ ಕೋಟೆಯೊಳಗಿನ ರಾಜಕುಮಾರಿ

 

‹ ಸಾಮಿ ಎಂಬ ಕಂಪನಿ ಕೊಡುವ ವಾನ್ ಇಂಜನ್ಮೇಲಿನ ಪುಟಕ್ಕೆಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ ›
  • ಫಿನ್ಲೆಂಡ್ ಪ್ರವಾಸ ಕಥನ
~.~
  • Printer-friendly version
  • Login or register to post comments
  • 1866 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 10, 2006 - 10:11am — ರಾಮಕುಮಾರ್

ಅಜ್ಜಯ್ಯನ ಅಭ್ಯಂಜನ

ರಾಮಕುಮಾರ್'s picture

ಹಬೆ ಸ್ನಾನದ ವರ್ಣನೆ ಓದಿ ಕುವೆಂಪುರವರ "ಮಲೆನಾಡಿನ ಚಿತ್ರಗಳು" ಸಂಕಲನದಲ್ಲಿರುವ "ಅಜ್ಜಯ್ಯನ ಅಭ್ಯಂಜನ" ಪ್ರಬಂಧ ನೆನಪಾಯ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 15, 2006 - 6:55pm — anilkumar

'ಸಾನ'ದ ಹಲವು (ನಗ್ನ ದೇಹ ಮತ್ತು) ಮುಖಗಳು!!

anilkumar's picture

ರಾಮ್‍ಕುಮಾರರ ಪ್ರತಿಕ್ರಿಯೆಗೆ ಧನ್ಯವಾದಗಳು,

"ಅಜ್ಜಯ್ಯನ ಅಭ್ಯ೦ಜನ"ದ ಹಬೆ ಈಗಲೂ ಗಾಭರಿಹುಟ್ಟಿಸುವ೦ತಹದ್ದು. ಆದರೆ ಸಾನ ಹಾಗೂ ಸ್ನಾನದ ನಡುವಣ ವ್ಯತ್ಯಾಸ ಕೇವಲ "ನ"ಒತ್ತು ಇರಲಾರದು. "ಸಾನ"ಕ್ಕೆ ಸಾವು ಮತ್ತು ಕಾಮದ ವಾಸನೆ ಇದ್ದೇ ಇದೆ--ಹೊರಗಿನವರ ಪ್ರಕಾರ. ಅಲ್ಲಿನವರಿಗೆ ಬೆತ್ತಲಾಗುವುದು ಬಹಳ ಸುಲಭ. ನಗ್ನತೆಗೂ ಬೆತ್ತಲೆಗೂ ಇರುವ ಸ೦ಬ೦ಧವಿದು.

ಫಿನ್ಲೆ೦ಡಿನಲ್ಲಿ ಮೊದಲು ಸಾನದ ಮನೆ ಕಟ್ಟುತ್ತಾರೆ. ನ೦ತರ ಉಳಿದದ್ದನ್ನು ಅದಕ್ಕೆ ಸೂಕ್ತವಾಗುವ೦ತೆ ನಿರ್ಮಿಸುತ್ತಾರೆ. ಕೆಲವೊಮ್ಮೆ ಸಾನದರಮನೆ ನಮ್ಮ ಹೆಣಸುಡುವ ಹರಿಶ್ಚ೦ದ್ರ ಘಾಟ್‍ನ ಗಾಢ ಮೌನವೂ ಕ೦ಡುಬರುತ್ತದೆ. ಮಕ್ಕಳಿಗೆ ಜನ್ಮ ನೀಡಲು ಸಾನದ ಮನೆ ಸೂಕ್ತ ಎ೦ದು ಅಲ್ಲಿನ ವೈದ್ಯರ ಅಭಿಪ್ರಾಯ. ವೈದ್ಯರು ಸಾನಮಾಡುವಾಗ ಹುಟ್ಟಿಕೊ೦ಡ ಅಭಿಪ್ರಾಯವಿರಬೇಕಿದು.

ಸ೦ಸಾರವೊ೦ದು ಸಾನ ಮಾಡುವ ಕ್ರಮಕ್ಕೂ, ನಗರದಲ್ಲಿ ಸಾನವನ್ನು ಸ್ವಿಮ್ಮಿ೦ಗ್‍ಪೂಲ್‍ನ೦ತೆ ಅಪರಿಚಿತರೆಲ್ಲ ಸೇರಿ ಮಾಡುವುದಕ್ಕೂ, ಪಾರ್ಟಿಗಳಲ್ಲಿ ಸ್ನೇಹಿತರು ಸಾನಮಾಡುವುದಕ್ಕೂ ವ್ಯತ್ಯಾಸವಿದೆ. ಸ೦ಸಾರದ ಸಾನ ಆತ್ಮೀಯ. ಅಪ್ಪ, ಅಮ್ಮ, ಮಕ್ಕಳು ಒಟ್ಟುಗೂಡಿದರೆ ಅದು ಫ್ಯಾಮಿಲಿ ಪ್ಯಾಕೇಜ್. ಮಕ್ಕಳ ಸ್ನೇಹಿತರು ಒಬ್ಬರೋ ಇಬ್ಬರೋ ಬ೦ದರೆ ಅಪ್ಪ೦ಮ್ಮ೦ದಿರಿಗೆ ಓಕೆ. ಹಾಗೆ ಒಟ್ಟಾಗಿ ಫ್ಯಾಮಿಲಿ ಸಾನ ಮಾಡುವುದು ಬರಿಯ ಹಳ್ಳಿಗಮಾರರು. ನಗರದ ಮಕ್ಕಳಾದರೆ ಅಪ್ಪಮ್ಮ೦ದಿರು ಔಟ್. ಅದು ಬರಿಯ ಕಳ್-ನನ್ಮಕ್ಕಳ ಪಾರ್ಟಿಯಾದೀತು. ಯುವಪ್ರೇಮಿಗಳು ನಗರದಿ೦ದ ಬ೦ದರೆ ಮುಗಿಯಿತು. ಶುಕ್ರವಾರ ಮಧ್ಯಾಹ್ನ ಒ೦ದು ನಾಲ್ಕು ಕ್ರೇಟ್ ಲ್ಯಾಪಿನ್ ಕುಲ್ತ ಬಿಯರ್‍ನೊ೦ದಿಗೆ ಸಾನದ ಕೋಣೆ ಹೊಕ್ಕರಾಯಿತು. ಮಧ್ಯೆ ಮಧ್ಯೆ ಮಧ್ಯೆ (ಮದ್ಯ ಜಾಸ್ತಿಯಾಗಿ, ಅದರಿ೦ದ ಆಗುವ ಸೈಡ್, ಸೆ೦ಟರ್ ಹಾಗೂ ಬಾಟಮ್-ಎಫೆಕ್ತ್ ಹೆಚ್ಚಾಗುವುದರಿ೦ದ) ಆಗಾಗ ಒ೦ದು, ಎರಡು, ಇವೆರಡೂ ಕಾರಣಗಳಿಗೆ ಹೊರಬರುತ್ತಾರೆ ಆಗಾಗೆ. ಫೈನಲ್‍ಆಗಿ ಅವರಿಬ್ಬರೂ ಹೊರಬರುವುದು ಸೋಮವಾರ ಬೆಳಿಗ್ಗೆಯೇ. ಆದ್ದರಿ೦ದ ಸಾನವೆ೦ದರೆ ಅದು ಸ್ನಾನವೂ ಹೌದು, ಪಲ್ಲ೦ಗ ಕೋಣೆಯೂ ಹೌದು, ವ್ಯಾಪಾರದ ಆಫೀಸ್ ರೂಮೂ ಹೌದು, ವಿಚ್ಛೇದನೆಯ ಕೋಣೆ ಮಾತ್ರವಲ್ಲ!

"ಅಪರಿಚಿತರು ಹಾಗೂ ಸ್ನೇಹಿತರು ಬ೦ದರೆ ಮೊದಲು ಸಾನದ ಮನೆಗೆ ಹೆ೦ಗಸರು ಹೋಗುತ್ತಾರಾ ಅಥವ ಗ೦ಡಸರ?" ಎ೦ದು ಕೇಳಿದೆ ಗೆಳೆಯ ಸೆಪ್ಪೋ ರೆನ್ವಲ್‍ನನ್ನು. ಆತ ಜಗತ್ತಿನಲ್ಲಿ ಫಿನ್ನಿಶ್ ಒ೦ದೇ ಭಾಷೆ ಎ೦ದು ನ೦ಬಿರುವಾತ. ಆದರೂ ನಮ್ಮಿಬ್ಬರಲ್ಲಿ ಸ೦ಪರ್ಕ ಸಾಧ್ಯವಿತ್ತು.

"ಮೊದಲು ಹೆ೦ಗಸರು. ನ೦ತರ ಗ೦ಡಸರು. ಕುಡಿತ ಹಾಗೂ ಬಿಸಿ ಹೆಚ್ಚಾದ೦ತೆ ಎಲ್ಲರೂ ಒಟ್ಟಾಗಿ ಹೋಗುತ್ತಾರೆ" ಎ೦ದು ನಗಾಡಿದ.

ಯಾರಾದರೂ ನಿಮ್ಮನ್ನು ಫ್ಯಾಮಿಲಿಸಾನಕ್ಕೆ ಅಹ್ವಾನಿಸಿದರೆ ನಿಮ್ಮನ್ನು ಅವರು ಪೂರ್ಣವಾಗಿ ನ೦ಬಿದ್ದಾರೆ ಎ೦ದೇ ಅರ್ಥ. ಪೆಕ್ಕ ಕ೦ಟೋನೆನ್ ಮನೆಯಲ್ಲಿದ್ದಾಗ ಅಲ್ಲಿ ಸಾನ ಮಾಡಿದೆ. 'ಭಾರ'ತದ ಅಡುಗೆಯನ್ನು ಅವರಿಗೆ ಮಾಡಿಕೊಟ್ಟದ್ದಕ್ಕೆ ಸಾನ ಗಿಫ್ಟ್ ಇರಬೇಕೆ೦ದು ಭಾವಿಸಿದೆ. ಪೆಕ್ಕ, ಆತನ ಹೆ೦ಡತಿ ಲಿಯಾ, ಇಬ್ಬರು ಗ೦ಡು ಮಕ್ಕಳು, ಕೊನೆಯ ಪುಟಾಣಿ ಮಗಳು ಎ೦ಬ ಪುಟಾಣಿ ಸ೦ಸಾರವದು. "ಬಡತನದ ಹಿ೦ಸೆ ತಾಳಲಾರದೆ ಹೆಲ್ಸಿ೦ಕಿ ಬಿಟ್ಟು ಇಲ್ಲಿ ಬ೦ದು ಸೇರಿಕೊ೦ಡೆವು" ಎ೦ದು ಲಿಯಾ ತಿಳಿಸಿದ್ದಳು.

ಅವರ ಶಿವರಾತ್ರಿಯ ದಿನ. ರಾತ್ರಿ ಸೂರ್ಯ ಹಾಗೆ ಮುಳುಗಿ ಹೀಗೆ ಏಳುವ ದಿನ, ಜೂನ್ ಕೊನೆಯ ವಾರ. ಪೆಕ್ಕ, ಆತನ ಮಕ್ಕಳು, ಮಕ್ಕಳ ಒಬ್ಬ ಗೆಳೆಯ--ಎಲ್ಲರೂ ಸಾನದ ಮನೆಯಲ್ಲಿದ್ದರು. ನಾನು ಒಳಗೋಗಲು ತಯಾರಾಗಿ ಹೊರಗೆ ನಿ೦ತು ಹದಿನೈದು ನಿಮಿಷವಾಗಿತ್ತು. ನಮ್ಮ ಒಳ‍ಉಡುಪು ಮಿಕ್ಕೆಲ್ಲಕ್ಕಿ೦ತಲೂ ಭಾರವಾದುದು ಎ೦ದು ತಿಳಿದದ್ದು ಅ೦ದೇ. ಅ೦ದರ್-ವೇರ್ ಹಾಕಿಕೊ೦ಡು, ಮಿಕ್ಕೆಲ್ಲವನ್ನೂ ಕಳಚಿ ಸಾನದ ಮನೆಗೆ ಹೋಗಿ ಕೂಡಲೇ ಹೊರಗೋಡಿ ಬ೦ದೆ. ಒಳಗೆ ಎಲ್ಲರೂ ಗೊಮ್ಮಟೇಶ್ವರರೇ!! ಒಬ್ಬ ಅಪ್ಪ ಗೊಮ್ಮಟ, ಮೂರು ಮರಿ ಗೊಮ್ಮಟಗಳು! ಅದಕ್ಕೇ ಭಾರತೀಯರ್ಯಾರೂ ಸಾನ ಮಾಡರು. ನಾನು ಒಳ ಹೋದ ಕೂಡಲೇ "ಶೇಮ್, ಶೇಮ್" ಎ೦ದು ತಮಾಷೆ ಮಾಡತೊಡಗಿದರು.

ಕೊನೆಗೂ ಅವರೊ೦ದಿಗೆ, ಅವರ ಶೈಲಿಯಲ್ಲೇ ಸಾನ ಮಾಡಿದೆ. ನನ್ನೊ೦ದಿಗೆ, ದಿಗ೦ಬರ ಶೈಲಿಯಲ್ಲಿ ಅವರ ಮಕ್ಕಳೆಲ್ಲ ಫೋಟೋ ತೆಗೆಸಿಕೊ೦ಡರು. ತೆಗೆದವರೂ ದಿಗ೦ಬರರಾಗೇ ತೆಗೆದರು. ಅಲ್ಲಿ ಎಲ್ಲವೂ ತೆಗೆವ ಕ್ರಿಯೆಯೇ ಆಗಿಹೋಗಿತ್ತು! ನ೦ತರ ಆ ಮಕ್ಕಳ ಶಾಲೆಯಲ್ಲಿ ನಾನು ಬಹಳ ಫೇಮಸ್ ಆಗಿಬಿಟ್ಟೆನ೦ತೆ. "ನಾವು ಆಲೀಬಾಬಾನ ಜೊತೆ ನಮ್ಮ ಶಿವರಾತ್ರಿ ಕಳೆದೆವು" ಎ೦ದು ನನ್ನ ನಗ್ನ ಫೋಟೋ ತೋರಿಸಿ, ತೋರಿಸಿ ಖುಶಿಪಟ್ಟರ೦ತೆ.

ಸಾನದ ಮನೆಯ ಆರ೦ಭಿಕ ಸ೦ಕೋಚದ ನ೦ತರ ನಮ್ಮ ಚರ್ಮವೇ ಒ೦ದು ಡ್ರೆಸ್ ಆಗಿಹೋಗಿತ್ತು. ಮಿಯಾಮಿ ಬೀಚಿನಲ್ಲೂ ಹಾಗೆಯೇ ಎ೦ದು ಕೇಳಿದ್ದೆ. ಮೈಮೇಲೆ ಒ೦ದು ಚೂರು ಬಟ್ಟೆ ಹಾಕಿಕೊ೦ಡು ಹೋದರೂ, ಮೈಮೇಲೆ ಬಾಸು೦ಡೆ ಏಳುವ೦ತೆ ಹೊಡೆದು ಓಡಿಸುತ್ತಾರ೦ತೆ. ಅದು ಇದು ಮಾತನಾಡಿತ್ತಿರುವಾಗ, ಲಿಯಾ ಬಿಯರ್ ಹಿಡಿದು ಸೀದ ಒಳಗೆ ಬ೦ದೇ ಬಿಟ್ಟಳು ಪುಟಾಣಿ ಮಗಳೊ೦ದಿಗೆ. ಮೆಟ್ಟಿಲು ಹತ್ತಿ, ನನ್ನನ್ನು ದಾಟಿಕೊ೦ಡು, ಸೀದ ಗ೦ಡನ ಪಕ್ಕ ಸರಾಗವಾಗಿ ಕುಳಿತುಕೊ೦ಡುಬಿಟ್ಟಳು! ಆಕೆಯನ್ನು ಈಗ ನೆನೆಸಿಕೊ೦ಡರೆ ಯಾವಾಗಲೂ ಮಗಳನ್ನು ತೊಡೆಯ ಮೇಲಿರಿಸಿಕೊ೦ಡು, ಸದಾ ಸ್ವೆಟರ್ ಹಣಿಯುತ್ತ, ಬುಡಕಟ್ಟಿನ ಸಾಮಿ ಜನರ ಲಾಲಿ ಹಾಡು ಗುನುಗುವ ಲಿಯಾಳೇ ನೆನಪಾಗುವುದು. ಆಶ್ಚರ್ಯವೆ೦ದರೆ ಅದೆಷ್ಟು ಸಹಜವಾಗಿದ್ದೆವೆ೦ದರೆ, ನಾವೊ೦ದು ಟೈಮ್ ಮಷಿನಿನಲ್ಲಿ ಗುಹಾಮಾನವರ ಕಾಲಕ್ಕೆ ಹೋದ೦ತಿತ್ತು. ಸಹಜವಾಗಿ ಲಿಯಾ ನನ್ನೊ೦ದಿಗೆ ಮಾತನಾಡುತ್ತಿದ್ದರೆ ನನಗೆ ಹತ್ತುವರ್ಷದ ಹಿ೦ದಿನ ಆಕೆಯ ಕಲಾಕೃತಿಯೊ೦ದರದ್ದೇ ನೆನಪು. ಕಿಯಾಸ್ಮ ಎ೦ಬ ಹೆಲ್ಸಿ೦ಕಿಯ ಸಮಕಾಲೀನ ಮ್ಯೋಸಿಯ೦‍ನ ಎದಿರು ಲಿಯಾ ಕ೦ಟೋನೆನ್‍ಳದ್ದು ಒ೦ದು ಕಲಾಕೃತಿ ನಿರ್ಮಾಣ. ಅಲ್ಲಿ ಓಡಾಡುವವರನ್ನೆಲ್ಲ ತನ್ನ ಕಲಾಕೃತಿಯ ಭಾಗವಾಗಲು ಈಕೆಯಿ೦ದ ಆಹ್ವಾನ. ಅದು ಹೇಗೆ ಎ೦ದರೆ ಈಕೆ ಅವರನ್ನು ಮುತ್ತಿಡುವುದು, ಪರಸ್ಪರರ ಎ೦ಜಿಲನ್ನು ಬದಲಿಸಿಕೊಳ್ಳುವುದು. ತನ್ಮೂಲಕ ಒ೦ದು 'ಗಳಸ್ಯ-ಕ೦ಟಸ್ಯ' ಎ೦ಬ ಸ೦ಬ೦ಧ ಸ್ಠಾಪಿಸಿಕೊಳ್ಳುವುದು.

"ಈಗ ಅದನ್ನು ಮಾಡುವ ಅವಕಾಶವಾದಲ್ಲಿ ಹಾಗೆ ಮಾಡಲಾರೆ. ನಾವು ನಡೆದುಕೊಳ್ಳುವ ರೀತಿಯೇ ವಯಸ್ಸಾದ೦ತೆ ಹೇಗೆ ಬದಲಾಗುತ್ತದೆ ನೋಡು" ಎ೦ದು ವಿವರಿಸುತ್ತಿದ್ದಳಾಕೆ ಸಾನದ ಮನೆಯಲ್ಲಿ. ನನಗೋ ನಾವಿಬ್ಬರೂ ಯಾವುದೋ ಕಲಾಕೃತಿಯ ಎದಿರು, ಮ್ಯೂಸಿಯ೦ ಒ೦ದರಲ್ಲಿ ಒ೦ದು ಪ್ರೇಕ್ಷಕವರ್ಗದೆದಿರು ಚರ್ಚೆ ಮಾಡುತ್ತಿದ್ದ೦ತಿತ್ತು. ನಗ್ನತೆ ಬಟ್ಟೆಯಾಗಿ ಅದೆಷ್ಟೋ ಹೊತ್ತಾಗಿ ಹೋಗಿತ್ತು.

ನಗ್ನವಾಗುವುದು ಅದೆ೦ತಹ ಮಾನಸಿಕ ಸ್ಠಿತ್ಯ೦ತರ. ತಿ೦ಗಳಿಗೊಮ್ಮೆ ಸ್ನಾನ ಮಾಡುವವರಿಗೆ ಅದೆ೦ತಹ 'ಮಾಸಿಕ' ಸ್ಠಿತ್ಯ೦ತರ!

ಸಾನ ಮಾಡುವಾಗ ದೇಹದೊಳಗಿನ ಅ೦ಗಗಳನ್ನೆಲ್ಲ ಒಮ್ಮೆಲೆ ಒಗೆದು, ನುಲಿದು, ಸೂಪರ್‍ರಿನ್‍ನಿ೦ದ ಮಸಾಜ್ ಮಾಡಿ--ದೇಹದ ಮೇಲೇರುವ ಬಟ್ಟೆಗೆ ಸ್ನಾನ ಮಾಡಿಸುವಾಗ ಏನೇನಾಗುತ್ತದೋ ಅದೆಲ್ಲ ಆಗಿಹೋಗುತ್ತದೆ. ೧೯೫೦ರಲ್ಲಿ ಹೆಲ್ಸಿ೦ಕಿಯಲ್ಲಿ ಒಲ೦ಪಿಕ್ಸ್ ನಡೆದಾಗ ಕಟ್ಟಲಾದ ಸ್ಟೇಡಿಯ೦‍ನ ವಿಐಪಿ ಸ್ಟಾ೦ಡ್ ಎ೦ದರೆ ಅದೊ೦ದು ಸಾನದ ಮನೆಯೇ. ಒನ್‍ವೇ ಗ್ಲಾಸ್! ಪರಸ್ಪರ ನಗ್ನರಾಗಿ ಆಟವಾಡುತ್ತ ವಿಐಪಿಗಳು ಹೊರಗಿನ ನಿಜ ಆಟ ನೋಡಬಹುದು. ಹೊರಗಿನವರು ಒಳಗೇನಾಗುತ್ತಿದೆ ಎ೦ದು ಕ್ಯಾಮರ ಇಲ್ಲದೆ ಕಲ್ಪಿಸಿಕೊಳ್ಳಬಹುದು. ಅದಕ್ಕೆ ಆ ಸ್ಟೇಡಿಯ೦ನಲ್ಲಿ ಭಾರತದ ಕ್ರಿಕೆಟ್ ಟೀಮಿಗೆ ಪ್ರವೇಶವಿಲ್ಲ. ನಮ್ಮ ಧೋನಿ ಬ್ಯಾಟ್‍ನಿ೦ದ ಚೆ೦ಡು ಕನೆಕ್ಟ್ ಆಗಿ, ಅದು ಆ ಗಾಜಿಗೆ ಬಡಿದು, ಅದು ಒಡೆದು ವಿಐಪಿ ಸ್ಟಾ೦ಡಿನೊಳಗಿನ ಅ೦ತರ೦ಗ ಬಹಿರ೦ಗವಾಗಿ...ಛೆ ಛೆ.

ನಗ್ನವಾಗುವುದು ಮನಸ್ಸಿನ ಅದೆ೦ತಹ 'ಬಟ್ಟೆ-ಒಗೆತ'!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 15, 2006 - 10:44am — benaka

'ಹಬೆ ಸ್ನಾನ'

benaka's picture

ಅನಿಲರೆ,
ನಾನೂ ಜಪಾನಿನಲ್ಲಿ ನೀವು ಹೇಳಿದ ಸಾನದ 'ಹಬೆ ಸ್ನಾನ' ಮಾಡಿದ್ದೇನೆ; ಇಲ್ಲಿಯೂ ಎಲ್ಲ ಗೊಮ್ಮಟರೇ! ಆದರೆ ಕೆಲವರು ಬೆವರೊರೆಸಿಕೊಳ್ಳಲು ಕೊಡುವ ಚಿಕ್ಕ ಬಟ್ಟೆಯನ್ನು ಅಡ್ಡಹಿಡಿದು 'ಮಾನ' ಕಾಪಾಡಿಕೊಳ್ಳುತ್ತಾರೆ. ಹಬೆ ತಾಳಲಾರದಾಗ ಎಲ್ಲ ಕಿತ್ತೆಸೆದು ಹೊರಗೋಡಿಬಂದು ನಿಟ್ಟುಸಿರು ಬಿಡುತ್ತಾರೆ! ಜಪಾನೀ ಸ್ನಾನದ ಬಗ್ಗೆ ಮತ್ತೊಮ್ಮೆ ಬ್ಲಾಗುತ್ತೇನೆ.
ಇಲ್ಲಿನ ದೂರದರ್ಶನದ ನೈತಿಕತೆಯ ಅಧಃಪತನ ಹೇಗಿದೆಯೆಂದರೆ, 'ಫಾದರ್ಸ್ ಡೇ' 'ಅಪ್ಪನ ದಿನ'ದ ವಿಶೇಷ ಕಾರ್ಯಕ್ರಮ ಏನೆಂದರೆ ಅಪ್ಪನನ್ನು ಮಗಳೊಬ್ಬಳು ಎಷ್ಟು ಪ್ರೀತಿಸುವಳೆಂದು ತೋರಿಸುವುದಕ್ಕೋಸ್ಕರ, ತಂದೆ(೫೦)-ಮಗಳು(೧೯) ಒಟ್ಟಿಗೆ ಬಿಸಿನೀರಿನ ತೊಟ್ಟಿಯಲ್ಲಿ ಮೀಯುವ ದೃಶ್ಯದ ಪ್ರಸಾರ! ಅವರು ಏನೂ ಬಟ್ಟೆ ಹಾಕಿರಲಿಲ್ಲವೆಂದು ಬೇರೆ ಹೇಳಬೇಕಿಲ್ಲ ಅಲ್ಲವೇ? ಇದು ಪಿತೃಭಕ್ತಿ!
ತುಮಕೂರಿನ ಗೆಳೆಯರೊಬ್ಬರೆಂದರು: ನಮ್ಮಲ್ಲಿ ಫಾದರ್ಸ್ ಡೇ ಎಂದರೆ ಪಿತೃದಿನ ಅರ್ಥಾತ್ ಅಪ್ಪನ ತಿಥಿ!

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 15, 2006 - 10:10pm — hpn

ಜಪಾನಿನ ಟಿ ವಿ

hpn's picture

benaka wrote:
ಇಲ್ಲಿನ ದೂರದರ್ಶನದ ನೈತಿಕತೆಯ ಅಧಃಪತನ ಹೇಗಿದೆಯೆಂದರೆ,

ಅಯ್ಯೋ, ಜಪಾನಿನ ಟಿ ವಿ ಶೋಗಳ ಬಗ್ಗೆ ತುಂಬಾ ಕೇಳಿದ್ದೇವೆ ಸ್ವಾಮಿ. game show ಒಂದರಲ್ಲಿ ನಗ್ನ ಹುಡುಗಿಯರಿಗೆ ಸೋಪು ಬಳಿದು (ಅರೆನಗ್ನವಾಗಿಸಿ) ಸ್ಟೇಜಿಗೆ ಎಳೆತಂದು participantಗಳು ನೀರಿನ ಗನ್ ಹಿಡಿದು ಹುಡುಗಿಯರು ಮತ್ತೆ ನಗ್ನರಾಗೋ ಹಾಗೆ ನೀರು ಬಿಡೋದು! - ಗೂಗಲ್ ವೀಡಿಯೋನಲ್ಲಿ ಒಮ್ಮೆ ಇದರ ವೀಡಿಯೋ ಇತ್ತು. ಅದನ್ನ ನೋಡಿ ನಗು ಬಂತು... ಸಂಸ್ಕೃತಿ ಹೀಗೂ ಇರುಬಹುದೆಂದು ತಿಳಿದು ಆಶ್ಚರ್ಯವಾಯ್ತು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 17, 2006 - 11:18pm — ರಘುನಂದನ

ನೈತಿಕತೆ?? ಟಿ.ವಿ.ಯಲ್ಲಿ???

ರಘುನಂದನ's picture

ಬೆನಕರೇ... (ಅ)ನೈತಿಕತೆ ಎನ್ನುವುದು ಸಾರ್ವತ್ರಿಕವಲ್ಲವೇ? ಅದಕ್ಕೆ ಜಪಾನೇ ಆಗಬೇಕು ಪಾಕಿಸ್ತಾನವೇ ಆಗಬೇಕು ಎಂಬ ನಿಯಮವೆಲ್ಲಿ? ಜಪಾನಿನಲ್ಲಿ ಮಾಡಿದಂತೆ ಅಪ್ಪ ಮಗಳು ಒಟ್ಟಾರೆಯಾಗಿ ಬೆತ್ತಲೆ ಸ್ನಾನ ಮಾಡುವುದನ್ನು ತೋರಿಸದಿದ್ದರೂ, ನೈತಿಕವಾಗಿ ಭ್ರಷ್ಟರಾಗಲು ಎಷ್ಟು ಬೇಕೋ ಅಷ್ಟನ್ನು ಭಾರತದಲ್ಲಿರುವ ಚಾನೆಲ್ಲುಗಳೇ ತೋರಿಸುತ್ತಿವೆಯಲ್ಲ! ನನ್ನ ಅಭಿಪ್ರಾಯದ ಪ್ರಕಾರ; ಸ್ಟಾರ್ ಟಿ.ವಿ ಯಾವತ್ತು ಭಾರತಕ್ಕೆ ಕಾಲಿಟ್ಟಿತೋ ಭಾರತೀಯ ಸಂಸ್ಕೃತಿಗೆ ಇಷ್ಟಿಷ್ಟೇ, ಇಷ್ಟಿಷ್ಟೇ ಹೊಡೆತ ಬೀಳಲಾರಂಭಿಸಿದ್ದು ಈಗ ಮೇಲೇಳದಂತೆ ಆಗಿದೆ. (ಸೋನಿ ಟೀವಿಯ ಬೂಗಿ ವೂಗಿ, ಎಂ.ಟಿವಿಯ ಅಪರಾ ತಪರಾ ಕಾರ್ಯಕ್ರಮಗಳು, ಎಫ್ ಟಿ.ವಿ ಮಾಡಿಸುವ ಸರ್ವಾಂಗ ದರ್ಶನ ಇವುಗಳಿಗೆ ಉದಾಹರಣೆಯಾಗಬಲ್ಲವು) ಇದ್ದುದರಲ್ಲೇ ಸ್ವಲ್ಪ ಡೀಸೆಂಟಾಗಿದ್ದ ಸರ್ಕಾರೀ ಸ್ವಾಮ್ಯದ ದೂರದರ್ಶನವೂ ಈ ರೀತಿಯ ಕಾರ್ಯಕ್ರಮಗಳಿಗೆ ಹೆಚ್ಚು ಸಮಯವನ್ನು ಕೊಡುತ್ತಿದೆ. ಅತ್ತೆ ಸೊಸೆಯರ ಬಾಂಧವ್ಯವವನ್ನು ಹದಗೆಡಿಸುವ, ಮನೆ ಮುರುಕುತನವನ್ನು ಹೇಳಿಕೊಡುವ ಸೀರಿಯಲ್ಲುಗಳನ್ನು ಎಲ್ಲ ಕೆಲಸಗಳನ್ನೂ ಬಿಟ್ಟು ನೋಡುತ್ತಲೇ ಕೂರುವ ನಾವು ಸಾಂಸ್ಕೃತಿಕ ಜಗತ್ತಿನ ಸಾರ್ವಭೌಮರೆಂದು ನಮಗೆ ನಾವೇ ಹೇಳಿಕೊಳ್ಳಬೇಕಷ್ಟೇ. ಸಂಸ್ಕೃತಿಯನ್ನು ರೂಪಿಸಬೇಕಾದ ಅಮ್ಮನೇ ಟೈಟ್ ಪ್ಯಾಂಟು, ಬರ್ಮುಡಾ ಹಾಕಿಕೊಂಡು ತಿರುಗಿದರೆ ಮಕ್ಕಳಾದರೂ ಇನ್ನೇನು ಮಾಡಿಯಾವು? ಅದನ್ನೇ ಸಂಸ್ಕೃತಿ ಎಂದು ಭಾವಿಸಿಕೊಂಡು ಅದಕ್ಕೆ ತಕ್ಕಂತೆ ಬೆಳೆದರೆ ನಾವು ದೂಷಿಸುವುದು ಯುವಪೀಳಿಗೆಯನ್ನು! ಇದು ವಿಪರ್ಯಾಸವಲ್ಲವೇ?

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 18, 2006 - 1:41am — anilkumar

ಭಾರತೀಯ ನೈತಿಕತೆಯ ಅಳತೆಪಟ್ಟಿ ಮತ್ತು ಪರದೇಸೀ ಮೊರ್ಖಪೆಟ್ಟಿ(ಗೆ)

anilkumar's picture

ರಘುನ೦ದನ್‍‍ರು ತಮ್ಮ ಅಭಿಪ್ರಾಯದಲ್ಲಿ ಸ್ಪಷ್ಟವಾಗಿ ಎತ್ತಿತೋರಿಸಿರುವ ಭಾರತೀಯ ಮಿಡ್ಲ್‍ಕ್ಲಾಸ್ ಆಷಾಡಭೂತಿತನ ನಿದ್ದೆಕೆಡಿಸುವ೦ತಹದ್ದು. ಬೆನಕರಿಗೆ ಆದ 'ಶಾಕ್' ಇದೇ ಭಾರತದ ಮಧ್ಯಮ ವರ್ಗದ ಹಿನ್ನೆಲೆಯಿ೦ದಲೇ ಹುಟ್ಟಿ ಬ೦ದದ್ದು. ನಾನೂ ಆ ವರ್ಗದ ಸದಸ್ಯ.

ನನ್ನ ಫಿನ್ಲೆ೦ಡ್ ಮತ್ತು ಇ೦ಗ್ಲೆ೦ಡ್ ಅನುಭವ ಹೀಗಿದೆ.

ದೃಶ್ಯ (೧):

ಸ್ಠಳ ಫಿನ್ನಿಶ್ ಮನೆಯೊ೦ದರ ಛಾನೆಲ್ಲು. ಸನ್ನಿವೇಶ: ಕಲಾವಿದ-ಕಲಾವಿದೆ ಸ್ನೇಹಿತರ ಮನೆಗೆ ಸ೦ಜೆ ಚಹ. ಟಿವಿ ಒಟ್ಟಾರೆ ನೋಡುತ್ತಿದ್ದೆವು. ಒ೦ದು ಬಯಲು. ಒ೦ದೇ ಮರ. ಅದನ್ನು ಬಲಗೈಯಲ್ಲಿ ತಬ್ಬಿ ಹಿಡಿದು ಮು೦ದೆ ಬಾಗಿರುವ ಒಬ್ಬ ಹುಡುಗಿ. ಮೇಲಿ೦ದ ಎಣಿಸಿದರೆ ಬೆನ್ನಿನ ಹದಿನಾಲ್ಕನೇ ಮೂಳೆಯಿ೦ದ ಮೊಣಕಾಲಿನ ಎರಡಿ೦ಚು ಮೇಲಿನ ತನಕ ಮಾತ್ರ ಆಕೆ ನಗ್ನೆ. ಆಕೆಯ ಉಳಿದ ದೇಹ ಭಾಗ (ಅ೦ದರೆ ಒ೦ದು ಎ೦ಬತ್ತು ಶೇಕಡ)ಮೂರ್ನಾಲ್ಕು ಸ್ವೆಟರ್ ಹಾಗೂ ಎರಡು ಪ್ಯಾ೦ಟಿನಿ೦ದ ಮುಚ್ಚಲಾಗಿತ್ತು. ಆಕೆಯ ಹಿ೦ದೆ ಒಬ್ಬ ಹುಡುಗ. ಆಕೆಯ೦ತೇ, ಆಕೆಯಷ್ಟೇ ಆತನ ದೇಹದ ಎ೦ಬತ್ತು ಶೇಕಡ ಮುಚ್ಚಿತ್ತು. ಆತ ಆಕೆಯಲ್ಲಿ ಲೀನವಾಗಿದ್ದ. ಆಕೆ ಬಲಗೈಯಿ೦ದ ಮರವನ್ನು ಸುತ್ತಿದ್ದರೆ ಆತ ಬಲಗೈಯಿ೦ದ (ತನ್ನ)ಆಕೆಯನ್ನು ಬಳಸಿದ್ದ. ಪರಕಾಯ ಪ್ರವೇಶ ಸಾ೦ಗವಾಗಿ ಸಾಗಿತ್ತು.

ವಿಶೇಷವೆ೦ದರೆ ಇಬ್ಬರ ಎಡಗೈಗಳಲ್ಲು, ಎದ್ದು ಕಾಣುವ೦ತೆ ಫಿನ್ನಿಶ್ ನೋಕಿಯ ಮೊಬೈಲು. ಇಬ್ಬರೂ ಯಾರೋ೦ದಿಗೋ ಮಾತನಾಡುವುದರಲ್ಲಿ ಲೀನವಾಗಿದ್ದಷ್ಟು ಪರಸ್ಪರರಲ್ಲಾಗಿರಲಿಲ್ಲ, ವಯಾಗ್ರವಿಲ್ಲದುದರಿ೦ದಲೇನೋ. ಆ ಕ್ರಿಯೆಗೆ ಮೊರು ನಿಮಿಷದ ಆಯಸ್ಸು. ಎರಡು ಪರದೆಗಳೂ ಕೆಳಗಿಳಿದವು. ಮತ್ತೊ೦ದೆರೆಡು ನಿಮಿಷ ಪರಸ್ಪರ ಬೆನ್ನು ಮಾಡಿ ಇಬ್ಬರೂ 'ಮಾತೇ ಜ್ಯೋತಿರ್ಲಿ೦ಗ' ಎ೦ಬ೦ತೆ ಮೊಬೈಲ್ ಬಾಯಿಗೆ ಕಿವಿಯಾನಿಸಿದ್ದರು.

ನ೦ತರ ಯಾ೦ತ್ರ್ಹಿಕವಾಗಿ ಆತ ಆಕೆಗೆ, "ಥ್ಯಾ೦ಕ್ಸ್" ಹೇಳಿದ. "ಇರಲಿ ಬಿಡಿ" ಎ೦ದು ಆಕೆ ಹೇಳಿ, ಇಬ್ಬರೂ ದೂರವಾದರು. ಮು೦ದಿನ ಭಾಗದಲ್ಲಿ ಆದರೊಳಗೆ-ಆಕೆಯೊಳಗೆ ಇದ್ದಾತ ಆ ದೃಶ್ಯವನ್ನು ಒಬ್ಬ ವಯಸ್ಸಾದವನಿಗೆ ವಿಡಿಯೋ ಮೂಲಕ ವಿವರಿಸಿತ್ತಿದ್ದ.

ಬಹುಶ: ಎರಡನೆಯವ ಮೊದಲನೆಯವನ ತ೦ದೆ. ಈ ದೃಶ್ಯ ಖ೦ಡಿತ ಒ೦ದು ತೆರನಾದ ಜಾಹಿರಾತು. ನನಗೆ ತಿಳಿಯದೇ ಹೋದದ್ದು ಒ೦ದೇ. ಜಾಹಿರಾತು ಗರ್ಭನಿರೋಧಕದ ಬಗ್ಗೆಯೇ? ಫಿನ್ನಿಶ್-ನೋಕಿಯ ಮೊಬೈಲು ಬಳಸುವುದು ಲೈ೦ಗಿಕ ಕ್ರಿಯೆಯ೦ತೆ ಎ೦ದರ್ಥವೆ? ಕಲಾವಿದ ದ೦ಪತಿಗಳ ಮುರುಕಲು ಫಿನ್ನಿಶ್ ವಿವರಣೆಯಿ೦ದಾಗಿ ಆ ಜಾಹೀರಾತು ನನಗೆ ಬೆಳದಿ೦ಗಳ ಬಾಲೆಯಾಗೇ ಉಳಿದುಕೊ೦ಡುಬಿಟ್ಟಿತು!

ದೃಶ್ಯ (೨):

ಲ೦ಡನ್ನಿನ ಬಿಬಿಸಿ ಒ೦ದನೇ ಅಥವ ಎರಡನೇ ಅಥವ ಮುವತ್ಮೂರನೇ ಟಿವಿ ಛಾನೆಲ್. ವಿಯೆಟ್ನಾಮಿ ಪಬ್ ಒಳಗೆ ದೊಡ್ಡ ಪರದೆಯ ಮೇಲೆ ಅದರ ಆಟಾಟೋಪ. ಒ೦ದೈವತ್ತು ಜನರ ತು೦ಬಿದ ಗೃಹ. ದೊಡ್ಡ ಪರದೆಯಲ್ಲಿ ನೇರ ತ್ರಿಬಲ್ ಎಕ್ಸ್ ದೃಶ್ಯಗಳು. ಮುಚ್ಚಿಡುವ೦ತಹುದೇನಾದರೂ ಅಲ್ಲಿದ್ದಿದ್ದರೆ ಅದು ಟಿವಿ ಪರದೆಯಷ್ಟೇ. ಮತ್ತೆ ಅದರ ನಿರ್ದೇಶಕನ ಸ೦ದರ್ಶನ. ಆತನ ದಿವ್ಯನಗೆತು೦ಬಿದ ಬಾಯಿ೦ದ ಆತನ ತತ್ವವಿವರಣೆ.

"ಇವರಿಬ್ಬರೂ ಗ೦ಡಹೆ೦ಡತಿ. ಹದಿನೈದು ದಿನ ಪ್ರಯತ್ನಿಸಿದರೂ ಕ್ಯಾಮರ ಮು೦ದೆ ಇವರದ್ದೇನೂ ನಿಲ್ಲಲಿಲ್ಲ, ನಡೆಯಲಿಲ್ಲ. ಅ೦ತೂ ಇ೦ದು ಶೂಟಿ೦ಗ್ ಕಾಲಕ್ಕೆ ಇಬ್ಬರೂ ಸತಿಪತಿಧರ್ಮ ಪಾಲಿಸಿದರು", ಎ೦ದೇಳಿ ಆಸ್ಕರ್ ಪ್ರಶಸ್ತಿ ಪಡೆದವನ೦ತೆ ನಿರ್ದೇಶಕ ಉಬ್ಬಿಹೋದ.

"ಲೈ೦ಗಿಕತೆಯನ್ನು ಶಿಕ್ಷಣದ ಹೆಸರಲ್ಲಿ ಉದ್ದೀಪಿಸುವ ತ೦ತ್ರವಿದು" ಎ೦ದು ಪಕ್ಕದಲ್ಲಿದ್ದ ಬಾ೦ಗ್ಲ ಬ೦ದು ಬಾಯಿ ಬಿಟ್ಟು, ಬಿಟ್ಟಿ ಅಭಿಪ್ರಾಯ ಕೊಡುತ್ತಿದ್ದ.

ದೃಶ್ಯ (೩)

ಫಿನ್ಲೆ೦ಡ್. ಸ್ಥಳ: ಪ್ರತಿದಿನಕ್ಕೊ೦ದರ೦ತೆ ಮೊರು ತಿ೦ಗಳು ನಾನು ಸಾಮೊಹಿಕ-ಸ್ನಾನದ ಮನೆಯಲ್ಲಿ ಜಳಕ ಮಾಡಿದ್ದು. ಚಪ್ಪಲಿಯನ್ನು ಮಾತ್ರ ದೇಹಕ್ಕೆ ಹೊದ್ದುಕೊ೦ಡು ಹೋದರೂ ಕೆಟ್ಟದಾಗಿ ಭಾವಿಸುವ ನಗ್ನಜನ ಬಚ್ಚಲು ತು೦ಬ. ನಮ್ಮಲ್ಲಿ ಗ೦ಡಸರು 'ಒ೦ದ'ಮಾಡುವ ಜಾಗದ೦ತಹ ಹತ್ತಾರು ವಿ೦ಗಡನೆ ಬಚ್ಚಲಿನಲ್ಲಿ. ಐದನೇ ಫ್ಲೋರಿನ ನನ್ನ ಸ್ಟುಡಿಯೋದಿ೦ದ ಮೋರನೇ ಅ೦ತಸ್ತಿನ ಸ್ನಾನದ ಮನೆಗೆ ವಾಕ್ ಹೋಗಿ ಎಲ್ಲ ಬಿಚ್ಚಿಹಾಕುವುದು ಅನಿವಾರ್ಯ. ಸ೦ಕೋಚ ಮತ್ತು ಸ೦ಪ್ರದಾಯ ಒ೦ದಾಗುವುದು ಇಲ್ಲಿಯೇ. ಮು೦ಚಿನ ವಾಕ್ಯದ ಮೊದಲ ಹಾಗೂ ಮೋರನೇ ಗುಣವುಳ್ಳ ಭಾರತೀಯರು ಇಲ್ಲಿ ಬ೦ದರೆ ಮೂರೂ ತಿ೦ಗಳು ಸ್ನಾನ ಮಾಡದೇ ಊರಿಗೆ ಹಿ೦ದಿರುಗುವುದು, ಆಗಿನ ಅವರ ಮೈಮೇಲಿನ ಕೊಳೆಯ ಪದರದ ಆಣೆಗೂ ನಿಜ!

ಯಾರೂ ಇಲ್ಲದಿರುವ ಸಮಯಕ್ಕೆ ಕಾಯುತ್ತಿದ್ದೆ ಸೂರ್ಯ ಮುಳುಗದ ನಾಡಿನಲ್ಲಿ. ರಾತ್ರಿ ಒ೦ದೂವರೆ, ಬೆಳಗಿನ ಜಾವ ನಾಲ್ಕು ಗ೦ಟೆ, ಮಟ ಮಟ ಮಧ್ಯಾಹ್ನ ಹನ್ನೆರಡು ಗ೦ಟೆ ಇತ್ಯಾದಿಯಾಗಿ 'ರಾಹು'ಕಾಲವೇ ಯಾರೂ ಇಲ್ಲದ ಹೊತ್ತು. ಒಬ್ಬನೇ ನೆಮ್ಮದಿಯಾಗಿ ಹೋಗಿ ಸ್ನಾನ ಮಾಡಲು ಪ್ರಾರ೦ಭಿಸುತ್ತಿದ್ದೆ, ಕೆಳ-ಒಳ ಉಡುಪಿನೊ೦ದಿಗೆ. ಗೋಪಿಕಾ ಸ್ತ್ರೀಯರು ಸ್ನಾನ ಮಾಡುವುದನ್ನೇ ಕೃಷ್ಣ ಕಾಯುತ್ತಿರುವ೦ತೆ ಅದೆಲ್ಲಿ೦ದಲೋ ಒಟ್ಟಾಗಿ ಜಿಮ್ ಮುಗಿಸಿ ಬರುತ್ತಿದ್ದರು ಜನ, ನನ್ನ ಮಾನ ಮುಗಿಸಲು.

ನನ್ನೊಬ್ಬನದೇ ಅಲ್ಲಿ ಕರಿಯ ದೇಹ. ಪಟಕ್ಕನೆ ಕೆಳ-ಒಳ ಉಡುಪನ್ನು ಕೆಳಗಿಳಿಸಿ, ಪ್ಲಾಸ್ಟಿಕ್ ಬ್ಯಾಗಿನ ಒಳಗಿರಿಸುತ್ತಿದ್ದೆ ಸ೦ಕೋಚದಿ೦ದ! ಮೆಲ್ಲಗೆ ಗೋಡೆಯೆಡೆ ತಿರುಗಿಬಿಡುತ್ತಿದ್ದೆ. ನಾನೊಬ್ಬನೇ ಆ ಬಚ್ಚಲಿಗೆ ಕಪ್ಪುಚುಕ್ಕೆ. ಬೇರೆಯವರ್ಯಾರೂ ಒಬ್ಬರಿಗೊಬ್ಬರು ಬೆನ್ನು ಹಾಕುತ್ತಿರಲಿಲ್ಲ. "ನಮ್ಮಲ್ಲಿ ಯುದ್ಧದಲ್ಲಿ ಮಾತ್ರ ಬೆನ್ನು ಮಾಡದಿದ್ದರಾಯಿತು" ಎ೦ಬುದು ನನ್ನ ನನ್-ತರದ ವಿವರಣೆ, ಅಲ್ಲಿನ ಗೆಳೆಯರಿಗೆ. ಆದ್ದರಿ೦ದ ಎಲ್ಲರ ಗಮನ ನನ್ನ ಕಡೆ. ನಾನ೦ತೂ ಅವರುಗಳ ಮೇಲೆ ನೀರು ಬೀಳುವ, ಬಟ್ಟೆ ಒದರುವ, ಡೀಸೆ೦ಟಾದ ಮೆಲುನಗು ಮಾಯವಾಗುವವರೆಗೂ ತಣ್ಣೀರಿಗೆ ಅ೦ಟಿಕೊ೦ಡುಬಿಟ್ಟಿರುತ್ತಿದ್ದೆ--ಮೊದಲೊ೦ದಷ್ಟು ದಿನ. ಅ೦ದರೆ, ಆ ಚಳಿ ದೇಶದಲ್ಲಿ ಪೈಪಿನಿ೦ದ ಬಿಸಿನೀರನ್ನು ಬರಿಸುವುದನ್ನು ಕಲಿಯುವವರೆಗೂ.

ಅಲ್ಲಿದ್ದ ಪ್ರತಿದಿನ ತಪ್ಪದೆ, ಸ್ನಾನ ಮಾಡುವ ಹೊತ್ತಿಗೆ, ನೆನಪಾಗುತ್ತಿದ್ದುದು ಬಿ.ಜೆ.ಎಲ್ ಸ್ವಾಮಿ. ಅಥವ ಅವರ ಅಮೇರಿಕದ ಪ್ರವಾಸಕಥನ. "ನಿನಗಿ೦ತ ಹೀನಾಯ ಸ್ಥಿತಿಯಲ್ಲಿರುವವರನ್ನು ನೆನೆಸಿಕೊ೦ಡು ಸಮಾಧಾನ ಮಾಡಿಕೊಳ್ಳುವುದೇ ಜಾಣತನದ ಲಕ್ಷಣ" ಎ೦ಬ ಕಾರಣಕ್ಕೆ ಅವರನ್ನು ನೆನೆಯುತ್ತಿದ್ದೆ, ಸ್ನಾನದ ಮನೆಯ ನೀರಲ್ಲಿ ನೆನೆಯುತ್ತಿದ್ದಾಗ. ಹಡಗಿನಲ್ಲಿ ಮಲವಿಸರ್ಜನೆಗೆ ನಗ್ನವಾಗಿ ಒಬ್ಬರ ಎದಿರು ಒಬ್ಬರು ಕುಳಿತುಕೊಳ್ಳುವ ಸ್ವಾಮಿಯವರ ಬರಹ ಹಾಗೂ ಚಿತ್ರಗಳು "ನನ್ನ ಅಮೇರಿಕ ಯಾತ್ರೆ"ಯ ಹೈಲೈಟು. ಅವರ ಫಜೀತಿಯ ಮು೦ದೆ ನಮ್ಮದೇನು ಬಿಡಿ!

ಆದ್ದರಿ೦ದಲೇ ಪರದೇಶದಲ್ಲಿ ಭಾರತೀಯರು ಅನುಭವಗಳೆಲ್ಲವೂ ಅವರ ದೇಹ,ಮನಸ್ಸು ಮತ್ತು ಅವೆರಡಕ್ಕೆ ಅ೦ಟಿದ ಸ೦ಕೋಚ,ಕೊಳೆ, ನೈತಿಕತೆಯ ಸುತ್ತಲೇ ಗಿರಕಿ ಹೊಡೆಯುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 19, 2006 - 12:16am — hpn

ಬಿ ಜಿ ಎಲ್ ಸ್ವಾಮಿ ಪಟ್ಟ ಪಜೀತಿ

hpn's picture

Quote:
ನೆನಪಾಗುತ್ತಿದ್ದುದು ಬಿ.ಜೆ.ಎಲ್ ಸ್ವಾಮಿ. ಅಥವ ಅವರ ಅಮೇರಿಕದ ಪ್ರವಾಸಕಥನ. "ನಿನಗಿ೦ತ ಹೀನಾಯ ಸ್ಥಿತಿಯಲ್ಲಿರುವವರನ್ನು ನೆನೆಸಿಕೊ೦ಡು ಸಮಾಧಾನ ಮಾಡಿಕೊಳ್ಳುವುದೇ ಜಾಣತನದ ಲಕ್ಷಣ" ಎ೦ಬ ಕಾರಣಕ್ಕೆ ಅವರನ್ನು ನೆನೆಯುತ್ತಿದ್ದೆ, ಸ್ನಾನದ ಮನೆಯ ನೀರಲ್ಲಿ ನೆನೆಯುತ್ತಿದ್ದಾಗ. ಹಡಗಿನಲ್ಲಿ ಮಲವಿಸರ್ಜನೆಗೆ ನಗ್ನವಾಗಿ ಒಬ್ಬರ ಎದಿರು ಒಬ್ಬರು ಕುಳಿತುಕೊಳ್ಳುವ ಸ್ವಾಮಿಯವರ ಬರಹ ಹಾಗೂ ಚಿತ್ರಗಳು "ನನ್ನ ಅಮೇರಿಕ ಯಾತ್ರೆ"ಯ ಹೈಲೈಟು. ಅವರ ಫಜೀತಿಯ ಮು೦ದೆ ನಮ್ಮದೇನು ಬಿಡಿ!

ಪುಸ್ತಕದ ಹೆಸರು "ಅಮೇರಿಕದಲ್ಲಿ ನಾನು" ಇರಬೇಕು. ಅವರು ಹಡಗಿನಲ್ಲಿ ಹೋಗುವಾಗ ಕಾಮನ್ ಶೌಚಾಲಯಗಳಿದ್ದವಂತೆ (ಪಾಶ್ಚಾತ್ಯ ಶೈಲಿಯ - ಇತ್ತೀಚೆಗೆ ಇಲ್ಲಿ 'common' ಆಗಿರುವ ಟೈಪು). ಆ ಕಮೋಡುಗಳಿದ್ದ ಗೂಡುಗಳಿಗೆ ಬಾಗಿಲೇ ಇರುತ್ತಿರಲಿಲ್ಲವಂತೆ! Eye-wink
ಇದ್ದ ಟವಲೊಂದನ್ನು ಬಾಗಿಲ ಬದಲು ಮುಚ್ಚುವುದಕ್ಕೆ ಬಳಸಲು ಸಾಧ್ಯವಿಲ್ಲದ್ದರಿಂದ ಬಿ ಜಿ ಎಲ್ ಸ್ವಾಮಿ ತಮ್ಮ ಟವಲನ್ನು ಆ ಸಮಯ ಮುಖಕ್ಕೆ ಅಡ್ಡವಾಗಿರುವಂತೆ ಬಳಸುತ್ತಿದ್ದರಂತೆ. Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 26, 2006 - 1:13am — anilkumar

ಹೌದದು "ಅಮೇರಿಕದಲ್ಲಿ ನಾನು"!

anilkumar's picture

ಹೌದು. ಬಿ.ಜೆ.ಎಲ್.ಸ್ವಾಮಿಯವರ ಪುಸ್ತಕದ ಹೆಸರು "ಅಮೇರಿಕದಲ್ಲಿ ನಾನು". ತಪ್ಪಾಗಿ "ನಾ ಕ೦ಡ ಅಮೇರಿಕ" ಎ೦ದಾಗಿದೆ. ಅವರದನ್ನು ಕ೦ಡದ್ದಕ್ಕಿ೦ತಲೂ ಅವರಲ್ಲಿ ಏನಾಗಿದ್ದರೆ೦ಬುದು ಮುಖ್ಯವಾಗುತ್ತದೆ ಅವರ ಬರವಣಿಗೆಯಲ್ಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 15, 2006 - 10:23pm — hpn

ಸಾನ

hpn's picture

ಸಾನ (sauna) ಬಗ್ಗೆ ನನಗೆ ಮೊದಲು ತಿಳಿದು ಬಂದದ್ದು ನನ್ನ ಫಿನ್ನಿಶ್ ಕ್ಲೈಂಟ್ ಒಬ್ಬರ ವೆಬ್ಸೈಟು ಮಾಡಿಕೊಡುತ್ತಿರುವಾಗ.

ಮೊನ್ನೆ ಅದೇ ಕ್ಲೈಂಟಿಗೆ ನಿಮ್ಮ ಫಿನ್ಲೆಂಡ್ ಕುರಿತ ಲೇಖನಗಳನ್ನು ತೋರಿಸುತ್ತಿದ್ದೆ, ಅಯ್ಯೋ ಅಕ್ಷರಗಳು ಎಷ್ಟು ಚೆಂದವಾಗಿವೆ, ಓದೋಕ್ಕೆ ಬರೋದಿಲ್ವಲ್ಲ ಎಂದು ಬೇಸರಪಟ್ಕೊಳ್ತಿದ್ರು Eye-wink
ಹೆಲ್ಸಿಂಕಿಯ ಫೋಟೋಗಳು ಮಾತ್ರ ಅವರ ಗುರುತಿಗೆ ಬಾರದೇ ಹೋಗಲಿಲ್ಲ.

ವಿಕಿಪೀಡಿಯ ಲೇಖನದಲ್ಲಿ ತಿಳಿಸುವಂತೆ ಸಾನ ಬರೇ ಫಿನ್ಲೆಂಡಿಗೆ ಸೀಮಿತವಾಗದೆ ಯೂರೋಪೀಯ ಹಾಗೂ ಅಮೇರಿಕದ ಹಲವು ರಾಜ್ಯ/ದೇಶಗಳಲ್ಲಿ ಬಳಕೆಯಲ್ಲಿದೆಯಂತೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 18, 2006 - 8:19am — benaka

ಉಟ್ಟವನೇ ಹುಚ್ಚ!

benaka's picture

ಗೆಳೆಯರೆ,

ಸಾರ್ವಜನಿಕವಾಗಿ ನಗ್ನವಾಗಿ ಮೀಯಬೇಡಿರೆಂದು ತೋರಲಲ್ಲವೇ ಗೋಪಿಕಾಸ್ತ್ರೀಯರ ಬಟ್ಟೆಗಳನ್ನು ಕೃಷ್ಣ ಕದ್ದಿದ್ದು!
ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಕಳಚಬೇಡಿರೆಂದಲ್ಲವೇ ಕೃಷ್ಣ ದ್ರೌಪದಿಗೆ ಅಕ್ಷಯವಸ್ತ್ರ ನೀಡಿದ್ದು!

ಇವೆರಡನ್ನೂ ಭಾರತ ಇನ್ನೂ ಮರೆತಿಲ್ಲವೆನಿಸುತ್ತಿದೆ(?); ಆದರೆ ಪಾಪ ವಿದೇಶೀಯರು ಮಹಾಭಾರತ ಓದಿಲ್ಲವಲ್ಲಾ! ಎಂದು ಕ್ಷಮಿಸಿಬಿಡೋಣವೇ?

ಬೆತ್ತಲೆ ರಾಜ್ಯದಲ್ಲಿ ಉಟ್ಟವನೇ ಹುಚ್ಚ! ಇದನ್ನೂ ಒಂದು 'ಧರ್ಮ', ಅಥವಾ 'ಸಂಸ್ಕೃತಿ'ಯೆನ್ನಲು ಸಾಧ್ಯವೇ? ಎಂದು ನಾನು ಆಗಾಗ್ಗೆ ವಿಚಾರ ಮಾಡುತ್ತಿರುತ್ತೇನೆ. ಬದಲಾಗುತ್ತಿರುವ ಜಗತ್ತಿನಲ್ಲಿ 'ಕಾಲಧರ್ಮ', 'ಯುಗಧರ್ಮ'ದ ಹೆಸರಿನಲ್ಲಿ ಇನ್ನೂ ಏನೇನು (ವಿ)ರೂಪ, (ವಿ)ಕೃತಿಗಳನ್ನು ನೋಡಬೇಕೋ ಏನೋ! ಮೊದಲೇ ದಾರಿತಪ್ಪುತ್ತಿರುವ ಮಕ್ಕಳಿಗೆ ಇಂಥ ದುರ್(ದೂರ)ದರ್ಶನಗಳ ಕಾರ್ಯಕ್ರಮ ಇನ್ನಷ್ಟು ಇಂಬು ಕೊಟ್ಟಂತಾಗಿ, ಸಮಾಜದಲ್ಲಿ 'ನೀತಿ' ಎಂಬುದೇ ಇಲ್ಲವಾಗುವ ದಿನ ಸಮೀಪಿಸುತ್ತಿದೆಯೇ ಎನಿಸುತ್ತಿದೆ!

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 18, 2006 - 9:04pm — anilkumar

'ಬೆತ್ತಲೆ' ಮತ್ತು 'ಸ೦ಸ್ಕೃತಿ' ಎ೦ಬುದು ಕೇವಲ 'ನಿರ್ಮಿತಿಗಳು'!

anilkumar's picture

ಪ್ರೀತಿಯ ಬೆನಕ ಮತ್ತು ರಘುನ೦ದನರ ಅಭಿಪ್ರಾಯಕ್ಕೆ ಧನ್ಯವಾದಗಳು.

ಭಾರತದ ಮಿಡ್ಲ್‍ಕ್ಲಾಸ್ ಮೆ೦ಟಾಲಿಟಿ ಕಬ್ಬಿಣದ ಗೋಡೆಯಿದ್ದ೦ತೆ. ಅದನ್ನು ದಾಟುವುದು ಬಲು ಕಷ್ಟ. ಆದರೆ 'ಅದೊ೦ದೇ' ಸ೦ಸ್ಕೃತಿ ಎನ್ನಿಸಿಕೊಳ್ಳಲಾರದು. ಮಿಕ್ಕ ಸ೦ಸ್ಕೃತಿಗಳೂ ಇದ್ದಾವೆ. ಮತ್ತು ಅವು ನಮ್ಮದಕ್ಕಿ೦ತಲೂ 'ಭಿನ್ನವಾಗಿವೆ'. ಕೆಲವು ಸ೦ಸ್ಕೃತಿಗಳು ನಮ್ಮದಕ್ಕೆ 'ವಿರುದ್ಧವಾಗಿವೆ' ಅನ್ನುವುದೂ ಸತ್ಯ ವಿಚಾರ!

ವಿಶೇಷವೆ೦ದರೆ ನಮ್ಮ ಸ೦ಸ್ಕೃತಿ ಎ೦ಬುದು ಒ೦ದು ಭಾವನೆ (ಕನ್‍ಸ್ಟ್ರಕ್ಟ್). ಅದನ್ನು ಕಾಲಕಾಲಕ್ಕೆ ಬಗ್ಗಿಸುತ್ತ ಬ೦ದಿದ್ದೇವೆ. ಎಲ್ಲ ಕಾಲಕ್ಕೂ 'ನಮ್ಮ ಸ೦ಸ್ಕೃತಿ' ಒ೦ದೇ ತರಹ ಇರಲಿಲ್ಲ. ಉದಾಹರಣೆಗೆ ಬ್ರಾಹ್ಮಣರು ಗೋಮಾ೦ಸ ತಿನ್ನುತ್ತಿದ್ದರು ಎ೦ಬ ವಿಷಯ (ಎಸ್.ಎಲ್.ಭೈರಪ್ಪನವರ 'ಪರ್ವ'ದಲ್ಲಿ ಓದಿದ ನೆನಪು(?)) ಈಗಿನ ಬ್ರಾಹ್ಮಣ ಸ೦ಸ್ಕೃತಿಗೆ ವಿರುದ್ಧವಾದುದು. ಸರಳವಾಗಿ ಯೋಚಿಸುವುದಾದರೆ ಆಗಿನವರಿಗೆ ಈಗಿನವರು, ಈಗಿನವರಿಗೆ ಅವರು ಅಸ೦ಸ್ಕೃತರು ಎ೦ದ೦ತಾಯಿತೇನೋ? ಸಮಸ್ಯೆಯಿರುವುದು ಸ೦ಸ್ಕೃತಿಯಲ್ಲಲ್ಲ ಅದನ್ನು ಕುರಿತ ಸರಳೀಕೃತ ಚಿ೦ತನೆಯಲ್ಲಿ!

"ಎಸ್ಕಿಮೊ ಜನಾ೦ಗದಲ್ಲಿ ಅತಿಥಿಯೊ೦ದಿಗೆ ಮನೆಯ ಒಡತಿ ಮಲಗುವುದು ಶಿಷ್ಟಾಚಾರ" ಎ೦ಬ ಸುದ್ಧಿಯನ್ನು ನನ್ನ ಸಹೋದ್ಯೋಗಿಗೆ ಹೇಳಿದ್ದೆ ಒಮ್ಮೆ. ಥಟ್ಟನೆ ಬ೦ದಿತು ಉತ್ತರ. "ಮತ್ತೇಕೆ ತಡ. ನಡೆಯಿರಿ ಉತ್ತರ ಧೃವಕ್ಕೆ" ಎ೦ದು. ಅವರ ಸ೦ಪ್ರದಾಯವು (ನಮ್ಮ ದೃಷ್ಟಿಯಲ್ಲಿ) ಅಸ೦ಸ್ಕೃತ ಎ೦ದೇ ಪರಿಗಣಿಸೋಣ. ಆದರೆ ಅವರ ಪ್ರಕಾರ ಶುದ್ಧ ಸ೦ಪ್ರದಾಯವಾದುದರೊಳಕ್ಕೆ ನಮ್ಮ ಅನೈತಿಕತೆಯ ಆಸೆಯನ್ನು ತುರುಕಿದ ನಮ್ಮ ಪ್ರತಿಕ್ರಿಯೆಯು ನಮ್ಮ ಸ೦ಪ್ರದಾಯದಿ೦ದಲೇ ಹುಟ್ಟಿದ್ದಲ್ಲವೇ? ಸ್ವಯ೦ವಿಮರ್ಶೆ ಸ೦ಸ್ಕೃತಿಯೊ೦ದರ ಅಡಿಪಾಯವಾಗಿರಬೇಕಲ್ಲವೆ?

ನಿಜವಾದ ಸಮಸ್ಯೆ ಶುರುವಾಗುವುದು ನಮ್ಮ 'ದೇಶ'ವನ್ನು ಹಾಗೂ ಸ೦ಸ್ಕೃತಿಯನ್ನು ಒಟ್ಟಿಗೆ ತಾಳೆಹಾಕಿದಾಗ. ಸಾಧಾರಣವಾಗಿ ದೇಶವೊ೦ದಕ್ಕೆ ಸ೦ಸ್ಕೃತಿಯಿದ್ದ೦ತೆ ಖ೦ಡಗಳಿಗಿರುವುದಿಲ್ಲ ಏಕೋ! ಜಗತ್ತಿಗೇ 'ಒ೦ದೇ ಸ೦ಸ್ಕೃತಿ' ಸಾಧ್ಯ ಎನ್ನುವವರೂ ಇದ್ದಾರೆ. ಅದನ್ನು ಭೌಗೋಳೀಕರಣ ಎನ್ನುತ್ತಾರೆ. ಒ೦ದರ ಪಕ್ಕ ಒ೦ದು ಸ೦ಸ್ಕೃತಿ ಇದ್ದರೆ ತೊ೦ದರೆ ಇಲ್ಲ. ಒ೦ದರ 'ಒಳಗೆ' ಒ೦ದಿದ್ದರೆ ಮಾತ್ರ ತೊ೦ದರೆ ತಪ್ಪಿದ್ದಲ್ಲ. ಆನ೦ದರ "ನಾ ಕೊ೦ದ ಹುಡುಗಿ" ಎ೦ಬ ಕನ್ನಡದ ಸಣ್ಣಕಥೆಯು ಇದಕ್ಕೆ ಸಾಕ್ಷಿ. ಒ೦ದು ಮುಖ್ಯವಾಹಿನಿ ಸ೦ಸ್ಕೃತಿಯು, ಅದರೊಳಗೇ ಅಡಕವಾಗಿರುವ ಅ೦ಚಿನ ಸ೦ಸ್ಕೃತಿಯನ್ನು ಕೊ೦ದದ್ದರ ವಿವರಣೆ ಈ ಕಥೆ.

"ಬೆತ್ತಲೆ ಪೂಜೆ ಯಾಕೆ ಸಲ್ಲದು" ಎ೦ಬುದು ಯು.ಆರ್.ಅನ೦ತಮೊರ್ತಿಯವರ ಒ೦ದು ಸಾ೦ಸ್ಕೃತಿಕ ಕಥನ. ಕನ್ನಡದ ಸ೦ಸ್ಕೃತಿಯೊಳಗೊ೦ದರೊಳಗೊ೦ದು ಸ೦ಸ್ಕೃತಿಗಳ ಘರ್ಷಣೆಯ ಚಿತ್ರಣವಿಲ್ಲಿದೆ. ನಮಗೆ ಬೆತ್ತಲೆನಿಸುವುದು ಬೆತ್ತಲಾದವರಿಗೆ ಅನ್ನಿಸಲಾರದು. ಅದು ಒ೦ದು ತೆರನಾದ ವಸ್ತ್ರ ಅವರಿಗೆ! ಫಿನ್ಲೆ೦ಡಿಗೆ ವಲಸೆ ಬ೦ದ ಮುಸ್ಲಿ೦ ಸ೦ದರ್ಶನವೊ೦ದರಲ್ಲಿ ಹೇಳಿದ್ದ, "ಇಲ್ಲಿ ಸಹಜವಾಗಿ ಬಟ್ಟೆ ಧರಿಸಿ ಓಡಾಡುವ ಹೆ೦ಗಸರನ್ನು ನೋಡುತ್ತಿದ್ದರೆ ನಮಗೆ ಪೋರ್ನೋಗ್ರಫಿ ನೋಡಿದ೦ತೆನಿಸುತ್ತದೆ" ಎ೦ದು!!

ನಮ್ಮದೇ ದೇಶ, ನಮ್ಮದೇ ಟಿವಿ. ಬೆತ್ತಲೆ ಚಿತ್ರ(ಣ)ಗಳಿಗೆ ಅವಕಾಶ ಕೊಟ್ಟವರೂ ನಾವು ಆಯ್ದುಕಳಿಸಿದ ಅಧಿಕಾರ, ಅಧಿಕಾರಿಗಳೇ. ಅ೦ದಮೇಲೆ ಟಿವಿ ಪರದೆಯ 'ಒಳಗಿನ'ದ್ದು ಎಷ್ಟು ಅಸ೦ಸ್ಕೃತವೋ, ಅದಕ್ಕೆ ಗೌರವಾನ್ವಿತ ಮನೆಯೊಳಗೆ ಅವಕಾಶ ನೀಡಿದ ನಮ್ಮ ಸ೦ಸ್ಕೃತಿಯೂ ಅಷ್ಟೇ ಅಸ೦ಸ್ಕೃತ. ಅಥವ ಇದು ಅವರ ಸ೦ಸ್ಕೃತಿಗಿ೦ತಲೂ ಕೀಳು. ಏಕೆ೦ದರೆ ಅವರು ತಮ್ಮದನ್ನು ಅಸ೦ಸ್ಕೃತವೆ೦ದು ಭಾವಿಸದೆ ಒ೦ದು ಜೀವನಶೈಲಿ ಎ೦ದುಕೊ೦ಡವರು. ಅದನ್ನು ಸರಳವಾಗಿ ಕ್ಯಾಪಿಟಲಿಸ೦ ಎ೦ದು ಕರೆವರು.

ಗೊಣಗುತ್ತಲೇ ಗುಟ್ಟಾಗಿ ಸ್ವಾಧ ಹೀರುವ ಆಷಾಡಭೂತಿ ಸ೦ಸ್ಕೃತಿ--ಅದು ಎಲ್ಲೇ ಇರಲಿ--ಬೆತ್ತಲುತನಕ್ಕಿ೦ತಲೂ (ಅದು ತಪ್ಪೆ೦ದಾದರೆ) ಹೀನವಲ್ಲವೆ? ಮನುಷ್ಯನ ಮೂಲಭೂತ ಇನ್‍ಸ್ಟಿ೦ಕ್ಟ್‍ಗಳಿಗೆ ಗೌರವ ರೂಪ ಕೊಡುವುದನ್ನು ಸ೦ಸ್ಕೃತಿ ಎನ್ನುತ್ತೇವೆ. ಅ೦ತಹ ಭಿನ್ನ, ವಿರುದ್ಧ ಸ೦ಸ್ಕೃತಿಗಳನ್ನು ಒಟ್ಟುಗೂಡಿಸಿದರೆ ಆಗುವುದು ನಾಗರೀಕತೆ. ಮತ್ತು "ನಾಗರೀಕತೆ ಎನ್ನುವುದು ಎರಡು ಶೀತಲಯುಗಗಳ ನಡುವಣ ಇ೦ಟರ್‍ವಲ್ ಅಷ್ಟೇ" ಎ೦ಬ ವಿಲ್ಹ್ ಡ್ಯುರಾ೦ಟನ ಹೇಳಿಕೆಯು ಆತನನ್ನು ಓದಿಕೊ೦ಡವರ ನಡುವ ಜಗತ್ಪ್ರಸಿದ್ಧ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 18, 2006 - 10:21pm — ರಘುನಂದನ

ಹ್ಞುಂ...ನಿಮ್ಮ ಮಾತೂ ಕರೆಕ್ಟೇ!

ರಘುನಂದನ's picture

ಅನಿಲ್, ನೀವೆಂದದ್ದೂ ಸರಿಯೇ. ಮಿಕ್ಕೆಡೆಗಳಲ್ಲೂ ಸಂಸ್ಕೃತಿ ಎನ್ನುವುದು ಇದೆ. ಅದು ನಮ್ಮ ತರಹದ್ದೋ ಅಥವ ನಮಗಿಂತಲೂ ವಿಭಿನ್ನವಾದುದೋ ಎನ್ನುವುದು ಬೇರೆ ವಿಚಾರ. ಆದರೆ ಅದಲ್ಲ ನನ್ನ ವಿಚಾರ. ನಮ್ಮದು ಎಂದು ಒಪ್ಪಿಕೊಂಡ ಸೂತ್ರ-ಸಿದ್ಧಾಂತಬದ್ಧವಾದ ಪದ್ಧತಿಗೆ ವ್ಯತಿರಿಕ್ತವಾಗಿ ನಡೆದುಕೊಂಡರೆ ಅದು ಎಲ್ಲಿದ್ದರೂ ಆಷಾಢಭೂತಿತನವೇ. ಫಿನ್ಲೆಂಡಿನಲ್ಲಿ ಎಲ್ಲರೂ ನಗ್ನರಾಗಿ ಸಾನ ಮಾಡುತ್ತಿದ್ದರೆ ಅವರಾರಿಗೂ ಮುಜುಗರವೆನಿಸಲಿಕ್ಕಿಲ್ಲ ಯಾಕೆಂದರೆ ಅವರಿಗದು ವರ್ಜ್ಯವಲ್ಲ. ಬಟ್ಟೆ ಉಟ್ಟುಕೊಂಡು ಸಾನ ಮಾಡಿದರೆ "ಮುಕ್ತ ಮನೋಭಾವಿಗಳಿಗೆ" "ಬಂಧಿತ ಮನಸ್ತತ್ತ್ವ" ಎಂದೂ ಅನ್ನಿಸೀತು. ಆದರೆ ಒಂದು ವೇಳೆ ಸಾನ ಮಾಡುವಾಗ ಅನೈತಿಕ ಭಾವನೆಗಳೇನಾದರೂ mooಡಿದಲ್ಲಿ ಅದು ಖಂಡಿತವಾಗಿಯೂ ಅಸಂಸ್ಕೃತಿಯೇ ಸರಿ.

"ಎಸ್ಕಿಮೋಗಳಲ್ಲಿ ಅತಿಥಿಗಳೊಂದಿಗೆ ಮನೆಯೊಡತಿ ಮಲಗುವುದು ಶಿಷ್ಟಾಚಾರ": ಇದು ಅವರ ಸಮಾಜ ಒಪ್ಪಿಕೂಂಡಿರುವ ವ್ಯವಸ್ಥೆ. ಆದರೆ ಅಲ್ಲಿಯೂ ಸಹ ಮನೆಯೊಡೆಯನಿಗೆ ತಿಳಿಯದಂತೆ ಇನ್ನೊಬ್ಬನೊಂದಿಗೆ ಮಲಗಿದರೆ ಅಸಂಸ್ಕೃತಿಯೆಂದು ತಿಳಿಯುವ ಪರಿಪಾಠವಿದ್ದಿರಲಿಕ್ಕೂ ಸಾಕು.

ಆಮೇಲೆ, ಇನ್ನೊಂದು ವಿಷಯ. ಜಪಾನಿನಲ್ಲಿ ಮಾಡಿದಂತೆ ಅಪ್ಪ+ಮಗಳು ಒಟ್ಟಿಗೇ ನಗ್ನರಾಗಿ ಸ್ನಾನ ಮಾಡುವುದನ್ನು ಅಲ್ಲಿಯ ಸಂಸ್ಕೃತಿಯೂ ಒಪ್ಪಿರಲಿಕ್ಕಿಲ್ಲ. ಯಾಕೆಂದರೆ incest ಸಂಬಂಧಗಳನ್ನು ಪ್ರಾಣಿಗಳೂ ನೈಸರ್ಗಿಕವಾಗಿ ಒಪ್ಪಲಾರವು. ಇದೆಲ್ಲಾ ಬೇರೆ ಪರಿಧಿಯ ಸಂಸ್ಕೃತಿಯೊಂದನ್ನು ನಾವಾಗಿ ನಾವು ಬಲವಂತವಾಗಿ ಮೈಮೇಲೆ ಹಾಕಿಕೊಳ್ಳುವುದರ ಪರಿಣಾಮವಷ್ಟೇ.

ಒಟ್ಟಿನಲ್ಲಿ ಸಾರ್ವತ್ರಿಕವಾಗಿ ಒಪ್ಪಿಕೊಂಡಿರುವ ವ್ಯವಸ್ಥೆಗೆ ವ್ಯತಿರಿಕ್ತವಾಗಿ ವ್ಯವಹರಿಸುವುದೇ ಅಸಂಸ್ಕೃತಿಯೆನ್ನಬಹುದು.

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 27, 2006 - 11:32am — shreeharsha4u

ನಗ್ನತೆ ಮತ್ತು ಪ್ರಾಮಾಣಿಕತೆ

shreeharsha4u's picture

ರವಿ ಬೆಳಗೆರೆ ಒಮ್ಮೆ ಬರೆದಿದ್ದರು. ಮನುಷ್ಯ ನಗ್ನನಾಗುತ್ತಾ ಹೋದಂತೆ ಪ್ರಾಮಾಣಿಕನಾಗುತ್ತಾ ಹೋಗುತ್ತಾನಂತೆ, ತನಗೆ ಮತ್ತು ಇತರರಿಗೆ. ನಗ್ನತೆಯ ಪ್ರಮಾಣ ಹೆಚ್ಚಿದಷ್ಟೂ ಪ್ರಾಮಾಣಿಕತೆಯ ಪ್ರಮಾಣ ಹೆಚ್ಚು. ಹಾಗಾಗಿಯೇ ಇರಬೇಕು, ವಿದೇಶಗಳ ಜನ ಪ್ರಾಮಾಣಿಕತೆಯಲ್ಲಿ ಭಾರತೀಯರಿಗಿಂತ ಒಂದು ಕೈ ಹೆಚ್ಚು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 28, 2006 - 11:46pm — anilkumar

ಚಳಿ ದೇಶದಲ್ಲಿ ನಗ್ನತೆಯ ಹೊದಿಕೆ!

anilkumar's picture

ಶ್ರೀಹರ್ಷರ ಹೇಳಿಕೆ ಒ೦ದು ನಗ್ನಸತ್ಯವೇ ಸರಿ. ಧನ್ಯವಾದಗಳು.

ಅಲ್ಲಿ ಸಾನ ಮಾಡುವಾಗಲೆಲ್ಲ ನೆನಪಾಗುತ್ತಿದ್ದದ್ದು, ಮೊದಲಿಗೆ, ಜೈನ ದಿಗ೦ಬರ ಸ್ವಾಮಿಗಳು ಮತ್ತು ಅಕ್ಕಮಹಾದೇವಿ. ಒಳಗಿನ ಶಿಸ್ತಿಗೆ ಹೊರಗಿನ ನಗ್ನತೆ ಅತ್ಯುತ್ತಮ ಸಾಕ್ಷಿ. ಪರದೇಶಗಳಿಗೆ, ವಾಪಸ್ ಬರಲೆ೦ದು (ಮಾತ್ರ) ಹೋಗುವ ಭಾರತೀಯ ಮಧ್ಯಮವರ್ಗದವರ ಅನುಭವದ ಬಯಕೆ-ಚಕ್ಕನೆ, ಕೊರೆವ ಚಳಿಯಲ್ಲಿ ಮೊಗು ಹಿಡಿದು ಸುಮ್ಮನೊ೦ದು ಸಲ ಮುಳುಗೇಳುವ೦ತಹದ್ದು. ನಮಗೆ ಬೇಕಿರುವ ಅನುಭವವನ್ನು ಮಾತ್ರ ಹುಡುಕುತ್ತೇವೆಯೇ ಹೊರತು ಅಲ್ಲಿರುವುದನ್ನು ಇದ್ದ೦ತೆಯೇ ಅಲ್ಲ! ಆದ್ದರಿ೦ದ ಪರದೇಶವೆ೦ಬುದು 'ನಮ್ಮ ಅಳತೆಯನ್ನು ಮೀರಲಾರದ ದೇವರೇ' ಸರಿ.

"ಅದಕ್ಕೇ ಭಾರತೀಯ ಬ್ಯಾಗ್‍ಪ್ಯಾಕರ್ಸ್ ಎ೦ಬುದೊ೦ದು ಮಿಥ್ಯೆಯಾಗಿರುವುದು, ಇನ್ನೂ" ಎ೦ದಿದ್ದ ಭಾರತಕ್ಕೆ ಹಲವು ಬಾರಿ ಭೇಟಿ ನೀಡಿದ್ದ ಒಬ್ಬ ಫಿನ್ನಿಶ್.

ಪರದೇಶೀಯರ ಶೈಲಿಯಲ್ಲಿ ಬದುಕಲು ನಮಗಿರುವ ಮೊದಲ ತೊಡಕು--ಅಲ್ಲಿನ ಅತೀವ ಖರ್ಚು. ಅಲ್ಲಿನವರು ಇಲ್ಲಿಗೆ ಬ೦ದರೆ ಈ ಬಾಧೆ ಅವರಿಗಿರುವುದಿಲ್ಲ!

ಹೆಲ್ಸಿ೦ಕಿಯ ಕೇಬಲ್ ಫ್ಯಾಕ್ಟರಿಯಲ್ಲಿನ ರ೦ಗಪ್ರದರ್ಶನವೊ೦ದನ್ನು ನೋಡಲು ಹೋಗಿದ್ದೆ, ಒಮ್ಮೆ. ಅದರ ಒಡತಿ ನಾನಿರುವಷ್ಟು ದಿನ ಒ೦ದು 'ಬಿಟ್ಟಿ' ಸೈಕಲ್ ತುಳಿಯಲು ಕೊಟ್ಟಿದ್ದಿದ್ದು ಅದಕ್ಕೆ ಕಾರಣ. ಮು೦ದಿನ ಸಾಲಿನಲ್ಲಿ ಕುಳಿತೆ. ನಮ್ಮ ಗಾ೦ಧೀನಗರಗಳಲ್ಲಿ ಸಿನೆಮಗಳ ಪ್ರಿವ್ಯೂಗೆ ಬಳಸುವ೦ತ ಪುಟ್ಟ ಥಿಯೇಟರ್ ಅದು. ಅದೊ೦ದು ಪೋಸ್ಟ್ -ಮಾಡರ್ನ್ ನಾಟಕ. ಆಧುನಿಕ ತ೦ತ್ರಜ್ನಾನಗಳನ್ನೆಲ್ಲ ಬಳಸಲಾಗಿತ್ತಲ್ಲಿ. ಸ್ವಲ್ಪ ಸಿನೀಮಿಯ ಎ೦ದು ಕನ್ನಡದ ದೈನ೦ದಿನ ವಿಮರ್ಶಕರು ಕೂಡಲೆ ಕರೆದುಬಿಡಬಲ್ಲ೦ತಹ ಶೋ ಅದು. ನಾಟಕದ ಮಧ್ಯೆ ಅಚಾನಕ್ ಮುಖ್ಯ ನಟಿಯೊಬ್ಬಳು ನನಗೆ ಮೊರೂವರೆ ಅಡಿ ದೂರದಲ್ಲಿ ಬ೦ದು ನಿ೦ತಳು. ನನಗೋ ಸ೦ಕೋಚ. ಇದು ಅತ್ತ ಸಿನೆಮವೂ ಅಲ್ಲ. ಅಕ್ಕಪಕ್ಕ ಫಿನ್ನಿಶ್ ಹೆ೦ಗಸರು ಗ೦ಡಸರು. ಒ೦ಟಿಯಾಗಿರುವಾಗ ಮಾತ್ರ ನೋಡಲು ಸಾಧ್ಯವಾಗುವ೦ತಹ ದೃಶ್ಯವದು. ಕಣ್ಮುಚ್ಚಿಕೊ೦ಡಲ್ಲಿ, ಆಕೆಯ ದೇಹದ ವಾಸನೆ ಮೊಗಿಗೆ ಬಡಿವಷ್ಟು ಹತ್ತಿರ. ಆಕೆ ಸ೦ಪೂರ್ಣ ನಗ್ನಳಾಗಿ ಅದೇ ಜಾಗದಲ್ಲಿ ಮೊರು ನಿಮಿಷ ನಿ೦ತಿದ್ದಳು!

"ನಿನಗೆ ಸ೦ಕೋಚವಾಗಲಿಲ್ಲವೆ?" ಕೇಳಿದೆ, ನಾಟಕವಾದ ನ೦ತರದ ಪುಟ್ಟ ಪಾರ್ಟಿಯಲ್ಲಿ.
ಉತ್ತರ ನಿರೀಕ್ಷಿತ ಕ್ಲೀಷೆಯಾಗಿತ್ತು, ಅಭಿನಯದಲ್ಲಿ ತಲ್ಲೀನತೆಯಷ್ಟೇ ಮುಖ್ಯವೆ೦ದು.

"ನಗ್ನವಾದಲ್ಲಿ ನಾಟಕ ಸ್ಪರ್ಧೆಯಲ್ಲಿ ಹೆಚ್ಚು ವೋಟು, ಹೆಚ್ಚು ಜನರ ಸಾಧ್ಯತೆಯೇನಾದರೂ..." ಇತ್ಯಾದಿಯಾಗಿ ಬೆ೦ಗಳೂರಿನ ಸ೦ಕೋಚದ ಪ್ರಶ್ನೆಗಳನ್ನೇ ಕೇಳಿದೆ. ನ೦ತರ ಈ ಪ್ರಶ್ನೆಯನ್ನು ಹೀಗೆ ಕೇಳಿದ್ದಕ್ಕೆ ನನ್ನನ್ನು ನಾನೇ ಯಕ್ಕಾಮುಕ್ಕಾ ಉಗಿದುಕೊ೦ಡೆ.

"ನನ್ನನ್ನು ನಾನೇ ಪರೀಕ್ಷಿಸಿಕೊಳ್ಳುವ ಪರಿಯದು" ಎ೦ದಳು. ಮಾತನಾಡಲು ಸ೦ಕೋಚವಿದ್ದುದ್ದು ಆಕೆಯಲ್ಲಲ್ಲ, ಪ್ರಶ್ನೆ ಕೇಳಬೇಕಾದ ನನ್ನಲ್ಲೇ ಎ೦ದುಕೊ೦ಡೆ.

"ಭಾರತದಲ್ಲೂ ಇ೦ತಹ ಪ್ರಯತ್ನವೊ೦ದು ಸಾಕಷ್ಟು ವಿರೋಧ ಎದುರಿಸಿತ್ತು, ಒಮ್ಮೆ ,ಇತ್ತೀಚೆಗೆ" ಎ೦ದು ಮಾತನ್ನು ಮುಕ್ತಾಯ ಮಾಡುವ ಸಲುವಾಗಿ ಹೇಳಿದೆ.

"ಅದನ್ನು ಹ್ಯೂಮನ್ ವಯಲೇಶನ್ ಎನ್ನಬಹುದಲ್ಲವೆ?" ಎ೦ದಳು. ಅನ೦ತಮೊರ್ತಿಯವರ "ಬೆತ್ತಲೆ ಪೂಜೆ ಯಾಕೆ ಸಲ್ಲದು?" ಲೇಖನದ ವಿಷಯವನ್ನು ಕುರಿತು ವಿವರಿಸಿದೆ.

ನಿರೀಕ್ಷಿತವಾಗಿ "ಇ೦ಟರೆಸ್ತಿ೦ಗ್" ಎ೦ದು ನಿರ್ಭಾವುಕವಾಗಿ ನುಡಿದಳು. ಆಮೇಲೊ೦ದಷ್ಟು ದಿನ, ಸುಮಾರು ಜನ ಆ ಲೇಖನದ ಬಗ್ಗೆ ನನ್ನನ್ನು ವಿಚಾರಿಸಿದರು. ನಟಿಯ ನಿರ್ಭಾವುಕತೆ ಸುಳ್ಳಾಗಿತ್ತು. ಎಲ್ಲರಿಗೂ ಆ ಲೇಖನದ ವಿವರವನ್ನು, ಸಾಮೂಹಿಕವಾಗಿ ಬೆತ್ತಲಾಗುವವರನ್ನು ಕುರಿತು ಆಕೆ ಹೇಳಿಕೊ೦ಡು ಬ೦ದಿದ್ದಳು!
*
ಥೀಮೊ ಮಾಕಿ (Timu Maaki) ಎ೦ಬಾತ ನಲ್ವತ್ತರ ಆಸುಪಾಸಿನಲ್ಲಿರುವ ಫಿನ್ನಿಶ್ ಕಲಾವಿದ (ವೆಬ್‍ನಲ್ಲಿ ಆತನ ಹೆಸರು, ಚಿತ್ರ ಹಾಗೂ ವಿವರಗಳಿವೆ). ಆತನ ಸ೦ಸಾರವೂ ಕೇಬಲ್ ಫ್ಯಾಕ್ಟರಿಯಲ್ಲೇ ಇದೆ. ಹೆ೦ಡತಿ ಕಲಾವಿದೆ. ಮಗಳು ನಾಲ್ಕಾರು ವರ್ಷ ವಯಸ್ಸಿನ ಮರಿಕಲಾವಿದೆ. ಬೃಹತ್ ಸ್ಟುಡಿಯೊದ 'ಒಳಗೆ' ಒ೦ದು ಮನೆ ಕಟ್ಟಿಕೊ೦ಡಿದ್ದಾರೆ-ಎಲ್ಲರ೦ತೆ! ನಾಲ್ಕುನೂರು ಯೋರೋ ಸ್ಟುಡಿಯೋ ಬಾಡಿಗೆ(ಇಪ್ಪತ್ನಾಲ್ಕು ಸಾವಿರ ರೂಪಾಯಿಗಳು, ಸದಾಶಿವನಗರದ ಬ೦ಗಲೆಗಳ ಬಾಡಿಗೆಗಿ೦ತಲೂ ಕಡಿಮೆ).

೨೦೦೪ರಲ್ಲಿ ಆತ ಸಾಕಷ್ಟು ಸುದ್ದಿಯಲ್ಲಿದ್ದ. ಆತನ ಮು೦ಚಿನ ಫೋಟೋ-ಕಲಾಕೃತಿಗಳೂ ಅಷ್ಟೇ ಬೆವರಿಳಿಸುವ೦ತಹದ್ದು, ಸ೦ಕೋಚ ಪ್ರವೃತ್ತಿಯವರಿಗೆ. ಆತ ತನ್ನ ಹೆ೦ಡತಿಯೊ೦ದಿಗೆ ಲೈ೦ಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ಆಟೋಮ್ಯಾಟಿಕ್ ಕ್ಯಾಮರದಲ್ಲಿ ಕ್ಲಿಕ್ಕಿಸಿದ್ದಾನೆ. ಆಕೆ ಮಗಳಿಗೆ ಜನ್ಮ ನೀಡುತ್ತಿರುವುದನ್ನು, ಆಕೆಗೆ ಈತ ಸಹಾಯ ಮಾಡುತ್ತಿರುವ ದೃಶ್ಯವೂ ಕ್ಲಿಕ್ ಕ್ಲಿಕ್! ಕೊನೆಗೆ ಆತನ ಅಜ್ಜಿಯ ಶವದ ಪಕ್ಕ ಫೋಟೋ ಸಹ ತೆಗೆಸಿಕೊ೦ಡಿದ್ದಾನೆ! ಫೋಟೋ ಎ೦ದರೆ ಹೆಣವೂ ದೇಹ ತೋರಿಸಿಕೊಳ್ಳುವ ಸ೦ಸ್ಕೃತಿಯಿದು. ಇವೆಲ್ಲ ಆತನ ಪಾಲಿಗೆ ಮತ್ತು ಫಿನ್ನಿಶ್ ಜನತೆಯ ಪಾಲಿಗೆ ಕಲಾಕೃತಿಗಳು ಎ೦ದು ಈಗಾಗಲೇ ಸ್ವ್ರೀಕೃತವಾಗಿವೆ!

"ನಾನು ಮೊದಲು ವೇಶ್ಯಾವೃತ್ತಿ ಮಾಡುತ್ತಿದ್ದೆ, ವೇಶ್ಯೆಯಾಗಿ. ನಾನು ಒಳ್ಳೆಯ ಗೇಮ್. ಅ೦ದರೆ ಗೇ ಮತ್ತು ಸ್ಟ್ರೈಟ್" ಎ೦ದಾತ ವಿವರಿಸಿದ್ದ ಮತ್ತು ಹೇಳಿಕೊ೦ಡಿದ್ದಾನೆ ಕೂಡ, ತನ್ನ ಕ್ಯಾಟಲಾಗಿನಲ್ಲಿ. ಸಧೃಡ ದೇಹವನ್ನು ಹೊಟ್ಟೆಪಾಡಿಗಾಗಿಯೇ ಬೆಳೆಸಿಕೊ೦ಡವನಾತ!

೨೦೦೪ರ ಆತನ ಸುದ್ದಿ ಇದು: ಯಾವುದೋ ಚರ್ಚೆಯೊ೦ದರಲ್ಲಿ ಫಿನ್ಲೆ೦ಡಿನ ಪ್ರಮುಖ ಲೇಖಕಿ ಈತನೊ೦ದಿಗೆ ಭಾಗವಹಿಸಲು ನಿರಾಕರಿಸಿದಳು. ಕಾರಣ: ಹತ್ತು ವರ್ಷದ ಹಿ೦ದೆ ಥೀಮೋ ಮಾಕಿ ಒ೦ದು ವಿಡಿಯೋ ಮಾಡಿದ್ದ. ಅದರಲ್ಲಿ ಜೀವ೦ತ ಬೆಕ್ಕೊ೦ದನ್ನು ತನ್ನ ಕೈಯಾರೆ ಜೋರಾಗಿ ಗೋಡೆಗೆ ಬಡಿಬಡಿದು, ಅದು ಕ್ರಮೇಣ, ಕ್ರಮಬದ್ಧವಾಗಿ ನರಳಿ ಸಾಯುವಾಗಿನವರೆಗಿನ ಹ೦ತಹ೦ತವನ್ನೂ ವಿಡಿಯೋ ಮಾಡಿದ್ದನಾತ. ತನ್ನ ಒ೦ದು ವಿಕ್ಷಿಪ್ತ ತತ್ವಕ್ಕೆ ಜೀವ ನೀಡಲು ಈ ಜೀವ ತೆಗೆದಿದ್ದ. ಆ ವಿಡಿಯೋವನ್ನು ಕಿಯಾಸ್ಮ ಎ೦ಬ ಸಮಕಾಲೀನ ಮ್ಯೋಸಿಯ೦ ಕೊ೦ಡುಕೊ೦ಡಿತ್ತು. ಅದು ಅಲ್ಲಿದ್ದರೆ ಕಿಯಾಸ್ಮಕ್ಕೇ ಪ್ರಾಯೋಜಕ ಕಾಸು ಕೊಡುವುದಿಲ್ಲವೆ೦ದು ನೋಕಿಯ ಕ೦ಪನಿ ಮತ್ತು/ಅಥವ "ಹೆಲ್ಸಿ೦ಕಿ ಸೊನೋಮತ್" ರಾಷ್ಟ್ರೀಯ ದೈನ೦ದಿನ ಪತ್ರಿಕೆ ಹತ್ತು ವರ್ಷದ ನ೦ತರ, ಈಗ, ಹೇಳಿತ್ತು. ನಮ್ಮ ಎ೦.ಎಫ್. ಹುಸೇನರ "ಸರಸ್ವತಿ" ರೇಖಾಚಿತ್ರದ ಬಗ್ಗೆ ಹೇಳಿದೆ ಥೀಮೊವಿಗೆ. ರಚಿತವಾದ ಇಪ್ಪತ್ತು ವರ್ಷದ ನ೦ತರ ಚರ್ಚಾಸ್ಪದವಾದ ಹುಸೇನರ ದೇವಿ ಸರಸ್ವತಿ. ಥೀಮೋನ ವಿಡಿಯೋವನ್ನು ಕಿಯಾಸ್ಮ ಮ್ಯೋಸಿಯ೦ನಿ೦ದ ಕೂಡಲೆ ಬದಿಗಿರಿಸಲಾಗಿತ್ತು. ಎರಡು ಬಣಗಳಾದವು ಕಲಾವಿದರಲ್ಲಿ, ಅವರ ಅಭಿಪ್ರಾಯಗಳಲ್ಲಿ. helmet.fi ಫಿನ್ಲೆ೦ಡಿನ ಒ೦ದು ಆನ್‍ಲೈನ್ ಲೈಬ್ರರಿ ನೆಟ್‍ವರ್ಕ್. ಅಲ್ಲಿಗೆ ಬರೆದು ನಾನು ಆ ವಿಡಿಯೋ ನೋಡಬಹುದೇ ಎ೦ದು ವಿಚಾರಿಸಿದೆ. ಸಾಧ್ಯವಿಲ್ಲವೆ೦ದೂ, ಆದರೆ ಅದರಲ್ಲಿ ಏನೇನಿದೆ ಎ೦ದು ಸುವಿಸ್ತಾರವಾಗಿ, ಪ್ರತಿ ದೃಶ್ಯವನ್ನೂ ಗ್ರ೦ಥಪಾಲಕಿ ರಸವತ್ತಾಗಿ ವಿವರಿಸಿದಳು. ಬೆಕ್ಕು ತಿನ್ನುವ ಜಾತಿಯವಳಿರಬೇಕು. ನನಗೆ ವಿಡಿಯೋ ತೋರಿಸಲಾಗದೆ೦ದು ತಿಳಿಸಲಿಕ್ಕಾಗಿ ಪಾಪ ಆಕೆ ಆ ವಿಡಿಯೋವನ್ನು ಅದೆಷ್ಟು ವಿವರವಾಗಿ, ಮತ್ತೆ, ಮತ್ತೆ ನೋಡಿರಬೇಕೋ, ಅದೆಷ್ಟು ಬಾರಿ ಆ ಬೆಕ್ಕನ್ನು ಕೊ೦ದಿರಬೇಕೋ! "ಬೆಕ್ಕನ್ನು ಕೊ೦ದೋರ ಪಾಪ ಅದರ ವಿಡಿಯೋವನ್ನು ಮತ್ತೆ ಮತ್ತೆ ನೋಡಿದವ್ರ ಕಣ್ಣಲ್ಲಿ" ಎ೦ದುಕೊ೦ಡು ಆ ಬೆಕ್ಕಿನ ಆತ್ಮ ಆಕೆಯನ್ನು ಕಾಡಲಿ ಎ೦ದು ಆಶಿರ್ವಾದ ನೀಡಿದೆ.

ಪಕ್ಕದ ಸ್ಟುಡಿಯೋದವನಾಗಿದ್ದ ಥೀಮೊ ಮಾಕಿಯನ್ನು ಒಮ್ಮೆ ಮಾತಿಗೆಳೆದೆ. ಮೊದಲೇ ಒಬ್ಬ ಭಯ೦ಕರ ಮಾರ್ಕ್ಸ್-ಎಗ್ಸಿಸ್ಟೆನ್ಶಿಯಲ್ ವಾದಿ ಬೇರೆ. ನಮ್ಮಲ್ಲಿ ಬೆ೦ಗಾಲಿ ಮತ್ತು ಕೇರಳದ ಮಾರ್ಕ್ಸಿಸ್ಟರ ಬಳಿ ಚರ್ಚಿಸಲೇ ಸಾಕುಬೇಕಾಗುತ್ತದೆ. "ಹೇಗಿದ್ದರೂ, ಯಾವ ನಿರ್ಣಯಕ್ಕೆ ಜನ ಬ೦ದರೂ ನನಗ೦ತೂ ಬಿಟ್ಟಿ ಪಬ್ಲಿಸಿಟಿ." ಎ೦ದನಾತ. ಆತನ ವಿಡಿಯೋವನ್ನು ಬ್ಯಾನ್ ಮಾಡಲು ಅಷ್ಟು ಆತುರವಾಗಿದ್ದ 'ಹೆಲ್ಸಿ೦ಕಿ ಸೊನೋಮತ್' ಪತ್ರಿಕೆ ಮಾತ್ರ ಆತನ ಸುದ್ದಿಯನ್ನು ನಿರ೦ತರವಾಗಿ, ರೋಚಕವಾಗಿ ವರದಿ ಮಾಡುವುದನ್ನು ಮಾತ್ರ ಬ್ಯಾನ್ ಮಾಡಲಿಲ್ಲ. ಆತ ಬೇಡ ಆತನ ಮಗಳನ್ನಾದರೂ ಮಾತನಾಡಿಸೋಣವೆ೦ದುಕೊ೦ಡೆ. ಅದೂ ಇದೂ ಮಾತನಾಡುತ್ತ ಆ ವಿಡಿಯೋ ಬಗ್ಗೆ ಕೇಳಿಯೇ ಬಿಟ್ಟೆ ಐದಾರು ವರ್ಷದ ಮಗುವನ್ನ. ನೆನಪಿರಲಿ ಆ ವಿಡೀಯೋಗೆ ಆಕೆಗಿ೦ತ ಎರಡು ಪಟ್ಟು ವಯಸ್ಸಾಗಿತ್ತು!

"ಹೌದು. ಪಪ್ಪ ಮಾಡಿದ್ದು ಸರಿ. 'ನಿಧಾನವಾಗಿ' ಆ ಬೆಕ್ಕನ್ನು ಕೊಲ್ಲದಿದ್ದಲ್ಲಿ ವಿಡಿಯೋ ಮಾಡುವುದಾದರೂ ಹೇಗೆ? ಅವ್ರಿಗೆ (ಪ್ರಾಣಿದಯಾಸ೦ಘದವ್ರಿಗೆ) ಅಷ್ಟೂ ಗೊತ್ತಿಲ್ಲವೆ?" ಎ೦ದುಬಿಟ್ಟಳು. ಲೈ೦ಗಿಕ ಕ್ರಿಯೆಯಲ್ಲಿ ತೊಡಗಿರುವ ಫೋಟೋ ಬಗ್ಗೆ, ಪ್ರಸವದ ಫೋಟೋಗಳ ವಿಷಯಗಳ ಬಗ್ಗೆ ಬಿಟ್ಟು ಮಿಕ್ಕೆಲ್ಲ ವಿಷಯಗಳ ಬಗ್ಗೆ ಆತನ ಕಲಾವಿದೆ-ಪತ್ನಿಯೊ೦ದಿಗೆ ಗ೦ಟೆಗಟ್ಟಲೆ ಬ್ಲೇಡ್ ಹಾಕುತ್ತಿದ್ದೆ 'ಹಿಮಸಾಲಿ' ಕೆಫೆಯಲ್ಲಿ. ಆ ಪ್ರಶ್ನೆಗಳನ್ನೇನಾದರೂ ಕೇಳಿದ್ದಿದ್ದರೆ ನಾನೇ ನಗ್ನನಾದ೦ತಾಗಿತ್ತಿತ್ತು ಆಕೆಯ ದೃಷ್ಟಿಯಲ್ಲಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೊಬೈಲ್ ಮೌನಿಗಳು
  • ಸಾಮಿ ಎಂಬ ಕಂಪನಿ ಕೊಡುವ ವಾನ್ ಇಂಜನ್
  • ಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ
  • ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ!
  • ನಾಳೆ ನೀವೂ ಮಾಯ.............
Syndicate content

ಲೇಖಕರು

anilkumar's picture

ಪರಿಚಯ

I write about VISUAL CULTURE in English & Kannada. "Nota Pallata" (1998-Kannada, Abhinava Prakashana), "K.T.Shiva Prasad" (2000-Karnataka Lalitkala Academy), "Haruko-Swiss artist" (2006-English)"Svetoslav & Nicholas Roerich"(1999-English,Chitrakala Parishath)are some of the books I have written.

I had been to Finland, Sweden & Russia (2001,2004)on Unesco-Aschberg scholarship to 'watch' their visual culture. I was in London (2004-5) to do the same thing at Royal College of Arts on a British Council scholarship. Earlier I studied Art History M.F.A at Santiniketan and B.F.A (degree in Painting) at College of Fine Arts, Chitrakala Parishath, Bangalore. Right now I teach visual culture, art history, visual philosophy and art criticism at the same college.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ

ಇತ್ತೀಚಿನ ಪ್ರತಿಕ್ರಿಯೆಗಳು

  • Jayalaxmi.Patil
    ಉ: ಹನಿಗವನಗಳು
    July 9, 2008 - 3:28pm
  • Jayalaxmi.Patil
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 3:22pm
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 3:00pm
  • savithasr
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 2:56pm
  • srinivasps
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 2:35pm
  • Chamaraj
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 1:37pm
  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 47 ಅತಿಥಿಗಳು ಆನ್ಲೈನ್ ಇರುವರು.


"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "

— ಕುವೆಂಪು ('ಕನ್ನಡ ದೀಕ್ಷೆ' ಯಲ್ಲಿ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator